October 5, 2024

* ಧನಂಜಯ ಜೀವಾಳ

9448421946

ಅಯ್ಯಣ್ಣ ಅವತ್ತು ಬೆಳಗಿನಿಂದಲೇ ಸಿಡಿಸಿಡಿ ಅನ್ನುತ್ತಿದ್ದ. ಎದ್ದು ಯಲ್ಡಕ್ಕೋಗಿ ಬಂದವ್ನೇ ‘ಕಾಫಿ ಎಲಿ’್ಲ ಎಂದು ಅಬ್ಬರಿಸಿದ. ದನಿಯ ರಭಸವನ್ನು ಗಮನಿಸಿಯೇ ಜಾಗರೂಕಳಾದ ಹೆಂಡ್ತಿ ಕಟಾಣಿ ಗೇಣುದ್ದದ ಹಿತ್ತಾಳೆ ಲೋಟದಲ್ಲಿ ಹಾಲಿಲ್ಲದ ಬೆಲ್ಲದ ಬಿಸಿಬಿಸಿ ಕಾಫಿ ತಂದು ಎದುರಿಗಿಟ್ಟಳು. ಹೆಂಡತಿಯತ್ತ ದುರದುರನೆ ನೋಡುತ್ತಲೇ ಕಾಫಿ ಲೋಟವನ್ನು ತುಟಿ ಮೇಲಿರಿಸಿದ ಅಯ್ಯಣ್ಣ, ಸೊರಕ್ಕೆಂದು ಒಂದು ಗುಟಕು ಎಳೆದುಕೊಂಡ. ಗುರಿ ಎಲ್ಲೋ ಸ್ವಲ್ಪ ಹಿಂದು ಮುಂದಾಯಿತೆಂದು ಕಾಣುತ್ತೆ; ಮೇಲ್ದುಟಿಯ ಹೊರಭಾಗಕ್ಕೂ ಆ ಬಿಸಿ ಕಾಫಿ ಸೋಕಿ, ಸ್ಸರ್ರಕ್ ಎಂದು ಸುಟ್ಟೇಬಿಟ್ಟಿತು. “ಎಂತಾ ಲೌಡದ್ ಕಾಫಿ ಮಾಡ್ತೀಯೇ, ಒಳ್ಳೆ ಕತ್ತೆ ಉಚ್ಚೆ ಇದ್ದಂಗೀತೆ” ಎಂದವನೇ ಲೋಟವನ್ನ ಪಕ್ಕದಲ್ಲಿದ್ದ ಬೀಟೆಮರದ ಬೃಹದಾಕಾರದ ಕಲುಬೆ ಮೇಲೆ ಕುಕ್ಕಿದ.

ಅವ ಕುಕ್ಕಿದ ಬರಾಸಿಗೆ ಕಾಫಿ ಕಲುಬೆ ಮೇಲೆಲ್ಲಾ ಚೆಲ್ಲಿ ಎರಡು ಹಲಗೆಯ ನಡುವಿನ ಬಿರುಕಿನಲ್ಲಿ ಕಾಫಿ ಇಳಿದು ಪೆಟ್ಟಿಗೆಯೊಳಗೆ ಬಟ್ಟೆಯ ಗಂಟಿನಲ್ಲಿ ತುಂಬಿಟ್ಟಿದ್ದ ಒಣಗಿದ ಏಲಕ್ಕಿ ಕಾಯಿಯ ಮೇಲೆಲ್ಲಾ ಜಿಳ್ಳನೆ ಇಳಿದು ಪರಿಸ್ಥಿತಿ ಪೂರಾ ಹಡಪೆಂಟ್ರಿಯಾಯ್ತು. ಕಟಾಣಿ ಹೆದರಿ, ಉಸಿರು ಬಿಡದಂತೆ ನಿಂತಿದ್ದಳು. ದಿನವೂ ಮಾಡಿದಂತೆಯೇ ಕಾಫಿ ಮಾಡಿದ್ದಳು. ಇಡೀ ಮನೆಯಲ್ಲಿ ಹಾಲಿಲ್ಲದೆ ಕಾಫಿ ಕುಡಿಯುತಿದ್ದವನೆಂದರೆ ಈತ ಮಾತ.್ರ ಹಾಲಿರಲಿ, ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪದ ವಾಸನೆ ಸಹಾ ಇವನಿಗೆ ಆಗಿ ಬರುತ್ತಿರಲಿಲ್ಲ. ಹಾಲು ಕಾಯಿಸಿದ ಪಾತ್ರೆಯಲ್ಲೆನಾದರೂ ಅಪ್ಪಿತಪ್ಪಿ ಕಾಫಿ ಕಾಯಿಸಿದರೋ ಅವತ್ತು ಇತ್ತು ರಾವಿನ ಕುಣಿತ ಮನೆಯಲ್ಲಿ. ಹಾಗಾಗಿ ಅಯ್ಯಣ್ಣನಿಗಾಗಿಯೇ ಕಾಫಿ ಮಾಡಲೆಂದು ಸಪರೇಟಾದ ಚರುಕಲೊಂದನ್ನು ನಿಗದಿಯಾಗಿಟ್ಟಿದ್ದರು. ಯಂತದೋ ಯಡವಟ್ಟಾಗಿರಬೇಕು ಅದಿಕ್ಕೇ ತಿಕಸುಟ್ಟ ಬೆಕ್ಕಿನಂತಾಡುತಿದ್ದಾನೆ ಎಂದುಕೊಂಡ ಕಟಾಣಿ ಈತಂದು ಈ ಸಿಂಡು ಯಾವಾಗ್ಲೂ ಇದ್ದಿದ್ದೇ, ಅದಿರ್ಲಿ ಈ “ಈ ಲೌಡದ್ ಕಾಫಿ ಅಂದ್ರೇನು? ಮತ್ತು ಅಯ್ಯಣ್ಣ ಕತ್ತೆ ಉಚ್ಚೇನ ಯಾವಾಗ ಕುಡಿಯಲು ಅಭ್ಯಾಸ ಮಾಡಿಕೊಂಡ?’ ಹಸೀನ ಹಾಲನ್ನೇ ಮೂಸಿನೋಡದವ್ನು….. ಕತ್ತೇದೂ….. ಹ್ಯೆಂಗೆ” ಎಂದು ನುಗ್ಗಿ ಬರುತಿದ್ದ ನಗುವನ್ನು ಬಲವಂತವಾಗಿ ತಡೆಯುತ್ತಲೇ ಮಕವೆಲ್ಲಾ ಕೆಂಪುಕೆಂಪು ಮಾಡಿಕೊಂಡು ಕಡುಬು ಮಾಡಲು ಮರಗೆಯಲ್ಲಿ ಅರ್ದಂಬರ್ದ ಕಲೆಸಿಟ್ಟುಕೊಂಡಿದ್ದ ಅನ್ನ ಮತ್ತು ಅಕ್ಕಿಹಿಟ್ಟಿನ ಮುದ್ದೆಯನ್ನು ಇನ್ನೂ ಬಲವಾಗಿ ಅಂಗೈಯೊಳಗೆ ತಳ್ಳಿಕೊಂಡು ಅಂಡೆತ್ತಿ ಮೈ ಭಾರವನ್ನೆಲ್ಲಾ ಸೇರಿಸಿ ಹಿಚುಕಲು ಶುರೂ ಮಾಡಿದಳು. ನಿನ್ನೆ ರಾತ್ರಿಯ ಉಳಿದ ಅನ್ನ, ತರಕುತರಕಾದ ಅಕ್ಕಿ ಹಿಟ್ಟನ್ನು ಮರಗೆ ತುಂಬಾ ಹರಡಿಕೊಂಡು, ಕಲ್ಲುಪ್ಪನ್ನು ಮದ್ಯದಲ್ಲಿ ಹಾಕಿಕೊಂಡು ತೆಂಗಿನಕಾಯಿ ಬಟ್ಟಲ ತಳಭಾಗದಿಂದ ಅರೆದು ಅನ್ನ, ರವೆ ಸೇರಿಸಿ ನೀರನ್ನು ಚಿಮುಕಿಸಿಕೊಳ್ಳುತ್ತಾ ಬೆರಳುಗಳು ಉಕ್ಕಿನವೇನೋ ಎನ್ನುವಂತೆ ಹಿಟ್ಟನ್ನು ನಾದತೊಡಗಿದಳು. ಹಳ್ಳಿಗಾಡಿನ ಹೆಂಗಸರು ಯಾವುದೇ ದೈಹಿಕ ಬಾಧೆಗಳಿಲ್ಲದೇ, ಆರೋಗ್ಯವಂತರಾಗಿ, ದೀರ್ಘಾಯುಗಳಾಗಿ ಇದ್ದುದಕ್ಕೆ ಅವರ ಈ ಬಗೆಯ ಜೀವನ ಕ್ರಮ ಮತ್ತು ಆಹಾರ ಪದ್ಧತಿಯೇ ಕಾರಣ. ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮಲಗುವವರೆಗೂ ಕಸ, ಮುಸುರೆ, ದನ, ಕರ, ಹಟ್ಟಿ, ಆಹಾರ ತಯಾರಿ, ಕೃಷಿ ಕೆಲಸಗಳಿಗೆ ಸಹಾಯ, ಮಕ್ಕಳ ಲಾಲನೆ-ಪಾಲನೆ ಹೀಗೆ ಒಂದಲ್ಲ ಒಂದು ರೀತಿಯ ಚಟುವಟಿಕೆಯ, ದೇಹದ ಎಲ್ಲಾ ಭಾಗಗಳಿಗೂ ಸಹಜ ವ್ಯಾಯಾಮ ಸಿಗುವ ದಿನಚರಿಯನ್ನು ಒತ್ತಡವಿಲ್ಲದೇ ಅನುಸರಿಸುತ್ತಿದ್ದರು.

ಯಾವಾಗ ಮಾರ್ಕೆಟ್ ಎಕಾನಮಿ ನಿಧಾನವಾಗಿ ಸುಖ-ಸೌಕರ್ಯಗಳ ಒದಗಿಸುವ ನೆಪದಲ್ಲಿ ಪ್ರಾರಂಭವಾದವೋ, ತಮ್ಮ ಸಲಕರಣೆ ಹಾಗೂ ಸೇವೆಗಳನ್ನು ಮಾರಲು ವ್ಯಾಪಾರಿಗಳು ಮಹಿಳಾ ವಿಮೋಚನೆಯ ಹೆಸರಿನಲ್ಲಿ ಪ್ರಲೋಭನೆ ಒಡ್ಡಲು ಪ್ರಾರಂಭಿಸಿದರು. ನೀವಿರುವುದು ಗಂಡ-ಮನೆಯ ಸೇವೆ ಮಾಡಲಾ? ತಗೊಳ್ಳಿ ನಮ್ಮ ಮಿಕ್ಸಿ, ಗ್ಯಾಸೊಲೆ. ಪದೇ ಪದೇ ಯಾಕೆ ಅಡುಗೆ ಮಾಡ್ತೀರಿ, ಫ್ರಿಜ್ ತಗೋಳಿ. ನಾಲ್ಕೆಜ್ಜೆಯನ್ನಾದರೂ ಯಾಕೆ ನಡೀತೀರಿ, ತಗೋಳಿ ಸ್ಕೂಟಿ. ಕಿಟಕಿ ಬಾಗಿಲುಗಳ ತೆರೆದು ತಾಜಾ ಗಾಳಿಯನ್ನು ಮನೆಗೆ ಯಾಕೆ ಸೇರಿಸುತ್ತೀರಿ, ಏಸೀ ಹಾಕಿಸಿ. ಪರಕೆಯಲ್ಲಿ ಕಸವನ್ನೇಕೆ ಗುಡಿಸಿ ಕೈನೋವು ಮಾಡ್ಕೊಳ್ತೀರಿ, ವ್ಯಾಕ್ಯೂಮ್ ಕ್ಲೀನರ್ ತಗೋಳಿ. ಕೆಲಸವನ್ನೆಲ್ಲಾ ಮೆಷೀನುಗಳ ಕೈಲಿ ಮಾಡಿಸಿದ ಮೇಲೆ ಸುಮ್ಮನೆ ಹೇಗೆ ಕೂರ್ತೀರಿ, ನಾವು ಟೀವೀನೂ ಮಾರ್ತೀವಿ, ಬನ್ನಿ. ನಿಮ್ಮ ಕೈ-ಕಾಲುಗಳಿಗೆ ಕೆಲಸವಿಲ್ಲವೆಂದ ಮೇಲೆ ಅನಾರೋಗ್ಯ ಬಂದೇ ಬರುತ್ತೆ; ಆಗ ನಾವು ಜಿಮ್ ಐಟಮ್ಸ್ ಮಾರ್ತೀವಿ, ಟೀವಿ ನೋಡಿ ನೋಡಿ ನಿಮ್ಮ ಮೆದುಳು, ಕಣ್ಣು ಸರಿಯಾಗಿ ಕೆಲಸ ಮಾಡೋದಿಲ್ಲ, ಆಗ ನಾವು ಔಷಧಿನೂ ಮಾರ್ತೀವಿ, ಮಕ್ಕಳಿಗೆ ಆ ಹಳೇ ಕಾಲದ ಮನೇಲೇ ಮಾಡಿದ ತಿಂಡಿತಿನಿಸುಗಳನ್ನೇಕೆ ಕೊಡ್ತೀರಿ? ರುಚಿರುಚಿಯ ಬಣ್ಣಬಣ್ಣದ ಕುರುಕಲುಗಳನ್ನು ಫಳಫಳ ಹೊಳೆಯುವ ಪ್ಯಾಕೇಟುಗಳಲ್ಲಿ ನಾವೇ ಮಾರ್ತೀವಿ, ಬೊಜ್ಜು ಬಂದರೆ ಕೊಬ್ಬಿಳಿಸುವ ಉಪಾಯವನ್ನು ನಾವೇ ಹೇಳಿಕೊಡ್ತೀವಿ, ಮಣ್ಣು ಕೆಸರಿನಲ್ಲಿ ಮಕ್ಕಳನ್ನು ಯಾಕೆ ಆಡಲು ಬಿಡುತ್ತೀರಿ? ನಮ್ಮಲ್ಲಿ ವೀಡಿಯೋ ಗೇಮುಗಳಿವೆ, ಕೊನೆಗೆ ಮಕ್ಕಳಿಗೆ ಮಾನಸಿಕ ಖಾಯಿಲೆ ಬಂದರೆ ನಮ್ಮಲ್ಲಿ ಸೈಕಿಯಾಟ್ರಿಸ್ಟ್‍ಗಳೂ ಇದ್ದಾರೆ. ಹೀಗೆ ಕಾಯಿಲೆಯನ್ನೂ ಮಾರುತ್ತಾ ಔಷದಿಯನ್ನೂ ಬಿಕರಿ ಮಾಡುತ್ತಾನೇ ಇರ್ತಾರೆ.

ಹಿಟ್ಟನ್ನು ಚೆನ್ನಾಗಿ ನುರಿದ ಮೇಲೆ ಇದ್ದಕ್ಕಿದ್ದಂತೆ ಕಟಾಣಿಗೆ ಕಲುಬೆ ಮೇಲೆ ಚೆಲ್ಲಿದ್ದ ಕಾಫಿಯ ನೆನಪಾಯ್ತು. ಕಲುಬೆಯೊಳಗೆ ಒಣಗಿಸಿದ ಏಲಕ್ಕಿ, ಕಾಳುಮೆಣಸು, ಮದುವೆ-ಮುಂಜಿಗೆ ಗಂಡ ಉಡುತಿದ್ದ ಬಿಳಿಪಂಚೆ, ಒಗೆದು ಇಸ್ತ್ರಿ ಮಾಡಿಡುತಿದ್ದ ಒಳ್ಳೆ ಬಟ್ಟೆ, ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳು ಇಟ್ಟಿರುತಿದ್ದುದು ನೆನಪಾಯ್ತು. ಗಂಡನ ಮೇಲಿನ ಸಿಟ್ಟಿನಿಂದ ಬೇಕಿದ್ದರೆ ಅವನೇ ಸರಿಮಾಡಿಕೊಳ್ಳಲಿ ಎಂದು ಹಿಟ್ಟು ಕಲೆಸಲು ಕುಳಿತವಳಿಗೆ, ಕುಳಿತಲ್ಲೇ ಕಸಿವಿಸಿ ಶುರುವಾಯ್ತು. ಅಯ್ಯಣ್ಣನೇನಾದ್ರೂ ಸರಿಮಾಡಿದನೋ, ಇಲ್ಲಾ ಚೆಲ್ಲಿದ್ದ ಕಾಫಿ ಎಲ್ಲಾ ಒಳಗಿಳಿದು ಯಂಥ ರಂಪರಾಮಾಯ್ಣ ಆಯ್ತೋ ಎಂದು ಮರಿಗೆಯ ಕಂಠಕ್ಕೇ ಕೈ ಬಳಿದವಳೇ ಏನಾಗಿರಬಹುದೆಂದು ಓಡಿ ಬಂದಳು.

ಅಯ್ಯಣ್ಣ ಕಲುಬೆಯ ಬೀಗ ತೆಗೆದು ಒಂದೊಂದೇ ವಸ್ತುಗಳನ್ನ ಹೊರಗಿಡುತಿದ್ದಾನೆ; ತೆರೆದ ಮುಚ್ಚಳದ ಸಂದಿಗಳಿಂದ ಹಾತೆಗಳು ಪುಳಪುಳನೆ ನುಗ್ಗಿ ಕತ್ತಲೆಯೆಡೆಗೆ ಓಡುತ್ತಿವೆ. ಹತ್ತಾರು ವರ್ಷಗಳೇ ಕಳೆದಿದ್ದವು ಕಲುಬೆಯನ್ನು ಶುಚಿಮಾಡಿ. ತೆಗೆಯುತಿದ್ದಂತೆ ಅಕ್ಷಯ ಪಾತ್ರೆಯಂತೆ ಒಂದಾದ ಮೇಲೊಂದು ವಸ್ತುಗಳು ಹೊರಬರುತ್ತಲೇ ಇದ್ದವು. ಕಟಾಣಿಯ ಮದುವೆಯ ಸೀರೆಯಿಂದ ಹಿಡಿದು ಎರಡು ತಲೆಮಾರುಗಳ ಹಿಂದಿನ ಹಿರಿಯರು ಹಿಡಿದು ಓಡಾಡುತಿದ್ದ ಚೂರಿಯಂಥಾ ಬಾಕುಗಳು, ಅಜ್ಜಿಯರು ಉಡುತಿದ್ದ ಹದಿನಾರು ಮೊಳದ ಸೀರೆಗಳು, ದಶಕಗಳಿಂದ ಮನೆ, ಕೂಡು-ಕೊನೆ ಹಾಗೂ ಕೊಟ್ಟು-ತಂದಲ್ಲಿ ಹುಟ್ಟಿದ ಮಕ್ಕಳ ಜಾತಕಗಳು, ದರಕಾಸ್ತು, ಪಾಲು-ಪಾರೀಕತ್ತು, ದಾನಪತ್ರ, ಖರೀದಿ ಮುಂತಾದುವಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳು, ನೆಂಟರಿಷ್ಟರ ಜೊತೆಗಿನ ಪತ್ರವ್ಯವಹಾರದ ಕಡತಗಳು, ಕುಟುಂಬದಲ್ಲಾದ ಮದುವೆಯ ಪತ್ರಿಕೆಗಳು, ಬರೆಸಿದ್ದ ಸಾಲಾವಳಿಗಳು, ರೇಷ್ಮೆ ಜರಿಯ ಪೇಟಗಳು, ಕರಿ ಟೋಪಿಗಳು, ಕೋಟುಗಳು, ಮೊಣಕಾಲವರೆಗೆ ಉಡುತಿದ್ದ ಮಡಿ ಮುಂಡು ಬಿಳಿಪಂಚೆಗಳು, ಒಂದೊಂದು ವಸ್ತು ಹೊರಬಂದಂತೆ ಎಂದೋ ತೆರೆಮರೆಗೆ ಸರಿದಿದ್ದ ಹಲತಲೆಮಾರುಗಳ ಒಂದೊಂದೇ ಕಥೆಗಳು ಮೈಕೊಡವಿ ಮಗ್ಗುಲು ಬದಲಿಸತೊಡಗಿದವು.

ಹೇಗಿದ್ದರೂ ಕಲುಬೆಯನ್ನು ಖಾಲಿ ಮಾಡಾಗಿದೆ, ಇಟ್ಟಲ್ಲಿಂದ ಇದುವರೆಗೂ ತೆಗೆದಿಡದೇ ಶುಚಿ ಮಾಡಲಾಗಿಲ್ಲ. ಪೂರ್ತಿ ಖಾಲಿಮಾಡಿ ಮನೆಯಿಂದ ಹೊರತೆಗೆದು ಬಿಸಿಲಿಗೆ ಇಟ್ಟು ಸಂದಿ ಬಿರುಕುಗಳಲ್ಲಿ ಅಡಗಿರುವ ಹಾತೆಗಳನ್ನು ಓಡಿಸಿ ವಾಪಾಸ್ ಇಡುವ ಎಂದೆನಿಸಿತು ಅಯ್ಯಣ್ಣನಿಗೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕಟಾಣಿಗೆ “ಬಾ ಇಲ್ಲಿ. ಇದನ್ನ ಎತ್ತಿ ಅಂಗಳದಲ್ಲಿ ಇಟ್ಟು ಬಿಸಿಲಿನಲ್ಲಿ ಒಣಗಿಸೋಣ” ಗುರುಗುರು ಎನ್ನುತ್ತಲೇ ಕರೆದ. ದೈಹಿಕವಾಗಿ ಬಲವಾಗಿದ್ದ ನಾಲ್ಕು ಜನರಿಗೆ ಸಹಾ ಎತ್ತಲು ಸಾಧ್ಯವಿಲ್ಲದ ಆ ಕಲುಬೆಯನ್ನು ಎತ್ತಲು ಕಟಾಣಿಯನ್ನು ಕರೆದದ್ದು ತಮಾಷೆಗಾದರೂ, ಬಿಸಿಕಾಫಿಯಿಂದ ತುಟಿ ಸುಟ್ಟುಕೊಂಡದ್ದು ಮತ್ತು ಲೋಟ ಕುಕ್ಕಿದ ಕಾರಣ ಕಾಫಿ ಚೆಲ್ಲಿ ಇದೆಲ್ಲಾ ರಂಪಾಟವಾದದ್ದರ ಸಿಟ್ಟು ಇನ್ನೂ ಇಳಿದಿಲ್ಲವೆಂದು ತೋರ್ಪಡಿಸಲೆಂದು. ಆಚೆಮನೆ ಮಂಜಪ್ಪಣ್ಣ, ಅದೇ ಮನೆಯ ಇನ್ನೊಂದು ಪಾಲಿನ ರಾಜಣ್ಣ, ಅಗೇಡಿಯಲ್ಲಿ ಭತ್ತದ ಅಗೆ ಹಾಕಲು ಸಿದ್ಧತೆ ಬಗ್ಗೆ ಮಾತನಾಡಲು ಬಂದಿದ್ದ ಯಜಮಾನಣ್ಣರನ್ನು ಕೂಗಿ ಕರೆದ ಅಯ್ಯಣ್ಣ, ಕಲುಬೆ ಎತ್ತಿ ಸಾಗಿಸಲು ಕೈಕೊಡಲು ಕೇಳಿಕೊಂಡ. ಆರಡಿ ಉದ್ದದ ಮೂರಡಿ ಅಳ ಅಗಲದ ಅಗಾಧ ಭಾರದ ಇನ್ನೂರು ವರ್ಷಕ್ಕೂ ಹಳೆಯದಾದ ಎರಡಿಂಚು ದಪ್ಪದ ಬೀಟೆ ಹಲಗೆಯ ಕಲುಬೆಯನ್ನು ತಳದಲ್ಲಿ ಹಗ್ಗ ಹಾಕಿ ಎತ್ತಿಕೊಂಡು ಅಂಗಳಕ್ಕೆ ತರುವುದಿರಲಿ ನಡುಮನೆಯ ಹಜಾರಕ್ಕೆ ತರುವುದರೊಳಗೆ ಸಾಕುಸಾಕಾಯ್ತು.

ಲೇಲೇಲಯ್ಯ ಐಸಾ, ಲೇಲೆಕ್ಕುಲಯ್ಯ ಐಸಾ, ……………
ಅಷ್ಟರಲ್ಲಿ ಮೇಲಮನೆ ಮಹೇಶಪ್ಪ ಊರಬಾಗಿಲಲ್ಲಿದ್ದ ತನ್ನ ರಾಗ್ಯಣ್ಣಕ್ಕೆ ಹಸು ಕಟ್ಟಲೆಂದು ಹೋಗುತ್ತಿದ್ದವನು, ಈ ನಾಲ್ಕೂ ಜನ ಏನನ್ನೋ ಮನೆಯಿಂದ ಹೊರತರಲೆಂದು ತಿಣುಕಾಡುತ್ತಿದ್ದುದನ್ನು ಕಂಡು ಹಸುವನ್ನು ಅಲ್ಲೇ ಇದ್ದ ನುಗ್ಗೇಮರಕ್ಕೆ ಕಟ್ಟಿ, ಲಗುಬಗೆಯಿಂದ ಮನೆಯ ಹೊಸ್ತಿಲವರೆಗೂ ಬಂದ. ಒಳಗೆ ಅಡಿಯಿಡಲೆಂದು ಬಲಗಾಲೆತ್ತಿದವನು, ತನ್ನೆರಡೂ ಕಣ್ಣುಗಳನ್ನು ಹಾಗೆಯೇ ಮುಚ್ಚಿಕೊಂಡು ಕೊಂಚ ತಡವರಿಸಿದ. ಹತ್ತು ಸೆಕೆಂಡಿಗಿಂತಲೂ ಹೆಚ್ಚು ಕಾಲ ಒಳ ಹೋಗಲೋ ಬೇಡವೋ ಎಂದು ಅಳೆದೂ ತೂಗುತಿದ್ದವನನ್ನು ನೋಡಿದ ಅಯ್ಯಣ್ಣ ಹಾಗೂ ಕಟಾಣಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಏನನ್ನೂ ಮಾತನಾಡಿಕೊಳ್ಳದೇ ದವಡೆಗಳನ್ನು ಬಿಗಿಮಾಡಿಕೊಂಡರು. ಮಂಜಪ್ಪಣ್ಣ, ರಾಜಣ್ಣ ಹಾಗೂ ಯಜಮಾನಣ್ಣ ಸಹಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಅಯ್ಯಣ್ಣನ ಕಡೆಗೂ ಪ್ರಶ್ಣಾರ್ಥಕವಾಗಿ ನೋಡಿದರು. ಇಡೀ ಊರಿಗೇ ಹಿರಿಯನಾಗಿದ್ದ ಹಾಗೂ ಊರ ವ್ಯಾಜ್ಯಗಳನ್ನು ಯಾವುದೇ ತಕರಾರುಗಳಿಗೆ ಅಸ್ಪದವಿಲ್ಲದಂತೆ ತೀರ್ಮಾನಿಸುತಿದ್ದ ಯಜಮಾನಣ್ಣ, “ಏ, ಮಹೇಸಾ, ಯಂತ ಜಪ ಮಾಡ್ತಿದೀಯಲಾ, ಬಾರ್ಲಾ ವಳೀಕೆ. ಒಂದ್ ಮಾತ್ ಬರ್ತದೆ, ಹೋಗ್ತದೆ. ಸಾಯತಂಕ ಕಚ್ಚಾಡ್ತಿರೇನ್ಲಾ? ಬಾ, ಬಾ ಇಲ್ಲಿ ಹಿಡ್ಕಾ. ನಾವೂ ಸಾಲಕ್ಲ. ಅಲ್ಲಿ ಕತ್ತಿ ಮಸೀತಿದಾನೆ ನೋಡು, ಆ ಲೋಕಳ್ಳಿ ಸೋಮ, ಅವುನ್ನೂ ಕರಿ. ಇದುನ್ನೊಂದ್ ಸಲ ಹೆಬ್ಬಾಗ್ಲು ದಾಟಿಸ್ಬಿಡಾನ” ಎಂದರು.

ಊರಿಗೇ ಹಿರಿಯನಂತೆ ಹೆಸರಿಗೆ ತಕ್ಕಂತೆ ಯಜಮಾನಿಕೆ ಮಾಡುತಿದ್ದ ಯಜಮಾನಪ್ಪನವರ ಮನೆಯಲ್ಲಿ ಈ ಹಿಂದೊಂದು ಪ್ರಹಸನ ನಡೆದಿತ್ತು. ಆಗಿನ್ನೂ ಟೀವಿಗಳು ಕಾಲಿಡುತಿದ್ದ ಕಾಲ. ಊರಿಗೇ ದೊಡ್ಡ ಮನೆಯಾಗಿದ್ದ ಯಜಮಾನಪ್ಪನವರ ಮನೆಯಲ್ಲೇ ಎರಡು ತಿಂಗಳ ಹಿಂದೆ ಒಂದು ಡಯಾನೋರ ಬ್ಲಾಕ್ ಅಂಡ್ ವೈಟ್ ಟೀವಿ ಬಂದಿತ್ತು. ದೆಹಲಿ ದೂರದರ್ಶನ ಬಿಟ್ಟರೆ ಸಂಜೆ ಬರುತಿದ್ದ ಚಂದನ ಪ್ರಸಾರ ಮಾತ್ರ. ವಾರದಲ್ಲೊಂದು ದಿನ ಶುಕ್ರವಾರದ ಚಿತ್ರಹಾರ್, ಭಾನುವಾರದ ಬೆಳಗಿನ ರಾಮಾಯಣ, ಅವಾರ್ಡ್ ಪಡೆದ ಪ್ರಾದೇಶಿಕ ಭಾಷೆಯ ಚಲನಚಿತ್ರ, ಮಧ್ಯೆ ಮಧ್ಯೆ ಪ್ರಸಾರ ವ್ಯತ್ಯಯವಾಗಿ ಪರದೆಯ ತುಂಬ ಜುಸ್ಸ್ಸ್ಸ್ಸ್ಸï ಎನ್ನುತ್ತಾ ಗೋಧಿ ಸುರಿಯುವ ದೃಶ್ಯ. ಇಂತಿಪ್ಪ ದಿನಗಳಲ್ಲಿ ದಸರಾ ರಜೆಗೆಂದು ಮನೆಗೆ ಬಂದಿದ್ದ ತಮ್ಮ ಅಗಾಧ ಪರಿವಾರದ ಮೊಮ್ಮಕ್ಕಳು, ಸೊಸೆಯಂದಿರು, ಮಕ್ಕಳೊಂದಿಗೆ ತವರಿಗೆ ಬಂದಿದ್ದ ಮಗಳಂದಿರ ಒತ್ತ್ತಾಯದ ಮೇರೆಗೆ ಡೂಮಿಗೆರೆಗೇ ಹೆಸರಾಂತ ಸೋಜಾ ವೀಡಿಯೊ ಲೈಬ್ರರಿಗೆ ಹೋಗಿ ವೀಸೀಆರ್ ಒಂದನ್ನು ದಿನಕ್ಕೆ ನೂರೈವತ್ತು ರೂಪಾಯಿಯಂತೆ ಬಾಡಿಗೆಗೆ ತಂದಿದ್ದರು. ಕನಿಷ್ಠ ಅರವತ್ತು ಕೇಜಿ ತೂಕವಿದ್ದು, ಆಟೋ ರಿಕ್ಷಾದ ಹಿಂದಿನ ಸೀಟಿಗೆ ಸುಲಭವಾಗಿ ಹಿಡಿಸದಿದ್ದ ಬೃಹತ್ಸ್ಬಾಕ್ಸ್ ಟೀವಿ ಸಹ ಬಾಡಿಗೆಗೆ ದೊರೆಯುತಿತ್ತು. ಟೀವಿ ಬೇಡ, ನಮ್ಮನೇಲೇ ಐತೆ, ಬರೀ ವೀಸೀಆರ್ ಕೊಡೆಂದು ಗತ್ತಿನಿಂದಲೇ ಹೇಳಿದ ಯಜಮಾನ್ರು, ಅವತ್ತಿಗೆ ದೊಡ್ಡ ಹಿಟ್ ಆಗಿದ್ದ ಹಿಂದಿಯ ಮೈನೆ ಪ್ಯಾರ್ ಕಿಯಾ, ಕನ್ನಡದ ಹೃದಯಗೀತೆ ವಿಡಿಯೋ ಕ್ಯಸೆಟ್ಟುಗಳನ್ನು ಸೊಸೆಯಂದಿರ ಕೋರಿಕೆಯಂತೆ ಕೇಳಿ ಪಡೆದರು. ನಂತರ ಮಕ್ಕಳಿಗೆಂದು ಟಾಮ್ ಅಂಡ್ ಜೆರ್ರಿಯನ್ನು ಸಹಾ ಕಾದು ನಿಂತು ಪಡೆದರು. ನಂತರ ಏನಕ್ಕೂ ಇರಲಿ ಎಂದು ಒಂದೆರಡು ದೇವರ ಪಿಚ್ಚರ್ರುಗಳ್ನೂ ಕೊಟ್ಟಿರು ಮಾರಾಯ. ಈ ಹೆಂಗುಸ್ರು-ಮಕ್ಳುಗೆ ಮಾತ್ರ ತೋರ್ಸೋದಾಗುತ್ತೆ. ನಾವು ದೊಡ್ಡೋರು, ವಯಸ್ಸಾದವ್ರು ನೋಡೋಂಥ ಒಳ್ಳೆ ಪಿಚ್ಚರ್ನೂ ಕೊಡು ಎಂದರು. ಯಜಮಾನರ ಕಡೆಗೆ ತಲೆ ಎತ್ತಿ ನೋಡಿ ಹುಳ್ಳಗೆ ನಗಾಡಿದ ಕೆಸೆಟ್ ಅಂಗಡಿಯ ರಂಗ “ಒಂದು ಸತ್ಯನಾರಾಯಣ ಪೂಜಾಫಲ ಮತ್ತೊಂದು ಗಜಗೌರಿ ವ್ರತ ಕೊಟ್ಟಿದೀನಿ, ಜೋಪಾನ, ನಾಳೆ ಸಂಜೇನೇ ವಾಪಸ್ ತಂದುಕೊಡಬೇಕು. ಇವುಕ್ಕೆಲ್ಲ ತುಂಬಾ ಡಿಮ್ಯಾಂಡಿದೆ” ಎಂದು ಅವನ್ನು ಯಾವುದೋ ಅಮೂಲ್ಯ ಪವಿತ್ರ ವಸ್ತುವೇನೋ ಎಂಬಂತೆ ನ್ಯೂಸ್ ಪೇಪರಿನಲ್ಲಿ ಸುತ್ತಿ ಯಜಮಾನರ ಬ್ಯಾಗಿನೊಳಕ್ಕೆ ತಾನೇ ಖುದ್ದಾಗಿ ಇಟ್ಟು, “ಇವಕ್ಕೆ ದಿನಕ್ಕೆ ಇಪ್ಪತ್ತು ರೂಪಾಯಿ, ಮೊದಲು ಕೊಟ್ಟವಕ್ಕೆ ದಿನಕ್ಕೆ ಹತ್ತು ರೂಪಾಯಿ ಬಾಡಿಗೆ” ಎಂದ. ಜೊತೆಗೆ ಟೀವಿಗೆ ವೀಸೀಆರ್ ಕನೆಕ್ಟ್ ಮಾಡಿಕೊಡಲು ಹುಡುಗನೊಬ್ಬನನ್ನು ಕಳಿಸಿಕೊಟ್ಟ.
ಅರ್ಧ ಗಂಟೆ ಸರ್ಕಸ್ ಮಾಡಿ ಟೀವೀನೂ ವೀಸೀಆರ್ನೂ ಪಿಚ್ಚರು ಬರುವಂತೆ ಜೋಡಿಸಿಕೊಟ್ಟ ಹುಡುಗ, ಹೇಗೆ ಆಪರೇಟ್ ಮಾಡುವುದೆಂದು ಹೇಳಿಕೊಟ್ಟು ಹೋದ. ಮಕ್ಕಳು ನಿದ್ದೆ ಮಾಡಿಯಾರೆಂದು ಮೊದಲು ಟಾಮ್ ಅಂಡ್ ಜೆರ್ರಿ ತೋರಿಸಿಯಾಯ್ತು. ತೋಟದ ಕೆಲಸಕ್ಕೆಂದು ಬರುತಿದ್ದ ಕಾರ್ಮಿಕರಿಗೂ ಸುದ್ದಿ ಗೊತ್ತಾಗಿ, ಗಡಿಬಿಡಿಯಲ್ಲಿ ಯಂತದೋ ಒಂದು ಅನ್ನ ಸಾರು ತಿಂದುಕೊಂಡು ಮನೆ ಮಕ್ಕಳು-ಮೋಟರೊಂದಿಗೆ ಅಂಗಳದ ತುಂಬ ಜಮೆಯಾದರು. ನೋಡನೋಡುತಿದ್ದಂತೆ ಯಜಮಾನರ ಮನೆಮುಂದೆ ಅಸಂಘಟಿತ ಮಿನಿ ಓಪನ್‍ಏರ್ ಥಿಯೇಟರ್ ಒಂದು ಸೃಷ್ಥಿಯಾಗಿಯೇಬಿಟ್ಟಿತು, ಅದೂ ಸಹಾ ಮೂವತ್ತಡಿಗೂ ಹೆಚ್ಚು ಉದ್ದಕ್ಕೆ ಚಾಚಿಕೊಂಡಿದ್ದ ಹಜಾರದÀ ಕಿಟಕಿಯ ಸರಳುಗಳ ಮೂಲಕ ನೋಡಲು. ಊಟ ಮಾಡಲಾಗಲೀ, ಉಚ್ಚೆ ಹೊಯ್ಯಲಾಗಲೀ ಎದ್ದು ಸಹಾ ಹೋಗದೇ ಬಾಯಿ ಬಿಟ್ಟುಕೊಂಡು, ಕಣ್ಣಗಲಿಸಿಕೊಂಡು ನೋಡುತಿದ್ದ ಮಕ್ಕಳು, ರಾತ್ರಿ ಮೂರುಗಂಟೆಯವರೆಗೂ ಎಡಬಿಡದೇ ಮೂರು ಪಿಚ್ಚರುಗಳನ್ನು ಮನೆಯವರೊಂದಿಗೆ ಕುಳಿತು ನೋಡಿಮುಗಿಸಿದರು. ಉಳಿದೆರಡು ಪಿಚ್ಚರ್ರು ನಾಳೆಗೆಂದು ನಿಗದಿಯಾದ ನಂತರ ವೀಕ್ಷಕರೆಲ್ಲರೂ ಒಲ್ಲದ ಮನಸ್ಸಿನಿಂದ ನಿದ್ರೆಗೆ ಮೊರೆಹೋದರು.

ಬೆಳಿಗ್ಗೆ ಎಂಟುಗಂಟೆಗೇ ಮಕ್ಕಳೆಲ್ಲ ಹಲ್ಲು ತಿಕ್ಕದೇ, ಮುಖವನ್ನೂ ತೊಳೆಯದೇ ಟೀವಿಯ ಮುಂದೆ ಚಕ್ಲಂಬಕ್ಲ ಹಾಕಿಕೊಂಡು ಕುಳಿತರು. ಅದೇನು ಗ್ರಹಚಾರವೋ ಏನೋ; ಟೀವಿ ನೋಡಲು ಕರೆಂಟಿರಲಿಲ್ಲ. ತೋಟದ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರಿಗ್ಯಾರಿಗೂ ಕೆಲಸಕ್ಕೆ ಹೋಗುವ ಮನಸ್ಸೇ ಇರಲಿಲ್ಲ. ಅಂತೂ ಇಂತು ಕರೆಂಟು ಬಂತು. ಯಜಮಾನ್ರು ಮಕ್ಕಳಿಗೆ ನಿರಾಸೆಯಾಗಬಾರದೆಂದು ಟೀವಿ ಆನ್ ಮಾಡಿ, ಮನೆಯ ಹೆಂಗಸ್ರನ್ನೆಲ್ಲ ಕೂಗಿ ಕರೆದು, “ನಾನ್ ಜನ್ರನ್ನ ಗಿಡಕ್ಕೆ ಗೊಬ್ರ ಹಾಕಕ್ಕೆ ಕರ್ಕೊಂಡ್ ಹೋಗ್ತಿದೀನಿ, ಒಂದ್ಮುಕ್ಕಾಲು ಗಂಟೇಲಿ ಬರ್ತೀನಿ, ನೋಡ್ತಾ ಇರಿ” ಎಂದವರೇ, “ಏ ಬನ್ರಾ, ಬನ್ರಾ, ಹೆಣ್ಣಾಳು ಡೀಏಪೀ, ಗಂಡಾಳು ಪೊಟ್ಯಾಷು ಮೂಟೆ ಹೊತ್ಕಳಿ, ನಾಲಕ್ ಗಂಟೆ ಮೇಲೆ ಈ ಪಿಚ್ಚರ್ನೇ ಮತ್ತ್ತೊಂದ್ಸಲ ಹಾಕಿ ತೋರಿಸ್ತೀನಿ, ಈಗ ಬನ್ನಿ, ಬಿರ್ಬಿರ್ನೆ ಬನ್ನಿ. ಆ ಒಂಬೈನ್ನೂರ್ ಗಿಡದ್ ಪಟ್ಟೇನ ಬುಡ ಬಿಡ್ಸಿ ಗೊಬ್ರ ಹಾಕಿ, ಎಲ್ಲಾ ಗಿಡಕ್ಕೂ ದರಗು ಮುಚ್ಬೇಕು, ನೆಡೀರಿ, ನೆಡೀರಿ” ಎಂದು ಒಂದು ಉದ್ದಿಕತ್ತಿ ಹಿಡಿದು ಜನರೊಂದಿಗೆ ತೋಟದೊಳಗೆ ಹೋದರು.

ಮಕ್ಕಳು ಕುತೂಹಲದಿಂದ ಪರದೆಯ ಮೇಲೆ ಮೂಡುತಿದ್ದ ವಿವಿಧ ವಿನೋದಾವಳಿಗಳನ್ನು ನೋಡುತ್ತಾ ಕಿಸಕ್, ಪುಸುಕ್ ಎಂದು ನೋಡುತಿದ್ದರೆ, ಹೆಂಗಸರು ಒಬ್ಬರ ಮುಖ ಒಬ್ಬರು ಮತ್ತೊಬ್ಬರಿಗೆ ಗೊತ್ತಾಗದಂತೆ ವಾರೆಗಣ್ಣಿನಲಿ ನೋಡುತ್ತಾ ನಿಧಾನವಾಗಿ ಎದ್ದು ಒಳಮನೆಯತ್ತ ಹೋಗಲಾರಂಭಿಸಿದರು. ಮಕ್ಕಳು ಒಬ್ಬರ ಕಿವಿಯೊಳಕ್ಕೊಬ್ಬರು ಪಿಸುಗುಡುತ್ತಾ ಕತ್ತು ಬಗ್ಗಿಸಿ, ತಮ್ಮ ಹಿಂದೆ ಕುರ್ಚಿಗಳಲ್ಲಿ ಕುಳಿತಿದ್ದವರತ್ತ ನೋಡಿದರೆ, ಎಲ್ಲಾ ಕುರ್ಚಿಗಳೂ ಖಾಲಿ. ಒಳ ಹೋಗಿದ್ದ ಯಜಮಾನರ ಎರಡನೇ ಸೊಸೆಗೆ, ಏನೋ ಹೊಳೆದಂತಾಗಿ, ಓಡಿ ಬಂದವಳೇ ಟೀವಿಯ ಸ್ವಿಚ್ಚನ್ನು ಚಕ್ಕೆಂದು ಆಫ್ ಮಾಡಿದಳು. ಟೀವಿ ಆಫ್ ಆಗುವುದಕ್ಕೂ ಯಜಮಾನರು ಗೃಹಪ್ರವೇಶ ಮಾಡುವುದಕ್ಕೂ ಸರೀ ಆಯಿತು. ಕಕ್ಕಾಬಿಕ್ಕಿಯಾದ ಯಜಮಾನರ ಪೂಜೆ ಮಾಡಲು ಯಜಮಾನ್ತಿಯವರ ರಂಗಪ್ರವೇಶವಾಯಿತು. ನಂತರ ನಡೆದ ಮೋಹಿನಿ-ಭಸ್ಮಾಸುರ ಪ್ರಸಂಗದ ಪೂರ್ಣ ಮಾಹಿತಿ ಸಿಗದಿದ್ದರೂ, ಸಂಜೆ ಸೋಜಾ ಕೆಸೆಟ್ ಲೈಬ್ರೆರಿಯಲ್ಲಿ ನಡೆದ ಸ್ಮಶಾನ ಕುರುಕ್ಷೇತ್ರ ಊರೆಲ್ಲಾ ಸುದ್ದಿಯಾಗಿತ್ತು.

ಕಲುಬೆ ಎತ್ತಿಡಲು ಮಹೇಶಪ್ಪನನ್ನು ಯಜಮಾನಣ್ಣ ಕರೆದದ್ದು ಅಯ್ಯಣ್ಣನಿಗೆ ಪಜೀತಿಗಿಟ್ಟುಕೊಂಡಿತು. ಸುಮಾರು ಮೂವ್ವತ್ತು ವರ್ಷಗಳ ವೈರತ್ವ. ಮೇಲಮನೆ ಅಂಗಳದ ನೀರು ಅಯ್ಯಣ್ಣನ ಮನೆಯ ಹಿತ್ತಿಲಿಗೆ ಮಳೆಗಾಲ್ದಲ್ಲಿ ದಬದಬನೆ ಬಂದು ಸುರಿದು, ಇವರ ಮನೆಯ ದನಿನ ಕೊಟ್ಟಿಗೆಯ ನೆಲಕಟ್ಟಿನ ಮೂಲೆ ಕಲ್ಲುಗಳು ಕಿತ್ತು ಉರುಳಿಹೋದದ್ದೇ ಕಾರಣವಾಗಿ ಮಹೇಶಪ್ಪನ ಅಪ್ಪ ಸೇಖರನ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ವೈರತ್ವ, ಆತ ಸತ್ತು, ಆತನ ನೆನಪು ಊರಿನ ಜನರ ಜ್ಞಾಪಕದಿಂದಲೇ ಮಸುಕಾದ ನಂತರವೂ ಎರಡೂ ಮನೆಯವರ ತಿಕ್ಕಲುತನದಿಂದ ಇವತ್ತಿನವರೆಗೂ ಮುಂದುವರೆದಿತ್ತು. ಈ ಸೇಕರನ ಯಜಮಾನಿಕೆಯ ಭರಾಟೆಯ ದಿನಗಳಲ್ಲಿ ಘಟನೆಯೊಂದು ನಡೆದಿತ್ತು. ಪೇಟೆ ಭವಾನಮ್ಮನ ಮನೆಯಲ್ಲಿ ಬಾಡಿಗೆಗೆ ಬಂದಿದ್ದ ಕೇರಳದ ಮಹಾ ಮಾಂತ್ರಿಕ ಜ್ಯೋಯಿಷಿ, ಕುಟ್ಟಿಚಾತ್ತಾನ್ ಆರಾಧಕ ಹಾಗೂ ಕಾಳಿ ಮಾತೆಯನ್ನೇ ವಶಪಡಿಸಿಕೊಂಡಿದ್ದ ಪಂಡಿತ್ ಕುಂಜುಕ್ಕುಂಜ್ ತನ್ನ ಹೆಸರಿನಂತೆಯೇ ನಿಗೂಢ ಮನುಷ್ಯ. ಮಾಟ, ಮಂತ್ರ, ವಶೀಕರಣ, ತಡೆ ಒಡೆಯುವುದು, ನಿಧಿ ಹುಡುಕಿಕೊಡುವುದು ಮುಂತಾದುವನ್ನು ದೇವಿಯ ಅನುಗ್ರಹದಿಂದ ಪರಿಹರಿಸುತ್ತೇನೆಂದು ಹೇಳಿ ಅಪಾರ ಭಕ್ತಕೋಟಿಯನ್ನು ಹೊಂದಿದ್ದನು. ಹೇಗಾದರೂ ಮಾಡಿ ಅಣ್ಣಪ್ಪಯ್ಯನನ್ನು ಈ ಊರಿನಿಂದಲೇ ಓಡಿಸಬೇಕೆಂದೂ, ಆತನ ವಂಶವನ್ನು ನಿರ್ವಂಶ ಮಾಡಿಹಾಕಬೇಕೆಂದು ಶತಾಯಗತಾಯ ಪ್ರಯತ್ನಿಸುತಿದ್ದವನು ಸೇಕರ. ಚೋರ್ ಗುರುವಿಗೆ ಚಾಂಡಾಳ್ ಶಿಷ್ಯ ಎಂಬಂತೆ ಮಾಟ, ಮಂತ್ರ, ವಶೀಕರಣ, ತಡೆ ಕಟ್ಟಿಸುವುದು ಮುಂತಾದುವುದರಲ್ಲಿ ಅಪಾರ ಅನುಭವವಿದ್ದ ಈ ಸೇಕರನಿಗೆ ಶಿಷ್ಯನೋಪಾದಿಯಲ್ಲಿ ಸಿಕ್ಕಿದವನೇ ಕೇರಳದ ಮಹಾ ಮಾಂತ್ರಿಕ ಜ್ಯೋಯಿಷಿ, ಕುಟ್ಟಿಚಾತ್ತಾನ್ ಆರಾಧಕ ಹಾಗೂ ಕಾಳಿಮಾತೆಯನ್ನೇ ವಶಪಡಿಸಿಕೊಂಡಿದ್ದ ಕುಂಜುಕ್ಕುಂಜ್. ಇಬ್ಬರೂ ಸೇರಿ ಅಣ್ಣಪ್ಪಯ್ಯನ ಮನೆ ಹಾಗೂ ತೋಟದಲ್ಲಿ ಮಾಟ ಹೂಣಲು ಸ್ಕೆಚ್ಚೊಂದನ್ನು ರೆಡಿ ಮಾಡಿಕೊಂಡರು. ಮಾಟಗಾರನ ಬಳಿಯಲ್ಲಿದ್ದ ಬಾಣಂತಿ ತೋಳಿನ ಎರಡು ಮೂಳೆಗಳು, ಹಲ್ಲುಗಳಿನ್ನೂ ಗಟ್ಟಿಮುಟ್ಟಾಗಿದ್ದ ಮಧ್ಯವಯಸ್ಕನ ಅಗಲ ಹಣೆಯ ಆದರೆ ಕೆಳದವಡೆಯೇ ಇಲ್ಲದ ಕಪಾಲ, ಅಂಗೈನ ಪ್ರತಿ ಮೂಳೆಯೂ ಒಂದಿನಿತೂ ಕದಲಿಲ್ಲದ ಇಡೀ ಹಸ್ತ, ಸಣ್ಣ ಗಾತ್ರದ ಕರಿಬಣ್ಣದ ಮಡಕೆ, ಅದರೊಳಗೊಂದು ಹಸಿದಾರ ಸುತ್ತಿದ್ದ ವಿಭೂತಿ, ಅರೆಬೆಂದ ಹೆಣ ಉರಿದಿದ್ದ ಚಿತೆಯಿಂದ ಬಿಸಿಯಾರದೇ ಇದ್ದಾಗ ಹೆರಕಿದ್ದ ಇದ್ದಿಲ ಚೂರುಗಳು, ಅದಷ್ಟನ್ನೂ ತುಂಬಿದ್ದ ಮಡಕೆಯ ಮೇಲೆ ಆಕರ್ಷಕವಾಗಿ ಹಾಗೂ ಛಂದೋಬದ್ಧವಾಗಿ ಸುತ್ತಿದ್ದ ಕೆಂಪು ಮತ್ತು ಬಿಳಿ ನೂಲು. ಆ ಮಡಕೆಯ ಬಾಯಿಯನ್ನು ಆವರಿಸುವಂತೆ ಹೊಟ್ಟೆ ಕೆಳಗಾಗಿಟ್ಟು ಕಪ್ಪು ಹಸಿ ನೂಲಿಂದ ಬಂಧಿಸಲ್ಪಡಬೇಕಿದ್ದ ಮುಷ್ಠಿ ಗಾತ್ರದ ಮಟ್ರುಗಪ್ಪೆ. ಇದಷ್ಟನ್ನೂ ಸಿದ್ಧ ಮಾಡಿಟ್ಟುಕೊಂಡು, ಮಧ್ಯರಾತ್ರಿ ಮಾತ್ರ ಕೂಗುತ್ತಿದ್ದ ಕಪ್ಪು ಬಣ್ಣದ ಕೋಳಿಹುಂಜವನ್ನು ಕಾಲು ಕಟ್ಟಿ, ಮೂರು ಕೋಳಿಮೊಟ್ಟೆ ಇನ್ನಿತರೆ ವಾಮಾಚಾರದ ಪರಿಕರಗಳೊಂದಿಗೆ ರಾತ್ರಿ ಹತ್ತೂವರೆಗೆ ಮನೆ ಬಿಟ್ಟರು. ಮೈಮೇಲೆ ಒಂದಿಂಚೂ ನೂಲಿರಬಾರದೆಂದು ದೇವಿಯ ಆದೇಶವಿದ್ದುದರಿಂದ ಮಳೆಗಾಲದಲ್ಲಿ ತೋಟದ ಕೆಲಸ ಮಾಡುವಾಗ ಧರಿಸುತಿದ್ದ ಪ್ಲಾಸ್ಟಿಕ್ ಚೀಲವನ್ನೇ ಕುತ್ತಿಗೆಯೊಂದು ತೂರುವಂತೆ ಕೂಯ್ದು ತೆಗೆದು ಮುಡಿಯಿಂದ ಅಡಿಯವರೆಗೆ ತೊಡಿಸಿಕೊಂಡು ಜರಾಬರಾ ಎಂದು ಸದ್ದು ಮಾಡುತ್ತ ಅಣ್ಣಪ್ಪಯ್ಯನ ರಾಮನಹಳ್ಳಿ ತೋಟದ ಕಡೆಗೆ ಮೆಲುದನಿಯಲಿ ಹ್ರಾಂ, ಹ್ರೀಂ, ಫಠ್ ಎನ್ನುತ್ತಾ ಹೊರಟರು. ಮನೆ ಮುಂದೆ ಗೋಣೀಚೀಲದ ಮೇಲೆ ಮುದುರಿ ಮಲಗಿದ್ದ ನಾಯಿಗಳು ಏನೋ ಕಂಗಾಲಿಗೆ ಸಿಲುಕಿದವರಂತೆ ಕiಂಯ್, ಕುಂಯï ಎಂದು ಆತಂಕದಿಂದ ಮನೆ ಮೂರೂ ಸುತ್ತ ದಿಕ್ಕುತಪ್ಪಿದವುಗಳಂತೆ ಅಲೆದಾಡಿದವು. ಮನೆಮಂದಿ ನಾಯಿಗಳನ್ನು ಕರೆದು, ಕೊಟ್ಟಿಗೆಯ ಬಳಿ ಕಟ್ಟಿಹಾಕಿದರು. ಆದರೂ ಸುಮ್ಮನಾಗದ ಆ ನಾಯಿಗಳು ಅಲ್ಲೆಲ್ಲೋ ಗವ್ವೆನ್ನುತ್ತಾ ಕವಿದಿದ್ದ ಕತ್ತಲೆಯೆಡೆಗೆ ನೋಡಿ ಆರ್ತಸ್ವರದಲ್ಲಿ ವಿಕಾರವಾಗಿ ಗಳ್ಳು ಹಾಕತೊಡಗಿದವು.

ಇದಾವುದರ ಪರಿವೆಯಿಲ್ಲದೇ ದೇವಿಯೇ ಆವಾಹನೆಯಾದಂತೆ ದಾಪುಗಾಲಿಟ್ಟು ಸೇಕರ ರ್ದೇಶಿಸುತಿದ್ದ ದಿಕ್ಕಿನತ್ತ ನಡೆಯುತಿದ್ದ ಪಂಡಿತ್ ಕುಂಜುಕ್ಕುಂಜ್ ತಾನು ಈವರೆವಿಗೂ ನೋಡಿರದಿದ್ದ ತೋಟವೊಂದರ ಮುಂದೆ ನಿಂತು, ತೋಟದ ಪ್ರವೇಶಕ್ಕೆ ಹಾಕಿದ್ದ ಬಿದುರಿನ ಉಣುಗಲನ್ನು ತೆಗೆದು ತೆರವುಗೊಳಿಸಿ ತಾನು ನಡೆಯಲು ಹಾದಿ ಮಾಡಿಕೊಡುವಂತೆ ನಿರ್ದೇಶಿಸಿದ. ಸೇಕರ ಒಂದು ಕ್ಷಣ ಅವಾಕ್ಕಾದ! ಈ ಮಂತ್ರವಾದಿಗೆ ಅದ್ಹೇಗೆ ಈ ಅಣ್ಣಪ್ಪಯ್ಯನ ತೋಟ ಇಷ್ಟು ಕರಾರುವಕ್ಕಾಗಿ ಗೊತ್ತಾಯಿತೆಂದು ಬೆನ್ನಹುರಿಯ ತಳದಲ್ಲೆಲ್ಲೋ ಛಳುಕೊಂದು ಪಳಾರನೇ ಮಿಂಚಿ ಮಸ್ಥಿಷ್ಕದವರೆಗೂ ವ್ಯಾಪಿಸಿ ಇಡೀ ದೇಹವನ್ನೊಮ್ಮೆ ನಡುಗಿಸಿಬಿಟ್ಟಿತು. ಕುಂಜುಕ್ಕುಂಜ್ ಹೇಳಿದ ಸ್ಥಳದಲ್ಲೊಂದು ಬರಿಗೈಯ್ಯಲ್ಲೇ ಎರಡುಗೇಣುದ್ದದ ಹಾಗೂ ತಂದಿದ್ದ ಮಡಕೆ ಹಿಡಿಯುವಂಥಾ ಗುಂಡಿಯೊಂದನ್ನು ತೆಗೆದ. ಯಾವುದೇ ಆಯುಧವನ್ನುಪಯೋಗಿಸದೇ ಗುಂಡಿ ತೆಗೆಯಬೇಕಿದ್ದುದರಿಂದ ಸೇಕ್ರನ ಕೈಬೆರಳುಗಳ ಹೊರಮೈನ ಗಂಟುಗಳು ಕಿತ್ತುಬಂದು ಆ ಮಣ್ಣು ಅವನ ರಕ್ತದಿಂದಲೇ ಹಸಿಯಾಯಿತು. ತಗಡಿನ ಡಬ್ಬವೊಂದರಲ್ಲಿ ಹಿಡಿದು ತಂದಿದ್ದ ಕಲ್ಲಿನ ಸಂದಿಯಲ್ಲಿ ವಾಸಿಸುವ ಮಟ್ರುಗಪ್ಪೆಯನು ತನ್ನ ಬಾಯಿಯೊಳಕ್ಕೆ ಹಾಕಿಕೊಂಡು ಮೂರು ನಿಮಿಷಗಳ ಕಾಲ ಗಲಗಲ ಮಂತ್ರ ಹೇಳಿದ ನಂತರ, ಜೀವಂತ ಕಪ್ಪೆಯನ್ನು ದಾರದಿಂದ ಸುತ್ತಿ ಬಂಧಿಸಿದ್ದ ಕರಿ ಮಡಕೆಯನ್ನು ರಕ್ತದಿಂದ ತೋಯ್ದಿದ್ದ ಗುಂಡಿಯೊಳಗಿರಿಸಿದ ಕುಂಜುಕ್ಕುಂಜ್ ಹಾಗೇ ನೆಲಕ್ಕೆ ಬಾಗಿ ತನ್ನ ನಾಲಿಗೆಯಿಂದಲೇ ಗುಂಡಿಯ ಸುತ್ತ ಇದ್ದ ಮಣ್ಣನ್ನು ಗುಂಡಿಯೊಳಕ್ಕೆ ನೂಕಿ ಮಟ್ಟ ಮಾಡಿದ. ಯಾವುದೋ ಅಶರೀರದೊಂದಿಗೆ ಸಂವಹನ ನಡೆಸುತ್ತಾ, ಯಾರಿಗೂ ಅರ್ಥವೇ ಆಗಲಾರದ ಅಲೌಕಿಕವಾದ ಮತ್ತು ವಿಲಕ್ಷಣವಾದ ಉದ್ಘಾರಗಳನ್ನು ಮಾಡುತ್ತಾ ಗುಂಡಿಯೊಳಕ್ಕೆ ತುಂಬಿದ್ದ ಮಾನವ ರಕ್ತ್ತದಿಂದ ತೋಯ್ದಿದ್ದ ಮಣ್ಣನ್ನು ತನ್ನ ಹಣೆಯಿಂದಲೇ ಗುದ್ದಿಗುದ್ದಿ ದಮ್ಮಾಸುಗೊಳಿಸುತ್ತಾ ಆ ಜಾಗದಲ್ಲಿ ಬಟ್ಟಲಿನಂಥಾ ರಚನೆಯನು ಮಾಡಿದ. ಮಧ್ಯರಾತ್ರಿ ಮಾತ್ರ ಕೂಗುತ್ತಿದ್ದ ಆ ಕಪ್ಪು ಬಣ್ಣದ ಕೋಳಿಹುಂಜ ತಾನು ಹಿಂದೆಂದೂ ಕೂಗದ ರೀತಿಯಲಿ ಅರಚುತ್ತ, ಕುತ್ತಿಗೆಯನು ಹಾವಿನಂತೆ ನುಲಿಯುತ್ತಾ ಕಟ್ಟಿದ್ದ ಕಾಲಿನ ಸಮೇತವೇ ಇಟ್ಟಲ್ಲಿಂದ ಚಿಮ್ಮಲಾರಂಭಿಸಿತು. ಇಡೀ ತೋಟಕ್ಕೆ ತೋಟವೇ ರ್ರುಮ್ಮನೆ ವಿಹ್ವಲಗೊಂಡಿತು. ಅಲ್ಲೆಲ್ಲೋ ಮರಗಳ ಸೊಪ್ಪಿನ ಮರೆಯಲಿ ಕುಳಿತೇ ತೂಕಡಿಸುತಿದ್ದ ಹಕ್ಕಿಗಳು ಝಲ್ಲನೆ ಸದ್ದು ಮಾಡುತ್ತಾ, ಗಾಬರಿಯಿಂದ ದಿಕ್ಕಾಪಾಲಾಗಿ ಹಾರಿಹೋದವು. ನೆಮ್ಮದಿಯಿಂದ ನಿದ್ದೆ ಮಾಡಿದ್ದ ಕಾಡು ಮಿಕಗಳು ಮಿಡುಕಿಬಿದ್ದು, ಧಿಕ್ಕನೆದ್ದು ಜರಬರ ಸದ್ದು ಮಾಡುತ್ತಾ ದೊಡ್ಡ ಕೋಲಾಹಲವನು ಮಾಡಿಬಿಟ್ಟು ಅದೃಶ್ಯವಾದವು. ಒಡನೆಯೇ ಕೋಳಿಯೆಡೆಗೆ ಧಾವಿಸಿದ ಕುಂಜುಕ್ಕುಂಜ್ ಕೋಳಿಯ ಕೊಕ್ಕುಗಳೆರಡನ್ನೂ ಒಟ್ಟಿಗೆ ಸೇರಿಸಿ, ಪಶ್ಚಿಮದೆಡೆಗೆ ಮುಖಮಾಡಿ, ಅತೀತವಾದ ಯಾರೊಂದಿಗೋ ಸಂಭಾಷಿಸಿ, ಮತ್ತೆ ದಕ್ಷಿಣದೆಡೆಗೆ ತಿರುಗಿ, ಅಶರೀರವಾದ ಏನನ್ನೋ ಸಮೀಪಿಸುವಂತೆ ಆಹ್ವಾನಿಸುತ್ತಾ ಪುಕ್ಕದ ಸಮೇತ ಆ ಕೋಳಿಯ ಕುತ್ತಿಗೆಯನು ತನ್ನ ಹಲ್ಲಿನಿಂದ ಒಂದೇ ಗುಕ್ಕಿನಲ್ಲಿ ಹರಿದು ಚೆಲ್ಲಿದ. ಹುಟ್ಟಿನಾರಭ್ಯ ಇದುವರೆಗೂ ನನ್ನೊಂದಿಗಿದ್ದ ರುಂಡ ಎಲ್ಲಿ ಹೋಯ್ತೆಂದು ತಿಳಿಯದೇ ಪಟಪಟನೆ ಸೆಟೆದುಕೊಳ್ಳುತಿದ್ದ ಕೋಳಿಯ ಮುಂಡದಿಂದ ಚಿರ್ರನೆ ಹಾರುತಿದ್ದ ರಕ್ತ ಆ ಬಟ್ಟಲಿನಾಕಾರದ ಗುಂಡಿಯಲಿ ಸಂಗ್ರಹವಾಗುವಂತೆ ಹಿಡಿದುಕೊಳ್ಳಲು ಸೇಕ್ರನಿಗೆ ಆದೇಶಿಸಿದ ಕುಂಜುಕ್ಕುಂಜ್ ತನ್ನೊಂದಿಗೆ ತಂದಿದ್ದ ಕಿರುಬನ ಚರ್ಮದ ಚೀಲದಲ್ಲಿದ್ದ ಬಾಣಂತಿ ತೋಳಿನ ಮೂಳೆ, ಅಗಲ ಹಣೆಯ ಕಪಾಲ, ಹಸ್ತಗಳನ್ನು ಹೊರತೆಗೆದು ಮುಂದಿನ ವಿಧಿವಿಧಾನಗಳತ್ತ ಮಗ್ನನಾದ.

ಇದಲ್ಲದೆ ಆ ನಂತರದ ದಿನಗಳಲ್ಲಿ ಒಂದು ಪ್ರಮಾದವೂ ಜರುಗಿತ್ತು. ಸೇಕ್ರ ಮುಂಚಿನಿಂದಲೂ ಭಲೇ ಕಿತಾಪತಿಯ ಮನುಷ್ಯ. ಏನೇ ಕಷ್ಟ ಕೊಟ್ಟರೂ ಯಾರ ಗೊಡವೆಯೇ ಇಲ್ಲದೆ ಒಳ್ಳೆಯದಾಗುತ್ತಲೇ ಹೋಗುತ್ತಿದ್ದ ಅಯ್ಯಣ್ಣನ ಅಪ್ಪ ಅಣ್ಣಪ್ಪಯ್ಯನನ್ನು ಕಂಡರೆ ಮುಂಚಿನಿಂದಲೂ ಕೊನೆಮೊದಲಿಲ್ಲದ ದ್ವೇಷ. ಅಗೇಡಿಗೆ ದನ ನುಗ್ಗಿಸುವುದು, ಜೋರು ಮಳೆಯಲ್ಲಿ ಅಣ್ಣಪ್ಪಯ್ಯನ ಗದ್ದೆಗೆ ನೀರು ತಿರುವುವುದು, ಮೇಯಲು ಬಿಟ್ಟ ದನ ಕರಗಳನ್ನ ಹೊಡೆದುಕೊಂಡು ಹೋಗಿ ಇನ್ಯಾರದೋ ತೋಟಕ್ಕೆ ನುಗ್ಗಿಸುವುದು, ಅಣ್ಣಪ್ಪಯ್ಯನ ಜಮೀನಿಗೆ ಕೆಲಸಕ್ಕೆ ಬರುತ್ತಿದ್ದ ಜನರಿಗೆ ಸಲ್ಲದ್ದನ್ನೆಲ್ಲ ಹೇಳಿ ಕೆಲಸಕ್ಕೆ ಬಾರದಂತೆ ಮಾಡುವುದು, ಎಲ್ಲೆಲ್ಲಿ ತೊಂದರೆ ಕೊಡಲು ಸಾಧ್ಯವೋ ಅಲ್ಲೆಲ್ಲ ನಕ್ಷತ್ರಿಕನಂತೆ ಕಾಡುತಿದ್ದ. ತಮಾಷೆಯೆಂದರೆ ಈ ಎಲ್ಲಾ ಕಿರುಕುಳಗಳ ನಡುವೆಯೂ ಅಣ್ಣಪ್ಪಯ್ಯನ ಮನೆ ಸಮೃದ್ಧವಾಗುತ್ತಲೇಹೋಯಿತು. ಜಗತ್ತು ಎಂಥಾ ಸಣ್ಣತನದ ನೀಚಬುದ್ಧಿಯಿಂದ ಅವನತಿಯತ್ತ ಸಾಗುತ್ತಿದೆ ಎಂದರೆ, ಒಬ್ಬನ ಯಶಸ್ಸನ್ನು ಕಂಡು ಖುಷಿಪಡೋರ್ಗಿಂತ, ಉರ್ಕೊಳ್ಳೋರೇ ಜಾಸ್ತಿ. ನೇರವಾದ ಸೂತ್ರ ಸಂಬಂಧವಿಲ್ಲದೇ ಇದ್ದೋರು ಸಂತಸಪಟ್ಟರೆ, ಹತ್ತಿರದ ಸಂಬಂಧಿಗಳು, ಜತೆಯಲ್ಲೇ ಓಡಾಡುವ ಹಿತಶತೃಗಳೇ ಅಕಟಕಟಾ ಎಂದು ಕೆರೆಯಬಾರದಲ್ಲೆಲ್ಲಾ ಕೆರೆದುಕೊಳ್ತಾರೆ.

ಪ್ರತೀ ವರ್ಷದಂತೆ ಆ ವರ್ಷವೂ ಅಣ್ಣಪ್ಪಯ್ಯನ ಮನೆಯಲ್ಲಿ ತೋಟದ ಚೌಡಿಹಬ್ಬ ಏರ್ಪಾಡಾಯಿತು. ಹತ್ತಿರದ ಬಂಧುಗಳು, ಊರಿನೆಲ್ಲರು ಹಾಗೂ ಸ್ನೇಹಿತರುಗಳಿಗೆ ದೇವರ ಹೆಸರಿನಲಿ ಬಾಡೂಟವನ್ನು ಆಯೋಜಿಸಲಾಯಿತು. ಸಮೀಪದಲ್ಲಿಯೇ ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವಾಸು ಎನ್ನುವವನೊಬ್ಬನನ್ನು ಸಂಪರ್ಕಿಸಿದ ಈ ಸೇಕರ ಆತನ ಕೈಗೆ ನೂರು ರುಪಾಯಿಯ ನೋಟೊಂದನು ತುರುಕಿ, ಅಡುಗೆಗೆ ಉಪ್ಪು ಸುರಿಯಲು ಫಿಕ್ಸ್ ಮಾಡಿದ. ಅಡುಗೆ ತಯಾರಿಯ ಸ್ಥಳಕ್ಕೆ ಬಂದು ಅಡುಗೆಗೆ ಸಹಾಯ ಮಾಡುವವನಂತೆ ನಟಿಸಿದ ವಾಸು ಹಣದಾಸೆಗೆ, ಅಡುಗೆಯ ಚಿನ್ನಪ್ಪ ಅತ್ತಿತ್ತ ನೋಡುತಿದ್ದಂತೆ ಎರಡೂ ಕೈ ಭರ್ತಿ ಹರಳುಪ್ಪನ್ನು ಬೇಯುತಿದ್ದ ಮಾಂಸಕ್ಕೆ ಸುರಿದೇಬಿಟ್ಟ. ಸಡಗರದಿಂದ ಬಂಧುಮಿತ್ರರು, ಊರಿನೆಲ್ಲ ಹಿತೈಷಿಗಳನ್ನು ತೋಟದ ಹಬ್ಬಕ್ಕೆ ಕರೆದಿದ್ದ ಅಣ್ಣಪ್ಪಯ್ಯ ಬಹು ಅಕ್ಕರೆಯಿಂದಲೇ ಬಂದವರೆಲ್ಲರನ್ನೂ ಮಾತನಾಡಿಸಿ ಉಪಚರಿಸುತಿದ್ದ. ಊರೆಲ್ಲರನೂ ಕರೆದ ಮೇಲೆ ಇವನನ್ನೇನು ಬಿಡುವುದೆಂದು, ಸೇP್ರÀನನ್ನೂ ಕರೆದಿದ್ದನಾದರೂ, ಆತ ಬಂದಿರಲಿಲ್ಲ. ಪೂಜೆ, ಪುನಸ್ಕಾರಗಳ ನಂತರ ಕಾಫಿರೂಟಿನ ಉದ್ದಕ್ಕೂ ಸಾಲಿನಲ್ಲಿ ಕೂರಿಸಿದ್ದ ಜನರಿಗೆ ಊಟ ಬಡಿಸಿದರೆ, ತಿನ್ನಲಾಗದಷ್ಟು ಉಪ್ಪಾಗಿದ್ದ ಆ ಪದಾರ್ಥಗಳನ್ನು ಒಲ್ಲದ ಮನಸ್ಸಿನಿಂದಲೇ ಬಿಟ್ಟು, ಬರೀ ಅನ್ನ ತಿಳಿಸಾರನ್ನು ತಿಂದು, ಅಡುಗೆ ಮಾಡಿದ ಚಿನ್ನಪ್ಪನಿಗೆ ಹಿಡಿ ಶಾಪ ಹಾಕಿದರು. ಕೆಲವರು ಆ ಉಪ್ಪುಪ್ಪಾಗಿದ್ದ ಮಾಂಸವನ್ನು ನೀರಿನಲಿ ತೊಳೆದೂ ತೊಳೆದೂ ತಿನ್ನಲು ಯತ್ನಿಸಿದ್ದರು. ಊರಿನೆಲ್ಲರ ಮನೆಯ ಕೆಲಸಗಳನ್ನು ಮುತುವರ್ಜಿಯಿಂದ ಮಾಡಿಕೊಡುತ್ತಿದ್ದ ಈ ವಾಸು ಕೇವಲ ನೂರು ರೂಪಾಯಿ ಹಾಗೂ ಒಂದು ಕ್ವಾರ್ಟರ್ ಸಾರಾಯಿಗಾಗಿ, ದೇವರ ಹೆಸರಿನಲ್ಲಿ ಕೊಡುತಿದ್ದ ಊಟವನ್ನು ಮನುಷ್ಯರಿರಲಿ, ಪ್ರಾಣಿಗಳೂ ತಿನ್ನಲಾರದಂತೆ ಮಾಡಿದ್ದ.
ಆರೋಗ್ಯವಾಗಿ ಇದ್ದು, ಎರಡು ದಿನಗಳ ನಂತರ ಚಟುವಟಿಕೆಯಿಂದಲೇ ರಸ್ತೆಯ ನಡುವೆ ನಡೆದುಕೊಂದು ಬರುತಿದ್ದ ವಾಸು ಅವನ ನೆರೆಹೊರೆಯವರು ನೋಡನೋಡುತಿದ್ದಂತೆ ವಿಗ್ರಹದಂತೆ ನಿಂತು, ಥರಥರನೆ ನಡುಗಲಾರಂಭಿಸಿದ, ಎರಡೂ ಕೈಗಳ ಬೆರಳುಗಳಿಂದ ತನ್ನ ತಲೆಯ ಕೂದಲುಗಳನ್ನು ಪರಪರನೆ ಕಿತ್ತುಕೊಳ್ಳಲಾರಂಭಿಸಿದ. ನೋಡುವವರು ಬೆಚ್ಚಿಬೀಳುವಂತೆ ಅವನ ಎರಡೂ ಕಣ್ಣುಗಳು ಆ ಕಣ್ಣ ಗುಳಿಗಳಿಂದ ಹೊರಬರಲಾರಂಭಿಸಿದವು. ಅದೆಲ್ಲಿತ್ತೋ ಆ ರಣಶಕ್ತಿ, ವಿಕಾರವಾಗಿ ಕೂಗುತ್ತಾ ಅಲ್ಲಿಂದ ಸುಮಾರು ಅರ್ಧ ಮೈಲು ದೂರದಲ್ಲಿದ್ದ ಜಟಿಗನ ಬನದ ಕಡೆಗೆ ಅಮಾನುಷ ವೇಗದಿಂದ ಇಳಿಜಾರಿನಲಿ ಓಡತೊಡಗಿದ. ದಾರಿಯಲಿ ಅಡ್ಡ ಸಿಕ್ಕ ಗಿಡಬಳ್ಳಿಗಳನ್ನು ಲೆಕ್ಕಿಸದೇ ಎದುರಿಗೆ ಸಿಕ್ಕ ಎಲ್ಲವನೂ ಹುಚ್ಚೆದ್ದ ಗೂಳಿ ಮೆಟ್ಟಿ ಹಾಕುವಂತೆ ಪುಡಿಗಟ್ಟಿ ಸೀದಾ ಹೋಗಿ, ಜಟಿಗನ ಬನದ ಹಲಸಿನ ಮರಕ್ಕೆ ರ್ರಬಕ್ಕನೆ ಅಪ್ಪಳಿಸಿಕೊಂಡ. ಮುಖ ವಾಸುವಿನದೆಂದು ಗುರುತು ಹಚ್ಚುವಂತಿರಲಿಲ್ಲ, ತಲೆಬುರುಡೆ ಧೂಳ್ಗಾಯಿ ಒಡೆದ ತೆಂಗಿನಕಾಯಿಯಾದಂತಾಗಿತ್ತು. ಮುಂಗಾಲುಗಳೂ ಸಹಾ ಮುರಿದುಹೋಗಿದ್ದವು!!

ಇದಾದ ಮೂರೇ ದಿನದಲ್ಲಿ ಸೇP್ರÀ ಮತಿಭ್ರಮಣೆಯಾದಂತೆ ಆಡತೊಡಗಿದ. ಅದೊಂದು ಮಟಮಟ ಮಧ್ಯಾಹ್ನ ವಾಸುವಿನಂತೆಯೇ ಕಿರುಚಾಡಿಕೊಂಡು ಓಡಿ ಓಡಿ ಊರಿನ ಹೊರಗೆ ಹರಿಯುತಿದ್ದ ಹೇಮಾವತಿ ನದಿಯ ಮಲಬಿದ್ದಕೊಂಡಕ್ಕೆ ಹಾರಿ ಎರಡು ದಿನದ ನಂತರ ನೀರಮೇಲೆ ತೇಲಿದ. ಬೇವು ಬಿತ್ತಿ ಮಾವಿನ ಫಸಲನು ಪಡೆಯಲು ಹೇಗೆ ಸಾಧ್ಯ?
ಕಸ ಹೊಡೆಯಲು ಮನೆಯೊಳಗಿನ ಹೆಣಬಾರದ ಕಲುಬೆಯನು ಹೊರತರುವ ಕಾರಣಕ್ಕೆ, ನೆರೆಹೊರೆಯವರ ನಡುವಿನ ವಿರಸದ ಹೇಸಿಗೆಯೂ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಅಯ್ಯಣ್ಣ ಹಾಗೂ ಕಟಾಣಿ ಇಬ್ಬರೂ ಸಂತೋಷದಿಂದಲೇ “ಬಾ ಮಯೇಸಾ, ಬಾ ಒಳೀಕ್ಕೆ. ಕಲುಬೆ ಎತ್ತಕ್ಕಲ್ಲ. ಕಲುಬೆ ಒಳಗಿನ ಕೊಳೆಯ ಹಾಗೆ ನಮ್ಮೊಳಗಿನ ಕೊಳೆನೂ ಕೊಚ್ಚಿಹೋಗಲಿ.”

ಯಾವತ್ತೋ ಆಡಿದ ಬಿರುನುಡಿ, ಅರಿವಿಲ್ಲದೇ ಹೊರಬಂದ ಅಪದ್ಧ, ಕ್ಷುಲ್ಲಕ ಕಾರಣಕ್ಕಾದ ಜಗಳ, ಅಭಿಪ್ರಾಯ ಬೇಧದುಂಟಾದ ಹಗೆತನ, ತಪ್ಪೊಪ್ಪಿಕೊಳ್ಳಲಾಗದ ಹುಂಬತನ, ಅಹಂಕಾರದ, ನಿನ್ನನ್ನೇನು ಕೇಳುವುದು ಎಂಬ ಉಡಾಫೆ, ಪ್ರೀತಿ, ಮಮಕಾರಗಳನ್ನು ವ್ಯಕ್ತಪಡಿಸಲು ಅಡ್ಡಬರುವ ಬಿಗುಮಾನ. ಇವನ್ನೆಲ್ಲಾ ಮೀರುವುದು ಹೇಗೆ?
ಕೆಲವೊಂದು ಸಲ ಕ್ಷಣಕಾಲದ ಮುನಿಸಿಗೆ ಹತ್ತಾರು ದಿನಗಳ ಬಾಂಧವ್ಯವನ್ನು ಮೂರ್ಖರಂತೆ ತಳ್ಳಿ ಒಡೆದು ಹಾಕುತ್ತೇವೆ. ಆ ಸ್ನೇಹವೆಂಬ ಅನುಪಮ ಅನುಭೂತಿಯ ಮಹಲನ್ನು ಪ್ರೀತಿ-ಭರವಸೆ-ವಿಶ್ವಾಸವೆಂಬ ಒಂದೊಂದೇ ಇಟ್ಟಿಗೆಗಳನ್ನು ಎದೆಗೊತ್ತಿಕೊಂಡು ಬದುಕಿನ ಅಂತಿಮ ಅವಕಾಶವೇನೋ ಎಂದುಕೊಂಡು ಅತ್ಯಂತ ಪ್ರೀತಿಯಿಂದ ಕಟ್ಟಿರುತ್ತೇವೆ.
ಯಾವುದೋ ದುರ್ಬಲ ಗಳಿಗೆಯಲ್ಲಿ ದುಡುಕಿ; ಹೋದರೆ ಹೋಗಲಿ ಎಂದು ಎಡವಿಬಿಡುತ್ತೇವೆ. ಸ್ವಪ್ರತಿಷ್ಠೆ, ಅಹಂಕಾರ, ತಿರಸ್ಕಾರ ಮನೋಭಾವ, ಉದಾಸೀನ, ಉಡಾಫೆ. ಇವೆಲ್ಲಾ ಆ ಕ್ಷಣದ ಮಿಥ್ ……………. ಅಷ್ಟೇ!!!!…………………………………………………………..

ಮಹೇಶನೆಡೆಗೆ ತಿರುಗಿ, “ನಿಮ್ಮಯ್ಯ ಸೇಕ್ರ ನೀಯಿನ್ನೂ ಚಿಕ್ಕೋನಿರುವಾಗ ನಿನೀಗೆ ಯಂಥಾ ಹೊಡ್ತಾ ಹೊಡೀತಿದ್ದ ಮಾರಾಯ, ಅವ್ನು ಮನುಷ್ಯನಾ ಇಲ್ಲಾ ರಾಕ್ಷಸನಾ? ನಾವು ಹುಡುಗ್ರಾಗಿದ್ದಾಗ ನಮಗೆ ಯಾಕೆಲ್ಲ ಪೆಟ್ಟು ಬಿದ್ದಿರಬಹುದು, ಹೇಳ್ನೋಡನಾ? ಪೆಟ್ಟು ತಿಂದು ಅತ್ತಿದ್ದಕ್ಕೆ, ಪೆಟ್ಟು ತಿಂದು ಅಳದಿದ್ದಕ್ಕೆ, ಪೆಟ್ಟು ಬೀಳುವ ಮುಂಚೆ ಅತ್ತಿದ್ದಕ್ಕೆ, ಹಿರಿಯರು ಕುಳಿತಿದ್ದಲ್ಲಿ ನಿಂತಿದ್ದಕ್ಕೆ, ಹಿರಿಯರು ನಿಂತಿದ್ದಾಗ ಕುಳಿತಿದ್ದಕ್ಕೆ, ಹಿರಿಯರು ಕುಳಿತಿದ್ದಲ್ಲಿ ವಿನಾಕಾರಣ ಸುಳಿದಾಡಿದ್ದಕ್ಕೆ.” ಎಂದರು ಯಜಮಾನಣ್ಣ.
ಮಧ್ಯೆ ಬಾಯಿ ಹಾಕಿದ ರಾಜಣ್ಣ, “ಮನೇಗೆ ಬಂದ ನೆಂಟ್ರಿಗಾಗಿ ಸಿದ್ಧಪಡಿಸಿದ್ದ ತಿಂಡಿ ತಿಂದಿದ್ದಕ್ಕೆ, ಕೊಟ್ಟ ತಿಂಡಿ ತಿನ್ನದಿದ್ದಕ್ಕೆ, ಕತ್ತಲಾದ ನಂತರ ಮನೆಗೆ ಬಂದದಕ್ಕೆ, ಮಂಕಾಗಿ ಕುಳಿತಿದ್ದಕ್ಕೆ, ಸಿಕ್ಕಾಬಟ್ಟೆ ಉತ್ಸಾಹ ತೋರಿದ್ದಕ್ಕೆ, ಯಾರಿಂದಾದರೂ ಹೊಡೆತ ತಿಂದು ಬಂದರೆ, ಯಾರಿಗಾದರೂ ಹೊಡೆದು ಬಂದರೆ, ನಿಧಾನವಾಗಿ ಊಟ ಮಾಡಿದರೆ, ಗಬಗಬನೆ ಊಟ ಮಾಡಿದರೆ, ಪೂರ್ತಿ ಊಟ ಮಾಡದಿದ್ದರೆ; ಅಯ್ಯೋ ಮಾರಾಯ್ರಾ ನಾವು ಬದುಕಿ ಬಂದಿರೋದೇ ಹೆಚ್ಚು” ಎಂದು ಗಹಗಹಿಸಿ ನಗಾಡಿದ.
ಕಟಾಣಿಯೂ ತಾನೇನೂ ಕಡಿಮೆ ಇಲ್ಲ ಎನ್ನುವಂತೆ, “ನಡೆಯುವಾಗ ಎಡವಿ ಬಿದ್ದರೆ, ಆಡುವಾಗ ಗಾಯ ಮಾಡಿಕೊಂಡರೆ, ಹಿರಿಯರನ್ನು ಪಿಳಿಪಿಳಿ ನೋಡಿದರೆ, ಹಿರಿಯರು ಮಾತನಾಡುವಾಗ ಅವರತ್ತ ಕಣ್ಣು ಮಿಟುಕಿಸದೇ ನೋಡಿದರೆ, ಯಾರತ್ತಲಾದರೂ ವಾರೆಗಣ್ಣಿನಲಿ ನೋಡಿದರೆ, ಆಟವಾಡಲು ಜೊತೆಗಾರರೊಡನೆ ಸೇರಿಕೊಂಡರೆ, ಆಟವಾಡಲು ಜೊತೆಗಾರರೊಡನೆ ಸೇರಿಕೊಳ್ಳದಿದ್ದರೆ, ಊಟ ಮಾಡಿ ತಟ್ಟೆ-ಲೋಟ ತೊಳೆದಿಡದಿದ್ದರೆ, ತಟ್ಟೆ-ಲೋಟವನ್ನು ಸರಿಯಾಗಿ ತೊಳೆದಿಡದಿದ್ದರೆ, ತಟ್ಟೆ-ಲೋಟವನ್ನು ಬೀಳಿಸಿದರೆ, ಉಗುರು ಕಚ್ಚಿದರೆ, ಸ್ನಾನ ಮಾಡದಿದ್ದರೆ, ಅತಿಬೇಗ ಸ್ನಾನ ಮಾಡಿದರೆ.. ಇದು ಮುಗಿಯೋದಿಲ್ಲ ಬಿಡಿ” ಎಂದಳು. “ಬಿಡಿ, ಬಿಡಿ. ಶಾಲೆಯಲಿ ಪೆಟ್ಟು ತಿಂದರೆ, ಗುದ್ದಲಿದ್ದ ವಾಹನದಿಂದ ತಪ್ಪಿಸಿಕೊಂಡರೆ, ವಾಹನದಿಂದ ಗುದ್ದಿಸಿಕೊಂಡರೆ, ಪ್ರಶ್ನಿಸಿದಾಗ ಉತ್ತರಿಸದಿದ್ದರೆ, ಪ್ರಶ್ನಿಸಿದಾಗ ತಿರುಗಿ ಉತ್ತರಿಸಿದರೆ, ಪ್ರಾರ್ಥನೆಗೆ ಬಾರದಿದ್ದರೆ, ನಾವೆಲ್ರೂನು ನಾವಾಗಿದ್ದು ಹೀಗೆ ಅಲ್ವಾ, ಮಂಜಪ್ಪಣ್ಣಾ” ಎಂದ ಮಹೇಶ.

ಈ ಯಜಮಾನಣ್ಣ ಲೋಕಳ್ಳಿ ಸೋಮನನ್ನು ಕರೆಯಲು ಹೇಳಿದ್ದು ಮಾತ್ರ ಅಯ್ಯಣ್ಣನಿಗೆ ನುಂಗಲಾರದ ತುತ್ತಾಯಿತು. ತಳಸಮುದಾಯದವನಾದ ಸೋಮ, ನಾಳೆ ನಾಡಿದ್ದರಲ್ಲಿ ಅಗೆ ಹಾಕಲಿದ್ದುದರಿಂದ ಗದ್ದೆಗೆ ಬೇಲಿಗೆಂದು ಹಾಲುವಾಣ ಗೂಟ ಕಡಿಯಲು ನೊರಜುಗಲ್ಲನ್ನು ಕುಟ್ಟಿ, ಬೈನೇತಳಿಯ ಪಟ್ಟಿಯ ಮೇಲೆ ತನ್ನ ಬಟ್ಟಗತ್ತಿಯನ್ನು ನಯವಾಗಿ ಮಸೆಯುತಿದ್ದ. ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಿದ್ದ ಆ ಅಸಹ್ಯ ಆಚರಣೆಯನ್ನು ಈ ನೆಪದಲ್ಲಾದರೂ ಕಿತ್ತೆಸೆಯಬೇಕೆಂದು ನಿರ್ಧರಿಸಿದ ಅಯ್ಯಣ್ಣ, “ಏ ಸೋಮಾ, ಬಾರಾ ಇಲ್ಲಿ. ಈ ಕಲ್ಬೆನ ಹೊರಕ್ಕಿಡಾನ ಬಾ” ಎಂದ. ಕಟಾಣಿ, ಗಂಡನ ಮುಖವನ್ನೇ ನೊಡುತ್ತಾ, ಅದರಲ್ಲಿದ್ದ ದೃಢ ನಿರ್ಧಾರವನ್ನು ಅಚ್ಚರಿಯಿಂದಲೇ ಮೆಚ್ಚಿದಳು.
ಸೋಮ, ನಿಂತಲ್ಲೇ ಮಾತೇ ಹೊರಡದೆ ಮೂಕನಾದ. ಜಗಲಿಯ ಬಳಿಗೇ ಬಾರದಂತೆ ಕಟ್ಟಳೆಯಿದ್ದ ಕಾಲದಲ್ಲಿ ತನ್ನನ್ನು ಅಂಗಳ ದಾಟಿ, ಜಗಲಿ ಏರಿ, ನಡುಮನೆಯಿಂದ ಕಲುಬೆ ಎತ್ಕಂಬರಕ್ಕೆ ಕರೀತಿರಾದು ಕನಸೋ ನನಸೋ ಎಂದುಕೊಂಡು ಗಲಿಬಿಲಿಗೊಂಡ. ಆದರೂ ಸಾವರಿಸಿಕೊಂಡು, ಆಹ್ವಾನವನ್ನು ಖಚಿತ ಪಡಿಸಿಕೊಳ್ಳಲು ತಾನು ಮಸೆಯುತಿದ್ದ ಬಟ್ಗತ್ತಿಯ ಉಜ್ಜುವ ವೇಗವನ್ನು ನಿಧಾನಗೊಳಿಸಿ, ಸದ್ಧನ್ನು ಕಡಿಮೆಗೊಳಿಸಿಕೊಂಡು ಆಹ್ವ್ವಾನ ಮತ್ತೊಮ್ಮೆ ಬರುವುದನ್ನೇ ಮೈಯೆಲ್ಲಾ ಕಿವಿಯಾಗಿ ಚಾತಕಪಕ್ಷಿಯಂತೆ ಕಾಯುತ್ತಾ ಕುಕ್ಕರಗಾಲಲ್ಲಿ ಕುಳಿತು, ಹಿಮ್ಮಡಿ ಎತ್ತಿ, ಎಡಗೈ ಹೆಬ್ಬೆರಳು ಹಾಗೂ ಬಲಗೈಯನ್ನು ಬೈನೇತಳಿಯ ಪಟ್ಟಿಯ ಮೇಲೆ ಭಾರ ಬಿಟ್ಟು ಮನದಲ್ಲೇ ಆನಂದತುಂದಿಲನಾಗುತಿದ್ದ.
ಕುಂತಲ್ಲೇ ಕುಕ್ಕರನೆ ಕೂತಿದ್ದ ಸೋಮನನ್ನು ಕಂಡು ನಖಶಿಖಾಂತ ಉರಿದೆದ್ದ ಮಂಜಪ್ಪಣ್ಣ “ಯಲಾ ಹೆದ್ಲಿಮಗ್ನೆ, ಅಯ್ಯಣ್ಣ ಕರ್ದಿದ್ದು ಕೇಳಿಸ್ಲಿಲ್ಲೇನಲಾ? ಅಲ್ಲೇ ಕೂತೀಯ? ನಿನ್ ಹುಲಿ ಹಿಡ್ಯಾ!” ಎಂದು ಗದರಿದ.

ಇನ್ನು ಅಲ್ಲೇ ಇದ್ದರೆ ಪೆಟ್ ಬೀಳದು ಪಕ್ಕಾ ಎಂದುಕೊಂಡ ಸೋಮ, ಕತ್ತಿಯನ್ನು ಸೊಂಟದಲ್ಲಿದ್ದ ಒಡ್ಯಾಣಕ್ಕೆ ಸಿಕ್ಕಿಸಿಕೊಂಡು ಲಗುಬಗೆಯಿಂದ ಓಡಿಬಂದು ಅಂಜುತ್ತಾ, ಅಳುಕುತ್ತಾ, ಜಗಲಿ ಏರಿ, ಮುಂಬಾಗಿಲು ದಾಟಿ ಅಯ್ಯಣ್ಣನ ಅಪ್ಪ ಅಣ್ಣಪ್ಪಯ್ಯನ ಪೂರ್ವಜರ ಕಾಲದಿಂದಲೂ ತನ್ನಂಥವರ ಪ್ರವೇಶಕ್ಕೆ ನಿಷಿದ್ಧವಾಗಿದ್ದ ಮನೆಯ ನಡುಮನೆಯೊಳಗೆ ಕಾಲಿಟ್ಟ.
ಮಂಜಪ್ಪಣ್ಣ ಸನ್ನಿವೇಶವನ್ನು ತಿಳಿಗೊಳಿಸಲು “ಹ್ಹೆ, ಯಜ್ಮಾನಣ್ಣಾ ನಿನ್ನೆ ಯಂತ ಆಯ್ತಂದ್ರೆ, ವಾರದ್ ಸಂತೆ ಮುಗಿಸ್ಕಂಡ್ ಬಸ್ಸಾಗೆ ಬರ್ತಿದ್ನಾ? ದಾರಿ ಉದ್ದಕ್ಕೂ ಈ ಲೋಕಳ್ಳಿ ಸೋಮನ ಬಾವ ಆ ಬಾಳೆಳ್ಳಿ ಸಿದ್ದಂದು ಎಣ್ಣೆ ಪೆಟ್ಟಲ್ಲಿ ಒಂದೇ ಸಮಾ ಕಿರಿಕಿರಿ. ಕುಡಿದು ಬಸ್ನಲ್ಲಿ ಗಲಾಟೆ ಮಾಡುತಿದ್ದವನನ್ನು ಒದ್ದು ಕೆಳಗಿಳಿಸಿದ ಕಂಡಕ್ಟರ್. ಇಳಸಿದ್ರೂ ಬಸ್ಸಿನ ಡೋರ್ ಬಿಡದೇ, ನೇತಾಡ್ತಾ ಕಂಡಕ್ಟ್ರಿಗೂ, ಡ್ರೈವರ್ರಿಗೂ ಜೊತೆಗೆ ಪ್ಯಾಸೆಂಜರ್ರಿಗೂ ಅವ್ವ, ಅಪ್ವ, ಯಡ್ತಿ ಅಂತೆಲ್ಲಾ ಬೈಯ್ಯಕ್ಕೆ ಶುರೂ ಮಾಡದಾ? ತಾನೂ ನಾಲ್ಕು ಬಾರಿಸಲು ಕೆಳಕ್ಕಿಳಿದ ಡ್ರೈವರ್. ಆತನ ಜೊತೆಗೆ ನಾಲ್ಕೈದು ಕಾಲೇಜು ಹುಡುಗ್ರೂ ಸೇರಿ ತದ್ರೂ, ತದ್ರೂ. ಎಲ್ಲಾದ್ರೂ ಸತ್‍ಗಿತ್ ಹೋದಾನೂ, ಸಾಕು ಬಿಡ್ರೋ ಮಾರಾಯ್ರಾ ಅಂತ ನಾನಂದ್ರೆ ‘ಮಂಜಪ್ಪಣ್ಣಾರೇ; ಆ ಬೋಳೀಮಗ ಸಿದ್ದ, ನಿಮಗೂ ಅವ್ವ, ಅಪ್ವ, ಯಡ್ತಿ ಅಂತೆಲ್ಲಾ ಬೈದಿದಾನೆ, ತಿಳ್ಕಳಿ’ ಎಂದು ನನ್ನ ಬಾಯಿ ಮುಚ್ಚಿಸಿದರು. ಆ ಸಿದ್ಧನಿಗೆ ಉಸಿರೆತ್ತದಂತೆ ಬಾರಿಸಿದ ನಂತರ, ಬಸ್ ಸ್ಟಾರ್ಟ್ ಮಾಡಲು ಹೋದರೆ, ಬ್ಯಾಟ್ರೀನೇ ಆಫ್!! ಸಮ್ಮಾ ಹೊಡ್ತ ತಿಂದು ಮುರುಟಿಕೊಂಡು ಸುಡ್ರಿ ಹೋಗಿದ್ದ ಸಿದ್ಧ ಬಿದ್ದಲ್ಲಿಂದ ಲಬಕ್ಕೆಂದು ಎದ್ದವನೇ, ‘ನನ ಮಕ್ಳಾ ನನ್ನನ್ನ ದಾರಿ ಮಧ್ಯ ಇಳಿಸಿ, ಅದ್ಹೆಂಗೆ ಹೋಗ್ತೀರಾ ನಾನೂ ನೋಡ್ತೀನಿ’ ಎನ್ನುತ್ತಾ ಬಸ್ಸಿನ ಮುಂದೆ ದಿದ್ದರಿ ದಿದ್ದಿರಿ ದಿದ್ದಿರಿ ಅಂತ ಡ್ಯಾನ್ಸ್ ಶುರೂ ಮಾಡದೇನ ಮಾರಾಯ!”
ಮಾತಾಡ್ತಾ ಮಾತಾಡ್ತಾ ಹಾಗೂ ಹೀಗೂ ಮಾಡಿ ಆ ಐದಾರು ಜನ ಕಲುಬೆಯನ್ನು ಅಡಿ ಹಗ್ಗ ಹಾಕಿ ಎತ್ತಿಕೊಂಡು ಬಂದು ಮನೆಯಂಗಳಕ್ಕೆ ತಂದಿರಿಸಿದರು.
ನಿರಂತರವಾಗಿ ಎರಡು ತಿಂಗಳು ಹಿಗ್ಗಾಮುಗ್ಗ ಬಂದ ಮಳೆ ಮಲೆನಾಡಿನ ಅ ಭಾಗದ ಜನರು ತತ್ತರಿಸುವಂತೆ ಮಾಡಿಹಾಕಿತ್ತು. ಕೊಡ ಮಗುಚಿದಂತೆ ನಿರಂತರವಾಗಿ ಹಾಗೂ ಧಾರಾಕಾರವಾಗಿ ಸುರಿಯುತ್ತಿದ್ದ ಆ ಜಡಿಮಳೆ ಅತ್ಯಂತ ಆಕಸ್ಮಿಕವೆನ್ನುವಂತೆ ನಿಂತುಹೋಗಿ, ಶುರೂವಾದಲ್ಲಿಂದ ಇಲ್ಲಿಯವರೆಗೂ ತಾನೇನೇನು ಅನಾಹುತ ಮಾಡಿಹಾಕಿದ್ದೇನೆಂದು ಜನರಾದರೂ ನೋಡಿಕೊಳ್ಳಲೆಂದು ಒಂದಷ್ಟು ಬಿಸಿಲು ಕಾಣಿಸಿಕೊಂಡು ಹೊಳವು ಆಗಿತ್ತು.

ಮಹೇಶಪ್ಪ, “ಮಂಜಪ್ಪಣ್ಣಾ, ತುಂಗನ್ಮಕ್ಕಿಯಿಂದ ದೆಬ್ಬರಳ್ಳಿವರೆಗೆ ಈಗ ಮೂರ್ತಿಂಗ್ಳಿಂದೆ ಹಾಕಿದ್ರಲ, ಟಾರು. ಅದೀಗ ಈ ಮಳೆಗೆ ಎಲ್ಲಿಗೆ ಹೋಗೀತೆ ಅಂತನೇ ಗೊತ್ತಾಗ್ತಿಲ್ಲ. ಕೊಲ್ಲಳ್ಳಿ ಗೆರೆ ಹತ್ರ ರಸ್ತೆಗೆ ರಸ್ತೇನೇ ಮಾಯ ಆಗೀತೆ. ಇಂತಾ ರಣ ಮಳೇನ ನಾ ಹುಟ್ದಾಗಿಂದ ನೋಡಿಲ್ಲ” ಎಂದ.
ಅಪ್ಪುನ್ ಕಾಟ ತಡೀಲಾರ್ದೆ ಮನೆ ಬಿಟ್ಟು ಓಡಿ ಹೋಗಿ ಮಿಲ್ಟ್ರಿ ಸೇರಿ, ಅಲ್ಲಿಯೂ ನಿಭಾಯಿಸಲಾಗದೇ ಕದ್ದೋಡಿ ಬಂದು, ಕೆಲಕಾಲ ಪೋಲೀಸ್ ಆತಿಥ್ಯವನ್ನು ಅನುಭವಿಸಿದ್ದ ಈ ಮಿಲ್ಟ್ರಿ ರಾಜ, “ಈ ರಸ್ತೆ ಮಳೆಗೆ ಕೊಚ್ಚಿ ಹೋಗಿಲ್ಲ. ಮಳೆಗೆ ಮುಂಚೆಯೇ ಕೊಚ್ಚಿಹೋಗಿ ಕಂತ್ರಾಟುದಾರ, ಇಂಜಿನ್ನೀರು, ಪುಡಾರಿಗಳ ಜೇಬಿಗೆ ತುಂಬಿಕೊಂಡಿದೆ. ಅವರುಗಳ ಮುಕಳಿ ಮೇಲೆ ಒದ್ದು, ಅವರ ಜೇಬಲ್ಲಿರೋ ಅದೇ ದುಡ್ಡಲ್ಲಿ ಮರುಕಾಮಗಾರಿ ಮಾಡಿಸಬೇಕು. ಈ ಕಳ್ಳರಿಗೆ ತಾ ತಿಂದು ಕೋತಿಯ ಮೂತಿಗೆ ಒರೆಸಲು ಮಳೆ ಎಂಬ ಮಹಾಅಸ್ತ್ರ ಪ್ರತೀವರ್ಷ ಆಪತ್ಬಾಂದವನಂತೆ ಸಿಗುತ್ತಲೇ ಇರುತ್ತದೆ. ಅವರಿಗೆ ಮಲೆನಾಡಿನ ಮಳೆಯ ಅರಿವಿದ್ದೇ ಹಾಗೂ ತಮ್ಮ ಅನಾಚಾರವನ್ನು ಮರೆಮಾಚಲು ಮಳೆ ಬಂದೇ ಬರುವುದೆಂಬ ಹುನ್ನಾರದಿಂದಲೇ ಇಂಥಾ ಕಂತ್ರಿ ಕೆಲಸ ಮಾಡ್ತಾರೆ.

ಮಾಡಿದ ಇಲ್ವೇ ಮಾಡಿಸಿದ ಕಂತ್ರಾಟುದಾರ, ಇಂಜಿನ್ನೀಯರು, ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಈ ಕೂಡಲೇ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದಡಿ ಅಮಾನತ್ತು ಮಾಡಿ, ಮರುಕಾಮಗಾರಿಯ ಸಂಪೂರ್ಣ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು. ಇದು ಮಳೆಯಿಂದ ಆಗಿರುವ ಹಾನಿಯಂತೂ ಅಲ್ಲವೇ ಅಲ್ಲ.”
“ಹೌದು ರಾಜಣ್ಣ, ಕಟ್ಟುವ, ಬೆಳೆಸುವ ಕೆಲಸಕ್ಕಿಂತ ಕೆಡವುವ, ಕೀಳುವ, ಕತ್ತರಿಸುವ ಕೆಲಸವೇ ಹೆಚ್ಚು ಆಕರ್ಷಕವಾಗುತ್ತಿರುವಂತಿದೆ. ಹಾಗಾಗಿಯೇ ಚೈನ್‍ಸಾ, ಡೋಝರ್, ಡ್ರಿಲ್ಲರ್, ಡೈನಾಮೈಟ್, ಎಕ್ಸ್ಕಾವೇಟರ್‍ಗಳು ಬಿಡುವಿಲ್ಲದೇ ದುಡಿಯುತ್ತಿವೆ. ಕೀಳು ಸಂಸ್ಕøತಿಯ ಮುಂದೆ ಕಾಯ್ವ ಕಾಯಕ ಮಂಡಿಯೂರಿದೆ.
ನಮಗೆ ಅಗತ್ಯವಿತ್ತೋ, ಅನಪೇಕ್ಷಿತವೋ ಅಂತೂ ಧಾರಾಕಾರವಾಗಿ ಮಳೆ ಬಂದು ನಾವು ಈವರೆಗೆ ಮಾಡಿರುವ ತಪ್ಪುಗಳನ್ನು ಜಗಜ್ಜಾಹೀರು ಮಾಡಿದೆ. ಸಂಕ ಕಟ್ಟಿ ದಾಟಾಡುತಿದ್ದ ಸಣ್ಣಪುಟ್ಟ ಹಳ್ಳಗಳು ಕುಸಿದುಬಿದ್ದ ಗುಡ್ಡದಿಂದ ತೊಳೆದುಬಂದ ಮಣ್ಣು-ಮರಳಿನಿಂದ ಮುಚ್ಚಿಹೋಗಿದೆ. ನಿಂತಲ್ಲೇ ಕುಪ್ಪಳಿಸಿ ದಾಟಲು ಸಾಧ್ಯವಿದ್ದ ಕಾವಲಿಗಳು ಆಳ-ಅಗಲಗಳೇ ತಿಳಿಯದಂತಾದ ಕೊನೆಯಿಲ್ಲದ ಕೊರಕಲುಗಳಾಗಿವೆ. ಕೃಷಿಭೂಮಿಗಳಾಚೆ ನಿರಾತಂಕವಾಗಿ ಹರಿಯುತ್ತಿದ್ದ ಸರಕಲುಗಳು ತಾವು ಸಾಗುತ್ತಿದ್ದ ಹಾದಿಯ ಬದಲಿಸಿ ನೂರಾರು ಮೀಟರ್ ಪಕ್ಕಕ್ಕೆ ಸರಿದು ಹೊಸದೊಂದು ನದಿಯೇ ಜನ್ಮತಾಳಿದೆಯೇನೋ ಎಂಬಂತೆ ಭೋರ್ಗರೆಯುತ್ತಾ ದಿಗ್ಭ್ರಮೆ ಮೂಡಿಸುತ್ತಿವೆ. ಕಟ್ಟಿದ್ದ ಹಗ್ಗ ಹರಿದುಕೊಂಡ ಹುಚ್ಚು ಗೂಳಿಯೊಂದು ನುಗ್ಗುವಂತೆ ತಡೆಯಲಸಾಧ್ಯವಾದ ಆಟಾಟೋಪ ತೋರಿಸುತ್ತಿರುವ ಪ್ರವಾಹ ತನ್ನ ಹುಂಬಹಾದಿಯಲ್ಲಿ ಎದುರು ಸಿಕ್ಕ ಎಲ್ಲ ಎಂದರೆ ಎಲ್ಲವನ್ನೂ ಉರುಳಿಸಿ, ಕಟ್ಟಿ-ಕರಗಿಸಿ, ತರಿದು-ತೇಲಿಸಿ, ಕಿತ್ತು-ಕತ್ತರಿಸಿ, ನುಂಗಿ-ನೊಣೆಯುತ್ತಿರುವುದನ್ನು ನಿಂತು ನೋಡುವುದನ್ನು ಬಿಟ್ಟರೆ ನಮಗೆ ಬೇರಾವ ನಿರ್ವಾಹವಿಲ್ಲ” ಎಂದ ಮಹೇಶಪ್ಪ.

ಬೀಯೆ ಮಾಡ್ಕೊಂಡು ಒಂದಷ್ಟು ಓದುವ ಹವ್ಯಾಸ ಇಟ್ಟುಕೊಂಡಿದ್ದ ಅಯ್ಯಣ್ಣನ ಹೆಂಡತಿ ಕಟಾಣಿ, ಎಲ್ಲರಿಗೂ ಕಾಫಿ ಮಾಡಿಕೊಂಡು ಮನೆಯೊಳಗಿಂದ ಬಂದು, “ಇವೆಲ್ಲ ಪ್ರಕೃತಿ ಸಹಜ ವಿದ್ಯಮಾನಗಳಿಗಾಗಿ ಕಾರಣಗಳನ್ನು ಹುಡುಕುತ್ತಾ ದೂರಹೋಗಬೇಕಿಲ್ಲ ನಾವು. ನಮ್ಮ ಮನೆಯ ಅಂಗಳ ಎಷ್ಟು ದೊಡ್ಡದಿತ್ತು ಈ ಮೊದಲು? ಒತ್ತುವರಿ ಮಾಡಿದ ಜಾಗದ ಕಾಫಿಬೀಜವನ್ನು ಒಣಗಿಸಲು ನಮಗೆ ವಿಸ್ತಾರವಾದ ಕಾಫಿ ಕಣ ಬೇಕಾಯ್ತು. ಮನೆಯ ಹಿಂದೆ-ಮುಂದೆ, ಎಡ-ಬಲ ಇದ್ದ ಪ್ರಕೃತಿ ಸಹಜ ಇಳಿಜಾರನ್ನು ಮಣ್ಣು ಗೋ(ಘೋ)ರಕ ಎಂಬ ಭೂರಾಕ್ಷಸನ ಬಳಸಿ ಕಿತ್ತು, ತಗ್ಗಿನಲ್ಲಿ ನೂಕಿ-ಹರಡಿ, ಸಮತಟ್ಟು ಮಾಡಿಸಿ, ಸರ್ಕಾರದಿಂದ ಸಬ್ಸಿಡಿ ಸಿಗಲಿದೆ ಎಂದು ಸಿಮೆಂಟಿನ ನೆಲಹಾಸನ್ನು ಮಾಡಿದ್ದೇ ಮಾಡಿದ್ದು.
ಕೃಷಿ ಪ್ರದೇಶದಲ್ಲಿ ಭೂ ಕುಸಿತವಾಗಿರುವುದಕ್ಕೆ ಮುಖ್ಯ ಕಾರಣ ಕಳೆನಾಶಕಗಳ ಬಳಕೆ. ಭೂಮಿಯ ಚರ್ಮವಾಗಿರುವ ಮೇಲ್ಮಣ್ಣು ಮೂರಡಿ ಆಳದವರೆಗೂ ಸತ್ತು, ನಿರ್ಜೀವವಾಗಲು ಕಾರಣ ಕಳೆನಾಶಕಗಳು; ಇವನ್ನು ಬಳಸುತ್ತಿರುವವರಿಗೆ ಭೂಮಿ ಸೂಕ್ತ ಪ್ರತಿಫಲವನ್ನೇ ನೀಡಿದೆ, ಸಹಾನುಭೂತಿಯ ಅವಶ್ಯಕತೆಯಿಲ್ಲ. ಗುಡ್ಡ ಜರುಗಿ ನಮಗೆ ದುರಂತವೆನಿಸಿದರೂ, ಪ್ರಕೃತಿ ತನ್ನ ತಾನು ಎಂದಿನಂತೆ ನಡೆಸಿಕೊಂಡು ಹೋಗುತ್ತಿದೆ. ಇಗಾ ಇಲ್ಲೆ ನೋಡು, ಮೊಟ್ಟೆ ಇಟ್ಟು ಸಂತತಿ ಮುಂದುವರೆಸಲು ಪ್ರಯತ್ನಿಸುತ್ತಿರುವ ಪತಂಗ ಇದು. ಬಿಲಿಯಾಂತರ ವರ್ಷಗಳಿಂದಲೂ ಈ ಆದಿ ಅಂತ್ಯವಿಲ್ಲದ ಅಖಂಡ ಜೀವಪ್ರವಾಹ ನಿರಂತರವಾಗಿ ಜರುಗುತ್ತಲೇ ಇದೆ. ಮನುಷ್ಯ ಪ್ರಭೇದ ಈ ವಿಶ್ವದ ಕೋಟ್ಯಾಂತರ ಜೀವಿಗಳಲ್ಲಿ ಒಂದಷ್ಟೇ. ಮನುಷ್ಯ ಈ ವಿಶ್ವದಲ್ಲಿ ಇರದೇ ಇದ್ದಾಗಲೂ, ಇರುವಾಗಲೂ, ಕಣ್ಮರೆಯಾದ ಮೇಲೂ ಇವೆಲ್ಲವೂ ನಿರಾತಂಕವಾಗಿ ಘಟಿಸುತ್ತಲೇ ಇರುತ್ತವೆ.

ಕೃಷಿ, ವಸತಿ, ಗಣಿಗಾರಿಕೆ ಹಾಗೂ ಅನಗತ್ಯ ಕಾಮಗಾರಿಗಾಗಿ ಪ್ರಕೃತಿ ಸಹಜವಾದ ಎತ್ತರದ ಪ್ರದೇಶಗಳನ್ನು ಕಡಿದು, ನೀರು ಸ್ವಾಭಾವಿಕವಾಗಿ ಹರಿದು ಹೋಗಿ ಸಂಗ್ರಹವಾಗಲು ಅವಶ್ಯವಾದ ತಗ್ಗಿನ ಪ್ರದೇಶಗಳನ್ನು ಮಣ್ಣಿನಿಂದ ತುಂಬಿಸಿದ್ದೇವೆ. ನೀರು ಎಲ್ಲಾದರೂ ಹರಿಯಲೇಬೇಕು ಹಾಗೆಯೇ ನಿಲ್ಲಲೂಬೇಕಲ್ವಾ?
ಮೃದು ಮಣ್ಣನ್ನು ಈವರೆವಿಗೆ ಮೇಲ್ಪದರದ ಸೂರ್ಯನ ಬಿಸಿಲಿನಿಂದ ಬಿಸಿಯಾಗಿ, ಗಡುಸಾದ ಮಣ್ಣು ಮತ್ತು ಹುಲ್ಲು-ಕಳೆಗಿಡಗಳು ಕಾಪಾಡಿತ್ತು. ಭೂಗೋರಕಗಳು ಮಣ್ಣನ್ನು ಬಗೆದು ಹಾಕಿದ್ದರಿಂದ ಮೆದುಮಣ್ಣು ಮಳೆಯ ಹೊಡೆತಕ್ಕೆ ಈಡಾಯ್ತು ಅಷ್ಟೇ. ಮಾಡಿದ್ದುಣ್ಣೋ ಮಹರಾಯ. ನಾವು ಬದಲಾಗಬೇಕು, ನಮ್ಮ ಆದ್ಯತೆಗಳು ಬದಲಾಗಬೇಕು, ನಮ್ಮ ಆಯ್ಕೆಗಳು ಬದಲಾಗಬೇಕು. ಇಷ್ಟೆಲ್ಲಾ ಅನಾಹುತಗಳು ಕಣ್ಣೆದುರು ಇದ್ದರೂ, ಭೂಮಿ ಹೆಜ್ಜೆಹೆಜ್ಜೆಗೂ ಅಪಾಯದ ಕರೆಗಂಟೆಯನ್ನು ಬಾರಿಸುತಿದ್ದರೂ ನಾವಿನ್ನೂ ಎಚ್ಚರವಾಗಿಲ್ಲ” ಎಂದಳು.
ಅಯ್ಯಣ್ಣ ಹೆಂಡತಿಯೆಡೆಗೆ ಅಚ್ಚರಿ ಹಾಗೂ ಅಷ್ಟೇ ಗಾಬರಿಯಿಂದ ನೋಡುತಿದ್ದ. ಎಲಾ ಇವ್ಳಾ! ಇವೆಲ್ಲ ಇವ್ಳಿಗೆ ಹ್ಯೆಂಗ್ ಗೊತ್ತು? ಎಂದು ಮೆಚ್ಚುಗೆಯಿಂದ ಒಳಗೊಳಗೇ ಹೆಮ್ಮೆಪಟ್ಟುಕೊಳ್ಳುತಿದ್ದ.

“ನೋಡಾ ಅಯ್ಯಣ್ಣ, ಬೆಳಗಾಗೆದ್ದರೆ ಕಟಾಣಿನ ಬಾಯಿಗೆ ಬಂದಂಗೆ ಬಯ್ಯುತ್ತಾ, ಐ ರಾವಣಾ ಮೈ ರಾವಣ ಅಂತಾ ಆಡ್ತಿರ್ತೀಯಲ್ಲ, ನೋಡು ಎಷ್ಟೊಂದ್ ವಿಚಾರ ತಿಳ್ಕಂಡಿದಾಳೆ. ನೀರಿನ ಸರೋವರ ಎಲ್ಲಿರಬೇಕು, ಹರಿಯುವ ತೊರೆ ಹೇಗಿರಬೇಕು, ನದಿಯ ಅಕ್ಕಪಕ್ಕ ಏನೇನಿರಬೇಕು, ಯಾವ ಪ್ರದೇಶದಲ್ಲಿ ಯಾವ ಸಸ್ಯ ಬೆಳೆಯಬೇಕು, ನೀರೆಲ್ಲಿ ಶೇಖರವಾಗಬೇಕು, ಮನುಷ್ಯನೆಂಬ ಜೀವಿಯ ವ್ಯಾಪ್ತಿ ಏನು, ವನ್ಯಜೀವಿಗಳ ಆವಾಸದ ವಿಸ್ತಾರವೇನು, ಸಮಸ್ತ ಭೂಮಿಯ ಯಾವ-ಯಾವ ಘಟಕಗಳು ಯಾವ ಉದ್ದೇಶಕ್ಕೆ, ಹೇಗೆ, ಎಷ್ಟು ಮತ್ತು ಯಾಕೆ ಬಳಕೆಯಾಗಬೇಕೆಂದು ಸಹಜ-ಸ್ವಾಭಾವಿಕವಾಗಿ ನಿರ್ಧರಿಸಲ್ಪಟ್ಟಿದೆ.

ಜಗತ್ತಿನಲ್ಲಿ ಈವರೆಗೆ ಆಗಿಹೋಗಿರುವ ಸಾಧಕರ ಕಾರ್ಯಗಳು ಜೇಡ, ಇರುವೆ, ಗೆದ್ದಲು, ಜೇನ್ನೊಣಗಳ ಸಾಧನೆಯಷ್ಟೇ ಮುಖ್ಯವಾದವು ಎಂಬುದನ್ನು ನಾವು ಅಥರ್Àಮಾಡಿಕೊಂಡಾಗ ಮಾತ್ರ ಆ ಸಾಧನೆಯ ಅನನ್ಯತೆಯನ್ನು ಗ್ರಹಿಸಲು ಸಾಧ್ಯ.
ಈ ಜೀವಜಗತ್ತಿನಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳಿಂದ ಹಿಡಿದು ಬೃಹದಾಕಾರದ ವೃಕ್ಷಗಳು, ಮುಂದೆಂದೋ ಮೊಳಕೆಯೊಡೆದು ಗಿಡಗಳಾಗಬಹುದಾದ ಬೀಜದಿಂದ ಹಿಡಿದು ಕುಂಬಾಗಿ ಲಡ್ಡಾಗಿರುವ ಸತ್ತ ಮರದವರೆಗೆ, ಕಲ್ಲು, ಮಣ್ಣು ಗಾಳಿ, ನೀರು, ಎಲ್ಲವಕ್ಕೂ ಅತ್ಯಂತ ಸಂಕೀರ್ಣವಾದ ಹಾಗೂ ತೀವ್ರವಾದ ಪ್ರಾಮುಖ್ಯವಿರುವ ಕರ್ತವ್ಯವಿದೆ. ಸಹಜವೆಂಬಂತೆ ನಿರಾತಂಕವಾಗಿ ಜರುಗುವ ನೈಸರ್ಗಿಕ ಚಟುವಟಿಕೆಗಳು ಪ್ರತಿಯೊಂದು ಜೀವಿಯ ಕ್ಷಣಕ್ಷಣದ ಬದುಕನ್ನು ನಿರ್ಧರಿಸುತ್ತವೆ ಹಾಗೂ ಪ್ರತಿಯೊಂದು ಜೀವಿಯ ಬದುಕು ಸಹ ಆ ಚಟುವಟಿಕೆಯನ್ನು ನಿಯಂತ್ರಿಸುತ್ತದೆ.

ಈ ಜಗತ್ತು ಪ್ರತೀಕ್ಷಣವೂ ಬದಲಾಗುತ್ತಿದೆ. ಹೊಸ ಮೂಲವಸ್ತುಗಳ ಉಗಮ ನಿರಂತರವಾಗಿ ಕಣ್ಣೆವೆ ಮುಚ್ಚಿ ತೆರೆಯುವುದರಲ್ಲಿ ನಡೆಯುತ್ತಿರುತ್ತದೆ. ಸೃಷ್ಠಿಯ ಅನಂತತೆಗೆ ಸರಿಸಾಟಿಯಾಗಿ ನಾಶಕ್ರಿಯೆಯೂ ಸಕಾರಣವಾಗಿ ನಡೆಯುತ್ತಿರುತ್ತದೆ. ನಾಶ ಸೃಷ್ಠಿಗೆ ನಾಂದಿ ಹಾಡುತ್ತದೆ ಹಾಗೆಯೇ ಸೃಷ್ಠಿ ನಾಶಕ್ಕೆ ಕಾರಣೀಭೂತವಾಗುತ್ತದೆ. ಒಂದಿಲ್ಲದೇ ಇನ್ನೊಂದಿಲ್ಲ. ಒಂದು ಇನ್ನೊಂದಕ್ಕೆ ಪೂರಕ ಹಾಗೂ ಪ್ರೇರಕ.
ಯಜಮಾನಣ್ಣನ ಹೊಗಳಿಕೆ ಹಾಗೂ ಗಂಡನ ಮೆಚ್ಚುಗೆಯಿಂದ ಖುಷಿಯಾದ ಕಟಾಣಿ ಇನ್ನೂ ಉತ್ಸಾಹದಿಂದ,
“ರಸ್ತೆ ಬದಿಯ ಕಾಲ್ದಾರಿ, ಮಾರ್ಗ ವಿಭಜಕ, ಖಾಲಿ ಜಾಗ, ಉದ್ಯಾನ, ಅಂಗಳ ಮುಂತಾದೆಡೆ ಪ್ರಕೃತಿ ಸಹಜವಾಗಿ ಹುಲ್ಲು ಬೆಳೆದಿರುತ್ತದೆ. ಹಲವೆಡೆ ಹಸಿರು ಹುಲ್ಲು ಬೆಳೆದಿರುವುದೇ ಆ ಸ್ಥಳದ ಸೌಂದರ್ಯ ಹಾಳುಮಾಡಲೇನೋ ಎಂಬಂತೆ ಗುದ್ದಲಿಯಿಂದ ಕೆತ್ತಿಸಿ ಗುಡ್ಡೆಹಾಕಿ ಗುಂಡಿ ತೆಗೆದು ಮುಚ್ಚಿಬಿಡುತ್ತಾರೆ.
ಇನ್ನು ಕೆಲವರಂತೂ ಅತ್ಯಂತ ಅಪಾಯಕಾರಿ ಕಳೆನಾಶಕವನ್ನು ಸಿಂಪಡಿಸಿ ಅನಾಹುತವನ್ನೇ ಮಾಡಿಬಿಡುತ್ತಾರೆ. ಹುಲ್ಲು ಇನ್ನಿತರೇ ಸಣ್ಣ ಸಸ್ಯಗಳನ್ನು ಅವಕಾಶವಿರುವೆಡೆ ಬೆಳೆಯಲು ಅನುವು ಮಾಡಿಕೊಡುವ ಭೂಮಿಯ ಉದ್ದೇಶವನ್ನೇ ನಾವು ಅರ್ಥಮಾಡಿಕೊಂಡಿಲ್ಲ. ಮೇಲ್ಮಣ್ಣು ಬಾಹ್ಯ ಕಾರಣಗಳಿಂದ ಕೊಚ್ಚಿ ಹೋಗದಂತೆ ಈ ರೀತಿಯ ಹುಲ್ಲು ಮತ್ತು ಹಾವಸೆ ಬೆಳೆಯುವುದು ಸಹಜವಾದ ಜೈವಿಕ ಪ್ರಕ್ರಿಯೆ. ಹುಲ್ಲು ಎತ್ತರ ಬೆಳೆಯದಂತೆ ಜಾನುವಾರುಗಳ ಸಹಾಯದಿಂದ ಅಥವಾ ಯಂತ್ರಗಳಿಂದ ಅಥವಾ ಕತ್ತಿಯಿಂದ ಟ್ರಿಮ್ ಮಾಡಬೇಕೇ ಹೊರತು, ಕಳೆನಾಶಕ ಅಥವಾ ಗುದ್ದಲಿಯನ್ನು ಬಳಸಬಾರದು. ಸಸಿ ನೆಟ್ಟು ಮರವನ್ನಾಗಿ ಬೆಳೆಸುವಷ್ಟೇ ಮುಖ್ಯವಾದುದು, ಈ ಸಹಜ-ಸ್ವಾಭಾವಿಕ ಹಸಿರಿನ ಭೂ-ಪೋಷಾಕನ್ನು ಉಳಿಸಿಕೊಳ್ಳುವುದು.

ಈ ಜಗತ್ತೇ ಒಂದು ಪ್ರಾಕೃತಿಕ ಪ್ರಯೋಗಶಾಲೆ. ಕಟ್ಟುವ-ಕೆಡವುವ ಪ್ರಕ್ರಿಯೆ ನಿರಂತರವಾಗಿ ಯಾರ-ಯಾವುದರ ಹಂಗೂ ಇಲ್ಲದೆ, ಅತ್ಯಂತ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಕೋಟ್ಯಾಂತರ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಅಸಂಖ್ಯಾತ ಕಣ್ಣಿಗೆ ಕಾಣದ ಜೀವಿಗಳು, ಸಸ್ಯಗಳು, ಮತ್ಸ್ಯಗಳು, ಕೀಟಗಳು, ಸರೀಸೃಪಗಳು, ಮೃದ್ವಂಗಿಗಳು, ಉಭಯವಾಸಿಗಳು, ಸಂದಿಪದಿಗಳು, ಸಸ್ತನಿಗಳು ಈ ಭೂಮಿಯ ಮೇಲೆ ವಿಕಾಸವಾಗಿವೆ ಹಾಗೆಯೇ ಕಾಲಕ್ರಮೇಣ ತಮ್ಮ ಸರದಿ ಬಂದಾಗ ಪ್ರತಿರೋಧ ತೋರದೆ ಸದ್ದಿಲ್ಲದೇ ಕಣ್ಮರೆಯಾಗಿವೆ.

ಈ ಅಗಾಧ ಸೃಷ್ಠಿರಾಶಿಯಲ್ಲಿ ಮನುಷ್ಯನೆಂಬ ಜೀವಿ ಸಹಾ ಒಂದು. ಯಾವುದೋ ಒಂದು ವಿನಾಶದ ನಂತರದ ಆಕಸ್ಮಿಕವೊಂದರಲ್ಲಿ ಮನುಷ್ಯನ ಪೂರ್ವಜ ಪ್ರಾಣಿಯ ಉಗಮವಾಗಿದೆ. ಮೇಲೇರಿದ್ದು ಕೆಳಗಿಳಿಯಲೇಬೇಕೆಂಬುದು ನಿಸರ್ಗದ ನಿಯಮ. ಮನುಷ್ಯ ನಿಸರ್ಗ ನಿಯಮವನ್ನೂ ಮೀರಿ ಅಸಹಜ ವೇಗದಿಂದ ಅಕಾಲಿಕ ಉತ್ತುಂಗವನ್ನು ತಲುಪಿದ. ಶಿಖರ ತಲುಪಿದ ನಂತರದ ಹೆಜ್ಜೆ ಕೆಳಗೇ ತಾನೇ? ಇದಕ್ಕಾಗಿ ಮರುಗುವ ಅಗತ್ಯವಿಲ್ಲ.

ಆತ್ಮ ವಿಮರ್ಶೆಯ ಮೂಲಕ ಅವನತಿಯನ್ನು ಮುಂದೂಡಲು ಮತ್ತು ವಿನಾಶದ ವೇಗವನ್ನು ಕಡಿಮೆ ಮಾಡಿಕೊಳ್ಳಲು ಪ್ರಕೃತಿ ನೂರಾರು ಅವಕಾಶಗಳನ್ನು ನೀಡಿತ್ತು. ಆ ಸದವಕಾಶಗಳನ್ನು ಕಡೆಗಣಿಸಿದ ಮಾನವನಿಗೆ ನಿಸರ್ಗವೇ ತಕ್ಕ ಉತ್ತರ ನೀಡುತ್ತಿದೆ. ನಮ್ಮ ಸರದಿ ಬಂದಾಗ ನೇಪಥ್ಯಕ್ಕೆ ಸರಿದು ಇನ್ನಾವುದೋ ನಮಗಿಂತ ಅರ್ಹ ಜೀವಿಗೆ ಅವಕಾಶ ಮಾಡಿಕೊಡಲೇಬೇಕೆಂಬುದು ಅನಿವಾರ್ಯ. ಹೇಗಿದ್ದರೂ ಇಕಾಲಜಿ ಈಸ್ ಎಟೆರ್ನಲ್ ಫಿಲಾಸಫಿ. ಅಲ್ವೇ?
ಏನಂತೀರಿ? ಈ ಅನನ್ಯ ಭೂಮಿಯನ್ನು ಹೀಗೇ ಉಳಿಸಿಕೊಳ್ಳಲು ಏನು ಮಾಡಬೇಕೋ, ಅದನ್ನು ಮಾಡಲು ಮುಂದಾಗಿ” ಎಂದು ವಿಜಯದ ನಗೆ ಬೀರಿದಳು.
ಅಷ್ಟರಲ್ಲಿ ಬಾವಿ ಓಣಿ ಕಡೆಯಿಂದ ಯಾರೋ ಯಾರಿಗೋ ದೊಡ್ಡದನಿಯಲ್ಲಿ ಬೈದಾಡುವ ಸದ್ದು ಕೇಳಿಸಿತು. “ಐನಾತಿ ಕೆಲಸಾ ಮಾಡಿ, ಈಗ ಏನೂ ಗೊತ್ತಿಲ್ಲದಂಗೆ ಅಯ್ಯೋ, ಹೌದಾ? ತ್ಚುತ್ಚು ಅಂತಾ ಡ್ರಾಮ ಮಾಡ್ತಾರೆ. ಸಿಕ್ಕೂ ನಿಂಗೆ ಮಾಡ್ತೀನಿ. ಚೌಡೀ ಹಬ್ಬುಕ್ಕೆ ಕುಯ್ಯಣಾ ಅಂತಿದ್ವು, ಈಗ್ ನೋಡಿದ್ರೆ ಹೊಟ್ಟೆ ಉಬ್ಬುರ್ಸ್ಕಂಡ್ ಸತ್ತೇ ಹೋಗೀತೆ. ಆ ಚೌಡಿ ನಿನ್ನನ್ನ ಸುಮ್ನೇ ಬಿಡ್ತದೆ ಅಂತ ಮಾಡೀಯ. ನೋಡ್ತಾ ಇರು, ನಿಂತಲ್ಲೇ ನಿಗುತ್ಕಂತೀಯ, ಕಳ್ ಲೌಡಿ…..”
“ಓ ಓ ಸೌಂಡ್ ನೋಡಿದ್ರೆ, ಮಲ್ಲಕ್ಕುಂದಿದ್ದಗೀತೆ, ಏನಾಯ್ತೇಳು? ಅವುಳ್ಮನೆ ಹಂದಿಗೇನಾಯ್ತೇಳು? ಮೊನ್ನೆ ತಾನೆ ನಮ್ತೋಟುಕ್ಕೆ ನುಗ್ಗಿ ಅಷ್ಟೂ ಗೆಣ್ಸಿನ್ ಗೆಡ್ಡೆನ ಲೂಟಿ ಮಾಡ್ಹಾಕಿ ಹೋಗ್ಯಾವೆ ಮಾರಾಯ. ಕೂಡ್ಹ್ಹಾಕ್ಕಂಡ್ ಸಾಕ್ಯ ಮಾರಾಯ್ತಿ ಅಂದ್ರೆ, ನಿಮ್ಮನೆ ಹಸಾ ನಮ್ಮನೆ ಚೌತೇ ಬೀಳ ತಿನ್ನಕ್ಲೇನ? ಅಂತ ತಿರ್‍ತಿರ್ಗೇ ಮಾತಾಡ್ತಾಳಲ. ಎಂತಾರ ಆಗ್ಲಿ, ಏಯ್ ಸೋಮ, ಅದೆಂತದಂತ ನೋಡ್ಕಂಬಾ ಮಾರಾಯ ಮೊದ್ಲು” ಎಂದ ಯಜಮಾನಣ್ಣನ ಮಾತು ಮುಗಿಯೋದ್ರೊಳಗೆ ಆ ರೋಚಕ ಘಟನೆಗೆ ಸಾಕ್ಷಿಯಾಗುವ ಆಸೆಯಿಂದ ಅಂಗಳವನ್ನು ದಾಟಿಯಾಗಿದ್ದನಾ ಸೋಮ.

ಮಲ್ಲಕ್ಕನ ಕೂಗಾಟ ತಾರಕಕ್ಕೇರುತ್ತಲೇ ಇತ್ತು. ತನ್ನ ಸಹಾಯದ ಅಗತ್ಯವೇನಾದರೂ ಇದೆಯಾ ಎಂದು ಗಡಿಬಿಡಿಯಲ್ಲಿ ಓಡುತ್ತಾ ಬಂದ ಸೋಮನನ್ನು ನೋಡಿದ ಕೂಡಲೇ ಬೆಂಕಿಗೆ ಸೀಮೇಎಣ್ಣೆ ಸುರಿದಂತೆ ಭಗ್ ಎಂದು ಉರಿದೆದ್ದ ಶ್ರೀಮತಿ ಮಲ್ಲಮ್ಮನವರು “ನೀ ಎಂತಕಾ ಬಂದೆ? ಇಲ್ಯಾರ್ದಾದ್ರೂ ಉದ್ದಾಗಿದಾವೆ ಅಂತನಾ? ಹಲ್ಕಾ ಮುಂಡೇಮಕ್ಳು ಯಾರಕಣೆ ನನ್ ಹಂದಿಗೆ ಇಸ ಹಾಕ್ಯಾರೆ. ಏನಿಲ್ಲ ಅಂದ್ರೂ, ಎಂಬತ್ ಕೇಜಿ ಬರ್ತಾ ಇತ್ತು, ಈ ಸಲ ಚೌಡಿಗೆ ಕಡಿಯಣ ಅಂತ ಸಾಕಿದ್ದೆ. ಅಲ್ನೋಡು, ಆ ಬಾಳೆಬಡ್ಡೇಲಿ ಅಂಗಾತ ಬಿದ್ದೀತೆ…………”
ಇನ್ನು ಹೆಚ್ಚು ಹೊತ್ತು ಅಲ್ಲಿದ್ರೆ ಮಲ್ಲಕ್ಕನ ನಿಲುವಿಲ್ಲದ ಬಾಯಿಗೆ ಬಿದ್ದು ತೊಳೆದುಹೋಗುವುದು ಖಚಿತವೆಂದರಿತ ಸೋಮ ಹೋದ ವೇಗದಲ್ಲಿಯೇ ಹಿಂದಿರುಗಿ ಬಂದು, ಮಲ್ಲಕ್ಕ ಸಾಕಿದ್ದ ಹಂದಿಗೆ ಸುಬ್ರಮಣಿ ಹೆಂಡ್ತಿ ಶಾಂತ ಅಂಬಲಿಗೆ ಸಿಮೆಂಟು ಕಲೆಸಿ ತಿನ್ನಿಸಿದ್ದ ವಿಚಾರ ಹೇಳಿದ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ