October 5, 2024

ಆ ಕುಟುಂಬ ಮಲೆನಾಡಿನ ಮಧ್ಯಮವರ್ಗದ ಎಲ್ಲಾ ಕುಟುಂಬಗಳಂತೆ ಬದುಕಿನ ಏಳುಬೀಳುಗಳ ನಡುವೆ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿತ್ತು. ನಾಲ್ಕೆಕರೆ ಕಾಫಿತೋಟ, ಎರಡೆಕರೆ ಭತ್ತದ ಗದ್ದೆ, ಉಪ ಕಸುಬಾಗಿ ಹೈನುಗಾರಿಕೆ ಮಾಡಿಕೊಂಡು ಜೀವನದ ಬಂಡಿ ಮುನ್ನಡೆಯುತ್ತಿತ್ತು.

ಮೂಡಿಗೆರೆ ಪಟ್ಟಣದಿಂದ ಆರೇಳು ಕಿಲೋಮೀಟರ್ ದೂರದ ಸುಂದರ ಪರಿಸರ ನಡುವೆ ಇದ್ದ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಕೂಡುಕುಟುಂಬದ ಮಗನಾಗಿದ್ದ ಸತೀಶಗೌಡರ ಸಹದರ್ಮಿಣಿಯಾಗಿ ಕೈಹಿಡಿದು ಬಂದವರು ಶೋಭಾ. ಗೆಂಡೇಹಳ್ಳಿ ಸಮೀಪದ ಕೆ.ಆರ್.ಪೇಟೆ ಇವರ ತವರೂರು.
ಸತಿಪತಿಗಳ ಎರಡು ದಶಕಗಳ ದಾಂಪತ್ಯ ಬದುಕಿನಲ್ಲಿ ಜೊತೆಯಾಗಿ ಕೃಷಿಕಾಯಕದಲ್ಲಿ ಸಂಸಾರದ ನೊಗವನ್ನು ಎಳೆದಿದ್ದರು. ದಾಂಪತ್ಯಕ್ಕೆ ಸಾಕ್ಷಿಯಾಗಿ ಮಗ ಶಶಾಂಕ್. ತಮಗೆಷ್ಟೇ ಕಷ್ಟವಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಕುಂದು ಬರದಂತೆ ಜತನದಿಂದ ಸಾಕಿ ಸಲಹಿದ್ದರು. ಮಗ ಇಂಜಿನಿಯರ್ ಪದವಿ ಮುಗಿಸಿ ಇನ್ನೇನು ವೃತ್ತಿಬದುಕು ಆರಂಭಿಸಿ ಅಪ್ಪ ಅಮ್ಮನ ಕಷ್ಟಕ್ಕೆ ಆಸರೆಯಾಗುವ ಹಂತಕ್ಕೆ ಬಂದು ನಿಂತಿದ್ದ.

45 ವರ್ಷದ ಶೋಭಾ ಅವರಿಗೆ ಹೈನುಗಾರಿಕೆಯಲ್ಲಿ ಅತೀವ ಆಸಕ್ತಿ. ಮನೆಯಲ್ಲಿ ಹಸುಗಳನ್ನು ಸಾಕಿ ಹಾಲು ಮಾರಾಟದಿಂದ ಬಂದ ಆದಾಯದಿಂದ ತೋಟದ ಕೆಲಸ, ಮಗನ ವಿದ್ಯಾಭ್ಯಾಸ ಹೀಗೆ ಅದು ಇವರ ಉಪಕಸುಬಾಗಿ ಆರ್ಥಿಕ ನಿರ್ವಹಣೆಗೆ ಆಸರೆಯಾಗಿತ್ತು. ಇವರ ಮನೆತುಂಬಾ ಸಾಕು ನಾಯಿಗಳು. ಕನಿಷ್ಠ ಮೂರ್ನಾಲ್ಕು ಸಾಕುನಾಯಿಗಳು ಇವರ ಮನೆಯಲ್ಲಿ ಇದ್ದೇಇರುತ್ತಿದ್ದವು. ಅವುಗಳನ್ನು  ಮನೆಮಕ್ಕಳಂತೆ ಮುದ್ದಿನಿಂದ ನೋಡಿಕೊಳ್ಳುತ್ತಿದ್ದರು.

ನೆರೆಹೊರೆಯವರು ಬಂಧುಗಳೊಂದಿಗೆ ಲವಲವಿಕೆಯ ಆತ್ಮೀಯ ಸಂಬಂಧ. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಕಾಯಕವೇ ಕೈಲಾಸ ಎಂಬಂತೆ ಸೂರ್ಯಮೂಡುವ ಮುನ್ನವೇ ಎದ್ದು ಗೋವುಗಳ ಸೇವೆ, ಮನೆಗೆಲಸ, ಕೃಷಿಕಾರ್ಯದಲ್ಲಿ ಸತಿಪತಿ ಒಟ್ಟಾಗಿ ತೊಡಗಿಸಿಕೊಳ್ಳುತ್ತಿದ್ದರು. ಚಾಪೆಯಿದ್ದಷ್ಟು ಕಾಲು ಚಾಚು ಎಂಬಂತೆ ಇದ್ದುದರಲ್ಲೇ ಸರಳ ಸುಂದರ ಬದುಕು ಕಟ್ಟಿಕೊಂಡಿದ್ದರು.

ನವೆಂಬರ್ 20ರ ಭಾನುವಾರ ಎಂದಿನಂತೆ ಬೆಳಿಗ್ಗೆ ಸುಮಾರು 7 ಗಂಟೆಯ ಸಮಯಕ್ಕೆ ಶೋಭಾ ಮತ್ತು ಅವರ ಪತಿ ಸತೀಶ್ ಮನೆಯಿಂದ ಕೂಗಳತೆಯ ದೂರದ ಅಡಿಕೆ ತೋಟದಲ್ಲಿ ಜಾನುವಾರಿಗೆ ಹುಲ್ಲು ಕೊಯ್ದು ತರಲೆಂದು ಹೋಗಿದ್ದರು. ಪಕ್ಕದ ತೋಟದಿಂದ ಹಾದುಬಂದ ಕಾಡಾನೆಯನ್ನು ಕಂಡು ಸತೀಶ್ ಜೋರಾಗಿ ಅರಚಿಕೊಂಡರು. ಆದರೆ ಅಷ್ಟುಹೊತ್ತಿಗಾಗಲೇ ಆನೆ ಶೋಭಾರ ಬಳಿಗೆ ಬಂದು ನಿಂತಿತ್ತು. ತಪ್ಪಿಸಿಕೊಳ್ಳಲು ಎಳ್ಳಷ್ಟು ಅವಕಾಶ ಸಿಗಲಿಲ್ಲ. ಅಪ್ಪಾ ದೇವರೇ ನನ್ನನ್ನು ಏನು ಮಾಡಬೇಡ ಎಂದು ಕೈಮುಗಿದು ನಿಂತರು ಶೋಭಾ. ಆದರೆ ಮುಂದೆ ನಡೆದದ್ದೇ ಬೇರೆ. ಪತಿ ನೋಡನೋಡುತ್ತಿದ್ದಂತೆ ಪತ್ನಿಯನ್ನು ಆನೆ ಸೊಂಡಿಲಿನಿಂದ ಮೇಲೆತ್ತಿ ಬಡಿದು, ತುಳಿದು ಸಾಯಿಸಿತ್ತು.

ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿದ್ದ ಪತ್ನಿಯನ್ನು ಕಳೆದುಕೊಂಡ ಪತಿ… ಪ್ರೀತಿಯಿಂದ ಸಾಕಿಸಲಹಿ ಬದುಕಿಗೆ ದಾರಿತೋರಿದ್ದ ಹೆತ್ತಮ್ಮನನ್ನು ಕಳೆದುಕೊಂಡ ಮಗ… ಮನೆಯೊಡತಿಯನ್ನು ಕಳೆದುಕೊಂಡು ದಿಕ್ಕುತಪ್ಪಿರುವ ಸಂಸಾರದ ರಥ… ಕಟುಂಬದವರು, ಬಂಧುಗಳ ಆಕ್ರಂಧನ… ಮನೆಯಲ್ಲಿದ್ದ ಮೂಕ ಪ್ರಾಣಿಗಳ ಮೂಕ ರೋಧನ… ಮನೆಸುತ್ತಾ ಅವರಿಸಿರುವ ನೀರವ ಮೌನ…..

ಸಾಕುಪ್ರಾಣಿಗಳೆಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಶೋಭಾರ ಜೀವಕ್ಕೆ ವನ್ಯಪ್ರಾಣಿ ಕುತ್ತಾಗಿದ್ದು ಮಾತ್ರ ಅರಗಿಸಿಕೊಳ್ಳಲು ಕಷ್ಟವಾಗಿರುವ ಬದುಕಿನ ಕಟು ವಾಸ್ತವ.

*************

 ಚಿಕ್ಕಮಗಳೂರು ದರ್ಪಣ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://chat.whatsapp.com/JdPeRuZ5cWv9mo6W35qoUV

ಮೂಡಿಗೆರೆ : ಕಾಡಾನೆ ದಾಳಿಗೆ ಮಹಿಳೆ ಬಲಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ