October 5, 2024

ಡಿ.ಕೆ.ಶಿವಕುಮಾರ್ ಮೂಡಿಗೆರೆ ಭೇಟಿ ಕ್ಷೇತ್ರದ ಕಾಂಗ್ರೇಸ್ ಪಕ್ಷದಲ್ಲಿ ವ್ಯಾಪಕ ಚಟುವಟಿಕೆಗೆ ಕಾರಣವಾಗಿತ್ತು. ಜೊತೆಗೆ ಕ್ಷೇತ್ರದಲ್ಲಿ ಬಣರಾಜಕೀಯದ ಬಲಪ್ರದರ್ಶನಕ್ಕೂ ಸಾಕ್ಷಿಯಾಗಿತ್ತು.

ನಿನ್ನೆ ನವೆಂಬರ್ 29ರಂದು ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೂಡಿಗೆರೆಗೆ ಭೇಟಿ ನೀಡಿದ್ದರು. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಡಿಕೆಶಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೂಡಿಗೆರೆಯಲ್ಲಿಯೇ ಇದ್ದರು.

ನಿನ್ನೆ ಮೂಡಿಗೆರೆ ಪಟ್ಟಣದ ತುಂಬೆಲ್ಲಾ ಕಾಂಗ್ರೇಸ್ ಪಕ್ಷದ ಫ್ಲೆಕ್ಸ್, ಬಂಟಿಂಗ್ಸ್, ಬಾವುಟಗಳು ರಾರಾಜಿಸುತ್ತಿದ್ದವು. ಡಿ.ಕೆ. ಶಿವಕುಮಾರ್ ಅವರಿಗೆ ಸುಸ್ವಾಗತ ಕೋರುವ ಫ್ಲೆಕ್ಸ್ ಗಳು ರಸ್ತೆಯುದ್ದಕ್ಕೂ ಅಳವಡಿಸಲಾಗಿತ್ತು. ಇವುಗಳಲ್ಲಿ ಕ್ಷೇತ್ರದಲ್ಲಿ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಯನಾ ಮೋಟಮ್ಮನವರು ಡಿಕೆಶಿಗೆ ಸ್ವಾಗತಕೋರಿದ ಫ್ಲೆಕ್ಸ್ ಗಳದ್ದೇ ಸಿಂಹಪಾಲಿತ್ತು. ಉಳಿದಂತೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವ ಶ್ರೀಮತಿ ನಾಗರತ್ನ, ಶ್ರೀರಂಗಯ್ಯ, ಎಂ.ಸಿ.ಹೂವಪ್ಪ, ಪ್ರಭಾಕರ್ ಬಿನ್ನಡಿ, ಪವನ್ ಕಿಶೋರ್ ಅವರುಗಳು ಡಿಕೆಶಿಗೆ ಸ್ವಾಗತ ಕೋರಿದ ಬ್ಯಾನರ್ಗಳು ಇದ್ದವು.

ಡಿ.ಕೆ. ಶಿವಕುಮಾರ್ ಅವರು ಚಿಕ್ಕಮಗಳೂರಿನಿಂದ ರಸ್ತೆಮಾರ್ಗದ ಮೂಲಕ ಆಗಮಿಸಿದಾಗ ಪಟ್ಟಣದ ಬಿ.ಜಿ.ಎಸ್. ಶಾಲೆಯ ಸಮೀಪ ನಯನಾ ಮೋಟಮ್ಮ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ವಾಗತಕ್ಕೆ ಸಜ್ಜಾಗಿ ನಿಂತಿದ್ದರು. ಬೃಹತ್ ಗಾತ್ರದ ಸೇಬಿನ ಹಾರವನ್ನು ಜೆಸಿಬಿಯ ಮೂಲಕ ಶಿವಕುಮಾರ್ ಆಗಮಿಸಿದಾಗ ಹಾಕಲಾಯಿತು.

ಅಲ್ಲಿಂದ ಸ್ವಲ್ಪದೂರದಲ್ಲಿ ಎನ್.ಆರ್. ನಾಗರತ್ನ ಅವರ ಪೆಟ್ರೋಲ್ ಬಂಕ್ ಬಳಿ ನಾಗರತ್ನ ಅವರ ಬೆಂಬಲಿಗರು ಒಟ್ಟಾಗಿದ್ದರು. ಅಲ್ಲಿ ಡಿಕೆಶಿಯವರಿಗೆ ಬೃಹತ್ ಗಾತ್ರದ ಸೇಬಿನ ಹಾರ ಹಾಗೂ ಪೂರ್ಣಕುಂಭದ ಮೂಲಕ ಸ್ವಾಗತ ಕೋರಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶದಲ್ಲಿ ಡಿ.ಕೆ.ಶಿ. ಭಾಗವಹಿಸಿದ್ದರು. ವೇದಿಕೆಯಲ್ಲಿ ನಯನಾ ಮೋಟಮ್ಮ ಹೆಚ್ಚು ಸಕ್ರಿಯರಾಗಿದ್ದರು. ಈ ಸಂದರ್ಭದಲ್ಲಿಯೂ ಕಾರ್ಯಕರ್ತರ ನಡುವಿನಿಂದ ನಯನ ಮೋಟಮ್ಮ ಮತ್ತು ನಾಗರತ್ನ ಪರವಾದ ಘೋಷಣೆಗಳು ಹೆಚ್ಚು ಕೇಳಿಬರುತ್ತಿದ್ದವು.

ಕಾರ್ಯಕ್ರಮ ಮುಗಿಸಿ ಮಾಜಿ ಸಂಸದ ಡಿ.ಎಂ.ಪುಟ್ಟೇಗೌಡರ ಮಾಕೋನಹಳ್ಳಿಯ ಮನೆಗೆ ಡಿಕೆಶಿ ತೆರಳಿ ಪುಟ್ಟೇಗೌಡರ ಕ್ಷೇಮ ವಿಚಾರಿಸಿ ಅಲ್ಲಿಯೇ ಭೋಜನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ನಯನಾ ಅವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟುಹಿಡಿದು ಕುಳಿತಿರುವ ಬಣದ ಮುಖಂಡರು ಮತ್ತು ಕಾರ್ಯಕರ್ತರು ಡಿಕೆಶಿ ಯವರನ್ನು ಭೇಟಿ ಮಾಡಿದ್ದರು. ಪತ್ರಿಕೆಗೆ ದೊರೆತಿರುವ ಮಾಹಿತಿಯ ಪ್ರಕಾರ ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರು ಡಿಕೆಶಿಯವರನ್ನು ಭೇಟಿಯಾಗಿ ನಯನಾ ಅವರಿಗೆ ಟಿಕೆಟ್ ನೀಡಬಾರದು, ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವುದು ಕಷ್ಟ. ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ತಮ್ಮ ಅಭಿಪ್ರಾಯಗಳನ್ನು ರಾಜ್ಯಾಧ್ಯಕ್ಷರ ಮುಂದೆ ಹಂಚಿಕೊಂಡಿದ್ದಾರೆ.

ನಿನ್ನೆ ಮೂಡಿಗೆರೆಯಲ್ಲಿ ಕಾಂಗ್ರೇಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮದ ನಂತರ ಪಕ್ಷದ ಈ ಬಣ ಗೋಣಿಬೀಡಿನಲ್ಲಿ ಪ್ರತ್ಯೇಕ ಸಭೆ ನಡೆಸಿದೆ.

ಸಭೆಯಲ್ಲಿ ಕ್ಷೇತ್ರದ ಪ್ರಮುಖ ಕಾಂಗ್ರೇಸ್ ಮುಖಂಡರು ಭಾಗವಹಿಸಿದ್ದಾರೆ. ಗೋಣಿಬೀಡು ಸೂಪರ್ ಕನ್ವೆನ್ಷನ್ ಹಾಲ್ ನಲ್ಲಿ ಪಕ್ಷದ ಸುಮಾರು 250 ಕಾರ್ಯಕರ್ತರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಇದರಲ್ಲಿ ಅನೇಕ  ಬೂತ್ ಗಳ ಅಧ್ಯಕ್ಷರು ಇದ್ದರೆಂದು ತಿಳಿದುಬಂದಿದೆ.

ಪಕ್ಷದ ಮುಖಂಡರುಗಳಾದ ಕೆ.ವೆಂಕಟೇಶ್, ಯು.ಹೆಚ್.ಹೇಮಶೇಖರ್, ಅಗ್ರಹಾರ ಮಹೇಶ್, ಅಭಿಜಿತ್ ಮಗ್ಗಲಮಕ್ಕಿ, ಅಶೋಕ್ ಆಲ್ದೂರು, ಸಂಪತ್ ಮುಗ್ರಳ್ಳಿ, ದಶರಥ್, ಕುಮಾರ್ ರಾಜ್ ಅರಸ್, ಕಿರುಗುಂದ ರಾಮಯ್ಯ, ನಿಶಾಂತ್ ಪಟೇಲ್ ಸತ್ತಿಗನಹಳ್ಳಿ, ಪ್ರಕಾಶ್ ಅರೆನಹಳ್ಳಿ, ಮಂಜು ಬೆರಣಗೋಡು, ಹನೀಫ್ ಆಲ್ದೂರು, ಮನು ಮರಾಬೈಲ್ ಮುಂತಾದವರು ಇದ್ದರು.

ಗೋಣಿಬೀಡು ಸಭೆಯ ನಂತರ ಈ ಬಣ ಮಾಕೋನಹಳ್ಳಿಗೆ ತೆರಳಿದೆ. ಅಲ್ಲಿ ಆಯ್ದ ನೂರು ಜನರು ಶಿವಕುಮಾರ್ ಅವರನ್ನು ಭೇಟಿಮಾಡಿದ್ದಾರೆ.

ಈ ಸಂದರ್ಭದಲ್ಲಿ ಡಿಕೆಶಿ ಮಾತನಾಡಿ ಕ್ಷೇತ್ರದಲ್ಲಿ ಯಾರಿಗೂ ಟಿಕೆಟ್ ನೀಡುತ್ತೇವೆ ಎಂದು ಭರವಸೆ ನೀಡಿಲ್ಲ, ಆರು ಜನ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಸೂಚಿಸಿದ್ದೇವೆ. ಟಿಕೆಟ್ ಕೊಡುವುದು ಯಾರೋಬ್ಬರ ತೀರ್ಮಾನವಲ್ಲ. ಎಐಸಿಸಿ ಯಿಂದ ಸಮೀಕ್ಷೆ, ಕೆ.ಪಿ.ಸಿ.ಸಿ.ಯಿಂದ ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ. ಪಕ್ಷ ಟಿಕೆಟ್ ನೀಡಿದವರಿಗೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು. ಸದ್ಯಕ್ಕೆ ಎಲ್ಲರು ಪಕ್ಷ ಸಂಘಟನೆ ಮಾಡಿ ಎಂದು ಕಿವಿಮಾತು ಹೇಳಿಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ ಮೋಟಮ್ಮ ಅವರ ಮನೆಗೆ ಭೇಟಿ ನೀಡಿದ್ದ ಡಿಕೆಶಿ ಅಲ್ಲಿ ಸುಮಾರು ಹೊತ್ತು ಕ್ಷೇತ್ರದ ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಅಲ್ಲಿ ಒಟ್ಟುಗೂಡಿದ್ದ ನಯನಾ ಮೋಟಮ್ಮ ಬೆಂಬಲಿಗ ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರು ನಯನ ಮೋಟಮ್ಮನವರಿಗೇ ಟಿಕೆಟ್ ನೀಡಬೇಕು ಎಂದು ಡಿಕೆಶಿಯವರಲ್ಲಿ ಮನವಿ ಮಾಡಿದ್ದಾರೆ. ಇಂದಿನ ಸಮಾವೇಶದ ಬಹುತೇಕ ವೆಚ್ಚವನ್ನು ನಯನಾ ಮೋಟಮ್ಮ ಅವರೇ ಭರಿಸಿದ್ದಾರೆ, ಹಲವು ತಿಂಗಳುಗಳಿಂದ ಪಕ್ಷದ ಸಂಘಟನೆಯ ಖರ್ಚುವೆಚ್ಚಗಳನ್ನು ನಯನಾ ನಿಭಾಯಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಸತತ ಪ್ರವಾಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೇ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರು ಡಿಕೆಶಿಯವರಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಕೆಶಿಯವರು ನಯನಾ ಅವರಿಗೆ ನೀನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡು ಎಂದು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಈ ಮೂಲಕ ಪರೋಕ್ಷವಾಗಿ ಚುನಾವಣೆಗೆ ತಯಾರಾಗುವಂತೆ ನಯನಾ ಅವರಿಗೆ ಗ್ರೀನ್ ಸಿಗ್ನಲ್ ನೀಡಿರಬಹುದೇ ಎಂಬ ಚರ್ಚೆಗಳು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿವೆ.

ಕಾರ್ಯಕ್ರಮಕ್ಕೆ ಸ್ವಾಗತಕೋರಿ ಬ್ಯಾನರ್ ಹಾಕಿದ್ದ ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಕಾರ್ಯಕ್ರಮದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗೆಯೇ ಈ ಹಿಂದೆ ಇಲ್ಲಿ ಸ್ಪರ್ಧಿಸಿದ್ದ ಬಿ.ಎನ್. ಚಂದ್ರಪ್ಪನವರ ಅವರು ಇಂದು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿರುವ ತರೀಕರೆ ಮೂಲದ ಪವನ್ ಕಿಶೋರ್ ಬೆಂಗಲಿಗರು ಕೆಲವು ವಾಹನಗಳಲ್ಲಿ ಅವರ ಪೋಟೋ ಹಾಕಿಕೊಂಡು ಆಗಮಿಸಿದ್ದರು.

ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಭಿನ್ನಮತ ಶಮನದ ಉದ್ದೇಶದಿಂದಲೇ ಆಗಮಿಸಿದ್ದಾರೆ, ಅವರ ಭೇಟಿಯ ಸಂದರ್ಭದಲ್ಲಿ ನಯನಾ ಬಣ ಹಾಗೂ ಅವರನ್ನು ವಿರೋಧಿಸುತ್ತಿರುವ ಬಣವನ್ನು ಮುಖಾಮುಖಿಯಾಗಿ ಮಾತನಾಡಿಸಿ ರಾಜಿಮಾಡಿ ಒಗ್ಗೂಡಿಸಿ ಹೋಗುತ್ತಾರೆ ಎಂದುನಿರೀಕ್ಷಿಸಲಾಗಿತ್ತು. ಆದರೆ ಅವರು ಅಂತಹ ಯಾವುದೇ ಪ್ರಯತ್ನ ಮಾಡಿದಂತೆ ಕಾಣಲಿಲ್ಲ.

ಒಟ್ಟಾರೆ ಡಿಕೆಶಿ ಭೇಟಿಯ ಸಂದರ್ಭ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಬಣರಾಜಕೀಯವು ಬಹಿರಂಗವಾಗುವುದಕ್ಕೆ ವೇದಿಕೆಯಾಗಿ ಪರಿಣಮಿಸಿತ್ತು. ಬಲಾಬಲ ಪ್ರದರ್ಶನದಲ್ಲಿ ನಯನಾ ಮೋಟಮ್ಮ ಪರ ಮತ್ತು ವಿರೋಧಿ ಬಣಗಳು ತಮ್ಮ ತಮ್ಮ ಅಹವಾಲು ಹೇಳಿಕೊಳ್ಳಲು ಡಿಕೆಶಿ ಭೇಟಿ ಅವಕಾಶ ಒದಗಿಸಿತ್ತು.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಮತ್ತು ಮೂಡಿಗೆರೆ ಕ್ಷೇತ್ರದಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು ಏನಾಗುತ್ತವೆ ಎಂಬುದನ್ನು ಕಾದು ನೋಡಬೇಕು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ