October 5, 2024

ಮೂಡಿಗೆರೆ ತಾಲೂಕಿನಲ್ಲಿ ವಿಶ್ವ ವಿದ್ಯಾಲಯಕ್ಕೆ ಬೇಕಾಗುವಂತಹ ಪೂರಕವಾದ ಮೂಲ ಸೌಕರ್ಯವಿದ್ದರೂ, ಶಿರಸಿಯಲ್ಲಿ ಸಹ್ಯಾದ್ರಿ ಪರಿಸರ ವಿಶ್ವ ವಿದ್ಯಾಲಯ ಸ್ಥಾಪಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಇದರಿಂದ ದಕ್ಷಿಣ ಕರ್ನಾಟಕದ ಬೆಳೆಗಾರರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಇಂತಹ ಅವೈಜ್ಞಾನಿಕ ನಿಲುವನ್ನು ರಾಜ್ಯ ಸರಕಾರ ಕೈ ಬಿಟ್ಟು ಎಲ್ಲರಿಗೂ ಅನುಕೂಲವಾಗುವ ಮೂಡಿಗೆರೆ ತಾಲೂಕಿನಲ್ಲಿ ವಿಶ್ವ ವಿದ್ಯಾಲಯ ಘೋಷಣೆ ಮಾಡಬೇಕೆಂಬುದು ಬೆಳೆಗಾರರು ಆಗ್ರಹಿಸಿದ್ದಾರೆ.

ಶಿರಸಿಯಲ್ಲಿ ಅರಣ್ಯ ಮಹಾ ವಿದ್ಯಾಲಯ ಮತ್ತು ತೋಟಗಾರಿಕಾ ಮಹಾ ವಿದ್ಯಾಲಯ ಈ ಎರಡು ಮಹಾ ವಿದ್ಯಾಲಯಗಳು ಪ್ರಾರಂಭವಾಗಿದ್ದು 2009-10ರಲ್ಲಿ. ಆದರೆ ಮೂಡಿಗೆರೆಯಲ್ಲಿ ತೋಟಗಾರಿಕಾ ಮಹಾ ವಿದ್ಯಾಲಯ ಆರಂಭಗೊಂಡಿದ್ದು 1991ರಲ್ಲಿ. ಶಿರಸಿಯಲ್ಲಿರುವ ಮಹಾ ವಿದ್ಯಾಲಯಕ್ಕಿಂತಲೂ 19 ವರ್ಷ ಹಳೆ ಕಾಲೇಜು ಮೂಡಿಗೆರೆಯಲ್ಲಿದೆ. ಅಲ್ಲದೇ ವಿಶ್ವ ವಿದ್ಯಾಲಯಕ್ಕೆ ಬೇಕಾಗುವಂತಹ 600 ಎಕರೆ ಭೂ ಪ್ರದೇಶ, ಆಡಳಿತ ಕಟ್ಟಡಗಳು ಸೇರಿದಂತೆ ಇಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಮೀನುಗಾರಿಕಾ ಕೇಂದ್ರ, ಕಡೆ ಮಾಡ್ಕಲ್ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಒಳಗೊಂಡಿದೆ. ಇಲ್ಲಿ ವಿಶ್ವ ವಿದ್ಯಾಲಯ ಮಾಡಿದರೆ ಸರಕಾರದಿಂದ ಹೆಚ್ಚಿನ ಅನುದಾನ ಬೇಕಾಗಿಲ್ಲ. ಹಾಗಾಗಿ ಮೂಡಿಗೆರೆ ಸೂಕ್ತ ಪ್ರದೇಶವಾಗಿದೆ.

ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯಕ್ಕೆ ಹೊರ ರಾಷ್ಟ್ರವಾದ ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ನೇಪಾಳ ಸೇರಿದಂತೆ ಹೊರ ರಾಜ್ಯದ ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ವಿದ್ಯಾರ್ಥಿಗಳು ವ್ಯಾಸಾಂಗಕ್ಕೆ ಬರುತ್ತಾರೆ. ಬಿಎಸ್‍ಇ, ಎಂಎಸ್‍ಇ ತೋಟಗಾರಿಕಾ ವಿದ್ಯಾರ್ಥಿಗಳು ಅಖಿಲ ಭಾರತ ಕೃಷಿ ಸಾಮಾನ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿದ್ದರಿಂದ ಮೂಡಿಗೆರೆ ತೋಟಗಾರಿಕಾ ಕಾಲೇಜು ಮೊದಲ ಸ್ಥಾನ ಪಡೆದಿದೆ. ಇದರಿಂದ ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ತಿನಿಂದ ಕಾಲೇಜಿಗೆ ಅಧಿಕ ಅನುದಾನ ಬರುತ್ತಿದೆ. ಅಲ್ಲದೇ ಇಲ್ಲಿ ವ್ಯಾಸಾಂಗ ಮಾಡಿದಂತಹ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿ ಮೂಡಿಗೆರೆಗೆ ಕೀರ್ತಿ ತಂದಿದ್ದಾರೆ.

ಈಗ ಸರಕಾರ ಶಿರಸಿಯಲ್ಲಿ ಪಶ್ಚಿಮಘಟ್ಟದ ಜೀವ ವೈವಿದ್ಯಗಳು, ಔಷಧಿ ಸಸ್ಯಗಳ ಅಧ್ಯಯನ, ಸಂಶೋಧನೆ ಸಹಿತ ಸಹ್ಯಾದ್ರಿ ಪರಿಸರ ವಿಶ್ವ ವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ. ಅಲ್ಲಿ ಕೇಂದ್ರ ಸ್ಥಾನ ಸ್ಥಾಪಿಸುವ ಮೂಲಕ ಆಡಳಿತ ವ್ಯಾಪ್ತಿಯಲ್ಲಿ ಪೊನ್ನಪೇಟೆ ಅರಣ್ಯ ಮಹಾವಿದ್ಯಾಲಯ, ಮೂಡಿಗೆರೆಯ ತೋಟಗಾರಿಕಾ ಮಹಾ ವಿದ್ಯಾಲಯ ಕ್ಯಾಂಪಸ್ ಸೇರಿದಂತೆ ಶಿರಸಿ ಅರಣ್ಯ ಮಹಾವಿದ್ಯಾಲಯ ಮತ್ತು ತೋಟಗಾರಿಕಾ ಮಹಾ ವಿದ್ಯಾಲಯ ಸೇರ್ಪಡೆಗೊಂಡಿದೆ. ಆದರೆ ಪೊನಂಪೇಟೆ ಮತ್ತು ಶಿರಸಿ ಮಧ್ಯ ಭಾಗದಲ್ಲಿ ಪಶ್ಚಿಮಘಟ್ಟದ ಚಾರ್ಮಾಡಿ ಘಾಟ್, ಸಕಲೇಶಪುರ ಬಿಸಲೇಘಾಟ್, ಕುದುರೆಮುಖದ ಶ್ರೇಣಿಗಳು ಮೂಡಿಗೆರೆ ತಾಲೂಕಿನಲ್ಲಿಯೇ ಬರುತ್ತದೆ. ಹಾಗಾಗಿ ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿರುವ ಮೂಡಿಗೆರೆ ಅಧ್ಯಯನಕ್ಕೆ ಸೂಕ್ತ ಸ್ಥಳವಾಗಿದ್ದು, ಇಲ್ಲಿಯೇ ಕೇಂದ್ರ ಸ್ಥಾನವನ್ನಾಗಿ ಅಥವಾ ಹೇಮಾದ್ರಿ ಪರಿಸರ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಬೇಕು.

ಶಿರಸಿಯಲ್ಲಿ 2 ಮಾಹಾವಿದ್ಯಾಲಯ, 2 ವಿದ್ಯಾರ್ಥಿ ನಿಲಯ, 1 ಭತ್ತ ಸಂಶೋಧನಾ ಕೇಂದ್ರ ಬಿಟ್ಟರೆ ಏನೂ ಇಲ್ಲ. ಮೂಡಿಗೆರೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯವಿದೆ. ಸರಕಾರದ ಅನುದಾನ ಕೂಡ ಅಧಿಕವಾಗಿ ಬೇಕಾಗಿಲ್ಲ. ಈ ಹಿಂದೆ ಸರಕಾರ ಮಟ್ಟದಲ್ಲೂ ಮೂಡಿಗೆರೆಯನ್ನೇ ಕೇಂದ್ರ ಸ್ಥಾನವನ್ನಾಗಿ ಮಾಡಲು ಚಿಂತಿಸಲಾಗಿತ್ತು. ಆದರೆ ಕೆಲ ಕಾಣದ ಕೈಗಳಿಂದ ಬೆಳೆಗಾರರಿಗೆ ಅನುಕೂಲವಾಗುವ ಸೂಕ್ತ ಸ್ಥಳ ಮೂಡಿಗೆರೆಯನ್ನು ಕೈ ಬಿಡುವ ತಂತ್ರ ನಡೆದಿದೆ. ರಾಜ್ಯಕ್ಕೆ ಏಕೈಕ ತೋಟಗಾರಿಕಾ ವಿಶ್ವ ವಿದ್ಯಾಲಯ ಬಾಗಲಕೋಟೆಯಲ್ಲಿದೆ. ಆದರೆ ದಕ್ಷಿಣ ಕರ್ನಾಟಕದ ಬೆಳಗಾರರ ಹಿತ ಹಾಗೂ ಆರ್ಥಿಕ ದುಂದುವೆಚ್ಚ ತಪ್ಪಿಸಲು, ಸುಗಮ ಆಡಳಿತ ದೃಷ್ಟಿಯಿಂದ ಮೂಡಿಗೆರೆಯನ್ನೇ ಕೇಂದ್ರ ಸ್ಥಾನವಾಗಿ ಮಾಡಿ, ತೋಟಗಾರಿಕಾ ವಿಶ್ವ ವಿದ್ಯಾಲಯ ಘೋಷಣೆ ಮಾಡಬೇಕು. ಶಿರಸಿಯಲ್ಲಿ ಸಹ್ಯಾದ್ರಿ ಪರಿಸರ ವಿಶ್ವವಿದ್ಯಾಲಯ ಮಾಡುವುದರಿಂದ ಪ್ರಯೋಜನವಿಲ್ಲ. ಈ ಬಗ್ಗೆ ಸರಕಾರ ಪುನರ್ ಪರಿಶೀಲಿಸಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ