October 5, 2024

* ಪ್ರಸನ್ನ ಗೌಡಳ್ಳಿ

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟದ ಸೆರಗಿನಲ್ಲಿ ಮೈಚಾಚಿ ಹರಡಿಕೊಂಡಿರುವ ಮಲೆನಾಡು ಪ್ರಾಕೃತಿಕ ಸೌಂದರ್ಯದ ಒಂದು ದೃಶ್ಯ ಕಾವ್ಯ.

ಮಲೆನಾಡು ಹತ್ತು ಹಲವು ಕಾರಣಗಳಿಂದ ಮತ್ತೆ ಮತ್ತೆ ಮನವನ್ನು ಭಾವ ಪರವಶಗೊಳಿಸುವಂತಹ, ನಮ್ಮ ಬದುಕಿನೊಳಗೆ ಹಾಸುಹೊಕ್ಕಾಗಿ ಒಂದು ಸುಭದ್ರ ನೆಲೆಯನ್ನು ಕಲ್ಪಸಿರುವ, ಸುಂದರ ಭೌಗೋಳಿಕ ಪ್ರದೇಶ.

ಇತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಡಿಸಿಕೊಂಡಿರುವ ಪಶ್ಚಿಮಘಟ್ಟಗಳ ಪರ್ವತ ಸಾಲುಗಳ ನಡುವೆ ಮೂರ್ತರೂಪ ಪಡೆದುಕೊಂಡಿರುವ ಮಲೆನಾಡಿನ ಇತಿಹಾಸವನ್ನು ಕೆದಕಿ ಬೆದಕಿ ಹೊರಗೆಳೆಯಲು ಪ್ರಯತ್ನಿಸಿದಾಗ ತನ್ನ ಹಿನ್ನಲೆಯನ್ನು ತೆರೆದುಕೊಳ್ಳುತ್ತಲೇ ಮತ್ತಷ್ಟು ನಿಗೂಢತೆಗಳ ನಿಕ್ಷೇಪವಾಗಿಯೇ ಉಳಿದುಕೊಳ್ಳುತ್ತದೆ.

ಮಲೆನಾಡಿನ ಸುಧೀರ್ಘವಾದ ಇತಿಹಾಸದ ಅಧ್ಯಯನ ನಡೆಸಿದಾಗ ಅದರ ವ್ಯಾಪಕತೆ ರೋಮಾಂಚನಗೊಳಿಸಿತು.
ಇತಿಹಾಸದ ಪೂರ್ವಕಾಲದಿಂದಲೂ ಅಂದರೆ ಶಿಲಾಯುಗ, ಕಬ್ಬಿಣಯುಗ, ತಾಮ್ರಯುಗದಿಂದಲೂ ಇಲ್ಲಿ ಜನಜೀವನ ನಡೆದು ಬಂದುದಕ್ಕೆ ಹಲವಾರು ಉಲ್ಲೇಖಗಳು ದೊರೆಯುತ್ತವೆ.

ಪ್ರಮುಖವಾಗಿ ಮೂಡಿಗೆರೆ ತಾಲ್ಲೂಕಿನ ಹೇರಿಕೆ ಗ್ರಾಮದ ಬಳಿಯಿರುವ ಪಾಂಡವರ ಗುಡ್ಡ ಎಂದು ಕರೆಯಲ್ಪಡುವ ಸ್ಥಳದಲ್ಲಿ ಕಲ್ಲಿನ ಉಪಕರಣಗಳು ಕಂಡುಬಂದಿವೆ. ಕೊಟ್ಟಿಗೆಹಾರದ ಸಮೀಪ ಬೆಟ್ಟದ ತುದಿಯಲ್ಲಿ ಕಂಡುಬರುವ ಪ್ರಾಚೀನ ಕಾಲ ಕಬ್ಬಣ ಕರಗಿಸುವ ಸ್ಥಳದ ನಿವೇಶನವಿದೆ. ಮೂಡಿಗೆರೆಯಿಂದ 20 ಕಿ.ಮೀ. ದೂರದಲ್ಲಿರುವ ದೇವರುಂದದಲ್ಲಿ ಕಪಿಲಋಷಿಯು ತಪಸ್ಸು ಮಾಡಿದ್ದರೆಂಬ ಐತಿಹ್ಯ,ಇಲ್ಲಿರುವ ಪ್ರಸನ್ನರಾಮೇಶ್ವರ ಲಿಂಗವನ್ನು ಪರಶುರಾಮನು ಪ್ರತಿಷ್ಠಾಪಿಸಿದ್ದನೆಂಬ ಪ್ರತೀತಿಯಿದೆ.

ತುಂಗಾ ನದಿ ತೀರದಲ್ಲಿರುವ ಶೃಂಗೇರಿ ದೇವಸ್ಥಾನ ಆದಿಶಂಕರರಿಂದ ಸ್ಥಾಪಿಸಲ್ಟಟ್ಟಿರುವ ಸನ್ನಿದಿ. ಹೊರನಾಡಿನ ಮೇರುತಿ ಪರ್ವತದಲ್ಲಿ ಅಗಸ್ತ್ಯರು ನೆಲೆಸಿದ್ದರೆಂಬ ಐತಿಹ್ಯವಿದೆ. ಜಾಬಾಲ ಋಷಿಯು ನೆಲೆಸಿದ ಸ್ಥಳವೇ ಜಾವಳಿ ಎಂಬ ದಂತಕಥೆಗಳಿವೆ. ಇವಲ್ಲದೆ ಇನ್ನೂ ಹಲವಾರು ಘಟನೆಗಳು ಇತಿಹಾಸಪೂರ್ವಕಾಲದ ಬಗ್ಗೆ ಬೆಳಕು ಚೆಲ್ಲುತ್ತವೆ. ಈ ನೆಲದ ಪ್ರಾಚೀನ ಭವ್ಯ ಪರಂಪರೆಯನ್ನು ಹೇಳುತ್ತದೆ.

ಕ್ರಿ.ಶ. 450 ರಿಂದ 1811ರವರೆಗೆ ಸರಿಸುಮಾರು 1400 ವರ್ಷಗಳ ಇತಿಹಾಸವು ಹಲವು ಶಾಸನಗಳಿಂದ ಲಭ್ಯವಿದ್ದು, ಜಿಲ್ಲೆಯಾದ್ಯಂತ ಹಂಚಿಹೋಗಿದ್ದರೂ ಇವೆಲ್ಲವುಗಳ ಒಟ್ಟು ಅಧ್ಯಯನದಿಂದ ಈ ಭಾಗದ ಇತಿಹಾಸವನ್ನು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಗ್ರಹಿಸಬಹುದಾಗಿದೆ. ಶಾಸನಗಳು ಪ್ರಮುಖವಾಗಿ ಈ ಭಾಗಗಳನ್ನು ತಮ್ಮ ರಾಜ್ಯದ ಒಂದು ಅವಿಭಾಜ್ಯ ಅಂಗವಾಗಿ ಆಳಿದ ಕದಂಬರು, ಗಂಗರು, ನೊಳಂಬರು, ಸಂತಾರರು, ಚಾಳುಕ್ಯರು, ಹೊಯ್ಸಳರು, ಕಳಸ-ಕಾರ್ಕಳ ಮಾಂಡಲೀಕರು, ವಿಜಯನಗರ ಅರಸರು, ಪಾಳೆಗಾರರು ಹಾಗೂ ಮೈಸೂರು ಸಾಮ್ರಾಜ್ಯ ಇವರುಗಳ ಬಗೆಗೆ ಮಾಹಿತಿಗಳನ್ನು ಒಳಗೊಂಡಿದೆ.

ಕ್ರಿಸ್ತಪೂರ್ವಲ್ಲಿ ಈ ಭಾಗದಲ್ಲಿ ನಂದರು ಮತ್ತು ಮೌರ್ಯರು ಆಳ್ವಿಕೆ ನಡೆಸಿದ್ದರೆಂದು ಹೇಳಲಾದರೂ ಈ ಬಗ್ಗೆ ಇದುವರೆವಿಗೂ ನಿಖರವಾದ ಸಾಕ್ಷಿಗಳು ದೊರೆತಿಲ್ಲ. ಕರ್ನಾಟಕದಲ್ಲಿ ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿದ ಮೊದಲ ರಾಜಮನೆತನವಾದ ಬನವಾಸಿಯ ಕದಂಬರು, ಚಿಕ್ಕಮಗಳೂರು, ಹಾಸನವನ್ನೊಳಗೊಂಡರುವ ಭಾಗವನ್ನು ಆಳಿದುದಕ್ಕೆ ಕ್ರಿ. ಶ. 450ರ ಹಲ್ಮಿಡಿ ಶಾಸನವು ವಿವರ ಒದಗಿಸುತ್ತದೆ. ಇಂದು ಬೇಲೂರು ತಾಲ್ಲೂಕು ಹಾಸನ ಜಿಲ್ಲೆಗೆ ಸೇರಿದ ಹಲ್ಮಿಡಿ ಅಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯ ವ್ಯಾಪ್ತಿಯಲ್ಲೇ ಇತ್ತು ಎಂಬುದು ಮಹತ್ವದ ಸಂಗತಿ.

ಶತಮಾನಗಳ ಕಾಲ ಕರ್ನಾಟಕವನ್ನು ಆಳಿದ ತಲಕಾಡಿನ ಗಂಗರ ಬಗೆಗೆ ಅನೇಕ ಶಾಸನಗಳು ಲಭ್ಯವಿದ್ದು, ಸಂಸ್ಕøತ ಭಾಷೆಯಲ್ಲಿರುವ ಮೂಡಿಗೆರೆಯ 26 ತಾಮ್ರ ಶಾಸನವು ಗಂಗರ ದೊರೆ ಶ್ರೀಪುರುಷನ 25 ವರ್ಷಗಳ ಆಡಳಿತದ ಕುರುಹಿಗಾಗಿ ಹಾಕಿಸಿದ ಶಾಸನವಾಗಿದೆ. ಇವರು ಹೊಯ್ಸಳ ಕಾಲದಲ್ಲೂ ಮಹಾಮಾಂಡಲೀಕರಾಗಿ ಆಳುತ್ತಿದ್ದರು. ದೇವವೃಂದ ಇವರ ಪ್ರಮುಖ ಸ್ಥಳಗಳಲ್ಲಿ ಒಂದಾಗಿತ್ತು.

ಸಾಂತರರು ತಮ್ಮ ರಾಜ್ಯದ ದಕ್ಷಿಣ ಭಾಗಕ್ಕೆ ಕಳಸವನ್ನು ರಾಜಧಾನಿಯನ್ನಾಗಿಸಿಕೊಂಡು ಅನೇಕ ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ. ಅಲ್ಲದೇ ಚಿಕ್ಕಮಗಳೂರು ಸಮೀಪದ ವಸ್ತಾರೆ ಎಂಬಲ್ಲಿ ಪಟ್ಟಣ ಕಟ್ಟಿಸಿದ್ದಾರೆ. ಕ್ರಿ.ಶ. ಏಳನೆಯ ಶತಮಾನದಲ್ಲಿದ್ದ ಇವರು ಧರ್ಮಸಮನ್ವಯವನ್ನು ಸಾಧಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಚಾಳುಕ್ಯರಿಗೆ ಸಂಬಂಧಿಸಿದ ಕ್ರಿ.ಶ. 668 ರಿಂದ 1203ರ ವರೆಗಿನ ಸುಮಾರು 20 ಶಾಸನಗಳು ದೊರೆತಿದ್ದು, ಇದರಲ್ಲಿ ಮೂಡಿಗೆರೆಯಲ್ಲಿ ಸಿಕ್ಕಿದ 11 ಶಾಸನವು ಅತ್ಯಂತ ಪ್ರಮುಖವಾದುದ್ದಾಗಿದೆ. ಇದು ಚಾಳುಕ್ಯರ ದೊರೆ ಸತ್ಯಾಶ್ರಯ ಇರಿವಬೆಡಂಗನ ಬಗೆಗೆ ಹೇಳುತ್ತದೆ.

ಚೋಳರು ಮಲೆನಾಡು ಭಾಗವನ್ನು ಆಳಿದುದಕ್ಕೆ ಕೇವಲ ಎರಡು ಶಾಸನಗಳು ಲಭ್ಯವಿದ್ದು, ಒಂದು ಚಿಕ್ಕಮಗಳೂರು, ಇನ್ನೊಂದು ಕಡೂರಿನಲ್ಲಿ ದೊರೆತಿದೆ.

ಕತೂಹಲಕಾರಿ ಹೊಯ್ಸಳ ಮನೆತನಕೆ ಮೂಲಸ್ಥಾನ ಮೂಡಿಗೆರೆ ಸಮೀಪದ ಅಂಗಡಿ ಗ್ರಾಮ. ಚಿಕ್ಕಮಗಳೂರು ಜಿಲ್ಲೆಯ ಪ್ರಸ್ತಾಪವಿಲ್ಲದೆ ಹೊಯ್ಸಳರ ಇತಿಹಾಸವೇ ಆರಂಭವಾಗುವುದೇ ಇಲ್ಲ. ಮೂಡಿಗೆರೆ ತಾಲ್ಲೂಕಿನ ಸೊಸೆಯೂರು ಅಥವಾ ಶಶಕಪುರ (ಈಗಿನ ಅಂಗಡಿ ಗ್ರಾಮ)ವೇ ಹೊಯ್ಸಳ ಸಾಮ್ಯಾಜ್ಯದ ಮೂಲಸ್ಥಾನ. ಗುರುಕುಲದೊಳಗೆ ಹುಲಿಯೊಂದು ಬಂದದ್ದು, ಗುರುವಿನ ಆಜ್ಞೆಯಂತೆ (ಹೊಯ್ ಸಳ) ಸಳನೆಂಬ ವಿದ್ಯಾರ್ಥಿ ಹುಲಿಯ ಮೇಲೆರಗಿ ಕೊಂದದ್ದು, ಮುಂದೆ ಆತನೇ ಒಂದು ರಾಜ್ಯ ಸ್ಥಾಪಿಸಿ ಹೊಯ್ಸಳ ಸಾಮ್ರಾಜ್ಯದ ಮೂಲ ಪುರುಷನಾದ ಎಂಬ ಐತಿಹ್ಯವಿದೆ. ಇಲ್ಲಿನ ವಾಸಂತಿಕ ದೇವಾಲಯ, ಕೋಟೆ ಹರ ಪ್ರದೇಶದ ಶಾಸನಗಳು ಇದಕ್ಕೆ ಸಾಕ್ಷಿಯಾಗಿವೆ.

ಹೊಯ್ಸಳರಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಶಾಸನಗಳು ಜಿಲ್ಲೆಯ ವಿವಿದೆಡೆ ದೊರೆಯುತ್ತಿದ್ದು, ಅವರ ಆಳ್ವಿಕೆಯ ಬಗ್ಗೆ ವಿಫುಲ ಮಾಹಿತಿಯನ್ನು ಹೊರಗೆಡವಿದೆ. ಹೊಯ್ಸಳರ ದೊರೆ ವಿನಯಾದಿತ್ಯನ ಕಾಲದಲ್ಲಿ ಸೊಸೆಯೂರಿನಿಂದ ಬೇಲೂರಿಗೆ ರಾಜಧಾನಿ ಕೇಂದ್ರ ಬದಲಾಯಿತು.
ಮೂಡಿಗೆರೆ-ಬೇಲೂರು ಮಾರ್ಗದಲ್ಲಿ ಸಿಗುವ ಹೊಯ್ಸಳಲು ಗ್ರಾಮದಲ್ಲಿ ಕೆಲವು ದಾಖಲೆಗಳು ದೊರೆತಿದ್ದು, ರಸಬಾವಿ ಎಂದು ಕರೆಯಲ್ಪಡುವ ಬಾವಿಯೊಂದು ಇಂದಿಗೂ ಹಾಗೆಯೇ ಇದೆ. ಅರಮನೆಯ ಸ್ಥಳವೆಂದು ಹೇಳಲಾಗುವ ನಿವೇಶನ ಒಂದಿದೆ. ನೂರಾರು ವರ್ಷಗಳ ಹಳೆಯದಾದ ಸಂಪಿಗೆ ಮರದ ಕಟ್ಟೆ ಇದೆ.

ಹೊಯ್ಸಳರ ಶ್ರೇಷ್ಟ ದೊರೆ ವಿಷ್ಣುವರ್ಧನನು ದಂಡಯಾತ್ರೆ ಕೈಗೊಂಡಾಗ ಈಗಿನ ಉತ್ತರ ಕನ್ನಡ ಜಿಲ್ಲೆಯ ಬಂಕಾಪುರದಲ್ಲಿ ನಿಧನ ಹೊಂದಿದ್ದು, ಅವರ ಪಾರ್ಥೀವ ಶರೀರವನ್ನು ಮೂಡಿಗೆರೆಗೆ ತಂದ ಘಟನೆಗಳ ಬಗೆಗೆ ಶಾಸನಗಳು ದಾಖಲಿಸಿವೆ. ಹೊಯ್ಸಳರ ಸಾಮ್ರಾಜ್ಯದ ಅವಿಭಾಜ್ಯ ಅಂಗವಾಗಿದ್ದ ಮೂಡಿಗೆರೆ ಸಮೀಪ ಬಲ್ಲಾಳರಾಯನ ದುರ್ಗದ ಕೋಟೆಯನ್ನೇ ಹೊಂದಿದೆ.

ಹೊಯ್ಸಳರಿಗೆ ಸಂಬಂಧಿಸಿದ ಒಂದು ಶಾಸನವು ತಾಲ್ಲೂಕಿನ ಕಣಚೂರು ಗ್ರಾಮದಲ್ಲಿ ಸಿಕ್ಕಿದೆ. ಹೊಯ್ಸಳರ ದೊರೆ ಬಲ್ಲಾಳನು ತಾಲ್ಲೂಕಿನ ಘಟ್ಟ ಪ್ರದೇಶದಲ್ಲಿ ಕಟ್ಟಿಸಿರುವ ಭೈರವ ದೇವಾಲಯಗಳು ವಿಶಿಷ್ಟ ಕಲಾ ವೈಭವದಿಂದ ಕೂಡಿದೆ. ಇವನ ಹೆಸರಿನಲ್ಲಿ ಬಲ್ಲಾಳರಾಯನ ದುರ್ಗದಲ್ಲಿ ಕಟ್ಟಿಸಿರುವ ಕೋಟೆ ಇಂದಿಗೂ ಜ್ವಲಂತ ಸಾಕ್ಷಿಯಾಗಿ ನಿಂತಿದೆ. ಹೊಯ್ಸಳರ ಕಾಲದಲ್ಲಿ ಮಲೆನಾಡಿನ ಗೋಣಿಬೀಡು, ಕಳಸ, ಅಂಗಡಿ, ಮೂಡಿಗೆರೆ ಹೊಯ್ಸಳರ ಪ್ರಮುಖ ಸ್ಥಳಗಳಾಗಿದ್ದವು.

ಕಳಸ-ಕಾರ್ಕಳ ಮಾಂಡಲೀಕರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಸ್ವತಂತ್ರವಾದ ಚಿಕ್ಕ ರಾಜ್ಯವೊಂದನ್ನು ಸ್ಥಾಪಿಸಿ ಕಳಸವನ್ನು ರಾಜಧಾನಿಯನ್ನಾಗಿಸಿಕೊಂಡು ಕ್ರಿ.ಶ. 1246 ರಿಂದ 1568ರ ವರೆಗೆ ಸುಮಾರು ಮೂರೂವರೆ ಶತಮಾನಗಳ ಕಾಲ ಕಳಸ, ಕಾರ್ಕಳ ಮಾಂಡಲಿಕ ಮನೆತನವು ರಾಜ್ಯಭಾರ ಮಾಡಿದ್ದಾರೆ.

ವಿಜಯನಗರ ಸಾಮ್ರಾಜ್ಯಕ್ಕೂ, ಜಿಲ್ಲೆಗೂ ಬಿಡಿಸಲಾರದ ನಂಟಿದೆ. ವಿಜಯನಗರದ ಕೃಷ್ಣದೇವರಾಯನು ಶೃಂಗೇರಿ ಕ್ಷೇತ್ರದೊಂದಿಗೆ ಬಹು ನಿಕಟವಾದ ಬಾಂಧವ್ಯ ಹೊಂದಿದ್ದನು. ಇವನ ಅಧೀನದಲ್ಲಿ ಕಳಸದ ಭೈರರಸರು ಬೇಲೂರು ಮತ್ತು ಐಗೂರು ನಾಯಕರು ಜಿಲ್ಲೆಯ ವಿವಿಧ ಭಾಗಗಳನ್ನು ಆಳಿದರು.

ಮೈಸೂರು ರಾಜರು, ಟಿಪ್ಪುಸುಲ್ತಾನ್, ಹೈದರಾಲಿ, ಬ್ರಿಟೀಷರು ಮಲೆನಾಡಿನಲ್ಲಿ ಆಳ್ವಿಕೆ ನಡೆಸಿದ್ದಾರೆ. 1690ರಿಂದ ಸತತವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ಮೈಸೂರಿನ ಅರಸರು ತಮ್ಮ ರಾಜ್ಯದ ಒಂದು ಅಂಗವಾಗಿ ಸೇರಿಸಿಕೊಂಡು ಆಳ್ವಿಕೆ ನಡೆಸಿಕೊಂಡು ಬಂದಿದ್ದರು. ಬ್ರಿಟೀಷರ ಆಳ್ವಿಕೆ ಎಲ್ಲೆಡೆಯಂತೆ ಇಲ್ಲೂ ನಿರಂಕುಶವಾಗಿ ನಡೆಯಿತು. 1799ರಲ್ಲಿ ಪುನಃ ಅಧಿಕಾರ ಪಡೆದ ಮೈಸೂರು ಒಡೆಯರು 1863ರಲ್ಲಿ ಕಡೂರು ಜಿಲ್ಲಾ ಕೇಂದ್ರವನ್ನು ಸ್ಥಾಪಿಸಿದರು. 1865ರಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರವಾಗಿದ್ದು, 1947ರಲ್ಲಿ ಈಗಿನ ಸ್ವರೂಪ ಪಡೆಯಿತು.

ಸ್ವಾತಂತ್ರ ಸಂಗ್ರಾಮದ ಆರಂಭದ ದಿನಗಳಲ್ಲಿ ಹೋರಾಟದ ಕಾವು ಮಲೆನಾಡು ಪ್ರದೇಶದಲ್ಲಿ ಅಷ್ಟೊಂದು ಪ್ರಖರವಾಗಿ ಕಾಣಿಸಿಕೊಂಡಿರಲಿಲ್ಲ. ಮಹಾತ್ಮಾ ಗಾಂಧೀಜಿ ಅವರು 1927ರಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಮಾಡಿದ ಭಾಷಣವು ಯುವಕರಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡಿತು. ಅದರ ಪರಿಣಾಮವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕರು ಧುಮುಕಿದರು. ಅಂದಿನ ಹಲವು ಪ್ರಮುಖರು ವಿವಿಧ ರೀತಿಯ ಚಳುವಳಿಯಲ್ಲಿ ತೊಡಗಿಸಿಕೊಂಡರು.

ಇದು ನಮ್ಮ ಮಲೆನಾಡಿನ ಇತಿಹಾಸದ ಇಣುಕು ನೋಟವಷ್ಟೇ, ಇಲ್ಲಿರುವ ಹತ್ತಾರು ದೇವಾಲಯಗಳು, ಸ್ಮಾರಕಗಳು, ಶಾಸನಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದರೆ ಈ ಭಾಗದ ಇತಿಹಾಸವನ್ನು ಸಮಗ್ರವಾಗಿ ವಿಶ್ಲೇಷಿಸಲು ಸಾಧ್ಯ. ಮಲೆನಾಡು ಪೌರಾಣಿಕವಾಗಿ, ಐತಿಹಾಸಿಕವಾಗಿ, ಸಾಂಸ್ಕøತಿಕವಾಗಿ ಮಹತ್ವಪೂರ್ಣ ಭೂಪ್ರದೇಶವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ