October 5, 2024

ದಕ್ಷ ಪೊಲೀಸ್ ಅಧಿಕಾರಿಯಾಗಿ ಇಲಾಖೆಯಲ್ಲಿ ಹೆಸರು ಮಾಡಿರುವ, ಜನರಿಂದ ಪ್ರಶಂಸೆಗೆ ಪಾತ್ರರಾಗಿರುವ ಬಿ.ಎಸ್. ಸತೀಶ್ ಬಿಳಗಲಿ ಅವರಿಗೆ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಲಾಗಿದೆ.

ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ದಳದಲ್ಲಿ ಪೊಲೀಸ್ ನಿರೀಕ್ಷರಾಗಿರುವ ಬಿ.ಎಸ್. ಸತೀಶ್ ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಇವರಿಂದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರ ಉಪಸ್ಥಿತಿಯಲ್ಲಿ ಪದಕ ಸ್ವೀಕರಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಉನ್ನತ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಈ ಪದಕಕ್ಕೆ ಭಾಜನರಾಗಿದ್ದಾರೆ.

ಸತೀಶ್ ರವರು ಚಿಕ್ಕಮಗಳೂರು ಜಿಲ್ಲೆ, ಕಳಸ ಸಮೀಪದ ಬಿಳಗಲಿ ಗ್ರಾಮದವರು. ಸುಬ್ಬಣ್ಣ ಬಿ.ಪಿ. ಮತ್ತು ಕಮಲಾಕ್ಷಿ ದಂಪತಿಗಳ ಪ್ರಥಮ ಪುತ್ರರಾಗಿದ್ದಾರೆ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಜಾವಳಿಯಲ್ಲಿ, ಪ್ರೌಢಶಾಲೆಯನ್ನು ಬಾಳೆಹೊನ್ನೂರಿನಲ್ಲಿ ಪೂರೈಸಿದ್ದ ಇವರು 1996ರಲ್ಲಿ ಮೂಡಿಗೆರೆಯಲ್ಲಿ ಪೊಲೀಸ್ ಪೇದೆಯಾಗಿ ವೃತ್ತಿ ಪ್ರಾರಂಭಿಸಿದ್ದರು.

2003ರಲ್ಲಿ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಬ್ ಇನ್ಸ್‍ಪೆಕ್ಟರ್ ಆಗಿ ಮಂಡ್ಯ, ಮೈಸೂರು, ಬೆಂಗಳೂರು, ಉಡುಪಿ ಮುಂತಾದ ಕಡೆಗಳ ಪೊಲೀಸ್ ಠಾಣೆ ಮತ್ತು ಸಿಐಡಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪೊಲೀಸ್ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಸಿಐಡಿ ಎನ್.ಡಿ.ಸಿ. ಯಲ್ಲಿ ಕರ್ತವ್ಯ ನಿರ್ವಹಿಸಿ ಸುಳ್ಯ ಮತ್ತು ದಾಂಡೇಲಿಯಲ್ಲಿ ವೃತ್ತ ನಿರೀಕ್ಷಕರಾಗಿ, ಕೊಡಗಿನಲ್ಲಿ ಗುಪ್ತಚರ ವಿಭಾಗದಲ್ಲಿ ಮತ್ತು ಉಡುಪಿ ವಿಭಾಗದ ಎಸಿಬಿ ಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಸಾಮಾಜಿಕ ಕಳಕಳಿ : ಪೊಲೀಸ್ ಇಲಾಖೆಯ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆ ಸತೀಶ್ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬಡವರು ನೊಂದವರ ಬಗ್ಗೆ ಅಪಾರ ಕಾಳಜಿ ತೋರ್ಪಡಿಸುತ್ತಾರೆ.

ಮೂಡಿಗೆರೆಯಲ್ಲಿ 2020ರಲ್ಲಿ ನೆರೆಹಾವಳಿ ಸಂದರ್ಭದಲ್ಲಿ ಇವರ ಗ್ರಾಮದ ಸುತ್ತಮುತ್ತಲ ಜನರಿಗೆ ಸತೀಶ್ ತಮ್ಮ ಪರಿಚಯಸ್ಥ ದಾನಿಗಳಿಂದ ಮನೆನಿರ್ಮಾಣ ಮಾಡಿಸಿಕೊಟ್ಟಿರುತ್ತಾರೆ. ನಿರಾಶ್ರಿತರಿಗೆ ಅವಶ್ಯಕ ಸಾಮಾಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಿರುತ್ತಾರೆ. ಹೆಬ್ರಿಯಿಂದ 20 ಕಿ.ಮೀ. ದೂರದಲ್ಲಿರುವ ನಾಲ್ಪಡು ದಟ್ಟ ಅರಣ್ಯದಲ್ಲಿ ಟಾರ್ಪಲ್ ಗುಡಿಸಲಿನಲ್ಲಿ ವಾಸವಾಗಿದ್ದ ನಾರಾಯಣಗೌಡ ಇವರಿಗೆ ಸತೀಶ್ ಅವರು ವೃತ್ತ ನಿರೀಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಸೇರಿ ಮನೆಯನ್ನು ಕಟ್ಟಿಸಿಕೊಟ್ಟಿದ್ದರು.

ಪ್ರಾಮಾಣಿಕ ಸೇವೆ : ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡು ಬರುವುದು ಬಹು ಅಪರೂಪದಲ್ಲಿ ಅಪರೂಪ. ಇಂತಹ ಸನ್ನಿವೇಶದಲ್ಲಿ ಸತೀಶ್ ಅವರು ತಮ್ಮ ವೃತ್ತಿಬದುಕಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉಡುಪಿ ಭಾಗದಲ್ಲಿ ಸತೀಶ್ ಅತ್ಯಂತ ಜನಾನುರಾಗಿಯಾಗಿದ್ದಾರೆ. ತಮ್ಮ ಸರಳ ನಡೆ ಮತ್ತು ನಿಷ್ಠಾವಂತ ಸೇವೆಯಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಇಲಾಖೆಯಲ್ಲಿಯೂ ಇವರು ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ವೃತ್ತಿ ಸಂದರ್ಭದಲ್ಲಿ ಸರ್ಕಾರ ನೀಡುವ ವಸ್ತ್ರಗಳನ್ನೇ ದರಿಸುವ ಮೂಲಕ ಇಲಾಖೆಗೆ ಮಾದರಿಯಾಗಿದ್ದಾರೆ.

ಇವರ ವಿಶೇಷ ಸಾಧನೆಗಳು : 2012ರಲ್ಲಿ ಕೇರಳದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕೊಲೆ ಕೇಸಿನ ತರಬೇತಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. 2018ರಲ್ಲಿ ಕೇಂದ್ರ ಸರ್ಕಾರ ಡೆವಲಪಿಂಗ್ ಸ್ಪೆಷಲಿಸ್ಟ್ ಇನ್ ಇನ್ವೆಸ್ಟಿಗೇಟರ್ ಎಂಬ ವಿಶೇಷ ತರಬೇತಿಗಾಗಿ ಸಿಂಗಾಪುರಕ್ಕೆ ಕಳುಹಿಸಿತ್ತು. 2015ರಲ್ಲಿ ಪಂಜಾಬ್‍ನಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. 2018ರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಗೆ ನಡೆದ ಪರೀಕ್ಷೆಯಲ್ಲಿ 82ನೇ ಸ್ಥಾನ, 2019ರಲ್ಲಿ ಭಾರತ ಚೀನಾ ಗಡಿ ಲೆಹ್ ಲಡಾಕ್ ನಲ್ಲಿ ಬಿಸಿನೀರಿನ ಬುಗ್ಗೆಗೆ ಭೇಟಿ ನೀಡಿ 1959ರಲ್ಲಿ ಭಾರತ ಚೀನಾ ಯುದ್ಧದಲ್ಲಿ ಮಡಿದ ಪೊಲೀಸರಿಗೆ ಗೌರವ ವಂದನೆ ಸಲ್ಲಿಕೆ. 2021ರಲ್ಲಿ ಉಡುಪಿಯ ಈಜು ಕ್ಲಬ್ ವತಿಯಿಂದ ಮಕ್ಕಳಾದ ಸುದನ್ವ ಮತ್ತು ಸುದಾಂಶು ಅವರೊಂದಿಗೆ ಅರಬ್ಬಿ ಸಮುದ್ರದಲ್ಲಿ ಸುಮಾರು 3.8 ಕಿ.ಮೀ. ದೂರ ಮಲ್ಪೆ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆವರೆಗೆ ಈಜಿದ್ದಾರೆ.

ಸತೀಶ್ ಮೂಡಿಗೆರೆ ಹಿರಿಯ ಎಲ್.ಐ.ಸಿ, ಪ್ರತಿನಿಧಿ ಬಿ.ಎಸ್. ಸಂತೋಷ್ ಇವರ ಸಹೋದರ. ರಾಷ್ಟ್ರೀಯ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಬಿ.ಆರ್. ಮೀನಾಕ್ಷಿಯವರ ಸೋದರ ಸಂಬಂಧಿಯಾಗಿದ್ದಾರೆ.

ಇಂತಹ ದಕ್ಷ ಅಧಿಕಾರಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಮೂಲದವರು ಎಂಬುದು ನಮಗೆ ಹೆಮ್ಮೆಯಾಗಿದೆ. ಅವರಿಗೆ ರಾಷ್ಟ್ರಪತಿ ಪದಕ ದೊರಕಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳು.

ಚಿತ್ರ ವರದಿ : ನಯನ ತಳವಾರ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ