October 5, 2024

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು,
ಮೈಸೂರು.
ಮೊ. 9448233119

“ಮಾತು ಆಡಿದರೆ ಆಯಿತು ಮುತ್ತು ಒಡೆದರೆ ಹೋಯಿತು” ಆದ್ದರಿಂದ ಆಡುವ ಮುಂಚೆ ಯೋಚಿಸಿ ಆಡಿ ಎಂದು ಹಿರಿಯರು ಹೇಳುತ್ತಿದ್ದ ಮಾತು ನೂರಕ್ಕೆ ನೂರು ಸತ್ಯ. ನಾವಾಡುವ ಮಾತು ಯಾವಾಗಲೂ ಮುತ್ತಾಗಿರಬೇಕೇ ಹೊರತು ಯಾರಿಗೂ ಮೃತ್ಯವಾಗಿರ ಬಾರದು. ಏನೋ ಮಾತನಾಡುವ ಭರದಲ್ಲಿ ಗೊತ್ತಿಲ್ಲದೆ ಬಾಯಿಂದ ಬಂತು ಎಂದು ಹೇಳಿ ಕ್ಷಮೆ ಕೇಳಿದರೆ ಆ ಕ್ಷಣಕ್ಕೆ ಅದು ಸರಿಹೋದರೂ ಸಹ ಮನಸ್ಸಿನ ಒಂದು ಮೂಲೆ ಅವರಾಡಿದ ಮಾತುಗಳನ್ನು ಓರೆಗಲ್ಲಿಗೆ ಹಚ್ಚಿ ನೋಡುತ್ತಲೇ ಇರುತ್ತದೆ. ಸರಿಯಾಗಿ ತಿಳಿದುಕೊಳ್ಳದೇ ನಾವು ಇನ್ನೊಬ್ಬರ ಬಗ್ಗೆ ಆಡುವ ಮಾತುಗಳು ಅದನ್ನು ಈಗಿನ ಮಾತಲ್ಲಿ ಹೇಳುವುದಾದರೆ ಗಾಸಿಪ್ ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಅಧೋಗತಿಗೆ ತಳ್ಳುತ್ತದೆ. ಇದೊಂದು ಅಂತೆ ಕಂತೆಗಳ ಸಂತೆ, ಈ ಅಂತೆ ಕಂತೆಗಳ ಸಂತೆಯಲ್ಲಿ ನಾವೂ ಒಬ್ಬರಾಗಿ ಕೇಳುವ ಅಂತೆಗೆ ರೆಕ್ಕೆ ಪುಕ್ಕ ಕಟ್ಟಿ ಬಾಯಿಂದ ಬಾಯಿಗೆ ಕಂತೆಯಾಗಿ ಹೊರಬರುವ ಬದಲು ಮೌನ ವಾಗಿದ್ದರೆ ಲೇಸು, ಒಬ್ಬರ ವ್ಯಕ್ತಿತ್ವ ಹಾನಿ ಮಾಡುವ ಕುಕೃತ್ಯದಿಂದ ಹೊರಗುಳಿದ ಸಂತಸವಾದರೂ ಸಿಗಬಹುದು. ನಮ್ಮ ತಂದೆಯವರು ಬೇರೆಯವರ ಬಗ್ಗೆ ಮಾತನಾಡುವ ಬದಲು ಒಂದು ಪುಸ್ತಕ ಓದಿ ಜ್ಞಾನ ಬೆಳೆಯುತ್ತದೆ ಎಂದು ಹೇಳುತ್ತಿದ್ದರು. ಈ ಮಾತು ಅಕ್ಷರಶಃ ನಿಜ ಎನಿಸುತ್ತದೆ.
ಮೌನವು ನಮ್ಮ ಮನದ ಮಾತಿಗೆ ಕೆಲವೊಮ್ಮೆ ಉತ್ತರವಾಗಿ ಹಾಗೂ ಬೇರೆಯವರನ್ನು ರಕ್ಷಿಸುವ ರಕ್ಷಾಕವಚವೂ ಸಹ ಆಗಬಹುದು ! ಬುದ್ಧಿವಂತನಾದವನು ಇಂತಹ ವಿವಾದಾತ್ಮಕ ಮಾತಿಗೆ ಮೈ ಮುಚ್ಚುವ ವಸ್ತ್ರದಂತೆ ಮೌನದ ಹೊದಿಕೆ ಹಾಕಲೇಬೇಕು, ಆಗ ಆ ಮೌನವು ಬೇರೊಬ್ಬರನ್ನು ರಕ್ಷಿಸುವ ಬ್ರಹ್ಮಾಸ್ತ್ರವಾಗುತ್ತದೆ.
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗ ಸೂತ್ರವಿದು ಮಂಕುತಿಮ್ಮ ||
ಮನಸ್ಸಿನ ಒಳಗಡೆ ಎರಡು ಕೋಣೆಗಳÀನ್ನು ಮಾಡಿಕೊಳ್ಳಬೇಕು, ಹೇಗೆಂದರೆ ನಾವು ಹೊರಗಿನ ಪಡಸಾಲೆಯಲ್ಲಿ ಮನೆಗೆ ಬಂದ ಜನಗಳ ಜೊತೆ ಮಾತನಾಡಿ ಒಳಗಿನ ಕೋಣೆಯಲ್ಲಿ (ಬೆಡ್‍ರೂಂ) ವಿಶ್ರಾಂತಿ ತೆಗೆದುಕೊಳ್ಳುವಂತೆ.
ನಮ್ಮ ಒಳ ಹೊರಗುಗಳ ಮಧ್ಯೆ ಒಂದು ಸಮನ್ವಯವನ್ನು ಕಾಪಾಡಿಕೊಳ್ಳಲು ಡಿವಿಜಿಯವರು ಹೇಳಿರುವ ಮಾತುಗಳು ಸದಾ ಸ್ಮರಣೀಯ. ನಮ್ಮ ಮನಸ್ಸು ಮರ್ಕಟದಂತೆ ಸದಾ ಒಂದಲ್ಲೊಂದು ತಾಕಲಾಟಗಳ ಮಧ್ಯ ಹೊಯ್ದಾಡುತ್ತಿರುತ್ತದೆ. ಇದಕ್ಕೆ ಕಾರಣ ಬದುಕಿನ ಜಂಜಾಟ. ಈ ಜಂಜಾಟದಲ್ಲಿ ನಾವು ಎಷ್ಟೇ ಬೇಡವೆಂದರೂ ಆಲೋಚನೆಗಳು ನಮ್ಮನ್ನು ಬಿಡುವುದಿಲ್ಲ. ಏಕೆಂದರೆ ರಾಗ-ದ್ವೇಷ-ಕೋಪ-ತಾಪ-ಅಸೂಯೆಗಳು ನಮ್ಮನ್ನು ಆವರಿಸಿಕೊಂಡು ಆಯಾಯ ಸನ್ನಿವೇಶಕ್ಕನುಗುಣವಾಗಿ ನಮ್ಮನ್ನು ಗಿರಿಗಿಟ್ಟಲೆ ಹೊಡೆಸುತ್ತಿರುತ್ತವೆ. ಇವು ಒಮ್ಮೊಮ್ಮೆ ಬಿರುಗಾಳಿಗೆ ಸಿಕ್ಕಿದ ದರಗೆಲೆಯಂತೆ ಸುತ್ತುತ್ತಾ, ತಾಳ್ಮೆಯ ಎಲ್ಲೆ ಮೀರಿಸಿ ದುಡುಕಿ ಮಾತು ಹೊರಬರುವಂತೆ ಮಾಡು ತ್ತದೆ. ಅಂತರಾತ್ಮದಲ್ಲಿ ಸಕಾರಾತ್ಮಕ ಶಕ್ತಿಯ ಉದ್ದೀಪನ ಕೇವಲ ಧ್ಯಾನದಿಂದ ಮಾತ್ರ ಸಾಧ್ಯ. ಧ್ಯಾನವೆಂದರೆ ಇಲ್ಲಿ ನಾವು ಹೇಳುವುದು ಸಾಧನೆಯ ಉತ್ತುಂಗದ ಕ್ಷೇತ್ರವಲ್ಲ ಬದಲಿಗೆ ಸಾಮಾನ್ಯರೂ ಕೂಡ ಅನುಸರಿಸಬಹುದಾದ ಒಂದು ದೃಢ ಸಂಕಲ್ಪ. ಅದು ನಮ್ಮ ಮನದ ಮಾತಿಗೆ ಕಡಿವಾಣ ಹಾಕುತ್ತಾ ಬಾಯಿಂದ ಬಂದ ಮಾತು ಮೃತ್ಯುವಾಗದಂತೆ ತಡೆದು ಅದನ್ನು ಮುತ್ತಾಗುವಂತೆ ಮಾಡುತ್ತದೆ. ಇದರ ಜೊತೆಗೆ ಆತ್ಮಚಿಂತನೆಯತ್ತ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು. ಇದನ್ನು ಬಾಯಲ್ಲಿ ಹೇಳುವುದೇನೋ ಬಹಳ ಸುಲಭ ಆದರೆ ಇದನ್ನು ಅನುಸರಿಸುವುದು ಕಷ್ಟವೇ ಸರಿ. ಆದರೆ ಮನಸಿನ ದೃಢತೆ ಇದ್ದರೆ ನಿಭಾಯಿಸಬಹುದು; ಸಾಧಿಸಬಹುದು. ಮಾತಿಗೆ ಕಡಿವಾಣ ಹಾಕಿ ಮೌನಕ್ಕೆ ಮೊರೆ ಹೋಗುವುದು ಒಂದೆರಡು ದಿನ ಕಷ್ಟವಾಗಬಹುದು, ಅಸಾಧ್ಯವಂತೂ ಅಲ್ಲ. ಅದೂ ಅಲ್ಲದೇ ಮನ ಘಾಸಿಗೊಂಡಾಗ ಮಾತನಾಡದೇ ಮೌನವಾಗಿರುವುದು ಸಹ ಕಷ್ಟವೇ, ಆಗ ಮನದ ಜೊತೆ ಮೌನವಾಗಿಯೇ ಇದ್ದಾಗ ಮಾತ್ರ ಮನವನ್ನು ಅಲ್ಲೋಲ ಕಲ್ಲೋಲ ಮಾಡಿದ ಗೂಡಿನಿಂದ ಗೊಂದಲವು ಮರೆಯಾಗುತ್ತದೆ. “ಮೌನಂ ಕÀಲಹಂ ನಾಸ್ತಿ” ಎನ್ನುವ ಮಾತು ಈ ಸಂದರ್ಭದಲ್ಲಿ ಸರಿಯಾಗುತ್ತದೆ ಎಂದು ಹೇಳಬಹುದು. ಹಾಗೆಯೇ ನಾಲಿಗೆ ಚಪಲ ತೀರಿಸಿಕೊಳ್ಳಲು ಯದ್ವಾತದ್ವಾ ಮಾತನಾಡಿದರೆ ಇಡೀ ಜೀವನವೇ ನಾಶವಾಗುವುದರಲ್ಲಿ ಸಂಶಯವಿಲ್ಲ. ನೂರು ಒಳ್ಳೆಯ ಕೆಲಸ ಮಾಡಿ ಒಂದೇ ಒಂದು ಕೆಟ್ಟ ಕೆಲಸ ಮಾಡಿದರೆ ಜನ ಮೊದಲಿನ ನೂರು ಒಳ್ಳೆಯ ಕೆಲಸ ಮರೆತು ಕೇವಲ ಕೆಟ್ಟ ಕೆಲಸವೊಂದನ್ನೇ ನೆನಪಿಟ್ಟುಕೊಂಡು ಕೆಟ್ಟವರೆಂಬ ಹಣೆಪಟ್ಟಿ ಅಂಟಿಸಿಯೇ ಬಿಡುತ್ತಾರೆ. ಯಾವುದೋ ಒಂದು ಸಂದರ್ಭ ದಲ್ಲಿ ಹತಾಶರಾಗಿ ನಾಲಿಗೆ ಚಪಲಕ್ಕೊಳಗಾಗಿ ಒಂದೇ ಒಂದು ಮಾತು ಬಾಯಿತಪ್ಪಿ ಬಂದರೂ ಇಡೀ ವ್ಯಕ್ತಿತ್ವಕ್ಕೇ ಸಂಚಕಾರ ತಂದುಬಿಡುತ್ತದೆ.
ಧರೆಯ ಬದುಕೇನದರ ಗುರಿಯೇನು ಫಲವೇನು ?|
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಪುದೇನು ??|| – ಮಂಕುತಿಮ್ಮ
ಈ ಪ್ರಪಂಚದಲ್ಲಿ ನಮ್ಮ ಹುಟ್ಟಿನ ಉದ್ದೇಶವಾದರೂ ಏನು ? ಇದು ಅನಾವಶ್ಯಕವಾದ ಕಾಲಹರಣ, ಹೊಡೆದಾಟ, ಬಡಿದಾಟ ಹಾಗೂ ಬರಿಯ ತೊಳಲಾಟವೇ ?? ಒಂದು ಗುರಿಯಿಲ್ಲದೆ ಸದಾ ಎಲ್ಲೆಂದರಲ್ಲಿ ತಿರುಗುತ್ತಾ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿರುವ ಪ್ರಾಣಿ ಪಕ್ಷಿಗಳಿಗಿಂತ ಈ ಮನುಷ್ಯರು ಹೆಚ್ಚಿನದೇನಾದರು ಸಾಧಿಸಿದ್ದಾ ನೆಯೇ ?! ಎನ್ನುವುದು ಒಂದು ಪ್ರಶ್ನೆ. ಸಾಧಕನಾಗಬೇಕು ಎನ್ನುವ ಭಾವನೆ ಮನುಷ್ಯನಲ್ಲಿ ಬಂದಾಗಲೇ ಅವನು ಏನನ್ನಾದರೂ ಮಾಡಲು ಸಾಧ್ಯ. ಒಣಹರಟೆ, ಕೆಲಸಕ್ಕೆ ಬಾರದ ಚರ್ಚೆಗಳು ದ್ವೇóಷ ಅಸೂಯೆ ಇವುಗಳು ಮನುಷ್ಯನ ಅಧೋಗತಿಗೆ ಕಾರಣ ವಾಗುತ್ತದೆ. ಯಶಸ್ಸಿನ ಹಾದಿ ಅಷ್ಟು ಸುಲಭದ ಮಾತಲ್ಲ, ಇದೊಂದು ಏಳುಬೀಳುಗಳ ಹೋರಾಟ. ಆ ಭೂಮಿಯಲ್ಲಿ ನಮ್ಮ ಹುಟ್ಟಿನ ಕಾರಣವಾದರೂ ಏನೆಂಬ ಹುಟ್ಟಿನ ತತ್ತ್ವವನ್ನು ಅರಿತಾಗ ಮಾತ್ರ ಬದುಕು ಸಾರ್ಥಕತೆಯನ್ನು ಕಾಣುತ್ತದೆ. ಮನುಷ್ಯ ಆಲೋಚನಾ ಜೀವಿ ಈ ಭುವಿಯಲ್ಲಿ ಅವನು ಸನ್ಮಾರ್ಗದ ಸತ್ಯವರಿತು ಬಾಳುತ್ತಾ ತನ್ನ ಸುತ್ತಲಿನ ಸಮಾಜಕ್ಕೂ ಸಹ ಒಳಿತನ್ನೇ ಬಯಸುವ ಮಾರ್ಗದಲ್ಲಿ ನಡೆದಿದ್ದೇ ಆದರೆ ಅವನ ಜನ್ಮ ಸಾರ್ಥಕವಾದೀತು. ಇಲ್ಲವಾದಲ್ಲಿ ಪಶುಪಕ್ಷಿಗಳಿಗೂ ಮನುಷ್ಯನಿಗೂ ವ್ಯತ್ಯಾಸವೇ ಇರುವುದಿಲ್ಲ.
ಸುತ್ತಲಿನ ಸಮಾಜದ ಅಂಕುಡೊಂಕುಗಳನ್ನು ಎತ್ತಿ ಆಡುತ್ತಾ, ಸದಾ ಒಂದಿಲ್ಲೊಂದು ಹಗರಣವ ಸೃಷ್ಟಿಸುತ್ತ, ಅವರಿವರನ್ನು ಇರಿಯುವಂತೆ ಮಾತನಾಡುತ್ತಾ ವ್ಯರ್ಥವಾಗಿ ಬದುಕು ಸಾಗಿಸುವ ಬದಲಿಗೆ ತನ್ನಿಂದಾದಷ್ಟು ಒಳ್ಳೆಯ ಕೆಲಸ ಮಾಡುತ್ತಾ ಇರುವ ಮೂರು ದಿನದ ಬಾಳನ್ನು ಯಾವ ರೀತಿ ಸಾರ್ಥಕಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆಮಾಡಿ ಸಮಾಜದಲ್ಲಿ ಸತ್ಪ್ರಜೆಯಾದಲ್ಲಿ ಭೂಮಿಯಲ್ಲಿನ ನಮ್ಮ ಹುಟ್ಟು ಸ್ವಲ್ಪವಾದರೂ ಸಾರ್ಥಕವಾದೀತು.
ಒಂದು ಕಿಡಿ ಇಡೀ ಕಾಡನ್ನೇ ಸುಡುವಂತೆ ಒಂದು ನುಡಿ ಒಂದು ವ್ಯಕ್ತಿತ್ವವನ್ನೇ ಸುಟ್ಟುಬಿಡುತ್ತದೆ. ಆದ್ದರಿಂದ ಮಾತು ಮಿತಿಯನ್ನಿಟ್ಟು, ಸುತ್ತಲಿನವರ ಮನಸ್ಸನ್ನು ಘಾಸಿಗೊಳಿಸದೆ ಸದಾ ಎಲ್ಲರೊಂದಿಗೆ ಜೊತೆಯಾಗಿರಬೇಕು. ನಮ್ಮ ಉಸಿರಿನ ನಂತರವೂ ಹೆಸರು ನೆನಪಿಸಿಕೊಳ್ಳುವಂತೆ ಬದುಕಬೇಕು ಎಂಬ ಆಶಯದಿಂದ ಅತಿಯಾಗಿ ನಾಲಿಗೆ ಹರಿಬಿಟ್ಟು ಹಗುರವಾಗುವುದಕ್ಕಿಂತ ಮೌನದೊಳಗಿನ ಭಾವವಾಗೋಣ.

ನಿರಂತರ ಸುದ್ದಿಗಳಿಗಾಗಿ  ದರ್ಪಣ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/EPix3ar9qizEtDUS0amt5B

 

ಇದು ಕತೆಯಲ್ಲ- ಕೊಟ್ಟಿಗೆಹಾರದಲ್ಲಿ ಅಡಗಿದ್ದ ನಟೋರಿಯಸ್ ನರಹಂತಕನ ಕರಾಳ ನೆನಪು !!

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ