October 5, 2024

* ಪ್ರಶಾಂತ್

ಪತ್ರಕರ್ತ, ಚಿಕ್ಕಮಗಳೂರು

9916917520

*ಈ ಮನಕಲಕುವ ನೈಜ ಸ್ಟೋರಿಯನ್ನ ಓದಿದ್ರೆ ನಿಮಗೂ ಆಶಾಗಳ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತೆ*

ಆಶಾ ಕಾರ್ಯಕರ್ತೆ..! ಇತ್ತೀಚಿನ ವರ್ಷಗಳಲ್ಲಿ ಈ ಪದ ನಮ್ಮೆಲ್ಲರ ಕಿವಿಗೆ ಆಗಾಗ ಬೀಳುತ್ತಲೇ ಇರುತ್ತೆ. ಯಾಕಂದ್ರೆ ನಮ್ಮ ಸಮಾಜದ ಅವಿಭಾಜ್ಯ ಅಂಗ ಎನ್ನುವಷ್ಟರ ಮಟ್ಟಿಗೆ ಹತ್ತಿರವಾಗಿದ್ದಾರೆ ಈ ಸಹೋದರಿಯರು. ಹೌದು, ನಮ್ಮ ಮನೆಯಲ್ಲಿ ನಮ್ಮ ಬಗ್ಗೆ ನಮ್ಮ ಜೊತೆಲಿದ್ದವರು ಕಾಳಜಿ ವಹಿಸ್ತಾರೋ, ಬಿಡ್ತಾರೋ ಗೊತ್ತಿಲ್ಲ, ಆದ್ರೆ ನಿಮ್ಮ ಮನೆಯಲ್ಲಿ ಯಾರಿಗೂ ಸಣ್ಣ ಕಾಯಿಲೆ ಬರದಂತೆ ಅತಿಹೆಚ್ಚು ಕಾಳಜಿ ವಹಿಸೋದು ಇದೇ ಆಶಾಂದಿರು. ಮನೆಯಲ್ಲಿರೋ ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾಗಿರೋ ವೃದ್ಧರವರೆಗೂ ಅವರ ಆರೋಗ್ಯದ ಬಗ್ಗೆ ಪಿನ್ ಟು ಪಿನ್ ಮಾಹಿತಿ ತಗೊಂಡು ಆರೋಗ್ಯ ಇಲಾಖೆಯಲ್ಲಿ ಸಿಗುವ ಪ್ರತಿಯೊಂದು ಸೇವೆಗಳನ್ನ ಮನೆ ಮನಗಳಿಗೆ ತಲುಪಿಸುವಲ್ಲಿ ಇವರ ಪಾತ್ರ ಬಹುಮುಖ್ಯ. ಹಾಗಾಗೀ ಯಾರ ಮನೆಯಲ್ಲಿ ಮಗು ಹುಟ್ಟಿದ್ರೂ ಇವರಿರ್ತಾರೆ, ಆರೋಗ್ಯ ಸರಿಯಿಲ್ಲ ಅಂದ್ರೂ ಇವರಿರ್ತಾರೆ, ಇನ್ನೇನ್ನಾದ್ರೂ ಇವರೇ ಮುಂದೆ ನಿಂತ್ಕೊಂಡು ಕೆಲಸ ಮಾಡ್ತಾರೆ.

ಹೀಗೆ ಜನನದಿಂದ ಮರಣದವರೆಗೆ ಈ ಆಶಾ ಸಹೋದರಿಯರ ಕೆಲಸ ನಿಜಕ್ಕೂ ಅನನ್ಯ. ಆರೋಗ್ಯ ಇಲಾಖೆ ಏನೇ ಮಾಹಿತಿ ಬೇಕು ಅಂದ್ರೂ ಮೊದಲು ಸಂಪರ್ಕ ಮಾಡೋದೇ ಈ ಆಶಾಂದಿರನ್ನ, ಆರೋಗ್ಯ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆ ಅಂದ್ರೆ ಅದರ ತಳಪಾಯವೇ ಈ ಆಶಾಗಳು. ಹಾಗಂತ ಕೇವಲ ಆರೋಗ್ಯ ಇಲಾಖೆಗೇ ಇವರ ಕಾರ್ಯ ಸೀಮಿತಗೊಂಡಿಲ್ಲ, ಗ್ರಾಮೀಣ ಮಟ್ಟದಿಂದ ಯಾವುದೇ ಮಾಹಿತಿ ಬೇಕು ಅಂದ್ರೂ ಇತರ ಇಲಾಖೆಗಳು ಕೂಡ ಮೊದಲು ಹುಡುಕೋದು ಇದೇ ಆಶಾಗಳನ್ನ. ಆರೋಗ್ಯ ಇಲಾಖೆಯನ್ನ ಸಂಪರ್ಕಿಸಿ, ಆಶಾಂದಿರ ಮೂಲಕ ತಮಗೆ ಬೇಕಾಗಿರುವ ಮಾಹಿತಿಗಳನ್ನ ಪಡೆದುಕೊಳ್ತಾರೆ. ಒಂದು ರೀತಿಯಾಗಿ ಈ ಆಶಾಗಳು ಎಲ್ಲಾ ಇಲಾಖೆಗೆ ಬೇಕಾಗಿರುವ ಆಲ್ರೌಂಡರ್ ಅಂದ್ರೆ ಅತಿಶೋಕ್ತಿಯಲ್ಲ.

*ಮಳೆ-ಬಿಸಿಲು ಲೆಕ್ಕಿಸದೇ ಕೆಲ್ಸ ಮಾಡ್ತಾರೆ ಈ ಆಶಾ ಸಹೋದರಿಯರು.!*

ಸಾಮಾನ್ಯವಾಗಿ ಆಶಾಗಳ ಕೆಲ್ಸವನ್ನ ನೋಡಿದಾಗ ನಮ್ಮ ಸಮಾಜದ-ವ್ಯವಸ್ಥೆಯ ಬಹುಮುಖ್ಯ ಅಂಗವಾಗಿರುವ ಆಶಾಗಳಿಗೆ ಒಳ್ಳೆ ಸಂಬಳ ಇರ್ಬೇಕು ಅನ್ನೋ ಯೋಚನೆ ನಮ್ಮೆಲ್ಲರ ಮನ ಹೊಕ್ಕುತ್ತೆ. ಖಂಡಿತಾ ಇಲ್ಲ, ಹೊರಗಡೆ ಹೇಳಿಕೊಳ್ಳಲು ಮುಜುಗರಪಟ್ಟುಕೊಳ್ಳುವಂತಹ ಸ್ಯಾಲರಿ ಅವ್ರದ್ದು,ಅಷ್ಟಕ್ಕೂ ಅದು ಸಂಬಳ ಅಲ್ಲ, ಗೌರವಧನ. ಊರೂರು ಸುತ್ತಿ, ತಮ್ಮ ಆರೋಗ್ಯವನ್ನ ಹಾಳು ಮಾಡಿಕೊಂಡ್ರೂ ಕೇರ್ ಮಾಡದೇ ಕುಟುಂಬದ ಸಲುಹುವ ಜವಾಬ್ದಾರಿ ಹೊತ್ತುಕೊಂಡಿರುವ ಈ ಆಶಾಂದಿರು, ಜನರ ಆರೋಗ್ಯದ ಕಾಳಜಿ ವಹಿಸೋದನ್ನ ಮಾತ್ರ ಮಿಸ್ ಮಾಡಲ್ಲ. ತಮ್ಮ ಮನೆ-ಸಂಸಾರ ಎಲ್ಲವನ್ನೂ ಬದಿಗೊತ್ತಿ ದಿನದ ಬಹುಪಾಲು ಸಮಯವನ್ನ ಸಮಾಜಕ್ಕಾಗಿ ಮುಡಿಪಾಗಿಡುವ ಇವರ ಸೇವೆಗೆ ಆರೋಗ್ಯ ಇಲಾಖೆ ಒಂದು ಗೌರವಯುತ(ಗೌರವಧನ ಅಲ್ಲ, ಗೌರವಯುತ ಧನ) ಸಂಬಳ ಕೊಡಬೇಕಾಗಿರೋದು ಸದ್ಯದ ಜರೂರತ್ತು.

*ಒಂದು ದಶಕದಿಂದಲೂ ಕುಗ್ರಾಮದಿಂದ ಹೊರಬಂದು ಕೆಲಸ ಮಾಡ್ತಿರೋ ಆಶಾ ಕಾರ್ಯಕರ್ತೆ.!*

ಹೌದು, ಅಂದು 2019, ಆಗಸ್ಟ್ 9.. ಚಿಕ್ಕಮಗಳೂರು ಜಿಲ್ಲೆ ಹಿಂದೆಂದೂ ಕಂಡು ಕೇಳರಿಯದ ಮಳೆಗೆ ಸಾಕ್ಷಿಯಾಗಿತ್ತು. ಊರೂರೇ ಕೊಚ್ಚಿಕೊಂಡು ಹೋಗ್ತಿದ್ವು, ತೋಟ-ಗದ್ದೆಗಳು ಹೇಳ ಹೆಸರಿಲ್ಲದಂತೆ ಸ್ಥಳಾಂತರವಾಗಿದ್ವು, ಬೆಟ್ಟಗುಡ್ಡಗಳು ಮುರಿದು ಬೀಳ್ತಿದ್ವು. ರಾಷ್ಟ್ರೀಯ ಹೆದ್ದಾರಿಗಳು ಈಜುಕೊಳವಾಗಿ ಮಾರ್ಪಾಟಿದ್ವು. ಪೋನ್ ಸಂಪರ್ಕವಂತೂ ಇಲ್ಲವೇ ಇಲ್ಲ ಬಿಡಿ. ಈ ಭೀಕರ ಮಳೆಗೆ ಸಿಲುಕಿ ಹತ್ತಕ್ಕೂ ಹೆಚ್ಚು ಜನರ ಪ್ರಾಣಪಕ್ಷಿ ಕೂಡ ಅಷ್ಟೊತ್ತಿಗಾಗಲೇ ಹಾರಿಹೋಗಿತ್ತು. ಮಳೆ ಅನ್ನೋದು ಮಲೆನಾಡಿಗರಿಗೆ ಕಾಮನ್, ಆದ್ರೆ ಅಂದು ಸುರಿದ ಮಳೆ ಕಾಫಿನಾಡಿಗರಿಗೆ ಮತ್ತೊಂದು ಲೋಕವನ್ನೇ ತೋರಿಸಿತ್ತು. ಇನ್ನೂ ಚಾರ್ಮಾಡಿ ಘಾಟ್ನ ಕಥೆ ಕೇಳ್ಬೇಕಾ..? ಜಿಟಿ ಜಿಟಿ ಮಳೆಗೆ ಗುಡ್ಡ ಕುಸಿತ, ಮಣ್ಣು ಜರುಗೋದು ಸಾಮಾನ್ಯವಾಗಿರುವ ಚಾರ್ಮಾಡಿ ಘಾಟ್, ಅಂದು ಅಕ್ಷರಶಃ ಛಿದ್ರ ಛಿದ್ರವಾದ ಘಾಟ್ ಆಗಿ ಮಾರ್ಪಟಿತ್ತು. ಚಾರ್ಮಾಡಿ ಘಾಟ್ ಸೆರಗಲ್ಲಿ ಬರುವ ಕುಗ್ರಾಮ, ಚಿಕ್ಕಮಗಳೂರು ಜಿಲ್ಲೆಯ ಗಡಿಗ್ರಾಮವೂ ಆಗಿರುವ ಅಲೇಖಾನ್ ಹೊರಟ್ಟಿ ಗ್ರಾಮದ ಸ್ಥಿತಿ ಹೇಗಾಗಿರಬೇಡ ನೀವೇ ಊಹಿಸಿ..?

*ತರಬೇತಿಗೆ ಹೊರಟಿದ್ದ ಆಶಾಳನ್ನ ಕಾಡಿದ್ದ ಮಳೆರಾಯ.!*

ನಾನು ಮೊದಲೇ ಪ್ರಸ್ತಾಪಿಸಿದಂತೆ ಮಳೆ ಇರಲಿ, ಬಿಸಿಲು ಇರಲಿ ಆಶಾ ಕಾರ್ಯಕರ್ತರಿಗೆ ಅದ್ಯಾವ್ದು ಲೆಕ್ಕಕ್ಕೆ ಇಲ್ಲ. ಯಾಕಂದ್ರೆ ಒಂದು ವ್ಯವಸ್ಥೆಗೆ ಅನಿವಾರ್ಯವಾಗಿ ಕೆಲಸ ಮಾಡ್ತಿರೋ ಅವರಿಗೆ ಕಾರಣ ಹೇಳುವ ಮನಸ್ಸನ್ನ ಆಶಾ ಸಹೋದರಿಯರು ಮಾಡಲ್ಲ. ಇದೇ ಮನಸ್ಥಿತಿಯನ್ನ ಇಟ್ಟುಕೊಂಡಿದ್ದ ಅಲೇಖಾನ್ ಹೊರಟ್ಟಿ ಗ್ರಾಮದ ಪವಿತ್ರಾ, ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿದ್ದ ತರಬೇತಿಗೆ ತನ್ನ ಮಗನ ಜೊತೆ ಆಟೋದಲ್ಲಿ ಬರುತ್ತಿದ್ದರು.ಕೊಟ್ಟಿಗೆಹಾರದಿಂದ ಅಲೇಖಾನ್ ಗೆ 12 ಕಿಲೋ ಮೀಟರ್ ದೂರ.. ಮುಖ್ಯರಸ್ತೆಯಿಂದ ಅಲೇಖಾನ್ ಗೆ 5 ಕಿಮೀ ಅಂತರ.! 5 ಕಿಲೋ ಮೀಟರ್ ದೂರವನ್ನ ಗುಡ್ಡಗಾಡು ರಸ್ತೆಯಲ್ಲಿ ನಡೆದುಬಂದು ಆ ಬಳಿಕ ಅಲ್ಲಿ ಸಿಗುವ ವಾಹನಗಳನ್ನ ಏರಿ ಕೊಟ್ಟಿಗೆಹಾರ ಬಂದು ಕರ್ತವ್ಯ ನಿರ್ವಹಿಸೋದು ಪವಿತ್ರಾರ ರೂಟಿನ್ ಕೆಲ್ಸ. ಆದ್ರೆ ಆ ದಿನ ರಣಭೀಕರ ಮಳೆ ಬರ್ತಿದ್ದರಿಂದ ಆಟೋವನ್ನ ಬರಹೇಳಿದ್ದ ಪವಿತ್ರಾ, ತನ್ನ ಮಗನ ಜೊತೆ ಆಟೋ ಏರಿದ್ರು. ಸುರಿಯೋ ಮಳೆಯನ್ನ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಲೇ ಬೇಕು ಅನ್ನೋ ಉದ್ದೇಶದಿಂದ ಅಲೇಖಾನ್ ಹೊರಟ್ಟಿ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರ ಆಟೋದಲ್ಲಿ ಸಾಗ್ತಿದ್ರು.! ಅಷ್ಟರಲ್ಲೇ ಇದ್ದಕ್ಕಿದ್ದಂತೆ ಮೇಲಿನಿಂದ ನೀರು ರಸ್ತೆಯ ಮೇಲೆ ಜೋರಾಗಿ ಧುಮ್ಮುಕ್ಕುತ್ತಿತ್ತು, ಕೂಡಲೇ ಆಟೋವನ್ನ ನಿಲ್ಲಿಸಿದ ಚಾಲಕ, ಪರಿಸ್ಥಿತಿ ಏನಾಗಿದೆ ಅಂತಾ ಮುಂದೆ ನೋಡಲು ಕಾಲ್ನಡಿಗೆಯಲ್ಲಿ ತೆರಳಿದ್ದರು.ಅ ಷ್ಟೊತ್ತಿಗಾಗಲೇ ಮೇಲ್ಗಡೆಯಿಂದ ಗಜಗಾತ್ರದ ಬಂಡೆಗಳು ಒಂದೊದಾಗಿಯೇ ಭಾರೀ ರಭಸದಲ್ಲಿ ಉರುಳಿಕೊಂಡು ಬರತೊಡಗಿದ್ವು, ಪ್ರವಾಹದ ವೇಗ ಹೆಚ್ಚಾಯ್ತು..! ಆಟೋ ನಿಲ್ಲಿಸಿ 30 ಮೀಟರ್ ದೂರ ಸಾಗಿದ್ದವರು(ಆಟೋಚಾಲಕ ಹಾಗೂ ಅವರ ಸ್ನೇಹಿತ) ಒಂದ್ಕಡೆಯಾದ್ರೆ, ಆಟೋದಲ್ಲಿದ್ದ ತಾಯಿ-ಮಗ ಮತ್ತೊಂದೆಡೆ. ನೋಡುನೋಡ್ತಿದ್ದಂತೆಯೇ ರಸ್ತೆಯೇ ಇಬ್ಬಾಗವಾಯ್ತು. 30 ಮೀಟರ್ ಅಂತರದ ಮಧ್ಯೆದಲ್ಲಿ ಪ್ರಪಾತವೇ ಸೃಷ್ಠಿಯಾಯ್ತು. ದೂರದಲ್ಲಿ ನಿಂತ್ಕೊಂಡು ನೋಡ್ತಿದ್ದವರ ಕಣ್ಣೆದುರೇ ಆಟೋವೇ ಕೊಚ್ಚಿಕೊಂಡು ಹೋಯ್ತು.! ತಾಯಿ-ಮಗ ಆಟೋದಲ್ಲಿ ಹೋದ್ರಲ್ಲ ಅಂತಾ ಆಟೋ ಚಾಲಕ ಹಾಗೂ ಅವರ ಸ್ನೇಹಿತ ಕಣ್ಣೀರು ಹಾಕುತ್ತಲ್ಲೇ ಸುರಿಯೋ ಮಳೆಯಲ್ಲಿ ನಡೆದುಕೊಂಡು ಕೊಟ್ಟಿಗೆಹಾರ ಸೇರಿದ್ರು.

*ಕೊಚ್ಚಿಹೋದ್ರು ಅಂದ್ಕೊಂಡಿದ್ದವರು ಬದುಕ್ಕಿದ್ದೇ ರೋಚಕ.!*
ಯೆಸ್, ತನ್ನ ಆಟೋವೇ ಕೊಚ್ಚಿ ಹೋಗಿದ್ದನ್ನ ಕಣ್ಣಾರೆ ಕಂಡ ಆಟೋ ಚಾಲಕ, ತಾಯಿ-ಮಗನ ಅಂತ್ಯ ಹೀಗಾಯ್ತಲ್ಲ ಅಂತಾ ಮಮ್ಮುಲ ಮರುಗಿದ್ರು..! ತಮಗೆ ಪರಿಚಯವಿರುವ ಎಲ್ಲರಿಗೂ ನಡೆದ ಘೋರ ದುರಂತದ ಬಗ್ಗೆ ತಿಳಿಸಿದ್ರು. ಕೊನೆಗೆ ಮಳೆ ಸ್ವಲ್ಪ ಕಡಿಮೆ ಆದ್ಮೇಲೆ, ಮನೆಯವರಿಗೆ ವಿಚಾರ ಮುಟ್ಟಿಸಬೇಕಲ್ವಾ ಅಂತಾ ಅಲೇಖಾನ್ ಹೊರಟ್ಟಿ ಗ್ರಾಮಕ್ಕೆ ಆ ಆಟೋ ಚಾಲಕ ಸೇರಿದಂತೆ ಕೆಲವರು ಹೋದ್ರು. ಯಾವ ರೀತಿ ಮನೆಯವರಿಗೆ ಸುದ್ದಿ ಮುಟ್ಟಿಸ್ಬೇಕು ಅಂತಾ ಚಡಪಡಿಸಿದ್ರು. ಆದ್ರೆ ಹೀಗೆ ಆಶಾ ಕಾರ್ಯಕರ್ತೆ ಪವಿತ್ರಾ ಮನೆಗೆ ಹೋದವರಿಗೆ ಕಾದಿತ್ತು ಅಚ್ಚರಿ. ಯಾರ ಸಾವಿನ ಸುದ್ದಿ ಹೇಳೋಕೆ ಆ ಮನೆಗೆ ಹೋಗಿದ್ರೋ, ಅದೇ ತಾಯಿ-ಮಗ ಪ್ರವಾಹಕ್ಕೆ ಸೆಡ್ಡು ಹೊಡೆದು ಜೀವವನ್ನ ಉಳಿಸಿಕೊಂಡಿದ್ರು. ಆಟೋದತ್ತ ಉರುಳಿ ಬರ್ತಿದ್ದ ಬಂಡೆಗಳನ್ನ ನೋಡಿ ಒಂದೆರಡು ಸೆಕೆಂಡಲ್ಲಿ ಆಟೋದಿಂದ ಇಳಿದು ಇಬ್ಬರು ಬಚಾವಾಗಿದ್ರು. ಅಲ್ಲಿ ಪರಿಸ್ಥಿತಿ ಹೇಗಿತ್ತು ಅಂದ್ರೆ ತಾವಿದ್ದ ಸ್ಥಳದಿಂದ 10 ಮೀಟರ್ ದೂರದಲ್ಲಿ ಏನಾಗ್ತಿದೆ ಅನ್ನೋದು ಕಾಣದಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೊನೆಗೆ ಸುರಿಯೋ ಮಳೆ, ಉಕ್ಕಿ ಬರುತ್ತಿರೋ ಪ್ರವಾಹ, ಕೊಚ್ಚಿ ಹೋಗ್ತಿರೋ ರಸ್ತೆ ಹೀಗೆ ಸಾಲು ಸಾಲು ಸವಾಲುಗಳನ್ನ ಎದುರಿಸಿ ಕಾಫಿತೋಟ-ಗುಡ್ಡದಲ್ಲಿ ಸಾಗಿ, ಅಳುತ್ತಿದ್ದ ಮಗನಿಗೆ ಧೈರ್ಯ ತುಂಬುತ್ತಲೇ ಇಬ್ಬರು ಮನೆಯತ್ತ ಹೆಜ್ಜೆ ಹಾಕಿದ್ರು. ಕೊನೆಗೂ ಜೀವನ್ಮರಣ ಹೋರಾಟದಲ್ಲಿ ತಾಯಿ-ಮಗ ಪವಾಡ ಸದೃಶ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ರು. ಕೊನೆಗೆ ಸಾವಿನ ಸುದ್ದಿ ಹೇಳಲು ಹೋದವರಿಗೆ ತಾಯಿ-ಮಗ ಬದುಕಿದ್ದನ್ನ ಕಂಡು ಆದ ಸಂತೋಷವಂತೂ ಅಷ್ಟಿಷ್ಟಲ್ಲ..

*ಪ್ರವಾಹಕ್ಕೆ ಸೆಡ್ಡುಹೊಡೆದಿದ್ದ ಕುಗ್ರಾಮದ ಆಶಾಗೆ ಸಿಕ್ತು ಉತ್ತಮ ಸಾಧಕಿ ಪ್ರಶಸ್ತಿ..!*

ಹೀಗೆ ಸುರಿಯುತ್ತಿದ್ದ ರಣಭೀಕರ ಮಳೆಯನ್ನ ಲೆಕ್ಕಿಸದೇ ಕರ್ತವ್ಯಕ್ಕೆ ಹೊರಟಿದ್ದ ಆಶಾ ಕಾರ್ಯಕರ್ತೆ ಪ್ರವಾಹಕ್ಕೆ ಸೆಡ್ಡು ಹೊಡೆದು ಸಾಹಸ ಮೆರೆದಿದ್ರು. ಅದೇ ಕುಗ್ರಾಮದಿಂದ ಹೊರಬಂದು ಅನೇಕ ವರ್ಷ ಕೆಲಸ ಮಾಡಿದ್ದ ಅನುಭವವೇ ಅಂದು ಆ ಗಟ್ಟಿಗಿತ್ತಿ ಹಾಗೂ ಅವರ ಮಗನ ಜೀವ ಉಳಿಸಿತ್ತು. ಇದೇ ರೀತಿಯ ಅನೇಕ ಸವಾಲುಗಳನ್ನ ಆಶಾ ಪವಿತ್ರಾ ಎದುರಿಸುತ್ತಲೇ ಬಂದಿದ್ದಾರೆ. ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತೆ ಅನ್ನೋ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಆಶಾ ಕಾರ್ಯಕರ್ತೆ ಪವಿತ್ರಾಗೆ ಉತ್ತಮ ಸಾಧಕಿ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.

ಜಿಲ್ಲೆಯಲ್ಲಿರೋ ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರ ನಡುವೆ ಐದು ಮಂದಿಗೆ ಈ ಪ್ರಶಸ್ತಿ ಒಲಿದು ಬಂದಿದ್ದು, ಮೂಡಿಗೆರೆ ತಾಲೂಕಿನಲ್ಲಿ ಈ ಪ್ರಶಸ್ತಿ ಪಡೆದುಕೊಂಡ ಏಕೈಕ ಆಶಾ ಅನ್ನೋ ಹೆಗ್ಗಳಿಕೆಗೆ ಪವಿತ್ರಾ ಪಾತ್ರರಾಗಿದ್ದಾರೆ. ಅಂದಹಾಗೆ ಪವಿತ್ರಾ ಇಲ್ಲಿ ನೆಪ ಮಾತ್ರ, ಪವಿತ್ರಾಳ ರೀತಿ ಕೆಲಸ ಮಾಡುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಈ ಗೌರವ ಸಲ್ಲುತ್ತೆ. ಮಳೆ-ಬಿಸಿಲೆನ್ನದೇ ದೇಶ, ರಾಜ್ಯ, ಜಿಲ್ಲೆಯಲ್ಲಿ ಕೆಲಸ ಮಾಡ್ತಿರೋ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯವರ ಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ತಮ್ಮನ್ನ ತಾವು ಸಮಾಜಕ್ಕೆ ಮುಡಿಪಾಗಿಟ್ಟುಕೊಂಡಿರುವ ಈ ಆಶಾ ಸಹೋದರಿಯರ ವೈಯಕ್ತಿಕ ಬದುಕು ಕಟ್ಟಿಕೊಡಲು ಸರ್ಕಾರ ಮನಸ್ಸು ಮಾಡಲಿ ಅನ್ನೋ ವಿನಮ್ರ ಭಿನ್ನಹವನ್ನ ಈ ಮೂಲಕ ನಾನು ಇಡುತ್ತಿದ್ದೇನೆ..

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ