October 5, 2024

ಮೂಲ : ಡಿ.ವಿ.ಜಿ

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

ಮನುಷ್ಯ ಜೀವನವು ನಿರಂತರ ಹುಡುಗಾಟದಲ್ಲಿಯೇ ಇರುತ್ತದೆ. ಬೇಕು ಬೇಡಗಳ ಹುಡುಕಾಟ ಜನನದಿಂದ ಮರಣದವರೆಗೂ ಬಿಡದ ನಂಟು. ಈ ಹುಡುಕಾಟದ ನಡುವೆ ಸಿಕ್ಕಿಕೊಂಡ ಮನುಷ್ಯನಿಗೆ ತಾನು ಸಾಧಿಸಿದ ಕೆಲಸ, ಪಡೆದ ವೈಭವ ಎಲ್ಲವೂ ನಿತ್ಯ ಹಳತಾಗುತ್ತ ಹೋಗುತ್ತದೆ. ಇದು ಒಂದು ರೀತಿಯಲ್ಲಿ ಪಡೆದಿರುವುದರಲ್ಲಿ ತೃಪ್ತಿಯಿರದ ಜೀವನ ಎಂದರೂ ತಪ್ಪಿಲ್ಲ. ಕೆಲವೊಂದು ಸಾರಿ ಈ ಹುಡುಕಾಟ ಮನುಷ್ಯನನ್ನು ದುರಾಸೆಗೆ ಬಲಿಮಾಡುತ್ತದೆ. ಹಾಗಾದರೆ ಈ ತೃಪ್ತಿ, ಹುಡುಗಾಟಗಳ ಮಧ್ಯೆ ಮನುಷ್ಯನ ಜೀವನ ಹೈರಾಣಾಗುತ್ತಿದೆಯೇ …! ಎಂದರೆ ಒಂದರ್ಥದಲ್ಲಿ ನಿಜವೇ ! ಬೇಕು ಬೇಕೆನ್ನುವ ಆಸೆಗೆ ಕಡಿವಾಣ ಇಲ್ಲದೇ ಸಿಕ್ಕಷ್ಟರಲ್ಲಿ ತೃಪ್ತಿಪಡುವ ಮನಸ್ಥಿತಿ ಮನುಜರಲ್ಲಿ ಮರೆಯಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಈ ಬೇಕು ಎನ್ನುವ ಗುಣ ಹುಟ್ಟಿನಿಂದಲೇ ನಮ್ಮೊಡನೆ ಬಂದಂತಿದೆ, ಏಕೆಂದರೆ ಭೂಮಿಗೆ ಬಿದ್ದೊಡನೆ ಅಳುವ ಮಗು ತನ್ನ ಅಳುವಿನಿಂದಲೇ ಅಮ್ಮನಿಂದ ಪಡೆದುಕೊಳ್ಳುವ ಜಾಣ್ಮೆ ಹೊಂದಿರುತ್ತದೆ. ಆದ್ದರಿಂದ ಇದು ಒಂದು ರೀತಿಯಲ್ಲಿ ಹುಟ್ಟು ಗುಣ ಎಂದರೂ ತಪ್ಪಿಲ್ಲ. ಆದರೆ ಈ ಗುಣವನ್ನು ಮನುಷ್ಯ ಬೆಳೆದಂತೆಲ್ಲ ತನ್ನ ಒಳಿತಿನ ದಾರಿಗೆ ಉಪಯೋಗಿಸಿ ಕೊಂಡಿದ್ದರೆ ಪ್ರಪಂಚದಲ್ಲಿ ಈ ಸುಳ್ಳು, ವಂಚನೆ, ಕಪಟತನ, ದುರಾಸೆ ಹಾಗೂ ಕೂಡಿಡುವ ಬುದ್ಧಿ ಇವುಗಳಿಗೆ ಎಡೆಯಿರುತ್ತಿರಲಿಲ್ಲವೇನೋ …! ಆದರೆ ಹಾಗಾಗಲಿಲ್ಲ ಎನ್ನುವುದೇ ವಿಷಾದದ ಸಂಗತಿ. ಇಂತಹ ಹುಡುಗಾಟಗಳ ಬಗ್ಗೆ ಡಿ.ವಿ.ಜಿ.ಯವರು ಈ ರೀತಿ ಹೇಳುತ್ತಾರೆ.
ಇಹುದಕಿಂತೊಳಿತಿಹುದು; ಒಳಿತಗಳಿಸಲ್ಪಹುದು |
ಸಹಸಿಸುವೆನದಕನುತ ಮತಿಯನೇ ಪ್ರಗತಿ ||
ರಹಸಿಯದ ಬುಗ್ಗೆಯದು; ಚಿಮ್ಮುತಿಹುದೆಲ್ಲರೊಳು |
ಸಹಜವಾ ಮತಿಕೃತಕ – ಮಂಕುತಿಮ್ಮ ||
ನಾವು ಏನು ಈಗ ಇದ್ದೇವೋ ಈ ಸ್ಥಿತಿಗಿಂತ ಉತ್ತಮವಾದ ಒಂದು ಒಳ್ಳೆಯ ಸ್ಥಿತಿ ಇದೆ ಅದನ್ನು ನಾವು ಸಂಪಾದಿಸಬೇಕು ಅದಕ್ಕಾಗಿ ಹರಸಾಹಸ ಬೇಕಾದರೂ ಮಾಡುತ್ತೇನೆ ಇನ್ನುವ ಬುದ್ಧಿ ಇದು ರಹಸ್ಯವಾಗಿ ಪ್ರತಿಯೊಬ್ಬರ ಒಳಗೂ ಸಹ ಚಿಮ್ಮುತಿರುತ್ತದೆ. ಇದು ಒಂದು ರೀತಿ ಸಹಜವಾದ ಬುದ್ಧಿಯಾದರೂ ಸಹ ಒಂದೊಂದು ಸಾರಿ ಕೃತಕಕ್ಕೆ ಜೋತುಬಿದ್ದಂತೆ ಕಾಣುತ್ತದೆ.
ಉತ್ತಮವಾದ ಸ್ಥಿತಿಯನ್ನು ತಲುಪಬೇಕು ಇನ್ನುವುದು ಮನುಜ ಸಹಜವಾದ ಆಸೆ. ಆದರೆ ಆ ಸ್ಥಿತಿಯನ್ನು ತಲುಪುವ ಮಾರ್ಗವನ್ನು ಮಾತ್ರ ನಾವು ನಮ್ಮ ಮನಸ್ಸಿನಲ್ಲಿಯೇ ಆಲೋಚಿಸುತ್ತ ಬೇರೆಯವ ರೊಂದಿಗೆ ಹಂಚಿಕೊಳ್ಳದೇ ರಹಸ್ಯವಾಗಿಯೇ ಇಟ್ಟಿರುತ್ತೇವೆ. ಇದಕ್ಕೆ ಕಾರಣ ನಮ್ಮ ಸ್ವಾರ್ಥವೂ ಇರಬಹುದು. ಹಾಗೆಯೇ ಬೇರೆಯವರು ನಮ್ಮ ಆಲೋಚನೆಗಳನ್ನು ಮೊಟಕುಗೊಳಿಸುತ್ತಾರೋ ಎಂಬ ಚಿಂತೆಯೂ ಇರಬಹುದು. ನಾನೊಬ್ಬನೇ ಮೇಲೆ ಬರಬೇಕು ಎಂಬ ಅಭಿಲಾಷೆ ಸಹ ಇರಬಹುದು. ಇದು ಮನುಷ್ಯನ ಸಹಜವಾದ ಸ್ವಭಾವ. ಅದು ಏನೇ ಆಗಲಿ ನಮ್ಮ ಈ ರಹಸ್ಯ ಬುದ್ಧಿಯೂ ಸಹ ಒಳ್ಳೆಯದೇನಲ್ಲ. “ತಾನು ಕಳ್ಳ ಪರರನ್ನು ನಂಬ” ಎಂಬ ಗಾದೆಯಂತೆ ಮನಸ್ಸಿನಲ್ಲಿ ಹುಳುಕು ತುಂಬಿಕೊಂಡಿರುವ ಮನುಷ್ಯನಿಗೆ ಒಳಗೇ ಅಳುಕು, ಯಾಕೆಂದರೆ ತನ್ನಂತೆಯೇ ಇತರರು ಸಹ ಎಂದು ಅಳೆಯುವ ಸ್ವಭಾವ.
ಮನುಷ್ಯ ಎಂಬ ಜೀವಿಯು ಈ ಬೆಡಗಿನ ಪ್ರಪಂಚದ ಸುಖ ಲೋಲಾಪ್ತಿಗಳನ್ನು ಹುಡುಕುವುದರಲ್ಲಿಯೇ ಇರುತ್ತಾನೆ. ಈ ನಶ್ವರ ಜೀವನದ ಸುಖ ದುಃಖಗಳು ಪರಮಾತ್ಮ ಸೃಷ್ಟಿಸಿದ ಲೀಲೆಗಳು. ಇಂತಹ ಲೀಲೆಯಲ್ಲಿ ಅವನು ನಮ್ಮನ್ನು ಕುಣಿಸಿ ನಮ್ಮ ಸೋಗಲಾಡಿತನ ಆಟವನ್ನು ನೋಡುತ್ತಿರುತ್ತಾನೆ. ಇಂತಹ ಬೆಡಗಿನ ಜೀವನ ಹೇಗಿದೆಯೆಂದರೆ –
ಸಿರಿ ಸೊಬಗುಗಳ ಬೆದಕು, ಕಳೆ ಬಲುಮೆಗಳ ಬೆದಕು |
ಪರಬೊಮ್ಮ ನಾಟಕದ ವೇಷ ಚೇಷ್ಟೆಗಳು ||
ಅರಸುತಿಹ ಜೀವ ನಾಯಕನು, ನಾಯಕಿಯವನ |
ಕೆರಳಿಸುವ ಮೋಹ ರುಚಿ – ಮಂಕುತಿಮ್ಮ ||
ಪ್ರಪಂಚದ ಸಿರಿ ಸೊಬಗುಗಳು, ಐಶ್ವರ್ಯ, ಅಂತಸ್ತು, ಸ್ನೇಹ, ಪ್ರೇಮ ಇಂತಹವುಗಳನ್ನು ಹುಡುಕಿಕೊಂಡು ಹೋಗುತ್ತಿರುವ ಮನುಷ್ಯನು ಪರಮಾತ್ಮನ ಸೃಷ್ಟಿಯ ನಾಟಕದ ನಾಯಕನ ಪಾತ್ರಧಾರಿ. ಅವನನ್ನು ಹುಚ್ಚಿಗೆಬ್ಬೆಸಿ ಕೆರಳಿಸುವ ಮೋಹ, ಕಾಮ ಇವುಗಳು ಈ ನಾಟಕದ ನಾಯಕಿಯ ಪಾತ್ರಧಾರಿಣಿಯಾದ ಪ್ರಕೃತಿ.
ಈ ಪ್ರಕೃತಿಯು ತನ್ನ ಒನಪು ವಯ್ಯಾರದಿಂದ ಎಲ್ಲರನ್ನೂ ಸೆಳೆಯುವ ಸಾಮಥ್ರ್ಯ ಹೊಂದಿದವಳು. ಇವÀಳಲ್ಲಿ ಸೌಂದರ್ಯ ವನ್ನು ತುಂಬಿ ಪ್ರಪಂಚವನ್ನು ತನ್ನೆಡೆಗೆ ಸೆಳೆದು ಮನುಜರನ್ನು ಮೋಹಗೊಳಿಸುವಂತಹ ಆಕರ್ಷಣೆಯನ್ನು ತುಂಬಿರುವವನು ಪರಮಾತ್ಮನೇ, ಈ ಮೋಹಕ್ಕೆ ಮನಸೋಲದೇ ಇರುವವರು ಬಹಳ ವಿರಳ. ಮನುಷ್ಯ ಹುಟ್ಟುವಾಗ ನಗ್ನ ಸ್ಥಿತಿ ಇದು ಸಹಜವಾದುದೇ ಹಾಗೆಯೇ ಬೆಳೆಯುತ್ತಾ ಹೋದಂತೆ ಮೈಯಿನ ಅಂಗಾಂಗಳು ಸಹ ಬೆಳೆಯುತ್ತವೆ ಯಾರೋ ಒಬ್ಬರು ಬಣ್ಣಬಣ್ಣದ ಬಟ್ಟೆ ತೊಡಿಸುತ್ತಾರೆ, ಇನ್ಯಾರೋ ಒಬ್ಬರು ಆಡಿಸುತ್ತಾರೆ, ತಾಯಿ ಲಾಲಿಸುತ್ತಾಳೆ, ತಂದೆ ಪಾಲಿಸುತ್ತಾನೆ ಕುಟುಂಬ ಸಂಸ್ಕಾರ ನೀಡುತ್ತದೆ. ಅಕ್ಷರ ಕಲಿತು ವಿದ್ಯಾವಂತರಾಗಿ ಬದುಕುವ ಸಾಮಥ್ರ್ಯವನ್ನು ಹೆತ್ತವರು ನೀಡುತ್ತಾರೆ. ಬೆಳೆಯುತ್ತಾ ಹೋದಂತೆ ಬಣ್ಣಬಣ್ಣದ ಬಟ್ಟೆ ತೊಡುವಾಸೆ, ಅಲ್ಲಿ-ಇಲ್ಲಿ ತಿರುಗುವ ಆಸೆ, ಈ ಆಸೆಗಳು ನಮ್ಮೊಳಗಿಂದ ನಮ್ಮ ಸುತ್ತಲಿನ ಸಮಾಜವನ್ನು ನೋಡಿ ಬರುವಂತಹದು ಅಂದಾಕ್ಷಣ ಇದನ್ನು ತಪ್ಪು ಎನ್ನುವಂತಿಲ್ಲ, ಇದೆಲ್ಲ ಸಹಜವಾದ ಪ್ರಕ್ರಿಯೆಗಳೇ, ಆದರೂ ಸಹ ಇದರಲ್ಲಿ ನಮ್ಮ ಎಚ್ಚರಿಕೆಯ ನಡೆಯಲ್ಲಿ ಕೃತಕತೆ ಇರಬಾರದು.
ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು |
ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು||
ಮೇಘವರ್ಣಚ್ಛಾಯೆ – ಯೀ ಸೃಷ್ಟಿಯಿಂ ನಮ್ಮೊ |
ಳಾಗಿಹುದು ರೂಪರುಚಿ – ಮಂಕುತಿಮ್ಮ ||
ನೀಲಾಕಾಶವು ಬಾಗಿ ಭೂಮಿಯನ್ನು ಮುಟ್ಟುತ್ತಿದೆಯೋ ಏನೋ ಎಂಬಂತೆ ಭಾಸವಾಗುವಿಕೆ, ಗುಂಡಾದ ಚಂದಿರನ ಬಿಳುಪಾದ ಬಣ್ಣ ಈ ದುಂಡಿನಲ್ಲಿ ಏನೊಂದು ಅಂಕುಡೊಂಕು ಸಹ ಇಲ್ಲ ವೆಂಬಂತೆ ಕಾಣುವ ಪರಿ, ಸಮುದ್ರದ ತೆರೆಗಳು ಎಷ್ಟೇ ಏರಿಳಿತ ಹೊಂದಿದ್ದರೂ ಸಹ ನಮ್ಮ ದೃಷ್ಟಿ ಅದು ದಡಕ್ಕೆ ಹೊಡೆಯುವ ಬಗೆಯ ಮೇಲೆ; ಬಳುಕುತ್ತಿರುವ ಗಿಡ-ಬಳ್ಳಿಯ ಸೊಬಗು, ಕಪ್ಪನೆಯ ಮೋಡದ ಕರಿನೆರಳು ಇದೆಲ್ಲ ಪರಮಾತ್ಮನ ಸೃಷ್ಟಿಗಳು, ನಮ್ಮೊಳಗೆ ರೂಪ ಮತ್ತು ರುಚಿಗಳನ್ನು ಹೆಚ್ಚಿಸುತ್ತವೆ.
ಆಕಾಶ ಎಷ್ಟೋ ಸಹಸ್ರಮೈಲಿಗಳಷ್ಟು ದೂರವಿದ್ದರೂ ಸಹ ನಮ್ಮ ಕಣ್ಣಿಗೆ ದೂರದ ಗುಡ್ಡವನ್ನು ಅದು ಮುಟ್ಟಿ ನಿಂತಿದೆಯೋ ಏನೋ ಎಂದು ಭಾಸವಾಗುತ್ತದೆ. ಇದು ಸೃಷ್ಟಿಯ ವೈಚಿತ್ರ್ಯ. ಹುಣ್ಣಿಮೆಯ ದಿನದಲ್ಲಿ ಬೆಳಗುವ ಗುಂಡಗಿನ ಚಂದ್ರಮ ಇವನು ನೋಡುಗರ ಕಣ್ಣಿಗೆ ಹಬ್ಬ, ಇವನಲ್ಲಿ ಕೊಂಚವೂ ಸಹ ಹುಳುಕಿಲ್ಲ ಎಂಬಂತೆ ನೋಡುವ ನಮ್ಮ ಮನ, ಎಷ್ಟೋ ಜನ ಕವಿಗಳ ಬರಹಕ್ಕೆ ಇವನು ಸ್ಪೂರ್ತಿದಾಯಕ, ಇನ್ನೆಷ್ಟೋ ಪ್ರೇಮಗಳಿಗೆ ಇವನು ಪ್ರೇರಕ-ಅನುಮೋದಕ. ವಿಶಾಲವಾದ ಕಣ್ಣು ಹಾಯಿಸಿದಷ್ಟೂ ದೂರವು ಸಹ ಕಾಣುವ ಸಾಗರ ಅದರ ನೋಟವೇ ಮನಕ್ಕೆ ಏನೋ ಮುದ ನೀಡುವಂತಹದು. ಬಾಲರಿಂದ ವೃದ್ಧರವರೆಗೂ ಅದರ ಅಲೆಗಳ ಜೊತೆ ಆಟವಾಡುವ ತವಕ, ಆ ಹುರುಪು, ಉತ್ಸಾಹ. ಇನ್ನು ಸಾಗರದಂಚಿನಲ್ಲಿ ಕುಳಿತು ಮುಳುಗುವ ದಿನಕರನನ್ನು ನೋಡಲು ಜನರ ದಂಡು ದಂಡು, ಇದೇ ಸಾಗರದ ಮರಳಿನಲ್ಲಿ ಕಲೆಗಾರನ ಕೈಚಳಕ, ಮುಳುಗುವ ಸೂರ್ಯನ ಸೊಬಗನ್ನು ಲೇಖನಿಯಲ್ಲಿ ಸೆರೆಹಿಡಿದ ಕೈಗಳು, ಹೀಗೆ ನಾನ ಆಸೆಗಳನ್ನು ತುಂಬಿಕೊಂಡು ನಲಿವ ಮನಸ್ಸುಗಳು, ಪ್ರಕೃತಿಯ ಸೊಬಗಿಗೆ ಮಾತುಂಟೆ …! ಆ ಗಿಡಬಳ್ಳಿಗಳ ಬಳುಕಾಟ ವನ್ನು ನೋಡಿದಷ್ಟೂ ತಣಿಯದ ಮನಸ್ಸು, ಅದರಂದದ ವಯ್ಯಾರದ ಬಗ್ಗೆ ಬರೆವ ಕವಿಹೃದಯ ಇವೆಲ್ಲ ಬಣ್ಣಬಣ್ಣದ ಚಿತ್ತಾರಗಳಾದರೆ ನಮ್ಮ ಮೇಘರಾಜನದು ಕಪ್ಪನೆಯ ಬಣ್ಣವಾದರೂ ಸಹ ರಾಜಗಾಂಭೀರ್ಯ ! ಮೇಘದ ಓಘಕ್ಕೆ ಸರಿಯಾಗಿ ಹಲವಾರು ಕಥೆ-ಕವನಗಳು ಹೀಗೆ ಈ ಪರಮಾತ್ಮ ತನ್ನ ಸೃಷ್ಟಿಯ ಸುಂದರತೆಯಲ್ಲಿ ಮನುಷ್ಯನ ಮನಸ್ಸಿನಲ್ಲಿ ಆಸೆ ಆಕಾಂಕ್ಷೆಗಳನ್ನು ಹುಟ್ಟಿಸುತ್ತಾ ಅವನನ್ನು ಹುಚ್ಚೆಬ್ಬಿಸಿ ಆಡಿಸುತ್ತಾನೆ, ಅವನಲ್ಲಿ ಹೊಸ ಹೊಸ ಬಯಕೆಗಳನ್ನು ತುಂಬುತ್ತಾನೆ. ಈ ಬಯಕೆಗಳು ಮನಸ್ಸನ್ನು ವಿಕಾರಗೊಳಿಸಿ ಆಗ ಕಡಿವಾಣವಿಲ್ಲದ ಕುದುರೆಯಂತೆ ಎಲ್ಲಿ ಬೇಕಾದರಲ್ಲಿಗೆ ಅದು ಓಡುತ್ತಾ ಸಾಗುತ್ತದೆ.
ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ |
ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ||
ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು |
ಗುರು ರುಚಿಗೆ ಸೃಷ್ಟಿಯಲ – ಮಂಕುತಿಮ್ಮ ||
ವಿಧವಿಧವಾದ ಹೊಸ ಕಾಂತಿಯಲ್ಲಿ, ಬಗೆಬಗೆಯ ರೂಪಿನಲ್ಲಿ, ಪ್ರೀತಿ ಮತ್ತು ಸಂತೋಷವನ್ನು ಉಂಟು ಮಾಡುತ್ತಾ ಅನೇಕ ರೀತಿಯಲ್ಲಿ ಮನಸ್ಸಿನಲ್ಲಿ ಆಸೆಗಳನ್ನು ಕೆರಳಿಸಿ ಹಸಿವುಂಟು ಮಾಡುತ್ತಾ ಈ ಪ್ರಪಂಚದ ಸೊಬಗಿನ ಸವಿಯನ್ನು ಉಣಿಸುವ ಈ ಪ್ರಕೃತಿಮಾತೆ ಎಲ್ಲ ಸೃಷ್ಟಿಯ ರೂಪ-ರಸಗಳಿಗೆ ಗುರುವಿನಂತೆ.
ಬಗೆಬಗೆಯ ಸೃಷ್ಟಿ ವೈಚಿತ್ರ್ಯಗಳಲ್ಲಿ ಅನೇಕ ರೀತಿಯಲ್ಲಿ ಮನಷ್ಯನ ಅಂತರಾಳದಲ್ಲಿ ಹುದುಗಿರುವ ಆಸೆಗಳನ್ನು ಕೆರಳುವಂತೆ ಮಾಡಿ ಅವನನ್ನು ಸೋಲಿಸುವ ಪ್ರಕೃತಿ ಅಂದರೆ ಆಸೆ ಆಕಾಂಕ್ಷೆಗಳನ್ನು ತುಂಬುವ ಮೂಲಕ ಮನಸ್ಸನ್ನು ವಿಕಾರಗೊಳಿಸಿ ತಾನು ಮನುಷ್ಯಗೆ ಪಾಠ ಕಲಿಸುವ ಗುರುವಾಗುತ್ತಾಳೆ. ಈ ಪ್ರಕೃತಿಯೆಂಬ ಗುರುವನ್ನು ನಮಗೆ £ೀಡುತ್ತಾ ಆ ಪರಮಾತ್ಮ ಇವಳ ಮೂಲಕ ಮನುಷ್ಯರನ್ನು ಆಡಿಸುವ ಸೂತ್ರಧಾರನಾಗಿದ್ದಾನೆ. ಪುರಾಣಗಳ ಕಾಲದಿಂದಲೂ ಸಹ ಹೆಣ್ಣು-ಹೊನ್ನು-ಮಣ್ಣು ಇವುಗಳಿಗಾಗಿ ಆನೇಕ ಹೋರಾಟಗಳು ರಾಮಾಯಣ, ಮಹಾಭಾರತ ಪ್ರಸಂಗಗಳು ನಮ್ಮ ಕಣ್ಣ ಮುಂದಿದೆ. ಇಂದಿಗೂ ಸಹ ಮನುಷ್ಯ ತನ್ನ ಆಸೆ ಆಕಾಂಕ್ಷೆಗಳನ್ನು ಹತೋಟಿಯಲ್ಲಿಡಲಾರದೆ ಒದ್ದಾಡುತ್ತಾನೆ. ಆಸೆಗಳಿಂದ ದ್ವೇಷ, ಅಸೂಯೆ, ಜಗಳ-ಕದನಗಳು ನಡೆದ ಸಾಕ್ಷಿಗಳು ಕಣ್ಣು ಮುಂದಿದ್ದರೂ ಸಹ ನಮಗೆ ಅದು ಗೋಚರಿಸುವುದಿಲ್ಲ. ಕೊನೆಯಪಕ್ಷ ಅದರ ವಿವೇಚನೆಯು ಸಹ ನಮಗೆ ಬೇಕಿಲ್ಲ ನಮ್ಮ ಗುರಿ ನಮ್ಮ ಬಯಕೆಯ ಕಡೆಗೆ ಹೊರತು ಆ ದಾರಿಯಲ್ಲಿರುವ ಕಲ್ಲು-ಮುಳ್ಳುಗಳ ಕಡೆಗೆ ಹೋಗುವುದೇ ಇಲ್ಲ, ಇಂತಹ ಸೃಷ್ಟಿ ಲೀಲೆಗಳನ್ನು ಆಡಿಸುವ ಆತನ ಕೈಚಳಕಕೆ ಒಮ್ಮೆ ಸಲಾಂ ಅನ್ನಲೇಬೇಕಲ್ಲವೇ !

ಕಗ್ಗದ ಸಿರಿ-4, “ನಗು ಮುಕ್ತವಾಗಿರಲಿ”

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ