October 5, 2024

ಪೂರ್ಣೇಶ್ ಮತ್ತಾವರ
ಮೊ : 99809 53426

“ಏ, ಜೀಪ್ ಬಂತು ಬನ್ರೋ..” ಅದ್ಯಾರೊ ಜೋರಾಗಿ ಕೂಗಿದೊಡನೆಯೇ ಅತ್ತಾವರದ ಹನುಮಂತ ದೇವರ ಗುಡಿಯ ಆಚೀಚೆ ಸಣ್ಣ ಸಣ್ಣ ಗುಂಪುಗಳಾಗಿ ‘ಲಾ ಹೊಡೆಯುತ್ತಿದ್ದವರು’, ತಮ್ಮ ಪಾಡಿಗೆ ತಾವು ‘ದಮ್ಮು ಎಳೆಯುತ್ತಿದ್ದವರು,’ ಭೂಮಿಯನ್ನೇ ಸುಖಾಸಿಗೆಯೆಂದು ಭ್ರಮಿಸಿ ಮೈಚಾಚಿದ್ದವರು, ಇತ್ಯಾದಿ ಇತ್ಯಾದಿ ಸ್ಥಿತಿಯಲ್ಲಿದ್ದವರೆಲ್ಲಾ ಒಡನೆಯೇ ಜಾಗೃತರಾಗಿ ಹಸಿದ ಹೆಬ್ಬುಲಿಯೊಂದು ಮಿಕವನ್ನು ಕಂಡೊಡನೆ ಛಂಗನೆ ಹಾರುವಂತೆ ಹಾರಿ, ಕಾಗೆಯೊಂದು ‘ಕಾವ್’ಗುಟ್ಟೊಡನೆ ಕಾಕಾ ಸಮೂಹವೇ ಒಂದು ಗೂಡುವಂತೆ ಕೂಡಿ, ಹೆಜ್ಜೇನ ಹಿಂಡು ತಮ್ಮ ಶಾಂತಿಗೆ ಭಂಗತಂದವನೆಡೆಗೆ ಮುತ್ತಿಕ್ಕುವಂತೆ ಬಂದ ಜೀಪನ್ನು ಮುತ್ತಿಕ್ಕಿದ್ದರು.

ತಾವು ಮುತ್ತಿಕ್ಕಿದ ಜೀಪಿನಿಂದಿಳಿದಿದ್ದು ಮಲ್ನಾಡ್‍ಹಳ್ಳಿ ಮಠದ ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮಿಗಳೆಂಬುದುವುದನ್ನು ಮನಗಂಡು ಅತ್ತಾವರದ ಬಾಂಧವರೆಲ್ಲ ಚಣಹೊತ್ತು ಆವಾಕ್ಕಾದವರಂತಾದರು! ಅಷ್ಟರಲ್ಲೇ ಯಾರೋ “ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ಕೀ” ಎಂದುದರಿಂದ ಎಲ್ಲರೂ ಒಡಗೂಡಿ ಒಂದಿನಿತು ಯೋಚಿಸದೆ “ಜೈ” ಎಂದು ಜೈಕಾರ ಹಾಕಿದರು. ‘ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿ ಕೀ’ ಮತ್ತು ‘ಜೈ ಜೈ’ ಕಾರಗಳು ಸ್ವಾಮಿಗಳು ಜೀಪಿನಿಂದಿಳಿದು ಗುಡಿ ಪಕ್ಕದ ಅರಳಿಮರದ ಕಟ್ಟೆ ಏರಿದರೂ ಮುಂದುವರೆದವು. ಈ ನಡುವೆ ಅವರ ಪಾದಗಳಿಗೆರಗಿ ಆಶೀರ್ವಾದ ಪಡೆಯುವವರಿಗೂ ಬರವಿರಲಿಲ್ಲ. ಇಂತಹ ಅಭೂತಪೂರ್ವ ಸ್ವಾಗತವನ್ನೂ, ಅಪಾರ ಜನಸ್ತೋಮವನ್ನೂ ಕಂಡು ಸ್ವಾಮಿಗಳು ಹರ್ಷಿತರಾಗದೆ ಅನುಮಾನಿತರಾಗಬೇಕಾಯ್ತು. ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳಲೆಂದು ಜೊತೆಯಲ್ಲಿದ್ದ ರೈತ ಸಂಘದ ಚುನಾವಣಾ ಅಭ್ಯರ್ಥಿ ಶರಣಪ್ಪನೆಡೆಗೆ ಮುಖ ಮಾಡಿ ಕಣ್ಸನ್ನೆ, ಕೈಸನ್ನೆಯಲ್ಲೇ ‘ಏನಿದು ಇಷ್ಟೊಂದು ಜನ!?’ ಎಂಬಂತೆ ಪ್ರಶ್ನಿಸಿದರು. ಶರಣಪ್ಪ ತನಗೂ ತಿಳಿಯದೆಂಬಂತೆ ಪ್ರತಿಸನ್ನೆ ಮಾಡಿದ್ದರಿಂದಾಗಿ ಸ್ವಾಮಿಗಳು ಮತ್ತಷ್ಟು ಅನುಮಾನಿತರಾದರು. ಅವರ ಅನುಮಾನಕ್ಕೆ ಕಾರಣಗಳು ಇಲ್ಲದಿರಲಿಲ್ಲ.
2
ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮಿಗಳು ಜನರಿಗೆ ಕುಡಿತದ ದುಷ್ಪರಿಣಾಮಗಳನ್ನು ತಿಳಿಹೇಳುವ ಸಲುವಾಗಿ, ಚುನಾವಣೆಗಳಲ್ಲಿನ ಅಕ್ರಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ಆ ಮೂಲಕ ‘ಹಗರಣ ಪಕ್ಷ’ವನ್ನು ಅಧಿಕಾರದಿಂದ ಕಿತ್ತೊಗೆಯುವ ಸಲುವಾಗಿ, ರೈತ ಸಂಘದ ಅಭ್ಯರ್ಥಿ ಸಜ್ಜನ ಶರಣಪ್ಪನ ಪರವಾಗಿ ಮುರುಕು ಜೀಪೊಂದರಲ್ಲಿ ಊರಿಂದೂರಿಗೆ ಪ್ರಚಾರಕ್ಕೆ ಹೋದರೆ, ಇವರ ಮಾತಿಗೆ ‘ಕ್ಯಾರೇ’ ಎನ್ನುವವರಿರಲಿಲ್ಲ. ಬದಲಿಗೆ “ಸ್ವಾಮಿಗಳೇ ಏನ್ ತಂದಿರೊ ಜೀಪಲಿ?” ಎಂದು ತಲೆ ಕೆರೆಯುವವರೇ! ಏನೂ ಗೀಟದೆಂಬ ಸೂಚನೆ ದೊರೆತೊಡನೆಯೇ ಮುಲಾಜಿಲ್ಲದೆ ಜಾಗ ಖಾಲಿ ಮಾಡುವವರೇ!! ಅಂತಹದ್ದರಲ್ಲಿ ಅತ್ತಾವರದ ಜನತೆ ‘ಆ ಪರಿ’ ಸೇರಿ, ‘ಈ ಪರಿ’ ಜೈ ಜೈಕಾರಗಳನ್ನು ಮೊಳಗಿಸುತ್ತಿದ್ದರೆ ಸ್ವಾಮಿಗಳು ಅನುಮಾನಿತರಾಗದೆ ಇರುತ್ತಾರೆಯೇ?
3
ಆದರೆ ಜೈ ಜೈ ಕಾರಗಳ ಎಫೆಕ್ಟ್ ಯಾವ ಪರಿ ಇತ್ತೆಂದರೆ ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮಿಗಳು ಕ್ಷಣಾರ್ಧದಲ್ಲಿ ಅನುಮಾನಗಳಿಂದ ಮುಕ್ತರಾಗಿ ಪ್ರಸನ್ನ ವದನರಾದರು. ಅವರಿಗೀಗ ‘ಪ್ರಯತ್ನದಿಂದ ಪರಮಾರ್ಥ’ ಎಂಬ ಮಾತು ಅಕ್ಷರಶಃ ನಿಜವೆನಿಸ ತೊಡಗಿತ್ತು. ತಮ್ಮ ಮಾತುಗಳು, ತತ್ವ ಸಿದ್ದಾಂತಗಳು ನಿಧಾನವಾಗಿಯಾದರೂ ಜನರಲ್ಲಿ ಪ್ರಭಾವ ಬೀರಲಾರಂಭಿಸಿವೆ ಎಂಬ ವಿಶ್ವಾಸ ಮೂಢಲಾರಂಭಿಸಿತ್ತು. ಆ ವಿಶ್ವಾಸದಿಂದಲೇ ಮಾತಿಗಾರಂಭಿಸಿದರು.
ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮಿಗಳು “ಮಹಾಜನಗಳೇ, ನೀವೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೀರಿ. ‘ಹಗರಣ ಪಕ್ಷ’ವನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂಬ ನನ್ನ ಕರೆಗೆ ಓಗೊಟ್ಟು ಅಪಾರ ಸಂಖ್ಯೆಯಲ್ಲಿ ನೆರೆದ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ.” ಎಂದೊಡನೆಯೆ, ಕರತಾಡನಗಳ ನಡುವೆ “ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾ,ಮೀಜಿ ಕೀ, ಜೈ ಜೈ” ಕಾರಗಳು ಮೊಳಗಿದವು. ಸ್ಫೂರ್ತಿಗೊಂಡ ಸ್ವಾಮಿಗಳು ಮುಂದುವರೆಸಿದರು. “ನೆನಪಿರಲಿ, ನೀವು ಇಲ್ಲಿ ಹಣ, ಹೆಂಡ ಮತ್ತಿತರ ಯಾವುದೇ ಆಮಿಷಗಳಿಲ್ಲದೆ ಸ್ವಯಂ ಪ್ರೇರಿತರಾಗಿ ಬಂದು ಸೇರಿದ್ದೀರಿ. ಆಮಿಷಗಳನ್ನು ತಿರಸ್ಕರಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ ಅತ್ತಾವರದ ಜನತೆಗಳಾದ ನೀವು ಇಂದು ನಾಡಿಗೇ ಮಾದರಿಯಾಗಿದ್ದೀರಿ…” ಎಂದೊಡನೆಯೇ ಮತ್ತೊಮ್ಮೆ ಕರತಾಡನಗಳ ನಡುವೆ “ಶ್ರೀಶ್ರೀಶ್ರೀ…ಜೈಜೈ…” ಕಾರಗಳು ಮೊಳಗಿದವು. ಹೀಗೆ ಜೈ ಜೈ ಕಾರಗಳಿಂದ ಪ್ರೇರಿತರಾಗಿ ಸ್ವಾಮಿಗಳು ಮತ್ತಷ್ಟು ಮಾತನಾಡುವುದು, ಅದರಿಂದ ಪ್ರೇರಿತರಾಗಿ ಅತ್ತಾವರದ ಮಹಾಜನತೆ ಮತ್ತಷ್ಟು “ಶ್ರೀಶ್ರೀಶ್ರೀ…ಜೈಜೈ…” ಕಾರಗಳನ್ನು ಮೊಳಗಿಸುವುದು ಮುಂದುವರೆದೇ ಇತ್ತು. ಅಷ್ಟರಲ್ಲೇ…,
ಅದ್ಯಾರೋ “ಏ, ನಾವ್ ಕಾಯ್ತಿದ್ ಜೀಪ್ ಬಂತು ಬನ್ರೋ…” ಎಂದು ಮತ್ತೆ ಕೂಗಿದೊಡನೆಯೇ ಮೈಮರೆತವರಂತೆ ಸ್ವಾಮಿಗಳ ಮಾತು ಕೇಳುತಲ್ಲಿದ್ದ ಅತ್ತಾವರದ ‘ಮಹಾಜನತೆ’ ಹಸಿದ ಹೆಬ್ಬುಲಿಯೊಂದು…, ಕಾಗೆಯೊಂದು ಕಾವ್‍ಗುಟ್ಟೊಡನೆ…, ಹೆಜ್ಜೇನ ಹಿಂಡು.., ಇತ್ಯಾದಿ ಇತ್ಯಾದಿ ತೆರದಿ ಬಂದ ಜೀಪಿನೆಡೆಗೆ ಓಟಕಿತ್ತರು. ಕ್ಷಣಾರ್ಧದಲ್ಲಿ, ಸ್ವಾಮಿಗಳ ಕಣ್ಣೆದುರಿನಲ್ಲೇ ಜನಸ್ತೋಮ ಬರಿದಾಗಿತ್ತು. ರೈತ ಸಂಘದ ಅಭ್ಯರ್ಥಿ ಶರಣಪ್ಪನ “ಅಣ್ಣಂದಿರ ಒಂದೈದ್ ನಿಮಿಷ ಕೂರ್ರೋ…” ಎಂಬ ಮಾತುಗಳು ಯಾರ ಕಿವಿಗೂ ಬಿದ್ದಂತಿರಲಿಲ್ಲ.
4
ಅವರನ್ನಾಗಲೇ ಜೀಪಿನಿಂದಿಳಿಯುತ್ತಲ್ಲಿದ್ದ ‘ಹಗರಣ’ ಪಕ್ಷದ ನೇತಾರ ಭ್ರಷ್ಟÀಪ್ಪ ಸೂಜಿಗಲ್ಲಿನಂತೆ ಸೆಳೆದಿದ್ದ. ಅವನೋ “ತಡೀರ್ರೋ ಮಾರ್ರಾಯ, ಎಲ್ರಿಗೂ ಆಗುತ್ತೆ. ನೀವ್ ಮೊದ್ಲು ‘ಕುಡ್ದಿದ್ದು ಸಾಕಾಗಿಲ್ಲ’ ಅಂದಿದ್ಕೆ ಮತ್ತೆ ಪೇಟೆಗ್ ಹೋಗಿ ಮತ್ತೊಂದು ರೌಂಡ್ ಡ್ರಿಂಕ್ಸ್ ತಂದಿಲ್ವ. ಮತ್ತೂ ಸಾಕಾಗ್ಲಿಲ್ಲ ಅಂದ್ರೆ ಹೇಳಿ, ಹೋಗಿ ಇನ್ನೊಂದ್ ರೌಂಡ್ ತರಣಂತೆ. ಎಲೆಕ್ಷನ್ ಮುಗಿಯತಂಕ ದಿನಾ ಇದ್ದುದ್ದೇ ಯಾಕೆ ಅರ್ಜೆಂಟ್ ಮಾಡ್ತೀರ…” ಎಂದು ಗದರಿಕೆಯ ದನಿಯಲ್ಲಿ ಸಮಾಧಾನಿಸುತ್ತಿದ್ದನೋ ಅಥವಾ ಸಮಾಧಾನಿಸುವಿಕೆಯ ದನಿಯಲ್ಲಿ ಗದರಿಸುತ್ತಿದ್ದನೊ ತಿಳಿಯಲಿಲ್ಲ. ಅಂತೂ ಅತ್ತಾವರದ ‘ಮಹಾಜನತೆ’ ತಮ್ಮ ಕೈಗೆ ಒಂದೋ, ಎರಡೋ ‘ಕ್ವಾಟರು’ ಸಿಕ್ಕಿದೊಡನೆ ಜೀವನ ಪಾವನವಾದಂತಹ ಧನ್ಯತಾ ಭಾವವನ್ನು ಹೊರ ಸೂಸುತ್ತಿದ್ದರು. ಕೆಲವರು ಇನ್ನೂ ಮುಂದುವರೆದು ಭ್ರಷ್ಟಪ್ಪನ ಪಾದಗಳನ್ನು ಸ್ಪರ್ಶಿಸಿ, “ಅಣ್ಣ, ಈ ಚುನಾವಣೇಲಿ ನೀನೇ ಗೆಲ್ಲದು. ನಿಮ್ ಹಗರಣ ಪಕ್ಷನೇ ಅಧಿಕಾರುಕ್ಕೆ ಬರದು.” ಎಂದು ‘ತೀರ್ಥಂಕರ’ ವಾಣಿಯನ್ನುದುರಿಸುತ್ತಿದ್ದರು. ಅಷ್ಟರಲ್ಲೇ ಮತ್ಯಾರೊ “ಹಗರಣ ಪಕ್ಷ್‍ಕೀ, ಭ್ರಷ್ಟಪ್ಪಜಿ ಕೀ…” ಎನ್ನಲಾರಂಭಿಸಿದುದರಿಂದ ಜೋರಾಗಿ “ಜೈ ಜೈ” ಕಾರಗಳು ಮೊಳಗಲಾರಂಭಿಸಿದವು.
5
ಸನಿಹದಲ್ಲಿಯೇ ಇದನ್ನೆಲ್ಲಾ ಕಂಡ ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮಿಗಳಿಗೆ ಅತ್ತಾವರದ ‘ಮಹಾಜನತೆ’ ತಮ್ಮ ಜೀಪಿಗೆ ‘ಆ ಪರಿ’ ಮುತ್ತಿಕ್ಕಿದ್ದಕ್ಕೆ, ತಮ್ಮ ಭಾಷಣಕ್ಕೆ ‘ಈ ಪರಿ’ ತಲೆದೂಗಿದ್ದಕ್ಕೆ ಕಾರಣ ಗಳು ಸ್ಪಷ್ಟವಾದವು. ಅತ್ತಾವರದ ‘ತೀರ್ಥಂಕರರ ದಿವ್ಯ ಸಾನಿಧ್ಯ’ದಲ್ಲಿ ಸ್ವಾಮಿಗಳಿಗೆ ವಾಸ್ತವತೆಯ ದಿಗ್ದರ್ಶನವಾಗಿತ್ತು !
* * *

 

ಕಥೆ : ಹೊಂಬೆಳಕು

About Author

1 thought on “ಕತೆ : ಸ್ವಾಮಿಗಳು ಕ್ಯಾನ್ವಾಸಿಗೆ ಬಂದ್ರು !

  1. ನನ್ನ ಗುರುಗಳು ಆದ ಪೂರ್ಣೇಶ್ ಸರ್ ರವರ ಸ್ವಾಮಿಗಳು ಕ್ಯಾನ್ವಸಿಗೆ ಬಂದ್ರು ಕಥೆ ತುಂಬಾ ಅರ್ಥಪೂರ್ಣವಾಗಿದೆ ನಿಮ್ಮಿಂದ ಇನ್ನಷ್ಟು ಕತೆ ಕವನಗಳು ಮೂಡಿಬರಲಿ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ