October 5, 2024

ಮೂಲ : ಡಿ.ವಿ.ಜಿ

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

ನಮ್ಮ ರೂಪ ಹೇಗಾದರು ಇರಲಿ ಮುಖದಲ್ಲಿ ಒಂದು ಸುಂದರ ನಗುವಿದ್ದು ಸದಾ ಹಸನ್ಮುಖಿಯಾಗಿದ್ದರೆ ಅದು ನಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಕಳೆಯನ್ನು ತಂದು ಕೊಡುತ್ತದೆ. ನಮ್ಮ ಎದುರಿನವರ ಮುಖದಲ್ಲಿ ಕೂಡ ತಮಗರಿವಿಲ್ಲದೆಯೆ ಮೊಗದಲ್ಲಿ ನಗು ತುಂಬುವಂತೆ ಮಾಡುತ್ತದೆ. ಎಂತಹ ಅದ್ಭುತ ಶಕ್ತಿಯಿದೆ ನೋಡಿ ಒಂದು ನಗೆಗೆ !! ಆದರೆ ಒಂದು, ಹಾಗಂತ ಸದಾ ನಗಲು ಸಾಧ್ಯವೇ? ಎಂಬುದು ಸಹಜವಾದ ಪ್ರಶ್ನೆ… ಖಂಡಿತ ಇಲ್ಲ! ಹಾಗಾದರೆ ಇದು ಎಷ್ಟರಮಟ್ಟಿಗೆ ಸರಿ ಎನ್ನುವುದಾದರೆ… ಇಲ್ಲಿದೆ ನೋಡಿ ಉತ್ತರ.

ಈ ನಗೆ ಎನ್ನುವುದು ಭಗವಂತನ ವರದಾನ ಜೊತೆಗೆ ಒಂದು ಸುಂದರವಾದ ಕಲೆ ಕೂಡ. ಇದು ಎಲ್ಲರಿಗು ಬರುವುದಿಲ್ಲ. ಕೆಲವರಿಗೆ ನೀವು ಎಷ್ಟೇ ತಮಾಷೆ ಮಾಡಿ ಒಂದು ಚೂರು ನಗು ಬರುವುದಿಲ್ಲ ಹಾಗಂತ ಅವರು ಅರಸಿಕರಲ್ಲ ಆದರೆ ಅದು ಅವರ ಸ್ವಭಾವ. ಮುಖ ಎಷ್ಟು ಮುದ್ದಾಗಿದೆ ಆದರೆ ಅದೇನು ಗಂಭೀರ! ಒಂದು ಚೂರು ನಗು ಇದ್ದಿದ್ದರೆ ಇನ್ನು ಚೆಂದ ಕಾಣ್ತಿತ್ತು ಅನ್ನುವ ಮಾತು ನಾವು ಎಷ್ಟೋ ಸಾರಿ ಕೇಳಿರುತ್ತೇವೆ. ಮುಖದ ಮೇಲಿನ ಒಂದು ನಗೆಗೆ ಎಂತವರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿದೆ ಎಂದರೆ ಇದರ ಮಹತ್ವ ಎಷ್ಟಿದೆ ನೋಡಿ!

ಈ ನಗೆಯಲ್ಲಿ ಕೊಂಕುನಗೆ, ಕುಹಕ ನಗೆ, ವ್ಯಂಗ್ಯ ನಗೆ, ಕಪಟ ನಗೆ ಹೀಗೆ ನಾನಾ ವಿಧಗಳಿವೆ. ಆದರೆ ಇವು ವಿಷ ಬಾಣಗಳಂತೆ ಎದುರಿನವರಿಗೆ ನೋವುಂಟು ಮಾಡುವ ನಗೆಗಳು. ಇಂತಹ ನಗೆ ಬೇಡವೇಬೇಡ, ನಮ್ಮ ನಗು ಎದುರಿನವರನ್ನು ಇರಿಯದೇ ಅವರ ತುಟಿಯಂಚಲ್ಲಿ ಪ್ರತಿನಗು ತರಿಸುವಂತಿರಬೇಕು. ನಮ್ಮ ಮುಖದ ನಗು ನಮ್ಮ ಜೀವನವನ್ನು ಪ್ರತಿನಿಧಿಸುವುದರ ಜೊತೆಗೆ ಒಂದು ಒಳ್ಳೆಯ ಭಾವನೆಯನ್ನು ಮೂಡಿಸುತ್ತದೆ ಎಂದರೆ ತಪ್ಪಿಲ್ಲ. ಇಂತಹ ನಗೆಯನ್ನು ನಮ್ಮ ಡಿ.ವಿ.ಜಿ ಯವರು ಹೀಗೆ ಹೇಳುತ್ತಾರೆ.

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ |
ನಗುವಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ ||

ನಗುನಗುತ್ತಾ ಜೀವನವನ್ನು ನಡೆಸುವುದು ಸಹಜವಾದ ಕರ್ತವ್ಯ(ಧರ್ಮ) ಜೊತೆಗೆ ಇತರರನ್ನು ನಗಿಸುವುದು ಉತ್ತಮವಾದ ನಡವಳಿಕೆ. ಇಂತಹ ನಗೆಯನ್ನು ಕೇಳುತ್ತಾ ನಾವು ಸಹ ಜೊತೆಗೆ ನಗುನಗುತ್ತಿರುವುದು ಎಲ್ಲದಕ್ಕಿಂತ ಅತಿಶಯವಾದ ಗುಣ. ನಾವು ನಗುತ್ತಾ ಜೀವನವನ್ನು ನಡೆಸಿ ಇತರರನ್ನು ನಗಿಸಿ ಸದಾ ಎಲ್ಲರೊಂದಿಗೆ ನಗುತ್ತಾ ಬಾಳುವ ವರವನ್ನು ನೀಡು ಎಂದು ದೇವರಲ್ಲಿ ಬೇಡಿಕೊಳ್ಳಬೇಕು ಎನ್ನುತ್ತಾರೆ.

ಸಹಜತೆಯನ್ನು ರೂಢಿಸಿಕೊಂಡು ನಾವಷ್ಟೇ ನಗುವುದಕ್ಕಿಂತ ನಮ್ಮ ಸುತ್ತಲಿನವರನ್ನು ನಗಿಸುತ್ತಿದ್ದರೆ ಅದೇ ಸುಖ; ಇಂತಹ ಅಮೂಲ್ಯವಾದ ಅವಕಾಶವನ್ನು ನಾವು ದೇವರಲ್ಲಿ ಕೇಳಿಕೊಂಡು ಬಂದಿರಬೇಕು. ನಾವು ‘ನಗೆಯಹಬ್ಬ’ ಎಂಬ ಕಾರ್ಯಕ್ರಮವನ್ನು ಸಾಕಷ್ಟು ನೋಡುತೇವೆ ಅದರಲ್ಲಿ ನಮ್ಮ ಗಂಗಾವತಿ ಪ್ರಾಣೇಶರವರು ಸಾಕಷ್ಟು ನಗಿಸುತ್ತಿರುತ್ತಾರೆ ಇದು ದೇವರು ಅವರಿಗೆ ಕೊಟ್ಟಿರುವ ಅಮೂಲ್ಯವಾದ ವರ. ಇನ್ನೊಬ್ಬರನ್ನು ಸಂತೋಷವಾಗಿಡುವುದು ಸುಲಭ ಸಾಧ್ಯವಲ್ಲ ಎಂದು ನಮ್ಮ ಕನ್ನಡದ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಕಣ್ಣನ್ ರವರು ಹೇಳುತ್ತಿರುತ್ತಾರೆ.

ನಿಷ್ಕಲ್ಮಶ ನಗೆಯನ್ನು ಮೊಗದಲ್ಲಿ ಹೊತ್ತಿರುವವರು ಬಹಳ ವಿರಳ ಏಕೆಂದರೆ ಎಲ್ಲ ಕಡೆಯಲ್ಲೂ ನಮಗೆ ಗುಳ್ಳೆನರಿಯಂತಹÀವರೆ ಹೆಚ್ಚು ಕಾಣಸಿಗುತ್ತಾರೆ. ಇಂತಹವರು ಎದುರಿನಲ್ಲಿ ಕಿವಿಯವರೆಗೂ ಬಾಯಗಲಿಸಿ ನಕ್ಕು ಬೆನ್ನು ಮರೆಯಾದೊಡನೆ ಕುಹಕವಾಡುತ್ತಾರೆ. ಮನಸ್ಸನ್ನು ಘಾಸಿಗೊಳಿಸುವ ಜನರ ನಗುವು ಇದಾಗಿದ್ದು ಇಂತಹ ನಗೆ ನಮಗೆ ಬೇಡ ಏಕೆಂದರೆ ನೋವುಂಡ ಮನಸ್ಸಿನ ಶಾಪ ಬೆಂಕಿಗಿಂತ ತಾಪ ಹೆಚ್ಚು. ಇದು ನಂಬಿಕೆ ಎಂಬ ಬುಡವನ್ನೇ ಅಳ್ಳಾಡಿಸಿಬಿಡುತ್ತದೆ. ಆದ್ದರಿಂದ ಮಗುವಿನಂತಹ ನಿಷ್ಕಲ್ಮಶ ನಗೆಯನ್ನು ಕೊಡು ಎಂದು ಭಗವಂತನಲ್ಲಿ ಕೇಳಿ ಕೊಳ್ಳಬೇಕೆನ್ನುವುದು ನಮ್ಮ ಡಿ.ವಿ.ಜಿ ಯವರ ಅಭಿಮತ. ಆದ್ದರಿಂದ ಡಿವಿಜಿಯವರು ಯಾವಾಗಲು ನಗುನಗುತ್ತಾ ಇರುತ್ತಿದ್ದರು ಈಗಲೂ ಸಹ ಅವರ ಯಾವುದೇ ಭಾವಚಿತ್ರವನ್ನು ನೋಡಿದರು ಅವರ ಮಗುವಿನಂತಹ ನಗು ಎದ್ದು ಕಾಣುತ್ತದೆ. “ಒಂದೊಮ್ಮೆ ಬದುಕಿನಲಿ ಸಾವಿರ ಕಷ್ಟಗಳೇ ಬರಲಿ ಮೊಗದ ನಗೆ ಮಾಸದಿರಲಿ” ಎಂದು ಅವರು ಅವರನ್ನು ಕಾಣಲು ಬಂದವರಿಗೆಲ್ಲ ಹೇಳುತ್ತಿದ್ದರಂತೆ.

ನಗು ಯಾವಾಗಲು ಸಂಚಿನ ನಗೆಯಾಗದೆ ಮಿಂಚಿನ ನಗೆಯಾಗಿರಬೇಕು, ಇದು ಹೇಗಿರಬೇಕೆಂದರೆ ಕಷ್ಟ ಸುಖ ಎಲ್ಲವನ್ನು ಎದುರಿಸುವಂತಿರಬೇಕು.

“ ನಗು ಮನದಿ ಲೋಗರ ವಿಕಾರಂಗಳನು ನೋಡಿ |
ಬಿಗಿತುಟಿಯ ದುಡಿವಂದು ನೋವಪಡುವಂದು ||
ಪೊಗು ವಿಶ್ವಜೀವನದ ಜೀವಾಂತರಂಗದಲಿ |
ನಗುನಗುತ ಬಾಳ್, ತೆರಳು _ ಮಂಕುತಿಮ್ಮ ||

ಈ ಲೋಕದ ಜನಗಳ(ಲೋಗರ) ಹೇಯ ಕೃತ್ಯಗಳನ್ನು ನೋಡಿದಾಗ ಮನಸಿನಲ್ಲಿಯೇ ನಗಬೇಕು. ಆದರೆ ಕೆಲಸ ಮಾಡುವಾಗ, ನೋವು ಅನುಭವಿಸುವಾಗ ತುಟಿಯನ್ನು ಬಿಗಿಹಿಡಿದು ಅನುಭವಿಸ ಬೇಕು, ಜಗತ್ತಿನ ಎಲ್ಲ ಜೀವಿಗಳ ಜೊತೆ ಸೇರಿಕೊಂಡು ಜೀವನವನ್ನು ನಡೆಸಬೇಕು, ಬದುಕಿರುವಷ್ಟು ದಿನವು ಸಹ ನಗುನಗುತ್ತಾ ಸಂತೋಷ ವಾಗಿ ಬಾಳಿ ಕಾಲನ ಕರೆ ಬಂದಾಗ ನಗುತ್ತಲೆ ಹೊರಡಬೇಕು ಎನ್ನುತ್ತಾರೆ ಡಿವಿಜಿಯವರು.

ಜನಗಳ ಸ್ವಭಾವ ಹೇಗೆಂದರೆ ಮೊಸರಿನಲ್ಲಿ ಕಲ್ಲು ಹುಡುಕುವುದು. ಇನ್ನೊಬ್ಬರನ್ನು ಏನಾದರು ಅನ್ನದಿದ್ದರೆ ಅವರಿಗೆ ಉಂಡ ಅನ್ನ ಜೀರ್ಣವಾಗುವುದಿಲ್ಲ. ಆದ್ದರಿಂದ ಇಂತಹ ಹೀನರನ್ನು ನೋಡಿ ಮನಸ್ಸಿನಲ್ಲಿಯೇ ನಗಬೇಕು. ಏಕೆಂದರೆ ಜೋರಾಗಿ ಅವರೆದುರು ನಗುವುದು ಸಹ ಅಪಾಯಕಾರಿ. ಇಲ್ಲಿ ಬಿದ್ದವರನ್ನು ಎತ್ತುವವರಿಗಿಂತ ನೋಡಿ ನಗುವವರೆ ಹೆಚ್ಚು ಮಂದಿ. ಆದ್ದರಿಂದ ನಮ್ಮ ಸಂಕಟ ಬೇರೆಯವರ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಲು ನೋವು ನುಂಗಿ ತುಟಿಯಂಚಿನಲ್ಲಿ ನಗೆ ತುಂಬಿಕೊಳ್ಳಬೇಕು. ಏಕೆಂದರೆ ನಮ್ಮ ಪಾಲಿಗೆ ಬಂದ ನೋವು ನಮ್ಮ ಕರ್ಮವೆ ಹೊರತು ಅದನ್ನು ಇನ್ನೊಬ್ಬರೆದುರು ತೋಡಿಕೊಂಡು ಅವರು ಸಹ ಸಂಕಟಪಡುವಂತೆ ಮಾಡುವುದು ಬೇಡ. ನೋವಿಗೆ ಸ್ಪಂದಿಸುವವರು ಮತ್ತು ಸಂತಸಪಡುವವರು ಇಬ್ಬರೂ ಸಹ ಇರುವುದ ರಿಂದ ಆದಷ್ಟೂ ನುಂಗಿಕೊಂಡು ಬದುಕುವುದು ಶ್ರೇಯಸ್ಕರವಾದುದು. ನಮ್ಮ ಸುತ್ತಲಿನ ಸಮಾಜದಲ್ಲಿ ವಿವಿಧ ವ್ಯಕ್ತಿತ್ವವನ್ನು ಹೊಂದಿರುವ ಜನರು ಇದ್ದರು ಸಹ ಅವರೆದುರು ನಾವು ನಗುತ್ತಾ ಸಂತೋಷದಿಂದ ಬಾಳುವುದು ಸಹ ಇಂದು ಅದ್ಭುತವಾದ ಕಲೇಯೇ ಸರಿ !! ಇಂತಹ ಕಲೆಯನ್ನು ರೂಢಿಸಿಕೊಂಡವರಿಗೆ ಸಾವಿನ ಭಯವಿಲ್ಲ ಅದನ್ನು ಸಹ ನಗುತ್ತಲೇ ಸ್ವೀಕರಿಸುವ ಎದೆಗಾರಿಕೆ ಬರುತ್ತದೆ. ಆದ್ದರಿಂದ ಬದುಕಿರುವಷ್ಟು ಕಾಲ ನಾವು ಸಂತೋಷವಾಗಿ ನಮ್ಮ ಸುತ್ತಲಿರುವ ವರನ್ನು ಆದಷ್ಟೂ ಸಂತೋಷವಾಗಿ ಇಡಲು ಪ್ರಯತ್ನ ಪಡಬೇಕು.

ಲೋಕದಲ್ಲಿ ಕೆಲವು ಜನರಿಗೆ ಈ ರೀತಿ ಸಂತೋಷವಾಗಿರು ವವರನ್ನು ಕಂಡರೆ ಅದೇನೋ ಅಸೂಯೆ, ಜೊತೆಗೆ ಆ ಸಂತೋಷ ವನ್ನು ಹಾಳುಗೆಡುಹಬೇಕೆಂಬ ಕೊಳಕು ಮನಸ್ಸು ಇವರು ತಾವೂ ಸಹ ಸುಖವಾಗಿರುವುದಿಲ್ಲ ಅಂತಹವರಿಗೆ ಡಿವಿಜಿ ಯವರ ಕಿವಿಮಾತು ಹೀಗಿದೆ;

ನಗುನಗುವ ಕಣ್ಗಳಿಗೆ ಹೊಗೆಯನೊದಲುಬೇಡ |
ಜಗವ ಸುಡುಗಾಡೆನುವ ಕಟುತಪಸು ಬೇಡ ||
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |
ಮಿಗೆ ಚಿಂತೆ ತಲೆಹರಟೆ _ ಮಂಕುತಿಮ್ಮ ||

ಯಾರಾದರು ನಗುನಗುತ್ತ ಇದ್ದಾರೆಂದರೆ ಅವರಿಗೆ ಕೇಡುಮಾಡಲು ಹೋಗಬೇಡ; ಕಣ್ಣಲ್ಲಿ ನೀರು ತರಿಸಬೇಡ ಇಲ್ಲಸಲ್ಲದ ಮಾತನಾಡುತ್ತ ಈ ಜಗತ್ತು ಒಂದು ಸುಡುಗಾಡು ಎಂಬ ವೈರಾಗ್ಯದ ಮಾತುಗಳು ಸಹ ಬೇಡ. ಹಸುಗೊಸು ತನ್ನ ತಂದೆ ತಾಯಿಯ ಮುಂದೆ ಕಪಟವರಿಯದೆ ನಗುನಗುತ್ತಿರುವಂತೆ ಇದ್ದು ಈ ಜಗತ್ತಿನ ಚಿಂತೆಯನ್ನು ಬಿಟ್ಟುಬಿಡಬೇಕು.

ಅಸೂಯಾಪರರಾಗಿ ಪರರ ನೆಮ್ಮದಿಯನ್ನು ಹಾಳುಗೆಡಹುವ ದುರಾಲೋಚನೆ ಮಾಡದೆ ಕಂದನಂತಹ ಮುಗ್ಧ ಮನಸ್ಸನ್ನು ಹೊಂದಿ ಎಲ್ಲರ ಮುಂದೆ ನಗುನಗುತ್ತಿರಬೇಕು. ಸುಖಾಸುಮ್ಮನೆ ಈ ಜಗತ್ತಿನ ವ್ಯವಹಾರವನ್ನು ಶಪಿಸುವುದು ತರವಲ್ಲ. ಏಕೆಂದರೆ ಮನುಜರಿಗೆ ಸುಖ ಸಂತೋಷ ದು:ಖ ದುಮ್ಮಾನ ಎಲ್ಲವು ಸಹಜವಾಗಿ ಬಂದು ಹೋಗುವಂತಹದು. ಯಾವುದು ಸಹ ಶಾಶ್ವತವಾಗಿ ನಿಲ್ಲುವಂತಹದಲ್ಲ ಆದ್ದರಿಂದ ಒಮ್ಮೆ ಬಂದ ಕಷ್ಟವನ್ನು ಬೆಟ್ಟದಷ್ಟು ಮಾಡಿಕೊಂಡು ಜಗತ್ತನ್ನು ನಿಂದನೆ ಮಾಡುವುದು ಸರಿಯಲ್ಲ. ಇದು “ ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ”. ಊರ ಉಸಾಬರಿ ಮಾಡಿ ವಿನಾಕಾರಣ ಚಿಂತೆ ಹಚ್ಚಿಕೊಂಡು ಕೊರಗುವುದು ಮೂರ್ಖ ತನವಾಗುತ್ತದೆ ಆದ್ದರಿಂದ ಇರುವಷ್ಟು ದಿನವು ಹಸುಕಂದನಂತೆ ಯಾವ ಕಪಟವಿಲ್ಲದೆ ಬದುಕನ್ನು ಸಾಗಿಸುವುದು ಜಾಣತನವಿರಬೇಕು.

ಹೃದಯಾಂತರಾಳದಿಂದ ಬರುವ ನಗು ದ್ವೇಷ ಅಸೊಯೆ ಗಳನ್ನು ಮರೆತು ದು:ಖ ದುಮ್ಮಾನಗಳನ್ನು ಮೆಟ್ಟಿ ನಿಲ್ಲುನಂತಿರಬೇಕು. ಅದು ನಮ್ಮ ಸುತ್ತಲಿರುವವರನ್ನು ತನ್ನತ್ತ ಸೆಳೆದು ಅವರಲ್ಲಿ ಚೈತನ್ಯ ಹೊಮ್ಮಿಸುವಂತಿರಬೇಕು. ಇಂತಹ ಒಳ್ಳೆಯ ನಗೆಯು ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಸುತ್ತದೆ. ನಾವು ಎಷ್ಟೇ ಅಲಂಕಾರ ಮಾಡಿಕೊಂಡರು ಸಹ ಮುಖದಲ್ಲಿ ನಗು ಇಲ್ಲದಿದ್ದರೆ ಆ ಅಲಂಕಾರ ಒಂದು ನಿರ್ಜೀವ ಬೊಂಬೆಗೆ ಮಾಡಿದಂತಿರುತ್ತದೆ. ನಗುವುದರಿಂದ ದೇಹದ ಎಲ್ಲ ಸ್ನಾಯುಗಳು ವಿಕಸನಗೊಂಡು ರಕ್ತ ಸಂಚಾರ ಸರಾಗ ವಾಗಿ ಆಗುತ್ತದೆ. ಮನಸ್ಸು ಸಹ ಹಗುರವಾಗಿ ಉಲ್ಲಾಸಭರಿತನಾಗುತ್ತದೆ, ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ ಇಷ್ಟೆಲ್ಲ ಆರೋಗ್ಯವರ್ಧಕ ಗುಣವನ್ನು ಹೊಂದಿರುವ ಎಕೈಕ ಟಾನಿಕ್ ಈ ನಗು ಎಂದಾದಲ್ಲಿ ಇದನ್ನು ನಿತ್ಯ ತೆಗೆದುಕೊಂಡು ಸಂತೃಪ್ತಿಯಿಂದ ಇರುವುದರ ಜೊತೆಗೆ ನಗುತ್ತಾ ಎಲ್ಲರೊಂದಿಗೆ ಬೆರೆತು ಮನಸ್ಸಿನ ದುಗುಡದಿಂದ ಮುಕ್ತರಾಗೋಣ.
***************

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ