October 5, 2024

ನಾನ್ಸೆನ್ಸ್, ನನ್ ಹತ್ತಿರ ಶಿಷ್ಯವೃತ್ತಿ ಮಾಡಿ ನೀನು ತರಬೇತಾಗಿರೋದು ಇಷ್ಟೇನೋ ಪ್ರಭಾಕರ. ನಾನು ಪ್ರೊಪೆಸರು, ಮಂದಣ್ಣ ಹಳ್ಳಿಗಮಾರ, ಇವೆಲ್ಲಾ ಹೆಬ್ಬುಬ್ಬೆಯನ್ನು ನೀನು ನಿಜಾಂತ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು? ಇದರಲ್ಲೇ ನಿನ್ನ ಆಯಸ್ಸು ಮುಗಿದು ಹೋಗುತ್ತೆ. ಸತ್ಯದ ಕಿಂಚಿತ್ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೇನೆಲ್ಲಾ ಮೀರಬೇಕು ನಾವು, ಆಗಲೇ ನಮಗೆ ಬೇರೆ ಬೇರೆ ಜಗತ್ತು, ಪ್ರಪಂಚ ಕಾಣ್ತದೆ”.

ಈ ಮೇಲಿನ ವಾಕ್ಯ ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ದ ಕೃತಿ ಕರ್ವಾಲೋದಲ್ಲಿ ಮುಖ್ಯ ಪಾತ್ರದಾರಿ ಕರ್ವಾಲೋ ತನ್ನ ಶಿಷ್ಯನನ್ನು ಕುರಿತು ಹೇಳಿರುವಂತಹುದು.

ಕರ್ವಾಲೋ ಕಾದಂಬರಿ ಓದುತ್ತಿದ್ದಾಗ ಎದುರಾದ ಈ ವಾಕ್ಯವೇಕೋ ಬಹಳ ಹೊತ್ತು ನನ್ನನ್ನು ಭಾವಪರವಶಗೊಳಿಸಿತು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 16 ವರ್ಷ ತುಂಬಿದೆ. ಅವರ ರಚಿಸಿದ ಸಾಹಿತ್ಯ ಮತ್ತು ಅವರು ಬದುಕಿದ ರೀತಿ ಶತಶತಮಾನಗಳಿಗೂ ಪ್ರಸ್ತುತ ಮತ್ತು ಅಜರಾಮರ.

ಜೀವ ಸಮೂಹದ ಸೂಕ್ಷ್ಮ ಸಂವೇದನೆಗಳನ್ನು ಯಥಾವತ್ತಾಗಿ ತಮ್ಮ ಸಾಹಿತ್ಯ ಕೃತಿಗಳಲ್ಲಿ ಸೆರೆಹಿಡಿದಿದ್ದ ತೇಜಸ್ವಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಭೆಗೆ ಸಮಾನ ಪ್ರಾಮುಖ್ಯತೆಯನ್ನು ನೀಡಿದ್ದರು. ತೇಜಸ್ವಿ ಇಂದು ನಮ್ಮೆದುರಿಗಿಲ್ಲ. ಆದರೆ ಅವರು ಸೃಷ್ಟಿಸಿರುವ ಸಾಹಿತ್ಯ, ಸೆರೆಹಿಡಿದ ಹಕ್ಕಿಗಳ ಚಿತ್ರ, ಕಟ್ಟಿಕೊಟ್ಟ ಚಳುವಳಿಯ ಹಾದಿ ನಾಡಿನ ಜನತೆಯ ಮನಗಳಲ್ಲಿ ಅಳಿಸಲಾರದ ಅಚ್ಚೊತ್ತಿವೆ.

ತೇಜಸ್ವಿಯವರೊಂದಿಗೆ ಹತ್ತಿರದ ಒಡನಾಟವಿಲ್ಲದ ಮತ್ತು ಅವರ ಸಾಹಿತ್ಯ ಕೃತಿಗಳನ್ನು ಓದದವರಿಗೆ ಅವರೊಂದು ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದರು. ಅವರ ಬಗ್ಗೆ ಪೂರ್ವಾಗ್ರಹದ ಮನೋಭಾವನೆಯೇ ಹೆಚ್ಚಿತ್ತು. ತೇಜಸ್ವಿಯವರ ಬದುಕು ಹಾಗೂ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಮತ್ತು ಅವಕಾಶಗಳು ಒದಗಿಬಾರದವರು ಇಂತಹ ಅಭಿಪ್ರಾಯ ವ್ಯಕ್ತಪಡಿಸುವುದು ಸಹಜವೇ ಆಗಿರುತ್ತದೆ. ನಿಜ ಹೇಳಬೇಕೆಂದರೆ ತೇಜಸ್ವಿಯವರ ಹತ್ತಿರದ ಒಡನಾಟವಾಗುವವರೆಗೆ ಮತ್ತು ಅವರ ಕೃತಿಗಳನ್ನು ಗಂಭೀರವಾಗಿ ಓದುವುದಕ್ಕಿಂತ ಮುಂಚೆ ನಾನು ಸಹ ತೇಜಸ್ವಿಯವರ ಬಗ್ಗೆ ಪೂರ್ವಾಗ್ರಹ ಮನೋಭಾವನೆಯನ್ನೇ ಹೊಂದಿದ್ದೆ. ‘ಕರ್ವಾಲೋ’ ಕೃತಿಯಲ್ಲಿ ಮಂದಣ್ಣನ ವಿಶೇಷತೆಯನ್ನು ಕರ್ವಾಲೋ ಮನದಟ್ಟು ಮಾಡುವವರೆಗೆ ಕತೆಯ ನಿರೂಪಕ ಸ್ವತಃ ತೇಜಸ್ವಿಯವರು ಸಹ ಮಂದಣ್ಣನನ್ನು ಜೇನು ಸಾಕಲಷ್ಟೇ ಲಾಯಕ್ಕಾದ ಗಡಿಬಡಿಯ ಗಮಾರ ಎಂದಷ್ಟೇ ಗ್ರಹಿಸಿದ್ದರು.

ಸಿದ್ದ ಅಭಿಪ್ರಾಯಗಳು ಬಹುತೇಕ ಸಂದರ್ಭಗಳಲ್ಲಿ ಅದೆಷ್ಟು ಅಸಂಬದ್ಧವಾಗಿ ರುತ್ತವೆ ಎಂಬುದಕ್ಕೆ ತೇಜಸ್ವಿಯವರ ಬಗ್ಗೆ ಇದ್ದ ಅವರು ತುಂಬಾ ‘ರಿಜರ್ವಡ್’ ಅಂತೆ ಎಂಬ ಭಾವನೆ ಅತ್ಯುತ್ತಮ ಉದಾಹರಣೆ.

ಬಹುಶಃ ಅವರ “ಪರಿಸರದ ಕತೆ”, “ಕರ್ವಾಲೋ, ಕೊನೆಯ ಕೃತಿ “ಮಾಯಾಲೋಕ” ಓದಿದವರಿಗೆಂತು ತೇಜಸ್ವಿ ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿದ್ದ ಸಣ್ಣಸಣ್ಣ ಸಂಗತಿಗಳನ್ನು ಹೇಗೆ ಗ್ರಹಿಸುತ್ತಿದ್ದರು ಮಾತ್ರವಲ್ಲ. ಸಾಮಾನ್ಯ ಜನರೊಂದಿಗೆ ಎಷ್ಟೊಂದು ಹತ್ತಿರದ ಒಡನಾಟವನ್ನು ಬೆಳೆಸಿಕೊಂಡಿದ್ದರು ಎಂಬುದು ಅರಿವಾಗುತ್ತದೆ. ಮನದೊಳಗೆ ಯಾವುದೇ ಪೂರ್ವಾಗ್ರಹ ಭಾವನೆಗಳನ್ನು ಇಟ್ಟುಕೊಳ್ಳದೇ ಕಣ್ಣೆದುರಿನ ಪ್ರತಿಯೊಂದನ್ನು ಕುತೂಹಲದಿಂದ ನೋಡುತ್ತಿದ್ದ ತೇಜಸ್ವಿಯವರು ಮಗು ಸಹಜವಾದ ರೀತಿಯಲ್ಲಿ ತಮ್ಮ ಮನಸ್ಸನ್ನು ಮುಕ್ತವಾಗಿಟ್ಟು ಕೊಂಡಿದ್ದರು.

ಸರ್ಕಾರದ ಕಾನೂನು ಕಟ್ಟಳೆಗಳನ್ನು ನೆವವಾಗಿರಿಸಿಕೊಂಡು ಜನಸಾಮಾನ್ಯರನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಸರ್ಕಾರಿ ವ್ಯವಸ್ಥೆ ಬಗ್ಗೆ ತೇಜಸ್ವಿಯವರಿಗೆ ಆಳವಾದ ಅಸಮದಾನವಿತ್ತು. ಅವರ ತಬರನ ಕತೆ, ಕೃಷ್ಣೇಗೌಡರ ಆನೆ ಮುಂತಾದ ಕೃತಿಗಳಲ್ಲಿ ಅದನ್ನು ನೈಜ ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಜಗತ್ತಿನಲ್ಲಿ ಶರವೇಗದಲ್ಲಿ ಸಂಭವಿಸುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ತೇಜಸ್ವಿಯವರು ತಾಂತ್ರಿಕತೆ ಮತ್ತು ಜಾಗತೀಕರಣದಿಂದ ಸಮಾಜದಲ್ಲಿ ತಲೆದೋರುತ್ತಿದ್ದ ಸ್ಥಿತ್ಯಂತರವನ್ನು, ಜನರ ಬದುಕಿನಲ್ಲಾಗುತ್ತಿದ್ದ ಬದಲಾವಣೆಗಳನ್ನು ಸ್ಪಷ್ಟವಾಗಿ ಮನಗಂಡಿದ್ದರು. ಕೆಲ ಸಾಹಿತಿಗಳು, ಬುದ್ದಿಜೀವಿಗಳು ಜಾಗತೀಕರಣದ ವಿರುದ್ಧ ಮಾತನಾಡುತ್ತಿದ್ದ ಸಂದರ್ಭದಲ್ಲಿ ತೇಜಸ್ವಿಯವರು ವಿಭಿನ್ನವಾಗಿ ಯೋಚಿಸುತ್ತಾ ನಮ್ಮ ದೇಶವು ಕೂಡ ಜಾಗತೀಕರಣದೊಂದಿಗೆ ಹೆಜ್ಜೆ ಹಾಕಬೇಕಾಗಿರುವುದನ್ನು ಪ್ರತಿಪಾದಿಸಿ ಅದಕ್ಕೆ ಪೂರಕವಾಗಿ ನಮ್ಮ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಕಡೆಗೆ ಸಲಹೆಗಳನ್ನು ನೀಡಿದ್ದರು.

 

ಮೊನ್ನೆ ಅಕಾಲಿಕವಾಗಿ ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಗಾಡ ಮೌನದಲ್ಲಿ ತೇಜಸ್ವಿಯವರ ಬುದುಕು, ಬರಹ, ಒಡನಾಟ, ಪ್ರಕೃತಿಯೆಡೆಗಿನ ಅವರ ನಿಲುವುಗಳು ತೀವ್ರವಾಗಿ ಕಾಡತೊಡಗಿದವು. ಪ್ರಾಕೃತಿಕ ವರ್ತನೆಗಳ ಎದುರು ಮಾನವನ ಸಾಧನೆ ಎಷ್ಟು ನಗಣ್ಯವಾದುದು, ಪ್ರಾಕೃತಿಕ ಸಮತೋಲನ ತಪ್ಪಿದರೆ ನಾಗರೀಕತೆ ಹೇಗೆ ದಿಕ್ಕು ತಪ್ಪುತ್ತದೆ ಈ ಬಗ್ಗೆಯಲ್ಲಿ ತೇಜಸ್ವಿಯವರು ಯುಗಮಾನಗಳ ಆಚೆಗೆ ಯೋಚಿಸಿ ನೀಡುತ್ತಿದ್ದ ಸಲಹೆಗಳು ಎಷ್ಟುಬೇಗ ನಿಜವಾಗುತ್ತಿವೆ ಅನಿಸುತ್ತಿದೆ.

ನಾವು ತೇಜಸ್ವಿಯವರು ಬರೆದಿರುವ ಕೃತಿಗಳನ್ನು ಓದಬೇಕಾಗಿದೆ. ಜಗತ್ತಿನ ಉತ್ಕøಷ್ಟ ಕೃತಿಗಳ ಸಾಲಿನಲ್ಲಿ ಬರುವ ಅವರ ಪುಸ್ತಕಗಳನ್ನು ಓದುತ್ತಾ ಹೋದಂತೆ ಹೊಸದೊಂದು ಚಿಂತನೆಗೆ ಹಚ್ಚುತ್ತದೆ. ಮನಸ್ಸು ವಿಕಸನವಾಗುತ್ತದೆ.

ನಾಡಿನ ಸಾರಸ್ವತ ಲೋಕದಲ್ಲಿ ಮಿನುಗು ತಾರೆಯಾಗಿದ್ದ, ಲಕ್ಷಾಂತರ ಯುವಕರಿಗೆ ಹೊಸ ಸಾಹಸದ ದಾರಿದೀಪವಾಗಿದ್ದ, ನೆಲ-ಜಲ-ಭಾಷೆ-ಬದುಕಿನ ಬಗ್ಗೆ ಸಕರಾತ್ಮಕವಾದ ಹಾಗೂ ನಿಖರವಾದ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದ ತೇಜಸ್ವಿಯವರು ನೆನಪುಗಳು ನಮ್ಮ ಮನದಲ್ಲಿ ಹಸಿರಾಗಿರಲಿ ಮತ್ತು ಅವರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಿರಲಿ.

* ಪ್ರಸನ್ನ ಗೌಡಳ್ಳಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ