October 5, 2024

ನಿತ್ಯ ಜೀವನದಲ್ಲಿ ಸುಖಗಳು ನಮ್ಮನ್ನು ಹಿಗ್ಗಿಸುತ್ತವೆ; ದುಃಖಗಳು ಕುಗ್ಗಿಸುತ್ತವೆ! ಸುಖ ಬಂದಾಗ ಹಿಗ್ಗುವುದು, ದುಃಖವಾದಾಗ ಮುದುಡಿ ಕೂರುವುದು, ವ್ಯಘ್ರರಾದಾಗ ಕ್ಷೋಭೆಗೊಳ್ಳುವುದು ದೇಹ ಹೊತ್ತವರಿಗೆ ಅನಿವಾರ್ಯ. ಈ ಸ್ಥಿತಿಗಳಿಂದ ಜರ್ಜರಿತವಾದಾಗ ನಮ್ಮನ್ನು ಸಮಸ್ಥಿತಿಗೆ ತರಲು ಒಂದಿಷ್ಟು ಚೈತನ್ಯದ ಅವಶ್ಯಕ. ಆ ಚೈತನ್ಯಕ್ಕಾಗಿ ನಾವು ಹೊರಗೆ ನೋಡುತ್ತೇವೆ. ಸ್ನೇಹಿತರು, ಬಂಧು-ಬಳಗ, ಎಲ್ಲಾ ಕಡೆ! ಆದರೆ ಆ ಚೈತನ್ಯ ನಮ್ಮಲ್ಲೇ ಇದೆ ಎಂಬುದರ ಅರಿವು ನಮಗಿಲ್ಲ. ಅದನ್ನು ಹಣಕೊಟ್ಟುಕೊಳ್ಳಬೇಕಾಗಿಲ್ಲ! ನಮ್ಮಲ್ಲೇ ಅಂತರ್ಗತವಾಗಿರುವ ಚೇತನವನ್ನು ಬಳಸಿಕೊಂಡು ಅತ್ಯಂತ ಸಮಾಧಾನಿಯಾಗಿ, ಆನಂದದಿಂದ ಬದುಕ ಬಹುದು. ಹಾಗಾದರೆ, ಆ ಚೇತನವನ್ನು ಉಪಯೋಗಿಸಿ ಕೊಳ್ಳುವ ವಿಧಾನ ತಿಳಿಯಬೇಕಾಗುತ್ತದೆ. ಆ ವಿಧಾನವೇ ಧ್ಯಾನ. ನಮ್ಮ ಶಾಸ್ತ್ರಗಳು ಈ ವಿಚಾರವನ್ನು ಕುರಿತು ಸುದೀರ್ಘವಾಗಿ ಹೇಳಿವೆ. ಮನೋ ನಿಯಂತ್ರಣಕ್ಕೆ ಧ್ಯಾನ ಅದ್ಭುತವಾದ ಸಾಧನ. ಚಿಂತೆಗಳಿಂದ ಮನಸ್ಸನ್ನು ಮುಕ್ತ ಗೊಳಿಸಿ, ನಿಶ್ಯಬ್ದದಲ್ಲಿ ಕುಳಿತಾಗ ನಮ್ಮಲ್ಲಿ ಅಂತರ್ಗತವಾಗಿ ರುವ ಅಗಾಧ ಶಕ್ತಿಯ ಅರಿವು ನಮಗಾಗುತ್ತದೆ. ಧ್ಯಾನ ದಿಂದ ನಮ್ಮ ದೇಹ ಮತ್ತು ಮನಸ್ಸಿನ ತುಂಬ ಆನಂದ ಮಯವಾದ ಚೈತನ್ಯ ತುಂಬಿಕೊಳ್ಳುವುದರ ಅರಿವಾಗುತ್ತದೆ.

ಧ್ಯಾನ ಹಲವು ತೆರನಾದುದು. ಹಲವು ವಸ್ತುಗಳ ಮೇಲಿರುವ ಮನಸ್ಸು ಒಂದು ವಸ್ತುವಿನ ಮೇಲೆ ಕೇಂದ್ರಿಕರಿಸುವುದೇ ಧ್ಯಾನ. ಧ್ಯಾನಿಸುವ ವಸ್ತು ಸಾಕಾರ ಭಗವಂತನಾಗಿರಬಹುದು ಇಲ್ಲವೇ ನಿರಾಕಾರ ಭಗವಂತ ನಾಗಬಹುದು ಅಥವಾ ನಮ್ಮ ಉಸಿರಾಟದ ಗತಿಯೇ ಆಗಬಹುದು. ಯಾವ ಕ್ರಿಯೆಯನ್ನೂ ಮಾಡದಿರುವುದೇ ಧ್ಯಾನ! ಧ್ಯಾನ ಆಂತರಿಕ ಮತ್ತು ಬಾಹ್ಯ ಜಗತ್ತುಗಳನ್ನು ಬೆಸೆಯುವ ಪ್ರಕ್ರಿಯೆ. ಭಾರತೀಯ ಪರಂಪರೆಯ ತ್ರಿಕಾಲ ಸಂಧ್ಯಾ ಧ್ಯಾನಕ್ಕೆ ಹಿನ್ನಲೆ. ಎಲ್ಲ ಚಿಂತೆಗಳಿಂದ ಮುಕ್ತರಾಗಿ ಮನಸ್ಸನ್ನು ಖಾಲಿ ಮಾಡಿಕೊಂಡಾಗ ನಮ್ಮಲ್ಲಿನ ಆಂತರಿಕ ಚೇತನ ಹೆಚ್ಚುತ್ತ ಹೋಗುತ್ತದೆ. ಇದರ ಅರಿವು ಕೂಡ ನಮಗಾಗುವುದು. ಧ್ಯಾನವನ್ನು ಆಯಾಮಗಳಿಲ್ಲದ ನಮ್ಮ ಮನಸ್ಸಿನ ಆಂತರಿಕ ದೃಷ್ಟಿ ಎಂದು ಬೇಕಾದರೆ ಹೇಳ ಬಹುದು. ಧ್ಯಾನದ ಸ್ಥಿತಿಯನ್ನು ತಲುಪಬೇಕಾದರೆ ನಮ್ಮ ಮನಸ್ಸಿನಲ್ಲಿ ಯಾವ ಪ್ರಾಪಂಚಿಕ ವಿಷಯಗಳೂ ಸುಳಿಯದಂತೆ ನಿಯಂತ್ರಿಸಬೇಕಾಗುತ್ತದೆ. ನಮ್ಮ ಬಾಹ್ಯ ಮತ್ತು ಆಂತರಿಕ ವೃತ್ತಿಗಳನ್ನೆಲ್ಲಾ ಮರೆಯಬೇಕಾಗುತ್ತದೆ. ಧ್ಯಾನದ ಪ್ರಾಥಮಿಕ ಹಂತದಲ್ಲಿ ನಮ್ಮ ಮನಸ್ಸಿನಲ್ಲಿ ಪರೀಕ್ಷಿಕನ ದೃಷ್ಟಿ ಇರುತ್ತದೆ. ಧ್ಯಾನದಿಂದ ಶರೀರದಲ್ಲಿ ಮನಸ್ಸಿನಲ್ಲಿ ಏನೇನಾಗುತ್ತಿದೆ ಎಂದು ತಿಳಿಯುವ ಪ್ರಯತ್ನ ನಡೆಯುತ್ತದೆ. ಧ್ಯಾನವನ್ನು ಮುಂದುವರಿಸುತ್ತಾ ಈ ಸ್ಥಿತಿಯಿಂದ ನಾವು ಕ್ರಮೇಣ ಹೊರತಾಗುತ್ತೇವೆ. ಅಲ್ಲಿ ನಿಜವಾದ ಧ್ಯಾನದ ಸ್ಥಿತಿ ಪ್ರಾರಂಭವಾಗುತ್ತದೆ. ಸೂಕ್ಷ್ಮ ಪ್ರಜ್ಞಾ ಸ್ಥಿತಿಯಲ್ಲಿ ನಮ್ಮನ್ನು ನಾವು ಅರಿಯುವ ಕ್ರಿಯೆ ಇಲ್ಲಿಂದ ಪ್ರಾರಂಭವಾಗುತ್ತದೆ.

ವಿಜ್ಞಾನ ಭೌತಿಕವಾಗಿ ಜಗತ್ತಿನ ವಸ್ತು ಸ್ಥಿತಿ ಗಳನ್ನು ತಿಳಿಸುವ ಪ್ರಯತ್ನದಲ್ಲಿದೆ. ಧ್ಯಾನವು ಒಳ ಜಗತ್ತಿನ ಸತ್ಯವನ್ನು ತಿಳಿಯ ಪಡಿಸುತ್ತದೆ. ವೈಜ್ಞಾನಿಕ ಪ್ರಯೋಗಗಳೆಲ್ಲ ಭೌತಿಕ ವಸ್ತುಗಳನ್ನು ಬಳಸಿಕೊಳ್ಳುತ್ತವೆ. ಆದರೆ ಧ್ಯಾನವು ಒಳಜಗತ್ತಿನ ಅಭೌತಿಕ ಕ್ರಿಯೆಗಳನ್ನು ಸಾದರಪಡಿಸುತ್ತದೆ. ಇಲ್ಲಿ ಪ್ರಯೋಗ ಮಾಡುವ ವಿಜ್ಞಾನಿ ಮತ್ತು ಪ್ರಯೋಗಕ್ಕೆ ಒಳಗಾಗುವ ವಸ್ತು ಕೂಡ ನಾವೇ ಆಗಿರುತ್ತೇವೆ. ಧ್ಯಾನದಲ್ಲಿ ತೊಡಗಿರುವವರು ಮೈಮರೆತಿರುತ್ತಾರೆ. ಅವರಿಗೆ ಪ್ರಜ್ಞೆಯೇ ಇರುವುದಿಲ್ಲ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ಅದು ನಿಜವಲ್ಲ. ಧ್ಯಾನದಲ್ಲಿ ತೊಡಗಿರುವವರು ಜಾಗೃತ ರಾಗಿಯೂ, ಸೂಕ್ಷ್ಮಪ್ರಜ್ಞೆ ಹೊಂದಿರುವವರೂ ಆಗಿರುತ್ತಾರೆ. ಆದರೆ ಬಾಹ್ಯ ಜಗತ್ತಿಗೆ ಆತ ಮೈ ಮರೆತಿರುವಂತೆ ಕಾಣಿಸುತ್ತದೆ. ಒಮ್ಮೆ ಧ್ಯಾನದ ಆಳಕ್ಕೆ ಮುಳುಗುವುದನ್ನು ಸಾಧಿಸಿದ ನಂತರ ಯಾವ ಪ್ರಯತ್ನವೂ ಇಲ್ಲದೆ ಬೇಕೆಂದಾಗ ಆ ಆಳವನ್ನು ತಲುಪಬಹುದು.

ಧ್ಯಾನದಿಂದ ಪಡೆದ ಅರಿವು ಇಂದ್ರಿಯಗಳ ಮೂಲಕ ಪಡೆದ ಅರಿವಿಗಿಂತ ಭಿನ್ನವಾಗಿರುತ್ತದೆ. ಮನಸ್ಸಿಗೆ ಎಲ್ಲೆ ಎನ್ನುವುದೇ ಇಲ್ಲ. ಅದು ಎಲ್ಲ ಸೀಮೆಗಳನ್ನು ಹಾಯ್ದು ಬಲು ದೂರ ಹೋಗಬಲ್ಲದು. ಸಾಮಾನ್ಯವಾಗಿ ನಮ್ಮ ಕಲ್ಪನೆಗಳು ಅರಿವಿನ ಮಿತಿಯನ್ನು ದಾಟುವುದಿಲ್ಲ. ಹೊಸದನ್ನು ಅವಿಷ್ಕಾರ ಮಾಡುವುದಿಲ್ಲ. ಹಳೆಯ ವಿಷಯಗಳೇ ಅಲ್ಲಿ ಪುನರಾವರ್ತನೆಯಾಗುತ್ತಿರುತ್ತವೆ. ಆದರೆ ಧ್ಯಾನದಿಂದ ಎಲ್ಲವೂ ಬದಲಾಗುತ್ತವೆ. ನಮ್ಮ ಒಳ ಮನಸ್ಸು ಸೂಕ್ಷ್ಮಾತಿ ಸೂಕ್ಷ್ಮವಾಗುತ್ತಾ ಪಂಚೇಂದ್ರಿಗಳ ಮೂಲಕ ಗಳಿಸಿರಲಾರದನ್ನು ಗಳಿಸುತ್ತದೆ. ಅರಿಯಲಾರ ದ್ದನ್ನು ಅರಿಯುತ್ತದೆ. ಆದ್ದರಿಂದಲೇ ಧ್ಯಾನವೆಂದರೆ ತನ್ನನ್ನು ತಾನು ಅರಿಯುವ ಕ್ರಿಯೆ ಎಂದು ಹೇಳುವುದು.

ಧ್ಯಾನ ಮಾಡಲು ದೇವರಲ್ಲಿ ನಂಬಿಕೆ ಇಡಬೇಕು ಎಂದೇನೂ ಇಲ್ಲ! ದೇವರನ್ನು ಒಪ್ಪುವುದು ಮತ್ತು ದೇವರ ಅಸ್ತಿತ್ವದಲ್ಲಿ ನಂಬಿಕೆ ಇಡುವುದು ಎಲ್ಲರಿಗೂ ಸಾಧ್ಯಾವಾಗಲಾರದು. ಆದರೆ ನಮ್ಮ ಅಸ್ತಿತ್ವದಲ್ಲಿ ಅಪನಂಬಿಕೆ ಬರಲು ಸಾಧ್ಯವೇ ಇಲ್ಲ! ದೇವರನ್ನು ನಂಬದೆಯೂ ಧ್ಯಾನ ಮಾಡುತ್ತಾ ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ! ಆತ್ಮ ಎಂದ ತಕ್ಷಣ ಪುನರ್ಜನ್ಮದ ನಂಬಿಕೆಯ ವಿಷಯ ಬರುತ್ತದೆ. ಆದರೆ ಧ್ಯಾನ ಮಾಡು ವವರು ಇದರಿಂದೇನೂ ಬಾಧಿತರಾಗಬೇಕಾಗಿಲ್ಲ! ಆತ್ಮ, ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದೆಯೂ ಧ್ಯಾನದಲ್ಲಿ ತೊಡಗಬಹುದು.
ಮನಸ್ಸು ಚಂಚಲ! ಇದು ಎಲ್ಲರಿಗೂ ತಿಳಿದ ವಿಷಯವೇ! ವಿಷಯದಿಂದ ವಿಷಯಕ್ಕೆ, ವಸ್ತುವಿನಿಂದ ವಸ್ತುವಿಗೆ ಹರಿದಾಡುವುದೇ ಅದರ ಗುಣ. ಸದಾ ಭೂತ ಕಾಲದ ಚಿಂತೆಯಲ್ಲಿ, ಇಲ್ಲವೇ ಕಲ್ಪಿಸಿಕೊಂಡ ಭವಿಷ್ಯದ ಚಿಂತೆಯಲ್ಲಿ ಮನಸ್ಸು ಲಾಗಾ ಹಾಕುತ್ತಿರುತ್ತದೆ. ಮನಸ್ಸು ವರ್ತಮಾನದಲ್ಲಿ ನಿಲ್ಲುವುದೇ ಕಡಿಮೆ. ವರ್ತಮಾನದಲ್ಲಿ ಮನಸ್ಸು ನಿಂತರೆ ಮನುಷ್ಯನ ಶ್ರೇಷ್ಠ ಗುಣಗಳು ಪ್ರಕಟ ವಾಗುತ್ತವೆ. ಮನಸ್ಸು ವರ್ತಮಾನದಲ್ಲಿ ಹಿಡಿದು ನಿಲ್ಲಿಸುವುದನ್ನು ಧ್ಯಾನ ಮಾಡುತ್ತದೆ. ಒಮ್ಮೆ ಮನಸ್ಸು ವರ್ತಮಾನ ದಲ್ಲಿ ನಿಂತರೆ ಎಲ್ಲ ಸಮಸ್ಯೆಗಳೂ ತಮ್ಮಷ್ಟಕ್ಕೆ ತಾವೇ ಕರಗಿ ಹೋಗುತ್ತವೆ. ಹುಟ್ಟು ಸಾವಿನಂತ ಜಟಿಲ ಸಮಸ್ಯೆಗಳೂ ಮನದಲ್ಲಿ ಉಳಿಯುವುದೇ ಇಲ್ಲ. ಅಷ್ಟೇಕೆ ಧರಿಸಿರುವ ದೇಹದ ಅರಿವು ಕೂಡ ಇಲ್ಲವಾಗಿ ಬಿಡುತ್ತದೆ. ಬೆಳಗುವ ಆತ್ಮಪ್ರಕಾಶದಲ್ಲಿ ಅರಿವಾಗುತ್ತದೆ ‘ನಾನು’ ಬರಿಯ ಈ ದೇಹ ಅಲ್ಲವೇ ಅಲ್ಲ… ಅನಂತನಾದ, ಶಾಶ್ವತವಾದ ಭಗವಂತನ ಒಂದು ಭಾಗವೇ ಎಂದು!

ಸಾಮಾನ್ಯವಾಗಿ ನಿತ್ಯದ ಬದುಕಿನ ಜಂಜಡ ದಲ್ಲಿ ನಾವು ನಮ್ಮನ್ನೇ ಕಳೆದುಕೊಂಡು ಬಿಡುತ್ತೇವೆ. ಆದುದರಿಂದಲೇ ನಾವಾರೆಂದು ಚಿಂತಿಸುವ ಅಗತ್ಯ ವಾಗಲೀ, ಸಮಯವಾಗಲೀ, ಅರಿವಾಗಲೀ ಇರುವುದಿಲ್ಲ. ಧ್ಯಾನ ನಮ್ಮನ್ನು ನಮ್ಮ ನಿಜ ಸ್ವರೂಪದಲ್ಲಿ ಅರಿಯುವ ಪ್ರಯಾಣದಲ್ಲಿ ಉಪಯೋಗಿಸುವ ವಾಹನ. ಈ ಪ್ರಯಾಣ ನಮ್ಮ ಅಂತರಂಗಕ್ಕೆ. ಧ್ಯಾನ ನಮ್ಮ ಅಂತರಂಗದ ಕೇಂದ್ರ ಸ್ಥಾನದಲ್ಲಿ ನಮ್ಮ ಪ್ರಜ್ಞೆಯನ್ನು ಸ್ಥಿರವಾಗಿಸುತ್ತದೆ. ನಮ್ಮನ್ನು ಗಾಢವಾದ ಶಾಂತಿ ಮತ್ತು ನಿರ್ಲಿಪ್ತ ಸ್ಥಿತಿಗೆ ಒಯ್ಯುತ್ತದೆ. ಈ ಸ್ಥಿತಿಯಲ್ಲಿ ನಮಗರಿವಾಗುತ್ತದೆ. ಈ ದೇಹ ಬರಿಯ ಒಂದು ಕೋಶವಷ್ಟೆ ಎಂಬುದು. ಧ್ಯಾನದಲ್ಲಿ ತೊಡಗಿಸಿ ಕೊಂಡಾಗ ಕೆಲವರಿಗೆ ದೇಹದ ಅರಿವು ಇರುವುದಿಲ್ಲ.

ಧ್ಯಾನದಿಂದ ಪ್ರಾಪ್ತಿಯಾಗುವ ಬೆಲೆ ಕಟ್ಟಲಾಗದ ಅಂಶವೆಂದರೆ ಮನೋ ಜಗತ್ತಿನ ಎಲ್ಲ ಸಂಕೋಲೆಗಳಿಂದ ಮುಕ್ತಿ. ವರ್ತಮಾನದಲ್ಲಿಯೇ ಸಿಗುವ ಎಂದಿಗೂ ಅಳಿಯದ ಚಿರಶಾಂತಿ ಮತ್ತು ಆನಂದದ ಸ್ಥಿತಿ.

ಕೃಪೆ : ಸಂಜೀವಿನಿ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ