October 5, 2024

* ನಂದೀಶ್ ಬಂಕೇನಹಳ್ಳಿ
9663098873

ಕೊಟ್ಟಿಗೆಹಾರದಲ್ಲಿ ಹಿರಿಯರು ಆಗಾಗ ನೆನಪು ಮಾಡಿಕೊಳ್ಳುವ ಕೆಲವು ಘಟನೆಗಳಲ್ಲಿ ರಿಪ್ಪರ್ ಚಂದ್ರನ್ ಎಂಬ ಸರಣಿ ಹಂತಕ ಕೊಟ್ಟಿಗೆಹಾರವನ್ನು ತನ್ನ ಅಡಗುದಾಣವಾಗಿಸಿಕೊಂಡು ಬದುಕಿದ್ದು, ನಂತರ ತನ್ನ ಹೀನ ಕೃತ್ಯದಿಂದ ಗಲ್ಲು ಶಿಕ್ಷೆಗೆ ಒಳಗಾದ ಘಟನೆ ಕೂಡ ಒಂದು.
ಎಂಬತ್ತರ ದಶಕಗಳಲ್ಲಿ ಹಲವಾರು ಅಮಾಯಕರನ್ನು ಕೊಂದ, ಬಹಳಷ್ಟು ಜನರನ್ನು ನರಳುವಂತೆ ಮಾಡಿದ್ದವನು ಕಾಸರಗೋಡು ಮೂಲದ ಸರಣಿ ಹಂತಕ ರಿಪ್ಪರ್ ಚಂದ್ರನ್. ರಾತ್ರಿಗಳಲ್ಲಿ ಕತ್ತಲೆಯ ಮರೆಯಿಂದ ಆಯುಧವನ್ನು ಹಿಡಿದು ಬರುವ ಹಂತಕನನ್ನು ನೆನೆದು ಆ ದಶಕಗಳಲ್ಲಿ ಕೇರಳದ ಕಾಸರಗೋಡು, ಕಣ್ಣೂರು, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜನರು ರಾತ್ರಿಗಳನ್ನು ಭಯಾತಂಕದಿಂದಲೇ ಕಳೆಯುವಂತಾಗಿತ್ತು. ರಿಪ್ಪರ್ ಚಂದ್ರನ್ ಜಾಲ ವಿದ್ಯೆ ಬಲ್ಲವನಿರಬಹುದೆಂದು, ಹಲವು ಕಡೆ ಗಳಲ್ಲಿ ಏಕಕಾಲದಲ್ಲಿ ಆ ಹಂತಕ ಪ್ರತ್ಯಕ್ಷನಾಗು ತ್ತಾನೆ ಎಂದು ಕಥೆಗಳು ಆ ಕಾಲಕ್ಕೆ ಹರಡಿದ್ದವು.
ರಿಪ್ಪರ್ ಚಂದ್ರನ್ ಬರುವನೆಂದು ಹೆದರಿಸಿ ನಿದ್ರೆ ಮಾಡದ ಮಕ್ಕಳನ್ನು ನಿದ್ರಿಸು ವಂತೆ ಮಾಡುತ್ತಿದ್ದರು ಅಂದಿನ ಪೋಷಕರು. ಗುಂಪುಗೂಡಿದಲ್ಲೆಲ್ಲಾ ರಿಪ್ಪರ್ ಚಂದ್ರನ್‍ನ ಕುರಿತ ಮಾತುಗಳೆ ಜನರ ನಡುವೆ ವಿನಿಮಯ ಗೊಳ್ಳುತ್ತಿತ್ತು. ರಿಪ್ಪರ್ ಚಂದ್ರನ್ ಕೊಲೆಗೈದ, ದರೋಡೆ ಮಾಡಿದ, ಅತ್ಯಾಚಾರ ಎಸಗಿದ ಕತೆಗಳೆ ಮಾತಿನ ವಿಷಯವಾಗಿತ್ತು. ರಾತ್ರಿ ಸಮಯದಲ್ಲಿ ಆಯಾ ಊರಿನ ಯುವಕರು ಗುಂಪುಗೂಡಿ ಕಾವಲು ಕೂರುತ್ತಿದ್ದರು. ರಿಪ್ಪರ್ ಚಂದ್ರನ್‍ನನ್ನು ಸೆರೆ ಹಿಡಿಯಲು ಮೈ ಎಲ್ಲಾ ಕಣ್ಣಾಗಿ ಹುಡುಕುತ್ತಿದ್ದರು.
ಇಂಗ್ಲೇಡ್‍ನಲ್ಲಿ ಅನೇಕರನ್ನು ತಲೆ ಒಡೆದು ಕೊಂದ ಜಾಕ್ ದಿ ರಿಪ್ಪರ್ ಎಂಬ ಸರಣಿ ಹಂತಕ ಹತ್ಯೆ ಮಾಡುತ್ತಿದ್ದ ರೀತಿಯಲ್ಲೆ ಚಂದ್ರನ್ ಕತ್ತಲಲ್ಲಿ ಮನೆಗೆ ನುಗ್ಗಿ ಮನೆಯಲ್ಲಿದ್ದವರ ತಲೆಗೆ ಹೊಡೆದು ದರೋಡೆ ಮಾಡುತ್ತಿದ್ದ. ಆದ್ದರಿಂದಲೇ ಮುದುಗುಟ್ಟಿ ಚಂದ್ರನ್ ಎಂಬ ಆತನ ಮೂಲ ಹೆಸರು ಜನರ ಬಾಯಲ್ಲಿ ರಿಪ್ಪರ್ ಚಂದ್ರನ್ ಎಂದಾಯಿತು. ಭಾರತದಲ್ಲಿಯೇ ಅತಿ ಹೆಚ್ಚು ಜನರನ್ನು ಕೊಂದವರಲ್ಲಿ ಆ ಕಾಲಕ್ಕೆ 42 ಜನರನ್ನು ಕೊಂದ ರಮಣ ರಾಘವ್ ಎಂಬ ಮಹಾರಾಷ್ಟ್ರ ಮೂಲದ ಸರಣಿ ಹಂತಕನ ನಂತರದ ಸ್ಥಾನ ರಿಪ್ಪರ್ ಚಂದ್ರನದು. ಸರಣಿ ಹಂತಕ ಚಂದ್ರನ್‍ನ ಅಂದಿನ ಕ್ರೂರಕೃತ್ಯಗಳು ಯಾವ ಮಟ್ಟಿನದಾಗಿದ್ದವೆಂದರೆ ಅಂದಿನ ಗೃಹ ಸಚಿವರಾಗಿದ್ದ ರಾಚಯ್ಯ ಅವರು ಚಂದ್ರನ್‍ನನ್ನು ಸೆರೆ ಹಿಡಿದವರಿಗೆ ಬಹುಮಾನವನ್ನು ಘೋಷಣೆ ಮಾಡಿದ್ದರು. ವಿಧಾನಸಭೆಯ ಅದಿವೇಶನದಲ್ಲಿ ಪ್ರತಿಪಕ್ಷಗಳು ಸರಣಿ ಹತ್ಯೆ ಮಾಡುತ್ತಿರುವ ಹಂತಕನನ್ನು ಸೆರೆ ಹಿಡಿಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದವು.
1950ರಲ್ಲಿ ಕಾಸರಗೋಡು ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ ಚಂದ್ರನ್ ಹತ್ತನೆ ವಯಸ್ಸಿಗೆ ಬರುತ್ತಿದ್ದಂತೆ ಆತನ ತಂದೆ ತೀರಿಕೊಂಡರು. 14 ವರ್ಷಕ್ಕೆ ಊರು ಬಿಟ್ಟ ಚಂದ್ರನ್ ಹಲವು ಊರುಗಳಲ್ಲಿ ಅಲೆಯುತ್ತಾ ತಿರುಗಿ ಕೆಲ ವರ್ಷದ ನಂತರ ಮತ್ತೆ ಕಾಸರಗೋಡಿನ ತನ್ನ ಊರಿಗೆ ಮರಳಿದಾಗ ಕಳ್ಳತನದ ವಿದ್ಯೆಯಲ್ಲಿ ಪಳಗಿದ್ದ. 1977ರಲ್ಲಿ ಕಳ್ಳತನ ಪ್ರಕರಣದಲ್ಲಿ ಕಾಸರಗೋಡಿನಲ್ಲಿ ಮೊದಲ ಬಾರಿಗೆ ಪೊಲೀಸರ ಅತಿಥಿಯಾದ. ಆ ನಂತರ ಜೈಲು ಶಿಕ್ಷೆ ಮುಗಿಸಿ ಚಂದ್ರನ್ ಹೊರಟ್ಟಿದ್ದು ಕರ್ನಾಟಕದ ಕಡೆಗೆ.
ಜೈಲಿನಲ್ಲಿ ಸಹಖೈದಿಯಾಗಿದ್ದ ತಿಮ್ಮ, ಚಂದ್ರನ್‍ನ ಜೊತೆಯಾದ. 1983ರ ಸೆಪ್ಟೆಂಬರ್ ತಿಂಗಳ 10ನೇ ತಾರೀಖಿನಂದು ಸರಣಿ ಹತ್ಯೆಯ ಮೊದಲ ಬಲಿಯಾಗಿತ್ತು. ಕೇರಳದ ಚೆಮ್ಮಿನಾಡಿನ ಮನೆಯೊಂದಕ್ಕೆ ನಡುರಾತ್ರಿ ಮುಸುಕು ಧರಿಸಿ ನುಗ್ಗಿದ ಚಂದ್ರನ್ ಆ ಮನೆಯಲ್ಲಿದ್ದ ಮಹಿಳೆಯ ತಲೆಗೆ ಸುತ್ತಿಗೆಯಿಂದ ಬೀಸಿ ಹೊಡೆದು ಮನೆಯಲ್ಲಿದ್ದ ಬೆಳೆಬಾಳುವ ವಸ್ತುಗಳನ್ನು ದೋಚಿ ಅಲ್ಲಿಂದ ಕಾಲ್ಕಿತ್ತ.
ಸುಲಭವಾಗಿ ಒಳಪ್ರವೇಶಿಸಬಹುದಾದ ಚಿಕ್ಕ ಚಿಕ್ಕ ಮನೆಗಳೆ ರಿಪ್ಪರ್ ಚಂದ್ರನ್‍ನ ಗುರಿಯಾಗಿರುತ್ತಿದ್ದವು. ಅಂತಹ ಮನೆಗಳಿಗೆ ನಡುರಾತ್ರಿ ನುಗ್ಗುವ ಚಂದ್ರನ್ ಮಲಗಿರುವವರ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿ, ಕೊಲೆ ಮಾಡಿ ಹಣ, ಆಭರಣಗಳನ್ನು ದೋಚುತ್ತಿದ್ದ. ದರೋಡೆ ನಡೆಸಿ ಅಲ್ಲಿಂದ ಸುರಕ್ಷಿತವಾಗಿ ಪಾರಾಗಬಹುದಾದ ರೈಲ್ವೆ ಮಾರ್ಗ ಅಥವಾ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮನೆಗಳನ್ನು ಚಂದ್ರನ್ ಹೆಚ್ಚಾಗಿ ದರೋಡೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ.
1985 ಅಕ್ಟೋಬರ್ 15ರಂದು ಮಂಜೇಶ್ವರದ ಗ್ರಾಮ ವೊಂದರಲ್ಲಿ ಸರಣಿ ಹಂತಕ ಒಂದೇ ಮನೆಯಲ್ಲಿ ಮೂವರ ನೆತ್ತಿಗೆ ಪಿಕಾಸಿಯಿಂದ ಹೊಡೆದು ಕೊಂದು ದರೋಡೆ ಮಾಡಿದ್ದ. ಆ ನಂತರದಲ್ಲಿ ಕೇರಳ, ಕರ್ನಾಟಕದ ಕೆಲ ಗ್ರಾಮಗಳಲ್ಲಿ ಚಂದ್ರನ್‍ನ ಕ್ರೂರತೆಗೆ ಹಲವರು ಜೀವ ಕಳೆದುಕೊಂಡರು.
ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಪೊಲೀಸರಿಗೆ ಪ್ರಾರಂಭದಲ್ಲಿ ಯಾವುದೇ ಸುಳಿವು ದೊರಕಲಿಲ್ಲ. ಹತ್ಯೆ ನಡೆದ ರೀತಿ ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿದ್ದರಿಂದ ಈ ಎಲ್ಲಾ ಹತ್ಯೆಯ ಹಿಂದಿನ ಹಂತಕ ಒಬ್ಬನೇ ಎಂಬುದರಲ್ಲಿ ಪೊಲೀಸರಿಗೆ ಅನುಮಾನವಿರಲಿಲ್ಲ.
ಕೇರಳದ ತಣಿಪರಂಬ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸರಣಿ ಹತ್ಯೆಯ ಬೆನ್ನು ಹತ್ತಿ ತನಿಖೆ ಆರಂಭಿಸಿ ಸಂಶಯಾಸ್ಪದ ವಾಗಿ ಕಂಡು ಬಂದ ಕೆಲವರನ್ನು ಬಂದಿಸಿ ದ್ದರು. ಬಂಧಿಸಿದವರಲ್ಲಿ ಚಂದ್ರನ್ ಕೂಡ ಇದ್ದ. ಕೇರಳದ ತಣಿಪರಂಬ್ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದವಾಗಿ ಬಂದಿಸಿದ ಎಲ್ಲರ ಬೆರಳಚ್ಚನ್ನು ಪೊಲೀಸರು ಸಂಗ್ರಹಿಸಿ ದ್ದರು. ಆ ದಿನವೇ ರಾತ್ರಿ ಆ ಪೊಲೀಸ್ ಠಾಣೆ ಯಲ್ಲಿ ಯಾವುದೋ ಪ್ರತಿಭಟನೆ ಯೊಂದು ನಡೆದಿದ್ದು ಪ್ರತಿಭಟನಾ ನಿರತರನ್ನು ಬಂದಿಸಲಾಗಿತ್ತು. ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಠಾಣೆಯಲ್ಲಿದ್ದ ಚಂದ್ರನ್‍ನ ಮೇಲೆ ಸರಣಿಹತ್ಯೆಯ ಕುರಿತಾಗಿ ಪೊಲೀಸರಿಗೆ ಅನುಮಾನವೇನೂ ಬಾರದೆ ಇದ್ದುದ್ದರಿಂದ ಆತನನ್ನು ಬಿಟ್ಟು ಕಳುಹಿಸಿದ್ದರು.
ಅದಾಗಿ 24 ಗಂಟೆಯೊಳಗೆ ತಳಿಪರಂಬ್ ಎಂಬ ಊರಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆಯಾಗಿತ್ತು. ಆ ಮನೆಯೊಳಗೆ ಸಿಕ್ಕ ಮದ್ಯದ ಬಾಟಲಿಯಲ್ಲಿದ್ದ ಬೆರಳಚ್ಚನ್ನು ಸಂಗ್ರಹಿಸಿ ಸಂಶಯಾಸ್ಪದ ವಾಗಿದ್ದ ವ್ಯಕ್ತಿಗಳಿಂದ ಸಂಗ್ರಹಿಸಿದ್ದ ಬೆರಳಚ್ಚುಗಳನ್ನು ಹೋಲಿಕೆ ಮಾಡಿ ನೋಡಿದಾಗ ಅದರಲ್ಲಿ ಒಬ್ಬನ ಬೆರಳಚ್ಚು ಮದ್ಯ ಬಾಟಲಿಯ ಮೇಲಿದ್ದ ಬೆರಳಚ್ಚನ್ನು ಹೋಲುತ್ತಿತ್ತು. ಆ ಬೆರಳಚ್ಚು ರಿಪ್ಪರ್ ಚಂದ್ರನದಾಗಿತ್ತು.
ಇತ್ತ ಕರ್ನಾಟಕದಲ್ಲಿ ಎಂಬತ್ತರ ದಶಕದಲ್ಲಿ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಬಂದಿಸಿದ ಸುರೆಂದ್ರನ್ ಎಂಬ ಆರೋಪಿ ಪರಾರಿಯಾಗಿದ್ದ. ಪೊಲೀಸರು ಆ ಆರೋಪಿಯ ಹುಡುಕಾಟದಲ್ಲಿ ತೊಡಗಿ ಎಲ್ಲಾ ಠಾಣೆಗಳಿಗೂ ಆ ಆರೋಪಿ ನಾಪತ್ತೆಯಾಗಿರುವ ಮಾಹಿತಿ ನೀಡಿದ್ದರು. ಅದಾಗಿ ಕೆಲ ವರ್ಷದಲ್ಲಿ ಕಾಸರಗೋಡಿನ ಮನೆಯೊಂದರಲ್ಲಿ ಅತ್ಯಾಚಾರ ಎಸಗಿ ಮಹಿಳೆಯೊಬ್ಬ ಳನ್ನು ಕೊಂದ ಘಟನೆ ನಡೆಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಕೃತ್ಯ ಎಸಗಿದ ಆಗಂತುಕರ ಬಗ್ಗೆ ಮಾಹಿತಿ ಕಲೆ ಹಾಕಿ ಕೃತ್ಯ ನಡೆದ ಸಮಯದಲ್ಲಿ ಆ ಮನೆಯಲ್ಲಿದ್ದ ಇತರರಿಂದ ಹಂತಕರ ಚಹರೆಯ ಮಾಹಿತಿಯನ್ನು ಕಲೆ ಹಾಕಿದರು. ಹಾಗೆ ಮಾಹಿತಿ ಕಲೆ ಹಾಕುವಾಗ ಶಿವಮೊಗ್ಗದಲ್ಲಿ ಕಳ್ಳತನ ಪ್ರಕರಣದಲ್ಲಿ ಪರಾರಿಯಾಗಿದ್ದ ಸುರೇಂದ್ರನ್ ಮತ್ತು ಕಾಸರಗೋಡಿನ ಹಂತಕನ ಚಹರೆಗೂ ಸಾಮ್ಯತೆ ಇರುವುದನ್ನು ಗುರುತಿಸಿದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆಯನ್ನು ಮುಂದುವರಿಸಿದರು.
ಸುರೇಂದ್ರನ್ ಹಾಗೂ ಚಂದ್ರನ್ ಇಬ್ಬರು ಒಬ್ಬನೇ ಇರಬಹುದು ಎಂಬ ಅನುಮಾನದೊಂದಿಗೆ ವಿಚಾರಣೆ ಆರಂಭಿಸಿದಾಗ ಸುರೇಂದ್ರನ್ ಹಾಗೂ ಚಂದ್ರನ್ ಇಬ್ಬರು ಒಬ್ಬನೇ ಎಂಬುದು ಪೊಲೀಸರಿಗೆ ಖಾತ್ರಿಯಾಯಿತು. ಅದರ ಜಾಡು ಹಿಡಿದು ಹೊರಟಾಗ ಕೊಟ್ಟಕೊನೆಗೆ ಪೊಲೀಸರು ಹೋಗಿ ತಲುಪಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರಕ್ಕೆ. 1986 ಪೆಬ್ರವರಿ 27 ರಂದು ಕೊಟ್ಟಿಗೆಹಾರದಲ್ಲಿ ಕೇರಳ ಮತ್ತು ಕರ್ನಾಟಕ ಜಂಟಿ ಕಾರ್ಯಾಚಾರಣೆಯಲ್ಲಿ ಚಂದ್ರನ್‍ನನ್ನು ಸೆರೆ ಹಿಡಿದರು. ಕೊಟ್ಟಿಗೆಹಾರ ದಲ್ಲಿ ಚಂದ್ರನ್‍ನನ್ನು ಸೆರೆ ಹಿಡಿದ ಪೊಲೀಸರು ಕಳಸ ಸಮೀಪದ ಸಂಸೆಯಲ್ಲಿ ಸರ್ಕಾರಿ ಕಟ್ಟಡವೊಂದರಲ್ಲಿ ಇಟ್ಟು ತಿಂಗಳುಗಳ ಕಾಲ ವಿಚಾರಣೆ ನಡೆಸಿದರು.
ಚಂದ್ರನ್‍ನನ್ನು ಸೆರೆ ಹಿಡಿದಾಗ ಅಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ರಾಚಯ್ಯ ಅವರು ಕಳಸದ ಸಂಸೆಗೆ ಬೇಟಿ ನೀಡಿ ಚಂದ್ರನ್‍ನನ್ನು ಸೆರೆ ಹಿಡಿದ ಪೊಲೀಸರಿಗೆ ಬಹುಮಾನವನ್ನು ಕೂಡ ಘೋಷಿಸಿದ್ದರು. ಚಂದ್ರನ್‍ನನ್ನು ಕುದುರೆಮುಖಕ್ಕೆ ಕರೆ ತಂದಾಗ ಮೂಡಿಗೆರೆಯ ಹಿರಿಯ ಛಾಯಾಗ್ರಾಹಕರಾದ ವಸಂತ್ ಪೈ ಅವರು ತಾವು ಪೋಟೋ ತೆಗೆದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ. “ಚಂದ್ರನ್‍ನನ್ನು ಹಿಡ್ದು ಕೊಟ್ಟೋರಿಗೆ ಹೋಂ ಮಿನಿಸ್ಟರ್ ರಾಚಯ್ಯ ಒಂದ್ ಲಕ್ಷ ಬಹುಮಾನ ಇಟ್ಟಿದ್ರು. ಚಂದ್ರನ್‍ನ ಸೆರೆ ಹಿಡ್ದಾಗ ಮುಖಕ್ಕೆ ಬಟ್ಟೆಯ ಮುಸುಕು ಹಾಕಿ ಕಣ್ಣು ಕಾಣುವಷ್ಟಕ್ಕೆ ಬಟ್ಟೆ ತೂತು ಮಾಡಿ ಕರ್ಕೊಂಡ್ ಬಂದಾಗ ಪೋಟೊ ತೆಗ್ದಿದ್ದೆ. ಕುದುರೆಮುಖದಲ್ಲಿ ಚಂದ್ರನ್ ಹಿಡಿದು ಕೊಟ್ಟವರಿಗೆÀ ಬಹುಮಾನ ಕೊಡೊ ಕಾರ್ಯಕ್ರಮ ಇತ್ತು. ಹೆಲಿಕ್ಯಾಪ್ಟರ್‍ನಲ್ಲಿ ಗೃಹ ಸಚಿವರು, ಮಂಗಳೂರು ಡಿಐಜಿ ರೇವಣ್ಣಸಿದ್ದಯ್ಯ, ಕಸ್ತೂರಿ ರಂಗನ್ ಎಲ್ಲಾ ಬಂದಿದ್ರು. ಪೊಲೀಸ್ ಇಲಾಖೆಯವರಿಗೆ ಬಹುಮಾನದ ಕವರ್ ಕೊಡುವಾಗ ಪ್ರತಿಯೊಬ್ಬರ ಪೊಟೋ ತೆಗಿಬೇಕಿತ್ತು. ಎಲ್ಲರ ಪೋಟೊ ತೆಗೆದಿದ್ದೆ” ಎಂದು.
ಕೊಟ್ಟಿಗೆಹಾರದಲ್ಲಿ ರಮೇಶ್ ಎಂಬ ಹೆಸರಿನಲ್ಲಿ ಸಾಮಾನ್ಯನಂತೆ ಬದುಕುತ್ತಿದ್ದ ಚಂದ್ರನ್ ಅಲ್ಲಿನ ಜನರಿಗೆ ಮಹಾನ್ ದೈವಭಕ್ತನಾಗಿ ತೋರಿಸಿಕೊಳ್ಳುತ್ತಿದ್ದ. ಕೊಟ್ಟಿಗೆಹಾರದಲ್ಲಿ ಮನೆ ಸಮೀಪವೇ ಮುತ್ತಪ್ಪಸ್ವಾಮಿ ಗುಡಿ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದ. ಚಂದ್ರನ್ ಆಗಾಗ ಬಾಡಿಗೆ ಕಾರಿನಲ್ಲಿ ತಿರುಗಾಡುವುದು ಕಾಣುತ್ತಿತ್ತು. ಜನರೊಂದಿಗೆ ಹೆಚ್ಚಿಗೆ ಬೆರೆಯದೆ ಯಾವುದೇ ನಿರ್ದಿಷ್ಟ ಕೆಲಸ ಕಾರ್ಯ ಮಾಡದೇ ತನ್ನಷ್ಟಕ್ಕೆ ತಾನು ತಿರುಗಾಡಿಕೊಂಡಿದ್ದ. ಹೀಗೆ ತಮ್ಮ ನಡುವೆ ಸಾಮಾನ್ಯನಂತೆ ಬದುಕುತ್ತಿದ್ದ ರಮೇಶ್ ಎಂಬುವವ ನೊಳಗೆ ಚಂದ್ರನ್ ಎಂಬ ನರರಾಕ್ಷಸನಿದ್ದಾನೆ ಎಂಬುದು ಕೊಟ್ಟಿಗೆ ಹಾರದ ಜನತೆಗೆ ತಿಳಿದದ್ದು ಪೊಲೀಸರು ಚಂದ್ರನ್‍ನನ್ನು ಬಂದಿಸಿ ಅದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದಾಗಲೇ. ಯಾಕೆಂದರೆ ಚಂದ್ರನ್ ತನ್ನ ದುಷ್ಕøತ್ಯಗಳನ್ನು ದೂರದ ಬೆಳ್ತಂಗಡಿ, ಉಡುಪಿ, ಕಾಸರಗೋಡು ಭಾಗದಲ್ಲಿ ಮಾತ್ರ ಮಾಡುತ್ತಿದ್ದ. ಪೊಲೀಸರು ಚಂದ್ರನ್‍ನನ್ನು ಸೆರೆ ಹಿಡಿಯುವವರೆಗೆ ಕೊಟ್ಟಿಗೆಹಾರದವರ ಪಾಲಿಗೆ ಚಂದ್ರನ್ ಒಬ್ಬ ಸಂಭಾವಿತ, ಮಹಾನ್ ದೈವ ಭಕ್ತನಾಗಿದ್ದ.
ಚಂದ್ರನ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ದಿನ ಸಾವಿರಾರು ಜನ ನ್ಯಾಯಾಲಯಕ್ಕೆ ಸಾಗುವ ರಸ್ತೆಯ ಇಬ್ಬದಿಯಲ್ಲಿ ಚಂದ್ರನ್ ಎಂಬ ಕ್ರೂರ ಹಂತಕನನ್ನು ನೋಡಲು ನೆರೆದಿದ್ದರು. ಕೈಕಾಲುಗಳಿಗೆ ಸರಪಳಿ ಹಾಕಿ ನ್ಯಾಯಾಲಯಕ್ಕೆ ಚಂದ್ರನ್‍ನನ್ನು ತರುವುದನ್ನು ಜನರು ಭಯಾತಂಕ ಕುತೂಹಲ ಮಿಶ್ರಿತ ನೋಟದಿಂದ ನೋಡಿದ್ದರು. 1987ರಲ್ಲಿ ನ್ಯಾಯಾಲಯ ಚಂದ್ರನ್ ಮಾಡಿದ ಕ್ರೂರ ಅಪರಾಧಗಳಿಗೆ ಗಲ್ಲು ಶಿಕ್ಷೆ ವಿಧಿಸಿತು. ಚಂದ್ರನ್‍ನ ಜೊತೆಯಲ್ಲಿ ಕೃತ್ಯದಲ್ಲಿ ಪಾಲ್ಗೊಂಡ ಮೂವರಿಗೆ 14 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತು. 1991 ಜುಲೈ 6ರಂದು 4-55ಕ್ಕೆ ಮುದುಗುಟ್ಟಿ ಚಂದ್ರನ್ ಅಲಿಯಾಸ್ ರಿಪ್ಪರ್ ಚಂದ್ರನ್ ಅಲಿಯಾಸ್ ರಮೇಶ್ ಅಲಿಯಾಸ್ ಸುರೇಂದ್ರನ್‍ನನ್ನು ಕೇರಳದಲ್ಲಿ ಗಲ್ಲಿಗೇರಿಸಲಾಯಿತು. ಅಲ್ಲಿಗೆ ನಟೋರಿಯಸ್ ನರಹಂತಕನ ಕುಕೃತ್ಯದ ಕರಾಳತೆಗೆ ತೆರೆಬಿದ್ದಿತ್ತು.
ರಿಪ್ಪರ್ ಚಂದ್ರನ್‍ನ ಕುಕೃತ್ಯವನ್ನು ಆದರಿಸಿ ಮಲಯಾಳಂನಲ್ಲಿ ‘ರಿಪ್ಪರ್’ ಹೆಸರಿನ ಸಿನಿಮಾ ಕೂಡ ಬಿಡುಗಡೆಯಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ