October 5, 2024

ಅಡಿಕೆ ಎಲೆಚುಕ್ಕಿ ರೋಗ ಈಗ ಎಲ್ಲಾ ಕಡೆ ವ್ಯಾಪಕವಾಗಿ ಹರಡುತ್ತಿದೆ. ಮಲೆನಾಡು ಭಾಗದಲ್ಲಿ ಇದು ಅಡಿಕೆ ಬೆಳೆಗೆ ಮಾರಕವಾಗಿ ಪರಿಣಮಿಸಿ ಬಹುತೇಕ ತೋಟಗಳು ಎಲೆಚುಕ್ಕಿ ರೋಗದಿಂದ ಸೊರಗಿ ಹೋಗುತ್ತಿವೆ.

ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಳೆಗಾರರ ನಡುವೆ ಹತ್ತಾರು ತರಹದ ಚರ್ಚೆಗಳು ಸಾಗುತ್ತಿವೆ. ತಮ್ಮ ತೋಟವನ್ನು ಉಳಿಸಿಕೊಳ್ಳಬೇಕು ಎಂಬ ಮನೋಭಾವನೆಯಲ್ಲಿ ಮಾರುಕಟ್ಟೆಯಿಂದ ಕಂಡ ಕಂಡ ಕೀಟನಾಶಕಗಳನನ್ನು, ಬಾಯಿಂದ ಬಾಯಿಗೆ ಹರಿದು ಬಂದ ಯಾವುದೇ ವೈಜ್ಞಾನಿಕ ಶಿಪಾರಸ್ಸು ಇಲ್ಲದ ಔಷಧಗಳನ್ನು ರೈತರು ತಮ್ಮ ತೋಟಗಳಿಗೆ ಸಿಂಪರಣೆ ಮಾಡಲು ಮುಂದಾಗಿದ್ದಾರೆ. ರೈತರ ಅಸಯಾಯಕತೆಯನ್ನು ಬಳಸಿಕೊಂಡು ಮನಸ್ಸಿಗೆ ತೋಚಿದ ವಿಷಯುಕ್ತ ಕೀಟನಾಶಕಗಳನ್ನು ಹೊಡೆಯಿರಿ ಎಂದು ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಡ್ರೋನ್ ಗಳನ್ನು ಬಳಸಿ ತೋಟಕ್ಕೆ ಔಷಧ ಸಿಂಪರಣೆಗೂ ಮುಂದಾಗಿದ್ದಾರೆ.

ಮಾನವನ ಜೀವಕ್ಕೆ ಅಪಾಯಕಾರಿಯಾದ ತೀವ್ರವಿಷವನ್ನು ಹೊಂದಿರುವ ಎಂಡೋಸಲ್ಪಾನ್ ನಂತಹ ಔಷಧಿಗಳನ್ನು ಗೇರುತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಸಿಂಪರಣೆ ಮಾಡಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕೇರಳದ ಕಾಸರಗೋಡು ಭಾಗದಲ್ಲಿ ಎಂತಹ ಭೀಕರ ಪರಿಣಾಮ ಉಂಟುಮಾಡಿದೆ ಎಂಬುದು ನಮ್ಮ ಕಣ್ಣೆದುರು ಇದೆ. 1980ರಲ್ಲಿ ಔಷಧಿ ಸಿಂಪರಣೆ ಮಾಡಿದ್ದು ಈಗಲೂ ಹುಟ್ಟುವ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ.

ಅಂತಹುದೇ ಪರಿಸ್ಥಿತಿ ನಮ್ಮ ಮಲೆನಾಡಿಗೂ ಬರುವುದು ಬೇಡ. ವಿಷಕಾರಕ ಕೀಟನಾಶಕಗಳು ನೀರಿನಲ್ಲಿ, ಮಣ್ಣಿನಲ್ಲಿ ಸೇರಿ ನಂತರ ಮಾನವನ ದೇಹಕ್ಕೆ ಸೇರಿದರೆ ಅದರ ಪರಿಣಾಮ ಊಹೆಗೂ ನಿಲುಕದ್ದಾಗಿರುತ್ತದೆ. ಹಾಗಾಗಿ ಎಲೆಚುಕ್ಕೆ ರೋಗಕ್ಕೆ ಯಾವುದೇ ಔಷಧ ಸಿಂಪರಣೆಗೂ ಮುನ್ನ ಬೆಳೆಗಾರರು ಎಚ್ಚರಿಕೆಯಿಂದ ಇರಬೇಕು. ಇಲಾಖೆಗಳು ಮತ್ತು ವಿಜ್ಞಾನಿಗಳ ಶಿಪಾರಸ್ಸನ್ನು ಕೇಳಿ ಮುಂದುವರಿಯಬೇಕು

* ಪ್ರಸನ್ನ ಗೌಡಳ್ಳಿ

ತೋಟಗಾರಿಕಾ ಇಲಾಖೆ ಸ್ಪಷ್ಟನೆ
ಈ ಬಗ್ಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ತೋಟಗಾರಿಕಾ ಇಲಾಖೆ, ಶೃಂಗೇರಿ ಇವರು ಸ್ಪಷ್ಟನೆಯೊಂದನ್ನು ನೀಡಿರುತ್ತಾರೆ.

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಅಡಿಕೆ ಬೆಳೆಗೆ ತಗಲಿರುವ ಹಳದಿ ಎಲೆಚುಕ್ಕಿ ರೋಗಕ್ಕೆ ಡ್ರೋನ್ ನಿಂದ ಔಷಧಿ ಸಿಂಪಡಿಸುವುದು ಕೃಷಿ/ತೋಟಗಾರಿಕೆ ವಿಜ್ಞಾನಿಗಳ ಹಂತದಲ್ಲಿ ಪ್ರಯೋಗದಲ್ಲಿದ್ದು, ಈವರೆಗೂ ವೈಜ್ಞಾನಿಕವಾಗಿ ಯಾವುದೇ ಫಲಿತಾಂಶ ಪ್ರಕಟವಾಗಿರುವುದಿಲ್ಲ. ಆದುದರಿಂದ ಕೃಷಿ/ತೋಟಗಾರಿಕೆ ವಿಶ್ವವಿದ್ಯಾಲಯ/ಸಂಶೋಧನಾ ಕೇಂದ್ರಗಳು, ತೋಟಗಾರಿಕಾ ಇಲಾಖೆ ಡ್ರೋನ್ ನಿಂದ ಕೀಟ/ರೋಗನಾಶಕ ಔಷಧಗಳನ್ನು ಸಿಂಪಡಿಸಲು ಸಲಹೆಯನ್ನು ನೀಡಿರುವುದಿಲ್ಲ.

ಮುಂದುವರಿದು ಅಡಿಕೆ ಎಲೆಚುಕ್ಕೆ ರೋಗ ಈವರೆಗಿನ ಸಂಶೋಧನೆಗಳ ಪ್ರಕಾರ ವಿವಿಧ ಶಿಲೀಂದ್ರಗಳಿಂದ ಮಾತ್ರ ಬಂದು ಹರಡುತ್ತಿರುವುದು ದೃಢಪಟ್ಟಿದ್ದು, ಶಿಲೀಂದ್ರ ನಾಶಕಗಳನ್ನು ಮಾತ್ರ ಸಾಂಪ್ರದಾಯಿಕ ವಿಧಾನದಲ್ಲಿ ಸಿಂಪರಣೆ ಮಾಡಬಹುದು.

ಶಿಲೀಂದ್ರ ನಾಶಕಗಳ ಜೊತೆಗೆ ಯಾವುದೇ ಕೀಟನಾಶಕಗಳನ್ನು ಸೇರಿಸಿ ಡ್ರೋನ್/ದೋಟಿ/ಇನ್ಯಾವುದೇ ರೀತಿಯ ವಿಧಾನಗಳ ಮುಖಾಂತರ ಸಿಂಪಡಿಸಲು ಈವರೆಗೂ ಶಿಫಾರಸ್ಸು ಮಾಡಿರುವುದಿಲ್ಲ ಎಂಬ ಅಂಶವನ್ನು ತೋಟಗಾರಿಕೆ/ಅಡಿಕೆ ಬೆಳೆಗಾರರ ಆದ್ಯ ಗಮನಕ್ಕೆ ತರಬಯಸುತ್ತಿದ್ದೇವೆ.

ಸಹಿ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
(ಜಿ.ಪಂ), ಶೃಂಗೇರಿ

ಕೃಷಿ ವಿಜ್ಞಾನಿಗಳು ಹೇಳುವುದೇನು ?

ಅಡಿಕೆ ಎಲೆಚುಕ್ಕೆ ರೋಗದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸುತ್ತಿರುವ ಮೂಡಿಗೆರೆ ಕೃಷಿವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಗಿರೀಶ್ ಅವರು ಹೇಳುವಂತೆ 2020ರಲ್ಲಿ ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮದಲ್ಲಿ ಮೊದಲು ತೀವ್ರವಾಗಿ ಕಾಣಿಸಿಕೊಂಡ ಈ ರೋಗ ಎರಡು ವರ್ಷಗಳಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಆವರಿಸಿಕೊಂಡಿದೆ.

ಮಳೆಗಾಲದಲ್ಲಿ ತೀವ್ರ ಸ್ವರೂಪ ಪಡೆಯುವ ಎಲೆಚುಕ್ಕೆ ರೋಗ ಎಲ್ಲಾ ವಯಸ್ಸಿನ ಮರಗಳಿಗೂ ಬಾಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದು, ವರ್ಷದ ಬಹುತೇಕ ತಿಂಗಳುಗಳಲ್ಲಿ ಮಳೆಯಾಗುತ್ತಿರುವುದರಿಂದ ಗಾಳಿಯಲ್ಲಿ ತೇವಾಂಶ, ಆದ್ರತೆ ಹೆಚ್ಚಾಗಿ ಶಿಲೀಂದ್ರಗಳ ಬೆಳವಣಿಗೆ ಹೆಚ್ಚಾಗುತ್ತಿದೆ. ಈ ರೋಗ ಗಾಳಿಯಲ್ಲಿ ಹರಡುವುದರಿಂದ ಎಲ್ಲಾ ಕಡೆ ವ್ಯಾಪಕವಾಗುತ್ತಿದೆ.

ಹತೋಟಿಗೆ ಶಿಪಾರಸ್ಸು
1. ತೋಟದಲ್ಲಿ ಮಳೆ ನೀರು ನಿಲ್ಲದ ಹಾಗೆ ಬಸಿಗಾಲುವೆಗಳನ್ನು ನಿರ್ಮಿಸುವುದು
2. ಬೇಸಿಗೆಯಲ್ಲಿ ರೋಗಬಾಧಿತ ಕೆಳಗಿನ ಗರಿಗಳನ್ನು ಕೆಡವಿ ಸುಟ್ಟು ಹಾಕುವುದು
3. ಮುಂಗಾರು ಪ್ರಾರಂಭದಲ್ಲಿ ಶೇ. 1ರ ಬೋರ್ಡೋ ದ್ರಾವಣವನ್ನು ಗೊನೆಗಳು ಮತ್ತು ಕೆಳಗಿನ ಗರಿಗಳಿಗೆ ಚೆನ್ನಾಗಿ ಸಿಂಪಡಿಸುವುದು
4. ರೋಗದ ತೀವ್ರತೆ ಹೆಚ್ಚಾದಾಗ ಸೂಕ್ತವಾದ ಶೀಲೀಂದ್ರ ನಾಶಕಗಳನ್ನು ಸಿಂಪಡಿಸುವುದು
ಕಾರ್ಬಂಡೈಮ್ + ಮ್ಯಾಂಕೋಜೆಬ್-2 ಗ್ರಾ/ಲೀ
ಹೆಕ್ಸಾಕೊನಾಜೋಲ್ – 1 ಮಿ.ಲೀ/ಲೀ
ಟೆಬುಕೋನಾಝೋಲ್- 1ಮಿ.ಲೀ/ಲೀ
ಪ್ರಪಿಯೋ ಕೋನಾಝೆಲ್ – 1.ಮಿ.ಲೀ/ಲೀ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಾ. ಗಿರೀಶ್ ಆರ್, ಕೃಷಿ ವಿಜ್ಞಾನ ಕೇಂದ್ರ, ಹ್ಯಾಂಡ್ ಪೋಸ್ಟ್ ಮೂಡಿಗೆರೆ : 9739916660

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ