October 5, 2024

* ಧನಂಜಯ ಜೀವಾಳ

9448421946

 

ಈ ಎಲ್ಲಾ ಸಹಜವಾದ ಅವಾಂತರಗಳ ನಂತರ ಸಕಲೇಶಪುರ ತಲುಪಿದಾಗ ರಾತ್ರಿ ಗಂಟೆ ಎಂಟು. ಎರಡು ಗಂಟೆ ದೀರ್ಘಕಾಲದ ಪ್ರಯಾಣದ ನಂತರ ಬಸ್‍ಸ್ಟ್ಯಾಂಡಿನ ಟಾಯ್ಲೆಟ್‍ಗೆ ಹೋದರೆ ಉಸಿರುಕಟ್ಟಿ ಸಾಯುವಂಥಾ ಅನುಭವ! ಕೆ.ಎಸ್.ಆರ್.ಟಿ.ಸಿ ಯವರೋ ಅಥವಾ ಪುರಸಭೆಯವರೋ ಯಾರದ್ದೋ ಜವಾಬ್ದಾರಿ. ಅವರಂತೂ ಎಚ್ಚರವಾಗಿರಲಿಲ್ಲವೆಂದೆನಿಸುತ್ತೆ. ಅವರು ಎಚ್ಚರವಾಗಿರಲಿಲ್ಲವಾದ್ದರಿಂದ ನಮ್ಮನ್ನು ಒಳಗೆ ಬಂದೊಡನೆ ಎಚ್ಚರ ತಪ್ಪಿಸುವ ಹುನ್ನಾರವಿದೆಂದು ಕಾಣಿಸುತ್ತೆ. ಇದು ಇದೊಂದು ಊರಿನ ಸಮಸ್ಯೆಯಲ್ಲ. ಸಾರ್ವಜನಿಕ ಆಸ್ತಿ, ವ್ಯವಸ್ಥೆಯೆಂದರೆ ಈ ರೀತಿಯ ಅಸಡ್ಡೆ, ಅನಾದರ ಸಹಜವೇನೋ ಎಂಬ ಸಂದೇಹ ಮೂಡುತ್ತದೆ. ಯಾರೋ ಒಬ್ಬ ಒಳಗೆ ಸೇರಿಕೊಂಡಿದ್ದಾನೆ. ಟಾಯ್ಲೆಟ್ ಮೇಲ್ವಿಚಾರಕ ‘ಅಣ್ಣ ಸ್ವಲ್ಪ ಯಚ್ರ ಆಗಣ್ಣಾ, ಒಂದ್ ಗಂಟೆಯಾಯ್ತಲ್ಲ ಒಳಗೋಗಿ’ ಎಂದು ಬಾಗಿಲು ತಟ್ತಾ ಇದ್ದ. ನನಗನ್ನಿಸಿತು ಈ ವಾಸನೆಗೆ ಒಳಗೇ ಪರಂಧಾಮಗೈದಿರಬಹುದೆಂದು. ಹೊರಗೆ ನಿಂತು ಒಳಗೆ ಹೋಗಲು ಕಾಯುತ್ತಿದ್ದವನೊಬ್ಬ “ಅವರಿಗಲ್ಲಿ ನೆಮ್ಮದಿ, ನಮಗಿಲ್ಲಿ ಪ್ರಾಣಸಂಕಟ” ಎಂದು ಸ್ಫೋಟಕ್ಕೆ ಸಿದ್ದವಾಗುತ್ತಿರುವುದನ್ನು ತಡೆಯಲು ನುಲಿಯುತ್ತಾ ಕಣ್ಣುಗಳನ್ನು ಮೇಲಕ್ಕೆ ಸಿಕ್ಕಿಸಿಕೊಂಡು ಯಮಯಾತನೆ ಪಡುತ್ತಿದ್ದಾನೆ.

ಹಲವು ಶೌಚಾಲಯಗಳನ್ನು ಉದ್ಘಾಟಿಸಿದ ನಂತರ ಬಳಸಿದರೆ ಸ್ವಚ್ಛ ಮಾಡಲೇಬೇಕಾಗುತ್ತದೆ ಎಂದು ಬೀಗ ಹಾಕಿಡುವ ಅತಿ ಬುದ್ಧಿವಂತಿಕೆಯ ಕೆಲಸವನ್ನು ಮಾಡುತ್ತಾರೆ. ಭಾರೀ ಉತ್ಸಾಹದಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಾರೆ. ನಿರ್ಮಾಣದ ಗುತ್ತಿಗೆ ಪಡೆಯಲು ಭಾರೀ ಪೈಪೋಟಿಯ ನಂತರ ವಿದ್ಯುತ್, ನೀರು, ಯೂಜೀಡಿ ಸಂಪರ್ಕ ಕಲ್ಪಿಸದೇ ಅಭೂತಪೂರ್ವ ಲೋಕಾರ್ಪಣೆ ಕಾರ್ಯಕ್ರಮವೂ ನಡೆಯುತ್ತದೆ. ಇಂಜಿನೀಯರ್, ಅಧಿಕಾರಿ, ಪ್ರಜಾಪ್ರತಿನಿಧಿಗೆ ಸಲ್ಲಬೇಕಾದ್ದು ಸಲ್ಲಿಸಿದ ನಂತರ ಗುತ್ತಿಗೆದಾರನಿಗೆ ಬಿಲ್ ಹಣ ಪಾವತಿಯೂ ಆಗುತ್ತದೆ. ಅಲ್ಲಿಗೆ ಮುಗಿಯಿತು ಮುಖ್ಯದ್ವಾರಕ್ಕೆ ಬೀಗ ಹಾಕಲಾಗುತ್ತೆ. ಜನ ಆ ಕಟ್ಟಡದ ಪಕ್ಕದ ಅಥವಾ ಹಿಂಭಾಗದ ಗೋಡೆಗೆ ಪನ್ನೀರಿಡಲಾರಂಭಿಸುತ್ತಾರೆ. ಕಟ್ಟಡದ ಸುತ್ತಲೂ ಮುಳ್ಳುಕಂಟಿಗಳ ಪೊದೆ, ಸುತ್ತಲೂ ಜನರಾರೂ ಸುಳಿದಾಡದಂತಾ ಸನ್ನಿವೇಶ ನಿರ್ಮಾಣವಾಗುತ್ತದೆ. ಕಟ್ಟಡದ ಮೇಲೆ ಸಾರ್ವಜನಿಕ ಶೌಚಾಲಯ ಬೋರ್ಡ್, ಮುಂದಿನ ಗೋಡೆಯಲ್ಲಿ ನಿರ್ಮಾಣ ಪ್ರಾರಂಭೋತ್ಸವದ ಅಮೃತಶಿಲೆ!!!!
ಯಾಕೋ ಇದ್ದಕ್ಕಿದ್ದಂತೆ ಒಂದು ವಿಶಿಷ್ಠ ಘಟನೆ ನೆನಪಿಗೆ ಬಂತು. ಎಂಬತ್ತರ ದಶಕದಲ್ಲಿ ರೈತ ಚಳುವಳಿ ಉತ್ತುಂಗದಲ್ಲಿದ್ದ ದಿನಗಳವು. ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ನಾಡಿನ ಮೂಲೆಮೂಲೆಯಿಂದ ಸಾವಿರಾರು ಮಂದಿ ರಾಜಧಾನಿಯಲ್ಲಿ ಜಮಾಯಿಸಿದ್ದರು. ರೈತರ ಹಸಿವನ್ನು ತಣಿಸಲೇನೋ ಒಂದಷ್ಟು ಅನ್ನ, ಮುದ್ದೆ ಬೇಯಿಸಲು ವ್ಯವಸ್ಥೆಯಾಗಿತ್ತು. ಆದರೆ, ಹಸಿವನ್ನು ನೀಗಿಸಿಕೊಂಡ ನಂತರ ವಿಸರ್ಜನೆಗೆ ಸೂಕ್ತ ಅನುಕೂಲಗಳಿರಲಿಲ್ಲ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೇನುಗೂಡಿನಂತೆ ಸೇರಿದ್ದ ಆ ರೈತಸ್ತೋಮದ ಶೌಚಕ್ಕೆ ವ್ಯವಸ್ಥೆ ಮಾಡುವುದು ಸಾಧ್ಯವೂ ಇರಲಿಲ್ಲ ಬಿಡಿ. ಮೊದಲೇ ಆಡಳಿತ, ಸರ್ಕಾರ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಮೇಲಿನ ಕೊನೆಮೊದಲಿಲ್ಲದ ಅಸಹನೆಯಿಂದ ಕುದಿಯುತ್ತಿದ್ದ ಅನ್ನದಾತರು ಒಕ್ಕೊರಲಿನಿಂದ ಘೋಷಿಸಿದ್ದೇ ಕಕ್ಕಸ್ ಚಳುವಳಿ. ಭದ್ರತಾ ಸಿಬ್ಬಂಧಿಯ ಪ್ರತಿರೋಧವನ್ನೂ ಲೆಕ್ಕಿಸದೇ ವಿಧಾನಸೌಧದಾವರಣದ ಮೂಲೆಮೂಲೆಯಲ್ಲಿ, ಸುತ್ತಮುತ್ತಲಿನ ಉದ್ಯಾನಗಳಲ್ಲಿ, ಆಡಳಿತ ಪಡಸಾಲೆಯ ಕಂಬಕಂಬಗಳ ಮರೆಯಲ್ಲಿ ಅಸಹನೆಯ ಇಂಧನ ಚೆಲ್ಲಿ, ಸೇಡಿನ ಬೆಂಕಿಯನ್ನು ಹಚ್ಚಿದ ರೈತರು ವಾರದ ನಂತರ ತಮ್ಮೂರಿಗೆ ಹಿಂದಿರುಗಿದರೂ ಆ ಬೆಂಕಿ ಆರಲು ಒಂದು ತಿಂಗಳೇ ಹಿಡಿದಿತ್ತು. ಹಲವಾರು ವರ್ಷಗಳಿಂದ ರಜೆಯನ್ನೇ ಹಾಕದಿದ್ದ ನೌಕರಶಾಹಿ ಧೀರ್ಘ ರಜೆಗೆ ಶರಣಾಗಿದ್ದೂ ಇತಿಹಾಸ.

ಎನ್.ವೈ.ಎ.ಸಿ. ನವರು ರಾತ್ರಿಯ ಟ್ರೇನ್‍ನಲ್ಲಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ಬೆಳಗಿನ ಜಾವ ನಾಲ್ಕಕ್ಕೆ ಬರುವರೆಂದು ತಿಳಿದುಕೊಂಡಿದ್ದೆ. ಅಲ್ಲಿ ಅವರನ್ನು ಕೂಡಿಕೊಂಡು ಮರುದಿನದ ಚಾರಣಕ್ಕೆ ಮುಂದುವರೆಯುವದೆಂದು ಯೋಜಿಸಿದ್ದೆ. ಸಕಲೇಶಪುರದ ಬಸ್‍ಸ್ಟ್ಯಾಂಡಿನ ಹಿಂಭಾಗದ ವಸತಿ ಗೃಹವೊಂದರಲ್ಲಿ ವಾಸ್ತವ್ಯ ಹೂಡಿದ್ದ ನಾನು ರಾತ್ರಿ ಊಟಕ್ಕೆ ಹೋದಾಗ ಹೋಟೆಲಿನ ಹುಡುಗರನ್ನು ರೈಲ್ವೆಟ್ರ್ಯಾಕ್ ಬಗ್ಗೆ ವಿಚಾರಿಸಿದೆ. ಅವನು ನನ್ನನೊಮ್ಮೆ ಮೇಲಿಂದ ಕೆಳಗೆ ನೋಡಿ, “ಈಗ ಯಾಕೆ ಹೋಗ್ತಿರಿ ಸಾರ್, ಅಲ್ಲಿ ಟ್ರ್ಯಾಕ್ ಇತ್ತು ಅನ್ನೋದೆ ಮರೆತು ಹೋದಂತಾಗಿದೆ. ವಿಪರೀತ ಕಾಡು ಬೆಳೆದಿದೆ. ನಿಮಗೆ ಹೋಗಲೇಬೇಕೆಂದಿದ್ದರೆ ನಾನೊಂದು ಐಡಿಯಾ ಕೊಡ್ತೀನಿ ಹಾಗೇ ಮಾಡಿ. ಇಲ್ಲಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಮಾರನಹಳ್ಳಿ ಎಂಬ ಸ್ಟಾಪ್ ಇದೆ. ನಾನೂ ಅದೇ ಊರಿನವ. ಅಲ್ಲಿಳಿದು ನಡೆದರೆ ಒಂದು ಕಿಲೋಮೀಟರ್‍ಗೆ ರೈಲ್ವೆ ಕಂಬಿ ಸಿಗುತ್ತೆ” ಎಂದ.

ಸರಿ, ಊಟ ಮುಗಿಸಿಕೊಂಡು ಲಾಜ್‍ಗೆ ಹೋದ ನಾನು, ರೂಂ ಬಾಯ್‍ಗಳನ್ನು ವಿಚಾರಿಸಿಕೊಂಡು ಅವರ ಸಲಹೆಯಂತೆ ನನ್ನ ಪ್ರಯಾಣದ ಪ್ಲಾನನ್ನು ಬದಲಾಯಿಸಿಕೊಂಡೆ. ಬೆಳಿಗ್ಗೆ ಬೇಗನೆದ್ದು ಯಾವುದಾದರೂ ವೆಹಿಕಲ್‍ನಲ್ಲಿ ಮಾರನಹಳ್ಳಿಯವರೆಗೆ ಡ್ರಾಪ್ ತೆಗೆದುಕೊಂಡು ಎನ್.ವೈ.ಎ.ಸಿಯವರನ್ನು ಕಾಡಿನ ನಡುವೆ ಎದುರಾಗಿ ಸಪ್ರ್ರೈಸ್ ಮಾಡುವುದೆಂದು ಅಂದುಕೊಳ್ಳುತ್ತಾ ವಾಪಾಸ್ ಬರುವಾಗ ಸ್ವಲ್ಪ ಹಣ್ಣು, ಬ್ರೆಡ್, ಚಿಪ್ಸ್ ಮುಂತಾದುವನ್ನು ತೆಗೆದುಕೊಂಡು ಬೇಗ ಮಲಗಿ ಬೆಳಿಗ್ಗೆ ಆದಷ್ಟು ಬೇಗ ಏಳಬೇಕೆಂದುಕೊಂಡು ವಸತಿಗೃಹಕ್ಕೆ ಬಂದವನೇ ಇನ್ನೊಮ್ಮೆ ಅಲ್ಲಿಯ ಮೇನೇಜರ್‍ನನ್ನು ಕಂಡು ರೈಲ್ವೇ ದಾರಿಯ ಬಗ್ಗೆ ತಿಳಿದುಕೊಂಡೆ. ಏನಾದರಾಗಲೀ ಇದೂ ಒಂದು ಪ್ರಯೋಗ ನಡೆಯಲೆಂದು ನಿರ್ಧರಿಸಿದೆ. ನಾನಲ್ಲಿಯವರೆಗೂ ಎನ್.ವೈ.ಎ.ಸಿಯವರನ್ನು ಭೇಟಿಯಾದದ್ದಿರಲಿ, ನೋಡಿಯೂ ಇರಲಿಲ್ಲ. ಇದಕ್ಕಿಂತ ಮುಖ್ಯವಾಗಿ ಸಕಲೇಶಪುರದಿಂದ ಮಂಗಳೂರಿನ ರಸ್ತೆಯಲ್ಲಿ ಬಸ್‍ನಲ್ಲಿ ಹಗಲಿನಲ್ಲಿ ಬಿಟ್ಟರೆ ಎಂದೂ ಒಂಟಿಯಾಗಿ ಪ್ರಯಾಣಿಸಿಯೂ ಇರಲಿಲ್ಲ. ಹೇಗೋ ಆಗುತ್ತೆ ಎಂದುಕೊಂಡು ಬೆಳ್ಳಂಬೆಳಿಗ್ಗೆಯೇ ಸ್ಪೆಷಲ್ ಅಪೀಯರೆನ್ಸ್ ಕೊಡೋಣವೆಂದು ನಿದ್ರೆಗಾಗಿ ಹಾಸಿಗೆಯಲ್ಲಿ ಉರುಳಿದೆ. ಬೆಳಿಗ್ಗೆ ಮೂರೂವರೆಗೆ ಎದ್ದು ನಾಲ್ಕೂವರೆಗೆ ಮಾರನಹಳ್ಳಿ ತಲುಪಿ, ಐದೂವರೆಗೆ ಬರುವ ಎನ್.ವೈ.ಎ.ಸಿ. ಯವರನ್ನು ರೈಲ್ವೆ ಹಳಿಗಳ ಮೇಲೆ ಭೇಟಿಮಾಡುವುದೆಂದು ನಿರ್ಧರಿಸಿದೆ. ಬೆಳಿಗ್ಗೆ ಯಾವುದಾದ್ರೂ ಮುಖ್ಯವಾದ ಕೆಲಸ ಅಥವಾ ವಿಶೇಷ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದರೆ ರಾತ್ರಿ ಎಷ್ಟರ ಮಟ್ಟಿಗೆ ನಿದ್ರೆ ಬರುವುದೆಂದು ನಿಮಗೇ ಗೊತ್ತು. ಎಷ್ಟೊತ್ತಿಗೆ ಬೆಳಗಾಗುತ್ತೆ, ಹೋಟೆಲಿನವನು, ಲಾಜ್‍ನವನು ನೀಡಿದ ಮಾಹಿತಿ ಎಷ್ಟರಮಟ್ಟಿಗೆ ಸರಿ ಎಂದುಕೊಳ್ಳುತ್ತಾ ಎದೆಯೊಳಗೆ ರೈಲು ಓಡಿಸಿಕೊಳ್ಳುತ್ತಿದ್ದೆ.

ಈ ಕುತೂಹಲ, ಉತ್ಸಾಹ, ಆತಂಕಗಳು ಮನುಷ್ಯನನ್ನು ಕುಂತಲ್ಲಿ ಕೂರಿಸದೇ ಸದಾ ಎಚ್ಚರ ಜಾಗೃತಿಯಲ್ಲಿಡುತ್ತವೆ. ನಾಳೆ ಬೆಳಿಗ್ಗೆ ಸ್ವಲ್ಪ ದೂರ ಒಬ್ಬಂಟಿಯಾಗಿ ಅಪರಿಚಿತ ಜಾಗದಲ್ಲಿ ನಡೆಯಬೇಕಾಗುತ್ತದೆಯೆಂಬ ಕಲ್ಪನೆಯೇ ನನ್ನನ್ನು ಪುಳಕಗೊಳಿಸಿತ್ತು. ರಾತ್ರಿಯಿಡೀ ಬೆಳಗಿನ ನಿರೀಕ್ಷೆಯಲ್ಲೇ ನಿದ್ದೆ ಬರಲಿಲ್ಲ. ಎಷ್ಟೊತ್ತಿಗೆ ಏಳ್ತೀನಿ, ತಡವಾದರೆ ನಮ್ಮ ತಂಡದವರು ನನಗಿಂತ ಮುಂಚೆಯೇ ಪಾಸ್ ಆಗಿ ಹೋದರೆ ನಾನು ತ್ರಿಶಂಕು ಸ್ಥಿತಿಗೆ ಸಿಕ್ಕಿಹಾಕಿಕೊಳ್ತೇನೆ. ಹೇಗಾದರೂ ಅವರಿಂದ ತಪ್ಪಿಸಿಕೊಳ್ಳದಂತೆ, ಮುಂಚೆಯೇ ಕೀ ಪಾಯಿಂಟ್ ತಲುಪಬೇಕೆಂದು ಹೊರಳಿ ಹೊರಳಿ ಕಡೆಗೂ ಎದ್ದೆ. ಇದು ನಿದ್ದೆ ಬರುವ ಲಕ್ಷಣವಲ್ಲ ಎಂದೆನಿಸಿ ಎದ್ದವನು ಸ್ನಾನ ಮುಗಿಸಿದೆ. ಆತಂಕದಿಂದ ಹಸಿವಾಗಿ ಸ್ವಲ್ಪ ಹಣ್ಣು, ಬ್ರೆಡ್ಡನ್ನು ತಿಂದು ನೀರು ಕುಡಿದೆ.

ಇಡೀ ಪಟ್ಟಣದಲ್ಲಿ ಗಂವ್ವೆನಿಸುವ ನೀರವತೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೂ ಯಾವುದೇ ವಾಹನ ಸಂಚಾರದ ಸುಳಿವಿರಲಿಲ್ಲ. ಹೋಟೆಲ್‍ನ ಮೆಟ್ಟಿಲಲ್ಲಿ ಚಳಿಗೆ ಮುದುರಿ ಮಲಗಿದ್ದ ನಾಯಿಯೊಂದು ನನ್ನ ಹೆಜ್ಜೆಯ ಸಪ್ಪಳಕ್ಕೆ ಮಿಡುಕಿ ಬಿದ್ದು ಎಚ್ಚರಾಗಿ ತಲೆಯೆತ್ತಿ ನೋಡಿ ನಿಧಾನವಾಗಿ ಗುರುಗುಟ್ಟಿ ಹಾಗೇ ನಿಂತಲ್ಲಿಯೇ ಎರಡು ಸುತ್ತು ತಿರುಗಿ, ಮತ್ತದೇ ಭಂಗಿಯಲ್ಲಿ ನಿದಿರಾದೇವಿಗೆ ಶರಣಾಯಿತು. ನಿರ್ಜನ ರಸ್ತೆ, ನೀರವ ವಾತಾವರಣ. ಹಾದಿಬದಿಯ ಟ್ಯೂಬ್‍ಲೈಟ್ ಬೆಳಕಿನಲ್ಲಿ ಮಂಜು ರಾಶಿ ರಾಶಿ ಬೀಳುತ್ತಿರುವುದು ಕಾಣಿಸಿತು. ಲೈಟ್‍ನ ಸುತ್ತ ಬೃಹದಾಕಾರದ ಬಲೂನನ್ನು ಹಾಗೇ ಅಂತರಾಳದಲ್ಲಿ ಯಾರೋ ಸೃಷ್ಟಿಸಿದ್ದಾರೇನೋ ಅನ್ನಿಸುವಂತೆ ಹಾದಿಯುದ್ದಕ್ಕೂ ಇದ್ದ ಕರೆಂಟಿನ ಕಂಬಗಳಲ್ಲಿ ಮಂಜು ಮುತ್ತಿಕೊಂಡಂತೆ ಭಾಸವಾಗುತ್ತಿತ್ತು. ಮನುಷ್ಯ ಪ್ರಾಣಿಯದೊಂದೂ ಸುಳಿವಿರಲಿಲ್ಲ. ಅಲ್ಲಲ್ಲಿ ಜೀರುಂಡೆಗಳು ತಮ್ಮ ರೆಕ್ಕೆಯುಜ್ಜಿ ಜಿರ್ಕ್ ಜಿರ್ಕ್ ಎಂದು ಸದ್ದು ಮಾಡುತ್ತಿದ್ದವು. ರಸ್ತೆ ಬದಿಯ ಚರಂಡಿಗಳಲ್ಲಿ ಹಂದಿಮರಿ ಗಾತ್ರದ ಹೆಗ್ಗಣಗಳು ಗುಡುಗುಡು ಗದ್ದಲ ಮಾಡುತ್ತಾ, ಒಂದನ್ನೊಂದು ಅಟ್ಟಿಸಿಕೊಂಡು ಗೊರಗೊರ ಸದ್ದು ಮಾಡುತ್ತಿದ್ದವು. ಅಂಗಡಿಯವರು ಕಸವನ್ನೆಲ್ಲಾ ರಾತ್ರಿ ಗುಡ್ಡೆಹಾಕಿ ಬೆಂಕಿಕೊಟ್ಟ ಪೇಪರ್, ರಟ್ಟಿನ ಬೂದಿ ಬೀಸಲೋ ಬೇಡವೋ ಎಂಬಂತೆ ಮಿಸುಕಾಡುತಿದ್ದ ಗಾಳಿಗೆ ನಿಧಾನವಾಗಿ ಹರಡುತ್ತಾ ಚೆದುರಿಹೋಗುತಿತ್ತು. ಯಾವುದೋ ಲಾರಿಯ ಚಕ್ರಕ್ಕೆ ಸಿಕ್ಕು ಎದೆಯಿಂದ ಬಾಲದವರೆಗೆ ಚಟ್ನಿಯಾಗಿದ್ದ ಬೆಕ್ಕೊಂದು ರಸ್ತೆಯ ಮೇಲೆ ಅನಾಥ ಶವವಾಗಿತ್ತು. ರಸ್ತೆ ಬದಿ ಎಳನೀರು, ಹಣ್ಣು ಮಾರುವ ಅಂಗಡಿಯವರು ಹಿಂದಿನ ದಿನದ ವ್ಯಾಪಾರ ಮುಗಿಸಿ ತಮ್ಮ ಅಂಗಡಿಯನ್ನೂ ಎತ್ತಿಡದೇ, ಹಾಗೇ ಅದಕ್ಕೆ ಟಾರ್ಪಾಲಿನ್ ಅನ್ನು ಹೊದೆಸಿ ಮುಚ್ಚಿಗೆ ಹಾಕಿದ್ದರು. ಹಣ್ಣಿನ ಜೊತೆಯೇ ಹಣ್ಣಾಗಿ ಮಲಗಿದ್ದವನೊಬ್ಬ ಕೆಮ್ಮಿ, ಮಗ್ಗುಲು ಹೊರಳಿಸಿ ಮಲಗಿದಾಗ ನಾನು ಬೆಚ್ಚಿಬಿದ್ದೆ. ಯಾವುದೋ ವಸ್ತುವಿನ ರಾಶಿಯೆಂದುಕೊಂಡು ದಾಟಿ ಮುಂದೆ ಹೋಗುತ್ತಿದ್ದ ನನಗೆ ಆ ರಾಶಿಯಿಂದ ಕೆಮ್ಮಿದ ಸದ್ದು ಕೇಳಿ ಬೆಚ್ಚಿದಂತೆ ಗಕ್ಕೆನಿಸಿತು.

ರೂಂ ಚೆಕ್‍ಔಟ್ ಮಾಡಿ ಬಸ್‍ಸ್ಟಾಂಡಿಗೆ ಬಂದಾಗ ಆ ರಾತ್ರಿಯ ನೀರವತೆ, ನಿರ್ಜನ ವಾತಾವರಣ ಕಂಡು ದಿಗಿಲಾದರೂ ಟ್ರಕ್ಕಿಂಗ್‍ನ ರೋಚಕತೆಯನ್ನು ಕಲ್ಪಿಸಿಕೊಳ್ಳುತ್ತಾ ಉತ್ತೇಜನಗೊಳ್ಳುತ್ತಿದ್ದೆ. ನಿರ್ಜನವಾಗಿದ್ದ ಬಸ್‍ಸ್ಟಾಂಡ್‍ನಲ್ಲಿ ಬಂದು ನಿಂತ ನನಗೆ ರಾಷ್ಟ್ರೀಯ ಹೆದ್ದಾರಿಯ ಎಡಬಲಗಳೆರಡೂ ನೇರವಾಗಿ ಸುಮಾರು ಅರ್ಧ ಕಿಲೋಮೀಟರ್‍ವರೆಗೆ ಕಾಣುತಿತ್ತು. ವಿದ್ಯುತ್ ಕಂಬದ ಮೇಲಿನ ಮಂಜು ಮೆತ್ತಿಕೊಂಡ ಟ್ಯೂಬ್‍ಲೈಟ್‍ಗಳು ದೂರ ದೂರವಾದಂತೆ ಹತ್ತಿ ಹಿಂಜಿದಂತೆ ತೋರುತಿದ್ದವು. ಹದಿನೈದಿಪ್ಪತ್ತು ನಿಮಿಷಗಳಿಗೊಮ್ಮೆ ಭಾರೀ ಲೋಡ್ ಹೊತ್ತಿದ್ದ ಲಾರಿಗಳು, ಆಯಿಲ್ ಟ್ಯಾಂಕರ್‍ಗಳು ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದವು. ಸುಮಾರು ನಾಲ್ಕೈದು ವಾಹನಗಳಿಗೆ ಡ್ರಾಪ್‍ಗಾಗಿ ಕೈತೋರಿಸಿ ಮುಖಭಂಗ ಮಾಡಿಸಿಕೊಂಡಿದ್ದೆ. ಡ್ರೈವರ್‍ಗಳೊಮ್ಮೊಮ್ಮೆ ಈ ಅಪರಾತ್ರಿಯಲ್ಲಿ ವಾಹನ ನಿಲ್ಲಿಸಲು ಕೈಅಡ್ಡ ಚಾಚಿದ ನನ್ನನ್ನು ನಿರ್ಲಕ್ಷದಿಂದ ಮತ್ತು ಅನುಮಾನದಿಂದ ನೋಡಿ, ತಾವು ಬರುತ್ತಿದ್ದ ವೇಗದಲ್ಲೇ ಸುಂಯ್ ಎಂದು ಚಲಿಸಿ ಅಂತರ್ಧಾನಾಗುತ್ತಿದ್ದರು.

ಎಡಬಾಗಕ್ಕೆ ಸ್ವಲ್ಪವೇ ದೂರದಲ್ಲಿ ಎರಡೇ ದೀಪಗಳು ಕಾಣುತಿದ್ದು ಉಳಿದಂತೆ ಪೂರಾ ಕತ್ತಲೆಯ ಕೂಪವಾಗಿದ್ದ ಬಸ್‍ಸ್ಟಾಂಡ್‍ನ ರಸ್ತೆ ಬದಿಯ ಚರಂಡಿ ಮೇಲಿನ ಕಲ್ಲುಚಪ್ಪಡಿಯ ಮೇಲೆ ನಿಂತು, ಭಾರವಾದ ಬ್ಯಾಗನ್ನು ಬೆನ್ನಿಗೆ ನೇತು ಹಾಕಿಕೊಂಡು ಮಾರನಹಳ್ಳಿಗೆ ಹೋಗಲು ಏನಾದರೂ ಸಿಕ್ಕೀತೆಂದು ಕಾಯಲಾರಂಭಿಸಿದೆ. ಸುಮಾರು ಮುಕ್ಕಾಲು ಗಂಟೆಯ ಕಾಲ ಒಂದೇ ಒಂದು ವಾಹನದ ಸದ್ದಿಲ್ಲ. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ನಿರಂತರ ವಾಹನ ಸಂಚಾರವಿರುತ್ತೆ ಯಾವುದರಲ್ಲಿಯಾದರೂ ಹೋಗೋಣ ಎಂದುಕೊಂಡಿದ್ದವನಿಗೆ ಪಿಚ್ಚೆನ್ನಿಸಿತು. ನಿಂತಿದ್ದ ಚಪ್ಪಡಿಯಡಿಯೇ ಹೆಗ್ಗಣಗಳು ದುಡದುಡನೇ ಓಡಾಡುತ್ತಿದ್ದವು. ಯಾಕೋ ಕೈಗೆ ಕಟ್ಟಿದ್ದ ವಾಚಿನೆಡೆಗೆ ನೋಡ್ತೀನಿ ಅದು ಬೆಳಗಿನ ನಾಲ್ಕೂ ಮೂವತ್ತು ತೋರಿಸುತಿತ್ತು. ಥೋ! ಎಂಥಾ ಕೆಲಸ ಮಾಡಿದೆ. ಹೊರಡುವ ಆತಂಕದಲ್ಲಿ ನಿದ್ದೆ ಬಾರದೇ ಇಷ್ಟು ಬೇಗ ಅನವಶ್ಯಕವಾಗಿ ಈ ಅಪರಾತ್ರಿಯಲ್ಲಿ ರಸ್ತೆ ಬದಿ ನಿಲ್ಲುವ ಕೆಲಸ ಮಾಡಿಕೊಂಡೆನಲ್ಲ ಎಂದುಕೊಂಡೆ. ಅಷ್ಟರಲ್ಲಿ ಯಾವುದೋ ವಾಹನ ಆ ಮಂಜಿನಲ್ಲಿ ಎಷ್ಟು ಸಾಧ್ಯವೋ ಅಷ್ಟೇ ಬೆಳಕನ್ನು ಚೆಲ್ಲಿಕೊಂಡು ಏದುಸಿರು ಬಿಡುತ್ತಾ ದೂರದಲ್ಲಿ ಬರುತಿತ್ತು. ಆದದ್ದಾಗಲೀ ಎಂದು ನಿಲ್ಲಿಸಿ ಹತ್ತುವುದೆಂದು ಯೋಚಿಸಿ ಕೈ ಅಡ್ಡ ಹಾಕಿದೆ. ಆ ಬೃಹದಾಕಾರದ ಲಾರಿ ನನ್ನನ್ನು ಯಕಶ್ಚಿತ್ ಹುಳವೆಂದು ಸಹಾ ಗಮನಿಸದೆ ಬಂದ ರಾಜಗಾಂಭೀರ್ಯದಿಂದಲೇ ನನ್ನನ್ನು ದಾಟಿಕೊಂಡು ತಿರುವಿನಲ್ಲಿ ಮರೆಯಾಯ್ತು. ಮತ್ತದೇ ಜೀರುಂಡೆ ಸದ್ದು ಬಹಳ ಹೊತ್ತು. ಮತ್ತೆ ಎರಡು ಹೆಡ್‍ಲೈಟ್‍ಗಳನ್ನು ಬಿಟ್ಟುಕೊಂಡು ಟ್ಯಾಂಕರ್ ಒಂದು ಬಂದು ಬಂದಂತೇ ಕೈಯಡ್ಡ ತೋರಿಸಿದರೂ ಕೇರ್ ಮಾಡದೇ ಹೋಯ್ತು. ಬೆಳಗಿನ ಜಾವವಾದ್ದರಿಂದ ವಾಹನ ಸಂಚಾರ ವಿರಳವಾಗಿತ್ತು. ರಾತ್ರಿಯಿಡೀ ವಾಹನ ಚಾಲನೆ ಮಾಡಿದವರಿಗೆ ಇದು ನಿದ್ರೆಯ ಸಮಯ. ಮತ್ತೆರಡು ಲಾರಿಗಳು ಬಂದವು; ಅವೋ, ಸ್ವಲ್ಪ ದೂರದಲ್ಲಿ ರಸ್ತೆ ಬದಿಯಲ್ಲಿ ನಿದ್ರೆಗಾಗಿ ರೆಸ್ಟ್ ತೆಗೆದುಕೊಳ್ಳಲು ನಿಂತವು.
ಅಷ್ಟರಲ್ಲಿ ಯಾರೋ ಒಬ್ಬ ಏನನ್ನೋ ಹೊರಲಾರದೇ ಅದನ್ನೇ ಅಡ್ಡಾದಿಡ್ಡಿಯಾಗಿ ಹೊತ್ತುಕೊಂಡು ಬರುವುದು ದೂರದಲ್ಲಿ ನೆರಳಿನಂತೆ ಕಾಣಿಸಿತು. ನನ್ನಂತೆ ಯಾರೋ ಅಬ್ಬೇಪಾರಿಯಿರಬೇಕೆಂದು, ಸರಿ ಈ ನಿರ್ಜನ ಪ್ರದೇಶದಲ್ಲಿ ಜೊತೆಗೆ ನಿಲ್ಲಲಿಕ್ಕಾದರೂ ಒಬ್ಬ ಸಿಕ್ಕಿದನಲ್ಲಾ ಎಂದುಕೊಂಡೆ. ಹತ್ತಿರ ಬರಬರುತ್ತಾ ನೋಡ್ತೇನೆ, ಮಡಚಬಹುದಾದ ಕಬ್ಬಿಣದ ಟೇಬಲ್. ಒಂದು ಸೀಮೆಎಣ್ಣೆಯ ಪಂಪ್ ಸ್ಟೌ, ಮತ್ತಿನ್ನೇನೋ ಚೀಲ, ಒಂದು ಕ್ಯಾನ್ ಹೀಗೆ ಏನೇನೋ ತಂದು ನನ್ನ ಪಕ್ಕದಲ್ಲಿನ ಕರೆಂಟಿನ ಕಂಬದ ಬಳಿ ತಂದಿಳಿಸಿದವನೇ, ಬ್ಯಾಗನ್ನು ಕರೆಂಟ್ ಕಂಬಕ್ಕೆ ಸುತ್ತಿದ ತಂತಿಯೊಂದಕ್ಕೆ ನೇತುಹಾಕಿ ಟೇಬಲ್ ಅನ್ನು ಬಿಡಿಸಿಟ್ಟ. ಜೇಬಿನಿಂದ ಬೀಡಿ ಕಟ್ಟನ್ನು ತೆಗೆದು ಒಂದು ಬೀಡಿ ಬಾಯಿಗಿಟ್ಟುಕೊಂಡು ಕಡ್ಡಿ ಗೀರಿ ಸೇದುತ್ತಾ ಹೊಗೆಬಿಡತೊಡಗಿದ. ಟೇಬಲ್ ಮೇಲೆ ಸ್ಟೌ ಇಟ್ಟು, ಚೆನ್ನಾಗಿ ಪಂಪ್ ಮಾಡಿ ಸ್ಟೌ ಹೊತ್ತಿಸಿದ. ಬಿಸಿಯೇರುವವರೆಗೆ ಮೊಳದೆತ್ತರಕ್ಕೆ ಉರಿಯತೊಡಗಿದ ಸ್ಟೌ ಅನ್ನು ಹಾಗೇ ಬಿಟ್ಟು, ಕ್ಯಾನ್ ಹಾಗೂ ಒಂದು ಬಕೇಟನ್ನು ಎತ್ತಿಕೊಂಡು ನಿಂತಿದ್ದಲ್ಲಿಂದ ಹಿಂಭಾಗದಲ್ಲಿದ್ದ ಗಲ್ಲಿಯೊಳಗೆ ಮಾಯವಾದ. ಅದೆಂಥ ನೀರೋ? ತುಂಬಿಸಿಕೊಂಡು ಬಂದು ಹಾಲಿನ ಪ್ಯಾಕೆಟ್ ಒಡೆದು ಪಾತ್ರೆಯೊಳಗೆ ಹಾಕಿ ಕಾಯಿಸಲು ಶುರೂ ಮಾಡಿದ. ಚೀಲ ಬಿಚ್ಚಿ ಅದರಿಂದ ಬಿಸ್ಕೆಟ್ ಪ್ಯಾಕ್‍ಗಳೂ, ಬನ್‍ಗಳನ್ನೂ ಟೇಬಲ್ ಮೇಲೆ ಜೋಡಿಸಿ, ಆ ನಿರ್ಜೀವ ಸ್ಥಳಕ್ಕೆ ಆ ದಿನದ ಆರಂಭದ ಮುನ್ನುಡಿ ಬರೆದೇಬಿಟ್ಟ. ಅಷ್ಟರಲ್ಲಿ ಮತ್ತೊಂದು ಲಾರಿ ಬಂದು ಈ ಟೀ ಸ್ಟಾಲಿನ ಬಳಿ ನಿಂತಿತು. ನನಗೆ ಭಾರೀ ಖುಷಿಯಾಯ್ತು. ಇದರಲ್ಲಾದರೂ ಡ್ರಾಪ್ ತಗೋಣವೆಂದುಕೊಂಡೆ. ಡ್ರೈವರ್, ಕ್ಲೀನರ್‍ಗಳಿಬ್ಬರೂ ಇಳಿದು ಬೀಡಿ ಹೊತ್ತಿಸಿ, ಒಂದಷ್ಟು ಹೊತ್ತು ಹೊಗೆ ಬಿಟ್ಟು, ಬನ್ ತಿಂದು, ಟೀ ಕುಡಿದರು. ಟೀ ಕುಡಿಯುತ್ತಿದ್ದವರಿಗೆ ನಾನು ಮಾರನಹಳ್ಳಿಯವರೆಗೆ ಬರುವುದಾಗಿ ತಿಳಿಸಿದೆ. ಅವರು ಕೇಳಿಸಿಕೊಂಡು ಅವರವರಲ್ಲೇ ಏನೋ ಮಾತನಾಡಿಕೊಂಡರು. ಆಗೋದಿಲ್ಲವೆಂದು ಹೇಳಿ ಸೀದಾ ಲಾರಿಯೇರಿ ಹೊರಟರು. ನನಗೂ ಟೀ ಕುಡಿಯುವ ಮನಸ್ಸಾದರೂ ಈ ಮನುಷ್ಯ ಎಂಥಾ ನೀರು ಹಾಕಿದ್ದಾನೋ ಎಂದುಕೊಂಡು ಸುಮ್ಮನಾಗಿ; ಇನ್ನು ನನ್ನ ಕೆಲಸವಾಗಲಿಲ್ಲವೆಂದು ಯಮಭಾರದ ಬ್ಯಾಗನ್ನು ಬೆನ್ನ ಮೇಲೆ ಸರಿಯಾಗಿ ಕೂರಿಸಿಕೊಂಡು ಮುಂದಿನ ವಾಹನಕ್ಕಾಗಿ ಕಾಯ್ತಾ ನಿಂತೆ. ಆ ರೀತಿಯ ಕತ್ತಲ ಅಪರಿಚಿತ ಸ್ಥಳದಲ್ಲಿ ದಿಕ್ಕುಗಾಣದಂತೆ ಸಿಕ್ಕಸಿಕ್ಕವರನ್ನು ಡ್ರಾಪ್‍ಗಾಗಿ ಕೇಳುವುದರ ಪಾಡನ್ನು ಅನುಭವಿಸಿಯೇ ತಿಳಿಯಬೇಕು. ಒಂದು ಬನ್ ತಗೊಂಡು ತಿನ್ನುತ್ತಾ ಟೀ ಸ್ಟಾಲಿನವನ ಬಳಿ ‘ಮಾರನಹಳ್ಳಿಯವರೆಗೆ ಯಾರಾದ್ರೂ ಡ್ರಾಪ್ ಕೊಡ್ತಾರಾ’ ಎಂದು ಕೇಳಿದೆ. “ಇಷ್ಟು ಹೊತ್ತಿಗೆ ಲಾರಿಗಳೂ ಕಡಿಮೆ ಓಡಾಡ್ತಾವೆ, ನೋಡಣ ಇರಿ, ಮತ್ಯಾವುದಾದ್ರೂ ಬಂದ್ರೆ ಕೇಳಿನೋಡಾಣ” ಎಂದ. ಸ್ವಲ್ಪ ಹೊತ್ತಿನಲ್ಲಿ ಭತ್ತದ ಲೋಡಿನ ಲಾರಿಯೊಂದು ಬಂದು ಚಾಲಕ ಟೀ ಕುಡಿಯಲು ಇಳಿದ. ಟೀ ಸ್ಟಾಲಿನವನು ಅವನೊಡನೆ ನನ್ನ ಬಗ್ಗೆ ಹೇಳಿ ಕರೆದುಕೊಂಡು ಹೋಗಲು ಕೇಳಿಕೊಂಡ. ಲಾರಿಯವ ಅಂಥಾ ಏನೂ ಆಸಕ್ತಿ ತೋರಲಿಲ್ಲ. ಇದೂ ಯಾಕೋ ಡೌಟ್ ಕೇಸೇ ಎಂದುಕೊಂಡು ಸುಮ್ಮನಾದೆ. ಚಾಲಕ, ಕ್ಲೀನರ್ ಇಬ್ಬರೂ ತಮ್ಮ ಲಾರಿಯಲ್ಲಿದ್ದ ಕ್ಯಾನ್‍ನಿಂದ ನೀರು ತೆಗೆದು ಮುಖ ತೊಳೆದುಕೊಂಡು ಲಾರಿಯೇರಿ ಕುಳಿತರು.

ಚಾಲಕ ಕ್ಲೀನರ್ ಬಳಿ ಏನೋ ಮಾತನಾಡಿ, ನನ್ನೆಡೆಗೆ ತಿರುಗಿ ಲಾರಿ ಹತ್ತಲು ಸೂಚಿಸಿದ. ಬದುಕಿದೆಯಾ ಬಡಜೀವವೇ ಎಂದುಕೊಂಡು ತೂಕದ ಬ್ಯಾಗನ್ನು ಕ್ಯಾಬಿನ್ನಿನೊಳಗೆ ಹಾಕಿ ಹತ್ತಿ ಕುಳಿತೆ. ಲಾರಿ ಪ್ರಯಾಣ ಮುಂದುವರೆಸಿತು. ಕ್ಲೀನರ್ ಬಳಿ ನಾನು ಮಾರನಹಳ್ಳಿ ಬಸ್‍ಸ್ಟಾಪ್‍ನಲ್ಲಿ ಇಳಿಯಬೇಕೆಂದು ತಿಳಿಸಿದೆ. ಅವನು ಡ್ರೈವರ್‍ನ ಬಳಿ ನನಗೆ ಸರಿಯಾಗಿ ತಿಳಿಯದ ಭಾಷೆಯಲ್ಲಿ ಏನೋ ಹೇಳಿದ. ಮಂಜಿನಲ್ಲಿ ಮುಚ್ಚಿಹೋಗಿದ್ದ ಮುಂಜಾವಿನ ನೀರವತೆಯನ್ನು ಸೀಳುತ್ತಾ ಮುಂದೆ ಸಾಗುತ್ತಿದ್ದ ಹೆಡ್‍ಲೈಟ್ ಬೆಳಕಿನಲ್ಲಿ ನಿರಂತರವಾಗಿ ಮೈಚಾಚಿ ಮಲಗಿದ್ದ ರಸ್ತೆಯನ್ನೇ ನೋಡುತ್ತಾ ಮಾರನಹಳ್ಳಿ ಬರುವುದನ್ನೇ ಅಥವಾ ನಾವು ಮಾರನಹಳ್ಳಿಯನ್ನು ತಲುಪುವುದನ್ನೇ ನಿರೀಕ್ಷಿಸುತ್ತಾ ಕುಳಿತೆ ನಾನು.

ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಿದವನಂತೆ ಒಳಸೇರಿಕೊಂಡವನಿಗೆ ಮುಂದೆದುರಾಗಬಹುದಾದ ಸನ್ನಿವೇಶದ ಕಲ್ಪನೆಯೇ ಇರಲಿಲ್ಲ. ಸ್ಥಳೀಯವಲ್ಲದ ಈ ಲಾರಿಯೊಳಗಿನ ವಾತಾವರಣ ಗಾಬರಿ ಹುಟ್ಟಿಸುವಂತಿತ್ತು. ಡ್ರೈವರ್ ಯಾವುದೋ ಮಲಯಾಳೀ ಹಾಡನ್ನು ಸ್ಟೀರಿಯೋದಲ್ಲಿ ಹಾಕಿಕೊಂಡಿದ್ದ. ನನಗೋ ಒಳಗೊಳಗೇ ದಿಗಿಲು. ದಿಕ್ಕಿಲ್ಲದವ ದೆವ್ವ ತಬ್ಬಿಕೊಂಡಂತೆ ಈ ಡ್ರೈವರ್, ಕ್ಲೀನರ್‍ಗಳ ಕೈಗೆ ಸಿಕ್ಕಿಕೊಂಡೆನಲ್ಲಾ ಎಂದು ಒಳಗೊಳಗೇ ಹಳಹಳಿಸಿದೆ. ಹೋಟೆಲ್ ಹುಡುಗ ಹೇಳಿದಂತೆ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಮಾರನಹಳ್ಳಿಯಿರುವಲ್ಲಿ ಇವರು ಲಾರಿ ನಿಲ್ಲಿಸಬೇಕಿತ್ತು. ಅರ್ಧ ಗಂಟೆ ಚಲಿಸಿದರೂ ಇವ ಲಾರಿ ನಿಲ್ಲಿಸಲಿಲ್ಲ. ಇನ್ನೂ ಮಾರನಹಳ್ಳಿ ಸಿಕ್ಕಿಲ್ಲವೇನೋ ಎಂದು ಸುಮ್ಮನಾದೆ. ಹೋಟೆಲಿನವನು ಅಂದಾಜಿನಲ್ಲಿ ಹೇಳಿದನೇನೋ ಎಂದುಕೊಂಡೆ ಸಹಾ. ಡ್ರೈವರ್ ತನಗೇನೂ ಗೊತ್ತಿಲ್ಲವೆಂಬಂತೆ ಹಾಡಿಗೆ ತಲೆದೂಗುತ್ತಾ ಹೋಗುತ್ತಲೇ ಇದ್ದಾನೆ. ಕ್ಲೀನರ್ ನನ್ನ ಮುಖವನ್ನೊಮ್ಮೆ, ಡ್ರೈವರ್‍ನನ್ನೊಮ್ಮೆ ನೋಡಲಾರಂಭಿಸಿದ. ನನಗ್ಯಾಕೋ ಇವರ ಮೇಲೆ ಅನುಮಾನ ಬರಲಾರಂಭಿಸಿತು. ನನ್ನ ಬೆನ್ನ ಮೇಲಿದ್ದ ಬ್ಯಾಗಿನಲ್ಲಿ ಬೆಲೆಬಾಳುವ ವಸ್ತುಗಳನ್ನು ಕಲ್ಪಿಸಿಕೊಂಡಿದ್ದರೇನೋ. ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯ್ತಲ್ಲ ಎಂದುಕೊಂಡೆ. ಇವರಿಗೇನು ಗೊತ್ತು ನಾನು ಕೆ.ಜಿ. ಸೇಬು, ಬ್ರೆಡ್-ಚಿಪ್ಸ್‍ನೊಂದಿಗೆ ಕಾಡಿಗೆ ಹೊರಟಿರೋ ಅಲೆಮಾರಿಯೆಂದು. ಅದೇನು ಗೊತ್ತಾಗುವುದಿದ್ದರೂ ತಿಕದ ಮೇಲೆ ನಾಲ್ಕು ಒದೆಸಿಕೊಂಡು ಲಾರಿಯಿಂದ ಕೆಳಕ್ಕೆ ತಳ್ಳಿಸಿಕೊಂಡು, ಅವರು ನನ್ನ ಬ್ಯಾಗ್ ಜಾಲಾಡಿದಾಗ ತಾನೇ ಎಂದು ಗಾಬರಿ, ಭಯದಿಂದ ತಳಮಳಿಸಿದೆ. ಆದರೂ ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ “ನನಗೆ ಮಾರನಹಳ್ಳಿಯಲ್ಲಿ ಇಳಿಯಕ್ಕಿರೋದು; ಅಲ್ಲೇ ಇಳಿಸಿ”ಎಂದೆ. ಡ್ರೈವರ್ ಏನೂ ಅರ್ಥವಾಗದಂತೆ ಕ್ಲೀನರ್ ಕಡೆಗೆ ನೋಡಿದ. ಕ್ಲೀನರ್ ತುಳು ಮಿಶ್ರಿತ ಕನ್ನಡದಲ್ಲಿ “ಎಂಥಾ ಮಾರಾಯ್ರೇ, ನೀವು ಮುಂಚೆಯೇ ಹೇಳೋದಲ್ವಾ, ಅದು ತುಂಬಾ ಹಿಂದೆಯೇ ಆಯ್ತಲ್ಲೋ” ಡ್ರೈವರ್‍ಗೆ ಮಲಯಾಳ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ ಎಂದು ನನ್ನ ಮೇಲೇ ಆರೋಪಿಸತೊಡಗಿದ.

ನನಗೆ ಮೈಯೆಲ್ಲಾ ಉರಿದು ಮನಸ್ಸಿನಲ್ಲೇ ಬೈದುಕೊಳ್ಳುತ್ತಾ ಲಾರಿಯಿಂದ ಕೆಳಗಿಳಿದು ಕ್ಲೀನರ್‍ಗೆ ಹತ್ತು ರೂಪಾಯಿ ನೀಡಿ, ಬಂದ ದಾರಿಯ ವಿರುದ್ಧ ದಿಕ್ಕಿನಲ್ಲಿ ನಡೆಯಲು ಸಿದ್ದನಾದೆ. ಲಾರಿಯು ನಿರ್ಗಮಿಸಿದ ನಂತರ ನಿಧಾನವಾಗಿ ವಾಸ್ತವದ ಅರಿವಾಗತೊಡಗಿತು. ಕಂಡುಕೇಳರಿಯದ ಜಾಗ. ಅದೂ ಕಗ್ಗಾಡಿನ ನಡುವಿನ ಕತ್ತಲಿನ ಸಮಯ. ಇದೊಳ್ಳೆ ಅವಸ್ಥೆಯಾಯ್ತಲ್ಲ ಎಂದುಕೊಂಡು ನನ್ನನ್ನೇ ನಾನು ಹಳಿದುಕೊಂಡೆ. ಎತ್ತ ನೋಡಿದರೂ ಒಂದೇ ತರ ಕಾಣುತ್ತಾ ಇದೆ, ಹೆದ್ದಾರಿಯೆಂಬ ಹೆಬ್ಬಾವು ಕಾರ್ಗತ್ತಲಿನೊಳಗೆ ಒಂದಾಗಿ ಎಂದಿನಂತೆ ಮತ್ತೇರಿ ಮಲಗಿಕೊಂಡಿದೆ. ನನಗೋ ಭಯ, ಆತಂಕ, ಗಾಬರಿ, ಗೊಂದಲ, ಕಳವಳ ಅಷ್ಟೂ ತಾಳಮೇಳೈಸಿ ಗಾಬರಿಯಾಯ್ತು. ನನ್ನ ಹೆಜ್ಜೆಯ ಸದ್ದೇ ಅಪರಿಚಿತ ಹಾಗೂ ಅಸಹಜವೆನಿಸಿತು. ಅಂತೂ ವಿರುದ್ಧ ದಿಕ್ಕಿನಲ್ಲಿ ನಡೆಯುವುದು ಮಾರನಹಳ್ಳಿ ಬಸ್‍ಸ್ಟಾಪ್ ತಲುಪಿದ ನಂತರ ಮುಂದಿನದನ್ನು ಯೋಚಿಸುವುದೆಂದು ಮನಸ್ಸನ್ನು ಗಟ್ಟಿಗೊಳಿಸಿಕೊಂಡೆ. ನೀರವ ಕತ್ತಲಿನಲ್ಲಿ ಹತ್ತು ಹದಿನೈದು ಹೆಜ್ಜೆ ನಡೆಯುವುದು, ಕಳ್ಳನಂತೆ ಯಾರಿಗೂ ಗೊತ್ತಾಗದಂತೆ, ಹೆದರಿಕೆಯಿಂದ ಹಿಂದಕ್ಕೆ ವಾರೆಗಣ್ಣಿನಲ್ಲಿ ತಿರುಗಿ ನೋಡುವುದು. ಹಿಂಭಾಗದಿಂದ ಏನಾದ್ರೂ ನನ್ನ ಜೊತೆಯೇ ಹೆಜ್ಜೆ ಹಾಕಿಕೊಂಡು ಬರುತ್ತಿದೆಯೋ, ಬರೀ ಅಂಗೈ ಮಾತ್ರ ನನ್ನ ಷರಟಿನ ಕಾಲರನ್ನು ಹಿಂಬದಿಯಿಂದ ಹಿಡಿದೆಳೆಯುವುದೋ ಅಥವಾ ನನ್ನ ಬೆನ್ನ ಮೇಲಿದ್ದ ಬ್ಯಾಗಿನ ಝಿಪ್ ಎಳೆಯುವುದೋ ಎಂದು ಭೀತಿಯಿಂದಲೇ ಹೆಚ್ಚು ಸದ್ದಾಗದಂತೆ ಹೆಜ್ಜೆಯನ್ನು ಹಾಕತೊಡಗಿದೆ.

ನನ್ನ ಹಿಂದೆಯೇ ಇನ್ನೊಂದು ಜೊತೆ ಬರೀ ಪಾದಗಳು ನನ್ನನ್ನು ಹಿಂಬಾಲಿಸುತ್ತಾ ಬರುತ್ತಿವೆ. ಅದರ ಸದ್ದು ಕೇಳಲೆಂದು ನನ್ನ ನಡಿಗೆಯನ್ನು ವೇಗವಾಗಿ, ಕೆಲವೊಮ್ಮೆ ನಿಧಾನವಾಗಿ, ಹಿಂಬಾಲಿಸುತ್ತಿದ್ದ ಪಾದಗಳ ಸದ್ದು ಕೇಳಿಸಿಕೊಳ್ಳಲು ಲಯ ತಪ್ಪಿಸಲು ಅನುಕೂಲವಾಗುವಂತೆ ನಡೆಯುತ್ತಿದ್ದೆ. ದೆವ್ವಗಳೂ ಕೂಡ ತಿರುಗಾಡಲು ಬಾರದಂಥಾ ಸಮಯ. ಆ ಚಳಿಯಲ್ಲೂ ಮೈಯೆಲ್ಲಾ ಆತಂಕದಿಂದ ಬೆವರಿಳಿಸುತಿತ್ತು. ನನ್ನ ಬೆನ್ನ ಮೇಲಿದ್ದ ಬ್ಯಾಗ್‍ನಲ್ಲಿ ಮೂರು ಸೆಲ್ಲಿನ ಒಂದು ಸ್ಟೀಲ್ ಟಾರ್ಚ್ ಹಾಗೂ ಉದ್ದನೆಯ ಕತ್ತಿಯಿತ್ತು. ಕಾಡಿನಲ್ಲಿ ದಿನಗಟ್ಟಲೆ ಚಾರಣ ಮಾಡುವವರಿಗೆ ಈ ಎರಡೂ ವಸ್ತುಗಳು ಕುಡಿಯುವ ನೀರಿನಷ್ಟೇ ಮುಖ್ಯ. ಬ್ಯಾಗಿನೊಳಗೆ ಟಾರ್ಚ್, ಕತ್ತಿಯಿದ್ದರೂ ಹೊರತೆಗೆಯಲೂ ಭಯ. ಝಿಪ್ ತೆಗೆಯಲು ಕೈ ಹಿಂದೆ ಹಾಕಿದರೆ ನನ್ನ ಕೈಯನ್ನೇ ಬೇರೆ ಯಾವುದಾದರೂ ತಣ್ಣನೆಯ ಕೈ ಹಿಡಿದುಕೊಂಡರೇ!! ಹೀಗೆ ತಲೆ ತುಂಬಾ ಭಯಾನಕ ಕಲ್ಪನೆಗಳೇ ತುಂಬಿ ಹರಿಯುತ್ತಿದ್ದವು. ದೇವರೇ ಗತಿಯೆಂದು ಮೈಯನ್ನೆಲ್ಲಾ ಕಲ್ಲು ಮಾಡಿಕೊಂಡು, ಹಲ್ಲುಗಳನ್ನು ಗಟ್ಟಿಯಾಗಿ ಕಚ್ಚಿಕೊಂಡು, ಕಾಲ್ಬೆರಳುಗಳನ್ನು ಒಂದಕ್ಕೊಂದು ಬಲವಾಗಿ ಮುರಿದೇಹೋಗುವಂತೆ ಒತ್ತಿಕೊಂಡು, ಯೋಗಾಭ್ಯಾಸದಲ್ಲಿ ಇರುವ ಮಹಾಬಂಧಕ್ಕೆ ಹೋಗಿ ಆ ಕತ್ತಲಲ್ಲೂ ಏನೂ ಕಾಣಿಸಕೂಡದೆಂದು ಅಂಟಿಕೊಳ್ಳುವಂತೆ ಕಣ್ಣು ರೆಪ್ಪೆಗಳನ್ನೂ ಅಮುಕಿಕೊಂಡು ದೆವ್ವಕ್ಕೂ ಗಾಬರಿಯಾಗಬಹುದಾದ ವೇಗದಲ್ಲಿ ಬೆನ್ನ ಮೇಲಿನ ಬ್ಯಾಗನ್ನು ಮುಂದಕ್ಕೆ ತೆಗೆದುಕೊಂಡೆ. ನನ್ನನ್ನಾವರಿಸಿದ ಭೀತಿ ಎಷ್ಟಿತ್ತೆಂದರೆ ಟಾರ್ಚ್ ಹೊರತೆಗೆಯಲು ಬ್ಯಾಗ್‍ನ ಝಿಪ್ ಎಳೆಯಬೇಕಾಗಿದ್ದರಿಂದ ಆ ಸದ್ದಿಗೇನಾದರೂ ಹೆದ್ದಾರಿಯ ಪ್ರೇತಾತ್ಮಗಳಿಗೆ ಎಚ್ಚರವಾಗುತ್ತದೆಯೋ ಅನ್ನಿಸಿ ಕಣ್ಣು ಮುಚ್ಚಿಕೊಂಡು, ಹಲ್ಲುಗಳನ್ನು ಕಚ್ಚಿಹಿಡಿದು ಬಿಗಿಯಾಗಿಸಿ, ಸ್ವತಃ ಆ ಬ್ಯಾಗಿಗೇ ಝಿಪ್ ತೆರೆದಿದ್ದು ತಿಳಿಯಿತೋ ಇಲ್ಲವೋ ಎನಿಸುವಂತೆ ಮೇಲ್ಬಾಗದಲ್ಲೇ ಇಟ್ಟಿದ್ದ ಟಾರ್ಚನ್ನು ಹಾಗೂ ಬ್ಯಾಗಿನುದ್ದಕ್ಕೂ ತೂರಿಸಿದ್ದ ಉದ್ದಕತ್ತಿಯನ್ನು ಎಳೆದುಕೊಂಡು ಹಿಂದಿನಷ್ಟೇ ಆತಂಕದಿಂದ ಝಿಪ್ ಹಾಕಿದೆ. ಬ್ಯಾಗನ್ನು ಬೆನ್ನಿಗೇರಿಸಿದವನೇ ಕತ್ತಿಯ ಹಿಡಿಯೇ ಒಡೆದುಹೋಗುತ್ತದೆಯೇನೋ, ಟಾರ್ಚ್ ನನ್ನ ಕೈಯಲ್ಲಿಯೇ ಲಗ್ಗಿಹೋಗುತ್ತದೇನೋ ಅನ್ನುವಷ್ಟರ ಮಟ್ಟಿಗೆ ಭಯದಿಂದ ಬಿಗಿಯಾಗಿ ಹಿಡಿದು ದಾಪುಗಾಲು ಹಾಕತೊಡಗಿದೆ.

ನನ್ನ ಮುಂದಕ್ಕೆ ಮಾತ್ರ ಲೈಟ್ ಬಿಟ್ಟುಕೊಂಡು, ಕರೀ ರಸ್ತೆಯನ್ನು ವೈರಿಯೇನೋ ಎನ್ನುವಂತೆ ದಿಟ್ಟಿಸುತ್ತಾ, ಏದುಸಿರು ಬಂದರೂ ಉಸಿರನ್ನು ಸಹಾ ಜೋರಾಗಿ ಬಿಡದೇ, ಬಿಟ್ಟರೆ ಅಕ್ಕಪಕ್ಕ ಸುಳಿದಾಡುತ್ತಿರಬಹುದಾದ ಆತ್ಮಗಳಿಗೆ ಕೇಳಿಸಿದರೆಂಬಂತೆ ಹುಷಾರಾಗಿ ಸದ್ಧಾಗದಂತೆ ನಡೆಯುವ ನನ್ನ ಅವಸ್ಥೆಯನ್ನು ವಿವರಿಸುವುದಿರಲಿ, ಅನುಭವಿಸಿಯೇ ತಿಳಿಯಬೇಕು. ಚಂದಿರ ಮೋಡದ ಮರೆಯಿಂದ ಆಗಾಗ ಇಣುಕಿ ಬೆಳದಿಂಗಳನ್ನು ಚೆಲ್ಲುತ್ತಾ ಪರಿಸ್ಥಿತಿಯನ್ನು ಮತ್ತೂ ಭಯಾನಕ ಮಾಡುತ್ತಿದ್ದ. ಕಡು ಕತ್ತಲೆಯಿದ್ದೆಡೆ ಇದ್ದಕ್ಕಿದ್ದಂತೆ ಬೆಳಕಿನ ಲಂಬಲಂಬ ಆಕೃತಿಗಳು ಮೂಡಿ, ಮರದ ರೆಂಬೆಗಳ ಅಲುಗಾಟದಿಂದ ಚಲಿಸುವ ನೆರಳುಗಳ ಭೂತದ ಕುಣಿತ ನನ್ನ ಕಲ್ಪನೆಯ ಭಯಕ್ಕೆ ಬೀಭತ್ಸ ದೃಶ್ಯ ಸಂಯೋಜನೆ ಮಾಡತೊಡಗಿತು. ಟಾರ್ಚಿನ ಬೆಳಕನ್ನೂ ಸಹಾ ರಸ್ತೆಯ ಅಕ್ಕಪಕ್ಕಕ್ಕೂ ಬಿಡುತ್ತಿರಲಿಲ್ಲ. ಎಲ್ಲಿ ಏನು ಕಾಣಿಸುವುದೋ ಎಂಬ ಭಯ. ಧೈರ್ಯ ತಂದುಕೊಳ್ಳಲು ಹಾಡನ್ನಾದರೂ ಹೇಳಿಕೊಳ್ಳಲೇ ಎಂದರೆ ನೆನಪಿಗೆ ಬರುತ್ತಿರೋದು “ತಂಗಾಳಿಯಲ್ಲಿ ನಾನು ತೇಲಿ ಬಂದೆ” ಎಂಬ ದೆವ್ವದ ಹಾಡೇ ಆಗಬೇಕೇ?!!! ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ಇದ್ದಕ್ಕಿದ್ದಂತೆ ರಸ್ತೆ ಪಕ್ಕದಿಂದ ಏನೋ ಹೂಂಕರಿಸಿದ ಸದ್ದು!!! ಬೆವರಿನಿಂದಲೇ ಆದಷ್ಟು ಹೊರಹೋಗಿದ್ದರಿಂದಲೋ ಏನೋ ಉಚ್ಚೆ ಹೊಯ್ಕಳಲಿಲ್ಲ. ಯಾವುದೋ ಕಾಡು ಪ್ರಾಣಿ ದಿನವೂ ತಿರುಗುವ ಗಂಡಿಯಿರಬೇಕು. ಎಂದಿನಂತೆ ರಸ್ತೆ ದಾಟಲು ಬಂದದ್ದು, ನನ್ನನ್ನು ಗಮನಿಸಿ ಸರಕ್ಕನೇ ಹಿಂದೆ ತಿರುಗಿ ತರಗೆಲೆಗಳ ಮೇಲೆ ಜರಜರ ಸದ್ದು ಮಾಡುತ್ತಾ ಓಡಿ ಹೋಯಿತು. ಆ ಸದ್ದಿಗೆ ಅಲ್ಲೆಲ್ಲೋ ಮರದ ಮೇಲೆ ನಿದ್ರಿಸುತ್ತಿದ್ದ ಹಕ್ಕಿಗಳೂ ಗಡಬಡಿಸಿ ಎಚ್ಚರಗೊಂಡು ಬುರ್ರನೇ ಹಾರಿ ಹತ್ತಿರದ ಮರಗಳ ಮೇಲೆ ಜಲಜಲ ಸದ್ದು ಮಾಡುತ್ತಾ ಕುಳಿತವು. ಹೆದರಿದವನ ಮೇಲೆ ಹಾವೆಸೆದಂತಾಯ್ತು!!

ನಡೆದೂ ನಡೆದೂ ಸುಸ್ತಾದ ನನಗೆ ಯಾವುದಾದರೂ ವಾಹನ ಘಾಟಿಯೇರಿ ಬರುತ್ತಿದ್ದರೆ, ಅದನ್ನು ಹತ್ತಿಕೊಂಡು ಮಾರನಹಳ್ಳಿ ಬಳಿ ಇಳಿಯುವ ಯೋಚನೆಯಿತ್ತು. ಇಷ್ಟು ದೂರ ನಡೆದರೂ ಯಾವುದೇ ವಾಹನ ಹಿಂದಿನಿಂದಾಗಲೀ ಎದುರಿನಿಂದಾಗಲೀ ಆಗಮಿಸಲೇ ಇಲ್ಲ. ಕಾಲುಗಳೆಲ್ಲಾ ಇನ್ನು ನಡೆಯಲು ಸಾಧ್ಯವೇ ಇಲ್ಲವೆನ್ನುವಷ್ಟು ನೋಯತೊಡಗಿದವು. ಅಷ್ಟರಲ್ಲಿ ಯಾವುದೋ ವಾಹನ ಘಾಟಿಯೇರಿ ಬರುತ್ತಿರುವ ಸದ್ದಾಯ್ತು. ಹತ್ತಿರ ಹತ್ತಿರ ಬರುತ್ತಿದ್ದಂತೆ ಅದೊಂದು ಮಿನಿಲಾರಿಯೆಂದು ತಿಳಿಯಿತು. ಆಸೆಯಿಂದ ಕೈ ಮುಂದೆ ಚಾಚಿದೆ. ಎಲ್ಲಿ ಸ್ಲೋ ಮಾಡಿದರೆ ಪಿಕಪ್ ಕಡಿಮೆಯಾಗುವುದೋ ಎಂದು ಗೇರನ್ನು ಸಹಾ ಛೇಂಜ್ ಮಾಡದೇ ಒಂದೇ ಉಸಿರಿಗೆ ನನ್ನನ್ನೂ ದಾಟಿಕೊಂಡ ಆ ಮಿನಿಲಾರಿ ಮಿಸೈಲಿನಂತೆ ಮುಂದೆ ಹೋಯಿತು. ಇಷ್ಟು ಹೊತ್ತಿನಲ್ಲಿ ಜಾಗವಲ್ಲದ ಜಾಗದಲ್ಲಿ ಒಬ್ಬಂಟಿಯೊಬ್ಬ ಮೂಟೆಯಂಥಾ ಬ್ಯಾಗನ್ನು ಹೊತ್ತುಕೊಂಡು ಡ್ರಾಪ್ ಕೇಳುವುದನ್ನು ಅವರು ನಿರೀಕ್ಷಿಸಿರಲಿಲ್ಲವೇನೋ. ಸುಮಾರು ಹತ್ತು ನಿಮಿಷದ ನಂತರ ಮತ್ತೊಂದು ವಾಹನ ಉಸಿರುಗಟ್ಟಿಕೊಂಡು ಅಗಾಧವಾದ ಏರಿನ ತಿರುವನ್ನು ಘಾಟಿಯಲ್ಲೆಲ್ಲೋ ಏರುತ್ತಿರುವ ಸದ್ದು ಕೇಳಿಸಿತು. ಹೇಗಾದರೂ ಮಾಡಿ ಇದನ್ನಾದರೂ ನಿಲ್ಲಿಸಿ ಹತ್ತಿಕೊಳ್ಳಬೇಕಲ್ಲ ಎಂದು ಯೋಚಿಸಿ, ರಸ್ತೆ ಬದಿಯ ಮೈಲಿಗಲ್ಲ ಮೇಲೆ ಕೂತು ಸುಧಾರಿಸಿಕೊಳ್ಳತೊಡಗಿದೆ. ವಾಹನದ ಸದ್ದು ಹತ್ತಿರವಾದಂತೆ ಎದ್ದು ನಿಂತು ಕೈ ಅಡ್ಡ ಹಿಡಿದೆ. ಹತ್ತಿರ ಬರುತ್ತಿದ್ದಂತೆ ಅದು ಜೀಪ್ ಎಂದು ಗೊತ್ತಾಯ್ತು. ಜೀಪ್ ಸಹಾ ಶರವೇಗದಲ್ಲಿ ನಿಲ್ಲಿಸದೇ ಮುಂದೆ ಹೋಯ್ತು. ಮುಂದಿನ ತಿರುವಿನವರೆಗೆ ಹೋದ ಜೀಪ್ ಸಡನ್ನಾಗಿ ನಿಂತಿತು. ನಾನು ಹತ್ತಿಕೊಳ್ಳೋಣವೆಂದು ಓಡಲು ಸಿದ್ಧನಾದೆ. ಜೀಪ್‍ನೊಳಗಿಂದ ಒಬ್ಬ ಇಳಿದು ನಿಂತ; ಟಾರ್ಚ್ ಬೆಳಕು ಬಿಟ್ಟುಕೊಂಡು ಅವನೆಡೆಗೆ ಓಡಿಬರುತ್ತಿದ್ದ ನನ್ನನ್ನು ನೋಡಿ ಏನನ್ನಿಸಿತೋ ಏನೋ ಲಗುಬಗೆಯಿಂದ ವಾಪಾಸ್ ಜೀಪನ್ನೇರಿ ಭರ್ರನೆ ಅಲ್ಲಿಂದ ಕಂಬಿ ಕೀಳುವುದೇ? ನಾನು ಅವರೆಡೆಗೆ ಓಡಿದ್ದೇ ತಪ್ಪಾಯ್ತೇನೋ ಅವರು ನನ್ನನ್ನು ಯಾರೋ ಗಂಧದ ಪಾರ್ಟಿಯೋ ಅಥವಾ ಹೆದ್ದಾರಿ ಕಳ್ಳನೋ, ಇನ್ನೇನೋ ಎಂದು ಕಲ್ಪಿಸಿಕೊಂಡರೇನೋ? ನನ್ನ ಹಣೆಬರಹಕ್ಕೆ ಗೊಣಗುತ್ತಾ ಈ ಹಿಂದೆ ನಾನು ನೋಡಿದ ದೆವ್ವದ ಸಿನಿಮಾಗಳ ಕ್ಲೈಮಾಕ್ಸ್‍ಗಳನ್ನು ಪ್ರಯತ್ನಪೂರ್ವಕವಾಗಿ ಮರೆಯಲು ಯತ್ನಿಸುತ್ತಾ, ಅದೇ ಕಾರಣಕ್ಕೆ ಅವೇ ದೃಶ್ಯಗಳನ್ನು ಮತ್ತೆಮತ್ತೆ ನೆನಪಿಸಿಕೊಂಡು ಇನ್ನೂ ವಿಹ್ವಲಗೊಳ್ಳುತ್ತಿದ್ದೆ.
ಅಖಂಡ ಶಿರಾಡಿಘಾಟಿಯ ಉದ್ದೋಉದ್ದಕ್ಕೂ ದೈತ್ಯ ಹೆಬ್ಬಾವೊಂದು ಹೊಟ್ಟೆತುಂಬಾ ತಿಂದು ಆಲಸ್ಯದಿಂದ ಬಿದ್ದುಕೊಂಡಂತೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ ಬೆಳಗಿನ ಜಾವದ ಸಮಯದಲ್ಲಿ ಅಸಾಮಾನ್ಯ ನೀರವತೆ ತುಂಬಿಕೊಂಡು ಚೆಲ್ಲಿ ಹರಿಯುತ್ತಿತ್ತು. ಆ ಭೀಕರ ಚಳಿಯಲ್ಲೂ ನುಣ್ಣಗೆ ಬೆವರಿಳಿಸುವಂಥಾ ಒಂಟಿತನ. ಗೊತ್ತಿಲ್ಲದ ಹಾದಿಯಲ್ಲಿ ಸಲ್ಲದ ಸಮಯದಲ್ಲಿ ಒಂಟಿಯಾಗಿ ಆತಂಕಮಯ ಸಮಯವನ್ನು ಭೀತಿಯಿಂದ ಅನುಭವಿಸುವುದನ್ನು ಇನ್ನೊಬ್ಬರಿಂದ ಕೇಳುವುದಕ್ಕಿಂದ ಸ್ವತಃ ಅನುಭವಿಸಿಯೇ ತೀರಬೇಕು. ಬೆಳಗಿನ ಚಂದ್ರನ ತಿಳಿಬೆಳಕು ಹೆದ್ದಾರಿಯ ಬದಿಯ ಬೃಹದಾಕಾರದ ಹೆಮ್ಮರಗಳ ಕೊಂಬೆಯ ಸಂದಿಯಿಂದ ತೂರಿಕೊಂಡು ಹೆಬ್ಬಾವಿನಂಥ ರಸ್ತೆಯನ್ನು ಪಟ್ಟೆಹಾವನ್ನಾಗಿ ರೂಪಾಂತರಗೊಳಿಸುತ್ತಿತ್ತು. ನೀರವ ವಾತಾವರಣ, ಗೊಂದಲ, ಆತಂಕಿತವಾದ ಮನಸ್ಸು ನಮ್ಮನ್ನು ಮತ್ತೂ ದಿಗ್ಭ್ರಮೆಗೊಳಿಸುತ್ತವೆ.

ಲಾರಿಯಿಳಿದ ನಂತರ ಎಂಥಾ ಅನಾಹುತಕಾರಿ ನಿರ್ಧಾರ ತೆಗೆದುಕೊಂಡೆ ಎನಿಸಿತು ನನಗೆ. ರಾತ್ರಿಯಿಡೀ ವಾಹನ ಚಾಲನೆ ಮಾಡಿ ಹೈರಾಣಾಗಿದ್ದ ಡ್ರೈವರುಗಳು ಈ ಹೊತ್ತಿನಲ್ಲಿ ಸಾಮಾನ್ಯವಾಗಿ ನಿದ್ರಿಸಿ ವಿಶ್ರಾಂತಿ ಪಡೆಯುತ್ತಾರೆ. ರಸ್ತೆ ಅಪಘಾತಗಳಲ್ಲಿ ಸತ್ತವರ ದೆವ್ವಗಳೂ ಸಹಾ ಆ ಸಮಯದಲ್ಲಿ ಆ ಹೆದ್ದಾರಿಯಲ್ಲಿ ತಿರುಗಾಡಲು ಹಿಂದೇಟು ಹಾಕುತ್ತ್ತವೇನೋ? ಅಂಗಾಲ ಬುಡದಲ್ಲಿ ಶುರುವಾದ ಗಾಬರಿ ನೆತ್ತಿಯಲ್ಲಿ ಒಮ್ಮೆಲೆ ಚಿಮ್ಮಿ ಸಂಪೂರ್ಣ ಉನ್ಮಾದಕ್ಕೊಳಗಾದ ಪೆದ್ದುತನದಲ್ಲಿ ನಿಂತಿದ್ದೆ. ಅಲ್ಲೇ ನಿಂತಿದ್ದರೆ ಕಾಡುಪ್ರಾಣಿಗಳಿಗೋ, ಆಸರೆ ಹುಡುಕಿಕೊಂಡು ಅಲೆದಾಡುವ ಪ್ರೇತಾತ್ಮಗಳಿಗೊ ನನ್ನ ಸುಳಿವು ಸಿಕ್ಕಿ, ಬಲಿಯಾದೇನೆಂದೆಣಿಸಿ ಹೆಜ್ಜೆಯನ್ನು ಮುಂದಿಡಲಾರಂಬಿಸಿದೆ. ಭೀತಿ ಮತ್ತು ಭಯ ನನ್ನನ್ನು ಎಷ್ಟರ ಮಟ್ಟಿಗೆ ಕಂಗೆಡಿಸಿತ್ತೆಂದರೆ ಜೋರಾಗಿ ಹೆಜ್ಜೆಯನ್ನಿರಿಸಿದರೆ ಯಾವುದಕ್ಕಾದರೂ ನನ್ನ ಅಸ್ತಿತ್ವ ತಿಳಿದು ಬಿಡುತ್ತದೋ ಎಂದು ಹೆಜ್ಜೆಯನ್ನು ತೇಲಿಸಿ ಬಿರುಸಾಗಿ ನಡೆಯತೊಡಗಿದೆ. ಹತ್ತು ಹೆಜ್ಜೆ ನಡೆಯುವುದು, ನಿಧಾನವಾಗಿ ನಿಂತು ಯಾವುದಾದರು ನನ್ನನ್ನು ಹಿಂಬಾಲಿಸುತ್ತಿದೆಯೇ ಎಂದು ಹಿಂದಿರುಗಿ ಕತ್ತು ನೋಯುವಂತೆ ನಿಧಾನವಾಗಿ ವಾರೆಗಣ್ಣಿನಲ್ಲಿ ನನ್ನ ಬೆನ್ನ ಹಿಂಭಾಗದ ಕಾರ್ಗತ್ತಲನ್ನು ಭಯ, ಆತಂಕದಿಂದ ನೋಡುವುದು ನನ್ನ ಕರ್ಮವಾಗಿತ್ತು.

ಬಹಳ ಸಮಯ ನಡೆದವನಿಗೆ ಹೊಟ್ಟೆ ಚುರುಗುಟ್ಟತೊಡಗಿತು. ಬ್ಯಾಗಿನಲ್ಲಿ ಮೂರ್ನಾಲ್ಕು ಸೇಬು, ಬ್ರೆಡ್ ಜಾಮ್ ಇಟ್ಟುಕೊಂಡಿದ್ದೆ. ತೆಗೆದು ತಿನ್ನಲೂ ಸಹಾ ಆತಂಕ. ಕತ್ತಿಯನ್ನು ಕಂಕುಳಲ್ಲಿರಿಸಿ ಅದೇ ಕೈಯಲ್ಲಿ ಟಾರ್ಚ್ ಹಿಡಿದು ಸುತ್ತಲೂ ವೈರಿಗಳನ್ನು ಗಮನಿಸುವಂತೆ ಆ ಕತ್ತಲಲ್ಲೂ ಏನಾದರೂ ಭಯಾನಕವಾದದ್ದು ಕಾಣಿಸುತ್ತದೆಯೇನೋ ಎಂದು ಕಾತರಿಸುತ್ತಾ ಬ್ಯಾಗಿನೊಳಗೆ ಕೈಯ್ಯಾಡಿಸಿ, ಸೇಬನ್ನು ಸರಕ್ಕನೇ ಹೊರಗೆಳೆದುಕೊಂಡೆ. ಆ ಗಾಬರಿಯ ಸಮಯದಲ್ಲಿ ಹಸಿವು, ಮಾನಸಿಕ ಒತ್ತಡ ಎಷ್ಟಿತ್ತೆಂದರೆ ಎರಡೇ ನಿಮಿಷದಲ್ಲಿ ಮೊದಲನೆಯ ಸೇಬು ನನ್ನ ಜಠರವನ್ನು ಸೇರಿತ್ತು.

ಅಡ್ರಿನಲಿನ್ ಸತತವಾಗಿ ಸ್ಪುರಿಸಿ ನನ್ನ ದೇಹ ಸುಸ್ತಾಗುತ್ತಾ ಬಂದಿತ್ತು. ಏಕಕಾಲಕ್ಕೆ ಕಾಲುಗಳಿಗೆ ದಾಪುಗಾಲು ಹಾಕುವ ಕೆಲಸ, ಕೈಗಳಿಗೆ ಆಕ್ರಮಣವನ್ನೆದುರಿಸುವ ತವಕ. ಕಣ್ಣುಗಳಿಗೆ ಅಸಹಜವಾದದ್ದೇನಾದರೂ ಕಾಣಿಸಿಕೊಳ್ಳುತ್ತದೆಯೇನೋ ಎಂಬ ಧಾವಂತ, ಹೊಟ್ಟೆಗೋ ಬಾಯಿಯೆದುರು ಸಿಗುವ ಎಲ್ಲವನ್ನೂ ನುಂಗುವ ಕಬ್ಬನ್ನು ಅರೆಯುವ ಮಷೀನಿನಂತೆ ಲಬಲಬ ಎನ್ನುವ ಗಾಬರಿ. ಎದೆಗೋ ನಿಮಿಷಕ್ಕೆ ನೂರು ಸಲ ಹೊಡೆದುಕೊಳ್ಳುವುದೋ ನೂರೈವತ್ತು ಸಲ ಬಡಿದುಕೊಳ್ಳುವುದೋ ಎಂಬ ಗೊಂದಲ. ತೊಡೆಗಳಿಗೆ ನಡೆಯುವ ರಭಸಕ್ಕೆ ಬೆವರಿಳಿಸುವುದೋ, ಆಗುತ್ತಿರುವ ತಬ್ಬಿಬ್ಬುತನಕ್ಕೆ ನಡುಗುವುದೋ ಎಂಬ ಎಡಬಿಡಂಗಿತನ. ಈ ಎಲ್ಲಾ ಹಳವಂಡಗಳ ನಡುವೆ ಕೈಯಲ್ಲಿದ್ದ ಟಾರ್ಚನ್ನು ಆನ್ ಮಾಡುವುದೇ ನನಗೆ ಮರೆತುಹೋಗಿದ್ದು ಖಂಡಿತಾ ಸತ್ಯ.
ಏನಾದರಾಗಲಿ ಎಂದು ಬ್ಯಾಗಿನಿಂದ ಚಿಪ್ಸ್ ಪ್ಯಾಕೆಟ್ ಹೊರತೆಗೆದು, ನಾನಿನ್ನೂ ಇದ್ದೇನೆ ಎಂಬ ಫೀಲಿಂಗಾದರೂ ಇರಲಿ ಎಂದು ತಿನ್ನತೊಡಗಿದೆ. ಇದ್ದಕ್ಕಿದ್ದಂತೆ ಗಂವ್ ಎಂಬ ಸದ್ದಿನೊಡನೆ ಪುಟ್ಟ ಬಡಕಲು ನಾಯಿಯೊಂದು ಕಾಲ ಸಮೀಪವೇ ತನ್ನ ಚೂಪಾದ ಹಲ್ಲುಗಳನ್ನು ತೋರಿಸುತ್ತಾ ದಾರಿಗಡ್ಡ ಬರಬೇಕೇ? ಸುಮ್ಮನೇ ಕಾಲುಗಂಟೆ ನಿಂತಲ್ಲೇ ನಿಂತಿದ್ದರೆ, ನಿಂತ ನಿಲುವಿನಲ್ಲಿ ಬೊಗಳಿಬೊಗಳಿಯೇ ಸಾಯುವಂತೆ ಕಾಣುತ್ತಿತ್ತು. ಮುಗಿಯದ ಕತ್ತಲಲ್ಲಿ ಕೊನೆಯಿಲ್ಲದ ದಾರಿಯಲ್ಲಿ ಒಬ್ಬಂಟಿಯಾಗಿ ಹೀಗೇ ನಿರಂತರ ಗಾಬರಿ-ಗೊಂದಲದಲ್ಲಿ ನಡೆಯುತ್ತಿದ್ದವನಿಗೆ ಧಿಕ್ಕನೆ ಗಾಬರಿ ಬೀಳಿಸಿದ್ದು ಆ ಸದ್ದು. ಆಗಲೋ ಈಗಲೋ ಸಾಯುವಂತಿದ್ದ ಬಡಕಲು ನಾಯಿಯೊಂದು ತನಗೊಂದಕ್ಕೆ ಬಾಯಿಯಿರುವುದು ಎನ್ನುವಂತೆ ಅಗಾಧ ಶಿರಾಡಿ ಘಾಟಿಯನ್ನೇ ನುಂಗುವಂತೆ ಬೊಗಳತೊಡಗಿತು. ವರ್ಷಗಳಿಂದ ಬೊಗಳಲು ಅವಕಾಶವೇ ಸಿಕ್ಕಿರಲಿಲ್ಲವೇನೋ ಎಂಬಂತೆ ಭೂಮ್ಯಾಕಾಶಗಳನ್ನೂ ಒಂದು ಮಾಡುವಂತೆ ಹಲ್ಲನ್ನು ಕಿಸಿದುಕೊಂಡು ನನ್ನಿಂದ ಕೇವಲ ಎರಡೇ ಅಡಿ ದೂರದಲ್ಲಿ ನಿಂತು ನನಗೆ ಒಂದೂ ಹೆಜ್ಜೆ ಮುಂದಿಡದಂತೆ ತಡೆ ಹಾಕಿತ್ತು. ಗಾಬರಿ, ದಿಗ್ಭ್ರಮೆ, ಭಯದಲ್ಲಿ ನಿಂತಿದ್ದ ನನಗೆ ಒಂದು ರೀತಿಯ ಸಮಾಧಾನ ಸಿಗಲಾರಂಭಿಸಿತು. ಈ ಗೊಂಡಾರಣ್ಯದಲ್ಲಿ ಜನರಿಗೆ ಅಡ್ಡಗಟ್ಟಿ ಬೊಗಳುವ ನಾಯಿಯಿದೆ ಅಂದರೆ ಇಲ್ಲೆಲ್ಲೋ ಮನುಷ್ಯರ ವಾಸ್ತವ್ಯವಿದೆಯೆಂದೇ ಅರ್ಥ. ಅನಿರೀಕ್ಷಿತವಾದ ನಾಯಿ ಪ್ರಹಾರಕ್ಕೆ ನಾನು ಆಘಾತಗೊಂಡರೂ ನಾಯಿಯಿದ್ದ ಮೇಲೆ ಮನುಷ್ಯರ ವಾಸ್ತವ್ಯ ಇಲ್ಲೇ ಎಲ್ಲೋ ಇರಬಹುದೆಂಬ ಆಸೆ ಇಣುಕಿತು. ಅತ್ತ ಘಾಟಿಯೂ ಅಲ್ಲ ಇತ್ತ ಘಟ್ಟವೂ ಅಲ್ಲದ ಈ ಅಂತರಾಳದಲ್ಲಿ ಅದ್ಯಾವನು ಮನೆ ಕಟ್ಟಿಕೊಂಡಿದ್ದಾನೋ ಎಂದು ಕುತೂಹಲ ಮೂಡಿತು.
ಇನ್ನೇನು ಕಚ್ಚಿಯೇಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಮೈಮೇಲೆ ನೆಗೆಯುವಂತೆ ಕಾಣುತ್ತಿದ್ದ ನಾಯಿಮರಿಯ ಮುಖಕ್ಕೇ ಟಾರ್ಚ್ ಹಾಕಿ ಕಚ್ಚಿಸಿಕೊಳ್ಳದಂತೆ ಸರ್ಕಸ್ ಮಾಡಲು ಶುರು ಮಾಡಿದ್ದೆ. ನಾಲ್ಕಾರು ಚಿಪ್ಸ್‍ಗಳನ್ನು ಎಸೆದು ನೊಡಿದೆ. ಆ ನಾಯಿಮರಿಗೆ ನನ್ನ ಮೇಲೆ ಎಷ್ಟು ರೋಷವಿತ್ತೆಂದರೆ ಚಿಪ್ಸನ್ನು ಮೂಸಿಯೂ ನೋಡದೆ ಅದರ ಮೇಲೆಯೇ ನಿಂತು ಎಗರಿ ಎಗರಿ ಬೀಳುತ್ತಿತ್ತು. ನನಗೆ ಒಂದು ಹೆಜ್ಜೆಯನ್ನೂ ಮುಂದೆ ಎತ್ತಿಡದಂತೆ ತಡೆದಿದ್ದ ನಾಯಿಮರಿಯ ಹಿಂಭಾಗದಿಂದ ಕತ್ತಲಿನಲ್ಲಿ ಏನೋ ಕಿರ್ರ್ ಗಟಗಟ ಕ್ರೀಂಚ್ ಶಬ್ದ ಬಂದಂತಾಯ್ತು, ತಗಡಿನ ಗೇಟನ್ನು ತೆರೆದಂತೆ. ಆ ಕತ್ತಲಿನಲ್ಲಿ ಏನೂ ಕಾಣಿಸ್ತಿರಲಿಲ್ಲ. ಯಾರೋ ಕೆಮ್ಮಿ ಕ್ಯಾಕರಿಸಿದಂತಾಯ್ತು. ನಾಯಿಮರಿ ಅತ್ತಕಡೆ ಒಮ್ಮೆ ಹಿಂತಿರುಗಿ ನೋಡಿ ಇನ್ನೂ ಉತ್ತೇಜನಗೊಂಡು ಎಗರಾಡತೊಡಗಿತು. ಅಷ್ಟರಲ್ಲಿ ನನ್ನ ಎಡಬಾಗದಿಂದ ಯಾರೋ ಕೆಮ್ಮಿ ಕ್ಯಾಕರಿಸಿ ಉಗಿದ ಸದ್ದಾಗಿ ತಟ್ಟನೆ ಅತ್ತಕಡೆ ತಿರುಗಿದೆ. ಸುಮಾರು ಐದು ಅಡಿ ಎತ್ತರದ ವ್ಯಕ್ತಿಯೊಬ್ಬ ಕೈಯಲ್ಲಿ ಕ್ವಾರ್ಟರು ಬಾಟಲಿಯಿಂದ ಮಾಡಿದ ಸೀಮೆಎಣ್ಣೆ ದೀಪವನ್ಹಿಡಿದು ನನ್ನೆಡೆಗೆ ಬರತೊಡಗಿದ. ತೀರಾ ನನ್ನ ಮುಖದ ಸಮೀಪವೇ ದೀಪ ತಂದು ಮನುಷ್ಯ ಪ್ರಾಣಿ ಹೌದೋ, ಅಲ್ಲವೋ ಎಂದು ಖಚಿತ ಪಡಿಸಿಕೊಂಡ. ಅದ್ಯಾವುದೋ ನನಗರ್ಥವಾಗದ ಭಾಷೆಯಲ್ಲಿ ನನ್ನ ಪೂರ್ವಾಪರಗಳನ್ನು ವಿಚಾರಿಸತೊಡಗಿದ.

ಕೈಯಲ್ಲಿ ಕ್ವಾರ್ಟರ್ ಬಾಟಲಿಯ ಸೀಮೆಎಣ್ಣೆ ದೀಪ ಹಿಡಿದ ವ್ಯಕ್ತಿ ರೂಪದ ಆಕೃತಿಯೊಂದು ದೀಪವನ್ನು ತಲೆಯ ಪಕ್ಕಕ್ಕಿಟ್ಟುಕೊಂಡು ಕತ್ತಲಲ್ಲಿ ನನ್ನನ್ನುದ್ದೇಶಿಸಿ, ‘ಯಾರು?’ ಎಂದಿತು. ನಾನು ಮಾತನಾಡಲಿಲ್ಲ. ಇನ್ನೂ ದೆವ್ವದ ಗುಂಗಿನಲ್ಲಿದ್ದ ನಾನು, ಆ ಆಕೃತಿ ಮೂರು ಬಾರಿ ‘ಯಾರು?’ ಎನ್ನಲಿ ಎಂದು ಕಾಯ್ದೆ. ಎರಡನೇ ಬಾರಿ ಯಾರು ಎನ್ನುವ ದನಿ ಇನ್ನೂ ಗಡುಸಾಗಿತ್ತು. ಮೂರನೇ ಬಾರಿ ಗದರಿಸುವಂತಿತ್ತು. ಆಗ ಬಾಯ್ಬಿಟ್ಟ ನಾನು, ನನ್ನ ಮಾರನಹಳ್ಳಿ ಯಾತ್ರೆ ಬಗ್ಗೆ ತಿಳಿಸಿದೆ. ಆ ಆಕೃತಿ ನಾಯಿಯನ್ನು ಹಚಾ ಎಂದು ಕೂಡಾ ಎನ್ನದೇ ಸೀದಾ ಹಿಂದೆ ಹೋಗಿ ಅದೇ ಕಿರ್ರ್ ಗಟಗಟ ಕ್ರೀಂಚ್ ಎಂಬ ಸದ್ದಿನೊಂದಿಗೆ ಬೆಳಗಿನ ಬಾಗಿಲೊಂದನ್ನು ತೆರೆಯಿತು. ನಾಯಿ ನಿರಂತರವಾಗಿ ತನ್ನ ಬೊಗಳುವಿಕೆಯನ್ನು ಮುಂದುವರೆಸಿತ್ತು. ಅದನ್ನೊಮ್ಮೆ ಅವನದೇ ಭಾಷೆಯಲ್ಲಿ ಗದರಿಸಿದ. ಮತ್ತಾದರೂ ನಾಯಿ ತನ್ನ ಕಾಯಕ ಮುಂದುವರೆಸಿದ್ದರಿಂದ ತನ್ನ ಕೈಯಲ್ಲಿ ದೀಪವಿರುವುದನ್ನೇ ಮರೆತು ಕೈ ಬೀಸಿದ. ದೀಪ ಪಳಕ್ಕೆಂದು ಆರಿಹೋಗಿ ಇದ್ದ ಅಲ್ಪ ಸ್ವಲ್ಪ ಬೆಳಕೂ ನಂದಿಹೋಯಿತು. ತಾನು ಬಂದೆಡೆಗೆ ತಿರುಗಿ ಅದೇನೋ ನನಗೆ ತಿಳಿಯದ ಭಾಷೆಯಲ್ಲಿ ಏನೆನನ್ನೋ ಕೂಗಿ ಹೇಳಿದ. ಹೆಚ್ಚಿನಾಂಶ ಬೆಂಕಿಪೊಟ್ಟಣ ತರಲೆಂದು ಕೂಗಿದನೇನೋ, ಮತ್ತೆ ನನ್ನೆಡೆಗೆ ತಿರುಗಿ ನನ್ನ ಟಾರ್ಚ್ ಬೆಳಕಿನಲ್ಲೇ ಅವನದೇ ಆದ ಭಾಷೆಯಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸಲಾರಂಬಿಸಿದ. ಅವನ ಹಿಂಭಾಗದ ಕತ್ತಲೆಯಿಂದ ದೀಪವೊಂದು ನಿಧಾನವಾಗಿ ನಮ್ಮೆಡೆಗೆ ಬರತೊಡಗಿತು. ಸುಮಾರು ನಲವತ್ತರ ಪ್ರಾಯದ ಹೆಣ್ಣೆಂಗಸು ಜೊತೆಗೆ ಹದಿನಾರು ಹದಿನೇಳರ ತರುಣಿಯೊಬ್ಬಳು ಅಚ್ಚರಿಯ ಕಣ್ಣುಗಳನ್ನು ತೆರೆದುಕೊಂಡು ನನ್ನೆಡೆಗೆ ನೋಡುತ್ತಾ ಬಂದರು. ಅಲ್ಲೇ ಎಲ್ಲೋ ಹತ್ತಿರದ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರಿಂದ ಅವರಿಬ್ಬರಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು.

ಹೊರಗೆ ಬಂದ ಗಂಡಸು ಈಗ ಸ್ವಲ್ಪ ಅಧಿಕಾರವಾಣಿಯಿಂದ ನನ್ನನ್ನು ಯಾರು, ಏನು, ಎತ್ತ ಎಲ್ಲಾ ವೃತ್ತಾಂತವನ್ನು ತನ್ನ ಮಳಯಾಳಿ ಮಿಶ್ರಿತ ಕನ್ನಡದಲ್ಲಿ ಕೇಳಿ ತಿಳಿದುಕೊಂಡ. ಹಾಗೂ ಹೀಗೂ ಮಾಡಿ ನನ್ನ ಪ್ರಯಾಣವನ್ನು ಅವರಿಗೆ ತಿಳಿಸಿ ರೈಲ್ವೇಹಾದಿಯ ವಿವರ ಪಡೆದೆ. ನಂತರ, ನಿಮಗೆ ರೈಲ್ವೇ ಟ್ರ್ಯಾಕಿಗೆ ನೇರವಾಗಿ ಹೋಗಬೇಕೆಂದರೆ ಹೀಗೇ ಸುಮಾರು ಎರಡು ಕಿಲೋಮೀಟರು ರಸ್ತೆಯಲ್ಲಿಯೇ ಹೋಗಿ ಬಲಕ್ಕೆ ತಿರುಗಿ ದನ ತಿರುಗಾಡುವ ಕಾಲ್ದಾರಿಯಲ್ಲಿ ಹೋದರೆ ರೈಲ್ವೇ ಸೇತುವೆಯೊಂದು ಕಾಣುತ್ತೆ ಎಂದ. ಆ ತರುಣಿಯೂ ನಾವು ನಿಂತಲ್ಲಿಂದ ಸಕಲೇಶಪುರದೆಡೆಗೆ ಎರಡು ಕಿಲೋಮೀಟರು ನಡೆದರೆ ಬಲಬಾಗದಲ್ಲಿ ದನ ತಿರುಗಿ ಆಗಿರುವ ದಾರಿಯೊಂದಿದೆ, ಅದರಲ್ಲೇ ಮುಂದೆ ಹೋದರೆ ಈಚಲಹರ ಸಿಗುತ್ತದೆ, ಹರ ಹತ್ತಿ ಇಳಿದರೆ ರಸ್ತೆ ಎರಡು ಕವಲಾಗುತ್ತದೆ, ಬಲದಾರಿಯಲ್ಲಿ ಹೋದರೆ ಒಂದು ಹೊಳೆ ಸಿಗುತ್ತೆ, ಆ ಹೊಳೆಯ ಮೇಲೆಯೇ ರೈಲ್ವೇ ಸೇತುವೆ ಹಾದುಹೋಗಿದೆ ಎಂಬ ವಿವರಣೆಯನ್ನು ಸವಿಸ್ತಾರವಾಗಿ ಹೇಳಿದಳು. ಅವರಿಂದ ಬೀಳ್ಕೊಂಡು ನಾನು ಹೊರಡುವಷ್ಟರಲ್ಲಿ ಬೆಳಗಾಗುವ ಲಕ್ಷಣಗಳು ಪ್ರಾರಂಭವಾಗಿದ್ದವು.

ಒಂದಷ್ಟು ದೂರ ನಡೆದಿರಬಹುದು, ಮತ್ತೊಂದು ಗೊಂದಲದಲ್ಲಿ ಮುಳುಗಬೇಕಾದ ಸಂದರ್ಭ ಬಂತು. ಈ ಜೀಪ್, ಲಾರಿ ಹಳವಂಡದಲ್ಲಿ ನಾನೆಷ್ಟು ದೂರ ಬಂದಿದ್ದೇನೆ? ಆ ದನ ತಿರುಗುವ ದಾರಿ ಹಿಂದಾಯ್ತೋ? ಮುಂದೆ ಸಿಗಲಿದೆಯೋ? ಸ್ಥಳೀಯರ ಲೆಕ್ಕಾಚಾರದಂತೆ ಇಲ್ಲೇ ಸ್ವಲ್ಪ ದೂರ ಎಂದರೆ ಮಿನಿಮಮ್ ಒಂದು ಮೈಲಿ; ಹಾಗಾದ್ರೆ ಇನ್ನೆಷ್ಟು ದೂರ ನಡೆಯಬೇಕೋ ಎಂದುಕೊಂಡು ಆಗದ್ದಾಗಲಿ ನಡೆದರೆ ಸಂಜೆಯೊಳಗೆ ಸಕಲೇಶಪುರವಾದರೂ ಸಿಗುವುದಲ್ಲ ಎಂಬ ಹುಂಬ ನಂಬಿಕೆಯೊಡನೆ ನಡೆಯತೊಡಗಿದೆ. ಅಷ್ಟರಲ್ಲಾಗಲೇ ಮುಂಜಾನೆಯ ಚುಮು ಚುಮು ಬೆಳಕು ಚೆನ್ನಾಗಿಯೇ ಹರಡತೊಡಗಿತು.

ಅಂತೂ ಇಂತೂ ಆ ರಸ್ತೆ ಬದಿಯ ಮಾರ್ಗದರ್ಶಿಗಳು ಹೇಳಿದ್ದ ದನ ತಿರುಗುವ ದಾರಿ ಗೋಚರಿಸಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೂ ಗೊಂದಲ ಮುಗಿಯಲೇ ಇಲ್ಲ. ಅದು ಅವರು ಹೇಳಿದ ದಾರಿಯೋ ಅಥವಾ ಇದೇ ಬೇರೆಯದೋ ಎಂಬುದು. ತಣ್ಣೀರಲ್ಲಿ ಬಿದ್ದವನಿಗೆ ಮಳೆಯೇನು? ಚಳಿಯೇನು? ಅಂದುಕೊಂಡು ಅದೇನಾಗುತ್ತೋ ನೋಡೋಣವೆಂದು ಕೈಕಾಲುಗಳು ನಮಗಿನ್ನು ಸಾಧ್ಯವೇ ಇಲ್ಲವೆಂದು ಗೋಗರೆಯುತ್ತಿದ್ದರೂ, ದೇಹದ ಚೈತನ್ಯ ಕುಂದುತ್ತಿದ್ದರೂ ಹೇಗಾದರೂ ಮಾಡಿ ರೈಲು ಹಳಿ ತಲುಪಬೇಕೆಂದು ಅಕ್ಷರಶಃ ಅಭೇದ್ಯ ಅರಣ್ಯದೊಳಗಿನ ದನ ತುಳಿದ ದಾರಿಯಲ್ಲಿ ಅಮೂಲ್ಯವಾದದ್ದೇನನ್ನೋ ಹುಡುಕುವಂತೆ ಹಲ್ಲುಕಚ್ಚಿಕೊಂಡು ಮುಂದಡಿಯಿಡತೊಡಗಿದೆ.

ಮಳೆಗಾಲದಲ್ಲಿ ಮೇಲಿನ ಗುಡ್ಡದಿಂದ ನೀರು ಹರಿದು ಬಂದು ರಸ್ತೆಯಡಿಯ ಮೋರಿಯನ್ನು ಹಾದು ಪ್ರಪಾತಕ್ಕೆ ಹರಿಯುವ ಝರಿ ಈಗ ಬೇಸಿಗೆಯಲ್ಲಿ ಒಣಗಿ, ದನ-ಜನರು ತಿರುಗುವ ಹಾದಿಯಾಗಿ ಉಪಯೋಗಿಸಲ್ಪಡುವಂತೆ ಕಾಣುತ್ತಿತ್ತು. ಹಾದಿಯ ತುಂಬಾ ನದಿಪಾತ್ರದಲ್ಲಿರುವ ಉರುಟುಗಲ್ಲುಗಳೇ ತುಂಬಿದ್ದು, ದನ ಕರುಗಳ ನಡೆದಾಟದಿಂದ ಎಲ್ಲೆಡೆಯೂ ಕೆಸರು ತುಂಬಿಹೊಗಿತ್ತು. ಇದು ಅದೇ ದಾರಿ ಹೌದೋ ಅಲ್ಲವೋ ಅಂತೂ ಈ ಹೆಬ್ಬಾವಿನಂಥ ಹೆದ್ದಾರಿಯಿಂದ ತಪ್ಪಿಸಿಕೊಳ್ಳೋಣವೆಂದು ಕೆಸರಿನ ಹಾದಿಯೊಳಗೆ ಕಾಲಿರಿಸಿ ಉಂಡುಗಲ್ಲುಗಳ ಮೇಲೆ ನೆಗೆನೆಗೆದು ಕೆಸರಿನಿಂದ ಪಾರಾಗುವುದಿರಲಿ, ಇನ್ನೂ ಹೆಚ್ಚೇ ಕೆಸರನ್ನು ಹಾರಿಸಿಕೊಂಡು ನಡೆಯತೊಡಗಿದೆ.

ಬೆಳಗಿನ ಬಿಸಿಲಿಗೆ ಇಬ್ಬನಿ ಮಿಂದು ಚರಚರನೆ ಮಿರುಗುತ್ತಿದ್ದ ಈಚಲ ಗರಿಗಳ ಮೃದು ನಿನಾದ ಕಿವಿಗೆ ಸೋಕಿ ಏನೋ ಒಂದು ರೀತಿಯ ನೆಮ್ಮದಿ ದೊರಕತೊಡಗಿತು. ಕಣ್ಣು ಹಾಯಿಸಿದಷ್ಟು ದೂರವರೆಗೆ ಹರಡಿದ್ದ ಈಚಲ ಹರದಲ್ಲಿ ಅನೇಕ ಕಡೆ ನನಗೆ ಕಾಡುಮೊಲಗಳು, ಪುರ್ಲಕ್ಕಿಗಳ ದರ್ಶನವಾಯ್ತು. ನನ್ನನ್ನು ಕಂಡಕೂಡಲೇ ಪುಳಕ್ಕನೆ ನೆಗೆದು ಕಣ್ಮರೆಯಾಗುತ್ತಿದ್ದ ಮೊಲಗಳು, ಗಾಬರಿಗೊಂಡು ಲಂಟಾನದೊಳಗೆ ನುಗ್ಗುತ್ತಿದ್ದ ಮುಂಗುಸಿಗಳು, ಗಲಿಬಿಲಿ ಮಾಡುತ್ತಾ ಚೆದುರಿಹೋಗುತ್ತಿದ್ದ ಪುರ್ಲಕ್ಕಿಗಳು ನನ್ನ ಆಯಾಸವನ್ನು ಆದಷ್ಟೂ ಕಡಿಮೆ ಮಾಡಿದವು.

ಹರ ಏರಿ ಇಳಿಯುತ್ತಿದ್ದವನಿಗೆ ನಾನು ನಡೆಯುತ್ತಿದ್ದ ದಾರಿ ಮುಂದಿನ ತಿರುವಿನಲ್ಲಿ ಕವಲಾಗಿದ್ದು ಸ್ಪಷ್ಟವಾಗಿ ಗೋಚರಿಸಿತು. ಚುಮುಚುಮು ಬೆಳಕು ವಿಸ್ತಾರವಗತೊಡಗಿತು. ಚೆನ್ನಾಗಿ ಬೆಳಕು ಹರಿಯುತ್ತಿದ್ದಂತೆ ವಾಚಿನೆಡೆಗೆ ನೋಡುತ್ತೇನೆ, ಆಗಲೇ ಬೆಳಗಿನ ಆರೂವರೆ ಆಗಿದೆ. ಅಯ್ಯೋ ಎಲ್ಲಾದರೂ ನಮ್ಮ ನ್ಯಾಕ್ ತಂಡ ಮುಂದಾದರೆ ಕಷ್ಟ ಆಗುತ್ತಲ್ಲ ಎಂದು ಏದುಸಿರು ಬರುತ್ತಿದ್ದರೂ ನಿಂತರೆ ಕೆಲಸ ಕೆಡುತ್ತದೆ ಎಂದು ಒಂದೇ ವೇಗದಲ್ಲಿ ನಡೆಯತೊಡಗಿದೆ. ವಿಶಾಲವಾದ ಈಚಲ ಹರವೊಂದು ಎದುರಾಯಿತು. ನಾನು ನಡೆಯುತ್ತಿದ್ದ ಹಾದಿಯು ಈಚಲ ಗುತ್ತಿಗಳ ನಡುವೆ ಎರಡು ಮೂರು ತಿರುವುಗಳನ್ನು ತೆಗೆದುಕೊಳ್ಳುವುದು, ಸ್ವಲ್ಪ ದೂರ ನಡೆದ ನಂತರ ಇನ್ನೊಂದು ಯಾವುದೋ ಕಾಲ್ದಾರಿ ಬಂದು ಸೇರುವುದು, ಒಟ್ಟಿನಲ್ಲಿ ನಾನು ಎಲ್ಲಿ, ಯಾಕೆ, ಎತ್ತಕಡೆ ನಡೆಯುತ್ತಿದ್ದೇನೆ ಎಂಬುದನ್ನೇ ಮರೆಸುವಂತೆ ದೊಡ್ಡ ಗೊಂದಲವನ್ನೇ ಸೃಷ್ಟಿಸಿತ್ತು. ಎತ್ತರದಿಂದ ಅಂದರೆ ಆಗಸದ ಅಂತರಾಳದಿಂದ ನೋಡಿದರೆ ಈ ಕಾಲ್ದಾರಿಗಳ ಜಾಲ ಹೆಚ್ಚೂಕಡಿಮೆ ಜೇಡರ ಬಲೆಯಂತೆಯೇ ಕಾಣುತ್ತಿತ್ತೇನೋ. ಈಚಲ ಗುತ್ತಿಯೊಂದರಿಂದ ಮೊಲಗಳೆರಡು ಪಣಕ್ಕನೇ ಚಿಮ್ಮಿ ಆ ದಾರಿಗಳಲ್ಲಿ ಯಾವುದೋ ಒಂದರೊಳಗೆ ನುಸುಳಿ ಎತ್ತಲೋ ನಾಪತ್ತೆಯಾದವು. ತೆಳ್ಳನೆಯ ತಿಳಿಬಿಸಿಲಿಗೆ ನವಿಲುಗಳ ಗುಂಪೊಂದು ಕತ್ತುಗಳನ್ನೆತ್ತಿ ಅತ್ತಿತ್ತ ಕಣ್ಣು ಹಾಯಿಸುತ್ತಾ ಕಿವಿ ಗಡಚಿಕ್ಕುವಂತೆ ಕೂಗುತ್ತಿದ್ದವು. ಈಚಲ ಹರದಲ್ಲಿ ಅಲ್ಲಲ್ಲಿ ಇದ್ದ ಚೊಟ್ಟೆಹಣ್ಣಿನ ಗಿಡಗಳಲ್ಲಿದ್ದ ಬಿಳಿ ಬಣ್ಣದ ಚೊಟ್ಟೆಹಣ್ಣನ್ನು ಮುಳ್ಳುಗಳೆಡೆಯಿಂದ ನಿಧಾನವಾಗಿ ಬಿಡಿಸಿಕೊಂಡೆ. ಬಾಯೊಳಗಿಡುತ್ತಿದ್ದಂತೆ ಕರಗಿಯೇ ಹೋಗುತ್ತವೆಯೆನಿಸುತ್ತಿದ್ದ ಹಣ್ಣುಗಳು ಇನ್ನೂ ತಿನ್ನುವ ಆಸೆ ಹುಟ್ಟಿಸಿದರೂ ತಡವಾಗಬಹುದೆಂದು ತೋಚಿದೆಡೆಗೆ ದೇವರೇಗತಿ ಎಂದು ಅಂದಾಜಿನಲ್ಲಿ ನಡೆಯತೊಡಗಿದೆ. ಸುಮಾರು ಏಳೂವರೆ ಇರಬಹುದು. ಬೆಳಗಿನ ಬಿಸಿಲು ತೀಕ್ಷ್ಣವಾಗಿ ರಾಚತೊಡಗಿತು. ಈಚಲಗರಿಗಳ ಮೇಲೆ ಪಸರಿಸಿದ ಮಂಜಿನ ಹನಿಗಳು ಬಿಸಿಲಿಗೆ ಆವಿಯಾಗತೊಡಗಿದವು. ಈಚಲಗರಿಗಳು ಬಿಸಿಲಿನ ಝಳಕ್ಕೆ ಚೂರಿಯಂತೆ ಜಳಜಳ ಸದ್ದು ಮಾಡತೊಡಗಿದವು. ಹಲವೆಡೆ ಕಾಲ್ದಾರಿ ನಾಲ್ಕಾರು ಈಚಲ ಗುತ್ತಿಗಳ ನಡುವೆ ಇದ್ದಕ್ಕಿದ್ದಂತೆ ಕಾಣೆಯಾಗುತ್ತಿತ್ತು. ಕತ್ತನ್ನು ಅತ್ತಿತ್ತ ಆಡಿಸಿ ಹುಡುಕಿದರೆ ಮತ್ತೆಲ್ಲೋ ಕಾಲ್ದಾರಿಯೊಂದು ಪ್ರತ್ಯಕ್ಷವಾಗುತ್ತಿತ್ತು. ನಾನೆತ್ತ ಹೋಗಬೇಕಿತ್ತೋ? ಈ ಹಾದಿಗಳು ಎತ್ತ ಕರೆದೊಯ್ಯುತ್ತಿವೆಯೋ? ನೈಸರ್ಗಿಕ ಜಂತರ್‍ಮಂತರ್ ಒಂದನ್ನು ಹೊಕ್ಕು ಸುತ್ತಿದಲ್ಲೇ ಸುತ್ತುತ್ತಿದ್ದೇನೋ ಎಂದು ಭ್ರಾಂತಿ ಶುರುವಾಯ್ತು.

ಅಷ್ಟರಲ್ಲಿ ಯಾರೋ ಕೆಮ್ಮಿದಂತಾಯ್ತು. ಅಷ್ಟೆತ್ತರ ಬೆಳೆದು ನಿಂತಿದ್ದ ಈಚಲ ಗಿಡಗಳಾಚೆ ಮನುಷ್ಯಾಕೃತಿಯೊಂದು ದೊಣ್ಣೆ ಹಾಗೂ ಗೋಣಿಚೀಲವನ್ನೆತ್ತಿಕೊಂಡು ಅದೆತ್ತಲೋ ಹೋಗುತ್ತಿದ್ದುದು ಗಮನಕ್ಕೆ ಬಂತು. ಇದ್ಯಾವನಪ್ಪಾ ಈ ಸ್ಥಳದಲ್ಲಿ? ನೋಡಿದರೆ ಯಾರೋ ಶಿಕಾರಿಯವನಂತೆ ಕಾಣುತ್ತಾನೆ ಎಂದುಕೊಂಡು “ಹೋಯ್” ಎಂದು ಗಮನ ಸೆಳೆಯಲು ಕೂಗಿದೆ. ಅವನಿಗೂ ಗಾಬರಿಯಾಯ್ತೆಂದು ಕಾಣುತ್ತೆ. ಗಲಿಬಿಲಿಯಿಂದ ತಿರುಗಿ ನೋಡಿದ. ಹೆಗಲ ಮೇಲಿದ್ದ ಗೋಣಿಚೀಲವನ್ನು ಕೆಳಗಿಳಿಸಿ “ಒಹೋಯ್” ಎಂದ. ‘ನಿಲ್ಲಿನಿಲ್ಲಿ’ ಎಂದವನೇ ಅವನೆಡೆಗೆ ವೇಗವಾಗಿ ನಡೆಯತೊಡಗಿದೆ. ಗುತ್ತಿಗಳನ್ನು ಸುತ್ತಿ ಬಳಸಿ ಹಾವಿನಂತೆ ಅವನೆಡೆಗೆ ಹೋಗುತ್ತಿದ್ದವನು ಕಾಲಿಗೇನೋ ತಾಡಿ ಹಾರಿ ನೆಗೆದುಬಿದ್ದೆ. ಎರಡು-ಮೂರಿಂಚು ಉದ್ದದ ಚೂರಿಯಂಥ ಈಚಲ ಮುಳ್ಳುಗಳ ಇರಿತದಿಂದ ನನ್ನ ಮುಖ ಪಾರಾದದ್ದೇ ಒಂದು ದೊಡ್ಡ ಪುಣ್ಯ. ಮಕಾಡೆಬಿದ್ದ ನನ್ನ ಮೇಲೆ ನನ್ನ ಬ್ಯಾಗು ಬಿದ್ದು ಎಡಗೈ ಈಚಲಗುತ್ತಿಯ ಬುಡದ ಮುಳ್ಳಿನ ಮೇಲೆ ಬಿದ್ದು ಒಂದು ಮುಳ್ಳು ಕಿರುಬೆರಳು ಮತ್ತದರ ಪಕ್ಕದ ಬೆರಳಿನ ಬುಡದ ನಡುವೆ ತೂರಿ ಮುರಿದೇಹೋಯ್ತು. ಅಸಾಧ್ಯ ನೋವಿನಿಂದ ಕಿರುಚುವಂತಾದ ನನ್ನ ಬಳಿಗೆ ಆ ವ್ಯಕ್ತಿ ಓಡಿ ಬಂದ. “ಅಯ್ಯಯ್ಯೋ ಎಂಥಾ ಕೆಲಸ ಆಯ್ತು. ತುಂಬಾ ಏಟಾಯ್ತಾ ಏನ್ ಕಥೆ ಮಾರಾಯ್ರೆ. ಇಲ್ಲಿಗ್ಯಾಕೆ ಬಂದ್ರಿ? ಈಗ ನಾನೇ ಬಲೆಯೊಡ್ಡಿ ಹೋಗಿದ್ದೆ. ತೆಳೂತಂತಿ ಬೇರೆ; ಕಾಣೋದಿಲ್ಲ. ಸರಿ, ಈಚೆ ಬನ್ನಿ. ಅರೇ! ಕೈಗೆ ತುಂಬಾ ಪೆಟ್ಟಾಗಿರೋ ಹಾಗಿದೆ. ಸರ್ರಿಯಾದ ಮುಳ್ಳೇ ಚುಚ್ಚಿದೆ. ಇದ್ರುಮನೆ ಕಾಯಾಗ. ಹಂಗೇ ಹಿಡ್ಕಳಿ ನೋವಾಗುತ್ತೆ. ಹಾಗೆ ಇರಿ” ಎಂದವನೇ ನನ್ನ ಎಡ ಅಂಗೈ ತೂರಿ ಹೋಗಿ ಮುರಿದಿದ್ದ ಮುಳ್ಳನ್ನು ತನ್ನ ಹಲ್ಲಿನಲ್ಲಿ ಕಚ್ಚಿ ಬಲವಾಗಿ ಎಳೆದ. ಮುಳ್ಳು ಹೊರಬಂದ ಕೂಡಲೇ ಆ ಜಾಗದಿಂದ ರಕ್ತ ಚಿಲ್ಲನೇ ಚಿಮ್ಮತೊಡಗಿತು. “ಇಲ್ಲೇ ಇರಿ ಒಂದು ಸೊಪ್ಪಿದೆ ಔಷಧೀದು, ತರ್ತೀನಿ ರಕ್ತ ಬರೋದು ಸ್ವಲ್ಪ ಹೊತ್ತಿನಲ್ಲೇ ನಿಲ್ಲುತ್ತೆ” ಅಂದು ಎತ್ತಲೋ ಹೋಗಲುಪಕ್ರಮಿಸಿದ. ನಾನು “ಬೇಡಬೇಡ ನನ್ನ ಬ್ಯಾಗಿನಲ್ಲೇ ಫಸ್ಟೈಡ್ ಬಾಕ್ಸ್ ಇದೆ. ಅದರಲ್ಲೇ ಟಿಂಚರ್, ಹತ್ತಿ, ಪ್ಲಾಸ್ಟರ್ ಇದೆ. ಸ್ವಲ್ಪ ತೆಗೆದು ಹಾಕಿ” ಎಂದೆ. ನನ್ನ ಬ್ಯಾಗನ್ನು ನನ್ನ ಬೆನ್ನಿನಿಂದ ಬಿಡಿಸಿ ಝಿಪ್ ಎಳೆದು ಮೆಲ್ಲಗೆ ತೆಗೆದು ಔಷಧಿ ಹಾಕಿ ತನಗೆ ತಿಳಿದಂತೆ ಬ್ಯಾಂಡೇಜ್ ಹಾಕಿದ.
ಅವನ ಹೆಸರು ದೇವಪ್ಪ ಅಂತೆ. ಆ ಈಚಲಹರದಲ್ಲಿ ಸಾಕಷ್ಟು ಮೊಲಗಳಿದ್ದು, ಗೂಟಗಳನ್ನು ನೆಲಕ್ಕೆ ಹೊಡೆದು, ತೆಳುವಾದ ತಂತಿಯಿಂದ ಮಾಡಿದ ಬಲೆಗಳನ್ನು ಅಲ್ಲಲ್ಲಿ ಕಟಿ;್ಟ ದಿನಕ್ಕೆ ಒಂದೆರಡಾದರೂ ಮೊಲ ಹಿಡಿಯುವುದು ಅವನ ಹವ್ಯಾಸ. ಮಲೆನಾಡಿರಲಿ ಅಥವಾ ಬಯಲು ಸೀಮೆಯಿರಲಿ ಈ ರೀತಿಯ ಬಲೆ, ಇಡಚಲು, ಹಕ್ಕಿಬಲೆ, ಉಳ್ಳ ಮುಂತಾದವನ್ನು ಉಪಯೋಗಿಸಿ ಕೋವಿಯಿಲ್ಲದೇ ಶಿಕಾರಿ ಮಾಡುವುದು ವಾಡಿಕೆ. ಬೈಕ್, ಟಿಲ್ಲರ್, ಮುಂತಾದವುಗಳ ಕ್ಲಚ್‍ಕೇಬಲ್ಲನ್ನು ಆಯಾ ಪ್ರಾಣಿಗಳ ತಾಕತ್ತಿಗೆ ಅನುಗುಣವಾಗಿ ಪ್ರಾಣಿಗಳು ತಿರುಗುವ ಗಂಡಿಗೆ ಕಟ್ಟಿ, ಹಿಡಿದು ಹಬ್ಬ ಹುಡಿಹಾರಿಸುವುದು ಇಲ್ಲಿನ ಅಭ್ಯಾಸ. ಈ ಹಕ್ಕಿಪಿಕ್ಕರು, ಗೋಸಾಯಿಗಳು ಕಾಡುಕೋಳಿ, ಹುಂಡಗೋಳಿ, ಸುಟ್ಟಗೋಳಿ, ಬುರ್ಲಕ್ಕಿಗಳನ್ನು ಕೆಲವೊಮ್ಮೆ ನವಿಲುಗಳನ್ನು ರಾಶಿರಾಶಿ ಹಿಡಿದು ತಿನ್ನುವುದರ ಜೊತೆಗೆ ಮಾರುವುದೂ ಮಾಡುತ್ತಾರೆ. ನಮ್ಮೂರಿನಲ್ಲಿ ಆಗ ಕೇಪಿನ ಕೋವಿಯಲ್ಲಿ ಕಾಡುಕೋಳಿ ಹೊಡೆಯುವ ಕೆಲ ಶಿಕಾರಿಗಳು ಈ ಹಕ್ಕಿಪಿಕ್ಕರ ಆರ್ಭಟವನ್ನು ತಡೆಯಲಾರದೆ ಹೊಟ್ಟೆಯುರಿಯಿಂದ ಫಾರೆಸ್ಟ್‍ನೋರಿಗೆ ಹಚ್ಚಿಕೊಟ್ಟು ಪಾಪದ ಅಲೆಮಾರಿಗಳನ್ನು ಹೆಂಗಸರು ಮಕ್ಕಳೆನ್ನದೇ ಬೆಂಡೆತ್ತಿಸಿ, ಅಡ್ರಸ್ಸಿಲ್ಲದಂತೆ ಮಾಡಿದರು. ಈ ಲೋಕಲ್ ಕೇಪಿನಕೋವಿ ಶಿಕಾರಿದಾರರು ನೇರಳೆಮರದ ಎಲೆಯನ್ನು ಉಪಯೋಗಿಸಿ ಪೀಪಿ ಮಾಡಿಕೊಂಡು ಅದನ್ನು ಕಾಡುಕೋಳಿಯ ಕೂಗನ್ನೇ ಅನುಕರಿಸುವಂತೆ ಊದಿ ಕೋಳಿಗಳನ್ನು ಆಕರ್ಷಿಸಿ, ಅವು ಮರುಳಾಗಿ ಬಂದ ಕೂಡಲೇ ಪಠೀರೆನಿಸುತ್ತಿದ್ದರು.

ಕೇಪಿನ ಕೋವಿ ಲೋಡ್ ಮಾಡುವ ವಿಧಾನವೇ ವಿಶಿಷ್ಟವಾದುದು. ಕೋವಿಯ ಜೊತೆಗಿರುವ ಹೊಳವಿನಷ್ಟೇ ಉದ್ದವಾದ ಗಜದಲ್ಲಿ, ಹೊಳವು ಅಂದರೆ ಕೊಳವೆ, ಆ ಕೊಳವೆಯೊಳಗೆ ತೆಂಗಿನ ಜುಂಗನ್ನು ಉಂಡೆಮಾಡಿ ನೂಕಿ ಹಿಂದೆ ಮುಂದೆ ಆಡಿಸಿ ಸ್ವಚ್ಚಗೊಳಿಸುತ್ತಾರೆ. ಆನಂತರ ಆ ಜುಂಗನ್ನು ಗಜದ ಹಿಂಭಾಗದ ಸ್ಕ್ರೂನಂತ ತುದಿಯಿಂದ ಸಿಕ್ಕಿಸಿಕೊಂಡು ಹೊರತೆಗೆಯುತ್ತಾರೆ. ಆನಂತರ ನಿಗದಿತ ಅಳತೆಯಲ್ಲಿ ರಂಜ್ಕ (ಗಂಧಕ)ವನ್ನು ಕೊಳವೆಯೊಳಗೆ ಸುರುವಿ ತೆಂಗಿನ ಜುಂಗಿನ ಉಂಡೆಯನ್ನು ತೂರಿಸಿ ಗಜದಿಂದ ಘಟ್ಟಿಸಬೇಕು. ನಂತರ ಸ್ವಲ್ಪ ರವೆ ಎಂಬ ಸೀಮೇಅಕ್ಕಿ ಗಾತ್ರದ ಚಿಕ್ಕಚಿಕ್ಕ ಸೀಸದ ಗುಂಡುಗಳನ್ನು ಹಾಕಿ ಮತ್ತೊಮ್ಮೆ ತೆಂಗಿನಜುಂಗಿನ ಉಂಡೆಯನ್ನು ತೂರಿಸಿ ಮತ್ತೊಮ್ಮೆ ಘಟ್ಟಿಸಬೇಕು. ಹೊಡೆದು ಉರುಳಿಸಲಿಕ್ಕಿರುವ ಪ್ರಾಣಿಯೇನಾದರೂ ದೊಡ್ಡದಾಗಿದ್ದಲ್ಲಿ ಗೋಲಿಗಾತ್ರದ ಸೀಸದ ದೊಡ್ಡ ಗುಂಡುಗಳಾದ ಬಕ್ಸೆಟ್‍ನ್ನು ಅವಶ್ಯಕತೆಗೆ ತಕ್ಕಷ್ಟು ಸೇರಿಸಿ ಜುಂಗಿನ ಉಂಡೆಯನ್ನು ಘಟ್ಟಿಸಿ ಲೋಡ್ ಮಾಡಿಕೊಳ್ಳುತ್ತಾರೆ. ನಂತರ ಕುದುರೆಯ ಜಾಗವಾದ ಇಗ್ನಿಷನ್ ಪಾಯಿಂಟ್‍ನಲ್ಲಿ ತಾಮ್ರದ ಕೇಪನ್ನು ಟೊಪ್ಪಿಯ ರೀತಿ ಸಿಕ್ಕಿಸುತ್ತಾರೆ. ಗುರಿಯನ್ನು ಸಿದ್ದಪಡಿಸಿಕೊಂಡು ಕುದುರೆಯೆಳೆದು ಟ್ರಿಗರ್ ಒತ್ತಿದಲ್ಲಿ ಭಾರೀ ಸದ್ದಿನೊಂದಿಗೆ ಸಿಡಿಯುವ ಕೇಪಿನಕೋವಿ ಈಗ ಅಪರೂಪವಾಗುತ್ತಿದೆ. ರೆಡಿಮೇಡ್ ಶೂಟಿಗೆ ಅನುಕೂಲವಾಗುವಂತೆ ತೋಟಾಕೋವಿಯಿರುವುದು ಹಾಗೂ ಅದರ ಪೆಟ್ಟು ಜೋರಾಗಿರುವುದರಿಂದ ಶಿಕಾರಿಯವರು ಹೆಚ್ಚಾಗಿ ಈ ಆಧುನಿಕ ಆಯುಧ ತೋಟಾಕೋವಿಯನ್ನೇ ಖಾಯಸ್ ಪಡುತ್ತಾರೆ.
ಇನ್ನು ಇಡಚಲಿನ ವಿಚಾರ ಅತ್ಯಂತ ಸರಳವಾದದ್ದು. ಮರದ ಅನೇಕ ಪಟ್ಟಿಗಳನ್ನು ಸೇರಿಸಿ ನಾಲ್ಕಡಿ ಚೌಕದ ವಿಸ್ತಾರದಲ್ಲಿ ತಡಿಕೆಯೊಂದನ್ನು ನಿರ್ಮಿಸಿ, ಅವಶ್ಯವಿದ್ದರೆ ಭಾರಕ್ಕೆಂದು ಕಲ್ಲನ್ನು ಹೇರುತ್ತಾರೆ. ಒಂದು ತುದಿಯನ್ನು ಎತ್ತಿ ಒಂದು ತೆಳುವಾದ ಹಾಗೂ ಸೂಕ್ಷ್ಮವಾದ ಪಟ್ಟಿಯನ್ನು ಆಧಾರಕೊಟ್ಟು ನಿಲ್ಲಿಸಲಾಗುತ್ತದೆ. ಅದರ ಅಡಿ ಯಾವ ಪ್ರಾಣಿ ಅಥವಾ ಪಕ್ಷಿ ಹಿಡಿಯಬೇಕೋ ಆ ಮಿಕದ ಇಷ್ಟದ ಆಹಾರವನ್ನು ಚೆಲ್ಲಿ ಆಕರ್ಷಿಸಬೇಕು. ಆಹಾರವನ್ನು ಆಯಲು ಬರುವ ಪ್ರಾಣಿ-ಪಕ್ಷಿಯನ್ನು ತಾಗಿದ ಕೂಡಲೇ ಮರದ ಪಟ್ಟಿಗಳ ಟೆರೇಸ್ ಥಟಾರನೆ ಕುಸಿದುಬಿದ್ದು ಶಿಕಾರಿ ಯಶಸ್ವಿಯಾಗುತ್ತದೆ.

ಇನ್ನು ಇದಕ್ಕೆ ಸಂಬಂಧಿಸಿದ ಶಿಕಾರಿ ಘಟನೆಯನ್ನು ಇಲ್ಲಿ ಹೇಳಲೇಬೇಕಾಗಿದೆ. ನಮ್ಮ ಏಲಕ್ಕಿ ತೋಟದಲ್ಲಿ ಏಲಕ್ಕಿ ಹಣ್ಣಾಗುವ ಕಾಲದಲ್ಲಿ ಇಲಿಗಳು, ಅಳಿಲುಗಳು ವಿಪರೀತ ಕಾಟಕೊಟ್ಟು ಹಣ್ಣುಗಳನ್ನು ಒಡೆದು ತಿನ್ನುತ್ತಿದ್ದವು. ಒಂದೊಂದು ಗಿಡದಲ್ಲಿಯೂ ಹತ್ತರಿಂದ ಐವತ್ತು ಕಾಯಿಗಳು ಪ್ರತಿ ಸುತ್ತಿನ ಕೊಯ್ಲಿನಲ್ಲಿಯೂ ಇಲಿ-ಅಳಿಲುಗಳಿಗೆ ಆಹಾರವಾಗುತ್ತಿದ್ದವು, ಹೇಗಾದರೂ ಇದನ್ನು ತಡೆಯಬೇಕೆಂದು ನಿರ್ಧರಿಸಿ ತೋಟ ಕಾಯುವ ಜಬ್ಬನಿಗೆ ಇಲಿ ಹಿಡಿಯುವ ಕತ್ತರಿಗಳನ್ನು ತಂದುಕೊಟ್ಟೆವು. ಇಲಿ, ಅಳಿಲುಗಳನ್ನು ಆಕರ್ಷಿಸಲು ಒಣಮೀನಿನ ತುಂಡುಗಳನ್ನು ಸಹಾ ಒದಗಿಸಿದೆವು. ಒಂದು ದಿನ ಹೀಗೇ ಎಂದಿನಂತೆ ನಾನೂ ನನ್ನ ತಮ್ಮನೂ ತೋಟಕ್ಕೆ ಹೋದೆವು. ನಾವು ಬಂದ ಸದ್ದಿಗೆ ಜಬ್ಬ ಎಲ್ಲೋ ಕುಳಿತಿದ್ದವ ‘ಯಾರೋಯ್’ ಎಂದು ಕತ್ತಿ, ದೊಣ್ಣೆಯೊಂದಿಗೆ ಜಿಗಿದುಬಂದ. ‘ಓ ಅಣ್ಣಯ್ಯರೇ ನೀವಾ?’ ಎಂದು “ಈ ಅಳಿಲುಗಳು ಏನು ದಾಂಧಲೆ ಮಾಡ್ತಿದಾವೆ ನೋಡಿ, ಕೇಳಿ, ಕೇಳಿ; ‘ಚಿಪ್ಚಿಪ್’ ಅಂತಾ ಕೂಗ್ತಿದಾವಲ್ಲ. ಏನಿಲ್ಲ ಅಂದ್ರೂ ದಿನಕ್ಕೆ ಎರಡರಿಂದ ಮೂರು ಸೇರು ಹಣ್ಣು ತಿಂದು ಹಾಳುಮಾಡ್ತವೆ. ಕತ್ತರೀನಾ ನಾಲ್ಕು ಕಡೆ ಇಟ್ಟಿದ್ದೀನಿ. ಈ ಕಡೆಯವೆರಡನ್ನು ನೋಡ್ಕಂಡ್ ಬಂದೆ. ಒಂದು ಸಿಡಿದಿದೆ, ಆದ್ರೆ ಏನೂ ಬಿದ್ದಿಲ್ಲ. ಇನ್ನೊಂದು ಸಿಡಿದಿಲ್ಲ, ಆದರೆ ಮೀನಿನ್ ತುಂಡಿಲ್ಲ. ಆ ಕಡೆ ಹಳ್ಳದಾಚೆದನ್ನು ಇನ್ನೂ ನೋಡಿಲ್ಲ. ನೀವು ಬಂದಿದ್ದು ಸರಿಯಾಯ್ತು. ನಡೀರಿ ನೋಡ್ಕಂಡ್ ಬರೋಣ” ಎಂದು ನಮ್ಮನ್ನೂ ಕರೆದ. ಏನ್ ಜಿಗಣೆ ಅಂತೀರಿ, ಒಂದು ಹೆಜ್ಜೆಯಿಟ್ಟರೆ ಕಡೇಪಕ್ಷ ಐದಾರು ಜಿಗಣೆಗಳು ಸೊಂಡಿಲೆತ್ತುತ್ತಿದ್ದವು. ಕೈಯಲ್ಲಿ ಮುಟ್ಟಲು ಹೇಸಿಗೆಯಾಗಿ ಕತ್ತಿಯ ತುದಿಯಲ್ಲೇ ಹೆರೆದು, ಜಿಗಣೆಯನ್ನು ಕತ್ತಿಗೆ ಹತ್ತಿಸಿಕೊಂಡು ಪಕ್ಕದ ಮರಕ್ಕೆ ಒರೆಸಿ ಕತ್ತಿಯಿಂದಲೇ ಚಚ್ಚಿಯೋ ಕೊಯ್ದೋ ಕಥೆ ಮುಗಿಸುತ್ತಿದ್ದೆವು. ನಾವು ನಡೆದಾಡುವಾಗ ನೆಲದಲ್ಲಿ ಆಗುವ ಕಂಪನದಿಂದಲೇ ಜಾಗೃತವಾಗುವ ಈ ಪರತಂತ್ರಿಗಳು ನಮಗೆ ಅರಿವಾಗದಂತೆ ನಿಧಾನವಾಗಿ ನಮ್ಮ ಕಾಲನ್ನೇರಿ ಅನುಕೂಲಕರ ಜಾಗ ಸೇರಿಕೊಂಡು ಸೂಕ್ಷ್ಮವಾಗಿ ಚರ್ಮ ಕೊರೆದು ರಕ್ತ ಹೀರಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ರಕ್ತ ಹೆಪ್ಪುಗಟ್ಟದಿರುವಂತೆ ನಮ್ಮ ರಕ್ತನಾಳದೊಳಗೆ ಹಿರುಡಿನ್ ಎಂಬ ರಾಸಾಯನಿಕವನ್ನು ಇಂಜೆಕ್ಟ್ ಮಾಡುತ್ತವೆ. ರಕ್ತ ಹೀರಿ ಇನ್ನು ತನ್ನ ದೇಹದಲ್ಲಿ ರಕ್ತ ತುಂಬಿಸಿಕೊಳ್ಳಲು ಜಾಗವೇ ಇಲ್ಲವೆಂದಾಗ ಕಚ್ಚಿಕೊಂಡಿದ್ದ ಭಾಗವನ್ನು ಬಿಟ್ಟು ಉಂಡುಂಡಾದ ಜಿಗಣೆ ಉರುಳಿಹೋಗುತ್ತದೆ. ಆದರೆ ನಮ್ಮ ದೇಹದ ಮೇಲೆ ಕಚ್ಚಿಕೊಂಡಿದ್ದ ಭಾಗದಲ್ಲಿ ಇಂಜೆಕ್ಟ್ ಮಾಡಿದ್ದ ಹಿರುಡಿನ್ ಪ್ರಭಾವದಿಂದ ರಕ್ತ ನಿರಂತರವಾಗಿ ಕಡಿಮೆಯೆಂದರೂ ಇಪ್ಪತ್ತು ನಿಮಿಷ ಸ್ರಾವವಾಗುತ್ತಲೇ ಇರುತ್ತದೆ. ಕಾಲ್ಬೆರಳುಗಳ ಸಂದಿ, ಮುಂಗಾಲು, ಅವಕಾಶವಾದರೆ ತೊಡೆಯ ಸಂದಿಯಲ್ಲೂ ರಕ್ತಹೀರುವ ಕೆಲಸ ಶುರು ಮಾಡುವ ಈ ಜಿಗಣೆಗಳನ್ನು ವೈದ್ಯಶಾಸ್ತ್ರದಲ್ಲಿ ದೇಹದೊಳಗೆ ಸೇರಿರಬಹುದಾದ ವಿಷವನ್ನು ತೆಗೆಯಲೂ ಬಳಸುತ್ತಾರೆ.

ಜಬ್ಬ, ಅಳಿಲು ಹಿಡಿಯಲು ಇರಿಸಿದ್ದ ಕತ್ತರಿ ತೋರಿಸಲು ನಮ್ಮನ್ನು ಕರೆದುಕೊಂಡು ಹೋದವನು ಗಕ್ಕನೆ ನಿಂತ. ಕತ್ತರಿಯನ್ನು ಚಿಕ್ಕ ಬೈನೇಗಿಡವೊಂದರ ಬುಡಕ್ಕೆ ತಂತಿಯಿಂದ ನಾಯಿಯನ್ನು ಸರಪಳಿಯಲ್ಲಿ ಕಟ್ಟುವಂತೆ ಕಟ್ಟಲಾಗಿತ್ತು. ಕತ್ತರಿ ಸಿಡಿದಿತ್ತು. ಆದರೆ ಯಾವುದೇ ಇಲಿಯಾಗಲೀ ಅಳಿಲಾಗಲೀ ಸಿಕ್ಕಿಬಿದ್ದಿರಲಿಲ್ಲ. ಬದಲಿಗೆ ಬೃಹತ್ತಾದ ಆಮೆಯೊಂದು ಕತ್ತನ್ನು ಆಲ್‍ಮೋಸ್ಟ್ ಕತ್ತರಿಸಿಕೊಂಡು ಸತ್ತು ಅಂಗಾತ ಬಿದ್ದಿತ್ತು. ರಕ್ತಕ್ಕೆ ಇರುವೆಗಳು ಮುತ್ತುತ್ತಿದ್ದವು. ದೊಡ್ಡ ಗಾತ್ರದ ಹೊನ್ನೊಣಗಳು ಆಮೆಯ ದೇಹದ ಮೇಲೆ ಅಲ್ಲಲ್ಲಿ ಬಿಳಿಪುಡಿಯಂಥಾ ಮೊಟ್ಟೆಗಳನ್ನು ಇಡುತ್ತಿದ್ದವು.

ಹಿಗ್ಗಿ ಹೀರೇಕಾಯಿಯಾದ ಜಬ್ಬ ಸರಿಸುಮಾರು ಒಂದೂವರೆ ಕೇಜಿ ಮಾಂಸ ಸಿಗಬಹುದಾದ ಆಮೆಯನ್ನು ಕತ್ತರಿಯಿಂದ ಬಿಡಿಸಿಕೊಂಡು “ಬನ್ನಿ ಬನ್ನಿ ಮುರಲಾಮಿ ರಿಪೇರಿ ಮಾಡದನ್ನು ತೋರಿಸ್ತೀನಿ” ಎಂದ್ಹೇಳಿ ಬೇಸಿಗೆಯಲ್ಲಿ ನೀರಿಗಾಗಿ ಹಳ್ಳಕ್ಕೆ ಅಡ್ಡಕಟ್ಟಿದ ಒಡ್ಡಿನತ್ತ ನಮ್ಮನ್ನು ಕರೆದೊಯ್ದು ಕೈಕಾಲು ತೊಳೆಯಲು ಅಲ್ಲಿ ಇಟ್ಟಿದ್ದ ಅಗಲವಾದ ಕಾಡುಕಲ್ಲಿನ ಮೇಲೆ ಆಮೆಯನ್ನು ಅಡಿಗಟ್ಟು ಮೇಲಕ್ಕೆ ಬರುವಂತೆ ಇಟ್ಟುಕೊಂಡು ಕತ್ತಿಯಲ್ಲಿ ಅದರ ಬಲವಾದ ಚಿಪ್ಪನ್ನು ಕುಟುಕಿ ಕುಟುಕಿ ಒಡೆದು ತೆಗೆದ. ಚಿಪ್ಪಿನ ಒಳಮೈಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಆಮೆಯ ಮಾಂಸದ ಮುದ್ದೆಯನ್ನು ಮೀಟಿ ಎಳೆದು, ಕಿತ್ತು, ಕಾಲುಗಳಲ್ಲಿ ಚಿಪ್ಪನ್ನು ಒತ್ತಿ ಹಿಡಿದು ಆಮೆಯ ಕಾಲುಗಳನ್ನು ಕೈಯಲ್ಲಿ ಹಿಡಿದುಕೊಂಡು ಹಲ್ಲುಕಚ್ಚಿ ಕಿತ್ತು ತೆಗೆದನು.

ನನ್ನ ತಮ್ಮ ಪಾಪಣ್ಣ “ಈ ಆಮೆ ಹೆಂಗ್ ಮರಿಯಾಗುತ್ತೆ? ಮೊಟ್ಟೆಯಿಂದನೇ ತಾನೆ?” ಎಂದ. “ಹೂ ಕಣಾ, ಹೆಣ್ಣಾಮೆ ಮರಳನ್ನ ಕೊರೆದು ಆದ ಗುಂಡಿಯೊಳಗೆ ಹತ್ತರಿಂದ ಹದಿನೈದು ಸಂಖ್ಯೆಯ, ಒಂದೂವರೆಯಿಂದ ಎರಡಿಂಚು ಉದ್ದುದ್ದನೆಯ, ತಿಳಿಗುಲಾಬಿ ಬಣ್ಣದ, ತೆಳು ಸಿಪ್ಪೆಯ ಮೊಟ್ಟೆಗಳನ್ನ ಇಟ್ಟು ಮರಳನ್ನ ಮುಚ್ಚುತ್ತದೆ. ಮೂರ್ರಿಂದ ನಾಲ್ಕ್ ತಿಂಗಳಲ್ಲಿ ಸಣ್ಸಣ್ಣ ಮರಿಗಳು ಮರಳೊಳಗಿಂದ ಹೊರಕ್ಕೆ ಬರ್ತವೆ” ಎಂದೆ. “ಅದುಕ್ಕೆ ಚಿಪ್ ಹೆಂಗೆ ಹುಟ್ಟುತ್ತೆ? ಬೇರೆ ಪ್ರ್ರಾಣಿಗಳಿಗೆ ಇಲ್ದ ಚಿಪ್ಪು, ಇವುಕ್ಕೆ ಮಾತ್ರ ಹೇಗೆ?” ಎಂದು ಮರು ಪ್ರಶ್ನೆ ಹಾಕಿದ. ಊಹೂ, ನನಗೂ ಗೊತ್ತಿರ್ಲಿಲ್ಲ. ಜಬ್ಬನ ಕಡೆಗೆ ನೋಡಿದೆ, ಅವನೂ ಗೊತ್ತಿಲ್ಲವೆಂಬಂತೆ ಪ್ಯಾಲಿ ನಗೆ ನಕ್ಕ. ಯಾಕಿರಬಹುದೆಂದು ಬಹಳ ತಲೆ ಕೆಡಿಸಿಕೊಂಡೆ. ಕಡೆಗೆ “ಅದು ನಿಧಾನಕ್ಕೆ ನೆಡೀತೀತಲ್ಲ, ಬೇರೆ ಪ್ರಾಣಿಗಳು ಹಿಡಿದು ತಿನ್ನಬಾರದಂತ ದೇವ್ರೇ ಚಿಪ್ಪು ಸಮೇತ ಸೃಷ್ಠಿ ಮಾಡಿದೆ ಅಂತ ಕಾಣುತ್ತೆ” ಅಂದೆ. ಹಲವು ದಿನಗಳ ನಂತರ ಯಾವುದೋ ಸೈನ್ಸ್ ಜರ್ನಲ್ ಓದುತಿದ್ದಾಗ ಈ ಆಮೆಯ ಚಿಪ್ಪಿನ ವಿಷಯ ತಿಳಿಯಿತು. ಘನೀಕರಿಸುವ ಹಂತದಲ್ಲಿ ಎಲ್ಲಾ ಕಶೇರುಕಗಳ ಭ್ರೂಣಗಳು ನೋಡಲು ಒಂದೇ ರೀತಿಯಲ್ಲಿರುತ್ತವೆ. ತನ್ನ ಹದಿನಾರು ದಿನಗಳ ಬೆಳವಣಿಗೆಯ ನಂತರ ಆಮೆಯ ಭ್ರೂಣ ಕೆಲ ಅಪೂರ್ವ ಮಾರ್ಪಾಡು ಹೊಂದಲಾರಂಭಿಸುತ್ತದೆ. ಬೆನ್ನ ಮೇಲಿನ ಹಾಗೂ ಹೊಟ್ಟೆ ಕೆಳಗಿನ ಚಿಪ್ಪು ಬೆಳೆಯಲು ಅನುವಾಗುವಂತೆ ಅದರ ಭುಜದ ಮೂಳೆಗಳು ಎದೆಗೂಡಿನ ಮೂಳೆಗಳ ಒಳಭಾಗಕ್ಕೆ ಜಾರಲಾರಂಭಿಸುತ್ತವೆ. ನಂತರ ಅವೇ ಎದೆಗೂಡಿನ ಮೂಳೆಗಳು ಹೊರಮುಖವಾಗಿ ಬೆಳೆಯಲಾರಂಬಿಸಿ, ಒಂದಕ್ಕೊಂದು ಸಂಯೋಜನೆಗೊಂಡು ಬೆನ್ನ ಮೇಲೆ ನಮಗೆ ಕಾಣುವ ಅಗಲವಾದ ಚಿಪ್ಪಾಗಿ ರೂಪುಗೊಳ್ಳುತ್ತದೆ.

ಅಷ್ಟರಲ್ಲಿ ನನ್ನ ತಮ್ಮ ಪಾಪಣ್ಣ “ಜಬ್ಬ ಅಲ್ನೋಡು” ಎಂದು ಜೋರಾಗಿ ಕೂಗಿದ. ಹಳ್ಳ ಹರಿದಂತೆಲ್ಲಾ ಹಳ್ಳದುದಕ್ಕೂ ಅಸಂಖ್ಯಾತ ಕಲ್ಲೇಡಿಗಳು ನಮ್ಮೆಡೆಗೆ ಧಾವಿಸಿ ಬರುತ್ತಿದ್ದವು. ನೀರಿಗೆ ಸೇರಿದ ಆಮೆಯ ರಕ್ತದ ವಾಸನೆಯ ರುಚಿಗೆ ಕಲ್ಲುಗಳ ಸಂದಿ, ಸೆತ್ತೆಯ ಅಡಿಯಲ್ಲಿ ವಾಸವಾಗಿದ್ದ ನೂರಾರು ಕಲ್ಲೇಡಿಗಳು ಒಂದರ ಮೇಲೊಂದು ಬಿದ್ದು ಅಡ್ಡಡ್ಡಲಾಗಿ ವಿಚಿತ್ರವಾಗಿ ಚಲಿಸುತ್ತಾ ಆಮೆ ಮಾಂಸದ ಭಕ್ಷಣೆಗೆ ಕಾತರಿಸುತಿದ್ದವು. ಜಬ್ಬ ಹಳ್ಳದುದ್ದಕ್ಕೂ ಕಾಣಿಸಿಕೊಂಡ ಅಪಾರ ಪ್ರಮಾಣದ ಕಲ್ಲೇಡಿಗಳನ್ನು ನೋಡಿ ಡಬಲ್‍ಧಮಾಕ ಲಾಟರಿ ಹೊಡೆದವನಂತೆ “ಅಣಾಯರೇ ಹಿಡ್ಕಳೀ! ಹಿಡ್ಕಳೀ!” ಎಂದು ಕವಚ ತೆಗೆದ ಮಾಂಸದ ಮುದ್ದೆಗೆ ನಾಲ್ಕು ಕಾಲುಗಳನ್ನು ಜೋಡಿಸಿದಂತಿದ್ದ ಆಮೆಯ ಕಳೇಬರವನ್ನು ನನ್ನ ಕೈಗೆ ವರ್ಗಾಯಿಸಿಯೇಬಿಟ್ಟಿದ್ದ.

ಅದನ್ನು ನಾನು ಸಹಜವೆಂಬಂತೆ ಆ ಗಡಿಬಿಡಿಯಲ್ಲಿ ಕೈಗೆ ತೆಗೆದುಕೊಂಡಿದ್ದೆ. ನನಗೆ ಕೈಯಲ್ಲಿರೋದು ಏನೆಂದು ಅರಿವಾದೊಡನೆಯೇ ಹಾತರಿಸಿಕೊಂಡು ಆಮೆಯ ಮೃತದೇಹವನ್ನು ಹಾಗೆಯೇ ನೆಲಕ್ಕೆ ಬೀಳಿಸಿದೆ. “ಅಯ್ಯೋ ಇದೇನಿದು?” ಎಂದವನೇ ವಾಪಸು ಓಡಿಬಂದು ಮರಳಿನ ಮೇಲೆ ತೊಪ್ಪೆಯಂತೆ ಬಿದ್ದಿದ್ದ ಮಾಂಸದ ಮುದ್ದೆಯನ್ನು ಒಂದು ಚೀಲದೊಳಗೆ ಹಾಕಿದವನೇ, ಪಕ್ಕದಲ್ಲಿದ್ದ ಗಿಡವೊಂದರ ಕೊನೆಯೊಂದನ್ನು ಕತ್ತಿಯಿಂದ ಕತ್ತರಿಸಿ ಚೀಲವನ್ನು ಆ ಕಡಿತದ ಕೊಕ್ಕೆಗೆ ತೂಗುಹಾಕಿದವನೇ, ಬಿಟ್ಟರೆ ಕೆಟ್ಟೆ ಎಂದು ಕೈ ಹಾಕಿದೆಡೆಯಲೆಲ್ಲಾ ಇದ್ದ ಏಡಿಗಳನ್ನು ಹಿಡಿಯುವುದು, ಕೊಂಬು, ಕುರ್ಜಲುಗಳನ್ನು ಲರ್ಕಲರ್ಕನೇ ಮುರಿದುಹಾಕತೊಡಗಿದ. ಸುತ್ತಲೂ ಹರಿದಾಡುತ್ತಿದ್ದ ಅಸಂಖ್ಯ ಏಡಿಗಳನ್ನು ಕಂಡು ನಮ್ಮತ್ತ ತಿರುಗಿ ನೋಡಲೂ ಸಮಯವಿಲ್ಲದಂತೆ ಸುಮಾರು ಅರ್ಧ ಗಂಟೆಯಲ್ಲಿ ನಿರಾಯಾಸವಾಗಿ ಒಂದು ಕೊಡದ ಭರ್ತಿ ಏಡಿಗಳನ್ನು ತುಂಬಿಸಿಯೇಬಿಟ್ಟ. ಇನ್ನೂ ಅಪಾರ ಪ್ರಮಾಣದ ಏಡಿಗಳು ಹಳ್ಳದಲ್ಲಿ ನಮ್ಮ ಕಣ್ಣೆದುರಿನಲ್ಲಿಯೇ ಹರಿದಾಡುತ್ತಿದ್ದವು.

ಕಲ್ಲೇಡಿ ತುಂಬಿದ್ದ ಕೊಡ ಹಾಗೂ ಆಮೆಮಾಂಸದ ಮುದ್ದೆಯನ್ನು ಹೊರಲಾರದೇ ಹೊತ್ತುಕೊಂಡು ಬರುತ್ತಿದ್ದ ಜಬ್ಬನನ್ನು ನಾನು ಬಹುದಿನದಿಂದ ಕೇಳಲೇಬೇಕೆಂದುಕೊಂಡಿದ್ದ ಪ್ರಶ್ನೆಯನ್ನು ಕೇಳಿದೆ, ‘ಅಲ್ಲಾ ಮಾರಾಯಾ, ನಿನ್ನ ಹೆಸರನ್ನು ಯಾರಿಟ್ಟಿದ್ದು ಜಬ್ಬ ಅಂತ’ ಅಂದೆ. “ನಮ್ಮ ಕಡೆ ಅದೇ ತರದ ಹೆಸರು ಇಡೋದು ಅಣ್ಣಯ್ಯರೇ ದೂಜ, ಕೂರ, ಮತೋಡಿ ಅಂತ. ಅಯ್ನೋರಿಗೋ, ಭಟ್ಟರಿಗೋ, ತೋಟದ ಸಾವ್ಕಾರ್ರಿಗೋ ತಿಳಿದಿರುತ್ತೆ ಅಂತ ಕೇಳಿದ್ರೆ ಅವರು ನಮಗೆ ಹೇಳೋದೆ ಇಂಥದನ್ನು, ಇದಕ್ಕಿಂತ ಉತ್ತಮವಾದವು ಎಂದರೆ ಕುಜುಮ, ಮಾಟ, ದೊಂಕ, ಮೊಗ, ಮುಂಡೇಡಿ ಬರೀ ಇದೇಯಾ! ನಮ್ಮುನ್ನೆಲ್ಲಾ ನೋಡಿದ್ರೆ ನಾವೆಲ್ಲಾ ಇಂಥ ಹೆಸ್ರಿಗೆ ಸರಿಯಾದವ್ರು ಅನ್ಸುತ್ತೋ ಏನೊ? ಈ ಉತ್ತಮರಿಗೆ, ಇವ್ರ ಮನೆ ಮಕ್ಳಿಗೆ ಮಾತ್ರ ಶ್ರೀನಿವಾಸಮೂರ್ತಿ, ಶಂಕರ, ವಿಷ್ಣುಪ್ರಸಾದ, ನಾರಾಯಣ, ದಿನಕರ, ಬಸವರಾಜ, ಎಂಥಾ ಮನುಷ್ರಪ್ಪಾ, ಬುಡಿ, ಈಗ ಆಗೋಯ್ತಲ್ಲ”.

“ಇವ್ರುಗಳು ಮಾತ್ರ ಮೂರ್ತಿ, ಪ್ರಸಾದ, ನಾವೆಲ್ಲಾವನೂ ಹಿಕ್ಕೆ ಮಾತ್ರನಾ? ಹೆಸರಿಡುವ ಮೂಲದಲ್ಲೆ ನಮಗೆ ಬತ್ತಿಯಿಡೋರು ಜೀವನ ಪರ್ಯಂತ ಆ ಹೆಸರಿನ ನೆಪದಲ್ಲಿ ಕೀಳರಿಮೆಯಿಂದ ಬದುಕುವಂತೆ ಮಾಡ್ತಾರೆ. ನಾವೆಲ್ಲಾದ್ರೂ ಬಸವರಾಜ ಅಂತ ಹೆಸರಿಟ್ಟುಕಂಡ್ರೆ ಅದನ್ನೂ ಬಾಸ ಮಾಡ್ತಾರೆ. ದೇವರಾಜನ ದ್ಯಾವ ಅಂತಾರೆ, ಸುಬ್ರಮಣಿ ಸುಬ್ಬ ಆಗ್ತಾನೆ. ಸ್ವಲ್ಪ ಒಗೆದು, ತೊಳೆದು, ಇಸ್ತ್ರಿ ಮಾಡಿ ಬಟ್ಟೆ ಹಾಕಂಗೆ ಇಲ್ಲ. ಕ್ರಾಪ್ ಕಟಿಂಗ್ ಮಾಡಿದ್ರೆ, ಒಂದಷ್ಟು ಬೆಲೆಬಾಳೋ ಚಪ್ಪಲಿ ಹಾಕಿದ್ರೂ ಗಂಟಲೊಳಗೇ ಉಮ್!! ಉಮ್!! ಅಂತಾ ಅಂದು ಸುಮ್ಮನೇ ಗುರ್ರ್‍ಗುರ್ಕಾಯಿಸುವಂತೆ ದನಿ ಸಗರುತ್ತಾರೆ. ನಮ್ ಮಕ್ಳು ಹುಟ್ಟಿರೋದೆ ನಮ್ಮಂಗೆ ಇವರ್ಮನೆ ಜೀತ ಮಾಡೋಕ್ಕೇಂತ ಅಂದ್‍ಕಂಡೀದಾರೆ. ಇಸ್ಕೂಲಿಗೆ ಹೋಗ್ಬಾರ್ದು, ಹೋಗಿ ಕೆಲಸಕ್ಕೆ ಸೇರಿಕಂಬಿಟ್ರೆ ಇವರ್ಮನೆ ಚಿಗುರು, ಅಗತೆ, ಗೊಬ್ಬರ, ಹಳ, ಕಳೆಗೆ ಜನಾ ಕಡಿಮೆಯಾಗ್ತಾರಲ್ಲಾ” ಎಂದು ಶತಶತಮಾನಗಳ ಆಕ್ರೋಶವನ್ನು ಹೊರಹಾಕಲು ಕಾದಿz್ದÀನೇನೋ ಎಂಬಂತೆ ತನ್ನ ಸಿಟ್ಟನ್ನು ಹೊರಚೆಲ್ಲಿದ್ದ ಜಬ್ಬ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ