October 5, 2024

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕೃತ ಉಪನ್ಯಾಸಕರು, 
ಮೈಸೂರು.
ಮೊ. 9448233119

ಮನುಷ್ಯ ಜೀವನದಲ್ಲಿ ಸೇವಿಸುವ ಆಹಾರ ಯೋಚಿಸುವ ವಿಚಾರ ಎಲ್ಲವೂ ವಿಧವಿಧವಾಗಿರುತ್ತದೆ. ಈ ವಿಚಾರ ಯೋಚನಾ ಲಹರಿಯು ಒಳ್ಳೆಯ ಹಾದಿ ಕೆಟ್ಟ ಹಾದಿ ಎರಡನ್ನೂ ಹಿಡಿಯ ಬಲ್ಲದು. ಕಟುಕ ಮತ್ತು ಋಷಿ ಸಾಕಿದ ಗಿಳಿಯ ಕಥೆಯಂತೆ ನಾವು ಬೆಳೆದ ವಾತಾವರಣ ನಮ್ಮ ನಡೆ-ನುಡಿಯ ಮೇಲೆ
ಸಾಕಷ್ಟು ಪರಿಣಾಮ ಬೀರುತ್ತದೆ. ನಮ್ಮ ಆಸೆ-ಆಕಾಂಕ್ಷೆಗಳು ಅದಕ್ಕೆ ಪೂರಕವಾಗಿ ಕೆಲಸಮಾಡುತ್ತವೆ. ಇಷ್ಟೆಲ್ಲದರ ನಡುವೆಯೂ ನಮ್ಮ ಸಂಚಿತ ಕರ್ಮಗಳು ನಮ್ಮನ್ನು ಸುತ್ತಿಕೊಂಡೇ ಸಾಗುತ್ತದೆ. ಆದರೆ ಅದರ ಅರಿವಿಲ್ಲದ ನಾವು ಎಲ್ಲವೂ ನನ್ನಿಂದಲೇ ಎಂಬಂತೆ ತೋರ್ಪಡಿಸಿಕೊಳ್ಳುತ್ತೇವೆ. ಈ ಸೃಷ್ಟಿಯ ಉದ್ದೇಶ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ, ಅದು ಕಾಲಿಗೆ ತೊಡರುವ ಬಳ್ಳಿಯಂತೆ, ಮುಂದೆ ಹೊರಟರೆ ಹಿಂದಕ್ಕೆ ಎಳೆಯುತ್ತಿರುತ್ತದೆ. ಆದರೂ ನಾವು ಏನೂ ಕಮ್ಮಿಯಿಲ್ಲವೆಂಬಂತೆ ಸಾಗುತ್ತಿರುತ್ತೇವೆ. ಬದುಕಿನ ಪಯಣದಲ್ಲಿ ಬರುವ ಹಲವಾರು ಸಂಬಂಧ ಗಳು ನಮಗೆ ಅರಿವಿಲ್ಲದೆ ಒಂದು ಬಂಧನದಲ್ಲಿ ನಮ್ಮನ್ನು ಸಿಲುಕಿಸುತ್ತದೆ. ಈ ಬಂಧಕ್ಕೆ ಹತ್ತಾರು ಹೆಸರಿಟ್ಟು ಸಾಗಲೇಬೇಕು. ಇಂದಲ್ಲ ನಾಳೆ ಕಮರಿಹೋಗುವ ಜೀವನದಲ್ಲಿ ಬರುವ ಎಲ್ಲವನ್ನು ಅತಿಯಾಗಿ ಹಚ್ಚಿಕೊಳ್ಳದೆ ಕಮಲದೆಲೆಯ ಬಿಂದುವಿನಂತೆ ಬದುಕು
ಸಾಗಿಸಬೇಕು ಎಂಬುದು ಡಿ.ವಿ.ಜಿ.ಯವರ ಮಾತು.
ನೋಡುನೋಡುತ ಲೋಕಸಹವಾಸ ಸಾಕಹುದು |
ಬಾಡುತಿಹ ಹೂಮಾಲೆ, ಗೂಢವಿಹ ಕಜ್ಜಿ ||
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |
ನೋಡಾಡು ಹಗುರದಿಂ ಮಂಕುತಿಮ್ಮ ||
ಬಾಡಿ ಹೋಗುತ್ತಿರುವ ಹೂವಿನ ಮಾಲೆ, ಒಳಗೇ ತುರಿಸುವ ಕಜ್ಜಿಯ ಹಾಗೆ ಲೋಕದ ಸಹವಾಸ. ಆದ್ದರಿಂದ ಇಲ್ಲಿ ಆಳಕ್ಕಿಳಿಯದೆ ಮೇಲೆ ಮೇಲೆ ಓಡಾಡಿಕೊಂಡಿರುವುದು ಜಾಣತನವಾಗುತ್ತದೆ. ಬೆಳಿಗ್ಗೆ ಅರಳಿ ನಗುತ್ತಿದ್ದ ಹೂವಿನ ಮಾಲೆಯದು ಸಂಜೆಯಾಗುತ್ತಾ ಬಾಡುತ್ತದೆ. ದೇಹದಲ್ಲಾದ ಕಜ್ಜಿಯು ಎಷ್ಟು ಮುಚ್ಚಿಡಲು ಪ್ರಯತ್ತಿಸಿದರೂ ಅದರ ಕೆರೆತದಿಂದಾಗಿ ಹೊರಬಂದೇ ಬರುತ್ತದೆ. ಆಗ ಮನಸ್ಸಿಗೆ ಬಹಳ ಬೇಸರವೆನಿಸುತ್ತದೆ. ಹಾಗೆಯೇ ಜೀವನ ಒಂದು ದಿನ ಇದ್ದಹಾಗೆ ಇನ್ನೊಂದು ದಿನ ಇರುವುದಿಲ್ಲ ಸ್ವಲ್ಪ ದಿನ ಆದ ಮೇಲೆ ಈ ಜೀವನವೇ ಸಾಕಪ್ಪಾ ಎನಿಸುತ್ತದೆ. ಹಾಗಾಗಿ ಇದರಲ್ಲಿ ನಾನು ನನ್ನದು ಎಂದುಕೊಂಡು ಅಂಟಿಕೊಳ್ಳದೆ ಇದ್ದೂ ಇಲ್ಲದಂತಿರಬೇಕು, ಯಾವುದೂ ಸಹ ಶಾಶ್ವತವಲ್ಲ ಬೆಳಿಗ್ಗೆ ಅರಳಿದ ಹೂವು ಸಂಜೆಗೆ ಬಾಡುತ್ತದೆ ಎಂದಾದರೆ ಎಷ್ಟು ವಿಚಿತ್ರ ಅದರ ಜೀವನ! ಹಾಗೆಯೇ ನಾವು ಸಹ ಇದ್ದೂ ಇಲ್ಲದಂತಿರುವ ಗುಣವನ್ನು ರೂಢಿಸಿಕೊಂಡು ಎಲ್ಲವನ್ನೂ ಸಮಾನವಾಗಿ ನೋಡುತ್ತಾ ಇರುವ ಜೀವನದಲ್ಲಿ ಯಾವ ವಿಷಯವನ್ನೂ ಸಹ ಮನಸ್ಸಿನಾಳಕ್ಕೆ ತೆಗೆದುಕೊಂಡು ಹೋಗದೇ ಬಂದದ್ದೆಲ್ಲಾ ಬರಲಿ; ಬರುತ್ತಿರುತ್ತದೆ ಹೋಗುತ್ತಿರುತ್ತದೆ ಎಂದುಕೊಂಡು ಮುಂದೆ ಸಾಗುತ್ತಿರಬೇಕು ಹಾಗಾದಾಗ ಮಾತ್ರ ಈ ಲೋಕದಲ್ಲಿ ಬದುಕಿರಲು ಸಾಧ್ಯ ಹಾಗೂ ಸರಳ ಕೂಡ. ನೀರಮೇಲಿನ ಗುಳ್ಳೆಯಂತಾ ಬದುಕಿಗೆ ಯಾಕೆ ಒದ್ದಾಟ …! ಹೊಡೆದಾಟ …! ಬಡಿದಾಟ …! ನಾನು ನನ್ನದು ಎನ್ನುವ ಸ್ವಾರ್ಥ …! ಎಂದು ಜೀವನದ ರಹಸ್ಯವನ್ನು ಮಾರ್ಮಿಕವಾಗಿ ಡಿ.ವಿ.ಜಿ.ಯವರು ಹೇಳಿದ್ದಾರೆ. ಹಾಗಾದರೆ ಜೀವನದಲ್ಲಿ ಏನಿದೆ …? ಮಮತೆ, ಪ್ರೀತಿ, ನನ್ನವರು, ಸ್ನೇಹ-ಸಂಬಂಧ ಇದೆಲ್ಲವೂ ಇಲ್ಲವೆಂದಾದರೆ ಬದುಕುವ ಬಗೆ ಹೇಗೆ …? ಇದ್ದೂ ಇಲ್ಲದಂತಿರಲು ಸಾಧ್ಯವೇ …?ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಇಲ್ಲ …! ಇಲ್ಲಿ ಪ್ರೀತಿ-ವಿಶ್ವಾಸಕ್ಕೆ ಬೆಲೆಯೇ ಇಲ್ಲವೇ ಹಾಗಾದರೆ…! ಅದೆಲ್ಲವೂ ಭ್ರಮೆಯೇ …! ಎಂಬ ನಾನಾ ಆಲೋಚನೆಗಳು ಮೆದುಳನ್ನು ಮುತ್ತುತ್ತವೆ. ಇಲ್ಲಿ ಡಿ.ವಿ.ಜಿ.ಯವರು ಜೀವನವನ್ನು ಆಳವಾಗಿ ತೆಗೆದುಕೊಂಡು ಹೋಗಬೇಡಿ ಎಂದಿದ್ದಾರೆಯೇ ಹೊರತು ಯಾರನ್ನೂ ಪ್ರೀತಿಯಿಂದ ಕಾಣಬೇಡಿ ಎಂದು ಹೇಳಿಲ್ಲ. ಜೀವನದಲ್ಲಿ ನಮ್ಮ ಪ್ರೀತಿ, ಸ್ನೇಹ, ಸಂಬಂಧ ಇವುಗಳು ಸೇತುವೆಯಂತೆ ಬಾಂಧವ್ಯವನ್ನು ಬೆಸೆಯುತ್ತವೆ.
ತಡಕಾಟ ಬದುಕೆಲ್ಲವೇಕಾಕಿಜೀವ ತ |
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ||
ಪಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ |
ಮಡುವೊಳೋಲಾಡುತ್ತೆ ಮಂಕುತಿಮ್ಮ ||
ಬದುಕೆಲ್ಲು ಒಂಟಿ, ಒಂದು ಹುಡುಕಾಟದಲ್ಲಿಯೇ ತಡಕಾಡುತ್ತದೆ, ತನಗಾಗಿ ಜೊತೆಗಾರರನ್ನು ಹುಡುಕಿಕೊಂಡು ಅವರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಪ್ರೀತಿ, ಮಮತೆ, ಸ್ನೇಹ ಇವುಗಳ ದಾರಿಯಲ್ಲಿ ಓಡಾಟ, ಈ ಬಂಧನವೆಲ್ಲವೂ ಕೊಟ್ಟು ತೆಗೆದುಕೊಳ್ಳುವುದರಲ್ಲಿಯೇ ಇದರ ಗುಟ್ಟು ಅಡಗಿದೆ.
ಒಂಟಿಯಾಗಿ ಹುಟ್ಟುವ ಮನುಜ ಬೆಳೆದಂತೆಲ್ಲಾ ತನ್ನ ಜೊತೆಗಾರರನ್ನು ಹುಡುಕುತ್ತಾ ಹೊರಡುತ್ತಾನೆ. ಈ ಹುಡುಕಾಟ ದಲ್ಲಿ ಎಷ್ಟೋ ಜನ ಬಂದು ಹೋಗುತ್ತಾರೆ. ಆದರೆ ನಾವು ನಮಗೆ ಸರಿ ಎನಿಸಿದವರನ್ನು ಆಯ್ದುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಈ ಸರಿಯಾದ ಆಯ್ಕೆಯಲ್ಲಿ ಇಬ್ಬರದೂ ಸಮಪಾಲು ಏಕೆಂದರೆ
ನಮ್ಮ ಅನಿಸಿಕೆಗಳು, ವಿಚಾರಗಳಿಗೆ ಹೊಂದಿಕೆಯಾಗಬೇಕು, ಆಗಲೇ ಆ ಬಾಂಧವ್ಯ ಗಟ್ಟಿಯಾಗುವುದು. ಎಳೆತನದಲ್ಲಿ ಅನಿಸಿಕೆಗಳು ತೀರಾ ಕಡಿಮೆ. ಎಲ್ಲರೊಂದಿಗೂ ಬೆರೆಯುವ ಮನಸ್ಸು, ಯಾವ ಆಲೋಚನೆಗಳಿಗೂ ಅಲ್ಲಿ ಜಾಗವಿಲ್ಲ, ಬರುಬರುತ್ತಾ ನಮ್ಮಲ್ಲಿನ ನಿಲುವು ಪಕ್ವತೆ ಕಂಡಕೊಳ್ಳುತ್ತದೆ. ಆಗ ಈ ಆಯ್ಕೆಯ ಪ್ರಕ್ರಿಯೆ ಬದಲಾಗುತ್ತದೆ. ನಮ್ಮ ಮನಸ್ಸಿನ ಭಾವನೆಗೆ ತಕ್ಕಂತೆ ಇರುವವರನ್ನು ಆರಿಸಕೊಳ್ಳುತ್ತೇವೆ. ಆರಿಸಿಕೊಳ್ಳುವ ಸಮಯದಲ್ಲಿ ನಮ್ಮ ಪ್ರೀತಿ, ಸ್ನೇಹ, ಮಮತೆ ಎಲ್ಲವೂ ಸಹ ನಮ್ಮಿಂದ ಅವರಿಗೆ, ಅವರಿಂದ ನಮಗೆ ಕೊಟ್ಟು ತೆಗೆದುಕೊಳ್ಳುವ ಸಾಮಾನ್ಯ ಸಂಗತಿ. ಒಮ್ಮೆ ನಮ್ಮ ಆಯ್ಕೆ ಸರಿಯೆನಿಸಿದರೆ ನಾವು ಅದನ್ನು ನಿಭಾಯಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿರಬೇಕು. ಅದನ್ನ ಕಾಪಿಡುವುದು ಸುಲಭದ ಕೆಲಸವಲ್ಲ, ನಂಬಿಕೆ ಎನ್ನುವುದು ಪರಸ್ಪರರಲ್ಲಿ ಇದ್ದಾಗ ಮಾತ್ರ ಈ ಬಂಧನ ಎನ್ನುವುದು ಉಳಿಯುತ್ತದೆ. ಅದು ಸ್ನೇಹವಾದರೂ ಸರಿಯೇ, ಸಂಬಂಧವಾದರೂ ಸರಿಯೇ ….
ನಮ್ಮನ್ನು ಪ್ರೀತಿಸಿದವರಿಗೆ ನಾವು ಬಿಚ್ಚು ಮನಸ್ಸಿನ ಪ್ರೀತಿಕೊಟ್ಟಾಗ ಮಾತ್ರ ಈ ಸೇತುವೆ ಗಟ್ಟಿಯಾಗುತ್ತದೆ. ಒಂದು ವೇಳೆ ನಾವು ಇದರಲ್ಲಿ ಸೋತರೆ ಇಡೀ ಸಂಬಂಧವೇ ಸೊರಗುತ್ತದೆ. ಆದ್ದರಿಂದ ಜೀವನದಲ್ಲಿ ಬರುವ ಎಲ್ಲ ಸಂಬಂಧಗಳು ಸಹ ಈ ತಳಹದಿಯ ಮೇಲೇಯೇ ನಿಂತಿರುತ್ತದೆ. ಈ ತಳಪಾಯವನ್ನು ಗಟ್ಟಿಗೊಳಿಸುವುದು ಎಲ್ಲರ ಕರ್ತವ್ಯವಾಗಿದೆ. ಸಂಬಂಧಗಳೆಲ್ಲವೂ ಸಹ ಕೊಟ್ಟು-ತೆಗೆದುಕೊಳ್ಳುವ ಅನುಬಂಧ. ಆದ್ದರಿಂದ ಈ ಗುಟ್ಟನ್ನು ಅರಿತು ಬಾಳಿದರೆ ಜೀವನ ಸಿಹಿಯಹೊನಲು ಎನ್ನುತ್ತಾರೆ ಡಿ.ವಿ.ಜಿ.ಯವರು. ಇಲ್ಲಿ ನಾವು ಎಷ್ಟು ಆಳಕ್ಕೆ ಪ್ರೀತಿಯ ಗುಂಡಿ ತೋಡುತ್ತೇವೋ ಅಷ್ಟೇ ಗಟ್ಟಿಯಾದ ತಳಪಾಯ ಹಾಕುತ್ತಾ ಸಾಗುತ್ತೇವೆ. ಪ್ರತಿಯೊಂದು ಸಂಬಂಧವೂ ಸಹ ತನ್ನ ತಳಪಾಯ ಭದ್ರಮಾಡಿಕೊಳ್ಳಲೇಬೇಕು ಅದೇ ಜೀವನ ಗುಟ್ಟು.
ನುಡಿಗಟ್ಟಿನಾಟದಕ್ಕರ ಚೀಟಿಯೊಟ್ಟಿನಲಿ |
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ||
ಬಿಡಿಜೀವ ಸಂಗಾತಿಜೀವಗಳನರಸಿ ತಾಂ |
ಪಡೆದಂದು ಪೂರ್ಣವದು ಮಂಕುತಿಮ್ಮ ||
ನುಡಿ (ಪದ) ಕಟ್ಟಿ ಆಡುವ ಆಟದಲ್ಲಿ ಅಕ್ಷರಗಳನ್ನು ಸರಿಯಾದ ಪದವಾಗುವಂತೆ ಜೋಡಿಸಲು ಅಕ್ಷರಕ್ಕೆ ಹುಡುಕಾಡು ತ್ತೇವೆ ಅಂತೆಯೇ ಒಬ್ಬಂಟಿ ಜೀವ ತನಗಾಗಿ ಒಂದು ಸಂಗಾತಿಯನ್ನು ಹುಡುಕುವಾಗ ಅಷ್ಟೇ ಜಾಗ್ರತೆಯಾಗಿ ಹುಡುಕಿದರೆ ಜೀವನ ಅರ್ಥಪೂರ್ಣವಾಗುತ್ತದೆ.
ಬಾಲ್ಯದಲ್ಲಿ ಚೀಟಿಗಳಲ್ಲಿ ಅಕ್ಷರಗಳನ್ನು ಬರೆದು ಪದಜೋಡಣೆಯ ಆಟ ಆಡುತ್ತಿದ್ದೆವು. ಆಗ ನಮ್ಮ ಗುರಿ ಸರಿಯಾದ ಅಕ್ಷರ ಹುಡುಕುವ ಕಡೆಗೆ ಇರುತ್ತಿತ್ತು. ಹಾಗೆಯೇ ಈ ಜೀವನದಾಟದಲ್ಲಿ ನಾವು ನಮಗೆ ಅನುಗುಣವಾದ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡಾಗ ಆ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ. ಇನ್ನು ಬಾಳಸಂಗಾತಿಯ ವಿಚಾರಕ್ಕೆ ಬಂದರೂ ಆಯ್ಕೆಯೇ ಮಾನದಂಡ. ಈ ಆಯ್ದುಕೊಂಡ ಅಕ್ಷರ ಅರ್ಥಾತ್
ಸಂಗಾತಿ ಸರಿಯಿದ್ದರೆ ಬಾಳು ಅರ್ಥಪೂರ್ಣವಾದ ಪದವಾಗಿ ಹೊರಹೊಮ್ಮುತ್ತದೆ. ಎಷ್ಟೋವೇಳೆ ನಾವು ಆಯ್ಕೆಯಲ್ಲಿ ಎಡವುದುಂಟು ಆದರೆ ಒಮ್ಮೆ ಆಯ್ದುಕೊಂಡ ಕೆಲವು ಸಂಬಂಧಗಳನ್ನು ಬದಲಿಸಲಾಗುವುದಿಲ್ಲ, ಬದಲಿಗೆ ನಾವು ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಹೊಂದಾಣಿ ಕೆಯೂ ಸಹ ಅರ್ಥಪೂರ್ಣವಾಗಿಯೇ ನಡೆಯುತ್ತಿದ್ದರೆ ಜೀವನ ಸಂಪೂರ್ಣ ಅರ್ಥವನ್ನು ಪಡೆಯುತ್ತದೆ. ಜೀವನದಲ್ಲಿ ಕೆಲವು ಆಯ್ಕೆಗಳು ನಮಗೆ ತುಂಬಾ ಮುಖ್ಯವಾದವುಗಳಾಗಿರುತ್ತದೆ. ಉದಾಹರಣೆಗೆ ಸ್ನೇಹಿತರು. ಸ್ನೇಹಿತರ ಆಯ್ಕೆ ಸರಿಯಾಗಿತ್ತೆಂದರೆ ನಮ್ಮ ಬಾಲ್ಯ, ಯೌವನ, ವಿದ್ಯಾಭ್ಯಾಸ ಎಲ್ಲವೂ ಸುಗಮವಾಗಿ ಸಾಗುತ್ತದೆ. ‘ಸಹವಾಸ ಸರಿಯಿಲ್ಲ’ ಎಂಬ ಮಾತನ್ನು ನಾವು ಸಾಧಾರಣವಾಗಿ ಕೇಳುತ್ತಿರುತ್ತೇವೆ, ಈ ಸಹವಾಸವೇ ನಮ್ಮ ಜೀವನದ ಮೊದಲ ಘಟ್ಟಕ್ಕೆ ಮೆಟ್ಟಿಲುಗಳು. ಆದ್ದರಿಂದ ಈ ಮೊದಲ ಮೆಟ್ಟಿಲ ಆಯ್ಕೆ ಸರಿಯಿತ್ತೆಂದರೆ ಅರ್ಧ ಜೀವನ ಗೆದ್ದಂತೆ, ಇನ್ನು ಉಳಿದರ್ಧದ ಭಾಗ ಬಾಳಸಂಗಾತಿ ಇದನ್ನು ನಾವು ಹಣೆಬರಹಕ್ಕೆ ಬಿಟ್ಟುಬಿಡುತ್ತೇವೆ. ಒಂದುವೇಳೆ ಸರಿಯಾಗಲಿಲ್ಲ ಎಂದಾದಲ್ಲಿ ದೈವವನ್ನು ನಿಂದಿಸುತ್ತೇವೆ, ಎಲ್ಲಿ ಎಡವಟ್ಟಾಗಿದೆ ಎಂದು ಹುಡುಕಾಡುವುದರೊಳಗೆ ಜೀವನವೇ ಮುಗಿಯುವ ಹಂತ ತಲುಪಿರುತ್ತದೆ. ಆದರೆ ಹಾಗಾಗಬಾರದು ಆಯ್ಕೆಯೇನೋ ಹಣೆಬರಹವಾದರೆ ಹೊಂದಾಣಿಕೆ ನಮ್ಮ ಕೈಯಲ್ಲಿರುವ ಆಟದ ಶಬ್ದ, ಸರಿಯಾದ ಶಬ್ದವನ್ನು ಹುಡುಕಿ ಅರ್ಥಪೂರ್ಣ ಪದವನ್ನಾಗಿ ಮಾಡಿಕೊಳ್ಳುವ ಜವಾಬ್ದಾರಿ ಇಬ್ಬರಲ್ಲೂ ಇದ್ದಾಗ ಈ ಪದಕಟ್ಟುವ ಆಟದಲ್ಲಿ ಗೆಲುವು ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಅರ್ಥಪೂರ್ಣವಾದ ಅಕ್ಷರವನ್ನು ಹುಡುಕಿ ಚೆಂದವಾದ ಪದವನ್ನು ಮಾಡಿ ಜೀವನದಾಟದಲ್ಲಿ ಗೆಲುವು ಸಾಧಿಸೋಣವೇ …!

ನಿರಂತರ ಸುದ್ದಿಗಳಿಗಾಗಿ  ದರ್ಪಣ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/EPix3ar9qizEtDUS0amt5B

 

ಶತಮಾನದ ಹಿಂದೆ ಮಲೆನಾಡು…

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ