October 5, 2024

ಮೂಡಿಗೆರೆ ಕ್ಷೇತ್ರದಲ್ಲಿ ಜೆ.ಡಿ.ಎಸ್. ಟಿಕೆಟ್ ವಂಚಿತರಾಗಿರುವ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರು ಕಾಂಗ್ರೇಸ್ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಪತ್ರಿಕೆ ನಿಂಗಯ್ಯನವರನ್ನು ಮಾತನಾಡಿಸಿದಾಗ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೂಡಿಗೆರೆ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿಯನ್ನಾಗಿ ಬಿ.ಬಿ.ನಿಂಗಯ್ಯನವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ಬಿ.ಜೆ.ಪಿ.ಯಿಂದ ಟಿಕೆಟ್ ವಂಚಿತರಾಗಿ ಜೆ.ಡಿ.ಎಸ್. ಸೇರಿದಾಗ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರಿಗೆ ಜೆ.ಡಿ.ಎಸ್. ಪಕ್ಷ ಬಿ.ಫಾರಂ ನೀಡಿ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು.

ಇದರಿಂದ ಮನನೊಂದಿದ್ದ ಬಿ.ಬಿ.ನಿಂಗಯ್ಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ತಮ್ಮ ನಾಮಪತ್ರ ವಾಪಾಸು ಪಡೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.

ನಿಂಗಯ್ಯನವರು ನಿನ್ನೆ ಮೂಡಿಗೆರೆಯಲ್ಲಿ ತಮ್ಮ ಬೆಂಬಲಿಗರ, ಹಿತೈಷಿಗಳ ಸಭೆಯನ್ನು ಕರೆದು ತಮ್ಮ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಅವರ ಬೆಂಬಲಿಗ ಹಿರಿಯ ಮುಖಂಡರುಗಳು ವಿಭಿನ್ನವಾದ ಸಲಹೆಗಳನ್ನು ನೀಡಿದರು ಎಂದು ತಿಳಿದುಬಂದಿದೆ. ಕೆಲವರು ಜೆ.ಡಿ.ಎಸ್.ನಲ್ಲೇ ಮುಂದುವರಿಯುವಂತೆ ಸಲಹೆ ನೀಡಿದರೆ, ಮತ್ತೆ ಕೆಲವರು ಕಾಂಗ್ರೇಸ್, ಬಿ.ಜೆ.ಪಿ. ಪಕ್ಷಗಳನ್ನು ಸೇರುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಬಲ್ಲ ಮೂಲಗಳ ಪ್ರಕಾರ ನಿಂಗಯ್ಯನವರು ಈಗಾಗಲೇ ಜೆ.ಡಿ.ಎಸ್.ನಿಂದ ಒಂದು ಕಾಲು ಹೊರಗಿರಿಸಿದ್ದು ಕಾಂಗ್ರೇಸ್ ಪಕ್ಷವನ್ನು ಸೇರಲು ಒಲವು ತೋರಿದ್ದಾರೆ ಎನ್ನಲಾಗಿದೆ. ಬಿ.ಜೆ.ಪಿ. ಸಿದ್ದಾಂತಗಳು ನನಗೆ ಹೊಂದಾಣಿಕೆ ಆಗುವುದಿಲ್ಲ ನಾನು ಕಾಂಗ್ರೇಸ್ ಪಕ್ಷವನ್ನು ಸೇರುತ್ತೇನೆ ಎಂದು ಸಭೆಯಲ್ಲಿ ನೇರವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿಂಗಯ್ಯನವರ ಭಾವ (ಹೆಂಡತಿಯ ಸಹೋದರ) ಎ.ಆರ್. ಕೃಷ್ಣಮೂರ್ತಿಯವರು ಕೊಳ್ಳೆಗಾಲ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅವರ ಪರವಾಗಿ ಪ್ರಚಾರಕ್ಕೆ ತೆರಳಬೇಕು. ನಾನಿಲ್ಲಿ ಬಿ.ಜೆ.ಪಿ.ಗೆ ಬೆಂಬಲ ಕೊಟ್ಟರೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತದೆ ಹಾಗಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರುವ ಬಗ್ಗೆ ಅವರು ದೃಢವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಅವರು ತಮ್ಮ ಅನೇಕ ಬೆಂಬಲಿಗರು ಹಾಗೂ ತಮ್ಮ ಪುತ್ರ ಮಾಜಿ ಜಿ.ಪಂ. ಸದಸ್ಯ ನಿಖಿಲ್ ಚಕ್ರವರ್ತಿ ಜೊತೆಗೂಡಿ ಕಾಂಗ್ರೇಸ್ ಪಕ್ಷವನ್ನು ಅಧಿಕೃತವಾಗಿ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೇಸ್ ಗೆ ಸೇರಲು ಒಪ್ಪಿಗೆ ಇಲ್ಲದ ಅವರ ಕೆಲವು ಅನುಯಾಯಿಗಳು ಜೆ.ಡಿ.ಎಸ್.ನಲ್ಲೇ ಉಳಿಯುವ ಮತ್ತೆ ಕೆಲವರು ಬಿ.ಜೆ.ಪಿ. ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹಾಗೊಂದು ವೇಳೆ ನಿಂಗಯ್ಯನವರು ಕಾಂಗ್ರೇಸ್ ಪಕ್ಷವನ್ನು ಸೇರಿದರೆ ಅದರಿಂದ ಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಹಿನ್ನಡೆಯಾಗಲಿದ್ದು, ಕಾಂಗ್ರೇಸ್ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿಂಗಯ್ಯನವರು ಮೂರು ಬಾರಿ ಮೂಡಿಗೆರೆ ಕ್ಷೇತ್ರದ ಶಾಸಕರಾಗಿ, ಒಂದು ಅವಧಿಗೆ ರಾಜ್ಯದಲ್ಲಿ ಸಚಿವರಾಗಿ, ಜೆ.ಡಿ.ಎಸ್. ಪಕ್ಷದ ರಾಜ್ಯಮಟ್ಟದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಮೂಡಿಗೆರೆ ಕ್ಷೇತ್ರದಲ್ಲಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನದೇ ಪ್ರಭಾವ ಹೊಂದಿದ್ದಾರೆ.

ದ್ವಿತೀಯ ಪಿಯುಸಿ ಯಲ್ಲಿ ಅನುತ್ತೀರ್ಣ ; ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ, ಓರ್ವ ವಿದ್ಯಾರ್ಥಿನಿ ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ