October 5, 2024

– ಪೂರ್ಣೇಶ್ ಮತ್ತಾವರ

99809 53426

 

ಈಗೆಲ್ಲಾ ಮಲೆನಾಡಿನ ತುಂಬಾ, ಅದರಲ್ಲೂ ವಿಶೇಷವಾಗಿ ಮೂಡಿಗೆರೆ ಸಕಲೇಶಪುರ ಭಾಗದಲ್ಲಿ ಆನೆಗಳದ್ದೇ ಸುದ್ದಿ. ಕಳೆದ ಮೂರು ತಿಂಗಳ ಅವಧಿಯಲ್ಲೇ ಆನೆ ತುಳಿತಕ್ಕೆ ಒಳಗಾಗಿ ಪ್ರತ್ಯೇಕ ಪ್ರಕರಣಗಳಲ್ಲಿ ಈ ಭಾಗದ ನಾಲ್ವರು ಮೃತಪಟ್ಟಿದ್ದು ಈ ಸುದ್ದಿ ಮುನ್ನೆಲೆಗೆ ಬರಲು, ಜೊತೆಗೆ ಆನೆಗಳ ಬಗ್ಗೆ ಜನಾಕ್ರೋಶ ಭುಗಿಲೇಳಲು ಬಹು ಮುಖ್ಯ ಕಾರಣವಾಗಿದೆ.

ಈ ಜನಾಕ್ರೋಶವನ್ನು ತಣಿಸಲೆಂಬಂತೆ ಅರಣ್ಯ ಇಲಾಖೆಯಿಂದ ಒಂದಷ್ಟು ಆನೆಗಳನ್ನು ಹಿಡಿಯುವ ಕಾರ್ಯವು ಈಗಾಗಲೇ ಚಾಲ್ತಿಯಲ್ಲಿದೆ. ಚಾಲ್ತಿಯಲ್ಲಿರುವ ಈ ಕಾರ್ಯ ಮುಗಿದ ಕೂಡಲೇ ಜನಾಕ್ರೋಶ ತಾತ್ಕಾಲಿಕವಾಗಿ ಶಮನಗೊಳ್ಳಲೂಬಹುದು.

ಆದರೆ, ಮಾನವ-ಆನೆ ಸಂಘರ್ಷ ಈ ಭಾಗದಲ್ಲಿ ಶಾಶ್ವತವಾಗಿ ಕೊನೆಗೊಳ್ಳಲಿದೆಯಾ ಎಂದರೆ ‘ಖಂಡಿತವಾಗಿ ಇಲ್ಲ’ ಎಂಬ ಉತ್ತರವನ್ನೇ ಹೇಳಬೇಕಾಗುತ್ತದೆ; ಮಾನವ-ಆನೆ ಸಂಘರ್ಷಕ್ಕೆ ಮತ್ತಷ್ಟು ದೀರ್ಘಕಾಲೀನ ಪರಿಹಾರಗಳ ಬಗ್ಗೆ ಚಿಂತಿಸಿ ಕಾರ್ಯರೂಪಕ್ಕೆ ತರಲೇಬೇಕಾದ ಅನಿವಾರ್ಯತೆಯಿದೆ.

ಮಾನವ-ಆನೆ ಸಂಘರ್ಷ ಇಂದು ನೆನ್ನೆಯದಲ್ಲ. ಕಾಡಿಗೆ ಹೊಂದಿಕೊಂಡಂತೆ ಇರುವ ಬಹುತೇಕ ಜನವಸತಿಗಳ ಹತ್ತಾರು ದಶಕಗಳ ದೈನಂದಿನ ಗೋಳು ಈ ಆನೆ ಸಮಸ್ಯೆ. ಅದಾಗಲೇ ಬೆಳೆದು ಇನ್ನೇನು ಕೊಯ್ಲು ಮಾಡಬೇಕೆಂದಿದ್ದ ಭತ್ತದ ಪೈರನ್ನು ಆನೆಗಳು ತಿಂದೋ, ತುಳಿದೋ ನಾಶಪಡಿಸುವುದು, ಹತ್ತಾರು ವರ್ಷಗಳ ಕಾಲ ಬೆಳೆದು ಬಂಪರ್ ಫಸಲು ಕೊಡುತ್ತಲಿದ್ದ ಕಾಫಿ, ಅಡಿಕೆಯ ಗಿಡಗಳನ್ನು ಕ್ಷಣಮಾತ್ರದಲ್ಲಿ ನೆಲಸಮಮಾಡುವುದು, ಅಪರೂಪಕ್ಕೆ ವಸತಿ ಪ್ರದೇಶಗಳಿಗೆ ನುಗ್ಗಿ ಆಸ್ತಿ ಹಾನಿ‌ ಉಂಟು ಮಾಡುವುದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಇದಿಷ್ಟೇ ಆಗಿದ್ದರೆ ಜನ ಒಂದು ಹಂತಕ್ಕೆ ಸಹಿಸಿಕೊಂಡು ಸುಮ್ಮನಿದ್ದು ಬಿಡುತ್ತಿದ್ದರೇನೊ. ಆದರೆ ಇತ್ತೀಚಿನ ವರ್ಷಗಳಲ್ಲಿ ಮನುಷ್ಯರ ಮೇಲಿನ ಆನೆ ದಾಳಿ, ಜೀವ ಹಾನಿ ಸಾಮಾನ್ಯವಾಗಿ ಬಿಡುತ್ತಿದೆ.

ಇದರ ಪರಿಣಾಮವಾಗಿ ಆತಂಕ ಎಂಬುದು ಕಾಡಿಗೆ ಹೊಂದಿಕೊಂಡಂತೆ ಇರುವ ಜನವಸತಿಗಳ ಜನರನ್ನು ಇನ್ನಿಲ್ಲದಂತೆ ಕಾಡುತ್ತಾ ಅವರ ನಿದ್ರೆ, ನೆಮ್ಮದಿಗಳನ್ನು ಕಸಿದಿದೆ.
ತೋಟಗಳಿಗೆ ಕೆಲಸಗಾರರು ಬರದಂತಾಗಿ, ಗದ್ದೆ ನಾಟಿ ಮಾಡದಂತಾಗಿ, ಮಕ್ಕಳು ಖುಷಿಯಿಂದ ಶಾಲೆಗೆ ಹೋಗದಂತಾಗಿದೆ; ಹಬ್ಬ ಹುಣ್ಣಿಮೆಯ ಹೆಸರಿನಲ್ಲಿ ಸಂಬಂಧಿಕರ ಮನೆಯ ರಾತ್ರಿ ಕಾರ್ಯಕ್ರಮಗಳಲ್ಲಿ‌ ಪಾಲ್ಗೊಳ್ಳದಂತಾಗಿದೆ. ಗದ್ದೆ, ತೋಟಗಳನ್ನು ಕಾಯುವ ಸಲುವಾಗಿ ಇಲ್ಲವೇ ವಿದ್ಯುತ್ ಬೇಲಿ‌ ನಿರ್ಮಿಸುವ ಸಲುವಾಗಿ ಹೆಚ್ಚುವರಿ ಖರ್ಚಿನ ಹೊರೆಯನ್ನು ಹೊರಬೇಕಾಗಿದೆ. ಸೌದೆ, ಹುಲ್ಲು ಅಥವಾ ಕಾಡುಹಣ್ಣುಗಳಿಗೆಂದು ಕಾಡಿನ ಕಡೆ ಮುಖ ಮಾಡಲೂ ಯೋಚಿಸುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಸಹಜವಾಗಿಯೇ ಈ ಭಾಗದ ಜನರಿಗೆ ಆನೆಗಳ ಬಗ್ಗೆ ದ್ವೇಷ, ಹಗೆತನ, ಅಸಹಿಷ್ಣುತೆಯ ಭಾವನೆ ಮೂಡುತ್ತಿದೆ.

ಇನ್ನೂ ಈ ಪರಿಸ್ಥಿತಿಗೆ ಆನೆಗಳಷ್ಟೇ ಕಾರಣ ಎಂದರೆ ಅದು ಏಕಪಕ್ಷೀಯ ಆಪಾದನೆಯಾಗುತ್ತದೆ.

ಜನರ ಸಂಖ್ಯೆ ಹೆಚ್ಚಾದಂತೆಲ್ಲ ಜನವಸತಿಗಾಗಿ, ಕೃಷಿ ಪ್ರದೇಶದ ವಿಸ್ತರಣೆಗಾಗಿ ವಿಶಾಲ ಕಾಡಿನ ವಿಸ್ತಾರವನ್ನು ಕಿರಿದಾಗಿಸುತ್ತಿರುವುದು, ಆನೆಗಳು ಕಾಲಾಂತರದಿಂದಲೂ ಒಂದು ಕಾಡಿನ ಭಾಗದಿಂದ ಮತ್ತೊಂದು ಕಾಡಿನ ಭಾಗಕ್ಕೆ ಅಡ್ಡಾಡುತ್ತಿದ್ದ ಸಂಪರ್ಕ ದಾರಿಗಳನ್ನು ಒತ್ತುವರಿಮಾಡಿ ಬೇಲಿಗಳನ್ನು ನಿರ್ಮಿಸಿರುವುದು, ಮರಕಡಿತ, ಒಂದೇ ಬಗೆಯ ಮರನೆಡುವಿಕೆ, ಹವಾಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದ ಕಾಡಿನಲ್ಲಿ ಆಹಾರ ಕೊರತೆ ಉಂಟಾಗುತ್ತಿರುವುದು, ಆನೆ ಆವಾಸಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತಿತರ ಮನುಷ್ಯ ಹಸ್ತಕ್ಷೇಪಗಳಿಂದ ಆನೆಗಳಿಗೆ ಕ್ಷೋಭೆ ತಂದೊಡ್ಡಿರುವುದು, ಇತ್ಯಾದಿ ಕಾರಣಗಳಿಂದಾಗಿ ಆನೆಗಳು ಆಹಾರ ಅರಸಿಯೋ ಅಥವಾ ದಿಕ್ಕು ತಪ್ಪಿಯೋ ಪದೇ ಪದೇ ಜನವಸತಿಗಳತ್ತ ಬರುವಂತಾಗಿದೆ.

ಈ ಸಂದರ್ಭಗಳಲೆಲ್ಲಾ ಅಪಾರ ಆಸ್ತಿ ಪಾಸ್ತಿ ಹಾನಿಯ ಜೊತೆಗೆ ಜನರ ಜೀವಹಾನಿ, ಕೆಲ ಸಂದರ್ಭಗಳಲ್ಲಿ ಆನೆಗಳ ಜೀವಹಾನಿ ಸಂಭವಿಸುತ್ತಾ ಮಾನವ ಆನೆ ಸಂಘರ್ಷಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲೂ ದೊಡ್ಡ ಸವಾಲುಗಳನ್ನು ಹುಟ್ಟು ಹಾಕಿದೆ.

ಈ ಸಂಘರ್ಷ ಇನ್ನೂ ಉಲ್ಬಣಗೊಳ್ಳದಂತೆ ತಡೆಯುವ, ಸಾಧ್ಯವಾದಷ್ಟೂ ಕಡಿಮೆಗೊಳಿಸುವ ಅನಿವಾರ್ಯತೆ ನಮ್ಮ ಮುಂದಿದ್ದು ಈ ದಿಸೆಯಲ್ಲಿ ನಾವು ಕೆಳಕಂಡ ಕ್ರಮಗಳನ್ನು ಅನುಸರಿಸಬಹುದಾಗಿದೆ.

ಸಾಂಪ್ರದಾಯಿಕವಾಗಿ ಆನೆಗಳು ಊರಿನತ್ತ, ಬೆಳೆಗಳತ್ತ ಮುಖ ಮಾಡಿದವೆಂದರೆ ಕೂಗಿ, ತಟ್ಟೆ ಬಾರಿಸಿ , ಪಟಾಕಿ ಸಿಡಿಸಿ ಅಥವಾ ಬೆಂಕಿ ಎಸೆದು ಬೆದರಿಸುವ ಕ್ರಮ ರೂಢಿಯಲ್ಲಿತ್ತು. ಈಗಲೂ ರೂಢಿಯಲ್ಲಿದೆ. ಊರಂಚಿಗೆ ಆನೆಗಳು ಬಂದಾಗ ಇದು ಅನಿವಾರ್ಯ ಆಯ್ಕೆಯೂ ಆಗಿರುತ್ತದೆ. ಒಂದು ಹಂತಕ್ಕೆ ಆನೆ ಓಡಿಸುವಲ್ಲಿ ಯಶಸ್ಸನ್ನೂ ನೀಡುತ್ತದೆ. ಆದರೆ ಅನೇಕ ಬಾರಿ ಈ ಕ್ರಮ ಆನೆಗಳನ್ನು ಕ್ಷೋಭೆಗೊಳಪಡಿಸಿ, ಮತ್ತಷ್ಟು ಕೆರಳಿಸಿ ದಿಕ್ಕಾಪಾಲು ಮಾಡಿ‌ ಹೆಚ್ಚಿನ ಹಾನಿಗೆ ಕಾರಣವಾಗುವುದಿದೆ.

ಆನೆಗಳ ಪ್ರವೇಶ ತಡೆಗೆ ತೋಟಗಳ ಸುತ್ತ ದುಬಾರಿ ವಿದ್ಯುತ್ ಬೇಲಿ ಅಳವಡಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆನೆಗಳ ಸಹಜ ಪಥಗಳನ್ನು ಅಡ್ಡಗಟ್ಟಿದಂತಾಗಿ ಅವು ದಿಕ್ಕು ತೋಚದೆ, ಕಂಡ ಕಂಡಲ್ಲಿ ನುಗ್ಗ ಬಹುದೆಂಬ ಅರಿವು ನಮಗೆ ಅಗತ್ಯ. ಆದ್ದರಿಂದ ಜನವಸತಿ ಪ್ರದೇಶಗಳ ಸಮೀಪ ಅಗತ್ಯವಿದ್ದಲ್ಲಿ ಮಾತ್ರ ಈ ವಿದ್ಯುತ್ ಬೇಲಿಗಳ ಅಳವಡಿಕೆ ಸೂಕ್ತ. ಅಲ್ಲದೇ ಆನೆಗಳು ಒಂದಷ್ಟು ಚಾಲಾಕಿತನದಿಂದ ಬಡಿಗೆಯಿಂದ ಬಡಿದೋ ಇಲ್ಲವೇ ತನ್ನ ದಂತಗಳಿಂದ ಎಳೆದೋ ವಿದ್ಯುತ್ ಬೇಲಿ ಅಳವಡಿಕೆಯ ಉದ್ದೇಶವನ್ನೇ ನಿರರ್ಥಕಗೊಳಿಸಿ ಅದನ್ನು ದಾಟ ಬಲ್ಲವೆಂಬ ಅರಿವು ನಮಗೆ ಅಗತ್ಯ.

ಆನೆಗಳು ದಾಟದಂತೆ ಟ್ರೆಂಚ್ ಹೊಡೆಯುವುದು ಹಾಗೂ ಕೋಟಿಗಟ್ಟಲೆ ವೆಚ್ಚದಲ್ಲಿ ರೈಲ್ವೆ ಟ್ರ್ಯಾಕ್‌ ಬೇಲಿಯ ಅಳವಡಿಕೆ ನಡೆದಿದೆ. ಹಲವೆಡೆ ಈ ತಡೆಗಳನ್ನು ದಾಟುವಲ್ಲಿ ಆನೆಗಳು ಯಶಸ್ವಿಯಾಗುತ್ತಲೇ ಇರುವುದನ್ನು ಕಂಡಾಗ ಇವುಗಳ ನಿರರ್ಥಕತೆ ನಮಗೆ ಅರಿವಾಗುತ್ತದೆ. ತಡೆಗೋಡೆಗಳ ರಕ್ಷಣೆಗೆ ನಾವು ದಿನದ ಐದತ್ತು ನಿಮಿಷಗಳನ್ನು ಮೀಸಲಿಡಬಲ್ಲೆವಾದರೆ ಅದನ್ನು ದಾಟಲು ಆನೆಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೀಸಲಿಡಬಲ್ಲವು ಎಂಬುದು ನಮಗೆ ನೆನಪಿರಬೇಕು.

ಆನೆಗಳ ದಾಳಿ ನಡೆದಾಗಲೆಲ್ಲಾ ಆನೆಗಳಿಗೆ ಸಂತಾನ ಹರಣ ಕಾರ್ಯಾಚರಣೆ ಮಾಡಿ ಎಂಬ ಸಲಹೆಗಳು ಕೇಳಿ ಬರುತ್ತವೆ. ಈ ಕ್ರಿಯೆ ಆನೆಗಳ ಲಿಂಗ ಸಮತೆ ಹಾಗು ಭಾವನಾತ್ಮಕ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮತ್ತಷ್ಟು ಅವಘಡಗಳಿಗೆ ಕಾರಣವಾಗುತ್ತದೆ.

ಆನೆಯೊಂದು‌ ಉಪಟಳ ನೀಡುತ್ತಿದ್ದಾಗ ಅದನ್ನು ಸ್ಥಳಾಂತರ ಮಾಡಲಾಗುತ್ತದೆ. ಆದರೆ ಆನೆಯ ಉಪಟಳ ದೊಡ್ಡ ಮಟ್ಟಿಗಿನದಾಗಿದ್ದು, ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಸ್ಥಳಾಂತರದ ಬಗ್ಗೆಯೂ ಯೋಚಿಸಬೇಕಾಗುತ್ತದೆ.
ಏಕೆಂದರೆ, ಸ್ಥಳಾಂತರಗೊಂಡ ಆನೆಯನ್ನು ಆನೆಕ್ಯಾಂಪ್ ಗಳಲ್ಲದೆ ಕಾಡಿನಲ್ಲಿ ಬಿಟ್ಟಾಗ ಅದು ತನ್ನ ಮೂಲ ಆವಾಸಕ್ಕೆ ಬರುವ ಸಂಭವವೇ ಹೆಚ್ಚು ಮತ್ತು ಹೀಗೆ ಬರುವ ದಾರಿಯಲ್ಲಿ ಅದರ ಪುಂಡಾಟಿಕೆ ಇನ್ನೂ ಹೆಚ್ಚಿನ ಅನಾಹುತಗಳನ್ನು ಮಾಡಬಲ್ಲದು.
ಆದ್ದರಿಂದಲೇ ನಾವು ಈ ಮೇಲಿನ‌ ಕ್ರಮಗಳಲ್ಲದೆ ದೀರ್ಘ ಕಾಲದ ಪರಿಹಾರಗಳ ಬಗ್ಗೆಯೂ ಯೋಚಿಸಬೇಕಿದೆ.

ಈ ನಿಟ್ಟಿನಲ್ಲಿ ಮೊದಲನೆಯದಾಗಿ ಕಾಡಿಗೆ ಹೊಂದಿಕೊಂಡಂತೆ ಇರುವ ಜನವಸತಿಗಳ ಜನರಿಗೆ ಆನೆಗಳ ಬಗ್ಗೆ, ಅವುಗಳ ವರ್ತನೆಯ ಬಗ್ಗೆ ಆಳವಾದ ತಿಳುವಳಿಕೆ ಮೂಡಿಸಬೇಕಿದೆ.
ಆನೆಗಳು ನಮ್ಮ ಪಾಲಿಗೆ ಹೆಚ್ಚಿವೆ ಎನಿಸಿದರೂ ಜಾಗತಿಕವಾಗಿ ಅವುಗಳ ಸಂಖ್ಯೆ ಕ್ಷೀಣಿಸುತ್ತಲೇ ಸಾಗಿದೆ ಎಂಬುದನ್ನೂ ತಿಳಿಯಪಡಿಸಬೇಕಿದೆ. ಆನೆಗಳು ಕಾಲಕಾಲಕ್ಕೆ ಆಹಾರ, ನೀರು, ಸಂಗಾತಿಗಳನ್ನು ಅರಸಿ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ವಲಸೆ ಹೋಗುವುದು ಅವುಗಳ ಉಳಿವಿಗಾಗಿ ಅನಿವಾರ್ಯವೆಂದೂ, ಅವುಗಳ ಪಾರಂಪರಿಕ ದಾರಿಗಳನ್ನು ಅಡ್ಡಗಟ್ಟುವುದರಿಂದ ದಿಕ್ಕುತಪ್ಪಿ ಜನವಸತಿಗಳತ್ತ ನುಗ್ಗಿ ಹೆಚ್ಚಿನ ಹಾನಿಗೆ ಕಾರಣವಾಗುತ್ತವೆ ಎಂಬುದನ್ನೂ ಮನದಟ್ಟು ಮಾಡಿಸಬೇಕಿದೆ. ಅಲ್ಲದೇ ಆನೆಗಳು ಕಾಡಿನಲ್ಲೇ ಇರಬೇಕು ಎಂಬುದು ನಮ್ಮ ದೃಷ್ಟಿಕೋನವಷ್ಟೇ ಎಂಬುದನ್ನು, ಸಂಘರ್ಷದ ಬದಲಿಗೆ ಸಹಜೀವನ ಅನಿವಾರ್ಯ ಎಂಬುದನ್ನೂ ತಿಳಿಹೇಳಬೇಕಿದೆ.
ಆನೆಗಳು ಆತಂಕಗೊಂಡಿರುವುದನ್ನು ಬಾಲ ಎತ್ತಿಯೋ, ಕಿವಿಗಳನ್ನು ಅಗಲಿಸಿಯೋ, ಇತ್ಯಾದಿ ಭಾವಗಳಿಂದ ಪ್ರದರ್ಶಿಸುತ್ತವೆಂಬ ವರ್ತನಾ ಸೂಕ್ಷ್ಮಗಳ ಬಗ್ಗೆಯೂ ಅರಿವು ಮೂಡಿಸಬೇಕಿದೆ.

ಬಹುಮುಖ್ಯವಾಗಿ ಗಮನಿಸ ಬೇಕಾದ ಅಂಶವೆಂದರೆ ಆನೆಗಳು ಅನಿರೀಕ್ಷಿತವಾಗಿ ಎದುರಾದಾಗಲೇ ಮನುಷ್ಯರ ಸಾವು ಸಂಭವಿಸಿರುವಂತದ್ದು. ಅಂದರೆ ಆನೆಯ ಇರುವಿಕೆ ಮೊದಲೇ ತಿಳಿದಿದ್ದರೆ ಅದೆಷ್ಟೋ ಆನೆ ತುಳಿತದ ಸಾವುಗಳು ಸಂಭವಿಸುತ್ತಿರಲಿಲ್ಲ ಎಂಬುದು. ಈ ದಿಸೆಯಲ್ಲಿ ಅರಣ್ಯ ಇಲಾಖೆ ಆನೆಗಳ ಚಲನವಲನಗಳ ನಿಗಾ ಇಟ್ಟು ಆನೆಗಳ ಇರುವಿಕೆಯ ಬಗ್ಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ತುರ್ತು ಕಾರ್ಯರೂಪಕ್ಕೆ ತರಬೇಕಿದೆ. ಆನೆಯೊಂದು ಆಹಾರ ಸೇವಿಸಿರುವ ಕುರುಹುಗಳು, ಅದರ ಲದ್ದಿ, ಅದು ನಿರ್ಮಿಸಿದ ಹೊಸ ದಾರಿ, ಸ್ಥಳೀಯರ ಮಾಹಿತಿ, ಇತ್ಯಾದಿಗಳು ಆನೆಗಳ ಚಲನವಲನಗಳನ್ನು ಗಮನಿಸಲು, ಮುದಿನ ನಡೆಗಳನ್ನು ಊಹಿಸಲು ನೆರವಾಗುತ್ತವೆ.

ಈ ದಿಸೆಯಲ್ಲಿ ತಮಿಳುನಾಡಿನ ವಾಲ್ಪರೈ ಪ್ರದೇಶದಲ್ಲಿನ ಪ್ರಯೋಗಗಳು ಸಾಕಷ್ಟು ಯಶಸ್ವಿಯಾಗಿದ್ದು, ಈ ಹಿಂದೆ ವಾರ್ಷಿಕ 5 ರಷ್ಟಿದ್ದ ಆನೆ ತುಳಿತದ ಸಾವುಗಳ ಸರಾಸರಿ ಈ ವರ್ಷ ಶೂನ್ಯ ಸಾವಿನ ದಾಖಲೆಗೆ ಬಂದು ನಿಂತಿದೆ.

  • ಸ್ಥಳೀಯರ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸಿ, ಶೇಖರಿಸಿ ಏಕಕಾಲದಲ್ಲಿ ಎಲ್ಲಾ ನಂಬರ್ ಗಳಿಗೂ ಆನೆಗಳು ಇಂತಹ ಸ್ಥಳಗಳಲ್ಲಿ ಇವೆ ಎಂಬ ಎಸ್.ಎಂ.ಎಸ್ ಸಂದೇಶಗಳನ್ನು ಕಾಲಕಾಲಕ್ಕೆ ಕಳುಹಿಸುತ್ತಿದ್ದರೆ ಜನರು ಆನೆಗಳ ಬಗ್ಗೆ ಜಾಗೃತರಾಗಿರುತ್ತಾರೆ. ಸ್ಥಳೀಯ ಕೇಬಲ್ ನೆಟ್ವರ್ಕ್ ಅಳವಡಿಸಿ ಇಲ್ಲವೇ ಸ್ಥಳೀಯ ರೇಡಿಯೋ ಕೇಂದ್ರವನ್ನು ಆರಂಭಿಸಿಯೂ ಆನೆಗಳ ಮಾಹಿತಿ ಬಿತ್ತರಿಸಬಹುದಾಗಿದೆ.
  • ಆನೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಕಿ.ಮೀ ನಷ್ಟು ದೂರಕ್ಕೆ ಕಾಣುವಷ್ಟು ಎತ್ತರದಲ್ಲಿ ಎಚ್ಚರಿಕೆ ಸೂಚನೆಯ ಕೆಂಪು ದೀಪಗಳನ್ನು ಅಳವಡಿಸಿ ಆನೆ ಇರುವಲ್ಲಿನ ದೀಪವನ್ನು ರಿಮೋಟ್ ಕಂಟ್ರೋಲ್ ನೆರವಿನಿಂದ ಹೊತ್ತಿಸಿದರೆ ಆನೆಗಳ ಮಾಹಿತಿ ಸುಲಭವಾಗಿ ರವಾನೆಯಾದಂತಾಗುತ್ತದೆ.
    ಆನೆಯೊಂದು ತೀರಾ ಪುಂಡುತನ ತೋರುತ್ತಿದ್ದಲ್ಲಿ ರೇಡಿಯೋ ಕಾಲರ್ ಅಳವಡಿಸಿಯೂ ಅದರ ಚಲನವಲನಗಳ ಮೇಲೆ ನಿಗಾ ಇಡಬಹುದು.
  • ಹಲವು ವೇಳೆ ಆನೆಗಳು ತಮ್ಮ ಆವಾಸಗಳಲ್ಲಿನ ಆಹಾರ ಕೊರತೆಯಿಂದ ವಲಸೆಗೆ ಮುಂದಾಗುತ್ತವೆಯಾದ್ದರಿಂದ ಆನೆಗಳ ಆಹಾರವಾದ ಬಿದಿರು, ಬೈನೆ ಇತ್ಯಾದಿ ಸಸ್ಯಗಳು ಹಾಗೂ ಆನೆಗಳು ತಿನ್ನುವ ಹತ್ತಾರು ಬಗೆಯ ಹುಲ್ಲುಗಳನ್ನು ಬೆಳೆಸಿ ಕಾಡನ್ನು ಉತ್ಕೃಷ್ಟಗೊಳಿಸುವತ್ತ ಅರಣ್ಯ ಇಲಾಖೆ ಗಮನಹರಿಸಿದರೆ ಆಹಾರಕ್ಕಾಗಿ ಆನೆಗಳ ವಲಸೆಯ ಪ್ರಮಾಣವನ್ನು, ಆ ಮೂಲಕ ಮಾನವ-ಆನೆ ಸಂಘರ್ಷವನ್ನು ತಗ್ಗಿಸಬಹುದು.
    ಮಾನವ-ಆನೆ ಸಂಘರ್ಷಕ್ಕೆ ಕಾಡು‌ ಕಾರಣ ಎಂದಾದರೆ ಪರಿಹಾರವೂ ಕಾಡೇ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕು.

ಇನ್ನೂ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿಯಾದಾಗ ಅದರಿಂದ ಉಂಟಾದ ಆರ್ಥಿಕ ನಷ್ಟಕ್ಕೆ ಸೂಕ್ತ ಪರಿಹಾರವನ್ನು ತತ್ ಕ್ಷಣದಲ್ಲಿ ನೀಡುವ ವ್ಯವಸ್ಥೆಯಾಗಬೇಕು. ಕಡಿಮೆ ಪರಿಹಾರ ಮೊತ್ತ, ಅದನ್ನು ನೀಡುವಲ್ಲಿನ ಸತಾಯಿಸುವಿಕೆ, ಲಂಚದ ಬೇಡಿಕೆ ಇತ್ಯಾದಿಗಳು ರೈತರಲ್ಲಿ ಹತಾಶೆಯನ್ನು ಹಾಗೂ ಆನೆಗಳ ಬಗ್ಗೆ ಆಕ್ರೋಶವನ್ನು ಉಂಟು ಮಾಡಬಲ್ಲವು.
ಅಲ್ಲದೇ ಕಾಡಿಗೆ ಹೊಂದಿಕೊಂಡ ಪ್ರದೇಶಗಳ ರೈತರಿಗೆ ಆನೆಗಳು ಕಡಿಮೆ ಪ್ರಮಾಣದಲ್ಲಿ ಆಕರ್ಷಿತವಾಗುವ ಬೆಳೆಗಳನ್ನು ಬೆಳೆಯಲು ಸಲಹೆ ನೀಡಬಹುದು. ಜೊತೆಗೆ, ಅರಣ್ಯ ಕೃಷಿಯನ್ನು ಪ್ರೋತ್ಸಾಹಿಸಿ ಪರಿಸರ ರಕ್ಷಣೆಯ ಯೋಜನೆಗಳಡಿ ಪ್ರತಿ ವರ್ಷ ರೈತರಿಗೆ ಸಹಾಯಧನ ನೀಡಬಹುದು.
ಖಾಲಿ ಬಿಟ್ಟ ಗದ್ದೆ, ಜಮೀನುಗಳಿಗೂ ಸಹ ನಿಗದಿತ ಪರಿಹಾರ ಮೊತ್ತ ನೀಡಿ ಆನೆ ದಾಳಿಯ ಸಲುವಾಗಿ ಬೆಳೆ ಬೆಳೆಯಲಾಗದ ರೈತರ ಅಸಹಾಯಕತೆಗೆ ಆಸರೆಯಾಗಿ ನಿಂತು ಆನೆಗಳ ಮೇಲಿನ ಅವರ ಕೋಪವನ್ನು ತಗ್ಗಿಸಬಹುದು. ರೈತರು ಒಪ್ಪಿದರೆ ಉತ್ತಮ ಮೊತ್ತ ನೀಡಿ ಅವರ ಜಮೀನುಗಳನ್ನು ಕೊಂಡು ಕಾಡು ಬೆಳೆಸಬಹುದು.
ಆಫ್ರಿಕ ಖಂಡದ ಕೆಲವು ದೇಶಗಳಲ್ಲಿ ಸೇರಿದಂತೆ ಹಲವೆಡೆ ಬಳಕೆಯಲ್ಲಿರುವಂತೆ ಆನೆಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸ ಬಹುದಾದ ಸ್ಥಳಗಳಲ್ಲಿ ಅವುಗಳನ್ನು ಹಿಮ್ಮೆಟ್ಟಿಸುವ ಘಾಟು ವಾಸನೆ ಕಾರಕಗಳನ್ನು ಬಳಸಬಹುದು.

ಒಟ್ಟಿನಲ್ಲಿ, ಸ್ಥಳೀಯ ಮಟ್ಟದಲ್ಲಿಯೇ ಆಯಾ ಸಂದರ್ಭ-ಸನ್ನಿವೇಷಗಳಿಗೆ ಅನುಗುಣವಾಗಿ ಮಾನವರ ಮತ್ತು ಆನೆಗಳ ಉಳಿವಿನ ದೃಷ್ಟಿಕೋನದಿಂದ ಪರಸ್ಪರ ಪೂರಕವೂ, ಲಾಭದಾಯಕವೂ, ಸುಸ್ಥಿರವೂ ಆದ ಯೋಜನೆಗಳನ್ನು ರೂಪಿಸಿ ತುರ್ತು ಕಾರ್ಯರೂಪಕ್ಕೆ ತರಬೇಕಿದೆ.

(ತಮಿಳುನಾಡಿನ ವಾಲ್ಪರೈನಲ್ಲಿ NCF ನವರು‌ ಕೈಗೊಂಡಿರುವ ಕಾರ್ಯಕ್ರಮಗಳನ್ನು ಹತ್ತಿರದಿಂದ ನೋಡಿದ, ಹಿರಿಯ ಆನೆ ವಿಜ್ಞಾನಿ ಆನಂದ್ ಕುಮಾರ್ ರೊಡನೆ ಸಮಾಲೋಚಿಸಿದ ಅನುಭವದ ಆಧಾರದಲ್ಲಿ ಬರೆದ ಲೇಖನ)

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ