October 5, 2024

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

ಪ್ರಪಂಚದಲ್ಲಿ ಮನುಷ್ಯನ ಹುಟ್ಟಿನ ಗುಟ್ಟನ್ನು ಬಲ್ಲವರಾರೂ ಇಲ್ಲ.  ಮನುಷ್ಯನಲ್ಲಿನ ರಾಗ-ದ್ವೇಷಗಳ ಆಟವದು ನಿತ್ಯ ನಿರಂತರವಾಗಿ ಈ ಪ್ರಪಂಚದಲಿ ನಡೆಯುತ್ತಲೇ ಇರುತ್ತದೆ. ಲೋಕದ ವ್ಯವಹಾರವೆಲ್ಲವೂ ಇದರೊಳಗೆ ಸೇರಿಕೊಂಡು ಕೆಲಸ ಮಾಡುತ್ತಿರುತ್ತದೆ. ಹಾಗಾದರೆ ಈ ಸೃಷ್ಟಿಯ ಮೂಲ ಉದ್ದೇಶವಾದರೂ ಏನು…? ಬೇಕು-ಬೇಡಗಳ ನಡುವಿನ ಹೋರಾಟವೇ…? ಎಂಬುದನ್ನು ಬುದ್ಧಿಜೀವಿಯಾದ ಮನುಷ್ಯನೇ ವಿಚಾರ ಮಾಡಬೇಕು. ಪ್ರಕೃತಿಯಲ್ಲಿನ ಅನೇಕ ಸೃಷ್ಟಿಯಲ್ಲಿ ಮನುಷ್ಯ ಸೃಷ್ಟಿ ಅತ್ಯಂತ ಅಮೂಲ್ಯವಾದುದು ಏಕೆಂದರೆ ನಮಗೆ ಆಲೋಚನಾ ಶಕ್ತಿಯಿಂದ ಸಾಧನೆ ಮಾಡುವ ಬಲ-ಛಲ-ಧೈರ್ಯ ಎಲ್ಲವನ್ನು ಸೃಷ್ಟಿಕರ್ತ ಇಟ್ಟಿದ್ದಾನೆ. ಹಾಗಾದರೆ ನಾವು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದೇವೆಯೇ…? ಎಂಬುದು ಮಾತ್ರ ಪ್ರಶ್ನಾರ್ಥಕ … ಇಲ್ಲವೆಂದಾದಲ್ಲಿ … ಯಾಕೆ ? ಏನು ? ಎಂಬೆಲ್ಲಾ ಪ್ರಶ್ನೆಗಳು ಸಾಲಾಗಿ ನಿಲ್ಲುತ್ತವೆ. ಎಲ್ಲದರ ನಡುವೆ ಯಾಕೆ ? ಎಂಬುದು ತುಂಬಾ ಮುಖ್ಯವಾಗಿ ಕಾಡುವ ಪ್ರಶ್ನೆಯಾಗಿದೆ.

ದೇವದಾನವರ ರಣರಂಗ ಮಾನವಹೃದಯ |
ಭಾವ ರಾಗ ಹಠಂಗಳವರ ಸೇನೆಗಳು ||
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು |
ಜೀವಾಮೃತವನವರು – ಮಂಕುತಿಮ್ಮ ||

ಮನುಷ್ಯನ ಹೃದಯದಲ್ಲಿ ಒಳ್ಳೆಯ (ದೇವ) ಕೆಟ್ಟ (ದಾನವ) ವಿಚಾರಗಳ ಕದನ ನಡೆದರೆ ಭಾವರಾಗ ಹಠಗಳು ಸೈನ್ಯವಾಗಿರುತ್ತವೆ. ಭೂಮಿಯ ವೈಭವದ ಜಯದ ಭ್ರಾಂತಿಯಲ್ಲಿ ಅವನು ಜೀವನದ ಅಮೃತವನ್ನು ಮರೆಯುತ್ತಾನೆ.
ಮನುಷ್ಯನ ಮನಸ್ಸು ರಾಗಭಾವಗಳ ಗೂಡು. ಸದಾಕಾಲ ಒಂದಿಲ್ಲೊಂದು ಆಲೋಚನೆಗಳು ಸುತ್ತಲೂ ಸುತ್ತುತ್ತಲೇ ಇರುತ್ತವೆ. ಈ ಅರಿಷಡ್ವರ್ಗಗಳನ್ನು ಬಿಡುವುದು ಅಷ್ಟು ಸುಲಭವಲ್ಲ. ಒಂದು ಮಾತು ನಮ್ಮ ಹಿರಿಯರು ಯಾವಾಗಲೂ ಹೇಳುತ್ತಿದ್ದರು “ಉಪ್ಪು-ಹುಳಿ ತಿನ್ನೋರಿಗೆ ಕೋಪ ಬರದೇ ಇರುತ್ತಾ … ಅಂತ” ಅಂದರೆ ನಾವು ತಿನ್ನುವಂತಹ ಪದಾರ್ಥದೊಳಗೇ ನಮಗೆ ಈ ಕೋಪ-ತಾಪಗಳು ಬರುತ್ತವೆ ಎಂದ ಹಾಗಾಯಿತು. ಆದ್ದರಿಂದಲೇ ಹಿಂದೆ ಸಾತ್ವಿಕ ಆಹಾರಕ್ಕೆ ಅಷ್ಟೊಂದು ಮಹತ್ವವನ್ನು ಕೊಡುತ್ತಿದ್ದರಬೇಕು.

ಆದಷ್ಟು ನಾವು ಬೇರೆಯವರಿಂದ ನಿರೀಕ್ಷೆಗಳನ್ನು ಮಾಡದೆ ಇದ್ದರೆ ಮನಸ್ಸು ಸಮಾಧಾನವಾಗಿರುತ್ತದೆ, ಯಾವಾಗ ನಮ್ಮ ನಿರೀಕ್ಷೆಗಳು, ಅಪೇಕ್ಷೆಗಳು ಹೆಚ್ಚಾಗುತ್ತವೆಯೋ ಆಗ ಈ ರಾಗ-ದ್ವೇಷಗಳು ನಮ್ಮಲ್ಲಿ ತುಂಬಿ ಕೊಂಡು ನಡೆಯುವ ದಾರಿಯನ್ನು ಮಸುಕಾಗಿಸುತ್ತವೆ. ನಮ್ಮ ಬುದ್ಧಿಯನ್ನು ನಮ್ಮ ಹತೋಟಿಯ ಒಳಗಿಟ್ಟುಕೊಂಡು ಅದಕ್ಕೊಂದು ಬೇಲಿ ಹಾಕಿದರೆ ಸುಲಭವಾಗಿ ನಾವು ಜೀವನದ ಅಮೃತದ ನೆಲೆಯನ್ನು ಕಾಣಬಹುದು ಎನ್ನುತ್ತಾರೆ ಡಿ.ವಿ.ಜಿ.ಯವರು.
ಮನಸ್ಸನ್ನು ಮರ್ಕಟಕ್ಕೆ ಹೋಲಿಸುತ್ತಾರೆ. ಏಕೆಂದರೆ ಮನಸ್ಸು ಚಂಚಲವಾದದ್ದು. ಈಗ ಇದ್ದಹಾಗೆ ಇನ್ನೊಂದು ಘಳಿಗೆ ಇರುವುದಿಲ್ಲ.  ನಮ್ಮ ಮನಸ್ಸಿಗೆ ನಾವೇ ಒಂದು ಕಡಿವಾಣವನ್ನು ಹಾಕಿಕೊಳ್ಳಬೇಕು, ದಿನಕ್ಕೊಂದಾವರ್ತಿಯಾದರೂ ಸಹ ನಾವು ಮಾಡುತ್ತಿರುವ ಕೆಲಸ ಸರಿಯೇ, ತಪ್ಪೇ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಬೇಕು. ಆಗ ನಮ್ಮ ಮನಸ್ಸಿನ ಜೊತೆ ಮಾತನಾಡಬೇಕು, ತರ್ಕಿಸಬೇಕು. ಆಗ ನಮ್ಮ ಅಂತರಂಗದ ಭಾವವಿಕಾರಗಳ ಸರಿ, ತಪ್ಪುಗಳನ್ನು ವಿಮರ್ಶೆ ಮಾಡಿಕೊಳ್ಳಬೇಕು. ಅಂತಹ ಸಮಯದಲ್ಲಿ ನಾವು ನಡೆಯುವ ದಾರಿಯ ಬಗ್ಗೆ ನಮಗೆ ಅರಿವಾಗುತ್ತದೆ, ಹಾಗಾಗಿ ತಲೆಯಲ್ಲಿ ನೂರೆಂಟು ವಿಚಾರಗಳನ್ನು ತುಂಬಿಕೊಂಡು ಒದ್ದಾಡುವುದನ್ನು ಡಿ.ವಿ.ಜಿ.ಯವರು ಈ ರೀತಿ ಮಾರ್ಮಿಕವಾಗಿ ಹೇಳಿದ್ದಾರೆ.

ತಲೆಯೊಳಗೆ ನೆರೆದಿಹವು ನೂರಾರು ಹಕ್ಕಿಗಳು |
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು |
ನೆಲೆಯಲ್ಲಿ ನಿದ್ದೆಗೆಲೋ …? – ಮಂಕುತಿಮ್ಮ ||

ತಲೆಯೊಳಗೆ ನೂರಾರು ವಿಷಯಗಳನ್ನು ತುಂಬಿಕೊಂಡಾಗ ಅವುಗಳು ಪಕ್ಷಿಗಳು ಒಟ್ಟೊಟ್ಟಿಗೆ ಕೂಗಿದರೆ ಹೇಗಿರುತ್ತದೋ ಹಾಗೆ ತಲೆಯೊಳಗೆ ಸುತ್ತಿ ಹಿಂಸೆ ಕೊಡುತ್ತಿರುತ್ತವೆ, ಅಂತಹಾ ಸಮಯದಲ್ಲಿ ಹಾಯಾಗಿ ನಿದ್ರೆ ಬರಲು ಸಾಧ್ಯವೇ …? ಸಾಧ್ಯವಿಲ್ಲ ಎಂಬುದು ಡಿ.ವಿ.ಜಿ.ಯವರ ನಿಲುವು.
ಈ ಮನಸ್ಸು ಯೋಚನೆಗಳ ಸರದಾರ, ಈ ಆಲೋಚನೆಯೆಂಬ ಗಾಡಿಗೆ ಪೆಟ್ರೋಲ್, ಡೀಸಲ್ ಏನು ಬೇಕಾಗಿಲ್ಲ, ರೆಕ್ಕೆ-ಪುಕ್ಕ ತಾನೇ ಕಟ್ಟಿಕೊಂಡು ಆಕಾಶದೆತ್ತರ ಹಾರುವ ಸಾಮಥ್ರ್ಯವನ್ನು ಈ ಗಾಡಿ ತಾನೇ ಬೆಳಸಿಕೊಳ್ಳುತ್ತದೆ. ಇದು ಹೇಗೆ ನಮ್ಮನ್ನು ಅದರೊಳಗೆ ಕಟ್ಟಿ ಹಾಕುತ್ತವೆ ಎಂದರೆ ನಮಗೆ ಬೇರೆ ಏನೋ ಮಾಡಬೇಕು ಅನ್ನುವುದನ್ನೂ ಸಹ ಮರೆಸುತ್ತದೆ. ಆಗ “ಅಯ್ಯೋ ಯಾವುದೋ ಆಲೋಚನೆಯಲ್ಲಿ ಮಾಡುವ ಕೆಲಸ ಮರೆತೇ ಹೋಯ್ತು” ಅನ್ನುವಂತಹ ಮಾತು. ಯಾವಾಗ ಈ ಆಲೋಚನೆ ನಮ್ಮನ್ನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತದೋ ಆಗ ನಮ್ಮ ಜೀವನದ ಗಾಡಿಯ ಹಳಿ ತಪ್ಪಿಹೋಗುತ್ತದೆ. ಒಟ್ಟೊಟ್ಟಿಗೆ ಪಕ್ಷಿಗಳು ಕೂಗಿದಾಗ ಹೇಗೆ ನಮಗೆ ಅದರ ಶಬ್ದವನ್ನು ತಡೆಯಲು ಆಗದೆ ಒದ್ದಾಡುತ್ತೇವೆಯೋ… ಹಾಗೆಯೇ ಈ ಆಲೋಚನೆಗಳು ಕೂಡ ಒಂದರೊಟ್ಟಿಗೊಂದು ಬಂದಾಗ ನಮ್ಮ ತಲೆ ಕೆಟ್ಟುಹೋದಹಾಗೆ ಆಗುತ್ತದಯೇ ಹೊರತು ಆ ಆಲೋಚನೆಗಳಿಗೆ ಪರಿಹಾರದ ಮಾರ್ಗ ಸಿಗುವುದಿಲ್ಲ.

ಆದ್ದರಿಂದ ತಲೆಯನ್ನು ಇಂತಹ ಆಲೋಚನೆಯ ಗೂಡನ್ನಾಗಿ ಮಾಡಿಕೊಂಡ ಮೇಲೆ ನೆಮ್ಮದಿಯಾಗಿ ನಿದ್ರೆ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂಬುದು ಇಲ್ಲಿರುವ ಪ್ರಶ್ನೆ. ಆದಷ್ಟೂ ನಾವು ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವ ಪ್ರಯತ್ನಮಾಡಬೇಕು, ಆಗ ನಮ್ಮ ಸುತ್ತಲಿನ ಎಲ್ಲವನ್ನೂ ಸಹ ನಾವು ಶಾಂತರೀತಿಯಿಂದ ನೋಡಲು ಸಾಧ್ಯವಾಗುತ್ತದೆ. ಹಾಗೆಯೇ ಬರುವಂತಹ ಸಮಸ್ಯೆಗಳನ್ನು ಸಹ ಎದುರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವಂತಹ ದೃಢಮನಸ್ಸು ನಮಗೆ ಬರುತ್ತದೆ. ಆದ್ದರಿಂದ ಮನಸ್ಸನ್ನು ಗೊಂದಲದ ಗೂಡಾಗಲು ಬಿಡದೆ ಯಾವುದನ್ನು ಎಷ್ಟೋ ಅಗತ್ಯವೋ ಅಷ್ಟು ಮಾತ್ರ ತೆಗೆದುಕೊಂಡು ಹೋದರೆ ನಾವು ನೆಮ್ಮದಿಯಿಂದ ನಿದ್ರೆ ಮಾಡಬಹುದು.

ಮನುಷ್ಯನ ಅಸುರೀ ಗುಣ ಎನ್ನುವುದು ದೈವೀ ಗುಣದಲ್ಲಿ ಬೆರೆತುಕೊಂಡು ತನ್ನದೇ ಮೇಲುಗೈ ಮಾಡಿಕೊಂಡಿದೆ. ಏಕೆಂದರೆ ನಾವು ದಿನನಿತ್ಯ ನಮ್ಮ ಸುತ್ತಲೂ ನೋಡುವ ಹಾಗೂ ಕೇಳುವಂತಹ ವಿಷಯಗಳಲ್ಲಿ ಮನುಷ್ಯನ ಅಸುರೀಗುಣವೇ ಎದ್ದು ಕಾಣುತ್ತದೆ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಲ್ಲಿ ಮಾತನಾಡುತ್ತಾ ಮನುಷ್ಯನ ಅಸುರೀಗುಣದ ಪರಿಣಾಮದಿಂದ ನೀವು ಕಾಡಿನಲ್ಲಿ ವಾಸಮಾಡುವಂತೆ ಆಗಿದೆ ಎನ್ನುತ್ತಾನೆ. ಆಗ ಅರ್ಜುನ ಕೇಳುತ್ತಾನೆ “ಈ ಸೃಷ್ಟಿಯ ಎಲ್ಲವನ್ನೂ ಬಲ್ಲ ನೀನು ಈ ಅಸುರೀಗುಣವನ್ನು ಮನುಷ್ಯನಲ್ಲಿ ಏಕೆ ಇಟ್ಟೇ …?” ಎಂದು. ಆಗ ಶ್ರೀ ಕೃಷ್ಣ ನಗುತ್ತಾ “ಪಾರ್ಥ! ನಾನು ಒಂದು ವೇಳೆ ಈ ಅಸುರೀಗುಣವನ್ನು ಇಡದಿದ್ದರೆ ಎಲ್ಲರೂ ದೇವರಾಗಿಬಿಡುತ್ತಿದ್ದರು ಆಗ ನಮಗೆ ಜಾಗವೆಲ್ಲಿರುತ್ತಿತ್ತು? ಎಂದು ತಮಾಷೆಯಾಗಿ ಹೇಳುತ್ತಾನೆ. ನಂತರ ಪಾರ್ಥ! ಮನುಷ್ಯನಲ್ಲಿ ಈ ಅಸುರೀಗುಣ ದೈವೀಗುಣ ಹುಟ್ಟಿನಲ್ಲೇ ಅಡಗಿದೆ ಅದಕ್ಕೆ ನಾನಾಗಲೀ ನೀನಾಗಲೀ ಹೊರತಲ್ಲ; ಆದರೆ ಈ ಅಸುರೀಗುಣವನ್ನು ಮೆಟ್ಟಿ ನಿಲ್ಲುವಂತೆ ನಮ್ಮೊಳಗಿರುವ ದೈವೀಗುಣವನ್ನು ನಾವು ಅಳವಡಿಸಿಕೊಳ್ಳುವ ಪ್ರಯತ್ನಮಾಡಬೇಕು ಆಗಮಾತ್ರ ನಾವು ಮನುಷ್ಯರಾಗಿದ್ದಕ್ಕೆ ಸಾರ್ಥಕತೆ ಬರುತ್ತದೆ ಎನ್ನುತ್ತಾನೆ.
ಇಲ್ಲಿ ಡಿ.ವಿ.ಜಿ.ಯವರು ಮನುಷ್ಯನ ಮನೋವಿಕಾರಗಳನ್ನು ಈ ರೀತಿಯಾಗಿ ಹೇಳುತ್ತಾರೆ.

ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು |
ಮುಳ್ಳಾಗಿ ಚುಚ್ಚುವನು, ಪುಲ್ಲ ಸುಮವಹನು ||
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು |
ಕ್ಷುಲ್ಲಮಾನಿಸನಿವನು – ಮಂಕುತಿಮ್ಮ ||

ಮನುಷ್ಯ ಕೆಲವೊಮ್ಮೆ ಅಚಲವಾಗಿ ಕಲ್ಲಾಗಿ ನಿಂತುಬಿಡುತ್ತಾನೆ. ಆಗ ಅವನಲ್ಲಿ ಯಾವುದೇ ಭಾವವಿಕಾರಗಳಿರುವುದಿಲ್ಲ. ಕೆಲವುಸಾರಿ ಬಳ್ಳಿಯಂತೆ ಆಚೆಈಚೆ ಬಳುಕುತ್ತಿರುತ್ತಾನೆ, ಆಗ ಅವನ ಮನಸ್ಸಿನಲ್ಲಿ ಸ್ಥಿರತೆಯಿರುವುದಿಲ್ಲ ಆಲೋಚನೆಗಳು ಅತ್ತಿಂದಿತ್ತ ತಲೆಯಲ್ಲಿ ಸುಳಿದು ಅವನಿಗೆ ಯಾವ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಕೆಲವುಸಾರಿ ಮುಳ್ಳಿನಂತೆ ಚುಚ್ಚಿ ಮಾತನಾಡುತ್ತಾರೆ ಇದೂ ಸಹ ಅಸೂಯೆಯ ಪ್ರಭಾವ. ಬೇರೆಯವರಿಗೆ ಚುಚ್ಚಿದಾಗ ತನ್ನ ಮನಸ್ಸಿಗೆ ಹಿತ ಎ£ಸುವಂತಹ ಕ್ರೂರ ಭಾವನೆ. ಇನ್ನು ಕೆಲವು ಸಾರಿ ಹೂವಿನಂತೆ ಮೃದುವಾಗಿರುತ್ತಾನೆ. ಆಗ ಅವನಲ್ಲಿ ಒಳ್ಳೆಯ ಭಾವನೆಗಳೇ ಇರುತ್ತವೆ. ತನ್ನ ಸುತ್ತಲಿನವರಿಗೂ ಸಂತೋಷವನ್ನು ಕೊಡುವಂತಹ ಮನಸ್ಸು ಅವನಲ್ಲಿರುತ್ತದೆ. ಇನ್ನು ಕೆಲವು ಸಾರಿ ಮನಸ್ಸು ಸಮುದ್ರದ ಅಲೆಯಂತೆ ಡೋಲಾಯಮಾನ ಕ್ಷಣಕ್ಕೊಂದು ಆಲೋಚನೆ ಆಗ ದ್ವಂದ್ವಸ್ಥಿತಿಯಲ್ಲಿ ತಾನಿದ್ದು ಏನೊಂದನ್ನು ಮಾಡಲು ಅಶಕ್ಯನಾಗುತ್ತಾನೆ. ಇಂತಹ ಕ್ಷುಲ್ಲಕ ಮನಸ್ಸಿನ ಮನುಷ್ಯರು ನಮ್ಮ ಸುತ್ತಲೂ ಇದ್ದಾರೆ ಆದ್ದರಿಂದ ಇಂತಹ ಕ್ಷುದ್ರ ಮನುಷ್ಯನ ಗುಣವನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುವುದು ಬೇಡ ಎನ್ನುತ್ತಾರೆ ಡಿ.ವಿ.ಜಿ.ಯವರು.

ಮನಸ್ಸಿನ ಭಾವನೆಗಳ ಮೇಲೆ ನಾವು ಹಿಡಿತವನ್ನು ಸಾಧಿಸಿಕೊಂಡಾಗ ಮಾತ್ರ ನಮಗೆ ಸಮಸ್ಯೆಗಳನ್ನು ಲೀಲಾಜಾಲವಾಗಿ ಎದುರಿಸಲು ಸಾಧ್ಯವಾಗುತ್ತದೆ. ಈ ನಶ್ವರ ಜೀವನದಲ್ಲಿ ಬದುಕಿರುವವರೆಗೂ ಆದಷ್ಟು ಒಳ್ಳೆಯ ಗುಣವನ್ನು ಬೆಳೆಸಿಕೊಂಡು ಸತ್ತನಂತರ ನಮ್ಮ ಒಳ್ಳೆಯತನದೊಂದಿಗೆ ಪ್ರಪಂಚ ನಮ್ಮನ್ನು ನೆನಪುಮಾಡಿಕೊಳ್ಳುವಂತೆ ಸಾರ್ಥಕ ಬದುಕನ್ನು ಬದುಕಲು ಆದಷ್ಟೂ ಪ್ರಯತ್ನಿಸೋಣ.
**********

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ