October 5, 2024

ಲೇಖಕರು : ಮೇಕನಗದ್ದೆ ಲಕ್ಷ್ಮಣಗೌಡ

ಕೃಪೆ : ಆಧುನಿಕ ಮೂಡಿಗೆರೆ ನಿರ್ಮಾತೃ ಮಾಕೋನಹಳ್ಳಿ ದೊಡ್ಡಪ್ಪಗೌಡ ಕೃತಿ

ಬಹುಷ: 1900ರ ಸುಮಾರಿಗೆ ಮಲೆನಾಡು ಇಂದಿನ ನಾಗರಿಕ ಜಗತ್ತಿಗೆ ಹೋಲಿಸಿದರೆ ತೀರಾ ಹಿಂದುಳಿದಿತ್ತು. ಇಂದಿನ ತಾಲ್ಲೂಕು ಕೇಂದ್ರಗಳಿರಲಿ, ಜಿಲ್ಲಾ ಕೇಂದ್ರ ಚಿಕ್ಕಮಗಳೂರು ಕೂಡ ನಾಲ್ಕಾರು ಹೆಂಚಿನ ಮನೆಗಳ ಹೊರತಾಗಿ ಮತ್ತೇನನ್ನು ಹೊಂದಿರಲಿಲ್ಲ. ಅಂದಿನ ಜಿಲ್ಲಾಡಳಿತ ಕಛೇರಿಗಳು ಸಹ ಜಿಲ್ಲಾಡಳಿತ ಕೇಂದ್ರವಾಗಿದ್ದ ಕಡೂರಿನಲ್ಲಿತ್ತು.

ಊರಿಂದೂರಿಗೆ ಓಡಾಡಲು ಹಳ್ಳಿಗಳಲ್ಲಿ ಶ್ರೀಮಂತ ರಾದರೆ ಎತ್ತಿನಗಾಡಿ, ಬ್ರಿಟಿಷ್ ಅಧಿಕಾರಿಗಳಿಗೆ ಕುದುರೆ ಅಥವಾ ಕುದುರೆಗಾಡಿ, ರಸ್ತೆ ಸಂಪರ್ಕ ಇಂದಿನಂತಿಲ್ಲದೇ ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಗಳು ಸಹ ಕಾಲು ಹಾದಿಯಂತಿದ್ದವು. ಅದರಲ್ಲಿ ಹೆಚ್ಚೆಂದರೆ ಬೇಸಿಗೆಯಲ್ಲಿ ಮಾತ್ರ ಎತ್ತಿನಗಾಡಿಗಳು ಓಡಾಡಬಹುದಿತ್ತು.

ಹೇಳಿಕೇಳಿ ಮಲೆನಾಡು ಹೆಸರಿಗೆ ತಕ್ಕಂತೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದಷ್ಟೇ ಅಲ್ಲದೇ ದಟ್ಟಾರಣ್ಯವೆ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ಅರಣ್ಯಗಳಲ್ಲಿ ನೂರಾರು ಬಗೆಯ ವನ್ಯ ಸಸ್ಯಸಂಕುಲಗಳಲ್ಲದೆ ಒಂದೊಂದು ಬೃಹತ್ ಗಾತ್ರದ ಮರಗಳ ಸುತ್ತಳತೆ ಒಂದೊಂದು ಮಿಣಿಸುತ್ತಿನಷ್ಟಿರುತ್ತಿದ್ದವು. ಇಂತಹ ದುರ್ಗಮ ಪ್ರದೇಶಗಳಲ್ಲಿ ವಿವಿದ ಬಗೆಯ ಕಾಡುಪ್ರಾಣಿಗಳು, ಹುಲಿ, ಕರಡಿ, ಆನೆ, ಜಿಂಕೆ ಮುಂತಾದುವು ಗಳಲ್ಲದೇ ವಿವಿಧ ಬಗೆಯ ಪಕ್ಷಿ ಸಂಕುಲಗಳು, ಹಾವುಗಳು ಮುಂತಾದುವುಗಳೆಲ್ಲಾ ಯಥೇಚ್ಛವಾಗಿದ್ದವು. ಈ ಕಾಡು ಹಾಗೂ ಗುಡ್ಡದ ತಪ್ಪಲಿನಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳು, ಕಂಡು ಬರುತ್ತದ್ದವು. ಅವಿಭಕ್ತ ಕುಟುಂಬಗಳಾಗಿದ್ದು ಜನರಿಂದ ತುಂಬಿತುಳುಕುತ್ತಿದ್ದ ಆ ಮನೆಗಳೇ ಒಂದೊಂದು ಊರುಗಳಾಗಿದ್ದವು.

ಮಲೆನಾಡಿನಲ್ಲಿ ಆ ಕಾಲಕ್ಕೆ ಮಂದೇಗೌಡಿಕೆ ಪದ್ದತಿ ಚಾಲಿಯಲ್ಲಿತ್ತು. ಅಂದರೆ ಇಂದಿನ ತಾಲ್ಲೂಕು, ಹೋಬಳಿ, ಗ್ರಾಮಪಂಚಾಯ್ತಿಗಳಂತೆ ಸಾವಿರ ನಾಡು, ಮಾಗಣಿ, ಮುಂತಾದವು ಸ್ಥಳೀಯ ಘಟಕ ಗಳಾಗಿದ್ದವು. ಪ್ರತಿ ಗ್ರಾಮದಲ್ಲೂ ಆಡಳಿತ, ಕಂದಾಯ ವಸೂಲಿ, ನ್ಯಾಯ ಪಂಚಾಯ್ತಿ, ತೀರ್ಮಾನ, ರಾಜಾಜ್ಞೆ ಪಾಲನೆ ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಲು ಗ್ರಾಮ ಪಟೇಲರನ್ನು ನೇಮಿಸಿರುತ್ತಿದ್ದು ಅವರ ಸಹಾಯಕ್ಕಾಗಿ ಲೆಕ್ಕಪತ್ರ ನಿರ್ವಹಣೆಗೆ ಶಾನುಭೋಗರು ಹಾಗೂ ಅವರೊಂದಿಗೆ ಕುಳವಾಡಿ ಇರುತ್ತಿದ್ದರು.

ನಾಲ್ಕಾರು ಗ್ರಾಮಗಳು ಸೇರಿ ಸಾವಿರ ಅಥವಾ ಮಂದೆ ಆಥವ ಮಾಗಣಿ ಎಂದು ಕರೆಯಲಾಗುವ ವಿಶಾಲ ಪ್ರಾಂತ್ಯದ ಉಸ್ತುವಾರಿಗಾಗಿ ಮಂದೆಪಟೇಲರುಗಳಿರುತ್ತಿದ್ದರು. ಮಂದೆಪಟೇಲರು ಗ್ರಾಮಪಟೇಲರ ಮುಖಾಂತರ ಆಡಳಿತ ನಿಯಂತ್ರಣ, ಸಂದೇಶ ರವಾನೆ ಮುಂತಾದುವುಗಳನ್ನು ನಿರ್ವಹಿಸುತ್ತದ್ದರು. ಇಂಥಹ ನಾಲ್ಕಾರು ಮಂದೆಪಟೇಲರುಗಳು ನಾಡಪಟೇಲ ಅಥವಾ ಸೀಮೇ ಗೌಡರ ಕೈಕೆಳಗೆ, ಅವರ ಆದೇಶದಂತೆ ಕಾರ್ಯನಿರ್ವಹಿಸುತ್ತ್ತಿದ್ದರು.
ಪಟೇಲ, ನಾಡಪಟೇಲ, ಮಂದೆಪಟೇಲ ಇವರೆಲ್ಲಾ ವಂಶಪಾರಂಪರ್ಯವಾಗಿ ಅಧಿಕಾರ ಅನುಭವಿಸುತ್ತಿದ್ದುದ್ದೇ ಹೆಚ್ಚಾಗಿತ್ತು. ಅಧಿಕಾರಸ್ತರಿಂದ ಅವರ ಹಿರಿಯ ಮಗನೆ ಆ ಹುದ್ದೆಗೆ ಉತ್ತರಾಧಿಕಾರಿಯಾಗುತ್ತಿದ್ದ. ಒಂದು ವೇಳೆ ಆತ ಸಮರ್ಥನಾಗಿಲ್ಲ ದಿದ್ದರೆ ಬೇರೊಬ್ಬ ಮಗನನ್ನು ಅಥವಾ ಬೇರೆ ಯಾರನ್ನಾದರೂ ನೇಮಿಸಬಹುದಾದ ಆಧಿಕಾರ ಮೇಲಿನವರಿಗೆ ಇರುತ್ತಿತ್ತು. ನಾಡಪಟೇಲರು ನೇರವಾಗಿ ರಾಜರು ಅಥವಾ ರಾಜಪ್ರತಿನಿಧಿಗಳ ಸಂಪರ್ಕಹೊಂದಿ ಆಡಳಿತಾತ್ಮಕ ವಿಚಾರವನ್ನು ನಿರ್ವಹಿಸುತ್ತಿದ್ದರು. ಅಂದಿನ ಊರಿನ ಒಂದು ಗೌಡಿಕೆ ಒಕ್ಕಲು ಎಂದರೆ ಸುತ್ತಮುತ್ತಲಿನ ವರಿಂದ ಅವರಿಗೆ ರಾಜಮರ್ಯಾದೆಯ ಗೌರವ ಸಲ್ಲುತ್ತಿತ್ತು. ಅವರೂ ಸಹ ಊರಿನ ಎಲ್ಲರನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಕಂದಾಯ ವಸೂಲಿ, ಗ್ರಾಮದ ವ್ಯಾಜ್ಯಗಳ ಪರಿಹಾರ, ನ್ಯಾಯ ಪರಾಮರ್ಶೆ, ಗ್ರಾಮದ ಜನರ ಕಷ್ಟಸುಖಗಳಲ್ಲಿ ಪಾಲ್ಗೊಳ್ಳುವಿಕೆ, ಗ್ರಾಮದ ಸಾಸ್ಕøತಿಕ ಚಟುವಟಿಕೆಗಳಾದ ಸುಗ್ಗಿಹಬ್ಬ, ಜಾತ್ರೆ ಮುಂತಾದ ಉತ್ಸವಗಳನ್ನು ನೆರೆವೇರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಒಂದು ಊರಿನ ಒಕ್ಕಲಿಗೆ ಹೊಂದಿಕೊಂಡಂತೆ ಹನ್ನೆರಡು ಕೈವಾಡ ದವರು ಜೀವನ ನಿರ್ವಹಣೆ ಮಾಡುತ್ತಿದ್ದರು. ಅವರೆಲ್ಲಾ ತಮ್ಮ ತಮ್ಮ ವೃತ್ತಿಗನುಸಾರವಾಗಿ ಊರಿನ ಯಾವುದೇ ವಿಶೇಷ ಸಂದರ್ಭ ಗಳಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದರು.

ಕೃಷಿಯೇ ಪ್ರಧಾನವಾಗಿದ್ದರಿಂದ ಜಮೀನಿನಲ್ಲಿ ಕೆಲಸ ಮಾಡಲು ಹೆಚ್ಚಿನ ಕಾರ್ಮಿಕರ ಅಗತ್ಯವಿತ್ತು. ಉಳುಮೆ ಮಾಡಲು ಜಮೀನಿನ ಮಿತಿ ಇರಲಿಲ್ಲ. ಯಾರೂ ಎಷ್ಟು ಬೇಕಾದರೂ ಜಮೀನನ್ನು ಒತ್ತುವರಿ ಮಾಡಿಕೊಂಡು ಕಂದಾಯ ವಗೈರೆ ಕಟ್ಟಿಕೊಂಡು ಹೋಗಬಹುದಿತ್ತು. ಇಂಥಹ ಜಮೀನನ್ನು ಹೊಂದಿದ ಮನೆಗಳಿಗೆ ಸುತ್ತಲಿನ ಊರುಗಳಿಂದ ಬಂದು ಸೇರಿಕೊಂಡವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜಮೀನು ಪಡೆದು ಕೃಷಿ ನಡೆಸಿದರೆ ಉಳಿದ ವರ್ಗದವರು ಅಂದರೆ ಕಮ್ಮಾರ ಬಡಗಿ, ಕ್ಷೌರಿಕ, ಭೋವಿ ಇತ್ಯಾದಿ ವರ್ಗದವರು ಆಯಾಯ ಮನೆಗಳಿಗೆ ತಕ್ಕಂತೆ ವಸ್ತುಗಳನ್ನು ತಯಾರಿಸಿಕೊಡುತ್ತಿದ್ದರು. ಕ್ಷೌರಿಕ ತಿಂಗಳಿಗೊಮ್ಮೆ ಪ್ರತಿ ಮನೆಗೆ ಬೇಟಿನೀಡಿ ಆ ಮನೆಯಲ್ಲಿರುವವರೆಲ್ಲರ ಅಗತ್ಯತೆಗಳನ್ನು ಪೂರೈಸುತ್ತಿದ್ದ. ಆ ಯಾವುದೇ ಕೈವಾಡದವರಿಗೆ ಹಣಕೊಡುವ ಪದ್ಧತಿ ಇರಲಿಲ್ಲ. ಬದಲಾಗಿ ವರ್ಷದ ಅಂತ್ಯದಲ್ಲಿ ಒಕ್ಕಲಾಟದ ಕೊನೆಯ ದಿನ ಇಂತಿಷ್ಟು ಎಂದು ಭತ್ತ ಅಳೆದುಕೊಡುವ ಪದ್ಧತಿ ರೂಢಿಯಲ್ಲಿತ್ತು. ಹೀಗೆ ಗ್ರಾಮದಲ್ಲಿದ್ದ ಹಲವಾರು ಒಕ್ಕಲುಗಳಲ್ಲಿ ವಿವಿಧ ವೃತ್ತಿಯವರಿದ್ದು ಯಾರೂ ಮೇಲುಕೀಳುಗಳಿಲ್ಲದೇ ಅಣ್ಣತಮ್ಮಂದಿರಂತೆ ಹೊಂದಾಣಿಕೆ ಹಾಗೂ ಸಹಬಾಳ್ವೆಯಿಂದ ಗ್ರಾಮಸ್ವರಾಜ್ಯದ ಕಲ್ಪನೆಯಲ್ಲಿ ಜೀವನ ನಡೆಸುವುದಿತ್ತು. ಒಬ್ಬರ ನೋವು ನಲಿವುಗಳು ಎಲ್ಲರಿಗೂ ಹಂಚಲ್ಪಡುತ್ತಿತ್ತು. ಒಬ್ಬರ ದುಡಿಮೆಯಲ್ಲಿ ಪರೋಕ್ಷವಾಗಿ ಎಲ್ಲರ ಪಾಲೂ ಇತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ರೈಲ್ವೆ ಸಂಪರ್ಕ ಮತ್ತಿತರ ಅನುಕೂಲಗಳಿದ್ದ ಕಾರಣದಿಂದ ಕಡೂರು ಜಿಲ್ಲಾಕೇಂದ್ರವಾಗಿತ್ತು. ಆಡಳಿತ ಕಛೇರಿಗಳೆಲ್ಲಾ ಕಡೂರಿನಲ್ಲಿದ್ದೂ ಇಂದಿನ ಸಖರಾಯಪಟ್ಟಣ, ವಸ್ತಾರೆ, ಬಾಳೆಹೊನ್ನೂರು ತಾಲ್ಲೂಕು ಕೇಂದ್ರಗಳಾಗಿದ್ದವು. ಮೂಡಿಗೆರೆ ತಾಲ್ಲೂಕು ಆಗಿನ್ನೂ ರಚನೆಗೊಂಡಿರದೇ ಈ ತಾಲ್ಲೂಕಿನ ಬಹುಭಾಗಗಳು ಅಂದಿನ ವಸ್ತಾರೆ, ಬೇಲೂರು, ಮುಂಜ್ರಾಬಾದ್ ತಾಲ್ಲೂಕುಗಳಲ್ಲಿ ಹಂಚಿಹೋಗಿದ್ದವು.

ಮೂಡಿಗೆರೆಯಿಂದ ಪೂರ್ವ ಭಾಗದಲ್ಲಿರುವಹಳ್ಳಿಗಳು ಬೇಲೂರು ತಾಲ್ಲೂಕಿಗೆ ಸೇರಿದ್ದವು. ಅಂದು ಬೇಲೂರು ತಾಲ್ಲೂಕಿನಲ್ಲಿದ್ದ ಹಳ್ಳಿಗಳನ್ನು ಆಡಳಿತಾತ್ಮಕವಾಗಿ ಮೇಲುಪಾಲು, ಕೆಳಪಾಲು, ನಡುಪಾಲು ಮಾಗಣಿ ಎಂದು ವರ್ಗಿಕರಿಸಲಾಗಿತ್ತು. ಬೇಲೂರು ಸುತ್ತಮುತ್ತಲಿನ ಪ್ರದೆಶಗಳನ್ನೊಳ ಗೊಂಡ ಪ್ರದೇಶವನ್ನು ಕೆಳಪಾಲು ಎಂದು, ಇಂದಿನ ಗೆಂಡೆಹಳ್ಳಿಯ ಸುತ್ತಮುತ್ತಲಿನ ಪ್ರದೇಶವನು ನಡುಪಾಲು ಎಂದು, ಮಾಕೋನ ಹಳ್ಳಿಯ ಸುತ್ತಮುತ್ತಲಿನ ಹದಿನಾಲ್ಕು ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಮೇಲ್ಪಾಲು ಮಾಗಣಿ ಎಂದು ಕರೆಯುತ್ತಿದ್ದರು. ಮೂಡಿಗೆರೆ ತಾಲ್ಲೂಕು ರಚನೆಯಾದಾಗ ಮೇಲ್ಪಾಲು ಮಾಗಣಿಗೆ ಸೇರಿದ ಹದಿನಾಲ್ಕು ಗ್ರಾಮಗಳ ಮಂದೇಗೌಡಿಕೆಯ ಈ ಪ್ರದೇಶ ಮೂಡಿಗೆರೆ ತಾಲ್ಲೂಕಿಗೆ ಸೇರ್ಪಡೆಯಾಯಿತು.

ಮಾಕೋನಹಳ್ಳಿಯ ಹಿಂದಿನ ಹೆಸರು ಮಾಕೊಂಡನಹಳ್ಳಿ ಎಂಬುದಾಗಿತ್ತು. ಇದನ್ನು ಮಾರ್ಕೆಂಡೇಯನಹಳ್ಳಿ ಎಂದು ಕರೆಯುತ್ತಿದ್ದ ಬಗ್ಗೆ ಮಾಹಿತಿಗಳಿವೆ. ಇದು ಅತ್ಯಂತ ಪುರಾತನವಾದ ಊರು. ಇಲ್ಲಿ 12ನೇ ಶತಮಾನದ ಕಾಲಕ್ಕೆ ಸೇರಿದ ಕೆಲವು ಶಾಸನಗಳಿವೆ. ಶಾಸನಗಳಲ್ಲಿ ಸಹ ಈ ಊರಿನ ಕುರಿತು ಮಾಕೊಂಡನಹಳ್ಳಿ ಎಂಬ ಉಲ್ಲೇಖಗಳಿವೆ. ಈ ಊರಲ್ಲಿ ಪುರಾತನವಾದ ಭೈರವೇಶ್ವರಸ್ವಾಮಿ ದೇವಾಲಯವಿದೆ; ಪ್ರಸಿದ್ಧವಾದ ರಾಮಮಂದಿರವಿದೆ. ಹಚ್ಚಹಸಿರಾದ ವನಸಿರಿ; ಕಾಫಿ, ಏಲಕ್ಕಿ ಮೆಣಸು ಮುಂತಾದ ಬೆಳೆಗಳಿಂದ ಆವರಿಸಿರುವ ಬೆಟ್ಟಗುಡ್ಡಗಳು; ಸದಾ ಹರಿಯುವ ಹಳ್ಳಿಗಳಿಂದ ಕೂಡಿರುವ ವರ್ಷದ ಆರುತಿಂಗಳು ಮಳೆ ಬೀಳುತ್ತಿದ್ದ ಪ್ರದೇಶ. ಶತಮಾನಗಳ ಹಿಂದಿನಿಂದಲೂ ಈ ಊರು ಸಮೃದ್ಧಿಯಿಂದ ಕೂಡಿದ್ದು ನಾಗರಿಕ ಬದುಕಿನ ತಾಣವಾಗಿತ್ತು. ಕನ್ನಡ ನಾಡಿನ ವೈಭವವನ್ನು ಶಿಲೆಯಲ್ಲಿ ಅರಳಿಸಿ ಕಲೆಯಾಗಿಸಿದ ಹೊಯ್ಸಳರ ಮೂಲನೆಲೆಯಾದ ಬೇಲೂರು ಮಾಕೋನಹಳ್ಳಿಗೆ ಸಮೀಪವಿದೆ.

ಕನ್ನಡನಾಡಿನ ಪ್ರಥಮ ರಾಜವಂಶ ಗಂಗರಿಂದ ಹಿಡಿದು ಮೈಸೂರು ಅರಸರವರೆಗೆ ವಿವಿಧ ರಾಜಮನೆತನಗಳ ಆಳ್ವಿಕೆಗೆ ಈ ಊರು ಒಳಪಟ್ಟಿದೆ. ಪೂರ್ವಕ್ಕೆ ಮೂಡಸಸಿ, ಪಶ್ಚಿಮಕ್ಕೆ ಘಟ್ಟದಹಳ್ಳಿ, ಉತ್ತರಕ್ಕೆ ನಂದೀಪುರ, ದಕ್ಷಿಣಕ್ಕೆ ಚಂದ್ರಾಪುರ ಮುಂತಾದ ಊರುಗಳಿಂದ ಸುತ್ತುವರೆದಿದೆ.
***************

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ