October 5, 2024

ಚಿಕ್ಕಮಗಳೂರು ಜಿಲ್ಲೆ ಕಂಡ ಮುತ್ಸದ್ದಿ ವ್ಯಕ್ತಿತ್ವ, ಎಲೆಮರೆಯ ಕಾಯಿಯಂತೆ ಸಮಾಜ ಕಾರ್ಯದಲ್ಲಿ ನಿರತರಾಗಿದ್ದ, ನಮ್ಮೆಲ್ಲರ ಹಿರಿಯ ಮಾರ್ಗದರ್ಶಕರಾಗಿದ್ದ ಡಿ.ಬಿ. ಸುಬ್ಬೇಗೌಡರು ದುಂಡುಗ ನಮ್ಮನ್ನಗಲಿದ್ದಾರೆ. ಅವರು ದಿನಾಂಕ 22-10-2022ರಂದು ದುಂಡುಗದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
92 ವರ್ಷಗಳ ತುಂಬು ಜೀವನ ನಡೆಸಿ ಶತಮಾನದ ಸಾಕ್ಷಿಪ್ರಜ್ಞೆಯಂತೆ ಬದುಕಿದ್ದ ಸುಬ್ಬೇಗೌಡರದು ಅತಿವಿಶಿಷ್ಟ ವ್ಯಕ್ತಿತ್ವ. ಸಾರ್ವಜನಿಕ ಜೀವನದಲ್ಲಿ ಯಾವುದೇ ಅಧಿಕಾರದ ಅಪೇಕ್ಷೆ ಯಿಲ್ಲದೇ ಸಮಾಜದ ಒಳಿತಿಗಾಗಿ ನಿಸ್ವಾರ್ಥವಾಗಿ ತೊಡಗಿಸಿಕೊಂಡ ಮಹನೀಯರು ಇವರು. ಸುಬ್ಬೇಗೌಡರು ಸುಮಾರು 70 ವರ್ಷಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರನ್ನು ಕಳೆದ 20 ವರ್ಷಗಳಿಂದ ನಾನು ಬಹಳ ಹತ್ತಿರದಿಂದ ಗಮನಿಸುತ್ತಾ ಬಂದಿದ್ದೆ. ಅವರಷ್ಟು ನಿಷ್ಕಲ್ಮಶ ಮನಸ್ಸಿನ, ಸದಾ ಸಮಾಜಕ್ಕಾಗಿ ತುಡಿಯುತ್ತಿದ್ದ ಕಾಯಕಜೀವಿ ಬಹು ಅಪರೂಪದಲ್ಲಿ ಅಪರೂಪವೆಂದರೆ ಅತಿಶಯೋಕ್ತಿಯಲ್ಲ.
ಒಬ್ಬ ಶಾಸಕರಾಗಿ, ಸಂಸದರಾಗಿ ಮಾಡುವ ಕೆಲಸವನ್ನು ಸುಬ್ಬೇಗೌಡರು ಯಾವ ಅಧಿಕಾರವು ಇಲ್ಲದೇ ಮಾಡಿದ್ದಾರೆ. ಅವರ ಹೆಜ್ಜೆಗುರುತುಗಳನ್ನು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಕಾಣಬಹುದಾಗಿದೆ. ವಿಶೇಷವಾಗಿ ಕಾಫಿ ಉದ್ದಿಮೆಗೆ ಅವರು ನೀಡಿರುವ ಕೊಡುಗೆ ಅನುಪಮವಾಗಿದೆ. ಹಾಗೆಯೇ ಮೂಡಿಗೆರೆ ತಾಲ್ಲೂಕಿನಲ್ಲಿ ಅನೇಕ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ, ತಾಲ್ಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಅವರು ಪ್ರೇರಣೆಯಾಗಿದ್ದಾರೆ. ತಮ್ಮ 92ರ ಇಳಿವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಲವಲವಿಕೆಯಿಂದ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ದೇವರುಂದದ ಕೃಷಿ ಕುಟುಂಬದಲ್ಲಿ ಬೈರೇಗೌಡ ದೇವಮ್ಮನವರ ಪುತ್ರರಾಗಿ 1931 ಮಾರ್ಚ್ 8ರಂದು ಜನಿಸಿದರು. ಬಾಲ್ಯದಿಂದಲೇ ಬದುಕಿನ ಕಷ್ಟವನ್ನು ಅನುಭವಿಸಿದ್ದ ಇವರು ಶಿಕ್ಷಣದ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ಸಮೀಪದ ದೇವಾಲಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಅದೇ ಅವಧಿಯಲ್ಲಿ ಭಾರತ ಸ್ವಾತಂತ್ರ ಚಳುವಳಿ ಕಾವೇರಿತ್ತು. ಈ ಭಾಗಕ್ಕೂ ಮೂಡಿಗೆರೆ, ಸಕಲೇಶಪುರ ಭಾಗದ ಸ್ವಾತಂತ್ರ ಹೋರಾಟ ಗಾರರು ಬಂದು ಜನರನ್ನು ಚಳುವಳಿಗೆ ಹುರಿದುಂಬಿಸುತ್ತಿದ್ದರು. ಆಗಿನ್ನೂ ಬಾಲಕನಾಗಿದ್ದ ಸುಬ್ಬೇಗೌಡರು ಹೋರಾಟಗಾರರ ಮಾತಿನಿಂದ ಸ್ಪೂರ್ತಿ ಪಡೆದು ತಮ್ಮ ಸ್ನೇಹಿತರ ಜೊತೆ ಸೇರಿ ದೇವಾಲಕೆರೆಯಿಂದ ದೇವರುಂದದವರೆಗೆ ಇದ್ದ ಇಂಗ್ಲೀಷರು ನೆಟ್ಟಿದ್ದ ಪರ್ಲಾಂಗು ಕಲ್ಲು ಮತ್ತು ಮೈಲಿ ಕಲ್ಲುಗಳನ್ನು ಕಿತ್ತು ಹಾಕಿದ್ದರು. ಅದಕ್ಕಾಗಿ ಅವರು ಅಂದು ತನ್ನ ಶಾಲೆಯಲ್ಲಿ ಕೋದಂಡ ಶಿಕ್ಷೆ ಮತ್ತು ಒಂದು ವರ್ಷ ನಪಾಸು ಶಿಕ್ಷೆ ಅನುಭವಿಸಿದ್ದರು.
ನಂತರ ಮಿಡ್ಲ್ ಸ್ಕೂಲ್‍ಗೆ ಮೂಡಿಗೆರೆಯಲ್ಲಿ ಶಾಲೆಗೆ ಸೇರಿ ಮೈಸೂರು ಚಲೋ ಚಳುವಳಿಯ ಭಾಗವಾಗಿ ಮೂಡಿಗೆರೆ ಮಿಡ್ಲ್ ಸ್ಕೂಲ್ ಮತ್ತು ತಾಲ್ಲೂಕು ಕಛೇರಿ ಮೇಲೆ ಬಾವುಟವನ್ನು ಹಾರಿಸಿದ್ದರು.

ಸಾರ್ವಜನಿಕ ಜೀವನದತ್ತ
ಸುಬ್ಬೇಗೌಡರು ಅಂದಿನ ಕಾಲದಲ್ಲಿಯೇ ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಹೈಸ್ಕೂಲ್‍ವರೆಗೆ ವ್ಯಾಸಾಂಗ ಮಾಡಿದ್ದರು. ಇದೇ ಅವಧಿಯಲ್ಲಿ ಸುಬ್ಬೇಗೌಡರು ಕುಟುಂಬದವರು ಹಾಗೂ ಅವರ ಸಂಬಂಧಿಕರು, ಆಪ್ತ ವಲಯದವರು ಸೇರಿ ಏಲಕ್ಕಿ ವ್ಯಾಪಾರದ ಕಂಪನಿ ಪ್ರಾರಂಭಿಸಿದ್ದರು. ಚೆನ್ನಾಗಿ ನಡೆಯುತ್ತಿದ್ದ ಕಂಪನಿ ಒಂದು ಹಂತದಲ್ಲಿ ತೀವ್ರ ನಷ್ಟವನ್ನು ಅನುಭವಿಸಿತು. ಆ ಅವಧಿಯಲ್ಲಿ ಕಂಪನಿಯ ನಷ್ಟವನ್ನು ಭರಿಸಲು ಸುಬ್ಬೇಗೌಡರ ಕುಟುಂಬದವರು ದೇವರುಂದದ ತಮ್ಮ ಕುಟುಂಬದ ಆಸ್ತಿಯನ್ನು ಕಳೆದುಕೊಳ್ಳಬೇಕಾದಂತಹ ಸನ್ನಿವೇಶ ಎದುರಿಸಬೇಕಾಯಿತು.
ಆ ನಂತರ ಕುಟುಂಬದ ಹಿರಿಯರ ಮಾರ್ಗದರ್ಶನ ಮತ್ತು ಬಂಧುಗಳ ಸಹಾಯದಿಂದ ಸುಬ್ಬೇಗೌಡರ ಕುಟುಂಬದವರು ಮೂಡಿಗೆರೆ ಸಮೀಪದ ದುಂಡುಗದಲ್ಲಿ ಕಾಡುಜಾಗವನ್ನು ಕೊಂಡು ಹಂತ ಹಂತವಾಗಿ ಕಾಫಿ ತೋಟ ಸಾಗುವಳಿ ಮಾಡಿ ಜೀವನದಲ್ಲಿ ಮೇಲೆ ಬಂದರು.
ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಸುಬ್ಬೇಗೌಡರು ಯುವಕರಾಗಿದ್ದಾಗಲೇ ಸಾರ್ವಜನಿಕ ಜೀವನದ ಕಡೆ ಆಸಕ್ತಿ ತೆಳೆದರು. ಅಂದಿನ ಮೂಡಿಗೆರೆ ಭಾಗದ ಪ್ರಭಾವಿ ರಾಜಕೀಯ ನಾಯಕರ ಸಂಪರ್ಕಕ್ಕೆ ಬಂದರು. ರಾಜಕೀಯ ವಾಗಿ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಮೂಡಿಗೆರೆ ತಾಲ್ಲೂಕು ಕಾಂಗ್ರೇಸ್ ಘಟಕದ ಅಧ್ಯಕ್ಷರಾಗಿ 23ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1972-77ರವರೆಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ತಾರಾದೇವಿಯವರು ಕಾಂಗ್ರೇಸ್ ತೊರೆದು ಬಿ.ಜೆ.ಪಿ. ಸೇರಿದಾಗ ಸುಬ್ಬೇಗೌಡರು ಸಹ ತಮ್ಮ ಬೆಂಬಲಿಗರೊಂದಿಗೆ ಬಿ.ಜೆ.ಪಿ. ಸೇರಿದರು. ಅಂದಿನಿಂದ ಬಿ.ಜೆ.ಪಿ.ಯ ನಿಷ್ಟಾವಂತ ಮುಖಂಡರಾಗಿ ಸಕ್ರಿಯರಾಗಿದ್ದರು.
ಯಾವುದೇ ಪಕ್ಷದ ಸರ್ಕಾರ ಅಥವಾ ಶಾಸಕರಿದ್ದರೂ ಸುಬ್ಬೇಗೌಡರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುತ್ತಿತ್ತು. ವಿಧಾನಸೌದದಲ್ಲಿ ಪಟ್ಟುಹಿಡಿದು ಕುಳಿತು ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ತರುವುದರಲ್ಲಿ ಅವರು ಯಶಸ್ವಿ ಯಾಗುತ್ತಿದ್ದರು. ಕ್ಷೇತ್ರದಲ್ಲಿ ಶಾಸಕರಾದವರಿಗೆ ಉತ್ತಮ ಮಾರ್ಗದರ್ಶನ ಬೆಂಬಲ ನೀಡುತ್ತಿದ್ದರು.

ಕಾಫಿ ಮುಕ್ತಮಾರುಕಟ್ಟೆಗೆ ಪ್ರಮುಖ ಕಾರಣಕರ್ತರು
ಇಂದು ಕಾಫಿ ಬೆಳೆಗಾರರ ವಲಯ ಆರ್ಥಿಕ ವಾಗಿ ಉತ್ತಮ ದಿನಗಳನ್ನು ಕಾಣುವುದಕ್ಕೆ ಬಹುಮುಖ್ಯವಾಗಿ ಕಾಫಿ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡದ್ದು ಕಾರಣವಾಗಿದೆ. 1991ರಿಂದ 96ರವರೆಗೆ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆ.ಜಿ.ಎಫ್)ದ ಅಧ್ಯಕ್ಷರಾಗಿ ಡಿ.ಬಿ. ಸುಬ್ಬೇಗೌಡರು ಕಾರ್ಯನಿರ್ವಹಿಸಿ ದ್ದರು. ಸುಬ್ಬೇಗೌಡರು ಬೆಳೆಗಾರರ ಸಂಘದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸಚಿವೆಯಾಗಿದ್ದ ಡಿ.ಕೆ. ತಾರಾದೇವಿಯವರ ಸಹಕಾರದೊಂದಿಗೆ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಭೇಟಿಮಾಡಿ ಕಾಫಿ ಮುಕ್ತಮಾರುಕಟ್ಟೆಗೆ ಮನವಿ ಸಲ್ಲಿಸಿದ್ದರು. ನಂತರ ಈ ವಿಚಾರದಲ್ಲಿ ಸತತವಾಗಿ ಪ್ರಯತ್ನ ನಡೆಸಿದ್ದರು. ಪರಿಣಾಮ ಕಾಫಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬಂದಿತ್ತು. ಇದರಿಂದ ಲಕ್ಷಾಂತರ ಮಂದಿ ಬೆಳೆಗಾರರು ಹಾಗೂ ಕಾರ್ಮಿಕರ ಬದುಕಲ್ಲಿ ಬದಲಾವಣೆ ಕಾರಣವಾಗಿತ್ತು. ಸಾವಿರಾರು ಮಂದಿ ಕಾಫಿ ವ್ಯವಹಾರ ಉದ್ದಿಮೆಯ ಮೂಲಕ ಮುಂಚೂಣಿಗೆ ಬರಲು ಸಾಧ್ಯವಾಯಿತು.

ಸಹಕಾರ ಕ್ಷೇತ್ರ ಮತ್ತು ಸಂಘಸಂಸ್ಥೆಗಳು
ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಸುಬ್ಬೇಗೌಡರು ಹಳೇಮೂಡಿಗೆರೆ ಸಹಕಾರ ಸಂಘ, ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕರಾಗಿ, ಭಾರತ ಕೃಷಿಕ ಸಮಾಜ, ಕಾಫಿ ಮಂಡಳಿ ಹೀಗೆ ಹತ್ತು ಹಲವು ಸಂಘಗಳಲ್ಲಿ ಸದಸ್ಯರಾಗಿ, ನಿರ್ದೇಶಕರಾಗಿ, ಅಧ್ಯಕ್ಷರಾಗಿ ಯಶಸ್ವಿ ಕಾರ್ಯನಿರ್ವಹಣೆ ಮಾಡಿ ದ್ದಾರೆ. ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ, ಜಿಲ್ಲಾ ಅಧ್ಯಕ್ಷರಾಗಿ, ರಾಜ್ಯ ಮತ್ತು ರಾಷ್ಟ್ರ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಾಸನ ಪ್ಲಾಂಟರ್ಸ್ ಕೋ ಅಪರೇಟಿವ್ ಬ್ಯಾಂಕ್‍ನ ಕಾರ್ಯಕಾರಿ ಸದಸ್ಯ, ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಬಹಳಷ್ಟು ಕಾಲ ಸೇವೆ ಸಲ್ಲಿಸಿರುತ್ತಾರೆ.
ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸದಸ್ಯರಾಗಿ ಚಿಕ್ಕಮಗಳೂರು ಒಕ್ಕಲಿಗರ ಸಂಘದ ಸಮುದಾಯ ಭವನ ನಿರ್ಮಾಣದ ಸಂದರ್ಭದಲ್ಲಿ ಪೂರ್ಣ ಸಹಕಾರ ನೀಡಿದ್ದಾರೆ.

ಬಡವರು ಹಿಂದುಳಿದವರಿಗೆ ಭೂಮಿ ಮಂಜೂರು
ಸುಬ್ಬೇಗೌಡರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾಗ ರಾಜ್ಯ ಸರ್ಕಾರದ ಲ್ಯಾಂಡ್ ಟ್ರಿಬ್ಯುನಲ್ ಸದಸ್ಯರಾಗಿ ಮತ್ತು ದರಖಾಸ್ತು ನಿರ್ವಹಣ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭ ದಲ್ಲಿ ಈ ಭಾಗದ ಸಾವಿರಾರು ಜನ ಬಡವರಿಗೆ ಹಿಂದುಳಿದವರಿಗೆ, ದಲಿತರಿಗೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಕೊಡುವು ದರಲ್ಲಿ ಬಹಳ ಆಸಕ್ತಿಯಿಂದ ಕೆಲಸ ಮಾಡಿದ್ದರು. ತಾವೇ ಸ್ವತಃ ಭೂರಹಿತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಭೂಮಿಯ ಒಡೆಯರಾಗಲು ಮುತುವರ್ಜಿ ವಹಿಸಿದ್ದರು. ಅವರ ಆ ಸೇವೆಯನ್ನು ಇಂದಿಗೂ ಜನರು ಸ್ಮರಿಸಿಕೊಳ್ಳುತ್ತಾರೆ.

ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನ
ಅಪ್ಪಟ್ಟ ದೈವಭಕ್ತರಾಗಿದ್ದ ಸುಬ್ಬೇಗೌಡರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ವಿಶೇಷ ಮುತುವರ್ಜಿ ಹೊಂದಿದ್ದರು. ಅನೇಕ ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೊಯ್ಸಳರ ಕಾಲದ ಬೈರಾಪುರ ಶ್ರೀ ನಾಣ್ಯದ ಭೈರವೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದಾಗ ಸುಬ್ಬೇಗೌಡರು ಮುಂದೆ ನಿಂತು ಸುತ್ತಲ ಗ್ರಾಮಗಳ ಜನರನ್ನು ಹುರಿದುಂಬಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದವರ ಸಹಕಾರ ಪಡೆದು ದೇವಾಲಯಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ಹೊಯ್ಸಳರ ಮೂಲಸ್ಥಾನ ಅಂಗಡಿ ಗ್ರಾಮದಲ್ಲಿ ಗುಡಿ ಗೋಪುರಗಳು ತೀವ್ರ ನಿರ್ಲಕ್ಷಕ್ಕೆ ಗುರಿಯಾಗಿದ್ದು ಇದರ ಬಗ್ಗೆ ಗಮನ ಹರಿಸಿದ ಸುಬ್ಬೇಗೌಡರು ಕಳೆದ ಕೆಲ ವರ್ಷಗಳಿಂದ ಅಂಗಡಿ ಗ್ರಾಮದ ದೇವಸ್ಥಾನಗಳಿಗೆ, ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ ನೀಡಿ ಅದನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಅವಿರತ ಪ್ರಯತ್ನದಲಿ ತೊಡಗಿಸಿಕೊಂಡಿದ್ದರು. ಸುಬ್ಬೇಗೌಡರ ಪರಿಶ್ರಮದ ಕಾರಣದಿಂದ ಅಂಗಡಿ ಕ್ಷೇತ್ರ ಈಗ ನವರೂಪ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವಂತೆ ರೂಪುಗೊಳ್ಳುತ್ತಿದೆ.

ಸಾಹಿತ್ಯ ಕೃಷಿ-ಸಮ್ಮೇಳನ ಅಧ್ಯಕ್ಷತೆ
ಸುಬ್ಬೇಗೌಡರು ಡಿ.ಎಸ್. ಜಯಪ್ಪಗೌಡರ ಜೊತೆ ಸೇರಿ ಪ್ರಕಟಿಸಿರುವ “ಹೇಮಾವತಿಯ ಉಗಮದ ಪರಿಸರ ಮತ್ತು ಸಂಸ್ಕøತಿ” ಎಂಬ ಬೃಹತ್ ಕೃತಿಯಲ್ಲಿ ತಮ್ಮ ಸಾಹಸಮಯ ಬದುಕಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಈ ಪುಸ್ತಕ ಸುಮಾರು ಒಂದು ಶತಮಾನದ ಮಲೆನಾಡಿನ ಚಿತ್ರಣವನ್ನು ಕಟ್ಟಿಕೊಡುವಂತಿದೆ. ಸುಬ್ಬೇಗೌಡರು ಮೂಡಿಗೆರೆ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದು ಅವರ ಬದುಕಿನ ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು.

ಕುಟುಂಬದ ಸೇವಾ ಪರಂಪರೆ
ಸುಬ್ಬೇಗೌಡರ ಇಡೀ ಕುಟುಂಬವೇ ಸೇವಾ ಪರಂಪರೆಯಲ್ಲಿ ಮುಂದುವರಿದಿದೆ. ಸುಬ್ಬೇಗೌಡರ ಸೇವಾ ಕಾರ್ಯಗಳಿಗೆ ಸಾಥ್ ನೀಡುತ್ತಿದ್ದ ಪತ್ನಿ ಸಾವಿತ್ರಮ್ಮ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.
ಸುಬ್ಬೇಗೌಡರ ಮಕ್ಕಳು ಸಹ ತಮ್ಮ ತಂದೆಯ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಸುಬ್ಬೇಗೌಡರಿಗೆ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು. ಸುಬ್ಬೇಗೌಡರ ಹಿರಿಯ ಪುತ್ರ ಡಿ.ಎಸ್. ರಘು ಕೋಮಾರ್ಕ್, ಬೆಳೆಗಾರರ ಸಂಘಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ಪರ ಕೆಲಸ ಮಾಡುತ್ತಿದ್ದಾರೆ.
ಸುಬ್ಬೇಗೌಡರ ಎರಡನೇ ಪುತ್ರ ಡಿ.ಎಸ್. ರವಿ ರೋಟರಿ ಸಂಸ್ಥೆಯ ಮೂಡಿಗೆರೆ ಘಟಕದ ಅಧ್ಯಕ್ಷ ಮತ್ತು ರೋಟರಿ ಜಿಲ್ಲಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸುಸಜ್ಜಿತ ಸಾರ್ವಜನಿಕ ಮುಕ್ತಿಧಾಮ ನಿರ್ಮಾಣ ಮಾಡಲಾಗಿದೆ. ಇವರ ಅಳಿಯ ಕಿಶೋರ್ ಚಂದ್ರ ಪೊಲೀಸ್ ಇಲಾಖೆಯಲ್ಲಿ ಡಿ.ಜಿ. ಯಾಗಿ ನಿವೃತ್ತಿ ಹೊಂದಿದ್ದಾರೆ. ಈಗ ರೇರಾ ಛೇರ್ಮನ್ ಆಗಿ ರಾಜ್ಯ ಸರ್ಕಾರ ಅವರನ್ನು ನೇಮಿಸಿದೆ.

ನುಡಿನಮನದಲ್ಲಿ ಮಿಡಿದ ಕಂಬನಿ
ಡಿ.ಬಿ.ಸುಬ್ಬೇಗೌಡರ ನುಡಿನಮನ ಕಾರ್ಯಕ್ರಮ ದಿನಾಂಕ 29-10-2022ರಂದು ಮೂಡಿಗೆರೆ ತಾ.ಪಂ. ದೀನ್ ದಯಾಳ್ ಸಭಾಂಗಣದಲ್ಲಿ ಜರುಗಿತು. ಸುಬ್ಬೇಗೌಡರ ನೂರಾರು ಅಭಿಮಾನಿಗಳು ಬಂಧುಗಳು ಭಾಗವಹಿಸಿದ್ದರು. ಸಭೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಬೆಳೆಗಾರರ ಸಂಘ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸುಬ್ಬೇಗೌಡರ ವ್ಯಕ್ತಿತ್ವವನ್ನು ನೆನೆದು ಕಂಬನಿ ಮಿಡಿದರು.
ಹೀಗೆ ಸಮಾಜದ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದ ಸುಬ್ಬೇಗೌಡರು ತನ್ನ ಬದುಕಿನುದ್ದಕ್ಕು ಸಾರ್ವಜನಿಕ ಸೇವೆ, ಧಾರ್ಮಿಕ ಕಾರ್ಯ, ಬೆಳೆಗಾರರು, ರೈತರು, ಕಾರ್ಮಿಕರು, ಗ್ರಾಮೀಣ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದರು. ಅವರ ಅಗಲಿಕೆಯಿಂದ ಜಿಲ್ಲೆಯ ಓರ್ವ ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾ ಗಿದೆ. ಅವರ ನೆನಪುಗಳು ನಮ್ಮ ಮನದಲ್ಲಿ ಸದಾ ಹಸಿರಾಗಿ ಉಳಿದಿದೆ. ಪತ್ರಿಕಾ ಬಳಗದ ಪರವಾಗಿ ಅವರಿಗೆ ಅಂತಿಮ ನಮನಗಳು.
* ಪ್ರಸನ್ನ ಗೌಡಳ್ಳಿ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ