October 5, 2024

ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಎಂ.ಕೆ. ಪ್ರಾಣೇಶ್ ಅವರು ಕರ್ನಾಟಕ ರಾಜ್ಯ ವಿಧಾನಪರಿಷತ್ ಉಪಸಭಾಪತಿಯಾಗಿ ಎರಡನೇ ಬಾರಿ ಆಯ್ಕೆಯಾಗುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಇಂದು ನಡೆದ ಪರಿಷತ್ ಉಪಸಭಾಪತಿ ಚುನಾವಣೆಯಲ್ಲಿ ಬಿ.ಜೆ.ಪಿ.ಯ 39 ಸದಸ್ಯರ ಮತಗಳು ಪ್ರಾಣೇಶ್ ಅವರಿಗೆ ದೊರೆತವು. ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಅರವಿಂದ ಕುಮಾರ್ ಕಾಂಗ್ರೇಸ್ ನ 26 ಮತಗಳನ್ನು ಗಳಿಸಿದರು. ಜೆ.ಡಿ.ಎಸ್. ಚುನಾವಣೆಯಲ್ಲಿ ತಟಸ್ಥ ನಿಲುವು ತೆಳೆಯಿತು.

ಅವರು ವಿಧಾನಪರಿಷತ್ತಿಗೆ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಇದೀಗ ಅವರಿಗೆ ಆರಂಭದಲ್ಲಿಯೇ ವಿಧಾನಪರಿಷತ್ ಉಪಸಭಾಪತಿ ಸ್ಥಾನ ದೊರಕಿದ್ದು, ರಾಜ್ಯದಲ್ಲಿ ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸದೇ ಇದ್ದರೆ ಮುಂದಿನ ಸುಮಾರು ಐದು ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿ ಮುಂದುವರಿಯುವ ಅವಕಾಶಗಳು ಇವೆ.  ಮಾತ್ರವಲ್ಲ ಸಭಾಪತಿ ಸ್ಥಾನವನ್ನು ಪಡೆಯವ ಸಾಧ್ಯತೆಗಳು ಇವೆ.

ಎಂ.ಕೆ. ಪ್ರಾಣೇಶ್ ಅವರ ರಾಜಕೀಯ ಹಾದಿ : 
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಶ್ರೀಮತಿ ರತ್ನಮ್ಮ ಮತ್ತು ಎಂ.ಕೆ. ಕಾಳೇಗೌಡ ದಂಪತಿಗಳ ಮಗನಾಗಿ 1961ರ ನವೆಂಬರ್ 28 ರಂದು ಜನಿಸಿದ ಪ್ರಾಣೇಶ್ ಬಾಲ್ಯದಿಂದಲೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಬಂದವರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದ ಪ್ರಾಣೇಶ್ ಅವರು 1989ರಲ್ಲಿ ಆಗಿನ್ನು ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಬಿ.ಜೆ.ಪಿ. ಪಕ್ಷದ ಸದಸ್ಯತ್ವ ಪಡೆಯುವ ಮೂಲಕ ತಮ್ಮ ರಾಜಕೀಯ ಜೀವನದ ಪಯಣ ಆರಂಭಿಸಿದರು.

ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಸಂಘದ ನಿಕಟ ಸಂಪರ್ಕದಲ್ಲಿ ಗುರುತಿಸಿಕೊಂಡರು.

ಯುವಕರ ನಡುವೆ ಪ್ರಾಣೇಶಣ್ಣ ಎಂದೇ ಕರೆಸಿಕೊಳ್ಳುತ್ತಾ ಜನಪ್ರಿಯ ನಾಯಕರಾಗಿ ಬೆಳೆಯತೊಡಗಿದರು. 1991ರಿಂದ ಮೂಡಿಗೆರೆ ತಾಲ್ಲೂಕು ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷರಾಗಿ ಸತತ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. 1998ರಿಂದ 2001ರ ವರೆಗೆ ಜಿಲ್ಲಾ ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಜಿಲ್ಲಾ ಪಂಚಾಯತಿ ಸದಸ್ಯರಾಗಿ
ಪ್ರಾಣೇಶ್ 2000ನೇ ಇಸವಿಯಲ್ಲಿ ಗೋಣಿಬೀಡು ಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. ತಮ್ಮ ಉತ್ತಮವಾದ ವಾಕ್ಚಾತುರ್ಯ ದಿಂದ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಗಮನ ಸೆಳೆದರು.

ಬಿ.ಜೆ.ಪಿ. ಜಿಲ್ಲಾ ಸಾರಥ್ಯ : 2001ರಿಂದ 2004ರವರೆಗೆ ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷರಾಗಿ ಪ್ರಾಣೇಶ್ ಅವರು ಕಾರ್ಯನಿರ್ವಹಿಸಿದರು. ಇದೇ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಯ ವಿಧಾನಸಭಾ ಚುನಾವಣೆಗಳಲ್ಲಿ ಬಿ.ಜೆ.ಪಿ. ಜಯಭೇರಿ ಬಾರಿಸಿತ್ತು. ಕಾಂಗ್ರೆಸ್‍ನ ಪಾರುಪತ್ಯವನ್ನು ಅಂತ್ಯಗೊಳಿಸಿ ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಮತ್ತು ತರೀಕೆರೆ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದರು. ಈ ಗೆಲುವಿನಲ್ಲಿ ಪ್ರಾಣೇಶ್ ಅವರ ಸಂಘಟನಾ ಶಕ್ತಿ ಬಹುಮುಖ್ಯ ಪಾತ್ರ ವಹಿಸಿತ್ತು.

2007ರಿಂದ 2011ರವರೆಗೆ ಎರಡನೇ ಬಾರಿಗೆ ಪ್ರಾಣೇಶ್ ಅವರು ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದ ತಳಮಟ್ಟದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಎಲ್ಲರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸುತ್ತಾ ಸಾಗಿದರು.

ಅರಣ್ಯ ವಿಹಾರಧಾಮ ನಿಗಮ ಅಧ್ಯಕ್ಷ : ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ 2010ರಿಂದ 2013ರವರೆಗೆ ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿತ್ತು. ಈ ಅವಧಿಯಲ್ಲಿ ನಿಗಮದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ನೂರಾರು ನೌಕರರನ್ನು ಖಾಯಂಗೊಳಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ವಿಧಾನಪರಿಷತ್ತಿಗೆ ಆಯ್ಕೆ : 2016ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ರಾಜ್ಯ ವಿಧಾನ ಪರಿಷತ್ತಿಗೆ ಬಹುಮತದಿಂದ ಆಯ್ಕೆಯಾದರು. ಆರು ವರ್ಷ ವಿಧಾನಪರಿಷತ್ ಸದಸ್ಯರಾಗಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಪಕ್ಷದ ವರಿಷ್ಟರ ಗಮನ ಸೆಳೆದಿದ್ದರು. ಜೊತೆಗೆ ತಮ್ಮ ವಿಧಾನಪರಿಷತ್ ಸದಸ್ಯ ಅನುದಾನದಲ್ಲಿ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಜನರೇಟರ್ ನೀಡಿ ಹೊಸ ಚಿಂತನೆಗೆ ನಾಂದಿ ಹಾಡಿದ್ದರು. ವಿದ್ಯುತ್ ಕಣ್ಣಾಮುಚ್ಚಾಲೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಜನರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಮಾಡಲು ಈ ಜನರೇಟರ್‍ಗಳು ಸಹಾಯಕವಾಗಿವೆ.

ಅರಸಿ ಬಂದ ಉಪಸಭಾಪತಿ ಹುದ್ದೆ  : 2021ರಲ್ಲಿ ವಿಧಾನ ಪರಿಷತ್ತಿನಲ್ಲಿ ಹಿರಿಯ ಸದಸ್ಯರ ನಡುವೆಯೂ ಮೊದಲ ಬಾರಿಗೆ ಆಯ್ಕೆಯಾಗಿದ್ದ ಪ್ರಾಣೇಶ್ ಅವರಿಗೆ ಪಕ್ಷ ಮನ್ನಣೆ ನೀಡಿ ಉಪಸಭಾಪತಿಯನ್ನಾಗಿ ಮಾಡಿತ್ತು.

ಈ ಹಿಂದೆ ವಿಧಾನಸಭಾ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದ ಡಿ.ಬಿ. ಚಂದ್ರೇಗೌಡರು, ವಿಧಾನಪರಿಷತ್ ಸಭಾಪತಿಯಾಗಿದ್ದ ಬಿ.ಎಲ್. ಶಂಕರ್ ಅವರ ನಂತರ ಪ್ರಾಣೇಶ್ ಅವರು ವಿಧಾನ ಪರಿಷತ್ ಉಪಸಭಾಪತಿಯಾಗುವ ಮೂಲಕ ಜಿಲ್ಲೆಯ ಗೌರವನ್ನು ಹೆಚ್ಚಿಸಿದ್ದರು.

ಸಭಾಪತಿಯವರ ಅನುಪಸ್ಥಿತಿಯಲ್ಲಿ ಇವರು ವಿಧಾನಪರಿಷತ್ ಸಭಾಪತಿಯಾಗಿಯೂ ಕಾರ್ಯಕಲಾಪ ನಿರ್ವಹಿಸಿದ್ದರು. ಹಿಂದಿನ ಅವಧಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಅನೇಕ ಮಹತ್ವದ ಕಾಯ್ದೆಗಳಿಗೆ ಮೇಲ್ಮನೆಯಲ್ಲಿಯ ಅನುಮೋದನೆ ನೀಡುವಾಗ ಎಂ.ಕೆ. ಪ್ರಾಣೇಶ್ ಅವರು ಸಭಾಪತಿ ಸ್ಥಾನದಿಂದ ಸದನವನ್ನು ಮುನ್ನಡೆಸಿದ್ದರು.

ಇದೀಗ ಎಂ.ಕೆ. ಪ್ರಾಣೇಶ್ ಅವರು ಕರ್ನಾಟಕ ರಾಜ್ಯ ವಿಧಾನಪರಿಷತ್ ಉಪಸಭಾಪತಿಯಾಗಿ  ಚುನಾವಣೆಯ ಮೂಲಕ ಎರಡನೇ ಬಾರಿ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದ್ದಾರೆ.

ಈ ಸಂದರ್ಭದಲ್ಲಿ ದರ್ಪಣ ಬಳಗದ ಎಲ್ಲಾ ಓದುಗರ ಪರವಾಗಿ ಶ್ರೀಯುತ ಎಂ.ಕೆ. ಪ್ರಾಣೇಶ್ ಅವರಿಗೆ ಪ್ರೀತಿಪೂರ್ವಕ ಶುಭಾಶಯಗಳನ್ನು ಕೋರುತ್ತೇವೆ.
***********

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ