October 5, 2024

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಬಿ.ಜೆ.ಪಿ.ಗೆ ಗುಡ್ ಬೈ ಹೇಳಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಅವರು ಪಕ್ಷವನ್ನು ತ್ಯಜಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಬಿ.ಜೆ.ಪಿ. ರಾಜ್ಯಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ಬರೆದಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯಮಾಡಿ ಅಂಗೀಕರಿಸಬೇಕಾಗಿ ವಿನಂತಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಮೂಲಕ ಕುಮಾರಸ್ವಾಮಿ ಸುಮಾರು 25 ವರ್ಷಗಳ ಬಿ.ಜೆ.ಪಿ. ಯೊಂದಿಗಿನ ಒಡನಾಟಕ್ಕೆ ಇತಿಶ್ರೀ ಹಾಡಿದ್ದಾರೆ.

ನಿನ್ನೆ ರಾತ್ರಿ ಬಿ.ಜೆ.ಪಿ. ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮೂಡಿಗೆರೆ ಕ್ಷೇತ್ರದಿಂದ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು.
ತಮಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಬಿ.ಜೆ.ಪಿ. ವಿರುದ್ಧ ತಿರುಗಿ ಬಿದ್ದಿರುವ ಕುಮಾರಸ್ವಾಮಿ ಸಿ.ಟಿ. ರವಿ ಸೇರಿದಂತೆ ಪಕ್ಷದ ಕೆಲ ಮುಖಂಡರ ಮೇಲೆ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.

ತಮಗೆ ಟಿಕೆಟ್ ಕೈತಪ್ಪಿದ ನಂತರ ಬೆಂಗಳೂರಿನಿಂದಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಎಂ.ಪಿ. ಕುಮಾರಸ್ವಾಮಿ ; ನನಗೆ ಟಿಕೆಟ್ ನೀಡುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು. ನನಗೆ ಟಿಕೆಟ್ ತಪ್ಪಲು ಸಿ.ಟಿ. ರವಿಯವರೇ ಕಾರಣ. ವೈಯುಕ್ತಿಕ ದ್ವೇಷದಿಂದ ಅವರು ನನಗೆ ಟಿಕೆಟ್ ತಪ್ಪಿಸಿದ್ದಾರೆ.

ನಾನು ಬಿ.ಜೆ.ಪಿ. ಬಿಡಬೇಕೆಂದು ಈ ಹಿಂದೆಯೇ ತಿರ್ಮಾನಿಸಿದ್ದೆ. ಆದರೆ ಅವರೇ ಕೈಬಿಡಲಿ ಎಂದು ಸುಮ್ಮನಿದ್ದೆ. ಇದೀಗ ಟಿಕೆಟ್ ನೀಡದೇ ನನ್ನ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ. ನಾನು ಮುಂದಿನ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ನಾನು ರಾಜಕಾರಣ ಬಿಡಲ್ಲ.

ಜಿಲ್ಲೆಯಲ್ಲಿ ಮೇಲ್ವರ್ಗದ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ್ದಾರೆ. ನಾನು ದಲಿತ ಎಂಬ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಇದರ ಪರಿಣಾಮ ಇಡೀ ಜಿಲ್ಲೆಯ ಮೇಲೆ ಬೀರುತ್ತದೆ. ಜಿಲ್ಲೆಯಲ್ಲಿ ದಲಿತ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಎಲ್ಲಾ ಕ್ಷೇತ್ರಗಳಲ್ಲಿ ಜನ ಬಿ.ಜೆ.ಪಿ.ಗೆ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ನನಗೆ ಅಪಾರ ಪ್ರೀತಿಯಿದೆ. ಯಡಿಯೂರಪ್ಪನವರು ಒಂದು ವಾರ ಫೋನ್ ಸ್ವಿಚ್ ಆಫ್ ಮಾಡಿದರೆ ಬಿ.ಜೆ.ಪಿ. ರಾಜ್ಯದಲ್ಲಿ 50 ಸ್ಥಾನ ಗೆಲ್ಲಲ್ಲ. ಅವರು ನನ್ನನ್ನು ತುಂಬಾ ವಿಶ್ವಾಸದಿಂದ ಕಂಡಿದ್ದರು. ಕೇವಲ ಸಿದ್ದಾಂತ, ಚಿಹ್ನೆಯ ಮೇಲೆ ಗೆಲ್ಲಲು ಸಾಧ್ಯವಿಲ್ಲ. ಯಾರ ಶಕ್ತಿ ಎಷ್ಟಿದೆ ಎಂಬುದು ಚುನಾವಣೆಯಲ್ಲಿ ಅರಿವಿಗೆ ಬರಲಿದೆ. ಮೇ 13ರ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಿ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಸರ್ವೆಯಲ್ಲಿ ನನ್ನ ಹೆಸರೇ ಮುಂದೆ ಇತ್ತು. ಹಾಗಾಗಿ ನನಗೆ ಟಿಕೆಟ್ ನೀಡುವ ಭರವಸೆ ಇತ್ತು. ನಾನು ಟಿಕೆಟ್ ಗಾಗಿ ಲಾಭಿ ಮಾಡಿಲ್ಲ. ಇದೀಗ ನನಗೆ ಟಿಕೆಟ್ ತಪ್ಪಿಸಿರುವುದು ನೋವಾಗಿದೆ. ಕ್ಷೇತ್ರದ ಜನ ನನ್ನ ಕೈಬಿಡುವುದಿಲ್ಲವೆಂಬ ಭರವಸೆ ಇದೆ. ಮುಂದಿನ ನಿರ್ಧಾರ ಶೀರ್ಘದಲ್ಲಿ ಪ್ರಕಟಿಸುತ್ತೇನೆ ಎಂದಿದ್ದಾರೆ.

ಇದರೊಂದಿಗೆ 1999ರಿಂದ ಸತತವಾಗಿ ಕ್ಷೇತ್ರದಲ್ಲಿ ಐದು ಬಾರಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದ ಮತ್ತು ಮೂರು ಬಾರಿ (2004, 2008, 2018) ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಂ.ಪಿ.ಕುಮಾರಸ್ವಾಮಿಯವರು ಬಿ.ಜೆ.ಪಿ. ಪಕ್ಷದೊಂದಿಗೆ ತನ್ನ ಸಂಬಂಧವನ್ನು ಕಳೆದುಕೊಂಡಿದ್ದಾರೆ.

ಈ ಬಾರಿ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಬಾರದು ಎಂದು ಪಕ್ಷದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಹೈಕಮಾಂಡ್ ಕುಮಾರಸ್ವಾಮಿಯವರಿಗೆ ಟಿಕೆಟ್ ನಿರಾಕರಿಸಿದ್ದು, ಹಲವು ವರ್ಷಗಳಿಂದ ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷದಲ್ಲಿ ದುಡಿದಿದ್ದ ದೀಪಕ್ ದೊಡ್ಡಯ್ಯ ಅವರಿಗೆ ಟಿಕೇಟ್ ನೀಡಿದೆ.
ಈ ಮೂಲಕ ಮೂಡಿಗೆರೆ ರಾಜಕೀಯ ಹೊಸ ಸ್ವರೂಪದೆಡೆಗೆ ಸಾಗುತ್ತಿದೆ.

ಜೆ.ಡಿ.ಎಸ್. ಸೇರಲು ಸಿದ್ಧತೆ

ಮೂಲಗಳ ಪ್ರಕಾರ ಕುಮಾರಸ್ವಾಮಿ ಜೆ.ಡಿ.ಎಸ್.ಪಕ್ಷವನ್ನು ಸೇರುವ ಸಾಧ್ಯತೆಯಿದ್ದು ಅಲ್ಲಿ ಟಿಕೆಟ್ ಗಿಟ್ಟಿಸುವ ನಿರೀಕ್ಷೆ ಇಟ್ಟುಕೊಂಡಿದ್ದು, ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿಯವರು ಬೆಂಗಳೂರಿನಿಂದ ಮೂಡಿಗೆರೆಗೆ ಆಗಮಿಸುತ್ತಿದ್ದು ಸಂಜೆ ಅವರ ಬೆಂಬಲಿಗರ ಸಭೆ ನಡೆಸಿ ನಾಳೆ ಬೆಂಗಳೂರಿನಲ್ಲಿ ಬೆಂಬಲಿಗರೊಂದಿಗೆ ಜೆ.ಡಿ.ಎಸ್. ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಜೆ.ಡಿ.ಎಸ್. ಈಗಾಗಲೇ ಮಾಜಿ ಸಚಿವ ಬಿ.ಬಿ. ನಿಂಗಯ್ಯನವರಿಗೆ ಟಿಕೆಟ್ ಘೋಷಣೆ ಮಾಡಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆ.ಡಿ.ಎಸ್. ತನ್ನ ಅಭ್ಯರ್ಥಿಯನ್ನಾಗಿ ಕುಮಾರಸ್ವಾಮಿಯವರ ಕಣಕ್ಕಿಳಿಸಿ, ನಿಂಗಯ್ಯನವರನ್ನು ಮನವೊಲಿಸಬಹುದೇ ? ಒಂದು ವೇಳೆ ಜೆ.ಡಿ.ಎಸ್. ಅಥವಾ ಕಾಂಗ್ರೇಸ್ ಪಕ್ಷದಲ್ಲಿ ಅವಕಾಶ ಸಿಗದೇ ಹೋದರೆ ಕುಮಾರಸ್ವಾಮಿಯವರು ಪಕ್ಷೇತರರಾಗಿ ಕಣಕ್ಕಿಳಿಯಬಹುದೇ ? ಎಂಬುದು ಕಾದು ನೋಡಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ