October 5, 2024

ಅದು 1994ರ ಡಿಸೆಂಬರ್ 31, ಬೆಂಗಳೂರು ಯಶವಂತಪುರ ಸಮೀಪ ಸಂಭವಿಸಿದ ರೈಲ್ವೇ ಅಪಘಾತದಲ್ಲಿ ಜನನಾಯಕ ಬಿ.ಕೆ. ಸುಂದ್ರೇಶ್ ಅಸುನೀಗಿದ್ದರು.

ಹೊಸವರ್ಷದ ದಿನ ಬರಸಿಡಿಲಿನಂತಹ ಸುದ್ದಿಯನ್ನು ಕೇಳಿ ಜನ ಶೋಕಸಾಗರದಲ್ಲಿ ಮುಳುಗಿದರು. ಅವತ್ತು ಸುಂದರೇಶ್ ಹುಟ್ಟೂರು ಬಕ್ಕಡಿಯಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಜನಸಾಗರವೇ ಹರಿದುಬಂದಿತ್ತು. ಸಿದ್ದಾರ್ಥ ಹೆಗ್ಡೆಯವರ ಅಂತ್ಯಸಂಸ್ಕಾರವನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಸಾವಿನ ಸಂದರ್ಭದಲ್ಲಿ ಆ ಪರಿಯ ಜನಸಾಗರ ಹರಿದು ಬಂದದ್ದು ಮತ್ತೊಂದಿಲ್ಲ ಎಂದು ಹಿರಿಯರು ನೆನೆಸಿಕೊಳ್ಳುತ್ತಾರೆ. ರಾಜ್ಯದ ನಾನಾಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನ ಅವರ ಅಭಿಮಾನಿಗಳು ವ್ಯಕ್ತಪಡಿಸಿದ ದುಃಖ, ರೋಧನ, ಶೋಕ ಹೇಳತೀರದಾಗಿತ್ತು.

ಹೌದು, ಬಿ.ಕೆ. ಸುಂದ್ರೇಶ್ ನಮ್ಮನ್ನಗಲಿ ಇವತ್ತು ಡಿಸೆಂಬರ್ 31ಕ್ಕೆ ಇಪ್ಪತ್ತೊಂಬತ್ತು ವರ್ಷಗಳು.

ಬಹುಶಃ ಈಗಿನ ಹೊಸ ಪೀಳಿಗೆಗೆ ಸುಂದರೇಶ್ ಪರಿಚಯ ಅಷ್ಟಿಲ್ಲ. 1980-90ರ ದಶಕದಲ್ಲಿ ಜಿಲ್ಲೆಯ ಜನಪರ ಚಳುವಳಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದವರು ಬಿ.ಕೆ. ಸುಂದ್ರೇಶ್.

 

ಅವರು ರಾಜಕೀಯವಾಗಿ ಭಾರತ ಕಮ್ಯುನಿಷ್ಟ್ ಪಕ್ಷದ ನೇತಾರರಾಗಿದ್ದರು. ಆದರೆ ಪಕ್ಷಾತೀತವಾಗಿ ಜನಸಾಮಾನ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ರಾಜಕೀಯವನ್ನು ಮೀರಿ ಓರ್ವ ಸಮಾಜ ಕಾರ್ಯಕರ್ತರಾಗಿ ಜನಸಮುದಾಯದಲ್ಲಿ, ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಸ್ಫೂರ್ತಿದಾಯಕ ಹೊಸ ಚಿಂತನೆಯೊಂದನ್ನು ಬಿತ್ತಿದ್ದರು.

ಮೂಡಿಗೆರೆ ತಾಲ್ಲೂಕು ದೇವರುಂದ ಸಮೀಪದ ಬಕ್ಕಡಿಯ ಕಾಳೇಗೌಡ ನಂಜಮ್ಮನವರ ಪುತ್ರ ಸುಂದರೇಶ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೇಕನಗದ್ದೆಯಲ್ಲಿ, ಪ್ರೌಢಶಾಲೆಯನ್ನು ಜಾವಳಿಯ ಗುರ್ಜಾರ್ ಪೌಢಶಾಲೆಯಲ್ಲಿ ಪೂರೈಸಿ ಚಿಕ್ಕಮಗಳೂರಿನ ಐ.ಡಿ.ಎಸ್.ಜಿ.ಯಲ್ಲಿ ಪದವಿ ಶಿಕ್ಷಣ ಪೂರೈಸಿದರು.

ಕಾಲೇಜು ಜೀವನದಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಂಡು ಮುಂದೆ ಕಾರ್ಲ್‍ಮಾರ್ಕ್ಸ್ ಚಿಂತನೆಗಳಿಂದ ಆಕರ್ಷಿತರಾಗಿ ಕಮ್ಯುನಿಷ್ಟ್ ಪಕ್ಷದಡಿಯಲ್ಲಿ ರಾಜಕೀಯಕ್ಕೆ ದುಮುಕಿದರು.

ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ತೋಟ ಕಾರ್ಮಿಕರು ಮತ್ತು ರೈತಾಪಿ ವರ್ಗವನ್ನು ಸಂಘಟಿಸಿ ರಾಜ್ಯದಲ್ಲಿ ಪ್ರಬಲ ನಾಯಕರಾಗಿ ಬೆಳೆದುನಿಂತರು.

ಸುಂದರೇಶ್ ಉತ್ತಮ ಅಧ್ಯಯನಶೀಲರಾಗಿದ್ದರು. ಅತ್ಯಂತ ಸರಳವಾದ ಜೀವನಕ್ರಮ ರೂಢಿಸಿಕೊಂಡಿದ್ದರು.  ಇಡೀ ಒಂದು ಪೀಳಿಗೆಯ ಮೇಲೆ ಪ್ರಭಾವ ಬೀರಿ ಜಿಲ್ಲೆಯಲ್ಲಿ ನೂರಾರು ಯುವನಾಯಕರು ರೂಪುಗೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರಣೆಯಾದರು.

1984, 1989 ಮತ್ತು 1991ರ ಲೋಕಸಭಾ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದರು. 1994ರಲ್ಲಿ ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಕೇವಲ 750 ಮತಗಳ ಅಂತರದಿಂದ ಸೋಲನುಭವಿಸಿದರು.

ಚುನಾವಣೆ ರಾಜಕೀಯ ಅವರ ಹೋರಾಟದ ಒಂದು ಭಾಗವಾಗಿತ್ತು. ಅದನ್ನು ಮೀರಿ ಅವರು ಶೋಷಿತರ ಪರ ದೊಡ್ಡ ಧ್ವನಿಯಾಗಿ ಕೆಲಸ ಮಾಡಿದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರಗಳ ಗಮನ ಸೆಳೆದಿದ್ದರು.

ಜನರಲ್ಲಿ ಮೌಢ್ಯ ಮತ್ತು ಅನಕ್ಷರತೆಯನ್ನು ಹೋಗಲಾಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಅಕ್ಷರಧಾರಾ, ಭಾರತ ಜ್ಞಾನ ವಿಜ್ಞಾನ ಯಾತ್ರೆ, ಚಿಣ್ಣರಮೇಳ ಮುಂತಾದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಜನರಿಗೆ ಪ್ರೇರಣೆ ನೀಡುತ್ತಿದ್ದರು. ಮಾತಿಗೆ ನಿಂತರೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ರಾಜ್ಯಮಟ್ಟದ ನಾಯಕನಾಗಿ ಬೆಳೆದು ನಿಂತಿದ್ದರು.

ಕೇವಲ ಹದಿನೆಂಟು ವರ್ಷಗಳ ತನ್ನ ಸಾರ್ವಜನಿಕ ಬದುಕಿನಲ್ಲಿ  ಬಿ.ಕೆ.ಸುಂದ್ರೇಶ್ ಒಂದು ಅದ್ಭುತವನ್ನೇ ಸಾಧಿಸಿದ್ದರು.

ಮುಂಬೈನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಮಾವೇಶದಲ್ಲಿ ಭಾಗವಹಿಸಿ ಹಿಂತಿರುಗುವಾಗ  ಇನ್ನೇನು ಬೆಂಗಳೂರು ಯಶವಂತಪುರದಲ್ಲಿ ರೈಲಿನಿಂದ ಇಳಿಯಲು ಕೆಲ ಹೊತ್ತು ಇತ್ತಷ್ಟೆ.  ರೈಲು ಹಳಿತಪ್ಪಿ ಉಂಟಾದ ಅಪಘಾತದಲ್ಲಿ ಸುಂದ್ರೇಶ್ ಅಸುನೀಗಿದ್ದರು.

ಆಗಿನ್ನು ಅವರಿಗೆ 38 ವರ್ಷ. ಅವರು ಬದುಕಿದ್ದರೆ ಇವತ್ತು ಜಿಲ್ಲೆಗೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ದೊಡ್ಡ ಭರವಸೆಯ ನಾಯಕರಾಗಿರುತ್ತಿದ್ದರು.

ಅವರ ಪತ್ನಿ ರಾಧಾ ಸುಂದ್ರೇಶ್ ಅವರು ಸಹ ತನ್ನ ಪತಿಯ ಜನಪರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆಗ ನಾವಿನ್ನೂ ವಿದ್ಯಾರ್ಥಿಗಳು. ಆಗ ನಾವು ಕಂಡ ಹೆಗಲಿಗೆ ಬ್ಯಾಗು ನೇತಾಕಿಕೊಂಡ, ನೀಳಕಾಯದ, ಹೊಳಪು ಕಂಗಳ ಸುಂದ್ರೇಶಣ್ಣನ ಚಿತ್ರ ಮನದಲ್ಲಿ ಹಚ್ಚಹಸಿರಾಗಿದೆ. ಅವರೊಂದಿಗಿನ ಅಲ್ಪಕಾಲದ ಒಡನಾಟ ನನ್ನ ಮನದಾಳದಲ್ಲಿ ಅಚ್ಚಳಿಯದ ಚಿತ್ರವಾಗಿ ಉಳಿದಿದೆ.

* ಪ್ರಸನ್ನ ಗೌಡಳ್ಳಿ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ