October 5, 2024

ಧನಂಜಯ ಜೀವಾಳ ಬಿ.ಕೆ.

ಮೊಲಕ್ಕೆ ಬಲೆ ಹಾಕಿದ್ದ ದೇವಪ್ಪ ತನ್ನ ಬಳಿಯಿದ್ದ ಗೋಣಿಚೀಲದೊಳಗೆ ಈಗಾಗಲೇ ಹಿಡಿದಿದ್ದ ಮೊಲವೊಂದನ್ನು ಹಿಂಗಾಲುಗಳನ್ನು ಹಿಡಿದೆತ್ತಿ ಹೊರತೆಗೆದು ತೋರಿಸಿದ. ಬೆಳಿಗ್ಗೆ- ಸಂಜೆ ಹೀಗೆ ದಿನಕ್ಕೆರಡು ಬಾರಿ ಬಲೆಯಲ್ಲಿ ಬಿದ್ದಿರಬಹುದಾದ ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಬರುವ ದೇವಪ್ಪ ನನಗೆ ರೈಲ್ವೇ ಹಾದಿಗೆ ಹೋಗುವ ದಾರಿಯೆಂದು ಆ ಈಚಲಹರದಲ್ಲಿ ಹಾಗೇ ಹಾವಿನಂತೆ ಗುತ್ತಿಗುತ್ತಿಗಳನ್ನು ಸುತ್ತಿ ಹೋಗುವ ದಾರಿಯೊಂದನ್ನು ತೋರಿಸಿ, “ದಾರಿ ನೋಡಿಕೊಂಡು ಹೋಗಿ; ಅಲ್ಲಲ್ಲಿ ಬಲೆಗಳಿರ್ತವೆ” ಎಂದ.

ಈಚಲಹರದಲ್ಲಿ ಮಾರ್ಗದರ್ಶಕನಾಗಿ ನನಗೆ ಸಿಕ್ಕಿದ ದೇವಪ್ಪನ ಹತ್ತಿರ ಹೆದ್ದಾರಿ ಪಕ್ಕದ ತಗಡಿನ ಬಾಗಿಲಿನ ಶೆಡ್ಡಿನ ಮನೆಯ ಮಲೆಯಾಳಿಯ ವಿಚಾರ ಪ್ರಸ್ತಾಪಿಸಿ, “ಅಲ್ಲಾರೀ, ದೇವಪ್ಪಾ; ಹಿಂದೆ ಮುಂದೆ ನಿರಂತರ ಕಾಡಿರುವಲ್ಲಿ ಆ ಮನುಷ್ಯ ಏನು ಮಾಡ್ತಾ ಇದ್ದಾನೆ ಇಬ್ಬರು ಹೆಂಗಸರನ್ನಿಟ್ಟುಕೊಂಡು?” ಎಂದೆ. “ಓ ಕುಂಯಿಮೋಣುವಿನ ವಿಚಾರಾನಾ? ಅವನೇನೂ ಇಲ್ಲಿಗೆ ಹಳಬನಲ್ಲ ನಾಲ್ಕು ವರ್ಷ ಆಯಿತಷ್ಟೆ ಇಲ್ಲಿಗೆ ಬಂದು”. ಕೇರಳದ ಬದುಕಿನ ಒತ್ತಡ ತಾಳಲಾರದೆ ಶುಂಠಿ ಬೆಳೆಯಲು ಇಲ್ಲಿಗೆ ಬಂದ. ಮಂಜಯ್ಯನ ಗದ್ದೇನ ಒಂದು ಬೆಳೆಗೆ ಎಕರೆಗೆ ಮೂರು ಸಾವಿರ ರೂಪಾಯಿಯಂತೆ ಆರು ಎಕರೆ ಗದ್ದೆಯನ್ನ ಗುತ್ತಿಗೆಗೆ ತೆಗೆದುಕೊಂಡ.

ಗದ್ದೆ ಏರಿಮೇಲೆ ಗುಡಾರ ಹಾಕಿಕೊಂಡು ಸಾವಿರಾರು ಖರ್ಚು ಮಾಡಿ ಕೆಲಸಗಾರರನ್ನು ಸಹಾ ಕೇರಳದಿಂದಲೇ ಕರೆಸಿ, ತನಗೇ ಅಚ್ಚರಿಯಾಗುವಂಥಾ ಅದ್ಭುತವಾದ ಬೆಳೆ ತೆಗೆಯುವುದೇ? ಸುತ್ತಮುತ್ತಲಿನ ಜಮೀನಿನವರು ಅಸೂಯೆಯಿಂದ ನೋಡುವಂತೆ ಶುಂಠಿ ಬೆಳೆಯನ್ನು ಬೆಳೆದ. ಕಳೆದ ಮೂರು ವರ್ಷಗಳಿಂದ ಇದೇ ರೀತಿ ಅಲೆಮಾರಿ ರೈತನಾಗಿ ಗದ್ದೆಯನ್ನು ಗುತ್ತಿಗೆಗೆ ಹಿಡಿದು ಶುಂಠಿ ಬೆಳೆ ಮಾಡಿ ಕೇರಳದ ಬಡಗರದಲ್ಲಿದ್ದ ಹೆಂಡತಿಯ ಕಡೆಯಿಂದ ಬಳುವಳಿಯಾಗಿ ಸಿಕ್ಕಿದ್ದ ಮನೆ-ಮಠವನ್ನೆಲ್ಲಾ ಮಾರಿ, ಕಳೆದುಕೊಂಡದನ್ನೆಲ್ಲಾ ಕಳೆದುಕೊಂಡಲ್ಲೇ ಹುಡುಕಬೇಕೆಂದು ಹುಚ್ಚು ಆವೇಶದಲ್ಲಿ ಮಂಜಯ್ಯನ ಗದ್ದೆಗೆ ಎಕರೆಗೆ ಆಗಿನ ಗುತ್ತಿಗೆ ದರದಲ್ಲೆ ಹೆಚ್ಚೆನಿಸುವ ಎಕರೆಗೆ ಮೂರು ಸಾವಿರ ಕೊಟು,್ಟ ಬದುಕಿದರೆ ಇದರಿಂದಲೇ ಎಂದು ನಿರ್ಧರಿಸಿದ್ದ. ದೇವರೇ ಗತಿ ಎಂಬಂತೆ ಇಂದೇ ನನ್ನ ಕೊನೆಯ ದಿನ ಎಂದು ಅವುಡುಗಚ್ಚಿಕೊಂಡು ಹೆಂಡತಿ-ಮಗಳು, ಕೆಲಸಗಾರರೊಡನೆ ಸೇರಿ ಮೈಯಲ್ಲಿದ್ದ ಮಾಂಸವೆಲ್ಲಾ ಕರಗುವಂತೆ ಬೆಳಿಗ್ಗೆ ಐದೂವರೆಯಿಂದ ಸಂಜೆ ಏಳರವರೆಗೆ ಪುರಸೊತ್ತಿಲ್ಲದಂತೆ ಗೇಯ್ದೂ-ಗೇಯ್ದೂ ಹಣ್ಣಾಗಿ ಹೋಗಿದ್ದ.

ಇತ್ತ ಮಂಜಯ್ಯ; ತನ್ನಲಿದ್ದ ಆರು ಎಕರೆ ಗದ್ದೆಯನ್ನು ಈ ಕುಂಯಿಮೋಣುವಿಗೆ ಗುತ್ತಿಗೆ ಕೊಟ್ಟು ದಿನಾ ಬೆಳಗಾಗೆದ್ದರೆ ಪೇಟೆಗೆ ಹೋಗುವುದು, ಸಂಜೆ ಮನೆಗೆ ಬಂದು ಹೆಂಡತಿ ಎದುರು ತಾನು ದೆಹಲಿಯಲ್ಲಿರುವ ಪಾರ್ಲಿಮೆಂಟ್‍ಗೇ ಹೋಗಿದ್ದಿನೇನೋ ಎಂಬಂತೆ ಬಡಾಯಿ ಬಾರಿಸುತ್ತಿದ್ದ. ತಾಲ್ಲೂಕು ಕೇಂದ್ರವಾಗಿದ್ದ ಮೂಡಿಗೆರೆಯಲ್ಲಿದ್ದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಒಂದಾದ ನಂತರ ಒಂದಾದಂತೆ ಭೇಟಿ ನೀಡುವುದು, ಕೃಷಿ ಇಲಾಖೆಯಲ್ಲಿ ದೊರೆಯುವ ಸಬ್ಸಿಡಿ, ಸಲಕರಣೆ, ಗೊಬ್ಬರ, ಕೀಟನಾಶಕಗಳನ್ನು ವಿಚಾರಿಸುವುದು, ಸೆಕ್ರೆಟರಿ ಮನೆಗೆ ಹೋಗಿ ಪಹಣಿ ಬರೆಸಿಕೊಂಡು ಬರುವುದು, ಆ ಪಹಣಿ ಲಗತ್ತಿಸಿ ಒಂದು ಅರ್ಜಿ ಕೊಡುವುದು ಮತ್ತೆ ತೋಟಗಾರಿಕಾ ಇಲಾಖೆಗೆ ಹೋಗುವುದು, ಅಲ್ಲಿ ಸಿಗಬಹುದಾದ ಸಪೋಟಾ ಗಿಡ, ತೆಂಗಿನ ಗಿಡಗಳಿಗೆ ಅರ್ಜಿ ಗುಜರಾಯಿಸಿ ಅವನ್ನು ಮಾರಲು ಯಾರಾದರೂ ಗಿರಾಕಿಗಳು ಸಿಗುತ್ತಾರಾ ಎಂದು ಹುಡುಕುವುದು, ಮತ್ತೆ ರೇಷ್ಮೆ ಇಲಾಖೆ, ಕಾಫಿ ಬೋರ್ಡ್, ಸಂಬಾರ ಮಂಡಳಿಗಳಿಗೆ ಭೇಟಿ ನೀಡಿ ಅಲ್ಲಿನ ಸವಲತ್ತುಗಳು, ಸಿಗುವ ಗಿಡಗಳು, ಔಷಧಿಗಳನ್ನು ಪಡೆಯುವ ಬಗೆಯನ್ನು ವಿಚಾರಿಸಿ ಅರ್ಜಿ ಗುಜರಾಯಿಸುವುದು ಮಾಡುತ್ತಿದ್ದ.

ಇದನ್ನೆಲ್ಲಾ ಅವನೇನೂ ತನ್ನ ಜಮೀನಿಗೆ ನೆಡಲು, ಉಪಯೋಗಿಸಲು ಬಳಸುತ್ತಿರಲಿಲ್ಲ. ತನಗಿದ್ದ ಮೂರೆಕೆರೆ ಕಾಫಿ ಕಂ ಏಲಕ್ಕಿ-ಅಡಕೆ ತೋಟವನ್ನು ಹಾಳುಬಿಟ್ಟು ವರ್ಷ ಹತ್ತೇ ಕಳೆದಿತ್ತು. ದಿನದ ಹೆಚ್ಚಿನ ಸಮಯದಲ್ಲಿ ಪೂಟ್‍ಲಾಯರಿಕೆ ಮಾಡಿಕೊಂಡು, ಅಲ್ಲಲ್ಲಿ ಪಟ್ಟಾಂಗ ಹೊಡೆದುಕೊಂಡು ಕಾಲಕಳೆಯುತ್ತಿದ್ದ. ತನ್ನಂತೆ ಇದೇ ರೀತಿಯ ಖಯಾಲಿಯನ್ನು ಉದ್ಯೋಗ ಮಾಡಿಕೊಂಡಿದವರನ್ನು ಗೆಳೆಯರನ್ನಾಗಿ ಮಾಡಿಕೊಂಡು ಅಲ್ಲಲ್ಲಿ ಸರ್ಕಾರಿ ಕಛೇರಿಗಳಿಗೆ ಲೋಕಾಯುಕ್ತರಂತೆ ಭೇಟಿ ನೀಡುವ ಕಲೆಯನ್ನು ಮೈಗೂಡಿಸಿಕೊಂಡಿದ್ದ. ಕೆಲ ಸರ್ಕಾರಿ ನೌಕರರನ್ನು, ಅಧಿಕಾರಿಗಳನ್ನು ಹಾಗೂ ಹೀಗೂ ಪುಸಲಾಯಿಸಿ ನಿಜವಾಗಿಯೂ ಕೃಷಿ ಮಾಡಿಕೊಂಡು ಸಬ್ಸಿಡಿ, ಸರ್ಕಾರದ ನೆರವಿನ ಅಗತ್ಯವಿರುವ ಪ್ರಾಮಾಣಿಕ ರೈತರನ್ನು ಈ ಸರ್ಕಾರಿ ಕಛೇರಿಗಳ ಹತ್ತಿರಕ್ಕೂ ಸುಳಿಯದಂತೆ ಮಾಡಿಬಿಟ್ಟಿದ್ದ.

ಮೂರೂ ಬಿಟ್ಟವರು ಊರಿಗೇ ದೊಡ್ಡವರು ಅಂತಾರಲ್ಲಾ ಹಾಗೇ ಈ ಸಬ್ಸಿಡಿ ಮಾಫಿಯಾ ನಾಯಕ ಮಂಜಯ್ಯ ಆಯಕಟ್ಟಿನ ಅಧಿಕಾರಿಯನ್ನು ಬುಕ್ ಮಾಡಿಕೊಂಡು, ಅವರಿಗೂ ತಿನ್ನಲು ಬಿಟ್ಟು, ತಾನೂ ನುಂಗಿ, ತನ್ನ ಸಂಗಡಿಗರಿಗೂ ಸಾಕಷ್ಟು ಗಳಿಸಲು ಅವಕಾಶ ಮಾಡಿಕೊಟ್ಟಿದ್ದ. ಸರ್ಕಾರಿ ಲೆಕ್ಕದಲ್ಲಿ ರೈತರಿಗೆ ಸೇರಬೇಕಾಗಿದ್ದ ಲಕ್ಷಗಟ್ಟಲೆ ಮೌಲ್ಯದ ಸವಲತ್ತುಗಳು ಬರೀ ಸಭೆ-ಸಮಾರಂಭಗಳಲ್ಲಿ ಫಲಾನುಭವಿಗಳಿಗೆ ಸಾಂಕೇತಿಕ ಸಹಾಯಧನ, ಪೇಪರ್‍ಗಳಲ್ಲಿ ಸುದ್ದಿ, ಕಛೇರಿಗಳ ಅಂಕಿ ಅಂಶಗಳಿಗೆ ಮಾತ್ರ ಸೀಮಿತವಾಗಿತ್ತು. ಕೆಲ ಸೋಮಾರಿ, ಪೇಟೆ ಸುತ್ತುವ ಖಯಾಲಿಯ ಈ ರೀತಿಯ ಮಂಜಯ್ಯನ ತರಹದ ಸಮಯಸಾಧಕ ಪಾರ್ಟ್‍ಟೈಮ್ ರೈತರು ಇಡೀ ರೈತ ಸಮುದಾಯದ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತೆ ನಡೆದುಕೊಳ್ಳುತ್ತಿದ್ದರು. ಖದೀಮರು ತಮ್ಮ ಸುತ್ತಾ ಒಂದು ಪರತಂತ್ರಜೀವಿಗಳ ಸಮೂಹವನ್ನೇ ಸೃಷ್ಟಿಸಿಕೊಂಡು ಅವರಿಂದಲೇ ಸಭೆ-ಸಮಾರಂಭಗಳಲ್ಲಿ ಹಾರ-ತುರಾಯಿ, ಪರಾಕುಗಳನ್ನು ಹಾಕಿಸಿಕೊಳ್ಳುವುದು ಶತಶತಮಾನಗಳಿಂದಲೂ ನಡೆದು ಬಂದದ್ದೇ.

ಅವತ್ತು ದೆಬ್ರಳ್ಳಿ ಊರೊಟ್ಟಿನ ಚೌಡಿ ಹಬ್ಬ. ಕಾಡ್ಕಣದ ಪಕ್ಕದ ಕಾಫಿತೋಟದ ಒಳಗಿನ ಹಲಸಿನಮರದ ಬುಡದಲ್ಲಿ ಪೂಜಿಸಲಾಗುವ ದೇವರಕಲ್ಲಿಗೆ ಹಂದಿ ಬಲಿಕೊಟ್ಟು, ದೇವರಿಗೆ ನೈವೇದ್ಯ ಮಾಡಿ, ಊರೆಲ್ಲರಿಗೂ ಬಾಡಿನೂಟ ಹಾಕುವ ಸಡಗರದ ಸಂಭ್ರಮ. ಹಲಸಿನಮರದ ಬುಡದ ಪೂರ್ವಭಾಗದಲ್ಲಿ ಮೂರಡಿ ಮೂರಡಿ ಅಳತೆಯ ಚಿಕ್ಕ ಚಪ್ಪರವನ್ನು ಹಾಕಿ ಮೂರು ಸುತ್ತಲೂ ಬೈನೇಉಲಿಯ ಎಲೆಯನ್ನು ಗೋಡೆಯಂತೆ ಕಟ್ಟಲಾಗಿತ್ತು. ದೇವರ ಕಲ್ಲಿನ ಎದುರಿನಲ್ಲಿ ಹಾಲುವಾಣ ಮರದ ಗೆಲ್ಲಿನಲ್ಲಿ + ಆಕಾರದಲ್ಲಿ ಆಕೃತಿಯೊಂದನ್ನು ರಚಿಸಿ, ಅದರ ಬುಡದಲ್ಲಿ ಬಾಳೆಲೆಯೊಂದನ್ನು ಹಾಸಿ, ಸ್ವಲ್ಪ ಅಕ್ಕಿ ಹರಡಿ, ಆಕಾರಕ್ಕೆ ಅರಸಿನ ಕುಂಕುಮ ಹಚ್ಚಿ, ಕಾಲ್ಕಟ್ಟಿದ ಹಂದಿಯನ್ನು, ದೈಹಿಕವಾಗಿ ಬಲವಾಗಿದ್ದ ಮೂರ್ನಾಲ್ಕು ಜನ ಬಲವಾಗಿ ಹಿಡಿದುಕೊಂಡರು. ಊರಿಗೂರೇ ದಿಗಿಲುಗೊಳ್ಳುವಂತೆ ಅರಚುವ ಹಂದಿಯ ಬಾಯನ್ನು ಬಲವಾದ ಹಗ್ಗದಿಂದ ಬಂಧಿಸಿದ್ದರು. ಬಲಿಕೊಡುವ ಸಂದರ್ಭಕ್ಕೆ ಕಾಲು ಮತ್ತು ಬಾಯಿಗೆ ಕಟ್ಟಿದ್ದ ಹಗ್ಗವನ್ನು ಕತ್ತಿಯಿಂದ ಕೂಯ್ದು ಕಟ್ಟನ್ನು ಸಡಿಲಗೊಳಿಸಿ, ಕುತ್ತಿಗೆಯ ಭಾಗವು ಬಾಳೆಲೆಯ ಮೇಲೆ ಬಂದು, ಕತ್ತು ಕತ್ತರಿಸಿದಾಗ ಹೊರಚೆಲ್ಲುವ ರಕ್ತ ಆ + ಆಕಾರದ ಮೇಲೆ ಸಿಂಚನವಾಗುವಂತೆ ಹಿಡಿದುಕೊಳ್ಳಲು ನಾರಾಯಣ, ಜಗದೀಶ, ಮಂಜುನಾಥ, ಸಣ್ಣೇಗೌಡ ಸಿದ್ದರಾದರು.

ಬೆಳಗಿನಿಂದಲೂ ಮಡಿಯಿದ್ದು ಆಹಾರ ಸೇವಿಸದೇ ‘ಹಸ್ಕೊಂಡಿರುವ’ ಬೆಳ್ಳಾಚಾರಿ ಬಾಯಿಗೆ ಬಟ್ಟೆ ಕಟ್ಟಿಕೊಂಡು, ಹರಿತವಾದ ಕತ್ತಿಯಿಂದ ಹಂದಿಯ ಕುತ್ತಿಗೆಯನ್ನು ಚರಚರನೆ ಕೂಯ್ದು ಬಲಿಕೊಡುವ ಶಾಸ್ತ್ರ ಪೂರೈಸಿದ. ಕುಕ್ಕರನೆ ಕೂತುಕೊಂಡು ಹಂದಿ ಬಾಯಿಯನ್ನು ಎರಡೂ ಅಂಗೈಯೊಳಗೆ ಸೇರಿಸಿಕೊಂಡು ಹಿಸುಕಿ ಹಿಡಿದುಕೊಂಡಿದ್ದ ನಾರಾಯಣ ಉಟ್ಟಿದ್ದ ಲುಂಗಿ ಅದ್ಹೆಂಗೋ ಸಡಿಲವಾಗಿ ಬಿಚ್ಚಿಕೊಂಡಿತು. ಕೂತವನಿಗೆ ಎದ್ದು ನಿಲ್ಲಲು ಸರಿಯಾದ ಬ್ಯಾಲೆನ್ಸ್ ಸಿಕ್ಕದೇ ಹಂದಿ ಮುಷ್ಣಿ ಹಿಡಿದಿದ್ದ ಕೈಯನ್ನು ನೆಲಕ್ಕೂ ಊರಲಾಗದೇ ಮೊಣಕೈಯನ್ನೇ ನೆಲಕ್ಕೆ ಕೊಟ್ಟು ನಿಲ್ಲಲು ತಡಬಡಾಯಿಸಿದ. ಹಂಗೂ ಹಿಂಗೂ ಮಾಡಿ ಎದ್ದವನ ಕಾಲಿನ ಸುತ್ತ ಉಟ್ಟಿದ್ದ ಲುಂಗಿ ಸಿಂಬಿ ಸುತ್ತಿದಂತೆ ಬಿದ್ದು ಮೂರ್ನಾಲ್ಕು ತೂತಾಗಿದ್ದ ಹಳೇ ಪೂಂಬುಕಾರ್ ಚಡ್ಡಿಯೇ ಅವನಿಗೆ ಅಂತಿಮ ಆಸರೆಯಾಯ್ತು.

ಪ್ರತೀ ಚೌಡೀ ಹಬ್ಬದಲ್ಲೂ ಯಾವುದಾದರೂ ಕಾರಣಕ್ಕೆ ಜಗಳ ತೆಗೆದು ಕಿತಾಪತಿ ಮಾಡುತಿದ್ದ ಉಮಾಪತಿ ಸುಮ್ಮನಿರಲಾರದೇ “ಯಂತಾ ಶಾಟುದ್ ಲುಂಗಿ ಕಟ್ತೀರಿ ಮಾರಾಯ” ಎಂದ. ಬೆಳಿಗ್ಗೆಯಿಂದಲೂ ಚೌಡಿಬನದ ಅಂಗಳವನ್ನು ಹೆರೆದು ಅಚ್ಚುಕಟ್ಟು ಮಾಡಿ, ಪಕ್ಕದ ಬೀಜುವಳ್ಳಿಯ ಯಲ್ಲಪ್ಪನ ಹಂದಿ ಫಾರಮ್ಮಿನಿಂದ ಹಂದಿಯನ್ನು ತರಲು ಹೋಗಿದ್ದ ನಾರಾಯಣನಿಗೆ ಉಮಾಪತಿಯ ಮಾತಿನಿಂದ ರೇಗಿಹೋಯ್ತು. ಈ ಹಂದಿ ಕುಯ್ಯಲು ಕೂತಾಗ ಅವನ ಅಂಡರ್ವೇರ್ ಜೇಬಿನಲ್ಲಿದ್ದ ಬೀಡಿಯ ಕಟ್ಟು ಬೇರೆ ಪಜ್ಜಿಯಾಗಿ ಬೀಡಿಗಳು ಮುರಿದುಹೋಗಿದ್ದವು. “ನನ್ಮಕ್ಳಾ, ನೀವು ಅಣ್ತಮ್ದುರು ಬರೀ ಯಜ್ಮಾನ್ಕೆ ಕಿಸಿಯಕ್ಕೆ ಬರ್ಬೇಡಿ. ಮುಕ್ಳಿ ಬಗ್ಸಿ ಊರೊಟ್ಟಿನ ಕೆಲ್ಸಮಾಡಿ” ಎಂದ.

ಇಸ್ಪೀಟಾಟ, ಮಾಂಸದೂಟ ಎಂದು ಸುಮಾರಾಗಿ ಕಳ್ಳಭಟ್ಟಿಯನ್ನು ಏರಿಸಿಕೊಂಡೇ ಬಂದಿದ್ದ ಉಮಾಪತಿಗೆ ಅಪಮಾನವಾದಂತಾಗಿ “ನಿನ್ನವ್ವನ್, ಊರೊಟ್ಟಿನ ಚೌಡಿ ಎಂದ್ರೆ ನಿನ್ನಪ್ಪನ್ದಾ?” ಎಂದವನೇ ಬಡಿದಾಡಲು ಪಕ್ಕದಲ್ಲಿದ್ದ ಹಾಲುವಾಣ ಗೂಟವನ್ನು ಕಿತ್ತುಕೊಳ್ಳಲು ಅಣಿಯಾದ. ಇತ್ತ ನಾರಾಯಣ ಅಡುಗೆ ಒಲೆಗೆ ಹಾಕಲು ತಂದಿದ್ದ ಸೌದೆಯಲ್ಲಿದ್ದ ಸರ್ರಿಯಾದ ದಡಿಯನ್ನೇ ಹಿಡಿದು ನಿಂತ. ಅಷ್ಟರಲ್ಲಿ ಬೆಳ್ಳಾಚಾರಿ, “ನೀವು ಹಿಂಗೆ ಹೊಡೆದಾಡದಾದ್ರೆ ಈ ಚೌಡಿ ಮಾರಿನೆಲ್ಲ ಯಾಕೆ ಮಾಡ್ತೀರಿ? ನಮ್ಮನ್ನೂ ಬೆಳಗಿನಿಂದ ಉಪಾಸ ಕೆಡಗಿ, ಮುಂದಿನ ವರ್ಷದಿಂದ ನಾನು ಈ ಚೌಡಿ ಪೂಜಕ್ಕೇ ಬರಲ್ಲ, ಓ ನಾಗೇಸಣ್ಣ, ಪ್ರಕಾಸಣ್ಣ ಬನ್ನಿ ಬನ್ನಿ; ಹೊಡ್ದಾಟ ಬಿಡ್ಸಿ”, ಎಂದು ಬಾಯ್ಮಾಡಕ್ಕೆ ಶುರೂ ಮಾಡಿದ.

ನಾಲ್ಕಾರು ಜನ ಬಂದು ಉಮಾಪತಿಗೆ ಉಗಿದು, “ನೋಡಾ ಮಾರಾಯ, ಊರೊಟ್ಟಿನ ಚೌಡಿಗೆ ಬಂದೀಯ, ಉಂಡ್ಕಂಡ್ ಹೋಗ್ಬೇಕಷ್ಟೆ. ಅವ ಲುಂಗಿನಾದ್ರೂ ಉಡ್ಲಿ ಇಲ್ಲಾ ಹಂಗೇನಾದ್ರೂ ಬರ್ಲಿ, ಅದು ನಿಂಗೆ ಬೇಡ. ಮುಂದಿನ ವರ್ಷ ಊರೊಟ್ಟಿನ ಕೆಲ್ಸ ನಿಮ್ ಪಾಲಿಂದು ತಾನೇ, ಆಗ ನೀನ್ಹೇಗೆ ಮಾಡ್ತೀಯ ನೋಡನಂತೆ” ಎಂದು ಗದರಿಸಿದರು.
ಪ್ರಳಯಾಂತಕ ಕಿತಾಪತಿಯಾದ ಈ ಉಮಾಪತಿ ತನ್ನ ಪರ ಯಾರೂ ಮಾತನಾಡದ್ದನ್ನು ಕಂಡು ಸುಮ್ಮನಾದರೂ ಗುರುಗುರು ಎನ್ನುತ್ತಲೇ ಇದ್ದ.

ಎಂಟ್ಹತ್ತು ಜನ ಸೇರಿ ಹಂದಿ ರಿಪೇರಿ ಮಾಡಿ, ಸುಟ್ಟು ಹೆರೆದು, ಬಾಳೆಲೆಯ ಹಂಪುಹಾಕಿ, ಅಡುಗೆಗೆ ಮಾಂಸವನ್ನು ಸಿದ್ದಪಡಿಸಿದರು. ಹಂದಿಯ ಈರಿಯನ್ನು ತೆಳುವಾದ ಹಸಿಕೋಲೊಂದಕ್ಕೆ ಪೋಣಿಸಿ ಉಪ್ಪು ಸವರಿ ಸುಟ್ಟು, ಆ ಕೋಲನ್ನು ಚಪ್ಪರದ ಎರಡೂ ಬದಿಯ ನೆಲಕ್ಕೆ ಚುಚ್ಚಲಾಯ್ತು. ಹಸಿ ಕೋಲಿಗೆ ಎಣ್ಣೆಯಲ್ಲಿ ನೆನೆಸಿದ ಹತ್ತಿಯ ಮಡಿಬಟ್ಟೆಯನ್ನು ಸುತ್ತಿ ಅದನ್ನು ದೀಪದಂತೆ ಉರಿಸಲಾಯ್ತು. ದೇವರಿಗೆ ನೈವೇದ್ಯ ಮಾಡಲು ಖಾರಾ ಹಾಕದೇ ಬರೀ ಉಪ್ಪು ಮತ್ತು ಅರಸಿನಪುಡಿ ಹಾಕಿ ಮಾಂಸ ಬೇಯಿಸಿದ ನಂತರ, ಬಿಸಿಬಿಸೀ ಕೆಂಪಕ್ಕಿಯ ಅನ್ನದ ಜೊತೆ ದೇವರಿಗೆ ಅರ್ಪಿಸಲಾಯ್ತು.

ಬರೀ ಉಪ್ಪು, ಅರಿಸಿನದೊಂದಿಗೆ ಬೇಯಿಸಿದ್ದ ಮಾಂಸಕ್ಕೆ ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟು, ಕೆಂಪುಮೆಣಸಿನಪುಡಿ, ಕಾಳುಮೆಣಸಿನಪುಡಿ, ಹುರಿದ ಧನಿಯಾಪುಡಿಯನ್ನು ಬೆರೆಸಿ, ಒಂದಷ್ಟು ಹೊತ್ತು ಬೇಯಿಸಿ ಊರ ಜನರಿಗೆ ಬಡಿಸಲು ಅಣಿಮಾಡಲಾಯ್ತು. ಕಾಫಿತೋಟದ ಮಧ್ಯದ ರಸ್ತೆಯ ಎರಡೂ ಬದಿಯಲ್ಲಿ ಎದುರು ಬದುರು ಸಾಲಿನಲ್ಲಿ ಕುಳಿತ ಊರಜನರಿಗೆ ಚೌಡಿಹಬ್ಬದ ಭೋಜನವನ್ನು ಹಂದಿ ಉಪ್ಸಾರು, ಕೋಳಿ ಉಪ್ಸಾರು, ಮಸಾಲೆ ಮಿಶ್ರಣದ ಹಂದಿ ಹುರಿತೊಂಡಿನೊಂದಿಗೆ ಬಡಿಸುತ್ತಿದ್ದರು. ನೂರಾರು ಜನ ಸೇರಿದ್ದರಿಂದ ಎಲ್ಲರಿಗೂ ಒಂದೇಸಲ ಊಟಕ್ಕೆ ಕೂರಲು ಸ್ಥಳಾವಕಾಶ ಇಲ್ಲದ್ದರಿಂದ ಮೂವ್ವತ್ಮೂವ್ವತ್ತು ಜನರ ಎರಡು ಹಂತಿ ಊಟ ಮಾತ್ರ ಆಗಿತ್ತು.

ಅಷ್ಟರಲ್ಲಿ ಕಾಫಿರೂಟಿನ ಬದಿಯಲ್ಲಿ ಇಸ್ಪೀಟಾಡುತ್ತಿದ್ದವರ ಗುಂಪಿನಿಂದ ಯಾರೋ ಎರಡಡಿ ಉದ್ದದ ಕೋಲು ಸೌದೆ ತುಂಡನ್ನು ಊಟಮಾಡಿ ಕೈತೊಳೆಯುತ್ತಿದ್ದವರ ಗುಂಪಿನತ್ತ ಇಸ್ಪೀಟಿನಲ್ಲಿ ದುಡ್ಡು ಕಳೆದುಕೊಂಡ ಹತಾಶೆಗೋ, ಊಟ ತಡವಾಗುತ್ತಿದೆ ಎಂಬ ಸಿಟ್ಟಿಗೋ, ಜಗಳ ಹತ್ತಿಸಿ ತಮಾಷೆ ನೋಡುವ ತೆವಲಿಗೋ ಎಸೆದ. ಎಸೆದ ಆ ಕೋಲು ಗುರಿತಪ್ಪಿ ದಿಕ್ಕಾಪಾಲಾಗಿ ಬೇಲಿ ಪಕ್ಕದ ಪನ್ನೇರಲೆ ಮರದಲ್ಲಿದ್ದ ಬ್ಯಾಣದ ಕೊಟ್ಟೆಗೆ ಬಡಿದು, ಅರ್ಧ ಕೊಟ್ಟೆಯನ್ನೇ ಹರಿದು ಹಾಕಿದಲ್ಲದೇ ರಸ್ತೆ ಪಕ್ಕ ಮಾತನಾಡ್ತಾ ನಿಂತಿದ್ದವರ ಮುಸುಡಿಗೇ ಹೋಗಿ ಬಡಿಯಿತು.

“ಯಾವನ್ರಲ ಅವ್ನು, …..” ಕೋಲಿನ ಪೆಟ್ಟು ತಿಂದು ಒಡೆದ ತುಟಿಯನ್ನು ಕೈಯಲ್ಲಿ ಒತ್ತಿಕೊಂಡು ತಿರುಗಿ ನೋಡಿದ ಶ್ರೀನಿವಾಸನಿಗೆ ರ್ರುಮ್ ರ್ರುಮ್ ಎಂದು ಎರಡು ಬ್ಯಾಣಗಳು ಕಣ್ಣಿನ ಹುಬ್ಬಿನ ಮೇಲೊಂದು ಕುತ್ತಿಗೆಗೆ ಬಳಿಗೊಂದು ಬಾರಿಸಿಯೇಬಿಟ್ಟವು. ಕಾಫಿತೋಟದೊಳಗಿನ ತೊಟ್ಟಿಲು ಗುಂಡಿಯಲ್ಲಿ ಅಡಗಿಸಿಟ್ಟು, ಹಂಚಿಕೊಂಡು ಭಟ್ಟಿಸರಾಯಿ ಸೇವಿಸುತಿದ್ದ ಹತ್ತಾರು ಮಂದಿಯ ಮುಖಾಮೂತಿ ಎನ್ನದೇ ಬ್ಯಾಣಗಳು ದಾಳಿಮಾಡಿದವು. ಇಸ್ಪೀಟಾಡುತಿದ್ದ ರಾಜ, ಗುಲಾಮ, ಕಳವಾರ, ಜೋಕರ್‍ಗಳು ತಿಕದ ಸುತ್ತ ಸುತ್ತಿಕೊಂಡಿದ್ದ ಲುಂಗಿಯನ್ನು ಬಿಚ್ಚಿಕೊಂಡು ತಲೆಗೆ ಮುಸುಗು ಹಾಕಿಕೊಂಡು ಈ ತೊಂಡೂ ಬೇಡ ಚೌಡೀನೂ ಬೇಡ ಎಂದು ರಾಮ್ನಳ್ಳಿ ಗದ್ದೆ ಹಾರಿ ದಿಕ್ಕಾಪಾಲಾದರು. ಅಷ್ಟರಲ್ಲಿ ಮಂಜಯ್ಯ ಅಂಡ್ ಗ್ಯಾಂಗ್ ಚೌಡೀಹಬ್ಬದ ಕೊನೆಯ ಹಂತಿಯ ಊಟಕ್ಕಾಗಿ ಸೋಡಾ ಬೆನ್ನಣ್ಣನ ಆಟೋದಿಂದ ಕೆಳಗಿಳಿದವರೇ ಬ್ಯಾಣದ ದಾಳಿಗೆ ತಲೆಕೆಟ್ಟವರಂತಾಗಿ ಹಿಂದಿರುಗಿ ಓಡಿದವರೇ ತಾವು ಬಂದಿದ್ದ ಆಟೋ ಹತ್ತಲುಪಕ್ರಮಿಸಿದರು. ಆ ಗದ್ದಲಮಯ ಗೊಂದಲವನ್ನು ಕಂಡು ಸೋಡಾ ಬೆನ್ನಣ್ಣ ಸತ್ತೆನೋ ಕೆಟ್ಟೆನೋ ಎಂದುಕೊಂಡು ಅಷ್ಟರಲ್ಲಾಗಲೇ ಆಟೋದೊಂದಿಗೆ ಪಂಪ್‍ಹೌಸ್ ಅಪ್ಪನ್ನು ದಾಟಿಯಾಗಿತ್ತು.

********************

ಅದೊಂದು ದಿನ ಮಂಜಯ್ಯನ ಪಟಾಲಂ ತೋಟಗಾರಿಕೆ ಇಲಾಖೆಯ ಕಾಳುಮೆಣಸಿನ ಬುಟ್ಟಿ ವಿತರಣೆಯಲ್ಲಿ ತಮ್ಮೆಲ್ಲರ ಹೆಸರನ್ನು ನೋಂದಾಯಿಸಿಕೊಂಡು, ಎಲ್ಲರೂ ಸೇರಿ ಗುಂಪಾಗಿ ಬಂದಿದ್ದರು. ಪ್ರತಿ ರೈತರಿಗೂ ತಲಾ ನೂರೈವತ್ತು ಗಿಡಗಳನ್ನು ವಿತರಿಸಲು ಯೋಜಿಸಲಾಗಿತ್ತು. ಗಿಡಗಳನ್ನು ಆಗ ತಾನೆ ಗುಲ್ಲನ್ಪೇಟೆ ಬಳಿಯ ಬಾಸನಕಾನಿನಿಂದ ತರಿಸಿ ಇಳಿಸಿ ಜೋಡಿಸಿಡುತ್ತಿದ್ದರು. ಮುಕ್ಕಾಲು ಇಳಿಸಿಡುತ್ತಿದ್ದಂತೆ ಮಂಜಯ್ಯ ಅಲ್ಲಿಯ ಸೂಪರ್‍ವೈಜರ್ ಜೊತೆ ಮಾತುಕತೆಗಿಳಿದ. ತನ್ನ ಬಳಿ ನಲವತ್ತು ರೈತರ ಪಟ್ಟಿ ಇದೆ. ಆರು ಸಾವಿರ ಗಿಡಗಳನ್ನು ಕೆಳಗಿಳಿಸದೇ ಇದೇ ಲಾರಿಯಲ್ಲಿ ತಮಗೇ ಕಳಿಸಿಕೊಡಬೇಕೆಂದು ತಾಕೀತು ಮಾಡತೊಡಗಿದ. ಆಲ್ದೂರಿನ ಲಾರಿಯವ ತನಗೆ ಕಡೂರಿಗೆ ಕೊಬ್ಬರಿ ಲೋಡಿಗೆ ಹೋಗುವುದಿದೆ ಎಂದು ಬಾಯಾಡುತ್ತಿದ್ದ. ಸೂಪರ್‍ವೈಜರ್ ಡ್ರೈವರ್‍ನ ಮನವೊಲಿಸಲು ಪ್ರಯತ್ನಿಸುತ್ತಿರುವಷ್ಟರಲ್ಲಿ ಅಲ್ಲಿಗೆ ಬಂದ ಗುಣೀಬೈಲಿನ ಕುಮಾರ ಮತ್ತವನ ಸಂಗಡಿಗರು ‘ಯಾರಿಗೂ ಗಿಡ ಕೊಡಕೂಡದು. ಯಾರಾದರೂ ಬುಟ್ಟಿಗೆ ಕೈಹಾಕಿದರೆ ಚಿಂದಿಮಾಡ್ಹಾಕ್ತೀವಿ’ ಎಂದರು.

ಕುಮಾರನ ಗುಂಪಿನಲ್ಲಿದ್ದುದು ಎಂಟು ಜನ. ಈ ಮಂಜಯ್ಯನ ಜೊತೆ ಇದ್ದ ಸುಮಾರು ಇಪ್ಪತ್ತು ಜನ ಕೈಯಲ್ಲಿದ್ದ ಬ್ಯಾಗು-ಛತ್ರಿ ಮುಂತಾದುವನ್ನು ಬದಿಗಿರಿಸಿ ತೋಳೇರಿಸಿ ಗುದ್ದಾಟಕ್ಕೆ ಸಿದ್ಧರಾದರು. “ಸರ್ಕಾರ ಕೊಡೋ ಸವಲತ್ತಿಗೆ ಪಂಚಾಯಿತಿ ಮೆಂಬರ್‍ಗಳ ಪತ್ರ ಬೇಕಂತೆ! ಆ ನನ್ನಮಗ ಏಹೆಚ್‍ಓ ಅವನ ಅಪ್ಪನ ಮನೆದನ್ನ ಕೊಡೋ ಹಾಗೆ ಮಾತನಾಡುತ್ತಾನೆ. ಬೆಳಿಗ್ಗೆ ಎದ್ದು ಮುಖಾನೇ ಸರಿಯಾಗಿ ತೊಳೆಯಲ್ಲ ಅಂಥ ನಮ್ಮೂರಿನ ಪಂಚಾಯಿತಿ ಮೆಂಬರ್‍ಗಳ ಪತ್ರಾ ಬೇಕಂತೆ ಪತ್ರ. ಪಂಚಾಯಿತಿಯಲ್ಲಿ ತುಂಬಿಕೊಂಡಿರುವವರೆಲ್ಲಾ ನಮ್ಮ ವೈರಿಗಳೇ. ನಮಗೆಲ್ಲಿ ಪತ್ರ ಕೊಡುತ್ತಾರೆ. ಕೊಟ್ರೂ ಆ ಹಲಾಲುಕೋರರ ಶಿಫಾರಸ್ಸು ನಮಗೆ ದೇವರಾಣೆಗೂ ಬೇಡ. ನಾವೂ ಟ್ಯಾಕ್ಸ್ ಕೊಡ್ತೀವಿ. ಜನರಿಗೆ ಹಂಚೋಕಂತಾನೆ ಈ ವ್ಯವಸ್ಥೆನಾ ಮಾಡಿರೋದು. ಪಂಚಾಯ್ತಿ ಮೆಂಬರು ಯಾರು? ಗಿಡ ಏನು ಅವರ ಅಪ್ಪಂದ? ಕೋಳಿ ಕೇಳಿ ಏನು ಮಸಾಲೆ ಅರೆಯೋದು. ತಿಕಾ ಮುಚ್ಕೊಂಡು ನಮಗೆ ಎಲ್ರಿಗೂ ಕೊಡೋ ಹಾಗೆ ಗಿಡಾ ಕೊಡ್ಬೇಕು. ಯಾವ ಬೋಳಿಮಗನ ಶಿಫಾರಸ್ಸನ್ನೂ ತರೊಲ್ಲಾ ನಾವು. ಇದೊಂತರ ನಾ ಸತ್ತಂಗೆ ಮಾಡ್ತೀನಿ ನೀ ಅತ್ತಂಗೆ ಮಾಡು ಅಂದಂಗೆ” ಎಂದು ಕುಮಾರನ ಗುಂಪಿನವರು ತಲೆಗೊಂದೊಂದು ಮಾತನಾಡತೊಡಗಿದರು.

ಮಂಜಯ್ಯನ ಕಡೆಯೋರು ನಿಂತಲ್ಲೇ ಸ್ತಬ್ಧರಾದರು. ಕುಮಾರನ ಕಡೆಯವರ ಆವೇಶ ಕಂಡು ಇವರೇನಾದರೂ ಅನಾಹುತ ಮಾಡೋಹಾಗೇ ಕಾಣ್ತಾರೆ ಎಂದುಕೊಂಡು ಸೂಪರ್‍ವೈಜರ್ ಕಡೆ ಮುಂದೇನು ಎಂಬಂತೆ ನೋಡತೊಡಗಿದರು. ಲಾರಿ ಡ್ರೈವರ್ ತನ್ನ ಮುಂದಿನ ಬಾಡಿಗೆ ವ್ಯವಸ್ಥೆ ಹೈಲ್‍ಪೈಲ್ ಆಗುತ್ತಿರುವುದನ್ನು ಕಂಡು ಕಂಗಾಲಾಗತೊಡಗಿದ. ತನ್ನ ಪಕ್ಕದಲ್ಲೆ ನಿಂತಿದ್ದ ಕುಮಾರನ ಗುಂಪಿನವನೊಬ್ಬನನ್ನು ಕರೆದು ‘ಅಣ್ಣಾ, ಗಿಡ ಇಳಿಸಿ ಹೋಗ್ತಿನಣ್ಣ; ನನಗೆ ಬೇರೆ ಬಾಡಿಗೆ ಇದೆ’ ಅಂದ. ಅಷ್ಟಕ್ಕೆ ಅವನು ಕುಮಾರನನ್ನು ಬದಿಗೆ ಸರಿಸಿ, ಡ್ರೈವರ್‍ನನ್ನು ಎದೆಗೆ ಕೈ ಹಾಕಿ ಲಾರಿ ಬಾನೆಟ್ಟಿಗೆ ಗುದ್ದಿ ನಿಲ್ಲುವಂತೆ ನೂಕಿ ‘ನನ್ಮಗನೆ, ಯಾರಿಗೋ ಬೀಳೋ ಗೂಸಾ ನಿನಗೇ ಬೀಳುತ್ತೇ, ಅಜ್ಜಿಗೆ ಅರಿವೆ ಚಿಂತೆ ಅಂದ್ರೆ ಮೊಮ್ಮಗಳು ಇನ್ನೇನೋ ಕೇಳಿದ್ಲಂತೆ, ಈ ನನ್‍ಮಕ್ಳು ಅಧ್ಯಕ್ಷ, ಸೆಕ್ರೆಟ್ರಿ ಸೇರ್ಕೊಂಡು ಏನೇನು ಬಾನಗಡಿ ಮಾಡ್ತಿದಾರೆ ಗೊತ್ತಾ? ರಸ್ತೆ ಗುಂಡಿ ಬಿದ್ದಿದೆ ಅಂತ ನಮ್ಮ ಯುವಕ ಸಂಘದಿಂದ ಶ್ರಮದಾನ ಮಾಡಿ ಗುಂಡಿಗೆಲ್ಲ ಗ್ರಾವೆಲ್ ಹಾಕಿ ರಸ್ತೆ ಸರಿ ಮಾಡಿದರೆ ಈ ಹಲ್ಕಾಗಳು ಅದಕ್ಕೆ ಪಂಚಾಯ್ತಿಯಿಂದ ಬಿಲ್ ಮಾಡಿಸಿಕೊಂಡು ತಿಂದಿದ್ದಾರೆ. ನಿಜವಾಗಿಯೂ ಖರ್ಚಾಗಿರೋದು ಒಂದು ಸಾವಿರ ರೂಪಾಯಿಗಿಂತಲೂ ಕಡಿಮೆ. ಈ ಬೋಳಿಮಕ್ಳು ಆ ಗುಂಡಿ ಮುಚ್ಚಿದ ಕೆಲಸಕ್ಕೆ ಎಂಟು ಸಾವಿರ ರೂಪಾಯಿ ಬಿಲ್ ಮಾಡಿಸಿಕೊಂಡಿದ್ದಾರೆ. ಅಂಥಾ ಅಯೋಗ್ಯರ ಹತ್ರ ನಾವು ಶಿಫಾರಸ್ಸು ಪತ್ರ ತರಬೇಕಾ?

‘ಸಾಹೇಬ್ರು ಸೈನ್ ಹಾಕಿ ಗಿಡ ಕೊಡಿ ಅಂತ ಅಲಾಟ್‍ಮೆಂಟ್ ಲೆಟರ್ ಬರೆದುಕೊಡದಿದ್ರೆ ನಾನು ನಿಮಗೆ ಗಿಡ ಕೊಡೋಕೆ ಆಗೊಲ್ಲ. ನನ್ನ ಧರ್ಮಸಂಕಟ ಅರ್ಥ ಮಾಡ್ಕೊಳ್ಳಿ. ನೀವು ಏ.ಹೆಚ್.ಓ. ಹತ್ರಾನೆ ಮಾತಾಡ್ಕೊಂಡು ಏನಾದ್ರೂ ತೀರ್ಮಾನ ಮಾಡ್ಕೊಂಡು ಬನ್ನಿ. ಇಲ್ಲಿ ಹೊಡೆದಾಟ ಮಾಡ್ಬೇಡಿ’ ಎಂದ ಸೂಪರ್‍ವೈಜರ್. ಕುಮಾರನ ಗುಂಪಿನಲ್ಲಿ ಆಂಗ್ರಿ ಯಂಗ್‍ಮ್ಯಾನ್‍ನ ಪ್ರತಿರೂಪದಂತಿದ್ದ ಕೋಳೂರು ಸಂದೀಪ ‘ಯಾವನ್ರೀ ಸಾಹೇಬ, ಆ ಕಮಿಷನ್ ತಿನ್ನೋ ಹೇತ್ಲಾಂಡಿನಾ? ಅವನೇನಿದ್ರು ನಿನಗೆ ಮಾತ್ರ ಸಾಹೇಬ. ಕಚಡಾ! ಛೇಂಬರಿಗೆ ಹೋದ್ರೆ ಕೂತ್ಕಳಕ್ಕೆ ಸಹ ಹೇಳಲ್ಲ ರ್ಯಾಸ್ಕಲ್, ಅವರು ಕೂತಿರೋ ಛೇರ್ ಸಮೇತ ನಮ್ದು ಗೊತ್ತಾಯ್ತಾ. ಅವನನ್ನೇ ಬರಕ್ಕೆ ಹೇಳಿ ಕಳಿಸಿ ಇಲ್ಲಿಗೆ. ಅದೇನ್ ಪೂಕ್ತಾನೋ ಇಲ್ಲೇ ಪೂಕ್ಲಿ. ಹೋದ ವರ್ಷ ನಮ್ಮೂರಲ್ಲಿ ಆ ಮಹೇಶ ಸ್ಕೂಲಿಗೆ ಗಿಫ್ಟ್ ಅಂತ ನಾಲ್ಕು ಸಾವಿರ ಖರ್ಚು ಮಾಡಿ ದ್ವಜ-ಕಟ್ಟೆ ಕಂಬ ಮಾಡಿಸಿಕೊಟ್ರೆ ಈ ಬಿಕನಾಸಿ ಮೆಂಬರುಗಳು ಸೇರಿ ಅದಕ್ಕೂ ಒಂಬತ್ತು ಸಾವಿರ ಬಿಲ್ ಮಾಡಿಸಿಕೊಂಡು ಹಂಚಿಕೊಂಡಿದ್ದಾರೆ ಗೊತ್ತಾ?’ ಎಂದ.

ಯಾಕೋ ಇದು ಮುಗಿಯುವ ಹಂಗೆ ಕಾಣಲ್ಲ. ಈ ಡ್ರೈವರ್‍ನ ಪುಸಲಾಯಿಸಿ ಮೆಣಸಿನಬುಟ್ಟಿ ಲೋಡನ್ನು ಇಳಿಸದೇ ಹಾಗೇ ತಮ್ಮ ಜಾಗಕ್ಕೆ ಸಾಗಹಾಕಬೇಕೆಂದುಕೊಂಡಿದ್ದವರು ಇದೇ ರೀತಿ ಸಮಯ ಕಳೆದರೆ ಒಂದಕ್ಕೆ ಎರಡು ಪಟ್ಟು ಕೊಟ್ಟು ಬೇರೆ ಲಾರಿ ತಂದು ಲೋಡ್-ಅನ್‍ಲೋಡಿಂಗ್ ಅಂತ ಮತ್ತೆ ಖರ್ಚು ಮಾಡಬೇಕಾಗುತ್ತೆ ಎಂದು ಯೋಚಿಸಿ ಮಂಜಯ್ಯ “ಹೌದೌದು ಸಂದೀಪಣ್ಣ, ಈ ಪಂಚಾಯ್ತಿಗಳು ಎಷ್ಟು ಕುಲಗೆಟ್ಟಿವೆ ಅಂದ್ರೆ ಕೆಲವು ಕಡೆ ಹೆಬ್ಬೆಟ್ಟುಗಳನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡು ಸೆಕ್ರೆಟ್ರಿಗಳೇ ರಾಜ್ಯಬಾರ ಮಾಡ್ತಿದ್ದಾರೆ. ಇನ್ನು ಕೆಲವೆಡೆ ಅಂತೂ ಬಿಲ್ ಕಲೆಕ್ಟರುಗಳು ಪಂಚಾಯ್ತಿ ಕೆಲಸಗಳನ್ನೇ ತಮ್ಮ ಮನಸೋಇಚ್ಚೆ ಬೇಕಾದವರಿಗೆ ಹಂಚುತಿದ್ದಾರಂತೆ. ಎಲ್ಲಮ್ಮನ ಜಾತ್ರೆ ಮಾಡ್ತಾ ಸರ್ಕಾರದ ದುಡ್ಡನ್ನ ಹಬ್ಬ ಹುಡಿಹಾರಿಸ್ತಾ ಇದ್ದಾರೆ. ಅದ್ಯಾವುದೋ ಪಂಚಾಯ್ತಿಲಿ ಬಿಲ್ ಕಲೆಕ್ಟರ್ರೇ ತಹಸೀಲ್ದಾರ್ರ ಸೈನ್ ಹಾಕಿ ನಿವೇಶನ ಹಂಚ್ತಾ ಇದಾನಂತೆ. ಒಂದು ಸೈಟಿಗೆ ಹತ್ತು ಸಾವಿರ ಕಮಿಷನ್ನಂತೆ. ಸೈಟ್ ಸಿಗದವರು ಯಾರೋ ದೂರು ಕೊಟ್ಟರೆ, ನೆಪ ಮಾತ್ರಕ್ಕೆ ಸಸ್ಪೆಂಡ್ ಮಾಡಿ ಮತ್ತೆ ಅದೇ ವಂಚಕನನ್ನು ಕೆಲಸಕ್ಕೆ ತಗೊಂಡಿದ್ದಾರಂತೆ. ಈಗ ಅವನು ಅಂತಾ ಕೆಲಸ ಮಾಡೋ ಖದೀಮರಿಗೆ ಗುರುವಾಗಿ ಯಾರ್ಯಾರಿಗೆ ಯಾವಾಗ ಹೇಗೆ ಎಲ್ಲಿ ಟೋಪಿ ಹಾಕಬಹುದು ಅಂತ ಟ್ಯೂಷನ್ ಕೊಡ್ತಾನಂತೆ. ಎಂತಾ ಕಾಲ ಬಂತು ಛೇ!!!!”

ಅಷ್ಟರಲ್ಲಿ ಏ.ಹೆಚ್.ಒ. ತನ್ನ ಕಾಲು ಬಾಲಗಳೊಂದಿಗೆ ಬಂದಿಳಿದರು. ಮಂಜಯ್ಯ ದೂರದಿಂದಲೇ ಸಾಹೇಬರಿಗೆ ಅರ್ಥಗರ್ಭಿತವಾಗಿ ಸಲಾಮು ಹೊಡೆದ. ಕುಮಾರ ಮತ್ತವನ ಗೆಳೆಯರು ಏ.ಹೆಚ್.ಒ. ಬಂದಿದ್ದು ಗೊತ್ತಾದರೂ ತಿರುಗಿಯೂ ನೋಡಲಿಲ್ಲ. ಎ.ಹೆಚ್.ಒ. ಬಳಿಗೆ ಸೂಪರ್‍ವೈಸರ್ ಓಡಿಹೋದ. “ಯಾವುದೋ ಒಂದಷ್ಟು ಟ್ರಾನ್ಸಿಸ್ಟ್ ಡ್ಯಾಮೇಜ್ ಅಂತಾ ತೋರಿಸಿ ಕೊಟ್ಟು ಕಳಿಸ್ರೀ, ಸುಮ್ನೆ ಯಾಕೆ ತರಲೆ ಮಾಡ್ಕೊಳ್ತೀರಿ, ಇವರ ಸಹವಾಸ ನಿಮಗೆ ಗೊತ್ತಿಲ್ವಾ? ಆ ಸ್ಪೈಸಸ್ ಬೋರ್ಡ್ ವೇಲಾಯುಧನ್‍ನ ಎತ್ತಿ ಕುಕ್ಕರಿಸಿದ್ದು, ಆತ ಸೊಂಟ ಮುರಕೊಂಡು ಈ ಊರಿಂದಲೇ ವರ್ಗ ಮಾಡಿಸಿಕೊಂಡು ಹೋದದ್ದು ಮರೆತ್ರಾ?” ಎಂದವರೇ ಅದೇ ಲಡಾಸು ಜೀಪಿನಲ್ಲಿ ಗೊಸಗೊಸ ಸದ್ದುಮಾಡುತ್ತಾ ಹೊರಟುಹೋದರು.

‘ಸರೀ ಕುಮಾರಣ್ಣ ನಿಮಗೆ ಬೇಕಾದ ಗಿಡಗಳನ್ನ ನೀವೇ ಸೆಲೆಕ್ಟ್ ಮಾಡಿಕೊಂಡು ತಗೊಂಡು ಹೋಗಿ ಬನ್ನಿ ಬನ್ನಿ’ ಎಂದ ಸೂಪರ್‍ವೈಸರ್. ‘ಅದೆಲ್ಲಾ ಆಗೊಲ್ಲ ನಿಮ್ಮ ಪ್ರೊಸಿಜರ್ ಪ್ರಕಾರನೇ ಆಫೀಸ್ ರೆಕಾರ್ಡ್‍ನಲ್ಲೇ ಇದೆಲ್ಲಾ ದಾಖಲಾಗಬೇಕು. ನಾವ್ಯಾರು ಶಿಫಾರಸ್ಸು ಪತ್ರ ತರಲ್ಲ ನೆನಪಿರಲಿ. ಮಂಜಣ್ಣಾ, ನೀವು ಗಿಡಾ ತಗೊಂಡು ಹೋಗಿ. ರೀ ಸೂಪರ್‍ವೈಸರ್ರೇ ನಾಳೆ ಬರ್ತೀವಿ ನಿಮ್ಮ ಸಾಹೇಬರಿಗೆ ಹೇಳಿ ಯಾರ್ದೂ ಪತ್ರ ತರಲ್ಲ. ನಿಮ್ಮ ಸಾಹೇಬನೇ ಅಲಾಟ್‍ಮೆಂಟ್ ಲೆಟರ್ ಕೊಡಬೇಕು ಗೊತ್ತಾಯ್ತಾ. ಬನ್ರೋ ಕೊನೇ ಬಸ್ಸು ಮಿಸ್ಸಾದ್ರೆ ಕಷ್ಟ’ ಎಂದವನೇ ದುಸದುಸನೇ ಉಸಿರು ಬಿಡುತ್ತಾ ಅಲ್ಲಿಂದ ನಿರ್ಗಮಿಸಿದ.

ಲಾರಿ ಡ್ರೈವರ್‍ನನ್ನು ಪುಸಲಾಯಿಸಿ ಇನ್ನೂರು ರೂಪಾಯಿಗಳನ್ನು ಕೊಟ್ಟು ಎಲ್ಲಾ ಬುಟ್ಟಿಗಳನ್ನು ಚೆಟ್ಟಿಯಾರರ ಕೋಣನಕಾನು ಎಸ್ಟೇಟಿಗೆ ಡಂಪ್ ಮಾಡಿಸಿ, ಚೆಟ್ಟಿಯಾರನಿಂದ ಆರು ಸಾವಿರ ರೂಪಾಯಿ ದುಡ್ಡು ಇಸ್ಕೊಂಡು, ಜೊತೆಯವರಿಗೆ ರಾಜಾ ವಿಸ್ಕಿ ಕುಡಿಸಿ, ಬಾಯಮ್ಮನ ಹೋಟೇಲಿನಲ್ಲಿ ಸಮ್ಮಾ ಪೋರ್ಕ್ ಊಟ ಹಾಕಿಸಿ, ಕೈಗೆ ಐವತ್ತು-ಐವತ್ತು ಕೊಟು,್ಟ ತಾನು ಮೂರು ಸಾವಿರ ಜೇಬಿಗಿಳಿಸಿ ಕೆಮ್ಮಿ ಕ್ಯಾಕರಿಸಿ ಊರಿಗೆ ಹೋಗಲು ನಾಲ್ಕು ಆಟೋಗಳನ್ನು ಎಂಗೇಜ್ ಮಾಡಿದ. ಈ ರೀತಿಯ ಇತಿಹಾಸವಿರುವ ಮಂಜಯ್ಯ ಮೈಯಲ್ಲಿ ಬೆವರಿಳಿಯದಂತಹ ಮೆತ್ತನೆಯ ಕೆಲಸಗಳನ್ನು ಆಯ್ದು ಮುಂದಿನ ತಾಲ್ಲೂಕು ಪಂಚಾಯಿತಿ ಎಲೆಕ್ಷನ್ನಿಗೆ ನಿಲ್ಲುವ ಎಸ್ಟಿಮೇಟ್ ನಡೆಸಿದ್ದ.

*************************

ಶುಂಠಿ ಬೆಳೆಗೆ ಬೆಲೆ ಸರಸರನೆ ಏರುತ್ತಿತ್ತು. ನಾನೂರ ಐವತ್ತು ಇದ್ದದ್ದು ಒಂದೇ ವಾರದೊಳಗೆ ಆರುನೂರಐವತ್ತು ಆಗುವುದೇ. ಅನೇಕ ಕಡೆ ಕೊಳೆ ರೋಗ ಬಂದು ಹೆಂಡತಿ ತಾಳಿ ಅಡವು ಇಟ್ಟು ಶುಂಠಿ ಮಾಡಿದವರು ಮನೆ ಕಡೆ ತಲೆ ಹಾಕುವುದನ್ನೆ ಬಿಟ್ಟು ಗದ್ದೆಯಲ್ಲೇ ಇದ್ದ ಗುಡಾರದಲ್ಲಿ ಕಾಲ ಕಳೆಯತೊಡಗಿದರು. ಹೊರಗಡೆ ಕೈಸಾಲ ಮಾಡಿದವರು ಮನೆಯಿಂದ ಹೊರಹೋಗುವುದನ್ನೆ ಕಡಿಮೆಮಾಡಿದರು. ಬ್ಯಾಂಕಿನ ಹೆಸರು ಹೇಳಿದರೇ ಮಿಡುಕಿಬೀಳುವವರ ಸಂಖ್ಯೆ ಏನೂ ಕಡಿಮೆ ಇರಲಿಲ್ಲ.

ಯಾವ ಗದ್ದೆ ಬಯಲಿಗೆ ಹೋದರೂ ಚಿತ್ರವಿಚಿತ್ರ ಔಷಧಿಯ ವಾಸನೆ ಮೂಗಿಗೆ ಅಡರುತ್ತಿತ್ತು. ಉಳಿದಷ್ಟಾದರೂ ಉಳಿಯಲಿ ಎಂದು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದವರೂ ಯಾಕೋ ತಮ್ಮ ಪ್ರಯತ್ನಗಳೆಲ್ಲಾ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅನಿಸಿ ಮಂಕಾಗತೊಡಗಿದರು. ನಾನೆರಡು ಎಕರೆ, ನಾನು ನಾಲ್ಕು ಎಕರೆ ಎಂದು ಶುರುವಿನಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರೆಲ್ಲಾ ಈಗ ಶುಂಠಿ ಬೆಳೆಯುತ್ತಿದ್ದೇವೆ ಎಂದು ಹೇಳಿಕೊಳ್ಳಲು ಹಿಂಜರಿಯತೊಡಗಿದರು. ರೈತರ ಉತ್ಸಾಹ, ವೇಗವನ್ನು ಕಂಡು ಕೇಳಿಕೇಳಿದಷ್ಟು ಸಾಲ ಕೊಟ್ಟ ಬೀಜ, ಗೊಬ್ಬರ, ಔಷಧಿಯವರೆಲ್ಲ ಈಗ ತಳಮಳಿಸತೊಡಗಿದರು. ದಿನಾ ಅದಕ್ಕೆ ಇದಕ್ಕೆ ಎಂದು ಪೇಟೆಗೆ ಬರುತ್ತಿದ್ದ ರೈತರು ಕ್ರಮೇಣ ಕಣ್ಮರೆಯಾಗತೊಡಗಿದರು. ಸಾಂಪ್ರದಾಯಿಕ ಕಾಫಿ, ಏಲಕ್ಕಿ, ಅಡಿಕೆ, ಭತ್ತ, ಬಾಳೆ ಎಲ್ಲವನ್ನು ಬಿಟ್ಟು ಶುಂಠಿ ಎಂಬ ಮಾಯಾಂಗನೆಯ ಬೆನ್ನುಹತ್ತಿದ್ದ ಮಲೆನಾಡಿಗರು ಇಂಗುತಿಂದ ಮಂಗನಂತೆ ಆಗಿದ್ದರು. ಐದು ಎಕರೆ ಶುಂಠಿ ಹಾಕಿಸಿದ್ದಾರಂತೆ ಎಂದೇ ಮಗಳನ್ನು ಮದುವೆ ಮಾಡಿಕೊಡಲು ನಿಶ್ಚಯ ಮಾಡಿಕೊಂಡವರು, ಬರುವ ಬೆಳೆಯನ್ನೇ ನಂಬಿಕೊಂಡು ಡೌನ್ ಪೇಮೆಂಟ್‍ನಲ್ಲಿ ಕಾರು ತಂದವರ ಪಾಡಂತೂ ಹೇಳತೀರದು.

ಮಲೆನಾಡಿನ ಜೀವನಾಡಿಯೇ ಆಗಿದ್ದ ಗದ್ದೆಗಳು ಶುಂಠಿಬೆಳೆಯ ದಾಳಿಯಿಂದ ನಿರ್ಜೀವಗೊಳ್ಳತೊಡಗಿದವು. ಹರಿಯುವ ಹಳ್ಳಗಳಲ್ಲಿ ಒಂದೇ ಒಂದೂ ಏಡಿ, ಕಪ್ಪೆ, ಮೀನು ಇರಲಿ ಕಡೆಗೆ ಹಾವುಗಳೂ ಹೇಳಹೆಸರಿಲ್ಲದಂತಾದವು. ಹಸಿರು ಪೈರು, ಜುಳುಜುಳು ಹರಿಯುತ್ತಿದ್ದ ನೀರಿನ ವಿಶಿಷ್ಟ ಅಹ್ಲಾದಕರ ಸನ್ನಿವೇಶ ಮಾಯವಾಗಿ ವಿಷಯುಕ್ತ ಔಷಧಿಗಳ ವಿಪರೀತ ಉಪಯೋಗದಿಂದ ಇಡೀ ವಾತಾವರಣವೇ ಮರಣಸದೃಶವಾಗಿ ಪರಿವರ್ತನೆಯಾಗಿತ್ತು. ಎಷ್ಟು ಬಗೆಯ ಔಷಧಿಯನ್ನು ಗದ್ದೆಗೆ ಸುರಿದಿದ್ದರು ಎಂದರೆ ಅಪ್ಪಿತಪ್ಪಿ ಎಲ್ಲಾದರೂ ಶುಂಠಿ ಉಳಿದಿದ್ದರೆ ಅದನ್ನು ಜಜ್ಜಿ ಹಿಂಡಿದ್ದರೆ ಶುಂಠಿರಸದ ಬದಲು ಕೀಟನಾಶಕವೇ ಸುರಿಯುತ್ತಿತ್ತೇನೋ?

ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯರು ಮಾಡಿದ್ದ ಶುಂಠಿ ಬೆಳೆಯಲ್ಲಿ ಮುಕ್ಕಾಲು ಪಾಲು ಕೇಡು ಎಂದು ಕರೆಯಲ್ಪಡುವ ಕೊಳೆರೋಗಕ್ಕೆ ತುತ್ತಾಗಿ ಆ ರೈತರೆಲ್ಲಾ ಲಕ್ವ ಹೊಡೆದಂತೆ ಮಗ್ಗುಲಾಗಿ, ಬೆಳಿಗ್ಗೆ ಎದ್ದು ಮನೆ ಜಗುಲಿ ಎದುರಿನ ಅಂಗಳಕ್ಕೆ ಬರಲೂ ಹಿಂಜರಿಯುತ್ತಿದ್ದರು. ವಿಶೇಷವೆಂದರೆ ಕೇರಳ ಮೂಲದ ಗುತ್ತಿಗೆ ಬೆಳೆಗಾರರು ಹಾಗೂ ಅವರ ಆಪ್ತರಾಗಿದ್ದ ಕೆಲ ಸ್ಥಳೀಯ ಕೃಷಿಕರು ಮತ್ತು ಕೇರಳದವರೊಂದಿಗೆ ಪಾಲುದಾರರಾಗಿ ಶುಂಠಿ ಬೆಳೆದಿದ್ದವರುಗಳ ಶುಂಠಿ ಮಾತ್ರ ಏನೂ ಅನಾಹುತವೇ ಆಗಿಲ್ಲವೆಂಬಂತೆ ನಳನಳಿಸುತ್ತಿದ್ದವು. ಯಾವಾಗ ಬೆಳೆ ವ್ಯಾಪಕವಾಗಿ ನಾಶವಾಗುತ್ತಾ ಬಂತೋ ಸ್ಥಳೀಯರಿಗೆ ತಿಳಿಯದಿದ್ದ ಔಷಧಿ ಉಪಯೋಗಿಸಿ ಉಳಿಸಿಕೊಂಡಿದ್ದ ಇವರುಗಳ ಶುಂಠಿಗೆ ಚಿನ್ನದ ಬೆಲೆ ಬರತೊಡಗಿತು.

ಈ ನಡುವೆ ಕೆಲ ಹುಡುಗರು ತಾವು ತಾವೇ ಸೇರಿಕೊಂಡು ಯಾರದೋ ಗದ್ದೆಯನ್ನು ಗುತ್ತಿಗೆ ತೆಗೆದುಕೊಂಡು ಶುಂಠಿ ಮಾಡಿದ್ದರು. ಕೆಲ ಕೃಷಿಕರು ಕಣ, ಮನೆಯಂಗಳವನ್ನೇ ಅಗೆದು, ಮಡಿ ಮಾಡಿ ಶುಂಠಿ ನೆಟ್ಟಿದ್ದರು. ಇನ್ನು ಕೆಲವೆಡೆ ಖಾಲಿ ಇದ್ದ ಯಾರದೋ ಜಾಗ, ಈಚಲಹರ, ಪಾಳು ಲಂಟಾನದ ಜಾಗವನ್ನೆಲ್ಲಾ ಸಾಗುಮಾಡಿ ಕಂಡಕಂಡಲ್ಲೆಲ್ಲಾ ಶುಂಠಿ ನಾಟಿ ಮಾಡಿದ್ದೇ ಮಾಡಿದ್ದು. ಪರಿಣಾಮವಾಗಿ ವಿಪರೀತ ಮಳೆಯಾದಾಗ ಮೇಲ್ಮಣ್ಣು ತೀವ್ರವಾಗಿ ಕೊಚ್ಚಿ ಹೋಗಿ ಹೊಳೆ-ನದಿಗಳ ಪಾತ್ರ, ಸಮೀಪದ ಜಲಾಶಯಗಳೆಲ್ಲಾ ಹೂಳಿನಿಂದ ತುಂಬಿಹೋಯಿತು. ಎಲ್ಲಿ ಏನಾದರೂ ನಮಗೇನು ಎಂದುಕೊಂಡು ಒಟ್ಟಾರೆ ದುಡ್ಡಾದರೆ ಸಾಕೆಂದು ಅಳಿದುಳಿದ ಶುಂಠಿಯನ್ನು ಏನಾದರೂ ಸರ್ಕಸ್ ಮಾಡಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರು. ಗಿಡ ಹಸುರಾಗಿದೆಯಲ್ಲ ಎಷ್ಟು ಶುಂಠಿ ಇರಬಹುದೆಂದು ಗಿಡ ಹಿಡಿದು ಮೃದುವಾಗಿ ಮೇಲಕ್ಕೆ ಜಗ್ಗಿದರೆ ಕೊಳೆತಂತಾಗಿದ್ದ ಬುಡದ ಗಿಡ ಪುಸಕ್ಕನೆ ಕೈಗೇ ಬರುತ್ತಿತ್ತು. ಬುಡದ ಮಣ್ಣು ಕೆದಕಿ ನೋಡಿದರೆ ನೆಂದ ಬೂದಿಯಂಥ ಶುಂಠಿಯ ಗೆಡ್ಡೆ ತಡೆಯಲಸಾಧ್ಯವಾದ ವಾಸನೆಯೊಂದಿಗೆ ಅಣಕಿಸುತ್ತಾ ಗೋಚರಿಸುತ್ತಿತ್ತು. ಇದನ್ನು ನೋಡಿ ಎದೆಯೊಡೆದಂತಾದ ರೈತರು ಪರೀಕ್ಷಿಸುವ ಗೋಜಿಗೆ ಹೋಗುವುದನ್ನೇಬಿಟ್ಟರು. ಹಾಕಿದ ಬೀಜದ ದುಡ್ಡಾದ್ರೂ ಬರಲಿ ಎಂದು ಹರಕೆ ಹೊತ್ತು ಕೋಳಿ-ಕುರಿ ಕಡಿದು ಬಲಿ ನೀಡಿದವರೂ ಕಡಿಮೆ ಇರಲಿಲ್ಲ.

ವ್ಯಾಪಾರಿಗಳೇ ಬೆಚ್ಚಿ ಬೀಳುವಂತೆ ಶುಂಠಿಯ ಬೆಲೆ ತಿಂಗಳೊಳಗೆ ಅರವತ್ತು ಕೇಜೀ ಮೂಟೆಗೆ ಒಂದು ಸಾವಿರದ ಐನೂರು ರೂಪಾಯಿ ದಾಟಿ ನಾಗಾಲೋಟದಲ್ಲಿ ಮುಂದೋಡುತ್ತಿತ್ತು. ಇದೇ ಸಮಯದಲ್ಲಿ ಗದ್ದೆಗಳನ್ನು ಗುತ್ತಿಗೆಗೆ ನೀಡಿದ್ದ ಕೆಲ ರೈತರುಗಳು ದೂರಾಲೋಚನೆ ಶುರುಮಾಡಿದರು. ಕರಾರು ಪತ್ರದಂತೆ ಒಪ್ಪಿದ ಗುತ್ತಿಗೆ ಹಣದಲ್ಲಿ ಮೂರನೇ ಎರಡು ಭಾಗವನ್ನು ಬೀಜ ನೆಡುವ ಮುಂಚೆಯೇ ಸಂದಾಯ ಮಾಡಿದ್ದವರು; ಶುಂಠಿ ಕಿತ್ತು ಮೂಟೆಗೆ ತುಂಬಿದ ಕೂಡಲೇ ಉಳಿದ ಹಣವನ್ನು ಪಾವತಿಮಾಡಬೇಕಿತ್ತು. ನಂತರ ಮಡಿಗಳನ್ನು ಮಾಡಿದ್ದ ಗದ್ದೆಯನ್ನು ಟ್ರ್ಯಾಕ್ಟರ್‍ನಲ್ಲಿ ಹೂಡಿ ಸಮತಟ್ಟು ಮಾಡಿಕೊಡಬೇಕಿತ್ತು. ಇದೇ ಸಮಯದಲ್ಲಿ ಮಂಜಯ್ಯ ತನ್ನ ತೋಳನ ಬುಧ್ಧಿ ಪ್ರದರ್ಶಿಸತೊಡಗಿದ. ಒಂದು ದಿನ ಗದ್ದೆಗೆ ಬಂದವನೇ “ಮೋಣು ಏ! ಮೋಣು; ನೋಡು ಮಾರಾಯ ಅಗ್ರಿಮೆಂಟ್‍ನಂತೆ ಎಕರೆಗೆ ಮೂರು ಸಾವಿರಕ್ಕೆ ಆಗಲ್ಲ, ಹತ್ತು ಸಾವಿರ ಕೊಡಬೇಕು” ಎಂದ. ಬೆಚ್ಚಿ ಬಿದ್ದ ಮೋಣು ‘ಅಲ್ಲ ಅಣ್ಣ; ಅಗ್ರಿಮೆಂಟ್ ಆಗಿರೋದು ಮೂರುಸಾವಿರಕ್ಕೆ ಅಲ್ವ?’ ‘ನೋಡಾ ಮಾರಾಯ, ಅದು ಅವತ್ತಿನ ರೇಟು; ಈಗ ಮಾರ್ಕೆಟೇ ಬೇರೆ. ನೀನು ಎಕರೆಗೆ ಹತ್ತು ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಶುಂಠಿ ಕೀಳಕ್ಕೆ ಬಿಡುತೀನಿ; ಇಲ್ದಿದ್ರೆ ಗೊತ್ತಾಲ್ಲಾ?’ ಇನ್ನೇನು ಒಂದು ವಾರದೊಳಗೆ ಶುಂಠಿ ಕೀಳಬೇಕೆಂದುಕೊಂಡಿದ್ದ ಮೋಣುವಿಗೆ ಇದೊಂದು ಆಘಾತವಾಗಿತ್ತು. ‘ಅಲ್ಲ ಅಣ್ಣ ಬೆಲೆ ಚೆನ್ನಾಗಿದೆ ಸರಿ, ನಾವೂ ಸಾಕಷ್ಟು ಹಣ ಸುರಿದಿದ್ದೀವಿ, ರಕ್ತಾನೇ ಬಸಿದಿದ್ದೀವಿ. ಎಕರೆಗೆ ಒಂದು ಸಾವಿರ ಸೇರಿಸಿಕೊಡುತ್ತೇನೆ. ಕಳೆದ ಮೂರು ವರ್ಷದಲ್ಲಿ ನನ್ನ ಮನೆಯೇ ಹಾಳಾಗಿದೆ, ಮನೆಯಲ್ಲಿ ಇದ್ದ ಸಾಮಾನುಗಳನ್ನೆಲ್ಲ ಮಾರಿಕೊಂಡಿದ್ದೇನೆ. ಬದುಕಿದ್ರೆ ಈ ಬಾರಿಯೇ ಬದುಕಬೇಕು. ಅಷ್ಟೆಲ್ಲ ಕೊಡಕ್ಕೆ ಆಗೋಲ್ಲ. ಸ್ವಲ್ಪ ನ್ಯಾಯ ಯೋಚನೆ ಮಾಡ್ರಿ’ ಎಂದ.

“ಏಯ್! ಬೋಳಿಮಗನೇ, ನನ್ನ ಹತ್ರಾನೇ ಕಾನೂನು ಮಾತನಾಡುತ್ತೀಯ, ಅದೆಂಗೆ ಶುಂಠಿ ಕೀಳುತ್ತೀಯಾ ನೋಡ್ತೀನಿ” ಎಂದವನೇ ಮಂಜಯ್ಯ ಬಿರಬಿರನೇ ಪೇಟೆಗೆ ಬಂದ.
ಪೇಟೆಯಲ್ಲಿ ತನ್ನ ಪಟಾಲಂನ ಮೀಟಿಂಗ್ ಸ್ಥಳವಾದ ಓಕೆ ಅಂಗಡಿ ಬಳಿ ಗುಂಪು ಸೇರಿಸತೊಡಗಿದ. ಮೂರು ಆಟೋಗಳನ್ನು ಬಾಡಿಗೆಗೆ ತೆಗೆದುಕೊಂಡ ಮಂಜಯ್ಯ, ತನ್ನ ತರಲೆ ಸೈನ್ಯವನ್ನು ಗದ್ದೆ ಏರಿಯ ಮೇಲೆ ನಿಲ್ಲಿಸಿಕೊಂಡು ಮೋಣುವನ್ನು ಕರೆತರಲು ತನ್ನ ಛೇಲಾ ಒಬ್ಬನನ್ನು ಕಳುಹಿಸಿದ. ಮೊದಲೇ ಮುಂದೇನೆಂದು ಕಂಗಾಲಾಗಿದ್ದ ಮೋಣು ಈ ಗುಂಪನ್ನು ನೋಡಿ ಭೂಮಿಗಿಳಿದು ಹೋದ. ಮೋಣುವನ್ನು ಸುತ್ತುವರೆದ ಗುಂಪು ಬೆದರಿಕೆ, ಒತ್ತಡ ಮುಂತಾಗಿ ಟಾರ್ಚರ್ ಮಾಡಿ ಕಡೆಗೆ ಏಳು ಸಾವಿರಕ್ಕೆ ಒಪ್ಪುವಂತೆ ತಾಕೀತು ಮಾಡಿದರು. ಮೋಣುವಿನ ಮಗಳನ್ನು ಹೊರುವುದಾಗಿ ಎಚ್ಚರಿಕೆ ನೀಡಿದ್ದೂ ಅಲ್ಲದೇ, ಮೋಣುವನ್ನು ಸಹ ಪತ್ತೆಯಿಲ್ಲದಂತೆ ಕಾಡಿನಲ್ಲಿ ಗುಂಡಿ ತೆಗೆದು ಹೂಳುವುದಕ್ಕೂ ಸಿಧ್ಧರೆಂದು ಹೆದರಿಸಿದರು.

ಯಾವುದೋ ಊರಿನಿಂದ ಹೊಟ್ಟೆಪಾಡಿಗೆ ನಾಲ್ಕು ಕಾಸು ಸಂಪಾದನೆ ಮಾಡಲು ಬಂದಿದ್ದ ಮೋಣು ಬೇರೆ ದಾರಿಕಾಣದೇ ಅವರು ಕೇಳಿದ ಹಣಕ್ಕೆ ಒಪ್ಪಿದ. ಯಾವನಾದರೂ ವ್ಯಾಪಾರಿಯನ್ನು ಬರಲು ಹೇಳಿ, ನಾಳೆ ಅಡ್ವಾನ್ಸ್ ತೆಗೆದುಕೊಂಡು ತಮಗೆ ಬರಬೇಕಾದ ಹಣಕೊಟ್ಟರೆ ಮಾತ್ರ ಶುಂಠಿ ಕೀಳಲು ಬಿಡುವುದೆಂದು, ಇಲ್ಲವಾದಲ್ಲಿ ಮೋಣುವಿನ ಹೆಣ ನಾಯಿ-ನರಿ ಪಾಲಾಗುವುದೆಂದು ಎಚ್ಚರಿಸಿದರು. ಮಂಜಯ್ಯನ ಗ್ಯಾಂಗ್ ಅತ್ತ ಹೋದ ಕೂಡಲೇ ಮೋಣು ಗುಡಿಸಲ ಹೊರಗಡೆಯೇ ಬಿಟ್ಟಿದ್ದ ಹವಾಯಿ ಚಪ್ಪಲಿಯನ್ನು ಮೆಟ್ಟಿಕೊಂಡು ಹೆಂಡತಿ-ಮಗಳಿಗೂ ಹೇಳದೇ ಸೀದಾ ಪೇಟೆಗೆ ಬಂದ. ಈ ಹಿಂದೆಯೇ ಅವನ ಬೆಳೆ ನೋಡಿದ್ದ ವ್ಯಾಪಾರಸ್ಥರನ್ನು ಕಂಡು ಅವತ್ತಿನ ರೇಟಿಗೆ ಮಾತು ಮಾಡಿಕೊಂಡು ಮೂವತ್ತು ಸಾವಿರ ರೂಪಾಯಿ ಅಡ್ವಾನ್ಸ್ ಹಣ ತಂದು ಸೀದಾ ಮಂಜಯ್ಯನ ಮನೆಗೇ ಹೋಗಿ ತಲುಪಿಸಿ ಉಳಿದದ್ದನ್ನು ಕೊನೆಯಲ್ಲಿ ಲೆಕ್ಕಾಚಾರ ಮಾಡುವುದಾಗಿ ತಿಳಿಸಿದ.

ಸೀದಾ ಗದ್ದೆಯ ಬದುವೆಡೆ ಇದ್ದ ಗುಡಿಸಲಿಗೆ ಬಂದು ಇನ್ನು ಹದಿನೈದು ದಿನದೊಳಗೆ ಪೇಟೆಯ ನಾರಾಯಣ ಪೂಜಾರಿ ಶುಂಠಿ ಕೀಳಿಸಲು ಜನ ಕರೆತರುತ್ತಾನೆ ಎಂದೂ, ಸಾವಿರದ ಐನೂರ ಐವತ್ತಕ್ಕೆ ರೇಟ್ ಫಿಕ್ಸ್ ಮಾಡಿಕೊಂಡು ಬಂದುದ್ದಾಗಿ ಹೆಂಡತಿಗೆ ತಿಳಿಸಿದ. ಎರಡು ಸಾವಿರ ಮೂಟೆ ಬೆಳೆ ಬರಬಹುದೆಂದೂ, ತನ್ನ ಹಳೆಯ ಸಾಲವನ್ನೆಲ್ಲ ತೀರಿಸಿ ಬಡಗರದಲ್ಲೇ ಮನೆಯೊಂದನ್ನು ಖರೀದಿಸಿ ಮುಂದಿನ ವರ್ಷದೊಳಗೆ ಮಗಳ ಮದುವೆಯನ್ನು ಮಾಡಲು ಆಗಬಹುದೆಂದು ಹೆಂಡತಿಗೆ ಹೇಳಿದ. ಮಾರನೇ ದಿನ ಬೆಳಿಗ್ಗೆ ನಾರಾಯಣ ಪೂಜಾರಿ ಮೋಣುವಿನ ಗದ್ದೆಗೆ ಬಂದು ಒಂದು ಸುತ್ತುಹಾಕಿ ಅಲ್ಲಲ್ಲಿ ಮಡಿಯನ್ನು ಕೆದಕಿ ಶುಂಠಿಯ ಕುಶಲೋಪರಿ ಪರಿಶೀಲಿಸಿದ. ಅಲ್ಲಲ್ಲಿ ಯಾಕೋ ಗೆಡ್ಡೆಗಳು ಕಪ್ಪು ಬಣ್ಣಕ್ಕೆ ತಿರುಗುವಂತೆ ಕಾಣುತ್ತಿದ್ದವು. ಮೋಣುವಿನ ಎದೆ ದಸಕ್ಕೆಂದಿತ್ತು. ಪೂಜಾರಿ ಪ್ರಶ್ನಾರ್ಥವಾಗಿ ಮೋಣುವಿನೆಡೆಗೆ ನೋಡಿದ.

“ಏನೂ ಯೋಚನೆ ಮಾಡಬೇಡಿ, ಈ ಸುತ್ತಲಿನ ಎಲ್ಲಾ ಊರಿನ ಬೆಳೆಯಲ್ಲೇ ನನ್ನದೇ ನಂಬರ್ ವನ್. ಸುತ್ತಾಮುತ್ತಾ ಎಲ್ಲರ ಬೆಳೆ ಕೇಡಾಗಿದ್ದರೆ, ಕೆಲವರದ್ದೇ ಮಾತ್ರ ಚೆನ್ನಾಗಿರೋದು. ಎಲ್ಲೋ ಒಂದೆರಡು, ಕೀಳೋದು ತಡವಾಯಿತ್ತಲ್ಲ ಹಾಗಾಗಿ ಬಣ್ಣ ಬದಲಾಗಿರಬಹುದು” ಎಂದ. ಪೂಜಾರಿ ಗೊಣಗುತ್ತಲೇ ಪೇಟೆಗೆ ಹೋದ. ಮಾರನೇ ದಿನದಿಂದಲೇ ಮಾರುಕಟ್ಟೆ ಇಳಿಮುಖವಾಗಬೇಕೇ? ಆ! ಆ! ಎಂದು ನೋಡುತ್ತಿರುವಂತೆಯೇ ಬೆಲೆ ಸಾವಿರದನೂರಕ್ಕೆ ಬಂದಿಳಿಯಬೇಕೇ? ಪೂಜಾರಿ ತಲೆ ಮೇಲೆ ಕೈಹೊತ್ತು ಕೂತ. ಬೇಗ ಕಿತ್ತು ತುಂಬಿಸುವಂತೆ ಗೋಗರೆದ ಮೋಣುವಿನ ಒತ್ತಾಯಕ್ಕೆ ಮಣಿದು ಇಪ್ಪತ್ತು ಜನರನ್ನು ಶುಂಠಿ ಕೀಳಲು ಕರೆತಂದು ಬಿಟ್ಟ. ಕಿತ್ತು ಕಿತ್ತು ಹೊರ ತೆಗೆದಂತೆ ಮೋಣು ಮತ್ತು ಪೂಜಾರಿ ಮೂರ್ಛೆ ಹೋಗುವುದೊಂದೇ ಬಾಕಿ. ಒಂದೊಂದು ಮಡಿಯಲ್ಲೂ ಹೆಚ್ಚೆಂದರೆ ಒಂದರಿಂದ ಎರಡು ಕೆ.ಜಿ. ಮಾತ್ರ ಚೆನ್ನಾಗಿರುವ ಶುಂಠಿ ಸಿಗತೊಡಗಿತು. ಯಾವುದೋ ಮಹಾಮಾರಿ ರೋಗ ಮೋಣುವಿನ ಕನಸನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿತ್ತು. ಎರಡು ಸಾವಿರ ಮೂಟೆ ಇರಲಿ, ರಾಶಿ ಕೊನೆಯಾದಾಗ ಇನ್ನೂರು ಮೂಟೆಯೂ ಸಿಗಲಿಲ್ಲ. ಮೋಣುವಿನ ಹೆಂಡತಿ ಮತ್ತು ಮಗಳು ನಿಂತಲ್ಲೇ ಕಣ್ಣೀರಿಳಿಸುತ್ತಿದ್ದರು. ಮೋಣು ಬಿಟ್ಟಗಣ್ಣಿನಲ್ಲೇ ಅಗೆದು ಬಗೆದು ಬರಿದಾಗಿದ್ದ ಗದ್ದೆಯನ್ನೇ ನಿರ್ಭಾವುಕನಾಗಿ ನೋಡುತ್ತಿದ್ದ.

ಈ ಮೊದಲೇ ತನ್ನ ಗೂಂಡಾಗಿರಿಯಿಂದ ಲಾಭ ಮಾಡಿಕೊಂಡಿದ್ದ ಮಂಜಯ್ಯ ಕೊನೆಯ ಲೆಕ್ಕಾ ಚುಕ್ತಾಮಾಡಲು ಬೆಳಿಗ್ಗೆ ಬಂದು ಅಲ್ಲಿ ಬಿದ್ದಿದ್ದ ರಾಶಿಯನ್ನು ನೋಡಿ ಮರುಮಾತನಾಡದೇ “ಎಲ್ಲಾ ನಿಮ್ಮ ಕರ್ಮ” ಎಂದು ನಿರ್ಗಮಿಸಿದ. ಮೋಣು ಅವನ ಹೆಂಡತಿ ಮಗಳೊಂದಿಗೆ ಬೀಜ, ಗೊಬ್ಬರ, ಔಷಧಿಯವರ ಬಳಿ ಮಾಡಿದ್ದ ಸಾಲವನು ತೀರಿಸಲೂ ಸಾಧ್ಯವಾಗದೇ ಬಿಕಾರಿಯಂತೆ ಅವರಿವರ ತೋಟದಲ್ಲಿ ಕೂಲಿ ಮಾಡುತ್ತಾ ರಸ್ತೆ ಬದಿಯ ತಗಡಿನ ಶೆಡ್ಡಿನಲ್ಲಿ ಕಾಲ ಹಾಕುತ್ತಾ ಇದ್ದರೆ, ಅವತ್ತು ಊರುಬಿಟ್ಟ ಪೂಜಾರಿ ಇವತ್ತಿನವರೆಗೂ ಯಾರಿಗೂ ಕಾಣಿಸಿಕೊಂಡಿಲ್ಲ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ