October 5, 2024

ಚಿತ್ರ ಲೇಖನ :

ಡಾ.ಸಂಪತ್ ಬೆಟ್ಟಗೆರೆ,

9353057067

ನಿನ್ನೆ, 27 ಜನವರಿ 2023. ಮೂಡಿಗೆರೆಯ ಗೋಣಿಬೀಡು ಬಳಿಯ ಜಿ.ಅಗ್ರಹಾರದಲ್ಲಿ ಆದಿಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ವಾರ್ಷಿಕ ದಿವ್ಯ ರಥೋತ್ಸವ ಕಾರ್ಯಕ್ರಮ. ಇಲ್ಲಿ ರಥೋತ್ಸವ ಚಾಲನೆಯ ಅಪರಾಹ್ನದ ಹೊತ್ತಿಗೆ ಗರುಡ ಪಕ್ಷಿಯು ಆಗಸದಲ್ಲಿ ರಥದ ನೇರಕ್ಕೆ ಕಾಣಿಸಿಕೊಂಡು ನೇರದಿರುವ ಸ್ವಾಮಿಯ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅಚ್ಚರಿಯ ಆಧ್ಯಾತ್ಮಿಕ ದರ್ಶನಕ್ಕೆ ಕಾರಣವಾಗುವುದು ಒಂದು ಆಯಾಮ. ಇಲ್ಲಿ ವೈಚಾರಿಕತೆ ಮತ್ತು ಧಾರ್ಮಿಕತೆಯ ನೋಟ ಹಾಗೂ ಆಲೋಚನೆಗಳನ್ನು ಮೀರಿದ ಒಂದು ಜಾನಪದೀಯ ಒಂದು ಚೆಂದದ ಪ್ರಾಕೃತಿಕ ಮನೋ ವೈಭವಷ್ಟೇ ಆ ಕ್ಷಣದಲ್ಲಿ ಎಲ್ಲರ ಸಂಭ್ರಮದ ಮನಸ್ಸಿಗೆ.

ಹೀಗೆ ಆ ದಿನ ಅಗ್ರಹಾರದ ಜಾತ್ರೆಗೆ ಹೋಗಿ ತದನಂತರ ತಾಲ್ಲೂಕು ಕೇಂದ್ರ ಮೂಡಿಗೆರೆಯ ಬಸ್ ಸ್ಟ್ಯಾಂಡ್ ಗೆ ಬಂದು ತಮ್ತಮ್ಮ ಊರಿಗೆ ತೆರಳುವ ಬಸ್ಸು, ವ್ಯಾನು, ಜೀಪು, ಆಟೋ, ಕಾರಿನ ಮೂಲಕ ತೆರಳುವವರಿಗೆ ಬಸ್ಟ್ಯಾಂಡ್ ಸನಿಹದಲ್ಲೇ ಇರುವ ಮುಖ್ಯ ಅಂಚೆ ಕಛೇರಿಗೆ ಹೊಂದಿಕೊಂಡಂತಿರುವ ಕಾಡುಜಾತಿಯ ಮರವೊಂದರ ಮೇಲೆ ಸಾವಿರಾರು ಬೆಳ್ಳಕ್ಕಿಗಳು ಬಂದು ಕುಳಿತುಕೊಳ್ಳುತ್ತಿದ್ದ ದೃಶ್ಯ ಸಂಯೋಜನೆ. ಸೃಜನಶೀಲ ಮನಸ್ಸಿನ ಭಾವಕೆ ಇದೇನು ಪಟ್ಟಣದ ನಡುವೆ ಬೆಳ್ಳಕ್ಕಿ ಬಂಧು ಬಳಗ ಬಾಂಧವರದ್ದು ಸಮಾವೇಶವಾ? ಅಥವಾ ಅಗ್ರಹಾರದಲ್ಲಿ ಮನುಷ್ಯರಿಷ್ಟರೆಲ್ಲಾ ನೆರೆದು ನೆರವೇರಿಸಿದ ಸುಬ್ರಹ್ಮಣ್ಯ ಜಾತ್ರೆಯಂತಹ ಮಹೋತ್ಸವಾ? ಎಂಬಂತಹ ನೋಟ ರಂಜನೆ.

ಕಳೆದ ವರ್ಷವೂ ಇದೇ ಮರದ ಮೇಲೆ ಇಂತದ್ದೇ ಸಮಯದಲ್ಲಿ ಹೀಗೆ ಹಿಂಡುಹಿಂಡಾಗಿದ್ದ ಇಂತಹ ಬೆಳ್ಳಕ್ಕಿಗಳ ಸಮೂಹ ಸಮಾವೇಶವನ್ನು ಕೆಲವರೊಂದಿಗೆ ಬೆರಗುಗಣ್ಣಿನಿಂದ ನೋಡಿದ್ದ ನನಗೆ ಈ ವರ್ಷವೂ ಅದೇ ರೀತಿಯಲ್ಲಿ ಅನಿಸಿತು. ಅಲ್ಲೇ ನೋಡುತ್ತಿದ್ದವರಲ್ಲಿ ಕೆಲವರಂದರು – ‘ಓ ಇದು ಬೆಳ್ಳಕ್ಕಿಗಳ ಸಂತಾನೋತ್ಪತ್ತಿ ಕ್ರಿಯಾಕಾಲವೇ ಇರಬೇಕು. ಅದಕ್ಕಿದು ವಧು-ವರರ ಅನ್ವೇಷಣೆಯ ಕಾರ್ಯಕ್ರಮ!’ ನನ್ನ ಪಕ್ಕದಲ್ಲಿ ನಿಂತಿದ್ದ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿ – ”ಥೋ! ಇದ್ಯಾವುದೂ ಅಲ್ಲ. ಈ ಸಲದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಗುಪ್ತ ಸಮಾಲೋಚನೆಯ ಮೂಲಕ ನಡೆಸುತ್ತಿರುವ ರೆಸಾರ್ಟ್ ಮೀಟಿಂಗ್. ಸಾಲದ್ದಕ್ಕೆ ಪಕ್ಕದಲ್ಲೇ ‘ಪ್ರಮೋದ’ ಶಕ್ತಿಯ ‘ಸಂತೃಪ್ತಿ’ ನೀಡುವ ಬಾರ್ ಗಳು ಇಲ್ವೇ?” ಎಂದು ನಗಾಡಿದರು. ಇನ್ನೋರ್ವರು – “ಕಾಡು, ಮೇಡು, ಗದ್ದೆ, ಬಯಲು ಇಲ್ಲದ ಈ ಹೊತ್ತಲ್ಲಿ ನಗರದ ಜಂಜಡದಲ್ಲೇ ಕಾಲ ಕಳೆಯುವ ಅರಣ್ಯ ಇಲಾಖೆಯವರೇ ನಮ್ಮ ಬಗ್ಗೆಯೂ ಸ್ವಲ್ಪ ಗಮನ ಹರಿಸಿ ಎಂದು ಹೇಳಲು ಬಂದಿರುವಂತೆ ತೋರುತ್ತಿವೆ. ಇಲ್ಲೆ ಪಕ್ಕದಲ್ಲೇ ತಾಲ್ಲೂಕು ಅರಣ್ಯ ಕಛೇರಿಯೂ ಇದೆಯಲ್ಲ! ಹೀಗೂ ಆಲೋಚಿಸುವುದಕ್ಕೆ ಅವಕಾಶ ಇದೆ..” ಎಂದು ಮಾತಿಗಳೆದರು.

ಅದೇನೇ ಇರಲಿ ಕಳೆದೆರಡು ವರ್ಷಗಳಿಂದ ಈ ಮರದ ಮೇಲೆ ಒಂದೆರಡು ದಿನಗಳ ಕಾಲ ಕಳೆದು ಕವಿ ಕುವೆಂಪು ಪರಿಕಲ್ಪನೆಯ ‘ದೇವರು ರುಜು ಮಾಡಿದನು!’ ಎಂಬಂತೆ ಆಗಸದ ಹಾಳೆಯಲ್ಲಿ ತೇಲಿ ಹೋಗುವ ಇವುಗಳ ಪರಿ ಒಂಥರಾ ಬಾವಲಿಗಳು ಗುಂಪು ಗುಂಪಾಗಿ ಬಂದು ಸೇರಿ ಕಿಚಪಿಚ ಸುದೀರ್ಘ ವಾಸಗೈಯುವ ರೀತಿಯಂತೆ ತೋರುತ್ತದೆ. ಇವುಗಳು ಬಂದು ಕುಳಿತುಕೊಳ್ಳುವುದನ್ನು ಅಷ್ಟೇ ಕುತೂಹಲದಿಂದ ಗಮನಿಸುವ ಮೂಡಿಗೆರೆಯ ಸಹೃದಯರು ಅವುಗಳು ಹಾರಿ ಹೋದ ನಂತರದಲ್ಲಿ ಹಾಗೇ ಸುಮ್ಮನೇ ಮರೆತು ಬಿಡುವುದು ಸಹಜವೇ ಅಲ್ಲವೇ? ಅದಕ್ಕಾಗಿ ಒಂದು ಪ್ರೀತಿಯ ನಾಳೆಯ ನೆನಪಿಗೆ ಈ ಬರಹ. “ಬೆಳ್ಳಕ್ಕಿ ಬಂದಾವೋ ಮೂಡಣದ ಊರು ಮೂಡಿಗೆರೆಗೆ.. ಆತ್ಮೀಯ ಶುಭಾಶಯಗಳು ಅವುಗಳ ಪ್ರೀತಿಯ ಭಾವನೆಗೆ!”

ಆದರಿಂದು ಮಾರನೆಯ ದಿನ ಮೀಟಿಂಗ್ ಮುಗಿಸಿ ಬಿಳಿ ಬಿಳಿ ಕಕ್ಕ ಮಾಡಿ ಹಾರಿ ಹೋಗಿವೆ. ಎಲ್ಲಿಗೋ?! ಹಸುರೆಲೆಗೆ ಬಿಳಿ ಬಣ್ಣದ ಬಿಂದು ಬಿದ್ದಿದ್ದರೆ.. ಗೋಡೆಗೆ ಸುಣ್ಣ ಬಳಿಯುವಾಗ ಹನಿ ಹನಿ ಹಂತಂತೆ ತೋರುತ್ತದೆ. ಅದೇನೇ ಇರಲಿ ಬೆಳಕ್ಕಿ ಬೆರಗಿನಲ್ಲಿ ಮೂಡಿಗೆರೆಯ ಸಹೃದಯ ಆ ಒಂದು ಕ್ಷಣ ಮೈಮರೆತದ್ದು ಸುಳ್ಳಲ್ಲ!

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ