October 5, 2024

ಲೇಖಕರ ಪರಿಚಯ :

ಧನಂಜಯ ಜೀವಾಳ ಅವರದು ಸರ್ವ ಕುತೂಹಲಿಯಾದ ಮನಸ್ಸು. ಸಮಾಜದ ಬಗೆಬಗೆಯ ವಿನ್ಯಾಸಗಳನ್ನು ಅವರ ಕವಿಹೃದಯ ಸಹಾನೂಭೂತಿಯಿಂದ, ಚಿಕಿತ್ಸಕ ಗುಣದಿಂದ ಕಾಣಬಲ್ಲದೆಂಬುದಕ್ಕೆ ‘ನಮ್ಮೂರ ಗ್ರಾಮಾಯಣ’ ಎಂಬ ಈ ಕೃತಿ ಸಾಕ್ಷಿಯಾಗಿದೆ.

ಎಚ್ಚರದ ಕಣ್ಣಿಗೆ ಕಾಣಬಹುದಾದ ಅನೇಕ ಸೂಕ್ಷ್ಮ ಸಂಗತಿಗಳನ್ನು ಈ ಕೃತಿ ಕಲೆಹಾಕಿದೆ. ಮನುಷ್ಯನ ವರ್ತನೆ, ಅನುಕೂಲಸಿಂಧು ಪ್ರವೃತ್ತಿ, ಉಢಾಫೆ, ಸ್ಥಳೀಯ ರಾಜಕಾರಣದ ಹೊರಚಾಚುಗಳು ಮುಂತಾದವುಗಳ ಸಮೇತ ತಳುಕು ಹಾಕಿಕೊಂಡ ಮಲೆನಾಡಿನ ಸಂಸ್ಕøತಿಯ ಅಪೂರ್ವ ಚಿತ್ರವೊಂದನ್ನು ಧನಂಜಯ ಜೀವಾಳರ ಸಮಾಜೋ-ಸಾಂಸ್ಕøತಿಕ ನಿಲುವಿನ ಲೇಖನಿ ಇಲ್ಲಿ ರೇಖಿಸುತ್ತಾಸಾಗಿದೆ.

ಇದು ಅವರು ಕಂಡ ಗ್ರಾಮಾಯಣ ಮಾತ್ರವಲ್ಲ, ಗ್ರಾಮಭಾರತದ ಚಿತ್ರವೂ ಹೌದು. ತನ್ನ ಸುತ್ತಲಿನ ವಿದ್ಯಮಾನಗಳನ್ನು ಅದರೆಲ್ಲಾ ಸೂಕ್ಷ್ಮತೆಗಳಿಂದ ಗಮನಿಸಿ, ನವಿರು ಹಾಸ್ಯ ಮತ್ತು ವಿಡಂಬನೆಯೊಂದಿಗೆ ಓದುಗರೆದುರು ಮಂಡಿಸುವ ಲವಲವಿಕೆಯ ಶೈಲಿಯ ಧನಂಜಯ ಜೀವಾಳರಿಗೆ ಸರಾಗವಾಗಿ ಒಲಿದಿದೆ. ಇಲ್ಲಿನ ಬರಹಕ್ಕೊಂದು ಆಪ್ತವಾದ ಗುಣವಿದೆ. ಇದು ಈ ಕೃತಿಯ ಸರಾಗ ಓದಿಗೆ ಪೂರಕವಾಗಿ ದುಡಿದಿದೆ. ಪ್ರಕಾರಗಳ ಹಂಗಿಲ್ಲದ ಈ ಕೃತಿಯಲ್ಲಿ ಕತೆ ಬೇಕೆನ್ನುವವರಿಗೆ ಕತೆಯಿದೆ, ಪ್ರಬಂಧ, ನಾಟಕ ಬೇಕೆನ್ನುವವರಿಗೆ ಅವೂ ಲಭ್ಯವಾಗುತ್ತವೆ. ಏಕಸೂತ್ರತೆಯ ಹಂಗಿಲ್ಲದೆ, ಹರಿಯುವ ನೀರಿನಂತೆ ಮಲೆನಾಡಿನ ಹಲವು ಆಯಾಮಗಳನ್ನು ಅದರೆಲ್ಲ ವಿವರಗಳೊಂದಿಗೆ ಕಾಣಿಸಬಲ್ಲ ಇಲ್ಲಿನ ವಿವರಗಳನ್ನು ಓದುವಾಗ ಅವೆಲ್ಲವೂ ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎಂಬ ಭಾವನೆ ಆವರಿಸುವಷ್ಟು ಗಟ್ಟಿತನದಿಂದ ಕೂಡಿದ ಯಶಸ್ವಿ ಬರಹವಿದು.

ಮಲೆನಾಡಿನ ಜನರ ಚರ್ಯೆ, ಆಹಾರ, ಉಡುಗೆತೊಡುಗೆಗಳು, ಶಿಕಾರಿಯ ಬಗೆ, ಕಾಫಿ ಬೆಳೆ, ಸಂತೆ, ವ್ಯಾಪಾರ, ವ್ಯವಹಾರ, ಜಾಣತನ, ಹೆಡ್ಡತನ, ಸೋಗಲಾಡಿತನ ಎಲ್ಲವೂ ವರ್ಣರಂಜಿತವಾಗಿ ಮೇಳೈಸಿರುವ ಈ ಕೃತಿಯು ಸ್ಥಳೀಯ ವಿದ್ಯಮಾನಗಳನ್ನು ಕಾಲದ ಚಲನೆಯೊಂದಿಗೆ ಸಮೀಕರಿಸಿ, ಅಪೂರ್ವ ದಾಖಲೆಯೆಂಬಂತೆ ಕಾಣಿಸಿರುವುದು ಮುಖ್ಯ. ಇಂತಹ ದೇಸಿ ನುಡಿಗಟ್ಟು ಮತ್ತು ಸಂಸ್ಕøತಿಯ ಚಹರೆಗಳನ್ನು ಹಿಡಿದಿಡುವಲ್ಲಿ, ಸಾಹಿತ್ಯಕ ಪರಿಭಾಷೆಯ ಮುಖೇನ ದಾಖಲಿಸುವಲ್ಲಿ ನಮ್ಮ ಹೊಸ ತಲೆಮಾರು ಆಸಕ್ತವಾಗಿರುವುದು ನಿಜಕ್ಕೂ ಸ್ವಾಗತಾರ್ಹವಾದ ಕೆಲಸ. ಈ ಕೃತಿಯ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಸಂವೇದನೆಯನ್ನು ಪ್ರಾಪ್ತವಾಗಿಸುವಲ್ಲಿ ಧನಂಜಯ ಜೀವಾಳರು ತಮ್ಮೆಲ್ಲಾ ಲೋಕಾನುಭವವನ್ನು ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆಂಬುದು ಅಭಿನಂದನಾರ್ಹವಾದ ಸಂಗತಿ. ಇದೊಂದು ಸಫಲವಾದ ಬರಹಗಳ ಸಂಕಲನ.

-ಡಾ. ಎಚ್. ಎಸ್. ಸತ್ಯನಾರಾಯಣ.

 

ಲೇಖಕರ ಮಾತು.

ಬರಹದ ಉದ್ದೇಶ ರಂಜನೆ ಮಾತ್ರವಲ್ಲದೇ, ಸಾಂಧರ್ಭಿಕ ಮಾಹಿತಿ ಮತ್ತು ಓದುಗರನ್ನು ಯೋಚನೆಗೆ ಹಚ್ಚಬೇಕು; ಮತ್ತು ಆ ಮೂಲಕ ಹೊಸ ಬೆಳಗಿಗೆ ಕಾರಣವಾಗಬೇಕು. ಪ್ರತಿಯೊಬ್ಬರಿಗೂ ಸಮಾನವಾಗಿಯೇ ಲಭ್ಯವಿರುವ ಸಮಯವನ್ನು ನಾವು ಯಾರಿಗಾಗಿ ಮತ್ತು ಏನಕ್ಕಾಗಿ ಬಳಸುತ್ತೇವೆ ಎಂಬುದು ಮುಖ್ಯ. ನಮ್ಮ ಬದುಕಿನ ಉದ್ದೇಶ ನಮ್ಮ ಆಲೋಚನೆಗಳನ್ನು ರೂಪಿಸುತ್ತದೆ. ಆತ್ಮಾವಲೋಕನ ಹಾಗೂ ಆತ್ಮವಂಚನೆ ಎಂಬುದು ಆತ್ಮದಲ್ಲಿ ಏನಿದೆ ಎಂಬುವುದರ ಮೇಲೆ ನಿರ್ಧರಿಸಲ್ಪಡುತ್ತದೆ. ಆಕಸ್ಮಿಕಗಳ ಮೇಲೆ ಕಟ್ಟಿನಿಂತ ಈ ಬದುಕು ಅತಂತ್ರವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಓರ್ವ ವ್ಯಕ್ತಿಯಲ್ಲಿರಬಹುದಾದ ಬುದ್ಧಿವಂತಿಕೆ ಮತ್ತಿತರೆ ಸಂಪನ್ಮೂಲಗಳ ಸಾರ್ಥಕತೆಯು ಅವು ಯಾವ ಉದ್ದೇಶಕ್ಕೆ ಬಳಕೆಯಾಗುತ್ತವೆ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ.

ಒಂದು ಭಾಷೆಯನ್ನು ಸಹಜವಾಗಿ ಬಳಸದಿದ್ದರೆ ಕ್ರಮೇಣ ಆ ಭಾಷೆ, ಅದಕ್ಕೆ ಸಂಬಂಧಿಸಿದ ಸಂಸ್ಕøತಿ, ಪರಂಪರೆ, ಇತಿಹಾಸ ಎಲ್ಲವೂ ನಮ್ಮ ಕಣ್ಣೆದುರೇ ಅವಸಾನ ಹೊಂದುತ್ತವೆ. ಕನ್ನಡದಲ್ಲೇ ಮಾತನಾಡೋಣ, ಕನ್ನಡದಲ್ಲೇ ಬರೆಯೋಣ, ಕನ್ನಡದಲ್ಲೇ ವ್ಯವಹರಿಸೋಣ. ಕ್ರೀಡಾಂಗಣದಲ್ಲಿ ಆಟಗಾರರನ್ನು ಹುರಿದುಂಬಿಸುವಾಗಲೂ, ಹಣ ಪಡೆಯಲು ಏಟೀಎಮ್ಮಿಗೆ ಹೋದಾಗಲೂ, ವೇದಿಕೆಯಲ್ಲಿ ಕಾರ್ಯಕ್ರಮ ನಿರೂಪಿಸುವಾಗಲೂ, ಪರಸ್ಪರ ಶುಭ ಕೋರುವಾಗಲೂ ನಮ್ಮ ದನಿಯಾಗಿನಮ್ಮ ನಿಮ್ಮೆಲ್ಲರ ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳೋಣ. ಕನ್ನಡ ಜನರ ಭಾಷೆಯಾಗಬೇಕು, ಮನದ ಭಾಷೆಯಾಗಬೇಕು, ಬದುಕಿನ ಭಾಷೆಯಾಗಬೇಕು. ಅದು ಸಿನೆಮಾ ನೋಡುವುದಾಗಿರಬಹುದು, ಏಟೀಎಮ್ ಬಳಸುವುದಾಗಿರಬಹುದು, ಪತ್ರ ವ್ಯವಹಾರವಿರಬಹುದು, ನೆರೆಹೊರೆಯವರೊಂದಿಗೆ, ಬಂಧುಮಿತ್ರರೊಡನೆಯ, ಸಹೋದ್ಯೋಗಿಗಳೊಡನೆ ಮಾಡುವ ಸಂಭಾಷಣೆ ಆಗಿರಬಹುದು, ಮೊಬೈಲ್ನಲ್ಲಿ ಸಂದೇಶ ಕಳಿಸುವುದಾಗಿರಬಹುದು, ನಮ್ಮ ಮಕ್ಕಳ ಜೊತೆ ಮನೆಯಲ್ಲೇ ನಡೆಯುವ ಮಾತುಕತೆ ಇರಬಹುದು, ಕಡೆಗೆ ನಾವು ಸಾಕಿರುವ ನಾಯಿಗೆ ನಡವಳಿಕೆ ಕಲಿಸುವಾಗ ಸಹಾ ಕಮ್, ಸಿಟ್, ರನ್, ಈಟ್ ಎನ್ನದೇ ಬಾ, ಕೂರು, ಓಡು, ತಿನ್ನು ಎನ್ನುವ ಮಟ್ಟಿಗಾದರೂ ನಮ್ಮದೇ ಭಾಷೆಯನ್ನು ಬಳಸೋಣ. ಮೊದಲು ನಮ್ಮ ನಮ್ಮ ಮಕ್ಕಳಿಗೆ ಕನಿಷ್ಟ ಏಳನೇ ತರಗತಿಯವರೆಗಾದರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡೋಣ.

ನಮಗೆ ಲಭ್ಯವಿರುವ ಕನ್ನಡವನ್ನು ಮನಸಾರೆ ಬಳಸದೇ, ಪರಭಾಷೆಯ ಅಪಥ್ಯವನ್ನೇ ಭಾಷಾಭಿಮಾನ ಎಂದುಕೊಳ್ಳುತ್ತಿರುವುದು ಈ ಎಲ್ಲ ಸಮಸ್ಯೆಗಳಿಗೆ ಮೂಲ. ನಮ್ಮ ನಮ್ಮ ವಯಕ್ತಿಕ ನೆಲೆಯಲ್ಲಿ ಬಳಕೆ ಮಾಡದ ಭಾಷೆಯ ಬಗೆಗಿನ ಅಭಿಮಾನದಿಂದ ಯಾವ ಪುರುಷಾರ್ಥ ಸಾಧಿಸಲು ಸಾಧ್ಯ? ನುಡಿಯೆಡೆಗೆ ನಿಜವಾದ ಒಲವಿಲ್ಲದೇ, ಕೇವಲ ಸಂಘಟನೆ ಅಥವಾ ಪ್ರತಿಭಟನೆಯ ಉದ್ದೇಶಕ್ಕೆ ಒಂದು ಭಾಷೆಯನ್ನು ಬಳಸಿಕೊಳ್ಳುವುದು ಒಪ್ಪಿತವೆನಿಸುವುದಿಲ್ಲ. ದಿನನಿತ್ಯದ ಬದುಕಿನಲಿ ಕನ್ನಡ ಬಳಸಲು ಕೀಳರಿಮೆ ಎನ್ನುವುದಕ್ಕಿಂತಲೂ ತಾನೇನು ಅಲ್ಲವೋ ಅದೇ ತಾನು ಎಂದು ತೋರಿಸಿಕೊಳ್ಳುವ ಹುಸಿಪ್ರತಿಷ್ಠೆ. ದ್ವಜ, ಪೂಜೆ, ಮೆರವಣಿಗೆ, ಭಾಷಣ, ಘೋಷಣೆ ಇವೆಲ್ಲವೂ ಕೇವಲ ಅಲಂಕಾರವಲ್ಲದೇ ಬೇರೇನೂ ಅಲ್ಲ. ಕನ್ನಡ ದ್ವಜ ನಮ್ಮೆದೆಯಲಿ ಹಾರಲಿ; ಕನ್ನಡತನ ನಮ್ಮ ಬದುಕಲಿ ಅರಳಲಿ.
ಯಾವುದೇ ಜೀವಿಯ ಜೀವನ ಚಕ್ರವನ್ನು ಆಸಕ್ತಿಯಿಂದ ಗಮನಿಸುತ್ತಾ ಹೋದಂತೆಲ್ಲಾ ಅಚ್ಚರಿಯ ಲೋಕವೊಂದು ನಮಗರಿವಿಲ್ಲದಂತೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಈ ನಿಸರ್ಗದಲ್ಲಿ ಯಾವುದೂ ಯಕಶ್ಚಿತ್ ಅಲ್ಲ; ಪ್ರತಿಯೊಂದಕ್ಕೂ ತನ್ನದೇ ಆದ ಜೈವಿಕ ಪಾತ್ರವಿದೆ. ಎಂಥಾ ವಿಸ್ಮಯಗಳ ಸಂಕಲನ ಈ ಜೀವಜಾಲ! ಪ್ರಕೃತಿಯೆಂಬುದು ಅನಂತ ಜೀವಜಾಲಗಳ ಸಂಕೀರ್ಣ ವ್ಯವಸ್ಥೆ. ಇದರಲ್ಲಿ ಕ್ಷುದ್ರವೆನಿಸುವಂಥದ್ದು ಸಹ ಅತೀ ಮುಖ್ಯ. ಯಾವುದೇ ಒಂದು ಜೈವಿಕ ಕೊಂಡಿಯ ಗೈರುಹಾಜರೂ ಅದು ವಿನಾಶದ ಮುನ್ನುಡಿ.

ಕಾಲನ ಆದಿ-ಅಂತ್ಯವಿಲ್ಲದ ಅನಂತತೆಯ ಪ್ರವಾಹದಲ್ಲಿ ಮನುಷ್ಯ ಪ್ರಾಣಿಯ ಉಗಮ, ಅವನತಿ ಹಾಗೂ ಅವಸಾನದ ನಡುವಿನ ಅವಧಿಯು ಕ್ಷಣದ ಯಕಶ್ಚಿತ್ ತುಣುಕೂ ಅಲ್ಲ. ಆ ತೃಣಮಾತ್ರದ ಕಾಲಾವಧಿಯು ಇನ್ನೂ ವೇಗವಾಗಿ ಕಳೆದುಹೋಗುವಂತೆ ಮಾಡುವಲ್ಲಿ ಮಾನವನ ಅವಿವೇಕದ್ದು ಮಹತ್ವವಾದ ಪಾತ್ರ. ಸಮುದ್ರಗಳೇ ಮರುಭೂಮಿಗಳಾದದ್ದು, ನದಿಪಾತ್ರಗಳೇ ಪರ್ವತ ಶಿಖರಗಳಾದದ್ದು, ಹಿಮಚ್ಛಾದಿತ ಪ್ರದೇಶಗಳೇ ದಟ್ಟಕಾಡುಗಳಾದದ್ದು ಈ ಭೂಮಿಯ ಸಹಜ ಸ್ವಾಭಾವಿಕ ವರ್ತನೆ. ಕಟ್ಟುವ ಕೆಡವುವ ಪ್ರಕ್ರಿಯೆ ನಿಸರ್ಗದಲ್ಲಿ ನಿರಂತರವಾಗಿ ನಡೆದಿದೆ, ನಡೆಯುತ್ತಿದೆ ಹಾಗೂ ನಡೆಯುತ್ತಲೇ ಇರುತ್ತದೆ. ನಾಳೆ ಇಂದಾಗಲೇಬೇಕು, ಇಂದು ನಿನ್ನೆಯಾಗಲೇಬೇಕು. ನಿಸರ್ಗಕ್ಕೆ ಹೊಂದಿಕೊಂಡಿದ್ದು ಒಂದಷ್ಟು ಕಾಲ ತಾಳಿ, ಬಾಳಬಹುದಷ್ಟೇ. ನವೀನ ಜೈವಿಕ ಪ್ರಯೋಗಕ್ಕೆ ಪ್ರಕೃತಿ ಪ್ರತೀಕ್ಷಣವೂ ಅನುವು ಮಾಡಿಕೊಡುತ್ತಲೇ ಇರುತ್ತದೆ.

ಈ ಜಗತ್ತೇ ಒಂದು ಪ್ರಾಕೃತಿಕ ಪ್ರಯೋಗಶಾಲೆ. ಕಟ್ಟುವ-ಕೆಡವುವ ಪ್ರಕ್ರಿಯೆ ನಿರಂತರವಾಗಿ ಯಾರ-ಯಾವುದರ ಹಂಗೂ ಇಲ್ಲದೇ, ಯಾರಿಗೂ ವಿಶೇಷ ರಿಯಾಯಿತಿ ನೀಡದೇ ಅತ್ಯಂತ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಮುಂದಿನ ಕೋಟ್ಯಾಂತರ ವರ್ಷಗಳವರೆಗೂ ನಡೆಯುತ್ತಲೇ ಇರುತ್ತದೆ. ಅಸಂಖ್ಯಾತ ಕಣ್ಣಿಗೆ ಕಾಣದ ಜೀವಿಗಳು, ಸಸ್ಯಗಳು, ಕೀಟಗಳು, ಸರೀಸೃಪಗಳು, ಮೃದ್ವಂಗಿಗಳು, ಉಭಯವಾಸಿಗಳು, ಸಂಧಿಪದಿಗಳು, ಸಸ್ತನಿಗಳು ಈ ಭೂಮಿಯ ಮೇಲೆ ಜೀವ ತೆಳೆದಿವೆ, ವಿಕಾಸವಾಗಿವೆ ಹಾಗೆಯೇ ಕಾಲಕ್ರಮೇಣ ತಮ್ಮ ಸರದಿ ಬಂದಾಗ ಪ್ರತಿರೋಧ ತೋರದೇ ಸದ್ದಿಲ್ಲದೇ ಕಣ್ಮರೆಯಾಗಿವೆ. ಈ ಅಗಾಧ ಸೃಷ್ಠಿರಾಶಿಯಲ್ಲಿ ಮನುಷ್ಯನೆಂಬ ಪ್ರಬೇಧ ಸಹಾ ಒಂದು. ಯಾವುದೋ ಒಂದು ವಿನಾಶದ ನಂತರದ ಅಕಸ್ಮಿಕವೊಂದರಲ್ಲಿ ಮನುಷ್ಯನ ಪೂರ್ವಜಪ್ರಾಣಿಯ ಉಗಮವಾಗಿದೆ. ಮೇಲೇರಿದ್ದು ಕೆಳಗಿಳಿಯಲೇಬೇಕೆಂಬುದು ನಿಸರ್ಗದ ನಿಯಮ. ಮನುಷ್ಯ ನಿಸರ್ಗ ನಿಯಮವನ್ನೂ ಮೀರಿ ಅಸಹಜ ವೇಗದಿಂದ ಅಕಾಲಿಕ ಉತ್ತುಂಗವನ್ನು ತಲುಪಿದ. ಶಿಖರ ತಲುಪಿದ ನಂತರದ ಹೆಜ್ಜೆ ಕೆಳಗೇ ತಾನೆ? ಇದಕ್ಕಾಗಿ ಮರುಗುವ ಇಲ್ಲವೇ ಆತಂಕ ಪಡುವ ಅಗತ್ಯವಿಲ್ಲ.
ಆತ್ಮವಿಮರ್ಶೆಯ ಮೂಲಕ ಅವನತಿಯನ್ನು ಮುಂದೂಡಲು ಮತ್ತು ವಿನಾಶದ ವೇಗವನ್ನು ಕಡಿಮೆ ಮಾಡಿಕೊಳ್ಳಲು ಪ್ರಕೃತಿ ನೂರಾರು ಅವಕಾಶಗಳನ್ನು ನೀಡಿತ್ತು. ಆ ಸದವಕಾಶಗಳನ್ನು ಕಡೆಗಣಿಸಿದ ಮಾನವನಿಗೆ ನಿಸರ್ಗವೇ ತಕ್ಕ ಉತ್ತರ ನೀಡುತ್ತಿದೆ. ನಮ್ಮ ಸರದಿ ಬಂದಾಗ ನೇಪಥ್ಯಕ್ಕೆ ಸರಿದು ಇನ್ಯಾವುದೋ ನಮಗಿಂತ ಅರ್ಹ ಜೀವಿಗೆ ಅವಕಾಶ ಮಾಡಿಕೊಡಲೇಬೇಕೆಂಬುದು ಅನಿವಾರ್ಯ.

ಭ್ರಷ್ಟಾಚಾರ, ಲಂಚಗುಳಿತನ, ಕೆಲಸಗಳ್ಳತನ, ಕೆಂಪುಪಟ್ಟಿ, ಸ್ವಜನ ಪಕ್ಷಪಾತ, ಮೋಸಗಳನ್ನು ಸಮಾಜ ಇರುವುದೇ ಹೀಗೆ ಎಂಬ ಆಷಾಢಭೂತಿತನದಿಂದ ಒಪ್ಪಿಕೊಂಡು ಕುರಿಗಳಂತೆ ತಲೆತಗ್ಗಿಸಿ ಬದುಕುವುದು ಒಂದು ಬದುಕೇ ಅಲ್ಲ. ಆತ್ಮ ವಿಮರ್ಶೆಗೆ ಇದು ಸಂಕ್ರಮಣದ ಕಾಲ. ಇಂದಿಲ್ಲದಿದ್ದರೆ ಎಂದೂ ಇಲ್ಲ. ದೇಶದ ಭವಿಷ್ಯ ನಮ್ಮ ನಿಮ್ಮಂಥ ಜನಸಾಮಾನ್ಯರ ಕೈಲಿದೆ. ನಮ್ಮ ನೆಲದ ಜೀವಂತಿಕೆ, ಘನತೆ, ಸ್ವಾವಲಂಬನೆಯನ್ನು ಎತ್ತಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಸರಳ ಸದುದ್ದೇಶದ ಜೀವನ ಎಲ್ಲರದ್ದೂ ಆಗಬೇಕು.

ಆರ್ಥಿಕವಾಗಿ ಸಕಲವೂ ಇರುವ ಸ್ಥಿತಿವಂತರಿಗೆ ಮಾತ್ರ ಕೊಡುವ ಸಾಮಥ್ರ್ಯವಿದೆ ಎಂಬುದು ಈ ಸಮಾಜದ ಭ್ರಮೆ. ಎಲ್ಲವೂ ಇದ್ದು, ಅದನ್ನು ಅಗತ್ಯವಿರುವವರೊಡನೆ ಹಂಚಿಕೊಳ್ಳುವ ಮನೋಭಾವನೆಯೇ ಇಲ್ಲದ ಬಹುತೇಕ ಸ್ವಯಂಕೇಂದ್ರಿತ ಜಗತ್ತಿನಲಿ ಬದುಕುತ್ತಿರುವ ನಮಗೆ ಬದುಕಿನ ಅಂತಿಮ ವಾಸ್ತವ ಅರಿವಾಗದೇ ಇರುವುದು ದುರಂತ. ಯಾರದೋ ಅಗತ್ಯಕ್ಕೆ ಬೇಕಾಗಿದ್ದ ಸಂಪನ್ಮೂಲ ನಮ್ಮ ಐಷಾರಾಮಕ್ಕೆ ಬಳಕೆಯಾಗುತ್ತಿದ್ದಂತೆ ಶೋಷಣೆ ಪ್ರಾರಂಭವಾಗುತ್ತದೆ. ಆ ಅನ್ಯಾಯಕ್ಕೆ ನಾವೇ ಹೊಣೆಗಾರರಾಗುತ್ತೇವೆ. ಜಾಗತೀಕರಣದ ಅಬ್ಬರದ ನಡುವೆಯೂ ಸ್ವಂತಿಕೆಯನ್ನು ಉಳಿಸಿಕೊಂಡು ನಮ್ಮ ಸಂಸ್ಕøತಿಯನ್ನು ಜೀವಂತವಾಗಿಟ್ಟುಕೊಳ್ಳಬಹುದು. ತನ್ನ ಇತಿಮಿತಿಗಳ ನಡುವೆಯೇ ಇತರರಿಗಾಗಿ ಮಿಡಿಯುವ ಸಹೃದಯಿಗಳು ಇರುವುದರಿಂದಲೇ ಜಗತ್ತು ಇನ್ನೂ ಒಂದಷ್ಟು ಭರವಸೆಯನ್ನು ಉಳಿಸಿಕೊಂಡಿದೆ. ಜಗತ್ತಿನ ನಾಗರಿಕ ಸಮಾಜದ ನಾಳೆಗಳನ್ನು ನಿರ್ಧರಿಸುವ ಅಪೂರ್ವ ಅವಕಾಶಗಳು ಯಾರ ಕೈಗೆ ಹೋಗಿ ಸೇರುತ್ತವೆ ಎಂಬುದೇ ನಿಜವಾದ ಗೇಮ್ ಛೇಂಜರ್. ನಮ್ಮ ಬದುಕಿನ ಉದ್ದೇಶ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಜಗತ್ತಿನಲಿ ಈವರೆಗೆ ಆಗಿಹೋಗಿರುವ ಸಾಧಕರ ಕಾರ್ಯಗಳು ಜೇಡ, ಇರುವೆ, ಗೆದ್ದಲು, ಜೇನ್ನೊಣಗಳ ಸಾಧನೆಯಷ್ಟೇ ಮುಖ್ಯವಾದವು ಎಂಬುದನ್ನು ನಾವು ಅರ್ಥಮಾಡಿಕೊಂಡಾಗ ಮಾತ್ರ ಆ ಸಾಧನೆಯ ಅನನ್ಯತೆಯನ್ನು ಗ್ರಹಿಸಲು ಸಾಧ್ಯ.

ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ಕಾರಣವಾದ ನೈತಿಕ ಅದಃಪತನ ಕಂಡು ದಿಗ್ಬ್ರ್ರಮೆಯಾಗುತ್ತಿದೆ.
ನಮ್ಮ ಕಿರಿಯರಿಗೆ ಹೇಗೆ ಮತ್ತು ಯಾಕೆ ಆಕ್ರಮಣಶೀಲರಾಗಿರಬಾರದು ಮತ್ತು ಪ್ರಚೋದನಕಾರಿಯಾಗಿರಬಾರದು ಎಂಬುದನ್ನು ಹೇಳದೇ ನಾವು ಹೊಣೆಗೇಡಿಗಳಾಗಿ ವರ್ತಿಸುತ್ತಿದ್ದೇವೆ.

ನಾವು ಸಾಗುತ್ತಿರುವ ಹಾದಿಗೆ ಮತ್ತೊಂದಷ್ಟು ಜನ ಬಂದು ಸೇರುತ್ತಿರುವರೆಂದರೆ ನಾವು ಸರಿಯಾದ ದಿಕ್ಕಿನೆಡೆ ಸಾಗುತ್ತಿರುವೆವೆಂದು ಹೆಮ್ಮೆಪಟ್ಟು, ಸಂತೃಪ್ತಿಯಿಂದ ಸಂಭ್ರಮಿಸೋಣ. ನಮ್ಮ ಪಯಣಕ್ಕೆ ನಮ್ಮಷ್ಟೇ ಭಾವತೀವ್ರತೆಯ ಸಹೃದಯದ ಸಹಚರಿಗಳು ಜತೆಯಾದರೆಂದು ಸಂತೋಷಪಡೋಣ. ಅವರನ್ನೆಂದೂ ಪ್ರತಿಸ್ಪರ್ಧಿಗಳೆಂದು, ನಮ್ಮ ಅವಕಾಶ ಕಿತ್ತುಕೊಳ್ಳಲು ಬಂದವರೆಂದು ಪರಿಗಣಿಸದಿರೋಣ.

ಅನಂತದೆಡೆಗಿನ ಈ ನಿರಂತರ ಪ್ರವಾಹದಲಿ
ನಾವೆಲ್ಲರೂ ಒಂದೊಂದು ನೀರಹನಿಗಳು.
ತೊರೆಗೆ ತೊರೆ ಸೇರಿ ಅಗಾಧ ನದಿಯಾಗುವಂತೆ,
ಆ ನದಿಯೇ ಕಡಲ ಸೇರಿ,
ತಾನೇ ಕಡಲಾಗುವಂತೆ
ಜೊತೆಜೊತೆಯಾಗಿಯೇ ಪಡೆಯಬಹುದೇ ಸಾರ್ಥಕತೆ?

ನಾನೆಂಬ ಒಂಟಿ ತೊರೆಗೆ
ಇನ್ನಷ್ಟು ತೊರೆಗಳು ಜತೆಯಾಗದಿರೆ,
ನಾನೆಂಬ ಈ ತೊರೆ ಒಂದಷ್ಟು ದೂರಕ್ಕೇ
ಇತ್ತೋಇಲ್ಲವೋ ಎಂಬಂತೆ ಇಂಗಿಹೋಗಬಹುದೇ?
ನನ್ನಲ್ಲಿಲ್ಲದ ಇನ್ನಾವುದೋ ಚೈತನ್ಯ ಬಂದು ಸೇರುವ ಮೂಲಕ,
ಅದೇ, ಆ ನದಿಯ ಚಾಲಕ ಶಕ್ತಿಯಾಗಬಹುದೇ?
ಇಡೀ ಕಡಲಿನ ಅಸ್ಮಿತೆಯಾಗಬಹುದೇ?
ಮತ್ಸರಾಸೂಯೆ, ಹೊಟ್ಟೆಕಿಚ್ಚಸಹನೆಯಹಂ
ನಾವು ಇದ್ದಲ್ಲಿಯೇ ನಮ್ಮನ್ನು ಇಂಗಿಸಬಹುದೇ?
ಇದ್ದೆವೋ ಇಲ್ಲವೋ ಎನ್ನಿಸುವಂತೆ.

ಈ ಸಮಾಜವನ್ನು ಇಬ್ಬರು ಹಾಳುಗೆಡವಬಲ್ಲರು. ಒಬ್ಬರು ಎಲ್ಲಾ ಗೊತ್ತಿದ್ದೂ ಮಾತನಾಡಲಾರದವರು. ಇನ್ನೊಬ್ಬರು ಏನೂ ಗೊತ್ತಿಲ್ಲದೆಯೂ ಮಾತನಾಡುವವರು. ಸಂದರ್ಭದ ಕಾವಿನಲ್ಲಿ ಆವಿಯಾಗುವ ಆ ಒಳ್ಳೆಯತನವೆಂಬ ಮುಖವಾಡ;
ನುಡಿಯದೆಯೂ ಬಯಲಾಗುವ ನಮ್ಮ ಆತ್ಮರತಿಯೆಂಬ ಅಂತಿಮ ಸತ್ಯವನ್ನು ತೆರೆದಿಡುತ್ತದೆ.

ಕೆಲವೊಮ್ಮೆ ಪರಿಸರ, ನೈತಿಕತೆ, ಮಾನವೀಯತೆ ಪರವಾದ ಕುಸ್ತಿಗಳನ್ನು ಜೀವವಿರೋಧಿ ಮನುಷ್ಯಶಕ್ತಿಗಳ ಎದುರು ನಿಂತು ಮಾಡಿದಾಗ, ಅದು ಸೋಲು ಖಚಿತವಾದ ಯುದ್ಧವೆಂದು ಅರಿವಿದ್ದೂ, ಅಸಹಾಯರಾಗಿ ಸಿಟ್ಟು, ಹತಾಶೆ, ರೋಷ, ದೈನ್ಯತೆ ಎಲ್ಲವನ್ನೂ ಒಳಗೊಂಡು, ಮೈಯ್ಯಲ್ಲಿನ, ಮನಸಲ್ಲಿನ ಎಲ್ಲಾ ನೋವನ್ನು ಹೊರಹಾಕಿ, ತಳವರಿಯದ ಸಾಗರದಲಿ ಈಜರಿಯದವ ಎತ್ತೆತ್ತಲೋ ಕೈಕಾಲು ಜಾಡಿಸುತ್ತಾ ಬದುಕುಳಿಯಲು ಹಾತೊರೆಯುವಂತೆ ಅಸಹನೆಯಿಂದ ತೊಳಲಾಡುತ್ತೇವೆ. ಅದು ಅವಿವೇಕಿಗಳನು ಗೆಲ್ಲುತ್ತೇವೆಂದಲ್ಲ; ಅಮಾಯಕ ಹಾಗೂ ಬದುಕಲರ್ಹರಿಗೇನಾದರೂ ಸಾಂತ್ವನವಾಗಬಹುದೆಂದಷ್ಟೇ.

ನಾನು ಎಡವಿಯೇ ಇಲ್ಲ ಎಂದರೆ ನೀ ನಡೆದೇ ಇಲ್ಲ ಎಂದರ್ಥ!!! ಅತ್ಯಂತ ಸಂದಿಗ್ಧ ಸನ್ನಿವೇಶದ ಕ್ಷಣಗಳಲ್ಲಿ ನಾವು ತೆಗೆದುಕೊಂಡ ನಿರ್ಣಯಗಳ ಮೊತ್ತವೇ ನಾವು ಈ ದಿನ ಈ ಸ್ಥಿತಿಯಲ್ಲಿ ನಿಂತಿರಲು ಕಾರಣ ಎಂಬುದನ್ನು ನೆನಪಿಟ್ಟುಕೊಳ್ಳೋಣ.
ಈ ಎಲ್ಲಾ ಆಲೋಚನೆಗಳನ್ನು ಓದುಗರಿಗೆ ತಲುಪಿಸಲು ಒಂದು ಕಥಾಹಂದರವನು ರೂಪಿಸಿ, ಈ ಪುಸ್ತಕದ ಮೂಲಕ ಪ್ರಸ್ತುತಪಡಿಸುತಿದ್ದೇನೆ.

ಖಂಡಿತವಾಗಿಯೂ ಇದೊಂದು ಗಜಪ್ರಸವ. ಮುಂದಿನ ವರ್ಷ, ಈ ವರ್ಷದ ಅಕ್ಟೋಬರ್‍ನಲ್ಲಿ, ಮುಂದಿನ ತಿಂಗಳು, ಈ ತಿಂಗಳ ಕೊನೆಯ ವಾರ ಅಂದುಕೊಳ್ಳುತ್ತಾ ವರುಷಗಳು ಕಳೆದುಹೋದದ್ದೇ ಗೊತ್ತಾಗಲಿಲ್ಲ. ಅಂತೂ ಈಗ ಪುಸ್ತಕ ರೂಪಕ್ಕೆ ಬಂದಿದೆ. ಇಲ್ಲಿನ ಹಲವಾರು ಬರಹಗಳು ನಾಡಿನ ಹಲವಾರು ಪತ್ರಿಕೆಗಳ ಮೂಲಕ ಸಂದರ್ಭೋಚಿತವಾಗಿ ಓದುಗರನ್ನು ತಲುಪಿ ಬಗೆಬಗೆಯ ವಿಮರ್ಶೆಗಳಿಗೆ ಒಳಗಾಗಿವೆ.
ಇಲ್ಲಿನ ಬರಹಗಳು ನನ್ನ ಬದುಕಿನ ವಿವಿಧ ಹಂತದ ನೇರಾನೇರ ಅನುಭವಗಳ ಅಕ್ಷರಕಥಾರೂಪ. ದಿನಗಳುರುಳಿದಂತೆ ಬದುಕಿನೆದುರು ಅನಾವರಣಗೊಳ್ಳುತಿದ್ದ ವಿಭಿನ್ನ ಸನ್ನಿವೇಶಗಳು ನನ್ನ ಹಿಂದಿನ ಬರಹಗಳ ಪುನರವಲೋಕನಕ್ಕೆ ಒತ್ತಾಯಿಸುತಿದ್ದುದು ಸಹಾ ಈ ಪುಸ್ತಕ ರೂಪ ಸಾಕಾರಗೊಳ್ಳುವುದು ತಡವಾಗಲು ಇದ್ದ ಕಾರಣಗಳಲ್ಲೊಂದು.

ಈ ಪುಸ್ತಕದ ಬೆರಳಚ್ಚಿಸುವುದರಲ್ಲಿ ಸಹಾಯ ಮಾಡಿದ ಕುಮಾರಿ ಭವಿಷ್ಯ; ಕರಡು ಓದಿ ತಪ್ಪೊಪ್ಪುಗಳನ್ನು ಗುರುತು ಮಾಡಿಕೊಟ್ಟ ಶ್ರೀಮತಿ ಲೀಲಾವತಿ; ಇಡೀ ಹಸ್ತಪ್ರತಿಯನ್ನು ಓದಿ, ಪುಸ್ತಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟ ಹಿರಿಯರಾದ ಶ್ರೀ ಭದ್ರಪ್ಪ ಶಿ. ಹೆನ್ಲಿ; ಚುಟುಕಾಗಿ ವರ್ಣನೆ ಬರೆದುಕೊಟ್ಟ ಮಿತ್ರ ಸತ್ಯನಾರಾಯಣ್; ಮುದ್ರಿಸಲು ಕೈಜೊಡಿಸಿದ ಶ್ರೀ ರಾಮಕೃಷ್ಣರವರ ತಂಡ; ಪ್ರಕಟಿಸಲು ಮುಂದಾದ ಸಪ್ನಾ ಬಳಗ; ಮಿತ್ರರಾದ ಶ್ರೀ ದೊಡ್ಡೇಗೌಡರು; ಈ ಎಲ್ಲಾ ನನ್ನ ಅನುಭವಗಳನ್ನು ನೀಡಿದ ನನ್ನ ಊರು, ಬಳಗ, ಕುಟುಂಬ, ಸ್ನೇಹಿತರನ್ನೆಲ್ಲ ನೆನೆಯುತ್ತಾ ಬರಹಗಳನ್ನು ನಿಮ್ಮ ಓದಿಗೆ ಒದಗಿಸುತಿದ್ದೇನೆ.

…………..ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ.

ನಾನು…..! ಮೋಹಿನಿ ಗಂಡಾ, ಮೋಹನಾ!!!

ದಿನಪತ್ರಿಕೆಯಲಿ ಹಾಗೆಯೇ ಕಣ್ಣಾಡಿಸಿ ‘ಸರಿ; ತಡವಾಗುತ್ತೆ’ ಎಂದು ಮಡಿಸಿಡಲು ಹೊರಟವನಿಗೆ ಏನೋ ವಿಶೇಷ ಕಂಡಂತಾಯ್ತಲ್ಲ ಎಂದು ಪುನಃ ಬಿಡಿಸಿ ಆರನೇ ಪುಟದ ಕೆಳಮೂಲೆಯನ್ನು ನಿರುಕಿಸಿದರೆ ನನಗೆ ಪ್ರಿಯವಾದ ಸುದ್ದಿಯೇ ಕಾಣಬೇಕೇ? ನಿಜ ಹೇಳಬೇಕೆಂದರೆ ನಾನು ಆ ಸುದ್ದಿಯನ್ನು ನೋಡಿರಲೂ ಇಲ್ಲ. ಆದರೆ ಆರನೇ ಇಂದ್ರಿಯ ಅದು ಹೇಗೋ ಏನೋ ಇಲ್ಲಿ ಯಾವುದೋ ಅಗತ್ಯ ಮಾಹಿತಿಯಿದೆಯೆಂದು ಅತ್ಯಂತ ಸಹಜ ಎಂಬಂತೆ ಎಚ್ಚರಿಸಿತ್ತು. ಸರಸರನೇ ಮಾಹಿತಿ ಸಂಗ್ರಹಿಸಿದ ನಾನು ಆ ಮೂರು ದಿನಗಳ ಅವಧಿಗೆ ರಜೆಯನ್ನು ಯೋಜಿಸತೊಡಗಿದೆ.

ಬಹಳ ಸಮಯದಿಂದ ಹೇಗಾದರೂ, ಎಂದಾದರೂ ಹೋಗಿಯೇತೀರಬೇಕೆಂದು ಆಕಾಂಕ್ಷೆಯಿಟ್ಟುಕೊಂಡಿದ್ದ ನನಗೆ ಈ ಸಂದರ್ಭ ಇಷ್ಟು ಬೇಗನೆ ಈ ರೀತಿ ಬಳ್ಳಿ ಕಾಲಿಗೆ ತೊಡರಿದಂತೆ ಆಕಸ್ಮಿಕವಾಗಿ ಸಂಭವಿಸಲಿದೆ ಎಂದು ಅನಿಸಿ ಸಂತಸವೇ ಆಯಿತು. ಆಗ ಇನ್ನೂ ಲೋಕಲ್ ಎಕ್ಸ್‍ಚೇಂಜ್‍ನ ಟ್ರಂಕ್‍ಕಾಲ್‍ಗಳ ಕಾಲ, ಎಕ್ಸ್‍ಚೇಂಜ್ ವ್ಯಾಪ್ತಿಯೊಳಗೇ ಸಂಪರ್ಕಿಸಬೇಕಾದಲ್ಲಿ ಒನ್ ಸೆವೆನ್ ನೈನ್ ಕೊಡಿ ಎಂದು ಟೆಲಿಫೋನ್ ಆಪರೇಟರ್‍ಗೆ ತಿಳಿಸಿದರೆ ಅವರು ತನ್ನೆದುರು ಇರುವ ದೊಡ್ಡ ಬೋರ್ಡ್‍ನಲ್ಲಿ ಒನ್ ಸೆವೆನ್ ನೈನ್ ಅನ್ನು ಹುಡುಕಿ, ನಮ್ಮ ಫೋನ್‍ನ ತಂತಿಯನ್ನು ಎತ್ತಿ ಒನ್ ಸೆವೆನ್ ನೈನ್ ನ ಸಂಪರ್ಕಕ್ಕೆ ಚುಚ್ಚಿಕೊಡಬೇಕಿತ್ತು. ಆಗ ನಾವು ಹಲೋ… ಹಲೋ… ಎಂದು ಮಾಹಿತಿ ತಲುಪಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗುತ್ತಿತ್ತು.

ಇನ್ನು ಟ್ರಂಕ್‍ಕಾಲ್ ಆಗಿದ್ದರೆ ಮುಗಿದೇ ಹೋಯ್ತು. ನಮ್ಮ ಎಕ್ಸ್‍ಚೇಂಜಿಗೆ ಬೇರೆ ಊರಿನ ನಂಬರ್ ಅನ್ನು ಮೂವತ್ತಮೂರು ಬಾರಿ ಕೂಗಿ ಹೇಳಿ ಆನಂತರ ಟೆಲಿಫೋನಿನವರು ಆ ನಂಬರ್‍ನ ಎಕ್ಸ್‍ಚೇಂಜನ್ನು ಸಂಪರ್ಕಿಸಿ, ಆ ಎಕ್ಸ್‍ಚೇಂಜ್‍ನವರು ಬೇಕಾದ ನಂಬರ್‍ನವರನ್ನು ಸಂಪರ್ಕಿಸಿ ಅವರನ್ನು ಹೋಲ್ಡಿಂಗ್‍ನಲ್ಲಿರಲು ಹೇಳಿ ನಂತರ ನಮ್ಮ ಎಕ್ಸ್‍ಚೇಂeನ್ನು ಸಂಪರ್ಕಿಸಿ ನಮ್ಮ ಎಕ್ಸ್‍ಚೇಂಜ್‍ನವರು ನಮ್ಮನ್ನು ಸಂಪರ್ಕಿಸಿ ನಾವು ಅಪೇಕ್ಷಿಸಿದವರ ಸಂಪರ್ಕ ಸಾಧಿಸಿ ನಮ್ಮನ್ನು ಮಾತನಾಡಲು ಹೇಳಿ, ವಿಷಯ ತಲುಪಿಸುವಷ್ಟರಲ್ಲಿ ಇಲ್ಲಿ ಯಾರಾದರೂ ಸತ್ತಿದ್ದರೆ ಅವರ ದಫನ್ ಮುಗಿದಿರುತ್ತಿತ್ತು. ಬೆಳಿಗ್ಗೆ ಫೋನ್ ಮಾಡಿ ಸಂಪರ್ಕಕ್ಕೆ ಕಾಯ್ದು ಕುಳಿತಿದ್ದರೆ ಸಂಜೆಯೋ-ರಾತ್ರಿಯೋ ಮಾತನಾಡಲು ಸಾಧ್ಯವಾಗುತ್ತಿತ್ತು. ಈ ನಡುವೆ ಅಗತ್ಯ ಕೆಲಸಗಳಿಗೂ ಹೋಗದೇ, ಸಿಗಬಹುದಾದ ಸಂಪರ್ಕ ಸಿಕ್ಕಿ ಮಾತನಾಡಲು ಸಾಧ್ಯವಾಗದೇ ಎಲ್ಲಿ ಕೈತಪ್ಪಿ ಹೋಗುವುದೋ ಎಂದು ಕಾಯ್ದು ಕೂರುವುದಿತ್ತಲ್ಲಾ ಅದು ತೀರಾ ಸಂಕಟ. ಕಡೆಗೆ ಸಂಜೆ ಐದಕ್ಕೆ ‘ಆ ಎಕ್ಸ್‍ಚೇಂಜ್ ಲೈನ್ ಸರಿಯಿಲ, ಮರ ಬಿದ್ದಿದೆಯಂತೆ, ಸಿಡಿಲು ಬಡಿದು ಎಕ್ಸ್ಚೇಂಜಿನ ಬೋರ್ಡೇ ಸುಟ್ಟುಹೋಗಿದೆಯಂತೆ, ಅಡಚಣೆಗಾಗಿ ವಿಷಾಧಿಸುತ್ತೇವೆ ನಾಳೆ ಟ್ರೈಮಾಡಿ’ ಅಂದದ್ದೂ ಉಂಟು.

ನನ್ನ ಗೆಳೆಯರೊಬ್ಬರ ಅಂಗಡಿಯಲ್ಲಿ ಕೆಲಸಕ್ಕಿದ್ದ ಆನಂದ ಎನ್ನುವವನಿಗೆ ಮಾಲೀಕರಿಲ್ಲದಾಗ ಟೆಲಿಫೋನ್ ಕರೆಯನ್ನು ಸ್ವೀಕಾರ ಮಾಡುವುದೆಂದರೆ ಒಂದು ಅಮೋಘ ಅತ್ಯಪೂರ್ವ ಅನುಭವ. ಬೇರೆಲ್ಲ ಮಾಡಲೇಬೇಕಿದ್ದ ಕೆಲಸಗಳನ್ನು ಬದಿಗಿಟ್ಟು ಕಿವಿಯೆಲ್ಲವನ್ನೂ ಫೋನಿನೆಡೆಗೇ ಕೇಂದ್ರೀಕರಿಸಿ ತನ್ನೆಲ್ಲ ಪಂಚೇಂದ್ರಿಯಗಳನ್ನು ಫೋನೆಂಬ ಮಾಯಾವಸ್ತುವಿನೆಡೆಗೇ ಗುರಿಮಾಡಿಕೊಂಡು ಚಾತಕಪಕ್ಷಿಯಂತೆ ಕಾಯುತ್ತಿದ್ದ.
ಫೋನ್ ರಿಂಗ್ ಆಗಲು ಇನ್ನೂ ಪ್ರಾರಂಭಿಸಿರುವುದಿಲ್ಲ; ಕಿಣ್ ಎನ್ನಬೇಕಷ್ಟೇ, ಇಲಿ ಮೇಲೆ ನೆಗೆಯುವ ಬೆಕ್ಕಿನಂತೆ ಫಣಂಗನೇ ಹಾರಿ, ಅತ್ತಲಿಂದ ಯಾರು ಯಾಕೆ ಎಲ್ಲಿಂದ ಮಾತನಾಡುತ್ತಿದ್ದಾರೆಂದು ಸಹಾ ವಿಚಾರಿಸದೇ “ಹಲೋ ನಾನು ಆನಂದ, ಆನಂದ ಪೂಜಾರಿ, ಫೋನಿನಲ್ಲಿ ಮಾತಾಡ್ತಿದೀನಿ, ಏನ್ ಮತೇ ಚೆನಾಗಿದೀರಾ….” ಎಂದು ಪ್ರಾರಂಭಿಸಿಯೇಬಿಡುತ್ತಿದ್ದ. ಫೋನಿನಲ್ಲಿ ಮಾತನಾಡುವುದು, ನನಗೆ ಫೋನ್ ಬಂದಿತ್ತು ಇವತ್ತು ಅವರಿಗೆ ಫೋನ್ ಮಾಡಿದೆ ಎನ್ನುವುದು ಪ್ರತಿಷ್ಠೆಯ ಪ್ರಶ್ನೆ ಎಂದು ಹೇಳಿಕೊಳ್ಳುವಂಥಾ ಕಾಲದಲ್ಲಿ ನಾನು ಚಾರಣ ಹೋಗುವ ಸಲುವಾಗಿ ಬೆಂಗಳೂರಿನ ಎನ್.ವೈ.ಎ.ಸಿಯವರನ್ನು ಸಂಪರ್ಕಿಸಲು ಯತ್ನಿಸಿದ್ದೆ.

ಏನು ಮಾಡಿದರೂ ಸಂಪರ್ಕ ಸಿಗದಿದ್ದಾಗ ಹಳೇ ಗಂಡನ ಪಾದವೇ ಗತಿ ಎಂದು ಪತ್ರವನ್ನೇ ಬರೆದು ವಿವರಗಳನ್ನು ತಿಳಿದುಕೊಂಡೆ. ಕಿವಿಗಿಂತಲೂ ಕೋಡು ಎತ್ತರವಿದ್ದರೂ ಕಿವಿಯ ಸ್ಥಾನವನ್ನು, ಯಾವಾಗ ಬೇಕಾದರೂ ಮುರಿದು ಹೋಗಬಹುದಾದ ಕೋಡು ತುಂಬಲು ಸಾಧ್ಯವಿಲ್ಲವೆಂದು ಮನವರಿಕೆಯಾಯ್ತು.
ತಮ್ಮ ತಂಡ ರಾತ್ರಿ ಹತ್ತೂವರೆಗೆ ಬೆಂಗಳೂರು ಬಿಡುವುದೆಂದೂ, ಸಕಲೇಶಪುರಕ್ಕೆ ಬೆಳಗಿನ ನಾಲ್ಕರ ಜಾವಕ್ಕೆ ತಲುಪುವುದೆಂದೂ, ಬೆಳಗಿನ ಜಾವ ಐದೂವರೆಗೆ ರೈಲ್ವೇ ಟ್ರ್ಯಾಕಿನಲ್ಲಿ ಚಾರಣ ಪ್ರಾರಂಭಿಸುವುದೆಂದು ತಿಳಿಸಿದರು. ಶಿರಾಡಿಘಾಟಿಯ ಅಭೇಧ್ಯವಾದ ಅರಣ್ಯದ ನಡುವೆ ಇಂಜಿನಿಯರಿಂಗ್ ಅದ್ಭುತವೇ ಎನ್ನುವಂತೆ ನಿರ್ಮಾಣವಾಗಿದ್ದ ರೈಲ್ವೇ ಹಾದಿಯನ್ನು ಬ್ರಾಡ್‍ಗೇಜ್ ಪರಿವರ್ತನೆಗಾಗಿ ಹಾಗೂ ಸಂಬಂಧಿತ ದುರಸ್ತಿಗಾಗಿ ಎಂದು ಮೂರು ವರ್ಷಗಳಿಂದ ಸಂಚಾರ ಸೌಲಭ್ಯಗಳನ್ನು ನಿಲ್ಲಿಸಲಾಗಿತ್ತು. ಮೇ ಯಿಂದ ನವೆಂಬರ್‍ನವರೆವಿಗೂ ನಿರಂತರವಾಗಿ ಸುರಿಯುವ ಮುಸಲವರ್ಷಧಾರೆ ಅಲ್ಲಿನ ವಾತಾವರಣವನ್ನು, ಅಲ್ಲಿ ರೈಲುದಾರಿಯಿತ್ತೆಂಬುದನ್ನು ಗುರುತಿಗೇ ಸಿಗಲಾರದಂತೆ ಪರಿವರ್ತಿಸಿತ್ತು. ಭೋರ್ಗರೆಯುತ್ತಾ ಧುಮ್ಮಿಕ್ಕುವ ಬೃಹತ್ ಜಲಧಾರೆಗಳು, ಅಖಂಡ ಪಶ್ಚಿಮ ಘಟ್ಟಗಳ ನಡುವಿನಲ್ಲಿರುವ ಈ ಪರ್ವತ ಶ್ರೇಣಿಯು ಎಂಥಾ ಅನ್ವೇಷಕನನ್ನೂ ಅಧೀರನನ್ನಾಗಿಸುತ್ತದೆ.

ಆ ರೈಲ್ವೇ ಹಾದಿಯೊಂದಿಲ್ಲದಿದ್ದಲ್ಲಿ ನಾನೆಲ್ಲಿದ್ದೇನೆ? ಎತ್ತ ಸರಿಯುತ್ತಿದ್ದೇನೆ? ಹಾಗೂ ಹೇಗಿದ್ದೇನೆ ಎಂಬ ಭಯಾನಕ ಆತಂಕಕ್ಕೆ ತಳ್ಳಿ ಎದೆಗುಂದಿಸುತ್ತದೆ ಆ ಆದಿ-ಅಂತ್ಯವಿಲ್ಲದ ಅರಣ್ಯ. ತಲೆಯೆತ್ತಿ ಎತ್ತ ನೋಡಿದರೂ ಅಗಾಧವಾದ ಪರ್ವತಗಳು, ಆಕಾಶಕ್ಕೆ ಆಧಾರವಾಗಿ ನಿಂತಂತೆ ಭಾಸವಾಗುವ ಹೆಮ್ಮರಗಳು, ಸಾಧ್ಯವಾದರೆ ಆ ಹೆಮ್ಮರಗಳನ್ನು ಬಂಧಿಸೋಣ ಎಂಬ ಹವಣಿಕೆಯಲ್ಲಿ ತಬ್ಬಿ ಸುತ್ತಿಕೊಂಡಿರುವ ಸುಮಾರಾಗಿ ಲಾರಿಟೈರಿನ ಗಾತ್ರದ ಹೆಬ್ಬೀಳುಗಳು. ಪಾತಾಳದ ಕಲ್ಪನೆಗೆ ಸಾದೃಶ್ಯವಾಗಬಹುದಾದ ತಳವಿಲ್ಲದ ಕಮರಿಗಳು. ಅಲ್ಲೆಲ್ಲೋ ತಳವಿರಬಹುದೆಂಬ ಆಸೆ ಹುಟ್ಟಿಸುವ ಹರಿಯುವ ನೀರಿನ ಜಳಜಳ-ಗೊಳಗೊಳ ಸದ್ದು. ಈ ವಿಸ್ಮಯಕಾರೀ ಸನ್ನಿವೇಶದಲ್ಲಿ ಎಲ್ಲೋ ಒಮ್ಮೊಮ್ಮೆ ಮಾತ್ರ ಕೇಳಿಸುವ ಹಕ್ಕಿಗಳ ಇಂಚರ-ಚೀತ್ಕಾರಗಳು, ನಮ್ಮ ಇರುವಿಕೆಯನ್ನು ಗ್ರಹಿಸಿ ಗಾಬರಿಗೊಂಡು ಸರಕ್ಕನೇ ಪೊದೆಯೊಳಗೆ ನುಸುಳುವ ಕಾಡುಮೃಗಗಳು; ಇವನ್ನು ಬಿಟ್ಟರೆ ಗಾಳಿಯೂ ಸಹ ಎಲ್ಲಿ ಸದ್ದಾಗುವುದೋ ಎಂದು ನಿಧಾನವಾಗಿ ನಿಡುಸುಯ್ಯುತ್ತದೆ. ಈ ಎಲ್ಲಾ ಚಟುವಟಿಕೆಗಳ ನಿಗೂಢ ನೀರವತೆಯ ನಡುವೆ ನಿರಾತಂಕವಾಗಿ ನಿರಂತರ ಸದ್ದು ಮಾಡುವ ಜೀವಿಗಳೆಂದರೆ ಜೀರುಂಡೆಗಳು. ದಿನದ ನಿಗದಿತ ಸಮಯದಲ್ಲಿ ಜೈವಿಕ ಗಡಿಯಾರಕ್ಕನುಗುಣವಾಗಿ ತಂಡತಂಡಗಳಲ್ಲಿ ಇಡೀ ಕಾಡೇ ನಿರಂತರವಾಗಿ ಅನುರಣಿಸುವಂತೆ ಇವು ನಗಾರಿ ಪ್ರಾರಂಭಿಸಿದರೆ ಬಡಿತ ನಿಲ್ಲಿಸಿದ ನಂತರವೂ ಕೆಲ ಸಮಯ ಕೇಳುಗರ ತಲೆ ಧಿಮ್ಮೆನ್ನುತ್ತಿರುತ್ತದೆ.

ಆ ದಿನ ಭಾನುವಾರವಾದ್ದರಿಂದ ನಿಧಾನವಾಗಿ ತಿಂಡಿ ಮಾಡಿದರಾಯ್ತೆಂದು ಟಿ. ವಿ. ನ್ಯೂಸ್ ನೋಡ್ತಾ ಇದ್ದೆ. ಅಷ್ಟರಲ್ಲೇ ಬಾಗಿಲು ತಟ್ಟಿದ ಶಬ್ದವಾಯ್ತು. ಯಾರಿರಬಹುದು ಅಂತ ಬಾಗಿಲು ತೆರೆದರೆ ಅದೇ ಮೋಹನ. ನಮ್ಮನೆಗೆ ಪೇಪರ್ ಹಾಕಲು ಬರ್ತಿದ್ದ ಜಹೀರನಿಂದ ದಾರಿಯಲ್ಲಿಯೇ ಪೇಪರ್ ಇಸ್ಕೊಂಡು ಹಾಗೇ ಓದ್ತಾ ತಾನೇ ತಂದಿದ್ದ. “ಬಾ ಮಾರಾಯ, ಅದೇನು ಇಷ್ಟು ಬೇಗ ಬಂದ್ಯಲ್ಲ” ಅಂತ ಒಳಕರೆದು, ಬಾಗಿಲು ಹಾಕಿದೆ.
ಮೋಹನನ ತಂದೆ ನನಗೆ ಬಹಳ ಆತ್ಮೀಯರಾಗಿದ್ದ ಆನಂದೂರು ಮೇಷ್ಟ್ರು, ರಿಟೈರ್ಡ್ ಟೀಚರ್ ಆಗಿದ್ದ ಅವರು ಹದಿನೈದು ದಿನಕ್ಕೊಮ್ಮೆಯಾದ್ರೂ ನನ್ನನ್ನು ಅವರ್ಮನೆಗೆ ಕರ್ಕೊಂಡುಹೋಗಿ ಹೊಟ್ಟೆ ಬಿರಿಯುವ ಹಾಗೆ ತಿನ್ನಿಸಿ ಕಳಿಸ್ತಾ ಇದ್ರು. ಮೋಹನನನ್ನು ಕುಶಾಲನಗರದಲ್ಲಿ ಹಾಸ್ಟೆಲಿನಲ್ಲಿ ಬಿಟ್ಟು ಆಟೋಮೊಬೈಲ್ ಡಿಪ್ಲೋಮೋ ಓದಿಸ್ತಾ ಇದ್ರು.

ನಿನ್ನೆ ತಾನೇ ಹಾಸ್ಟೆಲಿನಿಂದ ಹೊರಹಾಕಿಸಿಕೊಂಡು ಬಂದಿದ್ದಾನೆ. ವಾರ್ಡನ್ ಇವರ ಮನೆಗೆ ಫೋನ್ ಮಾಡಿ ಹೇಳಿದ್ದಾರೆ, “ನಮ್ಮ ಕೈಯಲ್ಲಿ ನಿಮ್ಮ ಮಗನ್ನ ಇಟ್ಟುಕೊಳ್ಳೋದಕ್ಕೆ ಆಗೋಲ್ಲ. ಬಹಳ ಗಲಾಟೆ ಮಾಡ್ತಾನೆ. ನಮ್ಮ ಹಾಸ್ಟೆಲಿನ ಹುಡುಗನೊಬ್ಬನಿಗೆ ಸೊಂಟ ಮುರಿಯುವಂತೆ ಬಾರಿಸಿದ್ದಾನೆ. ಗುಂಪು ಕಟ್ಟಿಕೊಂಡು ಹೋಗಿ ಹಾಸ್ಟೆಲಿನ ಪಕ್ಕದ ಚೌಲ್ಟ್ರಿಯ ಮ್ಯಾನೇಜರ್‍ಗೆ ಕೈ ಮುರಿದಿದ್ದಾನೆ. ಸೆಕೆಂಡ್ ಷೋ ಸಿನಿಮಾ ನೋಡಲು ತರ್ಲೆಗಳನ್ನೆಲ್ಲಾ ಸೇರಿಸಿಕೊಂಡು ಹೋಗಿ ತಿರುಗಿ ಬಂದು ದಾಂಧಲೆ ಮಾಡ್ತಾನೆ. ರಾತ್ರೋರಾತ್ರಿ ಹಾಸ್ಟೆಲಿನಲ್ಲಿ ಹಿಂದಿನ ಬಾಗಿಲು ಮುರಿದು ಒಳಬಂದು ಏನೂ ತಿಳಿಯದಂತೆ ರೂಂ ಸೇರಿಕೊಳ್ತಾನೆ”.ಇದನ್ನೆಲ್ಲಾ ಮೋಹನನ ತಂದೆ ನೆನ್ನೆ ಸಂಜೆಯೇ ದಾರಿಯಲ್ಲಿ ಸಿಕ್ಕಿ, “ನೀವಾದರೂ ಹೇಳಿ, ನಮಗೆ ವಯಸ್ಸಾಗಿದೆ, ನನ್ನ ಮೇಲೆ ಡಿಪೆಂಡ್ ಆಗಿದ್ದಾರೆ ಅಂತಾ ಪೊಗರು ತೋರುತ್ತಿದ್ದಾನೆ” ಎಂದಿದ್ದರು.

ನಿನ್ನೆ ರಾತ್ರಿ ಹತ್ತೂವರೆಗೆ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ. ಅವರಮ್ಮ ಇವನಿಗೋಸ್ಕರ ಕಾಯ್ದೂ ಕಾಯ್ದೂ ರಾತ್ರಿಯ ಊಟ ಮಾಡಿ, ಲೈಟಾರಿಸಿ ಮಲಗಿದ್ದರಂತೆ. ಮಗನ ದನಿ ಕೇಳಿಸಿಕೊಂಡ ತಾಯಿ ಮಲಗಿದ್ದಲಿಂದಲೇ “ಯಾರೂ?” ಅಂದರಂತೆ. ಅಪ್ಪ ಮಲಗಿ ನಿದ್ರೆ ಮಾಡಿರಬಹುದು, ಅಮ್ಮನ ಬಳಿ ಕಾಮಿಡಿ ಮಾಡಿ ಮನೆಯೊಳಕ್ಕೆ ಸೇರಿಕೊಂಡುಬಿಡೋಣ ಎಂದುಕೊಂಡು ಈತ ಭೂತದ ಸಿನೆಮಾ ಸ್ಟೈಲಿನಲಿ “ನಾನೂ!! ಹ್ಹಹಹ್ಹಹಹ್ಹಹಹಾ! ಮೋಹಿನಿ ಗಂಡಾ, ಮೋಹನಾ!!! ಊಹೂಹ್ಹೂಹೂಹೂ”ಎಂದನಂತೆ. ಅದೆಲ್ಲಿತ್ತೋ ಸಿಟ್ಟು, ಲೈಟೂ ಹಾಕದೇ ದಿಂಬಿನ ಬದಿ ಇಟ್ಟಿದ್ದ ಟಾರ್ಚ್‍ನಿಂದಲೇ ಕಿಟಕಿಯಾಚೆಗೆ ಬೆಳಕು ಹರಿಸಿದ ಆನಂದೂರು ಮೇಷ್ಟ್ರು, “ದಾಟಾಚೆ, ಮನೆಯೊಳಕ್ಕೆ ಕಾಲಿಟ್ರೆ, ಕಾಲ್ಮುರೀತೀನಿ. ಅಲ್ಲೇ ಮೋಹಿನಿ ಜೊತೇನೇ ಇರು. ಈಡಿಯಟ್!” ಎಂದು ಗದರಿಸಿ ಮನೆಯೊಳಕ್ಕೆ ಸೇರಿಸಿರಲಿಲ್ಲವಂತೆ ಹಾಗಾಗಿ ನಮ್ಮನೆಗೂ ಬರಲು ಹಿಂಜರಿದು ಅವನ ಸ್ನೇಹಿತ ಸುರೇಶನ ಮನೆಯಲ್ಲಿ ಬೇಡದ ಅತಿಥಿಯಾಗಿ ಇದ್ದು, ಬೆಳಿಗ್ಗೆಯೇ ಇಲ್ಲಿಗೆ ಬಂದಿದ್ದ.

ಕಡಿದರೆ ಸರಿಸುಮಾರು ಎರಡಾಳು ಆಗಬಹುದಾದಂತೆ ಇದ್ದ ಈ ದಡಿಯನಿಗೆ ಡೌಟೇನಿತ್ತೆಂದರೆ ಹೆಂಗಸರ ಸೊಂಟದಲ್ಲಿ ಸೀರೆ ಹೇಗೆ ಗಟ್ಟಿಯಾಗಿ ನಿಲ್ಲುತ್ತೆ ಎಂಬುದು. ಇಂತಹ ದುರ್ಬುದ್ಧಿಯ ಕುತೂಹಲ ಯಾಕೆ ಬಂತೋ ಕಾಣೆ. “ಸರಿ, ಬಾ ಮಾರಾಯ ನಿಮ್ಮಪ್ಪ ನನಗೆಲ್ಲಾ ಹೇಳಿದ್ದಾರೆ, ತಿಂಗಳು ತಿಂಗಳಿಗೂ ಎರಡು ಸಾವಿರ್ರುಪಾಯಿ ಕಳಿಸ್ತಾರೆ. ಮುಚ್ಕೊಂಡು ಹಾಸ್ಟೇಲ್‍ನಲ್ಲಿದ್ದು, ಓದಲಿಕ್ಕೇನು ದಾಡಿ ನಿನಗೆ. ನಿನ್ನ ರೂಂಮೇಟನ್ನು ಯಾಕೆ ಹೊಡೆದೆ ಹೇಳು” ಎಂದೆ. “ಸರ್ ನಿಮಿಗ್ಗೊತ್ತಿಲ್ಲ, ಆ ನನ್‍ಮಗ ರಾತ್ರಿಯಿಡೀ ಗೊರಕೆ ಹೊಡೀತಾನೆ. ಅದೆಂಥಾ ಗೊರಕೆ ಗೊತ್ತಾ? ವಿಷಲ್ ಹೊಡಿತಾರಲ್ಲ, ಹಂಗೆ ಸಾರ್. ಬೇರೆ ರೂಂನವರಿಗೆ ಅವನ ಕಾಟ ತಡಿಯಲಿಕ್ಕಾಗದೆ ಅವನನ್ನು ನನ್ನ ರೂಮಿಗೆ ಹಾಕಿದ್ರು. ಒಂದು ವಾರದಿಂದ ಈ ನನ್‍ಮಗ ಗಡದ್ ನಿದ್ದೆ ಮಾಡ್ತಿದ್ರೆ, ನಾನು ಎದ್‍ಕೂತ್ಕೊಂಡು ಇವ್ನು ಹಾಕೋ ವಿಷಲ್ ಲೆಕ್ಕ ಹಾಕೋದು ನಡೀತಿತ್ತು. ಮೊನ್ನೆ ರಾತ್ರಿ ತಡಿಯಕ್ಕಾಗ್ಲಿಲ್ಲ. ಮಲಗಿದ್ದವನಿಗೆ ತಿಕದ ಮೇಲೆ ಸರ್ರಿಯಾಗಿ ಮೇಲೆ ಒದ್ದೆ ನೋಡಿ, ನನ್‍ಮಗಂದ್ ಸೊಂಟಾನೆ ಮುರ್ದೋಗಿ ಬಿಟ್ಟಿದೆ ಸಾರ್. ಅವ್ನಿಗೆ ಈಗ ಎದ್‍ಕೂರೋಕೂ ಆಗಿಲ್ವಂತೆ ಸಾರ್”.
“ಸರೀ ಮಾರಾಯ, ಆ ಚೌಲ್ಟ್ರಿ ಮೇನೇಜರ್‍ಗೆ ಯಾಕೆ ಹೊಡದ್ರಿ. ಅವನ ಕೈ ಮುರಿದಿದ್ದೀರಂತೆ?” “ಅದ್ ಬಿಡೀ ಸರ್. ಆ ವಿಷ್ಯಾ ಮಾತ್ರ ಕೇಳ್ಬೇಡಿ. ಅದನ್ನ ಹೇಳೋಕೆ ನನಗೆ ಒಂಥರಾ ಆಗುತ್ತೆ”. “ಹೇಳು ಮಾರಾಯ, ನನಗೂ ಗೊತ್ತಾಗ್ಲಿ, ಯಾರ್ಯಾರು ಯಾವ್ಯಾವ ಕಾರಣಕ್ಕೆ ಕೈ ಮುರುಸ್ಕೋತಾರೆ ಅಂತ” ಅಂದೆ. ಮೋಹನ ಹಿಂಜರಿಯುತ್ತಲೇ ಶುರು ಮಾಡಿದ.

“ನಮ್ಮ ಹಾಸ್ಟೇಲಿನ ಪಕ್ಕದ ಚೌಲ್ಟ್ರಿಯಲ್ಲಿ ಹೆಚ್ಚಾಗಿ ಕೂರ್ಗಿಗಳ ಮದುವೇನೇ ಆಗೋದು, ಯಾವಾಗ್ಲೂ ನಾನ್‍ವೆಜ್ ಅಡಿಗೇನೆ ಮಾಡ್ತಾರೆ ಅಂತ ನಾವ್ ಒಂದ್ಹತ್ತು ಜನ ಐಡಿಯಾ ಮಾಡ್ಕೊಂಡು, ಮದುವೆ ಊಟನ ಅಟೆಂಡ್ ಮಾಡ್ತಿದ್ವಿ ಸಾರ್”. “ಎಲಾ ಬಡ್ಡಿ ಮಕ್ಳಾ ಊಟಾನ ಅಟೆಂಡ್ ಬೇರೆ ಮಾಡ್ತಿದ್ರಾ!!?”ಎಂದು ಮನಸ್ಸಿನಲ್ಲೇ ಅಂದ್ಕೊಂಡು “ಬಾ ಇಲ್ಲಿ ಚಪಾತಿಗೆ ಹಿಟ್ಟು ಕಲಸಿದ್ದೇನೆ, ಒಂದ್ಹತ್ತು ಚಪಾತಿ ಅರೆದುಕೊಡು, ನಾನು ಬೇಯಿಸ್ತೀನಿ, ಹಾಗೇ ಹೇಳ್ತಿರು ನಿನ್ನ ಅಡ್ವೆಂಚರ್‍ನ” ಅಂದೆ.

“ದಿನಾ ಬಿಟ್ಟು ದಿನ ಮದುವೆ ನಡೀತಿತ್ತಲ್ಲ ನಾವೆಲ್ಲಾ ಟ್ರಿಮ್ಮಾಗಿ ಡ್ರೆಸ್ ಮಾಡ್ಕೊಂಡು ರೆಡಿಯಾಗ್ತಿದ್ವಿ. ನಮ್ಮೊಲ್ಲೊಬ್ಬ ಎಲ್ಲರಿಗಿಂತ ಮುಂಚೆಯೇ ಹೋಗಿ ಚೌಲ್ಟ್ರಿಯ ಮುಂದೆ ನಿಂತುಕೊಂಡು ನಮ್ಮವರನ್ನೆಲ್ಲಾ ನೆಂಟರನ್ನ ಇನ್ವೈಟ್ ಮಾಡುವಂತೆ `ಈಗ ಬಂದ್ರಾ? ಚೆನ್ನಾಗಿದ್ದೀರಾ? ಯಾಕೆ ಲೇಟಾಯ್ತಲ್ಲ? ಬನ್ನಿ ಬನ್ನಿ ಸೀದಾ ಊಟಕ್ಕೆ ನಡೀರಿ, ಮತ್ತೆ ರಷ್ ಆಗುತ್ತೆ’ ಅಂತ ಕರೆದುಕೊಂಡು ಹೋಗಿ ಊಟಕ್ಕೆ ಕೂರಿಸ್ತಿದ್ದ. ಗುಂಡು-ತುಂಡನ್ನು ಸರ್ರೀ ಜಡಿದು ಬರ್ತಿದ್ದೆವು. ಬೇರೆ ಬೇರೆಯವರ ಮದುವೆಯಾದ್ದರಿಂದ ಯಾರಿಗೂ ಗೊತ್ತಾಗ್ತಿರಲಿಲ್ಲ. ಈ ನನ್‍ಮಗ ಆ ಚೌಲ್ಟ್ರೀ ಮೇನೇಜರ್ ಅಬ್‍ಸರ್ವ್ ಮಾಡಿಬಿಟ್ಟಿದ್ದಾನೆ. ಒಂದಿನ ಎಲ್ಲರೆದುರಿಗೇ ನಮ್ಮನ್ನೆಲ್ಲಾ ನಿಲ್ಲಿಸಿ ಕೇಳಿಬಿಟ್ಟಿದ್ದಾನೆ ನೋಡಿ. ಸರಿಯಪ್ಪಾ ಎಂದು ವಾಪಸ್ ಬಂದೆವು. ಎಲ್ಲಾ ಮೀಟಿಂಗ್ ಸೇರಿ ಅವನಿಗೆ ಬುಧ್ಧಿ ಕಲಿಸಲು ಸ್ಕೆಚ್ ಹಾಕಿದ್ವಿ. ಸಾಯಂಕಾಲ ಏಳು ಗಂಟೆಗೆಂದು ನಿಗದಿಯಾಗಿದ್ದ ಪ್ರೋಗ್ರಾಂ ಅನ್ನು ನನ್ನ ಇನ್ನೊಬ್ಬ ರೂಂಮೇಟ್ ಸದಾಶಿವ ಐದು ಗಂಟೆಗೇ ಜನರೇಟರ್ ರೂಂನಲ್ಲಿ ಎಕ್ಸ್‍ಕ್ಯೂಟ್ ಮಾಡಿಬಿಟ್ಟಿದ್ದಾನೆ. ಆದರೆ ನಾನೇ ಕೈಮುರಿದದ್ದೆಂದು ಎಲ್ಲಾ ಕಡೆ ಪ್ರಚಾರ ಆಗಿದೆ. ಹೇಳಿ ಸಾರ್ ಇದರಲ್ಲಿ ನನ್ನದೇನಾದ್ರೂ ತಪ್ಪಿದೆಯಾ?” ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ ಬಡ್ಡೀಮಗ.

ಇವನೆಂಥಾ ಖದೀಮ ಅಂತ ನನಗೊತ್ತಿತ್ತು. ಹಾಸ್ಟೆಲಿನಲ್ಲಿ ಬ್ರೆಡ್‍ಸ್ಲೈಸಿಗೆ ಅಯೋಡೆಕ್ಸ್ ಅನ್ನು ಜಾಮ್‍ನಂತೆ ಹಾಕಿಕೊಂಡು ತಿಂದವನಿವನು. ಆದರೀಗ ಮನೆಯಿಂದ ಬೇರೆ ಹೊರಹಾಕಿಸಿಕೊಂಡಿದ್ದಾನೆ, ಹಾಸ್ಟೆಲಿನವರೂ ಇವನನ್ನು ರೌಡಿ ಲಿಸ್ಟಿಗೆ ಸೇರಿಸಿದ್ದಾರೆ. ಇನ್ನು ಕಾಲೇಜಿಗೆ ಸೇರಿಸಿಕೊಳ್ಳುವ ಮಾತು ದೂರವೇ ಉಳಿಯಿತು. ಇವನ ಕಾಲೇಜಿನಲ್ಲಿ ಇವನಾಡಿರುವ ಸುಂದರಕಾಂಡವನ್ನು ಇನ್ನೆಂದಾದರೂ ಪ್ರಸ್ತಾಪಿಸೋಣ.
ಈಗ ನನ್ನ ಮನೆಗೆ ಸೇರಿಕೊಂಡಿದ್ದಾನೆ, ಸ್ನೇಹಿತ ಬೇರೆ, ಈ ಸಮಯದಲ್ಲಿ ಸಹಾಯ ಮಾಡಿ ಬುದ್ಧಿ ಹೇಳದಿದ್ದರೆ ಇವನೊಬ್ಬ ಕೇಡಿಯಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿವೆ ಎಂದುಕೊಂಡು “ಹೇಗಿದ್ದರೂ ನಾಡಿದ್ದಿನಿಂದ ದಸರಾ ರಜೆ ಅಲ್ವಾ, ನಡೀ ನಮ್ಮೂರಿಗೆ ಹೋಗೋಣ, ನನಗೊಂದು ಟ್ರಕ್ಕಿಂಗಿಗೆ ಹೋಗ್ಲಿಕ್ಕಿದೆ. ಬಾ ನಂಜೊತೆ, ಹದಿನೈದು ದಿನ ಬಿಟ್ಟು ಬರೋಣ, ಬಂದ ಮೇಲೆ ನಾನೂ ನಿಮ್ಮ ಕಾಲೇಜಿಗೆ ಬಂದು ಪ್ರಿನ್ಸಿಪಾಲ್ ಬಳಿ ಮಾತನಾಡಿ ಏನಾದ್ರೂ ವ್ಯವಸ್ಥೆ ಮಾಡ್ತಿನಿ” ಎಂದೆ.

ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅಂದ್ಕೊಂಡು ಮೋಹನ ನನ್ನೊಡನೆ ಮೂಡಿಗೆರೆಗೆ ಬಸ್ ಹತ್ತಿದ. ಬೆಂಗಳೂರಿನ ರಾಜಾಜಿನಗರದ ಎನ್. ವೈ. ಎ. ಸಿ.ಯವರು ರಾಜ್ಯಮಟ್ಟದ ಚಾರಣವನ್ನು ಶಿರಾಡಿಘಾಟಿಯ ರೈಲ್ವೇ ಟ್ರ್ಯಾಕಿನಲ್ಲಿ ಹಮ್ಮಿಕೊಂಡಿರುವುದಾಗಿಯೂ, ಆಸಕ್ತರು ಸಂಪರ್ಕಿಸಬೇಕಾಗಿಯೂ, ಪ್ರಜಾವಾಣಿಯಲ್ಲಿ ಜಾಹೀರಾತು ನೀಡಿದ್ದರು. ಉದ್ಯೋಗದ ಏಕಾತನತೆಯಿಂದ ಬೇಸತ್ತಿದ್ದ ನಾನು ಅವರನ್ನು ಸಂಪರ್ಕಿಸಿ ವಿವರಗಳನ್ನು ತಿಳಿದುಕೊಂಡು ಅವರೊಡನೆ ಚಾರಣ ಹೊರಟಿದ್ದೆ. ಸರಿ, ಈ ಮೋಹನನ ಚರ್ಬಿ ಕರಗಿಸೋಣ ಎಂದುಕೊಂಡು, ಅವನನ್ನೂ ನನ್ನೊಡನೆ ಹೊರಡಿಸಿಕೊಂಡಿದ್ದೆ. ಸೋಮವಾರ ಸಂಜೆ ಮೂಡಿಗೆರೆ ತಲುಪಿದೆವು. ಗುರುವಾರ ಬೆಳಗ್ಗಿನ ಜಾವವೇ ಸಕಲೇಶಪುರದಲ್ಲಿ ಎನ್. ವೈ. ಎ. ಸಿ. ಯವರ ತಂಡವನ್ನು ನಾವು ಸೇರಿಕೊಳ್ಳಬೇಕಿತ್ತು. ಮಂಗಳವಾರ ಬೆಳಗ್ಗಿನಿಂದಲೇ ಈ ಮೋಹನನಿಗೆ ಶೀತ- ಜ್ವರ ಪ್ರಾರಂಭವಾಗಬೇಕೇ? ನಿಮಿಷಕ್ಕೆ ಸರಾಸರಿ ಹದಿನೈದು ಸೀನನ್ನು ನಿರಂತರವಾಗಿ ಹೊರಹಾಕತೊಡಗಿದ. ನೀರು ಬದಲಾದ್ದರಿಂದಲೋ, ಮನೆಯಿಂದ ಹೊರಹಾಕಿಸಿಕೊಂಡ ಟೆನ್ಶನ್‍ನಿಂದಲೋ, ವಾತಾವರಣ ಬದಲಾದ್ದರಿಂದಲೋ ಶೀತ-ಜ್ವರ ನಿಯಂತ್ರಣಕ್ಕೆ ಬಾರದಾಯ್ತು. ಬುಧವಾರ ಈತನ ಶೀತ-ಜ್ವರ ಸುಮಾರಾಗಿ ಕಡಿಮೆಯಾಗಿತ್ತು. ಆದರೆ ಸುಸ್ತು ಹಾಗೇ ಇದ್ದದ್ದರಿಂದ ಅವನನ್ನು ಚಾರಣಕ್ಕೆ ಕರೆದೊಯ್ಯುವಂತಿರಲಿಲ್ಲ.

ನನಗೂ ಇವನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದರೆ ರೈಲ್ವೇ ಟ್ರ್ಯಾಕ್‍ನಲ್ಲಿ ಟ್ರಕ್ಕಿಂಗ್ ಮಾಡಬೇಕೆನ್ನುವುದು ನನ್ನ ಬಹುದಿನಗಳ ಆಸೆ. ಸಂಜೆಯ ವೇಳೆಗೆ ನನ್ನೊಡನೆ ಷೆಟಲ್ ಆಡುವ ಮಟ್ಟಿಗೆ ನೆಟ್ಟಗಾದ ಮೋಹನ ತಾನೂ ಟ್ರಕ್ಕಿಂಗ್‍ಗೆ ಬರಲು ಸಿದ್ಧನಾದ. ಮೂರು ದಿನಗಳ ಟ್ರಕ್ಕಿಂಗ್‍ಗೆ ಹೀಗೆ ರಿಕವರಿಂಗ್ ಕ್ಯಾಂಡಿಡೇಟನ್ನು ಕರೆದುಕೊಂಡು ಹೋಗುವುದು, ಘಟ್ಟಕ್ಕೆ ಹೋಗುವವರಿಗೆ ಕೊಡಲಿ ಸಿಕ್ಕಿಸಿದಂತೆ ಎಂದುಕೊಂಡು ಅವನನ್ನು ವಿಶ್ರಾಂತಿ ಪಡೆಯುವಂತೆ ಹೇಳಿ, ಹಿಂದಿನ ದಿನವೇ ಸಕಲೇಶಪುರಕ್ಕೆ ಹೋಗಿ ಉಳಿದುಕೊಳ್ಳಬೇಕಾದ್ದರಿಂದ ಬೆಳಿಗ್ಗೆಯಿಂದಲೇ ಮಾಡಿಟ್ಟುಕೊಂಡಿದ್ದ ಸಿದ್ಧತೆಗಳೊಂದಿಗೆ ಗೆಳೆಯ ನಾಸೀರನಿಗೆ ಹೊರಡಲು ಹೇಳಿ ಕಳಿಸಿದೆ.

ಗೆಳೆಯ ನಾಸಿರ್ ಹಾಗೂ ನಾನು ಈ ಚಾರಣ ತಂಡವನ್ನು ಸಕಲೇಶಪುರದಲ್ಲಿ ಸೇರಿಕೊಂಡು ಮುಂದೆ ಹೋಗುವುದೆಂದು ನಿರ್ಧಾರವಾಯ್ತು. ಬೆಳಿಗ್ಗೆ ಮೂಡಿಗೆರೆಯಿಂದ ಹೊರಟು ಬೆಂಗಳೂರಿನಿಂದ ಬರುವ ಎನ್.ವೈ.ಏ.ಸಿ ತಂಡವನ್ನು ಸಮಯಕ್ಕೆ ಸರಿಯಾಗಿ ಸೇರುವುದು ಸಾಧ್ಯವಿಲ್ಲವೆಂದು ಅರಿತು ಹಿಂದಿನ ದಿನವೇ ಸಕಲೇಶಪುರದ ಯಾವುದಾದರೂ ವಸತಿ ಗೃಹದಲ್ಲಿ ತಂಗುವುದು, ಬೆಳಿಗ್ಗೆ ಜೊತೆಯಾಗುವುದೆಂದು ಯೋಜಿಸಿದೆವು. ಮೂರು ದಿನದ ಕಾರ್ಯಕ್ರಮವಾದ್ದರಿಂದ ಕನಿಷ್ಠ ಎರಡು ರಾತ್ರಿ ಕಾಡಿನಲ್ಲಿ ಕಳೆಯಬೇಕಾಗಬಹುದೆಂದು ಬೇಕಾದ ವಸ್ತುಗಳ ಜೋಡಣೆ ಆರಂಭವಾಯ್ತು. ಕತ್ತಿ, ಟಾರ್ಚ್, ಎರಡು ಜೀನ್ಸ್ ಪ್ಯಾಂಟ್, ಎರಡು ಟೀ ಶರ್ಟ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ನೀರಿನ ಬಾಟಲ್ ಇತ್ಯಾದಿ.

ಹಿಂದಿನ ದಿನ ಸಂಜೆ ಐದಕ್ಕೆ ನಾಸೀರ್‍ನನ್ನು ಕಾಯುತ್ತಾ ಕುಳಿತರೆ ಆಸಾಮಿ ಪತ್ತೆಯಿಲ್ಲ!! ಅವನ ಮನೆಗೆ ಹೋದರೆ ಅವನು ಬೆಳಿಗ್ಗೆಯೇ ಉಳ್ಳಾಲದ ಅವನಕ್ಕನ ಮನೆಗೆ ಹೋದನಂತೆ. ಅಯೋಗ್ಯನ ಮೇಲೆ ಅಸಾಧ್ಯ ಸಿಟ್ಟು ಬಂತು. ನಾನಂತೂ ಹೊರಟಾಗಿದೆ ಇನ್ನು ನಿಧಾನಿಸುವ ಮಾತೇ ಇಲ್ಲ. ಆತ ನನಗೊಂದು ಮಾತು ಹೇಳಿ ಹೋಗುವುದಾದರೂ ಬೇಡವಾ? ಸಂಜೆಯ ಕೊನೇ ಬಸ್ ಆರೂಕಾಲಿಗೆ. ಭಾರವಾಗಿದ್ದ ಬ್ಯಾಗನ್ನೆತ್ತಿಕೊಂಡು ಒಂದೇ ಉಸಿರಿಗೆ ಬಸ್‍ಸ್ಟಾಪಿಗೆ ಓಡಿದೆ. ಬಸ್ ಕಂಡಕ್ಟರ್, ಟೀಸೀ ಬಳಿ ಎಂಟ್ರಿ ಹಾಕಿಸಲು ಹೋಗಿದ್ದರೆ, ಡ್ರೈವರ್ ಟೈರ್ ಮೇಲೆ ನಿಂತುಕೊಂಡು ಕಿಟಕಿಯೊಳಗೆ ತಲೆ ತೂರಿಸಿ ಕಿಕ್ಕಿರಿದು ತುಂಬಿದ್ದ ಜನರನ್ನು ಗದರಿಸಿ, ಜಬರಿಸಿ ಹಿಂದೆ-ಮುಂದೆ ಒತ್ತಿಸಿ, ಕೂರಿಸಿ, ನಿಲ್ಲಿಸಿ ಹೈರಾಣಾಗುತ್ತಿದ್ದ. ವಿಪರೀತ ರಷ್ ಆಗಿದ್ದ ಬಸ್‍ಗೆ ಹತ್ತುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದಾಗ ಆ ದಿನ ಶುಕ್ರವಾರವೆಂಬುದು ನೆನಪಿಗೆ ಬಂತು. ಅವತ್ತು ಮೂಡಿಗೆರೆಯ ವಾರದ ಸಂತೆ. ಜನ್ನಾಪುರ, ಬೆಟ್ಟದಮನೆ, ಹುರುಡಿ, ಹಾನುಬಾಳು, ಸಕಲೇಶಪುರದ ಕಡೆಯ ಸಾಕಷ್ಟು ಜನರು ಮೂಡಿಗೆರೆ ಸಂತೆಗೆ ಬಂದವರು ಈ ಕಡೇ ಬಸ್ಸನ್ನು ಆಶ್ರಯಿಸುತ್ತಾರೆ. ಹಾಗೂ ಹೀಗೂ ಕೈ ಮತ್ತು ತಲೆ ತೂರಿಸಿದರೆ, ಮೈಯನ್ನು ಒಳಗೇ ಬಿಟ್ಟುಕೊಳ್ತಿಲ್ಲ ಬಾಗಿಲಲ್ಲೇ ನಿಂತಿರುವ ಜನ. ಮುಡುಗಿಯಾಡಿ ತಲೆ, ಮೈ ತೂರಿಸಿದರೆ ಕೈಯಲ್ಲಿದ್ದ ಮೂಟೆಗಾತ್ರದ ಬ್ಯಾಗ್ ಬಸ್‍ನಿಂದ ಹೊರಗೇ ಇದೆ!!! ಬ್ಯಾಗ್ ಅನ್ನು ಬಿಟ್ಟು ಕೈಯನ್ನು ಒಳಗೆಳೆದುಕೊಳ್ಳುವಂತಿರಲಿಲ್ಲ. ಸ್ವಲ್ಪ ದೂರದ ಗಂಗನಮಕ್ಕಿ ತಲುಪುವಷ್ಟರಲ್ಲಿ ರಸ್ತೆಯ ಗುಂಡಿ ಗೊಟರಿನ ಪ್ರಭಾವದಿಂದ ಆಗುವ ಕುಲುಕಾಟಗಳು, ತಿರುವಿನಲ್ಲಾಗುವ ಒತ್ತುವಿಕೆ, ಗುಂಡಿಯಿಳಿದಾಗ ಆಗುವ ಜಪ್ಪುವಿಕೆಯಿಂದ ಅಂತೂ ಇಂತೂ ನಾನು ಬ್ಯಾಗಿನ ಸಮೇತ ಇಡಿಯಾಗಿ ಬಸ್ ಒಳಸೇರಿದೆ.

ಹಳೇಮೂಡಿಗೆರೆ ರೈಸ್‍ಮಿಲ್ ಬಳಿ ಬರುವಷ್ಟರಲ್ಲಿ ಬಣಕಲ್ ಕಡೆಗೆ ಹೋಗುವ ಮೆಟಾಡೋರೊಂದು ಆ ಏರನ್ನು ಏರಲು ಸಾಧ್ಯವಾಗದೇ ಮುಕ್ಕಿರಿಯುತ್ತಾ ನಿಂತಿತ್ತು. ಎಂಟ್ಹತ್ತು ಜನ ಇಳಿದು ಅದನ್ನು ಹಿಂದಿನಿಂದ ನೂಕುತ್ತಿದ್ದರು. ಆ ಮೆಟಾಡೋರ್ ಮೂಡಿಗೆರೆಗೇ ಅತ್ಯಂತ ಹಳೆಯದು. ಡ್ರೈವರ್ ಕಂ ಮಾಲೀಕ ನುಕ್ಕಣ್ಣ ಇಡೀ ಮೂಡಿಗೆರೆಗೇ ವಲ್ರ್ಡ್ ಫೇಮಸ್ಸು. ಮೂಡಿಗೆರೆ ಬಸ್ ನಿಲ್ದಾಣದಿಂದ ಗಂಗನಮಕ್ಕಿಯವರೆಗೆ ತೀರಾ ಇಳಿಜಾರಿದೆ. ಬಸ್‍ಸ್ಟ್ಯಾಂಡಿನಲ್ಲಿ ಮೆಟಾಡೋರ್ ನಿಲ್ಲಿಸಿಕೊಂಡು “ಯಾರ್ರೀ ಹೊರಟ್ಟಿ, ಸಬ್ಬೇನಳ್ಳಿ, ಚಕ್ಮಕ್ಕಿ, ಬಣಕಲ್-ಕೊಟ್ಟಿಗೆಹಾರ” ಎಂದು ಕೂಗತೊಡಗಿದರೆ ಇಪ್ಪತ್ತು-ಮೂವತ್ತು ನಿಮಿಷದಲ್ಲಿ ಭರ್ತಿಯಾಗುತ್ತಿತ್ತು. ಇಟ್ಟಿರೋದು ಮೆಟಾಡೋರ್, ತುಂಬಿಸೋದು ಮಾತ್ರ ಕೆ.ಎಸ್.ಆರ್.ಟಿ.ಸಿ. ಬಸ್‍ನಷ್ಟೇ. ಇಲ್ಲಿ ಸ್ಟಾರ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಕಂಡಕ್ಟರ್ ಗಣೇಶನಿಗೆ ‘ಏಯ್ ಬಡಿಗೆ ತೆಗಿಯೋ’ ಎಂದ ಕೂಡಲೇ ಅವನು ಅದಕ್ಕಾಗಿಯೇ ಕಾಯುತ್ತಿದ್ದವನಂತೆ ಹಿಂದಿನ ಟೈರಿಗೆ ಅಡ್ಡ ಕೊಟ್ಟಿದ್ದ ಬಡಿಗೆಯನ್ನು ಕಾಲಿನಿಂದ ಒದ್ದು ಬಾಗಿಲು ಪಕ್ಕದ ಸೀಟಿನಡಿ ತುರುಕುತ್ತಿದ್ದಂತೆ ಮೆಟಾಡೋರ್ ನಿಧಾನವಾಗಿ ಜೀರ್ ಜಿಕ್ ಜೀರ್ ಜಿಕ್ ಎಂದು ಮುಂದುವರೆಯುತ್ತಾ ವೇಗ ಪಡೆದುಕೊಳ್ಳಲಾರಂಭಿಸುತ್ತದೆ. ಗಂಗನಮಕ್ಕಿಯವರೆಗೆ ವೇಗವಾಗಿ ಓಡಿದ ಮೆಟಾಡೋರ್ ಅಷ್ಟರೊಳಗೆ ಜರ್ಕ್‍ನಲ್ಲಿ ಸ್ಟಾರ್ಟ್ ಆದರೆ ಆಯ್ತು, ಇಲ್ಲದಿದ್ದರೆ ಪ್ರಯಾಣಿಕರನ್ನು ದೇವರೇ ಕಾಪಾಡಬೇಕು. ಹಳೇಮೂಡಿಗೆರೆ ಬಳಿ ಏರು ಶುರುವಾಗುವುದರಿಂದ ನುಕ್ಕಣ್ಣ “ಬಡಿಗೆ ಕೊಡೋ, ಬಡಿಗೆ ಕೊಡೋ” ಎಂದು ಬೊಬ್ಬೆ ಹೊಡೆಯಲಾರಂಬಿಸುತ್ತಾನೆ. ಗಣೇಶ ಬಡಿಗೆ ಕೊಟ್ಟ ಕೂಡಲೇ, ಯುಧ್ಧ ಕಾಲದಲ್ಲಿ ಸರ್ಕಾರ ಹೇಳುವಂತೆ “ಹೆಂಗಸ್ರು, ಮಕ್ಕಳು, ವಯಸ್ಸಾದವರು ಬಿಟ್ಟು ಉಳಿದವರೆಲ್ಲಾ ಇಳೀರಿ. ಎಲ್ಲಾ ಕೈಕೊಡಿ ಐಸಾ, ತಳ್ಳುನೂಕು ಐಸಾ” ಎನ್ನಲು ಪ್ರಾರಂಬಿಸುತ್ತಾನೆ. ಎರಡು ಕಿಲೋಮೀಟರು ಡೌನಿನಲ್ಲಿ ಬಂದುದು ಈಗ ಅರ್ಧ ಕಿಲೋಮೀಟರು ಅಪ್ಪನ್ನು ತಳ್ಳಿ ಹತ್ತಿಸಬೇಕು!! ಅವರ ಕರ್ಮ!! ಶಪಿಸುತ್ತಾ ನೂಕುತ್ತಿದ್ದರು.

ಇಲ್ಲಿ ನಾ ಏರಿದ್ದ ಬಸ್ಸಿನೊಳಗೆ ಯಾರೋ ಒಬ್ಬ ಅಸಾಮಿ ಒಂದು ರೂಪಾಯಿಗೆ ಹದಿನೈದು ಮೀನಿನಂತೆ ಅಗ್ಗವಾಗಿ ಸಿಕ್ಕಿತೆಂದು ಸಂತೆಯಲ್ಲಿ ಕೊಂಡಿದ್ದ ಭೂತಾಯಿ ಮೀನನ್ನು ಪ್ಲಾಸ್ಟಿಕ್ ವೈರ್ ಚೀಲದಲ್ಲಿ ಹಾಕಿಕೊಂಡು ಅದನ್ನಿಡಲು ಜಾಗವಿಲ್ಲದೇ ಪ್ರಯಾಣಿಕರು ನೇತಾಡಲು ಜೋತು ಬಿಟ್ಟಿರುವ ಹಿಡಿಕೆಯನ್ನು ಹಿಡಿದುಕೊಂಡಿರುವ ಕೈಯಲ್ಲೇ ಹಿಡಿದುಕೊಂಡಿದ್ದಾನೆ. ಅದರೊಳಗಿಂದ ಜಿನುಗುವ ಮೀನಿನ ಅಸಹ್ಯಭರಿತ ರಸ; ಚೀಲ ಜೋತಾಡುತ್ತಾ, ತೂಗಾಡುತ್ತಿದ್ದಂತೆ ಕುಳಿತಿದ್ದವರ, ನಿಂತಿದ್ದವರ ಮೈಮೇಲೆ, ಬಟ್ಟೆ ಮೇಲೆ, ತಟ್ ತಟ್ಟೆಂದು ಬೀಳುತ್ತಿತ್ತು. ಹೈಸ್ಕೂಲು ಹುಡುಗಿಯೊಬ್ಬಳ ಯೂನಿಫಾರಂನ ಜಾಕೆಟ್ ಮೀನಿನ ರಸದಿಂದ ತೋಯ್ದು ಘಮ್ಮೆನ್ನಲಾರಂಭಿಸಿತು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕಪ್ಪು ಕೋಟಿನ, ಕಪ್ಪು ಟೋಪಿಯ ತೋಟಾದ ಕರೀಗೌಡರು ಈ ಅಸಾಮಿಗೆ ಗದರಲು ಬಾಯಿ ತೆರೆಯುತ್ತಿದ್ದಂತೆ ಅವರ ಮೂಗು ಮತ್ತು ಬಾಯಿಯ ನಡುವಿನ ಜಾಗಕ್ಕೇ ಲಥ್ ಎಂದು ಮೀನಿನ ರಸ ಮೆತ್ತಿಕೊಳ್ಳಬೇಕೇ? “ಗಬ್ಲು ಶನಿ ಮುಂಡೆಮಗ್ನೇ, ಮೀನ್‍ಸಾರು ತಿನ್ಬೇಕು ಅಂತಾ ನಮಗೆಲ್ಲಾ ಪನ್ನೀರ್ ಇಡ್ತಾ ಇದಿಯಾ? ರೀ ಕಂಡಕ್ಟ್ರೇ, ಈ ಕಸಗಲು ನನ್‍ಮಗನ್ನ ಇಳಿಸ್ತೀರೋ ಇಲ್ಲ ನಾವೇ ಇಳೀಬೇಕೋ? ನಿಲ್ಲಿಸ್ರೀ ಬಸ್! ನಿಲ್ಲಿಸ್ರೀ ಡ್ರೈವರ್ರೇ!!” ಎಂದು ಗೌಡರು ಭೋರ್ಗರೆಯತೊಡಗಿದರು.

ಆ ದಾರಿಯಲ್ಲಿ ಆ ದಿನಕ್ಕೆ ಅದೇ ಕಡೇ ಬಸ್ಸಾದ್ದರಿಂದ ಈ ಕರೀಗೌಡರೇನೂ ಬಸ್ಸಿನಿಂದ ಇಳಿಯುತ್ತಿರಲಿಲ್ಲ, ಅದು ಬೇರೆ ಪ್ರಶ್ನೆ. ಕಂಡಕ್ಟರ್ ಇನ್ನೂ ಡ್ರೈವರ್ ಹಿಂಭಾಗದಲ್ಲಿ ಟಿಕೇಟ್ ಕೊಡ್ತಾ ಇದ್ದ. ಹ್ಯಾಂಡ್‍ಪೋಸ್ಟ್‍ನಲ್ಲಿ ರೈಸ್‍ಮಿಲ್‍ಗೆ ಬಂದಿದ್ದ ಅನೇಕರು ಅಕ್ಕಿ-ನುಚ್ಚು, ತೌಡು ಮೂಟೆಯೊಂದಿಗೆ ಹಿಂಬದಿಯಲ್ಲಿ ಮಾತ್ರ ಪ್ರವೇಶದ್ವಾರವಿದ್ದ ಬಸ್ಸನ್ನೇರಲು ಪೈಪೋಟಿ ನಡೆಸತೊಡಗಿದರು. ಈ ಬಸ್ ಬಿಟ್ಟರೆ ಆ ದಿನ ಊರಿಗೆ ಹೋಗುವಂತೆಯೇ ಇರಲಿಲ್ಲವಾದ್ದರಿಂದ ಮೂರ್ನಾಲ್ಕು ಜನ ಮೂಟೆಯನ್ನು ಬಸ್‍ನ ಪ್ರವೇಶದ್ವಾರದ ಬಳಿಯೇ ರಸ್ತೆ ಮೇಲಿಟ್ಟು ಬಸ್‍ನ ಮುಂಭಾಗಕ್ಕೆ ಬಂದು ತಮ್ಮನ್ನು, ತಮ್ಮ ಮೂಟೆಯನ್ನು ಹತ್ತಿಸಿಕೊಳ್ಳದೇ ಬಸ್ ಮುಂದಕ್ಕೆ ಹೋಗುವಂತಿಲ್ಲ ಎಂಬಂತೆ ತಡೆಯೊಡ್ಡಿದ್ದರು.

ಇತ್ತ ಬಸ್‍ನೊಳಗೆ ಮೀನಿನ ಅಸಾಮಿ “ಏನ್ ಸಾವ್ಕಾರ್ರೇ ನಿಮಗೇನೋ ಸೀಟ್ ಸಿಕ್ಕಿದೆ ಅಂತಾ ರೋಪ್ ಹಾಕ್ತೀರಾ, ನಾನೇನ್ ಪುಗ್ಸಟ್ಟೆ ಹೋಗ್ತಿಲ್ಲ. ನಾನೂ ಟಿಕೇಟ್ ತಗಾಣದೇಯ ತಿಳ್ಕಳೀ” ಎಂದ. ‘ರೀ ಕಂಡಕ್ಟ್ರೇ, ಇಳಿಸ್ರೀ ಈ ಶನಿಮುಂಡೇಮಗನ್ನ. ಕುಡಿದ್ ಬೇರೆ ಬಂದಿದಾನೆ!’ ಎಂದರು ಕರೀಗೌಡರು. ಅಷ್ಟರಲ್ಲಿ ಯಾರೋ ಬಸ್ ಹತ್ತಲಿಕ್ಕೆ ಯತ್ನಿಸುತ್ತಾ ಹಿಡಿದುಕೊಳ್ಳಲು ಏನೂ ಸಿಗದೇ ನನ್ನ ಪ್ಯಾಂಟಿನ ಬೆಲ್ಟ್ ಅನ್ನು ಬಲವಾಗಿ ಹಿಡಿದು ಅದರ ಸಪೋರ್ಟ್‍ನಲ್ಲಿ ಬಸ್‍ನೊಳಗೆ ನುಸುಳಲು ಹಲ್ಲುಕಚ್ಚಿ ಪ್ರಯತ್ನಿಸಬೇಕೇ!! ಕೇವಲ ಒಂದೇ ಕೈಯಲ್ಲಿ ಕಂಬಿ ಹಿಡಿದು ಇನ್ನೊಂದು ಕೈಯಲ್ಲಿ ಬ್ಯಾಗಿನೊಂದಿಗೆ ಬ್ಯಾಲೆನ್ಸ್ ಮಾಡ್ತಿದ್ದ ನಾನು ಸಮತೋಲನ ತಪ್ಪಿ ಅರ್ಧಚಂದ್ರಾಕಾರವಾಗಿ ರೌಂಡ್ ಹೊಡೆದೆ. ‘ಬಿಡ್ರೀ, ಯಾರ್ರೀ ಅದು? ಬಿಡ್ರೀ’ ಎಂದರೂ ಆ ಮನುಷ್ಯ ಇನ್ನೂ ಸ್ಟಾರ್ಟಿಂಗ್‍ನಲ್ಲೇ ಇದ್ದ ಈ ಬಸ್ಸನ್ನು ಬಿಟ್ರೆ ಕೆಟ್ಟೆ ಎಂಬಂತೆ ಇನ್ನಾರದೋ ಕೈಯಲ್ಲಿದ್ದ ಬ್ಯಾಗನ್ನೇ ಹಿಡಿದು ಜಗ್ಗತೊಡಗಿದ. ಫ್ಯಾಕ್ಟಂಫಾಸ್ ಇಪ್ಪತ್ತು ಇಪ್ಪತ್ತು ಸೊನ್ನೆ ಹದಿನೈದು ಎಂಬ ಗೊಬ್ಬರದ ಚೀಲದಿಂದ ಸೂಬರಕ್ಕೆ ಹೊಲಿಸಿದ್ದ ಆ ಚೀಲದ ಹ್ಯಾಂಡಲ್ ಪಠಾರನೆ ಕಿತ್ತುಹೋಗಿ ಬ್ಯಾಗಿನೊಂದಿಗೆ ಆ ಮನುಷ್ಯನೂ ಬಸ್‍ನಿಂದ ಕೆಳಗೆ ಉದುರಿದ.
ಬ್ಯಾಗಿನಲ್ಲಿದ್ದ ಟೊಮ್ಯಾಟೋ, ಈರುಳ್ಳಿ, ಬದನೇಕಾಯಿ, ಬಿಡಿಸೋಕಾಳು, ಮೂಲಂಗಿ, ಕಡ್ಲೆಪುರಿ, ಹೇರ್‍ಪಿನ್, ಭೂತಾಯಿ ಮೀನು, ಮೆಣಸಿನಕಾಯಿ ಬೋಂಡಾ, ನೆಕ್ಕರೆ ಮಾವಿನಹಣ್ಣು, ಹೊಸ ಹವಾಯಿ ಚಪ್ಲಿ ಟಾರು ಕಿತ್ತ ರಸ್ತೆಯಲ್ಲಿ ಚೆಲ್ಲಾಡಿಹೋದವು. ಬ್ಯಾಗಿನ ಯಜಮಾನ ನೋಡ್ತಾನೆ, ಕೈಯಲ್ಲಿ ಬ್ಯಾಗಿಲ್ಲ!! ಕ್ಷುದ್ರನಾಗಿ ತನ್ನ ಗ್ರಾಮೀಣ ಡಿಕ್ಷನರಿಯನ್ನೇ ಓಪನ್ ಮಾಡಿದ. ಕೆಳಗಿಳಿದರೆ ಎಲ್ಲಿ ಮತ್ತೆ ಹತ್ತಲು ಆಗುವುದಿಲ್ಲವೋ ಎಂದು “ಎಲ್ಲಾ ತುಂಬಿ ತಂದುಕೊಡ್ತೀಯೋ ಇಲ್ಲಾ ನಿನ್ ತಿಥಿನೇ ಮಾಡ್ತೀನಿ. ಏನ್ ನೋಡ್ತಿದ್ದೀಯ. ತುಂಬ್ಸೋ, ತುಂಬ್ಸು” ಎಂದು ಬೊಬ್ಬಿರಿಯತೊಡಗಿದ. ಬಿದ್ದವ್ನು ಕೆಲ್ಸ ಕೆಟ್ಟೋಯ್ತಲಪ್ಪಾ ಎಂದು ಉರುಳುರುಳಿ ಹೋಗ್ತಿದ್ದ ಈರುಳ್ಳಿಯನ್ನು, ಟೊಮ್ಯಾಟೋವನ್ನು ಹಿಡಿಯಲು ಹೋಗಿ ಎತ್ತಿನ ಗಾಡಿಯೊಂದರಡಿ ಸಿಕ್ಹಾಕಿಕೊಂಡು ಗೋಳಾಡತೊಡಗಿದ. ಈ ಎಲ್ಲಾ ಗೊಂದಲಗಳ ನಡುವೆಯೇ ಬಳೆ ಮಾರುವ ಹೆಂಗಸೊಂದು “ಅಣ್ಣಾ, ನಿಮ್ ಕೈಮುಗಿತೀನಣ್ಣಾ ಇದೇ ಲಾಸ್ಟ್ ಬಸ್. ಈಟೇ ಈಟು ಜಾಗ ಕೊಡಣ್ಣಾ” ಎಂದು ಬ್ಯಾಗ್ ಕಳೆದುಕೊಂಡು ಕೂಗಾಡುತ್ತಿದ್ದವನನ್ನು ಕೇಳತೊಡಗಿದಳು. ಮೊದಲೇ ತನ್ನ ಬ್ಯಾಗಿನ ರಹಸ್ಯವೆಲ್ಲಾ ಹ್ಯಾಂಡ್ಪೋಸ್ಟಿನಂಥ ಮೂರ್ದಾರಿ ಕೂಡುವಲ್ಲಿ ಜಗಜ್ಜಾಹಿರಾದ್ದರಿಂದ ವ್ಯಗ್ರನಾಗಿದ್ದ ಈ ಮನುಷ್ಯ “ನಿನಗೆ ಹತ್ತಕ್ಕೆ ಈ ಬಸ್ಸೇ ಬೇಕಾ? ಎಲ್ಲಾದ್ರೂ ನುಸ್ಕೊಂಡ್ ಸಾಯಿ, ನಾವೇ ಸರ್ಕಸ್ ಮಾಡ್ತಿದ್ದೀವಿ.” “ಏಯ್ ಎತ್ತೋ ಒಂದೇ ಒಂದು ಸಾಮಾನು ಕಡಿಮೆ ಆಗಿದ್ರೂ ನಿನ್ನ ಇಲ್ಲೇ ಹಾಕಿ ಕುಕ್ಕರಿಸ್ತೀನಿ” ಎಂದು ಒಂದೇ ಮಾತಿನಲ್ಲಿ ಇಬ್ಬರನ್ನೂ ಜಾಡಿಸತೊಡಗಿದ.
ಇತ್ತ ಬಸ್‍ನೊಳಗೆ ಭೂತಾಯಿಮೀನಿನ ರಸವತ್ತಾದ ಪರಿಮಳ, ಯಾರೋ ಮುಡಿದಿದ್ದ ಪಾತಾಳಗರುಡ ಕುಡಿಯ ತಲೆನೋವು ತರಿಸುವ ವಾಸನೆ, ಶುಕ್ರವಾರದ ನಮಾಜಿಗೆ ಬಂದಿದ್ದ ಕಾಕಾಗಳ ಅತ್ತರಿನ ಘಮಲು, ಪೋರ್ಕ್ ಬಾಯಮ್ಮನ ಹಂದಿಮಾಂಸದ ಪ್ಯಾಕೆಟ್ಟಿನ ಹಸಿಮಾಂಸ ವಾಸನೆ, ಗದ್ದೆ ಹೂಡಲು ಸಿದ್ದ ಮಾಡಿಸಿಕೊಂಡ ಟಿಲ್ಲರಿನ ಕೇಜ್‍ವ್ಹೀಲಿನ ಗ್ರೀಸ್ ವಾಸನೆ, ಶನಿದೇವರ ಫೋಟೋವನ್ನು ಎದೆ ಮೇಲೆ ತೂಗುಹಾಕಿಕೊಂಡು ಕಾಣೆಕೆಯೆತ್ತುವ ದೇವರ ಏಜೆಂಟ್, ಕೆಂಪು, ನೀಲಿ, ಹಸಿರು ಟೇಪ್‍ಗಳಿಂದ ಜಡೆ ಕಟ್ಟಿದ, ಬಿಳಿ ರವಿಕೆ, ಹೂ ಹೂವಿನ ಲಂಗದ, ಅದೇ ಕೆಂಪು, ನೀಲಿ, ಹಸಿರು ಬಣ್ಣದ ದಾವಣಿಯ ಹದಿನಾರು ಕೆಲಸದ ಹುಡುಗಿಯರು ಕಚಪಚನೆ ಸ್ಥಳೀಯರಿಗೆ ಸುಲಭವಾಗಿ ಅರ್ಥವಾಗದ ಭಾಷೆಯಲ್ಲಿ ತಮ್ಮತಮ್ಮಲ್ಲೇ ಭಾರೀ ಹುರುಪಿನಿಂದ ಮಾತನಾಡುತ್ತಿದ್ದರು. ಸ್ಥಳೀಯ ಪ್ಯಾಂಟುಷರ್ಟಿನ ಹುಡುಗರೆದುರು ಹೂಹೂವಿನ ಚಿತ್ರಗಳಿದ್ದ ಲುಂಗಿಯನು ಸುತ್ತಿಕೊಂಡು ಕೀಳರಿಮೆಯಿಂದ ನಿಂತಿದ್ದ ಅದೇ ಹದಿನಾರ್ಕೆಲಸದ ಯುವಕರು. ಬೇಕೆಂದೇ ದಾವಣಿಗಳನ್ನು ಒತ್ತಿಕೊಂಡು ನಿಂತು ಆಚೀಚೆ ಹೊಸೆದಾಡುವ ಕಾಲೇಜು ಪಡ್ಡೆಗಳು. ದಾವಣಿಗಳ ರಕ್ಷಣೆಗೆ ಹಾತೊರೆದು ಅಡ್ಡಡ್ಡ ನಿಲ್ಲುವ ಅದೇ ಹದಿನಾರ್ಕೆಲಸದ ಮುದುಕಿಯರು, ಏನಾದರಾಗಲೀ ಪೆಟ್ಟು ಬೀಳದಿದ್ದರೆ ಸಾಕೆಂದು ಎತ್ತಲೋ ನೋಡುವ ಅದೇ ಗುಂಪಿನ ಹಿರಿಯ ಗಂಡಸರು.
ವಾರದ ಹಸುಗೂಸನ್ನೆತ್ತಿಕೊಂಡಿದ್ದ ಹೆಂಗಸು ತನ್ನ ಪಕ್ಕ ಕೂತಿದ್ದ ಟೀಚರಮ್ಮನಿಗೆ “ಸರ್ಕಾರಿ ಆಸ್ಪತ್ರೆಯಂತೆ ಆಸ್ಪತ್ರೆ, ಮನುಷ್ಯರಾದವ್ರು ಯಾರಾದ್ರೂ ಇರ್ತಾರಾ ಅಲ್ಲಿ? ಕೆಲ ಡಾಕ್ಟ್ರು ಯಾಕಾದ್ರೂ ಈ ಆಸ್ಪತ್ರೆ ಇದೆಯಪ್ಪಾ ಅಂತ ಬೇಕೋಬೇಡವೋ ಎಂದು ಬರ್ತಾರೆ. ಇನ್ಕೆಲವ್ರನ್ನ ನೋಡಿದ್ರೆ ಇಲ್ಲದಿದ್ದ ಖಾಯಿಲೆ ಹೊಸದಾಗಿ ಬರುತ್ತೆ. ಇನ್ನು ಕೆಲಸಗಾರರೋ ಈ ಕ್ಷಣ ಇಲ್ಲಿದ್ರೆ ಮುಂದಿನ ಕ್ಷಣ ಕ್ಯಾಂಟೀನಿನಲ್ಲಿ ಹರಟೆ ಹೊಡಿತಾಇರ್ತಾರೆ. ಯಾರಾದ್ರೂ ಮಾತಾಡಿಸಿದ್ರೆ ಇದ್ಯಾವ ಉಪದ್ರವಾಂತ ಹುಳವನ್ನ ನೋಡಿದಂಗೆ ನೋಡ್ತಾರೆ ಮಾರಾಯ್ತಿ. ಸರ್ಕಾರಿ ಸಂಬ್ಳಕ್ಕೆ ಕೆಲಸ ಮಾಡಿದ್ರೂ ಏನೋ ಮಹಾ ಉಪಕಾರ ಮಾಡ್ತಿದೀವಿ ಅನ್ನೋ ತರಾ ಆಡ್ತಾರೆ. ಸುಮ್‍ಸುಮ್ನೆ ಯಾವ್ಯಾವುದೋ ಕಾರಣಕ್ಕೆ ಅತ್ತಿಂದಿತ್ತ ಓಡಾಡ್ತಾನೇ ಇರ್ತಾರೆ. ಆ ಗಂಡಹೆಂಡ್ತಿ ಡಾಕ್ಟ್ರಿದ್ರಲ್ಲ, ಅವಾಗ ಎಷ್ಟು ಚೆನ್ನಾಗಿತ್ತು. ಈಗೇನು ರೋಗ ಬಡಿದಿದೆಯೋ ಆ ಆಸ್ಪತ್ರೆಗೆ, ದೇವ್ರಿಗೇ ಗೊತ್ತು. ಇರೋದ್ರಲ್ಲಿ ಕುಳ್ಳಗೆ ಇದಾರಲ್ಲ ಮತ್ತೆ ಎತ್ತರಕ್ಕೆ ಕನ್ನಡ್ಕ ಹಾಕ್ಕಂತಾರಲ್ಲ, ಅವ್ರೇನೋ ಪರ್ವಾಗಿಲ್ಲ. ಇನ್ನು ಕೆಲಸಗಾರ್ರಲ್ಲಿ ಅದೇ ಆಚಾರ್ರು, ಶೆಟ್ರು, ನಾಯಕ್ರು ಇದ್ದದ್ದರಲ್ಲಿ ಆಗಬಹುದು. ಹಿಂಗೇ ಮಾಡಿ ಜನಾ ಬರ್ದಂಗೆ ಮಾಡಿ ಮಾಡಿ, ಇಷ್ಟು ದೊಡ್ಡ ಆಸ್ಪತ್ರೆನ ಯಾರಾದ್ರೂ ಪ್ರೈವೇಟ್‍ನವರಿಗೆ ಮಾರೋ ಅಂದಾಜಿದೆಯೇನೋ?” ಎಂದಳು.

“ಹೂ, ಎಷ್ಟೋ ಸರ್ಕಾರಿ ಸಂಸ್ಥೆಗಳನ್ನ ಸುಮ್ಮನೇ ಕೆಲಸಗಾರರನ್ನ ಸಾಕಲಿಕ್ಕೆ ನಡಿಸ್ತಾ ಇದಾರೆ. ಯಾವಾಗ್ಲೂ ಲಾಸ್‍ನಲ್ಲೇ ನಡಿತಿರುತ್ತೆ ಅಥವಾ ನಡೆಸುತ್ತಾ ಇರ್ತಾರೆ. ರೋಗಗ್ರಸ್ತ ಅಂತಾ ತೋರಿಸಿ ಒಂದು ದಿನ ಯಾರೋ ಅವರಿಗೇ ಬೇಕಾದವರಿಗೆ, ಖಾಸಗಿಯವರಿಗೆ ಪುಗ್ಸಟ್ಟೆ ಮಾರಿದಂತೆ ಮಾರಿ ಕೈತೊಳ್ಕೋತಾರೆ. ಅವನು ಕಡಿಮೆ ಕೆಲಸಗಾರರಿಂದಲೇ ಜಾಸ್ತಿ ಉತ್ಪಾದನೆ ಮಾಡಿತೋರಿಸಿ ಲಾಭ ಮಾಡ್ಕೋಳ್ತಾನೆ. ಇದೊಂಥರಾ ನಾ ಸತ್ತಂಗೆ ಮಾಡ್ತೀನಿ, ನೀ ಅತ್ತಂಗೆ ಮಾಡು ಎನ್ನುವಂತೆ. ಸರ್ಕಾರಿ ಕೆಲಸ ಅಂದರೆ ಬೇಕಾಬಿಟ್ಟಿಯಾಗಿ ಕಾಟಾಚಾರಕ್ಕೆ ಲೆಕ್ಕ ತೋರಿಸಲಿಕ್ಕೆ ಮಾಡುವುದು ಅಂತಾಗಿದೆ. ನಾನೂ ಸರ್ಕಾರಿ ಸ್ಕೂಲ್ ಟೀಚರ್ರೇ. ನಮ್ಮನ್ನು ಸರ್ಕಾರ ಹೆಂಗೆ ದುಡಿಸ್ಕೋತಿದೆ ಗೊತ್ತಾ. ಕೋಳಿ-ಕುರಿಗಳ ಲೆಕ್ಕ ಬರಿಯೋಕೂ ನಾವೇ, ಓಟ್ ಲಿಸ್ಟ್ ಮಾಡಕ್ಕೂ ನಾವೇ. ನಂದು ನೋಡಿ, ದಾವಣಗೆರೆ; ನನ್ನನ್ನ ಇಲ್ಲಿಗೆ ಮುನ್ನೂರು ಕಿಲೋಮೀಟರು ದೂರಕ್ಕೆ ವರ್ಗ ಮಾಡಿದ್ದಾರೆ. ನನ್ನ ಗಂಡ ವ್ಯವಸಾಯ ಮಾಡ್ತಾರೆ. ಎರಡು ಸಣ್ಣ ಮಕ್ಕಳಿದಾವೆ. ಮನೇಲಿ ವಯಸ್ಸಾದ ಅತ್ತೆ-ಮಾವ ಇದಾರೆ. ಇಲ್ಲಿಯವರು ಕೆಲ ಟೀಚರ್‍ಗಳು ನಮ್ಮೂರಿನ ಕಡೆ ಇದ್ದಾರೆ. ಅವರಿಗೂ ತೊಂದರೆ, ನಮಗೂ ತೊಂದರೆ. ನಾವಿಲ್ಲಿ ದಿನಕ್ಕೊಂದೇ ಬಸ್ ಹೋಗುವ ಗುತ್ತಿ ಅನ್ನೋ ಕುಗ್ರಾಮಕ್ಕೆ ಹೋಗಿ ಪಾಠ ಮಾಡಬೇಕು. ಕೆಲಸ ಮಾಡುವ ಅನುಕೂಲವಿಲ್ಲ, ಕೆಲಸ ಮಾಡದೆ ವಿಧಿ ಇಲ್ಲ. ನನ್ನ ಸ್ಟಾಪ್ ಬಂತು ನಾನಿಳೀತೀನಿ” ಎಂದು ಆ ಇಕ್ಕಟ್ಟಿನ ನಡುವೆಯೇ ನುಗ್ಗಾಡಿಕೊಂಡು ಅಂತೂ ಇಂತೂ ಕೆಳಗಿಳಿದಳು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬರುತ್ತಿರುವ ವಾರದ ಮಗುವಿನ ತಾಯಿ, ಈ ಸಖೆ-ಬಿಸಿಗೆ ರಚ್ಚೆ ಹಿಡಿದು ಕಿರುಚಾಡುತ್ತಾ ಸಂಕಟಪಡುತಿದ್ದ ಮಗುವನ್ನು ತನ್ನ ತಾಯಿಗೆ ಕೊಟ್ಟು ಸಮಾಧಾನಿಸಲು ಹೇಳುತ್ತಿದ್ದಳು. ತಾರಕ ಸ್ವರದಲ್ಲಿ ಅಳುತಿದ್ದ ಮಗುವಿನತ್ತ ತಿರುಗಿ ಕೂತಲ್ಲಿಂದಲೇ ಕತ್ತು ಎತ್ತರಿಸಿ ನೋಡಿದ ತೋಟಾದ ಕರೀಗೌಡರು, “ಮಗೀಗೆ ಉಸಿರು ಕಟ್ಟೋಹಾಗೆ ಸ್ವಟರ್ರು, ಮಂಕೀಟೋಪಿ ಹಾಕಿ, ಬಿಗಿಯಾಗಿ ಅವುಚಿಕೊಂಡು ಕೂತ್ರೆ, ಆ ಮಗಾ ಬದ್ಕಿರ್ತದಾ? ಮೊದ್ಲು, ಹಾಕಿರಾ ಟೋಪಿ, ಸ್ವಟರ್ನಾ ತಗ್ದು, ಗಾಳಿಯಾಡಂಗೆ ಮಾಡಿ” ಎಂದವರೇ, ‘ಮಕ್ಳು ಹುಟ್ಸುದ್ರೆ ಸಾಕಾಗಲ್ಲ, ಸಾಕದ್ನೂ ಕಲೀಬೇಕು’ ಎಂದು ಮೆತ್ತಗೆ ಅಂದ್ರು.

ಕಾಲೇಜಿಗೆ ತರಿಸುತ್ತಿದ್ದ ಇಂಗ್ಲೀಷ್ ಪೇಪರನ್ನು ಬಸ್ಸಿನಲ್ಲಿ ವಿಶಾಲವಾಗಿ ತೆರೆÀದು ಭಾರೀ ಸಂಶೋಧಕನ ಗತ್ತಿನಲ್ಲಿ ಓದುತ್ತಾ ಗಮನ ಸೆಳೆಯಲು ಯತ್ನಿಸುತ್ತಿದ್ದ ಓರ್ವ ಕಾಲೇಜು ಉಪನ್ಯಾಸಕನ ಪಕ್ಕ ಕುಳಿತಿದ್ದ ಗುಟಕಾ ತಿಂದು ಗೆದ್ದಲಾಗಿರುವ ಹಲ್ಲುಗಳ ಹೈಸ್ಕೂಲ್ ಮೇಷ್ಟ್ರೊಬ್ಬರು ಜನರನ್ನು “ಹೀಗೆ ಬನ್ನಿ, ಅಲ್ಲಿ ನಿಲ್ಲಿ, ಮುಂದೆ ಕುಳಿತುಕೊಳ್ಳಿ, ಚೇಂಜ್ ರೆಡಿ ಇಟ್ಕೊಳಿ” ಎಂದು ಕಂಡಕ್ಟರ್‍ನ ಸಹಾಯಕನಾಗಿ ಅಡಿಷನಲ್ ಚಾರ್ಜ್ ತೆಗೆದುಕೊಂಡಿದ್ದರು. ಅದರೊಳಗೆ ಕಣ್ಣು ಕಾಣದ ಭಿಕ್ಷುಕನೊಬ್ಬ ಎರಡೂ ಬದಿಯ ಸೀಟುಗಳ ನಡುವಿನ ಆಧಾರ ಕಂಬವನ್ನೇ ಎಂಟಾಣೆ ನಾಣ್ಯಗಳಿಂದ ಕುಟ್ಟುತ್ತಾ “ಶಿವಪ್ಪಾ ಕಾಯೋ ತಂದೆ” ಹಾಡನ್ನು ಶುರು ಮಾಡಿದ.

ಇತ್ತ ರೈತರ ಒತ್ತಡಕ್ಕೆ ಮಣಿದ ಡ್ರೈವರ್ ತನ್ನ ಕ್ಯಾಬಿನ್ನಿನಲ್ಲೇ ಕೆಲವೊಂದು ಮೂಟೆಗಳನ್ನಿಡಲು ಅವಕಾಶ ಮಾಡಿಕೊಟ್ಟ ನಂತರ ಅಂತೂ ಇಂತೂ ಬಸ್ ಎಂದಿನಂತೆ ತನ್ನ ಸಕಲೇಶಪುರ ಪ್ರಯಾಣ ಮುಂದುವರೆಸಿತು. “ರೀ, ಕಂಡಕ್ಟ್ರೇ! ಈ ಕುಡುಕನ್ನ ಇಳೀಸ್ಲಿಲ್ಲಲ್ರೀ, ವಾಸನೆ ತಡೆಯಕ್ಕಾಗ್ತಿಲ್ಲಾ. ಈ ಮೀನು ಬೇರೆ! ನಮ್ಮ ಜೀವಾನೆ ಹೋಗ್ತಾ ಇದೆ. ಕೆಳಗಿಡೋ ಮೀನಿನ ಕವರ್‍ನಾ, ಕೆಳಕ್ಕಾಕೋ ಮಾರಾಯ!” ಎಂದರು ಕರೀಗೌಡರು. “ಏನ್ರೀ, ಗೌಡ್ರೇ ಭಾರೀ ಸಂಪನ್ನರಂಗೇ ಮಾತಾಡ್ತೀರಾ, ನಿಮ್ ಬ್ಯಾಗ್ ತೋರಿಸಿ, ನೀವು ಮೀನ್ ತಗೊಂಡಿಲ್ವಾ? ತೋರ್ಸಿ ನೋಡಾಣ. ನಿಮಗೇನೋ ಜಾಗ ಸಿಕ್ಕಿದೆ ಅದಿಕ್ಕೆ ಆರಾಮಾಗಿ ಕೂತಿದೀರಿ. ನೀವ್ ಕುಡಿಯಲ್ವಾ? ಆದ್ರೆ ಕೆಂಪನೇದನ್ನ ಕುಡಿತೀರಿ ಅಷ್ಟೆಯಾ. ನಿಮ್ ಮನೇಲೇ ಮಾರಲ್ವಾ? ನೀವು ಕೇಸ್‍ಕೇಸ್‍ಗಟ್ಲೆ ತಗೊಂಡೋಗಿ, ಒಂದಕ್ಕೆರಡು ರೇಟಿಗೆ ಮಾರಿ, ಊರಿಗೆಲ್ಲಾ ಕುಡಿಸ್ತೀರಿ. ಇಲ್ಲಿ ನನಿಗೆ ಕುಡುಕಾ ಅಂತೀರಾ? ಕುಡುಕರೇ ಸಾರ್ ಸತ್ಯ ಹೇಳೋದು, ನಾವೇ ನಿಜಾ ಮಾತಾಡೋದು”. “ಅದೇ ನಿಮ್ ತಂಗೀ ಮಗಳು, ಯಾರ್ಜೊತೆನೋ, ಅದೇ ಪಕ್ಕದ ತೋಟದ ರೈಟರ್ ಜೊತೆ ಓಡೋದ್ಳಂತೆ, ಏನಾಯ್ತು ಆಮೇಲೆ? ಎಂತದಾದ್ರೂ ಗೊತ್ತಾಯ್ತಾ?” ಎಂದು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ಹಾಗೆಯೇ ಮುಜುಗರವಾಗುವ ಪ್ರಶ್ನೆಯನ್ನು ಸಮಸ್ತ ಬಸ್ ಪ್ರಯಾಣಿಕರೆಲ್ಲರಿಗು ಕೇಳುವಂತೆ ಪಾಶುಪತಾಸ್ತ್ರದಂತೆ ಠಂಯ್ ಎಂದು ಬಾಣ ಬಿಡಬೇಕೇ? ಕರೀಗೌಡರು ತಮ್ಮ ತಲೇಮೇಲಿನ ಟೋಪಿಯನ್ನು ಅಲ್ಲೇ ಐದಾರು ಬಾರಿ ತಿಕ್ಕಿ ತಲೆತುರಿಸಿಕೊಳ್ಳುತ್ತಾ ಸರಿಯಾಗಿ ಕೂರಿಸಿಕೊಂಡು, ಆ ಮೀನಿನ ಆಸಾಮಿಯನ್ನು ನುಂಗುವಂತೆ ನೋಡಿ, ನನ್ನ ಮರ್ಯಾದೇನಾ ಈ ಬಸ್‍ನಲ್ಲಿ ಎಲ್ಲರ ಎದುರಿನಲ್ಲೇ ತಗೀತಿದಾನಲ್ಲ ಎಂದು ಕುಳಿತಲ್ಲೇ ಕನಲತೊಡಗಿ, ಏನೂ ಕೇಳಿಸಿಯೇ ಇಲ್ಲವೆಂಬಂತೆ ಸುಮ್ಮನಾದರು. ಈ ಅಸಾಮಿ ಸುಮ್ಮನಿರದೇ “ಅಲ್ಲಾ ಗೌಡ್ರೇ, ಹೆಣ್ಣು ಹುಡುಗಿಗೆ ಇಪ್ಪತ್ನಾಲ್ಕೋ ಇಪ್ಪತ್ತೈದೋ ಇರಬೇಕು ವಯಸ್ಸು. ಯಾರೋ ಕೊಡಗಿನವನಂತೆ, ಹುಡುಗಿ ಮನೆಯವರೇ ಸುಮ್ನಾದ್ರಂತೆ, ಹೌದಾ? ಮದುವೆ ಖರ್ಚು ಉಳೀತು ಅಂತಾಯ್ತು ಹಾಗಾದ್ರೆ. ಆದ್ರೂ ನಿಮ್ಮನೊಂದು ಮಾತು ಕೇಳಿ ಓಡಿಹೋಗಬೇಕಿತ್ತು. ಏನೇ ಹೇಳಿ ಹೀಗಾಗಬಾರದಿತ್ತು. ಛೇ..ಛೇ..” ಎನ್ನಬೇಕೇ? ಕರೀಗೌಡರು ನಖಶಿಖಾಂತ ಉರಿದೆದ್ದು “ಏ ಪುಟ್ಸಾಮಿ ನೋಡಿಲ್ಲಿ ಈ ಕುಡುಕ ನನ್ನಮಗ ಏನು ಬೊಗಳ್ತಿದಾನೆ” ಎಂದಬ್ಬರಿಸಿದರು. ಮುಂದಿನ ನಾಲ್ಕನೇ ಸೀಟಿನಲ್ಲಿದ್ದ ಪುಟ್ಟಸ್ವಾಮಿ ಕರೀಗೌಡರ ತಮ್ಮನ ಮಗ. ವ್ಯವಸಾಯ ಮಾಡಿಕೊಂಡಿದ್ದವನು ಸಂತೆಗೆಂದು ಇಂದು ಮೂಡಿಗೆರೆಗೆ ಎಲ್ಲರಂತೆ ಬಂದಿದ್ದ. ಭಾರಿ ಗಾತ್ರದ ಪುಟ್ಟಸ್ವಾಮಿ ಎದ್ದೇನೋ ನಿಂತ. ಆದರೆ ಈ ಭೂತಾಯಿ ಮೀನಿನ ಅಸಾಮಿ ಇದ್ದಲ್ಲಿಗೆ ಬರಲು ಮಾತ್ರ ಅಸಾಧ್ಯವಾಗಿತ್ತು. ಅಷ್ಟೊಂದು ಜನ ತುಂಬಿದ್ದ ಬಸ್‍ನಲ್ಲಿ ಹೆಜ್ಜೆ ಕಿತ್ತಿಡುವುದೂ ಸಹಾ ಸಾಹಸದ ಕೆಲಸವೇ ಆಗಿತ್ತು. ಅಷ್ಟರಲ್ಲಿ ಜನ್ನಾಪುರದ ಸ್ಟಾಪ್ ಬಂದಿದ್ದರಿಂದ ಅನೇಕರು ಬಸ್‍ನಿಂದ ಇಳಿಯಲಾರಂಭಿಸಿದರು. ಕಂಡಕ್ಟರ್ ಇನ್ನೂ ಕೆಲವರಿಗೆ ಟಿಕೇಟನ್ನು ನೀಡಿರಲಿಲ್ಲ. ಡ್ರೈವರ್‍ಗೆ ಕಂಡಕ್ಟರ್ ಬೆರಸಾಡತೊಡಗಿದ. “ಸೇತುವೆ ಬಳಿಯೇ ನಿಲ್ಲಿಸು. ಎಲ್ಲರ್ದೂ ಟಿಕೇಟ್ ಆದ ಮೇಲೆ ಜನ್ನಾಪುರಕ್ಕೆ ಬಿಡು ಎಂದಿದ್ದೆ. ಈಗ ನೋಡು ಸರಿಯಾಗಿ ಇನ್ನೂ ಯಾರಿಗೂ ಟಿಕೇಟ್ ಆಗಿಲ್ಲ. ಆಗಲೇ ಜನಾ ಸ್ಟಾಪ್ ಬಂತೂಂತ ಇಳಿಲಿಕ್ಕೆ ಶುರು ಮಾಡಿದಾರೆ” ಎಂದು ಆರೋಪಿಸತೊಡಗಿದ.

ಇನ್ನೇನು ಆರು ತಿಂಗಳಲ್ಲಿ ರಿಟೈರ್ ಆಗಬೇಕಾಗಿದ್ದ ಡ್ರೈವರ್ ತಾಳ್ಮೆಯಿಂದಲೇ “ಸರಿ, ನಿಲ್ಲಕ್ಕೆ ಹೇಳಿ ಟಿಕೇಟ್ ಕೊಡೋ ಮಾರಾಯ. ಸೇತುವೆ ಬಳಿ ನಿಲ್ಸಿದ್ದಿದ್ರೆ ಈ ಲೋಡಲ್ಲಿ ಆ ಅಪ್ ಹತ್ಸೋಕೆ ಆಗ್ತಿರ್ಲಿಲ್ಲ. ಅದಕ್ಕೆ ಅದೇ ಸ್ಪೀಡಲ್ಲಿ ಇಲ್ಲಿಗೆ ತಂದಿದ್ದೀನಿ. ನಾನಿನ್ನೂ ಬಸ್‍ಸ್ಟಾಪ್‍ನಲ್ಲಿ ನಿಲ್ಸಿಲ್ವಲ್ಲ” ಎಂದ. “ಊರು ಬಂದ ಮೇಲೆ ಬಸ್‍ಸ್ಟಾಪಾದ್ರೇನು? ಎಲ್ಲಾದ್ರೇನು? ನೀನು ನಿಲ್ಸಿರೋ ಜಾಗ ಅವರವರ ಊರಿಗೆ ಹೋಗಲು ಹತ್ತಿರದಲ್ಲೇ ಇರೋ ಕೈಮರದ ಬಳಿಯೇ ಇದೆ. ಕೇಳಿದ್ರೆ ಹುಡುಗರಾದರೆ ಪಾಸ್ ಅಂತಾರೆ. ವಯಸ್ಸಾದವರಾದ್ರೆ ನಾಲ್ಕು ರೂಪಾಯಿ ಟಿಕೇಟ್‍ಗೆ ಎರಡು ರೂಪಾಯಿ ಕೊಟ್ಟು ಟಿಕೇಟ್ ಬೇಡ ಅಂತಾರೆ; ಏನು ಮಾಡೋದು?” ಎಂದುತ್ತರಿಸಿದ ಕಂಡಕ್ಟರ್.

ಪುಟ್ಟಸ್ವಾಮಿಗೆ ಕರೆದಂತೆ ನಮಗಾದರೂ ಕಂಪ್ಲೆಂಟ್ ಕೊಟ್ಟಿದ್ದರೆ ನಮ್ಮ ನಮ್ಮ ಹೀರೋಯಿನ್‍ಗಳ ಮುಂದೆ ಈ ಕೈಲಾಗದ ಕುಡುಕನಿಗೆ ನಾಲ್ಕು ತದುಕಿ ಹೀರೋಗಳಾಗಬಹುದಿತ್ತೆಂದು ಅನೇಕ ಕಾಲೇಜು ಹುಡುಗರು ಮನಸ್ಸಿನಲ್ಲೇ ಅಂದುಕೊಂಡು, ‘ಈ ಕರೀಗೌಡ ಎಂಥಾ ಕೆಲಸ ಮಾಡಿಬಿಟ’್ಟ ಎಂದು ಹಳಹಳಿಸತೊಡಗಿದರು. ಕುಡುಕನೊಂದಿಗೆ ಕುಸ್ತಿಮಾಡಿ ಅಪಮಾನಿತನಾಗಲು ಇಷ್ಟವಿಲ್ಲದ ಪುಟ್ಟಸ್ವಾಮಿ ಮೀನಿನ ಅಸಾಮಿಯನ್ನು ಕರೆದು, ‘ಕೂರಲು ಜಾಗವಿಲ್ಲವೇನಯ್ಯಾ? ಬಾಯಿಲ್ಲಿ ನನಗೆ ಯಾಕೋ ಕಾಲು ಮರಗಟ್ಟಿ ನೋಯುತ್ತಿದೆ, ನಿಲ್ತೇನೆ ಸರಿಯಾಗುತ್ತೆ’ ಎಂದು ಹೇಳಿ ತನ್ನ ಸ್ಥಳವನ್ನೇ ಬಿಟ್ಟುಕೊಟ್ಟ. ತರಕಾರಿ ಚೀಲ ಬೀಳಿಸಿದ್ದವನು ಸಾಕಷ್ಟು ಸಾಮಾನು ಎತ್ತಿಕೊಟ್ಟಿದ್ದರೂ ಮುಕ್ಕಾಲು ಮಾತ್ರ ಸಿಕ್ಕಿದ್ದವು. ಚೀಲದ ಯಜಮಾನ ಮಾತ್ರ ಇನ್ನೂ ಬುಸುಗುಡುತ್ತಲೇ ಇದ್ದ. ಬೀಳಿಸಿದ್ದವನು ಆತನನ್ನು ಸಮಾಧಾನಿಸಲು ಏನೇನು ಸಾಧ್ಯತೆಯಿದೆಯೆಂದು ಸರ್ಕಸ್ಸು ಮಾಡುತ್ತಲೇ ಇದ್ದ. ಅಷ್ಟರಲ್ಲಿ ಬೆಟ್ಟದಮನೆ ಸ್ಟಾಪೂ ಬಂತು. ತರಕಾರಿ ಚೀಲದವ ದುಸದುಸ ಎನ್ನುತ್ತಲೇ ಇಳಿದುಹೋದ.

ಇಂಗ್ಲೀಷ್ ಪೇಪರ್ ಓದುವುದರಲ್ಲಿ ಮುಳುಗಿಯೇಹೋಗಿದ್ದ ಉಪನ್ಯಾಸಕ ಕಂಡಕ್ಟರ್ ಬಂದರೂ ತಲೆಯೆತ್ತದೇ ಓದುವಂತೆ ನಟಿಸುತ್ತಾ ಕುಳಿತಿದ್ದ. ಮುಂದೆ ಕಿರಗುಂದದ ಬಳಿ ತನ್ನ ಸ್ಟಾಪ್ ಬಂತೆಂದು ತಡಬಡಾಯಿಸಿ ಎಚ್ಚರಗೊಂಡಂತೆ ಆಡಿ, ಅಲ್ಲಿನ ಚಾರ್ಜ್ ಹತ್ತು ರೂಪಾಯಿ ಬದಲಿಗೆ ಐದು ರೂಪಾಯಿಯನ್ನು ಕಂಡಕ್ಟರ್ ಕೈಯಲ್ಲಿಟ್ಟು ಟಿಕೇಟ್ ಬೇಡ ಎಂದು ಇಳಿದೇ ಹೋದ. ಅಷ್ಟರಲ್ಲಾಗಲೇ ನನಗೂ ಒಂದು ಸೀಟು ಸಿಕ್ಕಿತ್ತು. ನನಗೆ ಟಿಕೇಟು ಕೊಡುತ್ತಾ ಕಂಡಕ್ಟರ್ ‘ಮಾನಾ ಇಲ್ಲಾ, ಮರ್ಯಾದೆ ಇಲ್ಲಾ, ಜಂಟ್ಲುಮನ್‍ನಂತೆ ಕಾಣಿಸ್ತಾನೆ. ಕಾಲೇಜಿನಲ್ಲಿ ಪಾಠ ಮಾಡ್ತಾನಂತೆ. ಒಂದು ಟಿಕೇಟ್ ತಗೊಳ್ಳಾಕಾಗಲ್ಲ. ಕೈಗೆ ಸಿಕ್ಕಿದಷ್ಟು ಕೊಟ್ಟು ಟಿಕೇಟ್ ಬೇಡಾಂತಾನೆ, ಇಂಥವರಿದ್ರೆ ಸರ್ಕಾರ ಉಳಿದಂಗೇ’ ಎಂಬಂತೆ ಸ್ವಗತದಲ್ಲೇ ಹೇಳಿಕೊಂಡ. ಲಾಸ್ ಅನುಭವಿಸಿದ ಸರ್ಕಾರದ ಬಗ್ಗೆ ಹೇಳಿದವ ಲಾಭ ಮಾಡಿಕೊಂಡ ತನ್ನ ಬಗ್ಗೆ ಏನೂ ಹೇಳಿಕೊಳ್ಳಲಿಲ್ಲ. ಬಸ್ ಸರಿಸುಮಾರು ಅರ್ಧಕ್ಕರ್ಧ ಖಾಲಿಯಾಗಿತ್ತು. ಆಚೀಚೆ ನೋಡುತ್ತೇನೆ, ಕರೀಗೌಡ, ಪುಟ್ಟಸ್ವಾಮಿ ಭೂತಾಯಿ ಮೀನಿನವ, ಹದಿನಾರು ಕೆಲಸದವರು ಯಾರೂ ಬಸ್‍ನೊಳಗೇ ಇರಲಿಲ್ಲ. ಅರರೆ!!! ಇವರೆಲ್ಲಾ ಯಾವಾಗ ಇಳಿದು ಹೋದರೆಂದು ಅಚ್ಚರಿಯಾಯ್ತು. ಸರ್ಕಾರಿ ಬಸ್, ಅದರಲ್ಲೂ ಸರ್ಕಾರಿ ಷಟಲ್ ಬಸ್. ಅದರಲ್ಲೂ ಸಂತೆ ದಿನದ ಸರ್ಕಾರಿ ಷಟಲ್ ಬಸ್ ನಿಜವಾಗಿಯೂ ಒಂದು ಗ್ರಾಮ ಭಾರತವನ್ನೇ ತನ್ನ ಹೊಟ್ಟೆಯಲ್ಲಿಟ್ಟುಕೊಂಡು ತೇಲುತ್ತಾ, ತೇಕುತ್ತಾ, ಮುಗ್ಗರಿಸುತ್ತಾ, ಇಳಿಜಾರಿನಲ್ಲಿ ಈಜುತಾ, ಏರಿಯಲ್ಲಿ ಏದುಸಿರು ಬಿಡ್ತಾ, ಸಮತಟ್ಟು ತಲುಪಿ ನಿಟ್ಟುಸಿರು ಬಿಡುತ್ತಾ ಅಂತೂ ನಿಲ್ಲದೇ ಸಾಗುತ್ತಲೇ ಇದೆ. ಭಾರತದಂಥಾ ದೇಶ ದೇವರ ದಯೆಯಿಂದ ನಡೆಯುತ್ತಿರುವ ಹಾಗೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ